Saturday, 26th October 2024

ಡಿ.೧೧ಕ್ಕೆ ಮಾದಿಗರ ಬೃಹತ್ ಹೋರಾಟಕ್ಕೆ ಜಿಲ್ಲೆಯಿಂದ ೨ ಸಾವಿರ ಭಾಗಿ : ಮುನಿಕೃಷ್ಣಯ್ಯ

ಚಿಕ್ಕಬಳ್ಳಾಪುರ : ಎ.ಜೆ. ಸದಾಶಿವ ಆಯೋಗದ ವರದಿಯನ್ನು ಚಳಿಗಾಲದ ಅವೇಶನದಲ್ಲಿ ಸರಕಾರ ಮಂಡಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ ೧೧ ರಂದು ಬೆಂಗಳೂರಿನಲ್ಲಿ ನಡೆಯುವ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಜಿಲ್ಲೆಯಿಂದ ೨ ಸಾವಿರ ಮಂದಿ ಭಾಗಿಯಾಗುವರು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ. ಮುನಿಕೃಷ್ಣಯ್ಯ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ದಲಿತ ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಒಳ ಮೀಸಲಾತಿ ಜಾರಿ ಯಾಗಲೇ ಬೇಕು. ೨೦೦೮ರಲ್ಲಿ ಜಸ್ಟೀಸ್ ಎ.ಜೆ.ಸದಾಶಿವ ಆಯೋಗ ಇಡೀ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಮಾದಿಗರ ಮನೆಮನೆ ಭೇಟಿ ಮಾಡಿ ಪಡೆದಿರುವ ಮಾಹಿತಿಯ ಅನುಸಾರ ಎಡಗೈ ಸಮುದಾಯವಾದ ಮಾದಿಗರಿಗೆ ಶೇ.೬ರಷ್ಟು ಮೀಸಲಾತಿ ನೀಡಬೇಕು ಎಂದು ಹೇಳಿದೆ.

ಸಮುದಾಯವು ಈ ಬಗ್ಗೆ ಹತ್ತಾರು ವರ್ಷಗಳಿಂದ ಸುÃರ್ಘ ಹೋರಾಟ ಮಾಡುತ್ತಾ ಬಂದಿದ್ದರೂ ಕೂಡ ಈವರೆಗೆ ಜಾರಿಯಾಗಿಲ್ಲ. ಇದನ್ನು ಖಂಡಿಸಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಮಾದಿಗ ಸಮುದಾಯದ ಬೃಹತ್ ಐಕ್ಯ ಹೋರಾಟ ಆಯೋಜಿಸಿದ್ದು ಜಿಲ್ಲೆಯಿಂದ ಸುಮಾರು ೨ ಸಾವಿರ ಮಾದಿಗ ಸಮುದಾಯದ ಜನತೆ ಭಾಗಿಯಾಗಿ ಸರಕಾರಕ್ಕೆ ಬಿಸಿ ಮುಟ್ಟಿಸ ಲಿದ್ದೇವೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ೫ ವಿಧಾನ ಸಭಾ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಸಮುದಾಯದಲ್ಲಿ ಮಾದಿಗರೇ ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ಇವರ ಸ್ಥಿತಿಗತಿ ಸ್ವಾತಂತ್ರ‍್ಯ ಪೂರ್ವದ ಕಾಲದ ರೀತಿಯೇ ಇದೆ. ಮೀಸ ಲಾತಿ ಇದ್ದರೂ ಇವರ ಬೆಳವಣಿಗೆಗೆ ನೆರವಾಗಿಲ್ಲ. ಏಕೆಂದರೆ ಮೀಸಲಾತಿ ಬಲಾಢ್ಯ ಜಾತಿಗಳ ಪಾಲಾಗಿದೆ.ಈ ಅನ್ಯಾಯ ಸರಿ ಹೋಗಬೇಕಾದರೆ ಎಜೆ. ಸದಾಶಿವ ಆಯೋಗದಂತೆ ಒಳಮೀಸಲು ಜಾರಿಯಾಗಲೇಬೇಕು.

ಬೆಂಗಳೂರಿನ ಹೋರಾಟಕ್ಕೆ ರಾಜ್ಯದಾದ್ಯಂತ ಸುಮಾರು ೨ ಲಕ್ಷದಷ್ಟು ಜನಸಾಗರ ಸೇರಲಿದ್ದು ಜಿಲ್ಲೆಯಿಂದ ೨ ಸಾವಿರ ಜತೆಯಾಗಲಿದ್ದೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟವಾಗಲಿದ್ದು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ.ಚಳಿಗಾಲದ ಅವೇಶನದಲ್ಲಿ ಇದನ್ನು ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರದ ಶಿಫಾರಸ್ಸಿಗೆ ಕಳಿಸಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ರಮಣ್ ಅಕೇಶ್ ಮಾತನಾಡಿ ಕೇಂದ್ರ ಸರಕಾರ ಶೇ.೨ರಷ್ಟಿರುವ ಮೇಲ್ವರ್ಗಕ್ಕೆ ಶೇ.೧೦ರಷ್ಟು ಮೀಸಲಾತಿ ನೀಡಿರು ವುದು ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ.ಮೀಸಲಾತಿ ನೀಡಬೇಕಿರುವುದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಸಮುದಾಯಗಳಿಗೆ ಮಾತ್ರ ಎಂಬುದನ್ನು ಮೋದಿಯವರು ಮರೆತಿದ್ದಾರೆ.

ಮಾದಿಗ ಸಮುದಾಯದ ನ್ಯಾಯಯುತ ಹಕ್ಕುಗಳನ್ನು ಒದಗಿಸಲು ಸರಕಾರಗಳ ಮುಂದೆ ಅಂಗಲಾಚಿ ಬೇಡುತ್ತಿದ್ದರೂ ಈವರೆಗೆ ಈಡೇರಿಸಿಲ್ಲ. ಶಾಸಕಾಂಗ ಕಾರ್ಯಾಂಗ ಎರಡೂ ಕೂಡ ನಮಗೆ ಮೋಸ ಮಾಡಿವೆ.ಹಾವನೂರು ಆಯೋಗದ ವರದಿಯಂತೆ ಮಾದಿಗರಿಗೆ ೭,೫ರಷ್ಟು ಮೀಸಲಾತಿ ನೀಡಬೇಕು.ರಾಜ್ಯ ಸರಕಾರ ನಮ್ಮ ಹೋರಾಟಕ್ಕೆ ಮಾನ್ಯತೆ ನೀಡಲಿಲ್ಲ ಎಂದರೆ ರಾಜ್ಯಧ್ಯಂತ ಸಂಚರಿಸಿ ಸಮುದಾಯವನ್ನು ಒಗ್ಗೂಡಿಸುವ ಮೂಲಕ ರಾಜಕೀಯವಾಗಿ ಬಹುದೊಡ್ಡ ಪಾಠವನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಲಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ,ಕಾರ್ಯಾಧ್ಯಕ್ಷ ಮುನೀಂದ್ರ ಮತ್ತೊಬ್ಬ ಗೌರವಾಧ್ಯಕ್ಷ ಬಿ.ಎಂ.ಗ೦ಗಾಧರ್, ತಾಲೂಕು ಅಧ್ಯಕ್ಷ ಆವುಲಪ್ಪ, ಪ್ರಧಾನ ಕಾರ್ಯದರ್ಶಿ ರವಿ, ತಾಲೂಕು ಕಾರ್ಯಾಧ್ಯಕ್ಷ ಮೂರ್ತಿ, ನರಸಿಂಹಣ್ಣ, ಕೃಷ್ಣಪ್ಪ, ಅಶ್ವತ್ಥಪ್ಪ,ಮುನಿರಾಜು, ರವಿ, ನರಸಿಂಹಮೂರ್ತಿ, ಕೀಮ್ಯಾನ್ ಮಂಜು,ಮ೦ಜುನಾಥ್ ಮತ್ತಿತರರು ಇದ್ದರು.