ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಶಂಸೆ
ಚಿಕ್ಕಬಳ್ಳಾಪುರ: ಸರಕಾರ ಮತ್ತು ನೌಕರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಗಳನ್ನು ದೊರೆಕಿಸಿ ಕೊಡಲು ಕಾರಣರಾಗಿರುವ ಸರ್ಕಾರಿ ನೌಕರರು ಸಮಾಜದ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಶ್ರಮವನ್ನು ಗುರ್ತಿಸಿರುವ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ನಿವೃತ್ತರೂ ಸೇರಿದಂತೆ ಒಟ್ಟು ೧೩.೫ ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ೭ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಸರ್ಕಾರದ ಎಲ್ಲ ಸವಲತ್ತುಗಳನ್ನು ಜನರಿಗೆ ಒದಗಿಸುತ್ತಿರುವ ನೌಕರರಿಗೆ ಸರ್ಕಾರ ಸ್ಪಂದಿಸಬೇಕು, ಹಾಗಾಗಿಯೇ ರಾಜ್ಯ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿದೆ. ಶಿಕ್ಷಕರು ಸಮಾಜದ ಶಿಲ್ಪಿಗಳು, ಯಾವುದೇ ಹುದ್ದೆಗೆ ಹೋಗಲು ಶಿಕ್ಷಕರು ಕಲಿಸಿದ ಶಿಸ್ತು ಮತ್ತು ಜ್ಞಾನವೇ ನಮಗೆ ಸಹಕಾರಿಯಾಗಲಿದೆ. ಇಂತಹ ಗುರುಗಳಿಗೆ ಗೌರವ ಸಮರ್ಪಣೆ ಮಾಡುವ ಉದ್ಧೇಶದಿಂದ ಜಿಲ್ಲಾ ಕೇಂದ್ರದಲ್ಲಿ ಗುರುಭವನ ನಿರ್ಮಿಸುತ್ತಿದ್ದು, ಇದೇ ವರ್ಷದಲ್ಲಿ ಪೂರ್ಣಗೊಳಿಸಲು ಗುತ್ತಿಗೆ ದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ದೇಶದ ಭವಿಷ್ಯದ ರೂವಾರಿಗಳಾದ ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ವೃತ್ತಿ ಶಿಕ್ಷಕ ವೃತ್ತಿ. ಬೀದಿ ದೀಪದ ಕೆಳಗೆ ಓದಿ ವಿಶ್ವ ವಿಖ್ಯಾತರಾದ ಇಂಜಿನಿಯರ್ ಸರ್.ಎಂ. ವಿಶ್ವೇಶ್ವ ರಯ್ಯನವರು ಜನಿಸಿದ್ದು ನಮ್ಮ ಜಿಲ್ಲೆಯಲ್ಲಿ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ವಾಗಿದೆ. ಅವರೂ ಸರ್ಕಾರದಲ್ಲಿ ಇಂಜಿನಿಯರ್ ಆಗಿದ್ದವರು. ಕೃಷ್ಣರಾಜಸಾಗರ ಜಲಾಶಯ ನಿರ್ಮಿಸಿದವರು ಎಂದರು.
ನೂತನ ಶಿಕ್ಷಣ ನೀತಿ ವರದಾನ: ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಶಿಕ್ಷಣ ನೀತಿ ಮಕ್ಕಳ ಪಾಲಿಗೆ ವರದಾನ ವಾಗಲಿದೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲ ವಾಗಲು ಕಾರಣವಾಗಲಿದೆ. ಸ್ವಾತಂತ್ರ ನಂತರ ೭೫ ವರ್ಷವಾದರೂ ಹಳೆಯ ಶಿಕ್ಷಣ ಪದ್ಧತಿಯನ್ನೇ ಮುಂದುವರಿಸಲಾಗಿತ್ತು. ಇದರಿಂದ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿ ಕೊಳ್ಳುವ ಸ್ವಾತಂತ್ರ ಹಳೆ ಶಿಕ್ಷಣ ನೀತಿಯಲ್ಲಿ ಇರಲಿಲ್ಲ ಎಂದು ಸಚಿವರು ಹೇಳಿದರು.
ಈಗ ನೂತನ ಶಿಕ್ಷಣ ನೀತಿಯಿಂದ ಇವೆಲ್ಲವೂ ಸಾಧ್ಯವಿದ್ದು, ಮಕ್ಕಳ ಪಾಲಿಗೆ ವರದಾನವಾಗಲಿದೆ. ಇದಕ್ಕೆ ಒಗ್ಗಿಕೊಂಡು ಪ್ರಧಾನಿಗಳ ಕನಸು ನನಸು ಮಾಡಬೇಕು, ಸಹಾಯದ ಮನಸ್ಥಿತಿ ಬೆಳೆಸಿಕೊಂಡರೆ ಎಲ್ಲವೂ ಸಾಧ್ಯ ಎಂಬುದನ್ನು ಸರ್ಕಾರಿ ನೌಕರರು ಅರಿಯಬೇಕು. ಕೆಲವು ಅಧಿಕಾರಿಗಳು ನಕಾರಾತ್ಮಕ ಮನೋಭಾವ ಹೊಂದಿರುವುದು ತಪ್ಪು. ಸಕಾರಾತ್ಮಕ ಮನಸ್ಥಿತಿ ಯಿಂದ ಎಲ್ಲವೂ ಸಾಧ್ಯ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಮಾತನಾಡಿ, ಸರ್ಕಾರಿ ನೌಕರರ ಮಕ್ಕಳಿಗೆ ಉತ್ತೇಜನ ನೀಡುವು ದಕ್ಕಾಗಿ ಇಡೀ ರಾಜ್ಯಾದಾದ್ಯಂತ ಈ ವರ್ಷ ಕೂಡ ೧೦ ಸಾವಿರ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಮುಂದಿನ ಜನವರಿ ತಿಂಗಳಿನಿAದ ಎಲ್ಲಾ ಸರ್ಕಾರಿ ನೌಕರರಿಗೆ ಎಲ್ಲಾ ಕಾಯಿಲೆಗಳಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಒಂದು ಕುಟುಂಬದ ಒಂದು ಸದಸ್ಯರಿಗೆ ಎಷ್ಟೇ ಚಿಕಿತ್ಸೆ ವೆಚ್ಚವಾಗಲೀ ಸರ್ಕಾರದಿಂದ ಸಂಪೂರ್ಣವಾಗಿ ಉಚಿತವಾಗಿ ನೀಡುವ ಆರೋಗ್ಯ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯು ಇಡೀ ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. ೭ನೇ ವೇತನ ಅಯೋಗವನ್ನು ಸಹ ಮಾರ್ಚ್ ತಿಂಗಳಲ್ಲಿ ಜಾರಿಗೆ ತರಲು ಸರ್ಕಾರ ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ.
೭ನೇ ಆಯೋಗದ ವೇತನವನ್ನು ತೆಗೆದುಕೊಂಡ ನಂತರ ಸಂಘದ ತೀರ್ಮಾನದಂತೆ ಎನ್.ಪಿ.ಎಸ್ ರದ್ದು ಮಾಡಿ ಓ.ಪಿ.ಎಸ್ ಜಾರಿಗೆ ತರುವ ಕುರಿತು ಸರ್ಕಾರದ ಜೊತೆ ಸಂದಾನ, ಮಾತುಕತೆಗಳು ನಡೆಸುತ್ತೇವೆ. ಒಂದು ವೇಳೆ ಸರ್ಕಾರ ಜಾರಿ ಮಾಡಲಿಲ್ಲ ಎಂದರೆ ಹೋರಾಟಗಳನ್ನು ಮಾಡಿ ಎಸ್.ಪಿ.ಎಸ್ ನ್ನು ತೊಲಗಿಸುವ ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡಲಾಗು ವುದು ಹಾಗೂ ಸರ್ಕಾರಿ ನೌಕರರಿಗೆ ಅಪಘಾತಗಳಾಗಿ ಸಾವಾದರೆ ೧ ಕೋಟಿಯವರೆಗೆ ಅಪಘಾತ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಲಾಗಿದೆ ಎಂದರು.
ಇದೇ ವೇಳೆ ೨೦೨೧-೨೨ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುಸ್ಕಾರ ಪ್ರದಾನ ಮಾಡಿ ಸನ್ಮಾನಿಸಿದರು. ನಂತರ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲೆಯ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ.ಕೋಡಿರಂಗಪ್ಪ ಮತ್ತು ಗುಡಿಬಂಡೆ ತಾಲ್ಲೂಕಿನ ಮುಖವೀಣೆ ಕಲಾವಿದ ಮುಖವೀಣೆ ಆಂಜಿನಪ್ಪ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಕೆ.ವಿ.ನಾಗರಾಜು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ವಿ.ನವೀನ್ ಕಿರಣ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾದ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಹರೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ನಾಮನಿರ್ದೇಶಿತ ಸದಸ್ಯರು, ಎಲ್ಲಾ ವೃಂದ ಸಂಘಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಜರಿದ್ದರು.