Saturday, 14th December 2024

ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲಿದೆ : ಡಾ. ಡಿ.ಟಿ.ರಾಜು

ಚಿಕ್ಕಬಳ್ಳಾಪುರ: ನಾಗರೀಕತೆ, ಆಧುನಿಕತೆ ಹೆಸರಿನಲ್ಲಿ ಪರಿಸರದ ಮೇಲೆ ಮಾನವ ಮಾಡುತ್ತಿರುವ ದಾಳಿಯ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿ ಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕರ ಕರ್ತವ್ಯವಾಗಿದೆ.

ಏಕೆಂದರೆ ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲಿದೆ ಎಂದು ಎಸ್‌ಜೆಸಿ ಐಟಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಟಿ. ರಾಜು ತಿಳಿಸಿದರು.

ನಗರದ ಪ್ರಮುಖ ರಾಜಬೀದಿಗಳಲ್ಲಿ ಗುರುವಾರ ಎಸ್‌ಜೆಸಿಐಟಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಮೂಲಕ ಕೈಗೊಂಡಿದ್ದ ಪರಿಸರ ಉಳಿಸಿ ಜಾಗೃತಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರವು ಜೀವಸಂಕುಲದ ಉಳಿವಿಗಿರುವ ಏಕೈಕ ಆಸರೆಯಾಗಿದೆ.ಇದು ಮುಂದಿನ ತಲೆಮಾರಿಗೆ ದಕ್ಕಬೇಕಾದರೆ ಸುರಕ್ಷಿತವಾಗಿ ಇಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.ಪ್ರಮುಖವಾಗಿ ಮಣ್ಣು, ಗಾಳಿ, ನೀರು ಇವು ಗಳ ಬಳಕೆಯ ಬಗ್ಗೆ ಮಕ್ಕಳಿಂದ ಮೊದಲಾಗಿ ಹಿರಿಯರವರೆಗೆ ತಿಳಿಹೇಳಬೇಕಾಗಿದೆ.

ವಿಶೇಷವಾಗಿ ಬುದ್ದಿವಂತ ವರ್ಗಕ್ಕೆ ನಾವು ತಿಳಿಹೇಳುವುದು ಅನಿವಾರ್ಯ ವಾಗಿದೆ. ಕಾರಣ ಅನಕ್ಷರಸ್ಥರು ಪರಿಸರವನ್ನು ಕಾಪಾಡಿದ ಹಾಗೆ ನಾವು ವಿದ್ಯಾವಂತ ವರ್ಗ ಮಾಡುತ್ತಿಲ್ಲ. ಇದನ್ನು ಮನಗಂಡು ನಾವು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿ ಎಂಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ, ಬಿಬಿ ರಸ್ತೆ , ಬಜಾರ್ ರಸ್ತೆ ಮೂಲಕ ಶನಿಮಹಾತ್ಮ ಗುಡಿಯ ಬಳಿ ಮುಕ್ತಾತ ಮಾಡಿದ್ದೇವೆ. ಕಾಲ್ನಡಿಗೆಯಲ್ಲಿ ನಮ್ಮ ವಿದ್ಯಾರ್ಥಿ ಗಳು ಪರಿಸರ ಉಳಿಸುವ ಬಗ್ಗೆ ಬಿತ್ತಿಪತ್ರ,ಬ್ಯಾನರ್ ಹಿಡಿದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.

ಕುಲಸಚಿವ ಸುರೇಶ್ ಮಾತನಾಡಿ ಎಸ್ಜೆಸಿಐಟಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ನಾಟಕದ ಮೂಲಕ, ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗುವ ಮೂಲಕ ಸಾರ್ವ ಜನಿಕರ ಗಮನ ಸೆಳೆದು ಪರಿಸರ ಉಳಿಸುವ ಸಂಕಲ್ಪದ ಸಂದೇಶವನ್ನು ಜನತೆಗೆ ಮುಟ್ಟಿಸು ವಲ್ಲಿ ಸಫಲರಾಗಿದ್ದಾರೆ ಎಂದರು.

ಸಹಾಯಕ ಪ್ರಾಧ್ಯಾಪಕಿ ಕು.ವತ್ಸಲ ಮಾತನಾಡಿ ಪರಿಸರ ಉಳಿಸುವಲ್ಲಿ ಮಾನವ ಮಾತ್ರ ಮುಖ್ಯವಾಗಿದೆ.ಈತನಿಗೆ ತಿಳಿಹೇಳುವ ಮೂಲಕವೇ ಇದನ್ನು ಉಳಿಸುವ ಕೆಲಸ ಮಾಡಲು ಸಾಧ್ಯ.ನಿಸರ್ಗದ ನಿಯಮವಾದ ನೀವು ಉಳಿಯಿರಿ, ನೆರೆಹೊರೆಯವರನ್ನೂ ಉಳಿಸಿರಿ ಎನ್ನುವ ಸಂದೇಶ ನಮಗೆ ಅರ್ಥವಾಗಬೇಕು.ಆಗ ಮಾತ್ರ ದಾಳಿ ನಿಲ್ಲಲು ಸಾಧ್ಯ ಎಂದು ತಿಳಿಸಿದರು.

ಪರಿಸರ ಉಳಿಸಿ ಕಾಲ್ನಡಿಗೆ ಜಾಥಾದಲ್ಲಿ ೬೦೦ಕ್ಕೂ ಮೀರಿ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ವರ್ಗದವರು ಭಾಗಿಯಾಗಿದ್ದರು.