Sunday, 24th November 2024

ಶಿಸ್ತಿನ ಪಕ್ಷದಲ್ಲಿ ಸೈಲೆಂಟ್ ಬದಲಾವಣೆ ಏಕೆ ?

ಅಶ್ವತ್ಥಕಟ್ಟೆ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರೌಡಿಶೀಟರ್‌ಗಳ ಪಾತ್ರ ರಾಜಕೀಯದಲ್ಲಿ ಕಾಣಿಸಿಲ್ಲ. ಕೆಲ ನಾಯಕರು ತಮ್ಮ ಬಲ ಹೆಚ್ಚಿಸಿಕೊಳ್ಳಲು, ಪುಡಿ ರೌಡಿಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ ಅಥವಾ ಅವರನ್ನು ಪರೋಕ್ಷವಾಗಿ ಪೋಷಿಸುತ್ತಿರುತ್ತಾರೆ.

ರೌಡಿಶೀಟರ್, ಅಂಡರ್‌ವರ್ಡ್‌ಡಾನ್‌ಗಳೆಂಬ ಪದಗಳು ಕರ್ನಾಟಕ ಅದರಲ್ಲಿಯೂ ಬೆಂಗಳೂರಿನ ಮಟ್ಟಿಗೇನು ಹೊಸತಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಗಟ್ಟಿ ನಿಯಮಗಳಿಂದ ರೌಡಿಗಳ ಚಟುವಟಿಕೆಗಳು ‘ಗುಪ್ತಗಾಮಿನಿ’ಯಾಗಿದೆಯಾದರೂ, ಇಲ್ಲವೇ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಹೀಗಿರುವಾಗ ಕಳೆದೊಂದು ವಾರದಿಂದ ಬೆಂಗಳೂರು ಹಾಗೂ ರಾಜ್ಯ ರಾಜಕೀಯದಲ್ಲಿ ‘ರೌಡಿಶೀಟರ್’ ಎನ್ನುವ ಪದೇಪದೆ ಭಾರಿ ಗೊಂದಲ, ವಾಕ್ಸಮರ, ವಾಗ್ದಾಳಿಗೆ ಕಾರಣವಾಗಿದೆ.

ಹೌದು, ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಯ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಸೇರಿದಂತೆ ಕೆಲ ನಾಯಕರು ‘ಸೈಲೆಂಟ್ ಸುನೀಲ’ ಎನ್ನುವ ರೌಡಿಶೀಟರ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳೆಲ್ಲ ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದಂತೆ, ‘ಅದೊಂದು ಅಚಾತುರ್ಯದಿಂದ ಆಗಿರುವ ಘಟನೆ.

ರೌಡಿಶೀಟರ್‌ನಲ್ಲಿ ಇದ್ದ ಮಾತ್ರಕ್ಕೆ ಆತ ಕೆಟ್ಟನಾಗಿಯೇ ಕೊನೆಯ ತನಕ ಇರಬೇಕು ಎಂದಿಲ್ಲ. ಆತನಿಗೂ ಬದಲಾವಣೆಗೆ ಅವಕಾಶ ನೀಡಬೇಕು’ ಎನ್ನುವ ಮಾತುಗಳನ್ನು ಆಡಿದರು. ಈ ವಿವಾದ ಮಾಸುವ ಮೊದಲೇ, ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬೆತ್ತನಗೆರೆ ಶಂಕರ ಎನ್ನುವ ರೌಡಿಶೀಟರ್‌ನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಮಾತ್ರವಲ್ಲದೇ, ಮುಂದಿನ ಎಚ್‌ಡಿ ಕೋಟೆ ಕ್ಷೇತ್ರ ಅಭ್ಯರ್ಥಿ ಎನ್ನುವಂತೆ ಬಿಂಬಿಸಲಾಯಿತು. ಇದು
ಮತ್ತೊಂದು ವಿವಾದ ಸೃಷ್ಟಿಯಾಗುತ್ತಿದ್ದಂತೆ, ಪ್ರತಾಪ ಸಿಂಹ ಅವರು ‘ಎಲ್ಲ ಜಾತಕ ನೋಡಿಕೊಂಡು ಸೇರ್ಪಡೆ ಮಾಡಿ ಕೊಳ್ಳಲು ಸಾಧ್ಯವೇ? ಆತ ರೌಡಿಶೀಟರ್ ಎನ್ನುವುದು ಗೊತ್ತಿರಲಿಲ್ಲ’ ಎನ್ನುವ ಸಮರ್ಥನೆಯನ್ನು ನೀಡಿದರು.

ಇಡೀ ವಿವಾದದಲ್ಲಿ ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಈ ಪ್ರಕರಣವನ್ನು ಬಳಸಿಕೊಂಡಿದ್ದು ಸುಳ್ಳಲ್ಲ. ಬಿಜೆಪಿ ಗರು, ಸಮರ್ಥಿಸಿಕೊಳ್ಳುವ ಜತೆಜತೆಗೆ ಕಾಂಗ್ರೆಸ್‌ನಲ್ಲಿ ರೌಡಿಶೀಟರ್‌ಗಳಿಲ್ಲವೇ? ಕಾಂಗ್ರೆಸ್ ರಾಜ್ಯಾಧ್ಯಕ್ಷ ಯಾರ ಶಿಷ್ಯ? ಆರ್.ವಿ. ದೇವರಾಜ್, ಹರಿಪ್ರಸಾದ್ ಅವರ ಮೇಲಿರುವ ಆರೋಪಗಳೇನು? ಅದನ್ನು ಮೊದಲು ತಿದ್ದಿಕೊಳ್ಳುವುದನ್ನು ಬಿಟ್ಟು, ನಮ್ಮ ಪಕ್ಷದ ಮೇಲೆ ಮಾತನಾಡುವುದೇಕೆ? ಸೈಲೆಂಟ್ ಸುನೀಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಬಗ್ಗೆ ಈಗಾಗಲೇ
ವಿವರಣೆ ಕೇಳಲಾಗಿದೆ ಹಾಗೂ ಮುಂದಿನ ದಿನದಲ್ಲಿ ಯಾವ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು
ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ‘ರೌಡಿಶೀಟರ್ ಎಂದು ಹೇಳಿದ ಮಾತ್ರಕ್ಕೆ ಎಲ್ಲರನ್ನೂ ಕೊಲೆಗಡುಕರೆಂದು ನೋಡಲು ಆಗುವುದಿಲ್ಲ. ರಾಜಕೀಯ ಕಾರಣಕ್ಕೂ ಕೆಲವರ ಮೇಲೆ ರೌಡಿಶೀಟರ್ ಎನ್ನುವ ಪಟ್ಟ ಕಟ್ಟಿರುತ್ತಾರೆ. ಅದಕ್ಕೆ ನಾನೇ ಉದಾಹರಣೆ’ ಎನ್ನುವ ಮಾತನ್ನು ಹೇಳಿದ್ದರು. ಸಿ.ಟಿ. ರವಿ ಅವರ ಈ ಮಾತುಗಳನ್ನು ಒಂದು ಹಂತಕ್ಕೆ ಒಪ್ಪಬೇಕು. ಏಕೆಂದರೆ ರೌಡಿಶೀಟರ್ ಕೇಸ್‌ನಲ್ಲಿ ‘ಫಿಟ್’ ಮಾಡುವುದಕ್ಕೆ ಹಲವು ವಿಧಗಳಿವೆ. ಒಂದು ಸಮಾಜಘಾತಕ ಶಕ್ತಿಯಾಗಿರುವ ಕಾರಣಕ್ಕೆ, ರಾಜಕೀಯ ಕಾರಣಕ್ಕೆ ‘ದೊಂಬಿ-ಗಲಾಟೆ’ ಎನ್ನುವ ಮಾತನ್ನು ಹೇಳಿ,
ರೌಡಿಶೀಟರ್ ಎನ್ನುವ ಹಣೆಪಟ್ಟಿ ಕಟ್ಟುವುದು. ಈ ಹಿಂದೆ ರೈತ ಪರ ಹೋರಾಟದ ಸಮಯದಲ್ಲಿ ಹಲವು ರೈತರಿಗೂ
ರೌಡಿಶೀಟರ್ ಪಟ್ಟಿಯನ್ನು ಕಟ್ಟಲಾಗಿತ್ತು. ಆ ವಿಚಾರ ಬೇರೆ.

ಆದರೆ ಮೇಲ್ನೋಟಕ್ಕೆ ಗೂಂಡ ಎನ್ನುವುದು ತಿಳಿದಿದ್ದರೂ, ಆತನ ‘ತೋಳ್ಬಲ’ ಬಳಸಿಕೊಂಡು ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕೆ ರೌಡಿಶೀಟರ್‌ಗಳನ್ನು ಸೇರಿಸಿಕೊಳ್ಳುವುದು ತಪ್ಪು ಎನ್ನುವುದು ಅನೇಕ ವಾದ. ಅದರಲ್ಲಿಯೂ ‘ಶಿಸ್ತಿನ’ ಪಕ್ಷವಾಗಿರುವ ಬಿಜೆಪಿಯಲ್ಲಿ ಇಂತಹ ಬೆಳವಣಿಗೆ ನಿಜಕ್ಕೂ ಮೂಲ ಬಿಜೆಪಿಗರಿಗೆ ಬೇಸರವನ್ನು ತರಿಸಿರುವುದು ಸುಳ್ಳಲ್ಲ. ಇನ್ನು ಪಕ್ಷಕ್ಕೆ ಸೇರುವ ಪ್ರತಿಯೊಬ್ಬ ‘ಜಾತಕ’ ನೋಡಿಕೊಂಡು ಕೂರಲೇ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಹಾಗಾದರೆ
ಸಂಸದರಾಗಿ ತಮ್ಮ ಜಿಲ್ಲೆಯಲ್ಲಿರುವ ಒಬ್ಬ ರೌಡಿಶೀಟರ್ ಬಗ್ಗೆ ಅರಿವಿಲ್ಲದೇ ಸೇರಿಸಿಕೊಂಡಿದ್ದೀರಾ? ಎನ್ನುವ ಪ್ರಶ್ನೆಗಳು ಇದೀಗ ಶುರುವಾಗಿದೆ. ಇದೇ ಪ್ರಶ್ನೆ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ. ಮೋಹನ್ ಅವರಿಗೂ ಅನ್ವಯಿಸುತ್ತದೆ.

ಹಾಗೇ ನೋಡಿದರೆ ಈ ರೀತಿ ರಾಜಕೀಯ ನಾಯಕರೊಂದಿಗೆ ‘ಆಪ್ತ’ ವಲಯದಲ್ಲಿ ರೌಡಿಗಳು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕರ್ನಾಟಕ ರಾಜ್ಯ ಇತಿಹಾಸವನ್ನು ನೋಡಿದಾಗ ರೌಡಿಶೀಟರ್‌ಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ರಾಜಕಾರಣ ಮಾಡಿದ, ಹಲವು ರೌಡಿ ತಮ್ಮ ತೋಳ್ಬಲವನ್ನೇ ಬಳಸಿಕೊಂಡು ‘ವಿಧಾನಸಭೆ’ ಪ್ರವೇಶಿಸುವ ಸಾಹಸಕ್ಕೆ ಕೈಹಾಕಿರುವ ಇತಿಹಾಸವಿದೆ.

ಇತಿಹಾಸದ ಪುಟದಲ್ಲಿ ಈ ಬಗ್ಗೆ ನೋಡಿದರೆ ಮೊದಲಿಗೆ ಕಾಣಿಸುವುದು, ಜಯರಾಜ್ ಪ್ರಕರಣ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರ ಅಳಿಯ ನಟರಾಜ್ ಆರಂಭಿಸಿದ ಇಂದಿರಾ ಬ್ರಿಗೇಡ್ ಮೂಲಕ, ಅರಸರೊಂದಿಗೆ ಗುರುತಿಸಿಕೊಂಡಿದ್ದ ಡಾನ್ ಜಯರಾಜ್ ಕೊನೆಕೊನೆಗೆ ಮುಖ್ಯಮಂತ್ರಿಯವರ ನಿವಾಸಕ್ಕೆ ನಿತ್ಯ ಆಗಮಿಸುವಷ್ಟು ಆತ್ಯಾಪ್ತ ನಾಗಿದ್ದ.

ಅವನನ್ನು ನೋಡಿದರೆ ಕೇವಲ ರೌಡಿಗಳಷ್ಟೇ ಅಲ್ಲ, ಸ್ವತಃ ಪೊಲೀಸರು ಹೆದರುತ್ತಿದ್ದರಂತೆ. ಯಾವುದೇ ಅಧಿಕಾರಿ
ಜಯರಾಜ್ ವಿರುದ್ಧ ನಿಂತರೂ, ವಿಧಾನಸೌಧ ಮೂರನೆ ಮಹಡಿಯ ಮುಖ್ಯಮಂತ್ರಿಯ ಕಚೇರಿಯಲ್ಲಿ ಕೂತು, ಪೊಲೀಸರನ್ನು ಕರೆಸಿಕೊಂಡು ಮುಖ್ಯಮಂತ್ರಿಗಳಿಂದ ಬೈಯಿಸುತ್ತಿದ್ದನಂತೆ. ನಂತರ ತಾನೇ ಶಾಸಕನಾಗಬೇಕು ಎಂದು ಹಠಕ್ಕೆ ಬಿದ್ದು, ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಹುಲಿ ಗುರುತನ್ನು ಪಡೆದುಕೊಂಡಿದ್ದ. ನಿಜವಾದ ಹುಲಿಯನ್ನೇ
ಬೋನಿನಲ್ಲಿಟ್ಟುಕೊಂಡು ಪ್ರಚಾರ ಮಾಡಿದ್ದನಂತೆ. ಆದರೆ ಚುನಾವಣೆ ಮುಗಿಯುವ ಹೊತ್ತಿಗೆ ಕೊಲೆಯಾಗಿ ಹೋದ.

ಈ ಒಂದು ಕಾರಣಕ್ಕೆ ದೇವರಾಜ ಅರಸು ಅವರ ಕಾಲದಲ್ಲಿ ಬೆಂಗಳೂರಿನಲ್ಲಿ ‘ಭೂಗತಲೋಕ’ ಫುಲ್ ಆಕ್ಟೀವ್ ಆಗಿತ್ತು. ಆದರೆ ಅದನ್ನು ಸದೆಬಡೆದಿದ್ದು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ. ರಾಮಕೃಷ್ಣ ಹೆಗಡೆ ಅವರು ರೌಡಿಗಳ ವಿರುದ್ಧ ತಿರುಗಿ ಬೀಳುವುದಕ್ಕೂ ಕಾರಣವಿದೆ. ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ಅವರಿಗೆ ಪ್ರತಿರೋಧ ತೋರಲು ಪಕ್ಷದಲ್ಲಿಯೇ ಇದ್ದ ಕೆಲ ನಾಯಕರ ಪರವಾಗಿ ಕೊತ್ವಾಲ ರಾಮಚಂದ್ರ ಸೇರಿದಂತೆ ಕೆಲ ರೌಡಿಗಳು ವಿಧಾನಸೌಧದ ಮುಂಭಾಗದಲ್ಲಿಯೇ ಹೆಗಡೆ ಅವರನ್ನು ಅಡ್ಡಗಟ್ಟಿದ್ದ ಈ ಗುಂಪು ಗೋಳಾಡಿಸಿತ್ತು.

ಇದನ್ನೇ ‘ಜಿದ್ದಾಗಿ’ಸಿಕೊಂಡು ಜೀವರಾಜ್ ಆಳ್ವ ಅವರ ಮೂಲಕ ಬೆಂಗಳೂರಿನ ಭೂಗತಲೋಕದ ಧ್ವನಿ ಅಡಗಿಸಿದ್ದು
ಇತಿಹಾಸ. ಇನ್ನೊಂದು ಸನ್ನಿವೇಶವೆಂದರೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ರೋಷನ್ ಬೇಗ್ ಅವರು ಸಚಿವರಾಗಿದ್ದರು. ಈ ವೇಳೆ ಕೋಳಿ ಫೈಯಾಝ್ ಎನ್ನುವ ರೌಡಿಯ ಕೊಲೆಯಾಗಿತ್ತು. ಆಗ ಸಚಿವರಾಗಿದ್ದರೂ ರೋಷನ್ ಬೇಗ್ ಅವರು ಆಸ್ಪತ್ರೆಗೆ ಹಾಗೂ ಫೈಯಾಝ್ ಮನೆಗೆ ಭೇಟಿ ಕೊಟ್ಟಿದ್ದರು. ಇದು ಪ್ರತಿಪಕ್ಷಗಳಿಗೆ ಆಹಾರವಾಗಿ, ರಾಜೀನಾಮೆ ಪಡೆಯಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.

ಫೈಯಾಝ್ ಮನೆಗೆ ಭೇಟಿ ಕೊಟ್ಟಿದ್ದು, ‘ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಿರಲಿ’ ಎನ್ನುವ ಕಾರಣಕ್ಕೆ ಎನ್ನುವ ಸಬೂಬನ್ನು ಬೇಗ್ ನೀಡಿದ್ದು ಬೇರೆ ವಿಷಯ. ಈ ಮೂರು ಘಟನೆಗಳನ್ನು ಹೊರತುಪಡಿಸಿದರೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರೌಡಿಶೀಟರ್‌ಗಳ ಪಾತ್ರ ರಾಜಕೀಯದಲ್ಲಿ ಕಾಣಿಸಿಲ್ಲ. ಕೆಲ ನಾಯಕರು ತಮ್ಮ ಬಲ ಹೆಚ್ಚಿಸಿಕೊಳ್ಳಲು,
ಪುಡಿ ರೌಡಿಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ ಅಥವಾ ಅವರನ್ನು ಪರೋಕ್ಷವಾಗಿ ಪೋಷಿಸುತ್ತಿರುತ್ತಾರೆ.

ಈಗಲೂ ರಾಜ್ಯದಲ್ಲಿರುವ ಹಲವು ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದ್ದರೂ, ಅವರ‍್ಯಾರು ‘ಬಹಿರಂಗವಾಗಿ ರೌಡಿಸಂ’ ಮಾಡಿರುವವರಲ್ಲ. ಆದರೀಗ ಸೈಲೆಂಟ್ ಸುನೀಲ್, ಬೆತ್ತನಗೆರೆ ಶಂಕರ, ಫೈಟರ್ ರವಿ ಅವರ ಹೆಸರಗಳು ಚಾಲ್ತಿಗೆ ಬರಲು
ಕಾರಣವೆಂದರೆ, ಈಗಾಗಲೇ ರೌಡಿಶೀಟರ್‌ಗಳಾಗಿಯೇ ಕುಖ್ಯಾತಿ ಪಡೆದಿರುವವರು ‘ಜನಸೇವೆ’ಗೆಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವುದು. ಅದರಲ್ಲಿಯೂ ಬಿಜೆಪಿಯಿಂದಲೇ ಸ್ಪರ್ಧಿಸಲು ಮುಂದಾಗಿರುವುದು.

ಬಿಜೆಪಿ ನಾಯಕರು ಈ ರೌಡಿಶೀಟರ್‌ಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ತಮ್ಮದೇಯಾದ ‘ಸ್ಪಷ್ಟೀಕರಣ’, ‘ಸಮರ್ಥನೆ’ಯನ್ನು ನೀಡುತ್ತಿದ್ದಾರೆ. ಆದರೆ ಶಿಸ್ತಿನ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಇಂತಹ ಅನಿವಾರ್ಯ ಸದ್ಯಕ್ಕಿಲ್ಲ. ಅವರು ಪರಿವರ್ತನೆಯಾಗಿ ಬರುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಪರಿವರ್ತನೆಯಾದ ಬಳಿಕ ಅವರ ಮೇಲಿನ ‘ರೌಡಿಶೀಟರ್’ ಪ್ರಕರಣವನ್ನು ಏಕೆ ಹಿಂಪಡೆದಿಲ್ಲ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ಬಿಜೆಪಿ ನಾಯಕರ ಈ ನಡೆಯನ್ನು ‘ಶಿಸ್ತಿನ ಪಕ್ಷ’ ಎನಿಸಿಕೊಳ್ಳುವ ಬಿಜೆಪಿಯ ಕಾರ್ಯಕರ್ತರೇ ಒಪ್ಪುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನು ತೀರ್ಮಾನಿಸುವುದು ಚುನಾವಣೆಯಲ್ಲಿ ಗೆಲ್ಲುವ ಅಂಕಿ-ಸಂಖ್ಯೆಗಳೇ ಎನ್ನುವುದು ಎಷ್ಟು ನಿಜವೋ, ಹಣ
ಬಲ, ತೋಳ್ಬಲದಿಂದಲೇ ಎಲ್ಲವನ್ನು ಗೆಲ್ಲಬಹುದು ಎನ್ನುವ ಭ್ರಮೆಯೂ ಸರಿಯಲ್ಲ ಎನ್ನುವುದನ್ನು ರಾಜಕೀಯ ಪಕ್ಷಗಳು ಅರಿತಾಗ ಮಾತ್ರ ಇಂತಹ ಹುಂಬು ತೀರ್ಮಾನಗಳು ತೆಗೆದುಕೊಳ್ಳುವುದರಿಂದ ಹೊರಬಹುದು.