Sunday, 24th November 2024

ಬ್ರೆಜಿಲ್‌ನ ಕಾಡುಜನರ ಐದು ಶತಮಾನದ ಯುದ್ದ

ಶಿಶಿರ ಕಾಲ

shishirh@gmail.com

ನಾವು ಕೆಲ ಸ್ನೇಹಿತರು ಸೇರಿ ಅಮೆಜಾನ್ ಕಾಡಿನೊಳಕ್ಕೆ ಸ್ವಲ್ಪ ಹೋಗಿ ನೋಡಿ ಬರೋದು ಅಂತ ಹೊರಟಿದ್ದೆವು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆದ ನನಗೇನು ಕಾಡು ಹೊಸತಾ ಗಿರಲಿಲ್ಲ. ಆದರೆ ಅಮೆಜಾನ್ ಎಂದರೆ ಅದೇನೋ ಸೆಳೆತ. ಅಮೆಜಾನ್‌ ನತ್ತ ಆಸಕ್ತಿಯನ್ನು ಮೊದಲು ಹುಟ್ಟುಹಾಕಿದ್ದು ಹೈಸ್ಕೂಲ್ ಭೂಗೋಳದ ಮೇಸ್ಟ್ರು, ಎಂ.ಎಸ್.ಪ್ರಭು ಅವರು. ಅವರು ಅಮೆಜಾನ್ ಕಾಡನ್ನು ರಸವತ್ತಾಗಿ ಕಟ್ಟಿ ಕೊಡುವಾಗ ಇದೇನು ನಿಮ್ಮ ಮನೆಯ ಹಿಂದಿನ ಬೆಟ್ಟದಂತಲ್ಲ ಎಂದು ತಮಾಷೆ ಮಾಡಿದ್ದರು.

ಅಂದೇ ಅಮೆಜಾನ್ ಕಾಡನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆ ಹುಟ್ಟಿತ್ತು. ಈಗ ಆ ಸಮಯ ಬಂದಿತ್ತು. ಅಮೆಜಾನ್ ಕಾಡು ಎಂದರೆ ಅದೊಂದು ಜೈವಿಕ ಮಾಯಾಲೋಕ. ೭೦ ಲಕ್ಷ ಚದರ ಕಿಲೋಮೀಟರ್ ಜಾಗವನ್ನು ಅಮೇಝೋನಿಯಾ ಅಂತ ಕರೆಯೋದು. ಈ ಪ್ರದೇಶದಲ್ಲಿ ಇರುವ ಉಷ್ಣವಲಯದ ಮಳೆ ಕಾಡು (ಟ್ರೋಪಿಕಲ್ ರೈನ್ ಫಾರೆಸ್ಟ್) ಸುಮಾರು ೫೫ ಲಕ್ಷ ಚ.ಕಿ.ಮೀ. ಈ ಕಾಡು ಒಂಭತ್ತು ದೇಶಗಳಿಗೆ ಹರಡಿದ್ದರೂ ಅತಿಹೆಚ್ಚು ಭಾಗ ಇರೋದು ಬ್ರೆಜಿಲ್‌ನಲ್ಲಿ.

ಇಷ್ಟೊಂದು ಅಗಾಧವಾದ ಕಾಡು, ಸುಮಾರು ಹದಿನಾರು ಸಾವಿರದಷ್ಟು ಮರಗಳ ವೈವಿಧ್ಯ, ೨೫ ಲಕ್ಷ ಕೀಟ ಪ್ರಬೇಧಗಳು, ಎರಡು ಸಾವಿರಕ್ಕೂ ಮೀರಿದ ಹಕ್ಕಿ ಪ್ರಬೇಧಗಳು, ಇನ್ನೊಂದಿಷ್ಟು ಸಾವಿರ ವಲಸೆ ಹಕ್ಕಿಗಳು, ಹತ್ತಿರ ಹತ್ತಿರ ಒಂದು ಲಕ್ಷದಷ್ಟು ವಿಧದ ಅಕಶೇರುಕಗಳು ಇವೆಲ್ಲ ಮನುಷ್ಯನ ಲೆಕ್ಕಕ್ಕೆ ಸಿಕ್ಕವು, ದಾಖಲಾದವು. ಇದೆಲ್ಲದರ ಜೊತೆ ಬಹುದೊಡ್ಡ ಪ್ರಮಾಣದಲ್ಲಿ ಆಧುನಿ ಕತೆ, ಹೊರ, ನಾವಿರುವ ಜಗತ್ತಿನಿಂದ ದೂರ, ಕಾಡೊಳಗೆ ಬದುಕುತ್ತಿರುವ ೩೫೦ ಕಾಡು ಮನುಷ್ಯರ ಜನಾಂಗಗಳು. ಅದರಲ್ಲಿ ೬೦ ಈ ರೀತಿಯ ಮೂಲ ಕಾಡು ನಿವಾಸಿಗಳಿಗೆ ಹೊರಜಗತ್ತಿನ ಇರುವಿಕೆಯ ಅಂದಾಜು ಕೂಡ ಇಲ್ಲ.

ಇನ್ನುಳಿದ ಬುಡಕಟ್ಟು ಜನಾಂಗಗಳು ಸ್ವಲ್ಪ ಆಧುನಿಕತೆಯ ಪಸೆಯಂಟಿಸಿಕೊಂಡಿವೆ. ಇದೆಲ್ಲ ಅಲ್ಲಿನ ಬುಡಕಟ್ಟು ಜನಾಂಗದ
ಒಟ್ಟೂ ಜನ ಸಂಖ್ಯೆ ಸುಮಾರು ಮೂರು ಕೋಟಿ. ಇವರನ್ನು ಅಲ್ಲಿನ ಜನ ಕಾಡಿನ ರಕ್ಷಕರು ಎಂಬರ್ಥಬರುವ ಹೆಸರಿನಿಂದ
ಕರೆಯುವುದು. ಇವರು ನಿಜ ಅರ್ಥದಲ್ಲಿ ಕಾಡಿನ ರಕ್ಷಕರು. ಕಾಡು ನೋಡಲು ಬ್ರೆಝಿಲ್‌ನ ಮನೌಸ್ ನಗರಕ್ಕೆ ಬಂದಿಳಿದಾಗ ಹತ್ತಿರದ ಗದ್ದೆ ಕೊಯ್ಲಿನ ನಂತರ ಮಣ್ಣು ಸುಡುವಾಗಿನ ಹೊಗೆಯ ಘಮಲು ನಮ್ಮನ್ನು ಆವರಿಸಿತ್ತು.

ಇದು ಏನೆಂದು ವಿವರವಾಗಿ ಕೇಳಬೇಕೆಂದರೆ ಅವರಿಗೆ ಪೋರ್ಚುಗೀಸ್ ಭಾಷೆ ಬಿಟ್ಟರೆ ಇನ್ನೊಂದು ಬರುತ್ತಿರಲಿಲ್ಲ. ಇನ್ನು ಎರಡು
ದಿನದ ನಂತರ ನಮ್ಮನ್ನು ಇಂಗ್ಲಿಷ್ ಗೈಡ್ ಒಬ್ಬ ಸೇರಿಕೊಳ್ಳುವವನಿದ್ದ. ಕಾಡಿಗೆ ಹೊರಡುವ ದಿನ ನಮ್ಮ ಬಟ್ಟೆಯೆಲ್ಲ ಹೊಗೆಯ ವಾಸನೆ. ಅಲ್ಲಿಯವರೆಗೆ ಈ ಹೊಗೆಯ ಕಂಪು ನಮಗೆ ಅಭ್ಯಾಸವಾಗಿ ಕಾರಣ ಕೇಳಬೇಕೆಂಬುದೇ ಮರೆತು ಹೋಗಿತ್ತು. ಕಾಡಿನ ಅಂಚಿನಲ್ಲಿ ಅಲ್ಲಲ್ಲಿ ಇಂತಹ ಹೊಗೆಯಾಡುವುದು ರಿಯೋ ನೆಗ್ರೋ ನದಿಯಲ್ಲಿ ಬೋಟಿನಲ್ಲಿ ಹೋಗುವಾಗ ಮತ್ತೆ ಕಾಣಿಸಿ ನೆನಪಾಯಿತು. ನಾಲ್ಕಾರು ಬಾರಿ ಗೈಡ್ ಹತ್ತಿರ ಕಾರಣ ಕೇಳಿದಾಗ ಕೊನೆಯಲ್ಲಿ ತೀರಾ ಗುಟ್ಟಿನಲ್ಲಿ ಪಿಸುಗುಟ್ಟುತ್ತ ಹೇಳಿದ್ದ.

ಇದು ಅಲ್ಲಿನ ಮಾಫಿಯಾಗಳು ಕಾಡನ್ನು ಕೊಳ್ಳೆ ಹೊಡೆಯುವ, ತೋಟ ಮತ್ತು ಗದ್ದೆ ಮಾಡಿ ಮಾರುವ ಕಾರ್ಯದ ಒಂದು ಭಾಗ, ಕಾಡಿಗೆ ಬೆಂಕಿ ಇಡುವುದು ಎಂದು. ನಾವು ಹತ್ತಿದ್ದ ಬೋಟು ನೆಗ್ರೋ ನದಿಯಲ್ಲಿ ಉತ್ತರಕ್ಕೆ ಹೊರಟು ಮೂರು ದಿನವಾಗಿತ್ತು. ಅಲ್ಲಲ್ಲಿ ಕಾಡಿನ ಮಧ್ಯೆ ಕೋಟೆಯಂತಹ ಗೋಡೆಗಳ ಮಧ್ಯೆ ಇರುವ ಖಾಲಿ ಗೆಹೌಸ್ ಗಳಲ್ಲಿ ತಂಗುವುದು. ಅಲ್ಲಿ ಬೇಕಾಗುವ ದಿನಬಳಕೆಯ ಸಾಮಾನುಗಳು ಮತ್ತು ಆಹಾರವನ್ನು ಬೋಟಿನಲ್ಲಿಯೇ ಒಯ್ಯಬೇಕಿತ್ತು. ಇಂತಹ ಗೆಹೌಸ್‌ಗಳಿಗೆ ಅಲ್ಲಿನ ಕಾಡು ಜನ ಬಂದು ಕಬ್ಜಾ ಮಾಡಿಕೊಳ್ಳಬಾರದೆಂದು ಭರ್ಜರಿ ಬಂದೋಬಸ್ತ್ ಇತ್ತು. ಈ ಮೂರು ದಿನ ನದಿಯ ಗುಂಟ ವಾಸವಿದ್ದ ಜನರನ್ನು ತೋರಿಸಿ ಇವರೆಲ್ಲ ಇಲ್ಲಿನ ಬುಡಕಟ್ಟಿನವರು, ಕಾಡು ಮನುಷ್ಯರು ಎಂದು ನಮ್ಮ ಗೈಡ್ ಕಥೆ ಹೊಡೆಯುತ್ತಿದ್ದ.

ಅವರನ್ನು ನೋಡಿದರೆ ತೀರಾ ಬಡ ಕೇರಿಯ ಜನರನ್ನು ನೋಡಿದಂತೆ ಅನ್ನಿಸುತ್ತಿತ್ತು. ನದಿಯಗುಂಟ ಅವರು ಬಂದು ಮೀನು ಹಿಡಿಯುತ್ತಿದ್ದರು, ಪಾತ್ರೆ ಬಟ್ಟೆ ತೊಳೆಯುತ್ತಿದ್ದರು, ಗುಡಿಸಲಿನ ಮನೆಗಳು, ಕೋಳಿ ದನ ಇತ್ಯಾದಿ. ಇವರು ನೋಡಲಿಕ್ಕೆ ಹಿಂದುಳಿದುಬಿಟ್ಟವರಂತೆ ಕಂಡರೂ ಅವರ ಬಟ್ಟೆ, ಪಾತ್ರೆಪಗಡೆ ಇವೆಲ್ಲ ಭಿನ್ನವಾಗೇನೂ ಇರಲಿಲ್ಲ. ನಾವು ನದಿಯ ಮಧ್ಯೆ ಹೋಗುತ್ತಿದ್ದರೆ ಗುಂಟ ಬಂದು ನಮ್ಮನ್ನು ಕರೆಯುತ್ತಿದ್ದರು, ಬಾಳೆ ಸೇರಿದಂತೆ ನಾನಾರೀತಿಯ ಹಣ್ಣುಗಳನ್ನು ಮಾರಾಟಕ್ಕೆ ‘ಡಾಲರ್ ಡಾಲರ್’ ಎಂದು ಕೂಗುತ್ತಿದ್ದರು. ಇವರನ್ನು ನೋಡಿ ಅವರ ಬಡತನದ ಬಗ್ಗೆ ಬೇಸರವಾಗುತ್ತಿತ್ತು. ಆದರೆ ಅವರನ್ನು ನೋಡುವ ಯಾವುದೇ ಆಸಕ್ತಿ ನಮ್ಮಲ್ಲಿರಲಿಲ್ಲ.

ಏಕೆಂದರೆ ನಮ್ಮ ಲೆಕ್ಕದಲ್ಲಿ ಕಾಡು ಮನುಷ್ಯರೆಂದರೆ ಬೇರೆಯದೇ ಅನಿಸಿಕೆಗಳಿದ್ದವು. ಗೈಡ್‌ಗೆ ಹೇಗಾದರೂ ಮಾಡಿ ಅಲ್ಲಿನ ಮೂಲ ನಿವಾಸಿ ಕಾಡಿನಲ್ಲಿ ವಾಸಿಸುವ ನಿಜವಾದ ಕಾಡು ಜನರನ್ನು ತೋರಿಸಬೇಕೆಂದು ಕೇಳಿಕೊಂಡೆವು. ಅದಕ್ಕೆ ಆತ ಇವರೇ ಅವರು ಎಂದು. ಆತ ಮೊದಲಿಗೆ ಒಪ್ಪಲೇ ಇಲ್ಲ. ಅವರ ಜಾಗಕ್ಕೆ ನದಿಯಲ್ಲಿ ನಾವು ಹೋದರೆ ಬಾಣದಿಂದ, ಈಟಿಯಿಂದ ಕೊಂದು ಬಿಡುತ್ತಾರೆ, ಕಾಡಿನ ಸೆಕ್ಯುರಿಟಿಯವರಿಗೆ ಗೊತ್ತಾದರೆ ನಮ್ಮೆಲ್ಲರನ್ನೂ ಜೈಲಿಗೆ ಹಾಕುತ್ತಾರೆ ಎಂದೆಲ್ಲ ಹೇಳಿದ್ದ, ಅದು ಹೌದು ಕೂಡ. ನಂತರ ಒಂದಿಷ್ಟು ಭಕ್ಷೀಸ್ ಆತನ ಕಿಸೆಗೆ ತುರಿಕಿದಾಗಲೇ ಆತ ಏನೋ ಒಂದು ಮಾಡೋಣ ಎಂದು ಮನಸ್ಸು ಮಾಡಿದ್ದು. ಆದರೆ ಆತ ಮೊದಲೇ ಹೇಳಿಬಿಟ್ಟಿದ್ದ.

ಕಾಡು ಜನರನ್ನು ನೋಡಲಿಕ್ಕೆಲ್ಲ ಸಾಧ್ಯವೇ ಇಲ್ಲ ಆದರೆ ಅವರಿರುವ ಜಾಗದ ಹತ್ತಿರಕ್ಕೆ ಹೋಗಿ ಬರಬಹುದು ಎಂದು. ನಾವು ನಸೀಬು ತಿಳಿಯಲು ತಯಾರಾಗಿದ್ದೆವು. ನಾಲ್ಕನೆಯ ದಿನ ಬೆಳಿಗ್ಗೆ ಮೂರಕ್ಕೆಲ್ಲ ಹೊರಟುಬಿಡಬೇಕು, Tomorrow is your day! ಎಂದು ಪರೋಕ್ಷವಾಗಿ ಗೈಡ್ ಹೇಳಿದ್ದ. ಆ ದಿನ ಬೆಳಿಗ್ಗೆ ನಾವು ನದಿಯಲ್ಲಿ ಕಾಡಿನಲ್ಲಿ ಬಹಳಷ್ಟು ಒಳಕ್ಕೆ ಬಂದಿದ್ದೆವು. ಸುಮಾರು ಬೆಳಗಿನ ಐದು ಗಂಟೆ. ಅದಾಗಲೇ ಬೆಳಕು ಸ್ವಲ್ಪ ಹರಿದಿತ್ತು. ನಮ್ಮ ಗೈಡ್ ಒಮ್ಮೆಲೇ ಎಲ್ಲರನ್ನೂ ಶಾಂತವಾಗಿಸಿದ. ಬೋಟಿನ ಡಬಲ್ ಎಂಜಿನ್ ಅನ್ನು ಆರಿಸುವಂತೆ ಕ್ಯಾಪ್ಟನ್‌ಗೆ ಸನ್ನೆಯ ಸೂಚಿಸಿದ.

ಒಂದಿಷ್ಟು ಹೊತ್ತು ಶಾಂತವೆನಿಸಿದ್ದ ಕಾಡಿನಲ್ಲಿ ಒಮ್ಮಿಂದೊಮ್ಮೆಲೇ ಜೀರುಂಡೆಯ ತಡೆಯಲಾಗದಷ್ಟು ಶಬ್ದ ಶುರುವಾಯಿತು.
ಸಮುದ್ರದಲೆಯಷ್ಟೇ ಭೋರ್ಗರೆತ. ಆಮೇಲೆ, ಕೆಲವು ನಿಮಿಷಗಳಲ್ಲಿ ಎಲ್ಲವೂ ನಿಂತು ಮತ್ತೆ ಭಯಹುಟ್ಟುವಷ್ಟು ಭೀಕರ
ಮೌನ. ನಾವು ಹಾಗೆ ನದಿಯ ಮೂಲೆಯಲ್ಲಿ ಅಡಗಿ ನಿಂತದ್ದು ಅಲ್ಲಿಯೇ ಇದ್ದ ಕೆಲವು -ರೆ ಗಾರ್ಡ್‌ಗಳಿಗೆ ಕಾಣಿಸಿ ಅವರು ಅಲ್ಲಿಗೆ ಬಂದು ಪಿಸುಮಾತಿನಲ್ಲಿಯೇ ನಮ್ಮ ಕ್ಯಾಪ್ಟನ್‌ಗೆ ಅವಾಜು ಹಾಕುತ್ತಿದ್ದರು. ಮಧ್ಯೆ ಮಧ್ಯೆ ನಮ್ಮತ್ತ ನೋಡುತ್ತಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ, ನಮಗೆ ಪೋರ್ಚುಗೀಸ್ ತಿಳಿಯುತ್ತಿರಲಿಲ್ಲ. ನಮಗೆ ಈ ಗೈಡ್ ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದಾ ನೆಯೇ ಎಂಬ ಅನುಮಾನ. ಆ ಕ್ಷಣ ಕಾಡಿನೊಳಗಿಂದ ಒಂದೇ ಸಮನೆ ಸುಮಾರು ಐವತ್ತು ಜನ ಕಲ್ಲು ಕುಟ್ಟುತ್ತಿರುವಂತಹ ಶಬ್ದ ಕೇಳಿಸತೊಡಗಿತು.

ಎರಡೂ ಬೋಟಿ ನವರು ಶಾಂತವಾಗಿ ಕೇಳಿಸಿಕೊಂಡೆವು. ಅದು ಸುಮಾರು ಹದಿನೈದು ನಿಮಿಷ ಕೇಳಿಸಿತು. ಅವರನ್ನು ನೋಡ ಲಂತೂ ಆಗಲಿಲ್ಲ, ಕೊನೆಯ ಪಕ್ಷ ಅವರ ಶಬ್ದ ಕೇಳಿಸಿಕೊಂಡು ಬಂದದ್ದಾಯಿತು. ಅಷ್ಟು ಬೆಳಿಗ್ಗೆ ಆ ಕಾಡುಜನ ಏನನ್ನು ಕುಟ್ಟುತ್ತಿದ್ದರು, ಒಂದು ವೇಳೆ ಅಲ್ಲಿ ಆ ಸೆಕ್ಯೂರಿಟಿ ಗಾರ್ಡ್ ಗಳಿಲ್ಲದಿದ್ದಲ್ಲಿ ನಾವು ಮುಂದೆ ಹೋಗುತ್ತಿದ್ದೇವಾ ಇವೆಲ್ಲ ಪ್ರಶ್ನೆ ಯಾಗಿಯೇ ಉಳಿಯಿತು. ಇದು ಅತ್ಯಂತ ರೋಚಕತೆ ಹುಟ್ಟಿಸಿದ, ಈಗ ನೆನೆಸಿಕೊಂಡರೆ ಹುಚ್ಚು ಭಂಡತನ ಎಂದೆನ್ನಿಸುವ ಒಂದು ನೆನಪು.

ಯುರೋಪಿಯನ್ನರು ಬ್ರೆಝಿಲ್‌ಗೆ ಕಾಲಿಡುವ ಸಮಯದಲ್ಲಿ ಇಂತಹ ೨೦೦೦ ಬುಡಕಟ್ಟು, ಕಾಡು ಜನಾಂಗಗಳು ಬ್ರೆಝಿಲ್‌ನಲ್ಲಿ ಇದ್ದವು ಎನ್ನುವುದಕ್ಕೆ ದಾಖಲಿಯಿದೆ. ಅವರೆಲ್ಲ ಸುಮಾರು ಐವತ್ತು ಸಾವಿರ ವರ್ಷದ ಹಿಂದೆ ಈ ನೆಲಕ್ಕೆ ಬಂದರು ಎನ್ನಲಾ ಗುತ್ತದೆ. ಯುರೋಪಿಯನ್ನರು ಬ್ರೆಝಿಲ್ ಗೆ ಬಂದದ್ದು ಹದಿನಾಲ್ಕನೇ ಶತಮಾನ, ಈಗಿನಿಂದ ೫೨೨ ವರ್ಷ ಹಿಂದೆ. ಆಗಲೇ ಶುರುವಾದ ಯುರೋಪಿಯನ್ ಮತ್ತು ಅಮೆಜಾನ್ ಬುಡಕಟ್ಟು ಜನಾಂಗದ ನಡುವಿನ ಯುದ್ಧ ಇಂದಿನವರೆಗೆ ನಾನಾ ರೀತಿ, ಸ್ವರೂಪಗಳನ್ನು ಪಡೆದು ಮುಂದುವರಿದುಕೊಂಡೆ ಬಂದಿದೆ.

ಮೊದಲು ಬಂದ ಪೋರ್ಚುಗೀಸರ ವಿರುದ್ಧ ಯುದ್ಧಕ್ಕೆ ನಿಂತವರೆಂದರೆ ‘ತುಪಿನಂಬಾ’ ಬುಡಕಟ್ಟಿನವರು. ಈ ಯುದ್ಧ ಎರಡು ವರ್ಷಗಳ ಕಾಲ ನಡೆಯಿತು. ಕೊನೆಗೆ ಆ ಜನಾಂಗ ಸೋತು ಮಂಡಿಯೂರಿತು. ನಂತರ ಐಮೋರ್ ಎನ್ನುವ ಇನ್ನೊಂದು ಜನಾಂಗ ಪೋರ್ಚುಗೀಸರ ವಿರುದ್ಧ ಸುಮಾರು ನೂರಿಪ್ಪತ್ತು ವರ್ಷ ಕಾದಾಡಿ ನಂತರ ಸೋತಿತು. ಹೀಗೆ ಸೋತವರನ್ನು ಪೋರ್ಚುಗೀಸರು ಮತಾಂತರಿಸಿ ಆ ನೆಲಕ್ಕೆ ಆಕ್ರಮಣಕ್ಕೆ ಬರುತ್ತಿದ್ದ ಬ್ರಿಟೀಷರು, ಫ್ರೆಂಚರನ್ನು ಸದೆಬಡಿಯಲು ಯುದ್ಧದಲ್ಲಿ ಆಳಾಗಿ ಬಳಸಿಕೊಳ್ಳುತ್ತಿದ್ದರು.

ಮನವೊ, ಗೌರಾನಿ ಹೀಗೆ ನೂರಾರು ಕಾಡು ಜನಾಂಗ ನಿರಂತರ ಹೋರಾಡಿ ಸೋತು ಅಂದಿನ ೨೦೦೦ ಜನಾಂಗಗಳಲ್ಲಿ ಇಂದು ಉಳಿದುಕೊಂಡದ್ದು ೩೫೦ ಜನಾಂಗ ಮಾತ್ರ. ಅದರಲ್ಲಿ ೨೯೦ ಜನಾಂಗ ಅದಾಗಲೇ ಹೊರಜಗತ್ತಿಗೆ ತೆರೆದುಕೊಂಡಿದೆ ಮತ್ತು ಜೊತೆಯಲ್ಲಿ ತಮ್ಮ ಬದುಕನ್ನು ಪ್ರತ್ಯೇಕವಾಗಿಯೇ ನಡೆಸಿಕೊಂಡು ಹೋಗುತ್ತಿವೆ. ಅಮೆಜಾನ್ ಕಾಡಿನ ಬಗ್ಗೆ ಕಳೆದ ಒಂದು ದಶಕದಿಂದ ಒಂದೇ ಒಂದು ಒಳ್ಳೆಯ ಸುದ್ದಿ ಕೇಳಿದ್ದಿಲ್ಲ. ಮೊದಲನೆಯದು ತೀವ್ರಗತಿಯ ಕಾಡಿನ ನಾಶ. ಇಷ್ಟೊಂದು ದೊಡ್ಡ ಕಾಡು ಕಳೆದ ಕೆಲ ವರ್ಷದಿಂದ ಈಚೆ ಪ್ರತೀ ವರ್ಷ ಶೇ. ೧ ರಷ್ಟು ಕಡಿಮೆ ಯಾಗುತ್ತಿದೆ.

ಕಳೆದ ಐದು ದಶಕದಲ್ಲಿ ಶೇ.೨೦ ಸಸ್ಯ ಸಂಪತ್ತು ನಾಶವಾಗಿದೆ ಎನ್ನುವ ಅಜಮಾಸು ಲೆಕ್ಕ. ಎರಡನೆಯದು ಈ ಕಾಡಿನ ನಾಶದ ಜೊತೆ ನಾಶವಾಗುವ ಅಥವಾ ಆಧುನಿಕತೆಯ ಇತ್ತಕಡೆ ದಾಟಿಬರುವ ಈ ಬುಡಕಟ್ಟು ಜನಾಂಗಗಳು, ಬದುಕು. ಇದರಿಂದ ಕಾಡು ಇನ್ನಷ್ಟು ನಾಶಕ್ಕೆ ತೆರೆದುಕೊಳ್ಳುತ್ತಿದೆ. ಇಂದು ಅಂಚಿನಲ್ಲಿರುವ ಜನಾಂಗಗಳದ್ದು ಕೆಲದಶಕಗಳ ನಿರಂತರ ಯುದ್ಧ, ಘರ್ಷಣೆ. ಇವರೆಲ್ಲ ಇರುವುದು ಆಧುನಿಕ ನಾಡಿಗೆ ತಾಗಿ. ಇಂದು ಮಾಫಿಯಾ, ಅದರ ಆಣತಿಯಂತೆ ನಡೆಯುವ ಸರಕಾರ ಹೊಡೆದು ಬಡಿದು ಅವರಿಂದ ಅವರ ನೆಲ, ಕಾಡನ್ನು ಕಿತ್ತುಕೊಳ್ಳುತ್ತಿದೆ. ಇನ್ನು ಕ್ರಿಶ್ಚನ್ ಮಿಷನರಿಗಳಿಗೆ ಅವರನ್ನು ಆದಷ್ಟು ಬೇಗ ಮತಾಂತರಿಸುವ ಗಡಿಬಿಡಿ.

ಇದೆಲ್ಲದರ ನಡುವೆ ತಮ್ಮತನ, ತಮ್ಮ ಜೀವನ ರೀತಿಯನ್ನು ಕಾಪಾಡಿಕೊಳ್ಳುವ ಹೊಡೆದಾಟದ ಬದುಕು ಈ ಬುಡಕಟ್ಟು ಜನಾಂಗದವರದ್ದು. ಈ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ತೀವ್ರ ವಿರೋಧ ಬ್ರೆಝಿಲ್‌ನ ಮಾಫಿಯಾ ಮತ್ತು ಸರಕಾರ ವನ್ನು ಕಾಡು ಹೊಕ್ಕದಂತೆ ಹಲವು ಕಡೆ ಅಡ್ಡಿಯಾಗಿ ನಿಂತಿವೆ. ಈ ಬುಡಕಟ್ಟು ಜನ ಹೀಗಾಗಿ ಅರಣ್ಯ ರಕ್ಷಕರು. ಈ ಕಾಡಿನ ಕೊಳ್ಳೆಗೆ ತಡೆಯಾಗಿ ನಿಂತಿರುವ ಈ ಗಡಿ ಯಂಚಿನ ಬುಡಕಟ್ಟಿನವರನ್ನು ಹೇಗಾದರೂ ಮಾಡಿ, ವ್ಯವಸ್ಥಿತಯವಾಗಿ ಸದೆ ಬಡಿಯಬೇಕೆಂದು ಬ್ರೆಝಿಲ್ ಸರಕಾರ ಈಗ ಐದು ವರ್ಷದ ಹಿಂದೆ ಹೊಸತೊಂದು ಕಾನೂನನ್ನು ಜಾರಿಗೆ ತಂದಿತ್ತು. ಅದರ ಪ್ರಕಾರ ಯಾರ ಬಳಿ ಅವರಿರುವ ಜಾಗದ ಕಾಗದ ಪತ್ರ ಇಲ್ಲವೋ ಅವರೆಲ್ಲ ಕಾಡನ್ನು ಬಿಡಬೇಕು, ಅದು ಸರಕಾರದ ಆಸ್ತಿ.

ಇಂತಹದ್ದೊಂದು ಕಾನೂನು ಜಾರಿಯಾಗು ತ್ತಿದೆ ಎಂಬ ಸುದ್ದಿ ತಿಳಿದ ಈ ಗಡಿನಾಡಿನ ಬುಡಕಟ್ಟಿನವರು ಆಗ ಸಾವಿರದ ಲೆಕ್ಕ ದಲ್ಲಿ ಬ್ರೆಝಿಲ್‌ನ ಸಂಸತ್ತಿನ ಮೇಲೆ ಮುಗಿಬಿದ್ದಿದ್ದರು, ಸುದ್ದಿಯಾಗಿತ್ತು. ಇದೆಲ್ಲ ಖದೀಮತನಕ್ಕೆ ಚಾಲನೆ ಕೊಟ್ಟದ್ದು ಅಲ್ಲಿನ  ಅಧ್ಯಕ್ಷ ಜೈರ್ ಬಾಲ್ಸನಾರೋ. ಆತ ಈ ಕಾನೂನನ್ನು ಶತಾಯು ಗತಾಯು ಜಾರಿಗೆ ತಂದೇ ತೀರುತ್ತೇನೆ ಎಂದು ಹೊರಟವ. ಇದಷ್ಟೇ ಅಲ್ಲ, ಅಲ್ಲಿನ ಬುಡಕಟ್ಟು ಜನಾಂಗವನ್ನು ಕಾಪಾಡುತ್ತಿದ್ದ FUNA ಎನ್ನುವ ಗಟ್ಟಿ ಸಂಸ್ಥೆಯೊಂದಿತ್ತು. ಇದರಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬುಡಕಟ್ಟು ಜನಾಂಗದ, ಕಲಿತ, ಬಹಳಷ್ಟು ಹೋರಾಟಗಾರರಿದ್ದರು.

ಅಧ್ಯಕ್ಷ ಬಾಲ್ಸನಾರೋ ಈ ಸಂಸ್ಥೆಗೆ ಸಂದಾಯವಾಗುತ್ತಿದ್ದ ಹಣವನ್ನೆಲ್ಲ ನಿಲ್ಲಿಸಿಬಿಟ್ಟ. ಸರಕಾರದ ವಿರುದ್ಧವೇ ಚಟುವಟಿಕೆ
ಮಾಡುವವರಿಗೆ ಸರಕಾರ ಏಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದ. ನೋಡನೋಡುತ್ತಲೇ ಆ ಸಂಸ್ಥೆ ಹಲ್ಲು ಕಿತ್ತ ಹಾವಾಯಿತು. ಇದರಿಂದ ಸರಕಾರ, ಮಾಫಿಯಾ ಮತ್ತು ಭೂಕಬಳಿಕೆ ಮಾಡುವವರನ್ನು ಕೇಳುವವರೇ ಇಲ್ಲದಂತಾಯಿತು. ಊರೇ ಅಲ್ಲದಂತಹ ಜಾಗದಲ್ಲಿ ಇಂದು ನೂರಾರು ಗುಡಿಸಲುಗಳು, ಕುಟುಂಬಗಳು ಕಾಣಿಸಿಕೊಳ್ಳುತ್ತವೆ. ಇವರೆಲ್ಲ ಅಲ್ಲಿನ ಸರಕಾರ ಕಾಡಿನಿಂದ ಓಡಿಸಿ ನೆಲೆ ಕಳೆದುಕೊಂಡವರು.

ಅವರು ಹಗಲಲ್ಲಿ ಹೈವೇಗಳಲ್ಲಿ ಬಂದು ನಿಂತು ಆಹಾರಕ್ಕೆ, ನೀರಿಗೆ, ಹಣಕ್ಕೆ ಬೇಡುತ್ತಾರೆ. ರಾತ್ರೆಯಾಯಿತೆಂದರೆ ಆ ರಸ್ತೆಗಳಲ್ಲಿ ಸಂಚರಿಸಬಾರದು ಎಂಬ ಅಲಿಖಿತ ನಿಯಮ. ಏಕೆಂದರೆ ಅವರೇ ಅಡ್ಡ ಹಾಕಿ ಸುಲಿಗೆ ಮಾಡುತ್ತಾರೆ. ಇದೆಲ್ಲದಕ್ಕೆ ಕಾರಣವೇನು, ಏಕೆ ಹೀಗಾಯಿತು, ಏಕೆ ಈ ಸುಲಿಗೆ ನಡೆ ಯುತ್ತಿದೆ ಎಂಬ ಮೂಲ ಪ್ರಶ್ನೆಗೆ ಉತ್ತರ ಈಗ ನಿಮಗೆ ಗೊತ್ತಿದೆ. ಒಟ್ಟಾರೆ ಇಂದು ಬ್ರೆಜಿಲ್‌ನ ಮೂಲ ನಿವಾಸಿಗಳು, ಬುಡಕಟ್ಟಿನವರು ಅವರದೇ ನೆಲದಲ್ಲಿ ಅತಂತ್ರರಾಗಿ ಅಸಾಧ್ಯ ಸ್ಥಿತಿಗೆ ಬಂದು ನಿಂತಿದ್ದಾರೆ. ಅದೆಷ್ಟೋ ಲಕ್ಷ ಮಂದಿ ಕಾಡಿಲ್ಲದೆ, ನಾಡಿಗೂ ಸೇರದೇ ತಮ್ಮ ನೆಲದಲ್ಲಿಯೇ ಪರಕೀಯರಂತೆ ಬದುಕುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ವೋಟಿಂಗ್ ವ್ಯವಸ್ಥೆಯೊಳಕ್ಕೆ ಇನ್ನೂ ಬಾರದಿರುವುದರಿಂದ ರಾಜಕೀಯವಾಗಿ ಅವರೆಲ್ಲ ದುರ್ಬಲರು, ಲೆಕ್ಕಕ್ಕಿಲ್ಲ ದವರು.

ಒಂದೊಳ್ಳೆ ಸುದ್ದಿಯೆಂದರೆ ಕಳೆದ ತಿಂಗಳು ಜೈರ್ ಬಾಲ್ಸನಾರೋ ಚುನಾವಣೆಯಲ್ಲಿ ಸೊತ್ತಿzನೆ. ಇದು ಕೊಡುವ ಸಮಾಧಾನ ಕ್ಕಿಂತ ಈಗ ಆರಿಸಿ ಬಂದಿರುವ ಲೂಯೀಸ್ ಡಾ ಸಿಲ್ವಾ ಒಂದಿಷ್ಟು ಭರವಸೆಯನ್ನು ಹುಟ್ಟಿಹಾಕಿದ್ದಾನೆ. ಆತ ಮೊದಲಿನಿಂದ ಹೇಳಿಕೊಂಡು ಬಂದದ್ದು ಎರಡನ್ನು. ಮೊದಲನೆಯದು ಅಮೆಜಾನ್ ಕಾಡನ್ನು ಸಂರಕ್ಷಿಸುವುದು. ಎರಡನೆಯದು ಅಲ್ಲಿನ ಕಾಡು, ಬುಡಕಟ್ಟಿನವರನ್ನು ಅವರಷ್ಟಕ್ಕೆ ಅವರಿಗಿರಲು ಅವಕಾಶ ಮಾಡಿಕೊಡುವುದು.

ಬ್ರೆಝಿಲ್ ಕಾಡುಜನರದ್ದು ಹೊರಜಗತ್ತಿನವರೊಂದಿಗೆ ಐನೂರು ವರ್ಷದ ಯುದ್ಧ. ಇದರಲ್ಲಿ ಸತ್ತವರ, ನಿರ್ಗತಿಕರಾದವರ ಯಾವುದೇ ಲೆಕ್ಕವಿಟ್ಟವರು ಯಾರೂ ಇಲ್ಲ. ಪ್ರತೀ ಅಕ್ರಮಣದಲ್ಲೂ ನಶಿಸಿಹೋಗುವ ಭಾಷೆ, ಸಂಸ್ಕೃತಿ, ಕಲೆಗೆ ಕೂಡ ಲೆಕ್ಕವಿಲ್ಲ. ಇದು ನಿಲ್ಲಬೇಕಿದೆ. ಅಮೆಜಾನ್ ಎಂದರೆ ಅದು ಜಗತ್ತಿನ ಶ್ವಾಸಕೋಶ. ಅಮೆಜಾನ್ ನಾಶವೆಂದರೆ ಅದು ಹೆಚ್ಚು ಕಡಿಮೆ  ಭೂಮಿಯ ನಾಶ. ಅದರ ಪರಿಣಾಮ ಜಗತ್ತಿನ ಎಲ್ಲರ ಮೇಲೆ ಒಂದಿಂದು ರೀತಿಯಲ್ಲಿ ತಟ್ಟಿಯೇ ತಟ್ಟುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲಿನ ಮಾಫಿಯಾವನ್ನು, ಕಾಡುಗಳ್ಳರನ್ನು ನಿಯಂತ್ರಿಸುವುದು ನಾಡಿನ ಸರಕಾರಕ್ಕಂತೂ ಅಸಾಧ್ಯವೇ ಹೌದು. ಏಕೆಂದರೆ ಕಾಡು ಅಷ್ಟು ದೊಡ್ಡದು. ಇದರ ರಕ್ತ ಹೀರಲು, ಮರಕ್ಕೆ, ಅಲ್ಲಿನ ಖನಿಜಕ್ಕೆ, ಅಪರೂಪದ ಪ್ರಾಣಿಗಳಿಗೆ, ಅದರ ಚರ್ಮ, ಕೊಡು, ಉಗುರು ಇತ್ಯಾದಿಯನ್ನು ಕದ್ದು ಮಾರುವ ಸುಮಾರು ೬೦೦ ಗ್ಯಾಂಗ್‌ಗಳು ಇಂದು ಬ್ರೆಝಿಲ್‌ನಲ್ಲಿಯೇ ಸಕ್ರಿಯ ವಾಗಿವೆ. ಅವು ವ್ಯವಸ್ಥೆಯ ಭಾಗವೇ ಆಗಿಹೋಗಿದೆ. ಇದೆಲ್ಲ ಕಳ್ಳಸಾಗಾಣಿಕೆಗೆ ವ್ಯವಸ್ಥಿತ ರಫ್ತು ಸಾವಿರದೆಂಟು ಮಾರ್ಗಗಳಿವೆ. ಒಂದು ವೀರಪ್ಪನ್‌ನನ್ನೇ ಹಿಡಿಯಲು ನಮಗೆ ಅದೆಷ್ಟೋ ದಶಕ ಬೇಕಾಯಿತು.

ಇಲ್ಲಿ ಅಂತಹ ಲಕ್ಷ ವೀರಪ್ಪನ್ ಗಳಿದ್ದಾರೆ. ಇದು ಬ್ರೆಝಿಲ್ ಸರಕಾರವನ್ನು ಮೀರಿ ಬೆಳೆದಾಗಿದೆ. ಈ ಗ್ಯಾಂಗುಗಳ ಬಳಿ ಅತ್ಯಾಧು ನಿಕ ಶಸಾಸಗಳಿವೆ, ಯಥೇಚ್ಛ ಹಣ, ರಾಜಕೀಯ ಬೆಂಬಲ ಎಲ್ಲವೂ ಇದೆ. ಹಾಗಾಗಿ ಕಾಡು ಜನರ ಐನೂರು ವರ್ಷದ ಯುದ್ಧದಲ್ಲಿ ಸೋಲು ಮಾತ್ರ ಖಚಿತ. ಈ ಸೋಲು ಯಾರೊಬ್ಬರ ಗೆಲುವೂ ಆಗುವುದಿಲ್ಲ. ಇಂದು ಅಮೆಜಾನ್ – ಜಗತ್ತಿನ ಶ್ವಾಸಕೋಶಕ್ಕೆ ಕ್ಯಾನ್ಸರ್ ಉಲ್ಬಣಿಸಿ ಕೆಲ ದಶಕವೇ ಸರಿದಿದೆ. ಕಾಡುಜನರು ಬಳಲಿದ್ದಾರೆ. ಕಾಡು ಕೂಡ ಬಸವಳಿದಿದೆ.