Thursday, 12th December 2024

ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಯನ್ನು ಸರಕಾರ ಈಡೇರಿಸಿದೆ: ಸಚಿವ ಅಶೋಕ್

ತುಮಕೂರು: ಸರಕಾರ ಹಂತ ಹಂತವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆಯೆಂದು
ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದ ಗಾಜಿನಮನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ ಹಾಗೂ ತುಮಕೂರು ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡ ರಾಜೋತ್ಸವ,2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ,ವಿಚಾರಸಂಕಿರಣ ಹಾಗೂ ರಾಜ್ಯ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಇದುವರೆಗೂ ಇದ್ದ ಗ್ರಾಮಲೆಕ್ಕಾಧಿಕಾರಿಯ ಬದಲಾಗಿದೆ ಗ್ರಾಮ ಆಡಳಿತ ಅಧಿಕಾರಿ ಎಂಬ ಪದನಾಮ ನೀಡಲಾಗಿದೆ.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನಸ್ನೇಹಿಯಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು.
ನೀವು ನೀಡುವ ಸೇವೆಯಿಂದ ಜನರ ಬಾಯಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡಿದೆ ಎಂಬ ಹೆಸರು ಬರುವಂತಾಗಬೇಕು.ಆಗ ನಿಮ್ಮ ಪದನಾಮ ಬದಲಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ನಮ್ಮ ಸರಕಾರ ಅನೇಕ ಜನರ ಪರ ಯೋಜನಗಳನ್ನು ರೂಪಿಸುತ್ತಾ ಬಂದಿದೆ. ಜಿಲ್ಲಾಧಿ ಕಾರಿಗಳ ನಡೆ ಹಳ್ಳಿಯ ಕಡೆ,72 ಗಂಟೆಗಳಲ್ಲಿ ಪಿಂಚಿಣಿ ಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳು ಸಮರ್ಪಕವಾಗಿ ಜನರ ಬಾಗಿಲಿಗೆ ಮುಟ್ಟಿದರೆ ಅದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ.ಕೇವಲ ಯೋಜನೆಗಳಿಂದ ಉಪಯೋಗವಾಗುವುದಿಲ್ಲ.
ಈಗಾಗಲೇ ವೃಂದ ನೇಮಕಾತಿಗೆ ತಿದ್ದುಪಡಿ ತರಲಾಗಿದೆ.ಇಂದು ಗ್ರಾಮಲೆಕ್ಕಾಧಿಕಾರಿಯ ಬದಲಾಗಿ ಗ್ರಾಮ ಆಡಳಿತ ಅಧಿಕಾರಿ ಪದನಾಮ ಬದಲಾವಣೆಗೆ ಅಂಕಿತ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ನೀವು ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು  ಭರವಸೆ ನೀಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರಕಾರಿ ನೌಕರರ ಮನವಿ ಸಲ್ಲಿಸಿದ ಒಂದು ತಿಂಗಳ ಒಳಗೆ 7ನೇ ವೇತನ ಪರಿಷ್ಕರಣೆ ಆಯೋಗ ನೇಮಕ ಮಾಡಿದ ಯಾವುದಾದರೂ ಸರಕಾರವಿದ್ದರೆ ಅದು ಬಸವರಾಜ ಬೊಮ್ಮಾಯಿಯವರ ಸರಕಾರ. ಸರಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ. ಇದಕ್ಕೆ ನಿಮ್ಮಲ್ಲರೂ ನೀಡಿದ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆಗಳಿಗೆ ಸರಕಾರದಿಂದ ಅನುಮೋದನೆ ದೊರೆ ಯಲಿದೆ ಎಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಸರಕಾರಿ ನೌಕರರು ಇಂದು ನೆಮ್ಮದಿಯಿಂದ ಇರಲು ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿ ಅವರ ದಿಟ್ಟ ಮತ್ತು ಪ್ರಾಮಾಣಿಕ ಹೋರಾಟವೇ ಕಾರಣ.ಡಿ.ಎ.,ಹೆರಿಗೆ ರಜೆ, ಗಳಿಕೆ ರಜೆ ನಗಧೀಕರಣ ಸೇರಿದಂತೆ ನೌಕರರ ಎಲ್ಲಾ ಬೇಡಿಕೆಗಳನ್ನು ಸರಕಾರದ ಮುಂದೆ ಸಮರ್ಥವಾಗಿ ಮಂಡಿಸಿ, ಅದಕ್ಕೆ ಅನುಮೋಧನೆ ಪಡೆಯುವ ಮೂಲಕ ಯಶಸ್ವಿ ಸಂಘಟಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ದೇವರಾಜು ಮಾತನಾಡಿ,ರಾಜ್ಯದ 30 ಜಿಲ್ಲೆಗಳ 226 ತಾಲೂಕುಗಳಲ್ಲಿಯೂ ನಮ್ಮ ಸಂಘಟನೆ ಇದೆ.ಸುಮಾರು 10 ಸಾವಿರ ಸದಸ್ಯರಿದ್ದು,ಸರಕಾರಕ್ಕೆ ನೀಡಿದ್ದ 9 ಪ್ರಮುಖ ಬೇಡಿಕೆಗಳಲ್ಲಿ 7 ನ್ನು ಅನುಮೋದಿಸಿ, ಸರಕಾರಕ್ಕೆ ಕಂದಾಯ ಸಚಿವರು ಕಳುಹಿಸಿದ್ದಾರೆ.ಪ್ರತಿ ವೃತ್ತದಲ್ಲಿಯೂ ಒಂದು ಗ್ರಾಮ ಆಡಳಿತ ಸೌಧವನ್ನು ನಿರ್ಮಾಣ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ಸರಕಾರ ಶೀಘ್ರವಾಗಿ ಈಡೇರಿಸಬೇಕೆಂದು ಮನವಿ ಮಾಡಿದರಲ್ಲದೆ,ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಸಚಿವರಿಗೆ ಕಂದಾಯ ಕದಂಬ ಎಂಬ ಬಿರುದು ನೀಡಿ ಗೌರವಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪರೆಡ್ಡಿ ವಹಿಸಿದ್ದರು.ಶಾಸಕರಾದ ಜಿ.ಬಿ.ಜೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ,ಸಂಘದ ಗೌರವಾಧ್ಯಕ್ಷ ಎನ್.ರವಿಮಾರ್, ಉಪಾಧ್ಯಕ್ಷ ಯಮನೂರ, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಹೆಚ್.ಜೆ.ಮೋಹನ್‌ಕುಮಾರ್,ಸಂಘಟನಾ ಕಾರ್ಯದರ್ಶಿ ಮಂಜು ನಾಥ್ ಎಲ್, ಸಹ ಕಾರ್ಯದರ್ಶಿ ವಿ.ರಾಘವೇಂದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಭಾನುಪ್ರಕಾಶ್ ಸೇರಿದಂತೆ ಎಲ್ಲಾ ಜಿಲ್ಲೆ ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಸಚಿವ ಆರ್.ಅಶೋಕ್ ಗೋಪೂಜೆ ನೆರವೇರಿಸಿ, ಗೋವಿಗೆ ಬೆಲ್ಲ, ಬಾಳೆಹಣ್ಣು ತಿನ್ನಿಸಿ, ಶುಭ ಹಾರೈಸಿದರು.