Saturday, 26th October 2024

ಕರುಣೆ ಪ್ರೀತಿ ಸಹೋದರತೆ ನಮ್ಮ ಉಸಿರಾದರೆ ಸಮಾಜದಲ್ಲಿ ಶಾಂತಿ ಸಾಧ್ಯ

ಜಿಲ್ಲಾ ಸಭಾಪಾಲಕರ ಸಂಘದಿ0ದ ಆಯೋಜಿಸಿದ್ದ ಕ್ರಿಸ್ ಮಸ್ ಸಂಭ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ

ಚಿಕ್ಕಬಳ್ಳಾಪುರ : ಎಲ್ಲ ಧರ್ಮಗಳೂ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯನ್ನು ಸಾರಿದ್ದು, ಪ್ರೀತಿ ಮತ್ತು ಶಾಂತಿಯನ್ನು ನಮ್ಮ ಜೀವನದ ಉಸಿರಾಗಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗೋಣ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾ ಸಭಾಪಾಲಕರ ಸಂಘ ದಿ0ದ ಆಚರಿಸಿದ ಕ್ರಿಸ್ ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸೆಂಬರ್ ೨೫ರಂದು ಆಚರಿಸಬೇಕಾದ ಕ್ರಿಸ್ ಮಸ್ ಮೊದಲೇ ಆಚರಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು, ಎಲ್ಲರೂ ಪ್ರೀತಿಯಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ಪ್ರೀತಿಯ ಸಂದೇಶ ನೀಡಿದ ಜೀಸಸ್: ಜೀಸಸ್ ಜನನಕ್ಕೂ ಮೊದಲು ಜಗತ್ತು ಹಿಂಸೆಯಿ0ದ ತುಂಬಿತ್ತು, ಭಗವಂತನ ಪ್ರಾರ್ಥ ನೆಯ ಫಲವಾಗಿ ಲೋಕ ಕಲ್ಯಾಣಕ್ಕಾಗಿ ಜನಿಸಿದವರು ಜೀಸಸ್. ಕ್ರೈಸ್ತರಿಗೆ ಪ್ರಮುಖವಾಗಿ ಮೂರು ದಿನಗಳು ಪ್ರಾಮುಖ್ಯತೆ ಪಡೆದಿವೆ. ಅವುಗಳೆಂದರೆ ಕ್ರಿಸ್ತ ಜನಿಸಿದ ದಿನವಾದ ಕ್ರಿಸ್ ಮಸ್, ಅಂತಹ ಶಾಂತಿಯ ಮೂರ್ತಿಯನ್ನೂ ಶಿಲುಬೆಗೇರಿಸಿ ಹಿಂಸೆಯ ಪ್ರವೃತ್ತಿ ಪ್ರದರ್ಶಿಸಿದ ದಿನವಾದ ಗುಡ್ ಫ್ರೈಡೆ. ಮತ್ತು ಶಿಲುಬೆಗೇರಿ ಪ್ರಾಣ ತ್ಯಾಗ ಮಾಡಿದ ನಂತರವೂ ಜೀಸಸ್ ಅವರ ಅನುಯಾಯಿಗಳಿಗೆ ದರ್ಶನ ನೀಡಿದ ದಿನವಾದ ಪುನುರುತ್ಥಾನ ದಿನ. ಈ ಮೂರೂ ದಿನಗಳೂ ಕ್ರೈಸ್ತ ಧರ್ಮಕ್ಕೆ ಪವಿತ್ರವಾಗಿವೆ ಎಂದರು.

ಪ್ರತಿ ಗುರುವಾರ ತಾವು ಚರ್ಚಿಗೆ ಹೋಗುತ್ತಿದ್ದೆ, ನಮ್ಮ ಹೃದಯಲ್ಲಿ ದೇವರು ಒಂದೇ, ಆದರೆ ನಾಮ ಹಲವು. ಶಂಕರಾಚಾರ್ಯರು ಅದ್ವೆತ ಸಿದ್ಧಾಂತದ ಪ್ರಕಾರ ಹೇಳಿದಂತೆ ಅಹಂ ಭ್ರಹ್ಮಾಸ್ಮಿ. ಅಂದರೆ ಪ್ರತಿಯೊಬ್ಬರ ಆತ್ಮದಲ್ಲಿಯೂ ಭಗವಂತ ಇರುವುದಾಗಿ ಹೇಳಿದ್ದಾರೆ ಎಂದು ಹೇಳಿದರು

ಮಾನವೀಯತೆ ಬೆಳೆಸಿಕೊಳ್ಳಿ: ಎಷ್ಟು ದಿನ ಇರುತ್ತೇವೆ ಎಂಬ ಯಾವುದೇ ನಂಬಿಕೆ ಯಾರಿಗೂ ಇಲ್ಲ, ಮತ್ತೊಬ್ಬರನ್ನು ಗೌರವ ದಿಂದ ಕಾಣುವುದೇ ಮಾನವೀಯತೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಮಾನವೀಯತೆ, ಸಹಾಯ ಮಾಡುವುದು, ಪ್ರೀತಿಸುವುದು ಮಾನವೀಯತೆ. ಇಡೀ ವಿಶ್ವದಲ್ಲಿ ಬೃಹತ್ ಧರ್ಮ ಕ್ರೈಸ್ತ ಧರ್ಮ, ಕ್ರೈಸ್ತ ಧ್ರಮ ಪ್ರೀತಿ, ಶಾಂತಿಯನ್ನು ಸಾರಿದೆ ಎಂದು ವಿವರಿಸಿದರು.

ಸಮಾಜದಲ್ಲಿ ಎಲ್ಲ ಧರ್ಮಗಳನ್ನೂ ಗೌರವಿಸುವುದು ಭಾರತದ ಪರಂಪರೆ, ಪವಿತ್ರ ಭಾರತದಲ್ಲಿ ಮಾತ್ರ ಮೂಲ ಧರ್ಮ ಹಿಂದು, ಜೈನ, ಕ್ರೈಸ್ತ, ಇಸ್ಲಾಂ, ಬೌದ್ಧ, ಸಿಖ್, ಪಾರ್ಸಿ ಧರ್ಮಗಳು ಈ ನೆಲದಲ್ಲಿ ಹುಟ್ಟಿವೆ. ಈ ಎಲ್ಲ ಧರ್ಮಗಳೂ ಅನ್ಯೋನ್ಯವಾಗಿರಲು ಈ ಮಣ್ಣಿನ ಗುಣವೇ ಕಾರಣ. ಪ್ರೀತಿ, ಶಾಂತಿಯೇ ನಮ್ಮ ಆಯುಧಗಳಾಗಲಿ. ಪ್ರೀತಿಯ ಮೂಲಕ ಶತೃವಿನ ಮನವನ್ನು ಗೆಲ್ಲುವ ಗುಣ ಬೆಳೆಸಿಕೊಳ್ಳುವಂತೆ ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್, ರವೆರೆಂಡ್ ಬಯಳ್ಳಹಳ್ಳಿ ರಾಜಪ್ಪ, ಬಾಲಕುಂಟಹಳ್ಳಿ ಗಂಗಾಧರ್, ಸುಧಾ ವೆಂಕಟೇಶ್, ನರಸಿಂಹಮೂರ್ತಿ, ಸುಶಾಂತ್, ಅನಿಲ್, ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.