ತಿಳಿರು ತೋರಣ
srivathsajoshi@yahoo.com
ಅಗೆದಷ್ಟೂ ಅಗಾಧವೆನಿಸುವ, ಅನಂತವಾಗುವ ಗಣಿಯೆಂದರೆ ಸುಭಾಷಿತಗಳ ಗಣಿ. ಕನ್ನಡದಲ್ಲಿ ಗಾದೆಗಳಿದ್ದಂತೆ ಸಂಸ್ಕೃತದಲ್ಲಿ ಸುಭಾಷಿತಗಳು. ಒಂದು ವಿಷಯವನ್ನು ಕುರಿತು ಬಹಳ ಪರಿಣಾಮಕಾರಿ ರೀತಿಯಲ್ಲಿ ಹೇಳುವ ಮಾತು ಸುಭಾಷಿತವೆನಿಸುತ್ತದೆ. ಕೆಲವು ವಾಗ್ಮಿಗಳು, ಪಂಡಿತರು ಮಾತುಮಾತಿಗೂ ತಕ್ಕುದಾದೊಂದು ಸುಭಾಷಿತ ಉದ್ಧರಿಸಬಲ್ಲರು. ಸುಭಾಷಿತಗಳಲ್ಲಿ ಪ್ರಸ್ತುತ ವಾಗಿರುವ ವಿಷಯ ಸಾರ್ವಕಾಲಿಕವಾದುದು. ಎಲ್ಲ ದೇಶದ ಎಲ್ಲ ಜನರಿಗೂ ಅನ್ವಯವಾಗುವುದು. ಮಾನವಜೀವನದ ವ್ಯವಹಾರಗಳಿಗೂ ನಿತ್ಯಸತ್ಯಗಳಿಗೂ ಸಂಬಂಧಿಸಿರುವುದು.
ಬಹುಶಃ ಇದೇ ಇವುಗಳ ಜನಪ್ರಿಯತೆಗೆ ಕಾರಣ. ಹಿನ್ನೆಲೆಯಲ್ಲಿ ಅಪಾರವಾದ ಅನುಭವ, ಅರಿವು ಮತ್ತು ಚಿಕಿತ್ಸಕ ದೃಷ್ಟಿ ಇರುವುದರಿಂದ, ಜೀವನದ ಸಿಹಿ-ಕಹಿಗಳನ್ನೂ ಗುಣಾ ವಗುಣಗಳನ್ನೂ, ಧ್ಯೇಯ- ಆದರ್ಶಗಳನ್ನೂ ಮಾರ್ಮಿಕ ರೀತಿಯಲ್ಲಿ ತಿಳಿಸಿಕೊಡುವು ದರಿಂದ, ಇವು ಮುಂದಿನ ಜನಾಂಗಕ್ಕೆ ದಾರಿತೋರುವ ದಾರಿದೀಪಗಳೂ ಆಗಿವೆ. ಜೀವನ ದಷ್ಟೇ ವಿಸ್ತಾರವೂ, ವಿವಿಧವೂ ಆಗಿರುವ ಸುಭಾಷಿತಗಳಲ್ಲಿ ನಮಗೆ ನೀತಿ, ಧರ್ಮ, ವಿವೇಕ, ಅಣಕ, ಶೃಂಗಾರ, ವೈರಾಗ್ಯ, ಹಾಸ್ಯ… ಎಲ್ಲವೂ ಸಿಗುತ್ತದೆ.
ನನಗೂ ಸುಭಾಷಿತಗಳ ‘ಹುಚ್ಚು’ ತಕ್ಕಮಟ್ಟಿಗೆ ಇದೆ. ಮಾತುಮಾತಿಗೆ ಉದ್ಧರಿಸುವಷ್ಟು ಅಲ್ಲವಾದರೂ ಆಸಕ್ತಿಯಿಂದ ಸಂಗ್ರಹಿಸಿಟ್ಟುಕೊಳ್ಳುವಷ್ಟು ಹೌದು. ದಿಲ್ಲಿಯ ಚೌಖಂಬಾ ಸಂಸ್ಕೃತ ಪ್ರತಿಷ್ಠಾನದ ಸುಭಾಷಿತ ರತ್ನಭಾಂಡಾಗಾರಮ್ ಎಂಬ ಬೃಹದ್‌ಗ್ರಂಥ ನನ್ನ ಸಂಗ್ರಹದಲ್ಲಿದೆ. ಆದರೆ ಅದರಲ್ಲಿ ಸುಭಾಷಿತಗಳನ್ನು ದೇವನಾಗರಿ ಲಿಪಿಯಲ್ಲಿ ಅತ್ಯಂತ ಸಾಂದ್ರವಾಗಿ ಒಂದಕ್ಕೊಂದು ಒತ್ತಿಕೊಂಡು ಎಂಬಂತೆ ಮುದ್ರಿಸಿದ್ದಾರೆ.
ಅರ್ಥ, ತಾತ್ಪರ್ಯ, ವ್ಯಾಖ್ಯಾನಗಳೆಲ್ಲ ಏನೂ ಇಲ್ಲ. ಹಾಗಾಗಿ ನಾನದನ್ನು ಯಾವುದಾದರೂ ಸುಭಾಷಿತದ ಸರಿಯಾದ ಅಕ್ಷರ ರೂಪವನ್ನು ಕಂಡುಕೊಳ್ಳಲಿಕ್ಕೆ ಮಾತ್ರ ಬಳಸುತ್ತೇನೆ. ಅದಕ್ಕಿಂತ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಸುಭಾಷಿತ ಮಂಜರೀ’ ನನಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಅದರಲ್ಲಿ ಸುಭಾಷಿತಗಳನ್ನು ಕನ್ನಡ ಲಿಪಿಯಲ್ಲಿ, ಸ್ಥೂಲ ಅರ್ಥಸಹಿತ ಅಚ್ಚು ಮಾಡಿದ್ದಿದೆ. ಯಾವಾಗಾದರೂ ಮನಸ್ಸು-ಬುದ್ಧಿಗಳಿಗೊಂದಿಷ್ಟು ಟಾನಿಕ್ ಬೇಕೆಂದೆನಿಸಿದಾಗ ಐದಾರು ಪುಟ ತೆರೆದು ಓದಿದರೂ ಸಾಕು ಒಂದಿಷ್ಟು ಒಳ್ಳೆಯ ಸರಕು ಮಿದುಳಿಗೆ ಮೇವಾಗಿ ಸಿಗುತ್ತದೆ.
ಮಹಾಬಲ ಸೀತಾಳಬಾವಿ ಅವರು ಅರ್ಥ-ತಾತ್ಪರ್ಯ ಸೇರಿಸಿ ಸಂಕಲಿಸಿದ ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು ಪುಸ್ತಕವೂ ನನ್ನ ಕಪಾಟಿನಲ್ಲಿದೆ. ಮನಸ್ಸಿಗೆ ಕಚಗುಳಿಯಿಡುವಂಥ ಕೆಲವು ಸ್ವಾರಸ್ಯಕರ ಸುಭಾಷಿತಗಳು ಅದರಲ್ಲಿವೆ. ಅಂತೆಯೇ ಶತಾವ ಧಾನಿ ಡಾ. ಆರ್. ಗಣೇಶ್ ಬರೆದ ನಿತ್ಯನೀತಿ- ಸುಭಾಷಿತಗಳ ಸಂಗ್ರಹ ಎಂಬ ಪುಸ್ತಕ. ಇವೆಲ್ಲ ‘ದೂಳು ತಿನ್ನದೇ’ ಇರುವ ಪುಸ್ತಕಗಳ ಪೈಕಿಯವು. ಅರ್ಥಾತ್ ಆಗೊಮ್ಮೆ ಈಗೊಮ್ಮೆ ತಿರುವಿ ಹಾಕಿ ಪ್ರಯೋಜನ ಪಡೆಯುವಂಥವು. ಇದನ್ನೇ ನಾನು ಸುಭಾಷಿತಗಳ ‘ಹುಚ್ಚು’ ಎಂದಿದ್ದು.
ಮೊನ್ನೆ ವೀಣಾ ಜೋಶಿಯವರು ವಾಟ್ಸ್ಯಾಪ್‌ನಲ್ಲಿ ಒಂದು ಸುಭಾಷಿತ ಮತ್ತದರ ತಾತ್ಪರ್ಯ ಅಚ್ಚಾಗಿರುವ ಪುಟದ ಡಿಜಿಟಲ್ ಫೋಟೊ ತೆಗೆದು ನನಗೆ ಕಳುಹಿಸಿದ್ದರು. ‘ತೆಲುಗು ಲಿಪಿಯಲ್ಲಿದೆ. ನಿಮಗೆ ತೆಲುಗು ಓದಲಿಕ್ಕೆ/ಅರ್ಥಮಾಡಿಕೊಳ್ಳಲಿಕ್ಕೆ ಬರುತ್ತದೆ ಯೆಂದು ಗೊತ್ತಿರುವುದರಿಂದ, ಮತ್ತು ಈ ಸುಭಾಷಿತ ನಿಮಗೆ ಇಷ್ಟವಾಗಬಹುದಾದ್ದರಿಂದ ಕಳಿಸಿದ್ದೇನೆ’ ಎಂದು ಬರೆದಿದ್ದರು. ಕನ್ನಡ-ತೆಲುಗು ದ್ವಿಭಾಷಾ ಸಾಹಿತ್ಯಾಸಕ್ತೆ ಮತ್ತು ಎರಡೂ ಭಾಷೆಗಳಲ್ಲಿ ಚಿಕ್ಕಪುಟ್ಟ ಸಾಹಿತ್ಯಕೃಷಿ, ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಅನುವಾದ ಮಾಡಿ ಇಲ್ಲಿನ-ಅಲ್ಲಿನ ಪತ್ರಿಕೆಗಳಿಗೆ ಕಳುಹಿಸುವುದು ಅವರದೊಂದು ಹವ್ಯಾಸ.
ಅವರಿಂದಾಗಿ ನನಗೂ ಆಗಾಗ ತೆಲುಗಿನ ಕೆಲ ಸಾಹಿತ್ಯ ರಸಘಟ್ಟಿಗಳ ರುಚಿ ಸಿಗುತ್ತಿರುತ್ತದೆ. ಸ್ವಲ್ಪ ಕಷ್ಟಪಟ್ಟು ತೆಲುಗು ಲಿಪಿಯನ್ನೋದಿ ಅರ್ಥಮಾಡಿಕೊಂಡಾಗ ಆ ಸುಭಾಷಿತ ಭಲೇ ಸ್ವಾರಸ್ಯಕರವಾಗಿರುವುದು ಹೌದೆಂದು ತಿಳಿಯಿತು. ಅದನ್ನು
ಕನ್ನಡ ಲಿಪಿಯಲ್ಲಿ ಬರೆದು ಈಗಿಲ್ಲಿ ನಿಮಗೂ ವಿವರಿಸುತ್ತೇನೆ.
ಕೋ ನಿರ್ದಗ್ಧಸ್ತ್ರಿಪುರರಿಪುಣಾ ಕಶ್ಚ ಕರ್ಣಸ್ಯ ಹಂತಾ
ನದ್ಯಾಃ ಕೂಲಂ ವಿಘಟಯತಿ ಕಃ ಕಃ ಪರಸ್ತ್ರೀರತಶ್ಚ
ಕಃ ಸನ್ನದ್ಧೋ ಭವತಿ ಸಮರೇ ಭೂಷಣಂ ಕಿಂ ಕುಚಾನಾಂ
ಕಿಂ ದುಃಸಂಗಾದ್ಭವತಿ ಮಹತಾಂ ಮಾನಪೂಜಾಪಹಾರಃ
ಇದರಲ್ಲಿ ಸ್ವಾರಸ್ಯವೇನೆಂದರೆ ಮೊದಲ ಮೂರು ಸಾಲುಗಳಲ್ಲಿ ತಲಾ ಎರಡೆರಡು ಪ್ರಶ್ನೆಗಳು, ನಾಲ್ಕನೆಯ ಸಾಲಿನಲ್ಲೂ ಒಂದು ಪ್ರಶ್ನೆ. ಹೀಗೆ ಒಟ್ಟು ಏಳು ಬೇರೆಬೇರೆ ಪ್ರಶ್ನೆಗಳು. ನಾಲ್ಕನೆಯ ಸಾಲಿನ ಕೊನೆಯದೊಂದು ಪದದಲ್ಲಿ ಈ ಏಳೂ ಪ್ರಶ್ನೆಗಳಿಗೆ ಉತ್ತರ. ಅಲ್ಲೂ ಒಂದು ಮಜಾ ಇದೆ. ಆ ಪದದ ಮೊದಲನೆಯ ಅಕ್ಷರ ಮತ್ತು ಕೊನೆಯ ಅಕ್ಷರ ಸೇರಿಸಿದಾಗ ಆಗುವ ಪದ ಒಂದನೆಯ ಪ್ರಶ್ನೆಗೆ ಉತ್ತರ.
ಆ ಪದದ ಎರಡನೆಯ ಅಕ್ಷರ ಮತ್ತು ಕೊನೆಯ ಅಕ್ಷರ ಸೇರಿಸಿದಾಗ ಆಗುವ ಪದ ಎರಡನೆಯ ಪ್ರಶ್ನೆಗೆ ಉತ್ತರ. ಹೀಗೆ ಆರು ಪ್ರಶ್ನೆಗಳಿಗೆ ಉತ್ತರ ಸಿಗುತ್ತ ಹೋಗುತ್ತದೆ. ಏಳನೆಯ ಪ್ರಶ್ನೆಗೆ ಆ ಇಡೀ ಪದವೇ ಉತ್ತರ! ಹೇಗೆಂದು ಈಗ ತಿಳಿದುಕೊಳ್ಳೋಣ. ‘ಕೋ ನಿರ್ದಗ್ಧಸ್ತ್ರಿಪುರರಿ ಪುಣಾ?’ ಅಂದರೆ ತ್ರಿಪುರಾಸುರನ ವೈರಿಯಿಂದ ದಹನವಾದವನು ಯಾರು? ಎಂಬ ಪ್ರಶ್ನೆ.
ತ್ರಿಪುರಾಸುರನ ವೈರಿ ಅಂದರೆ ಈಶ್ವರ. ಈಶ್ವರನಿಂದ ಸುಡಲ್ಪಟ್ಟವನು ಮನ್ಮಥ. ಅವನನ್ನು ‘ಮಾರ’ ಎಂದು ಕೂಡ ಹೇಳುವುದುಂಟು. ‘ಮಾನಪೂಜಾ ಪಹಾರ’ ಪದದಲ್ಲಿ ಮೊದಲ ಅಕ್ಷರ ಮತ್ತು ಕೊನೆಯ ಅಕ್ಷರಗಳಿಂದ ಬರುವುದು ‘ಮಾರ’ ಎಂದೇ! ಇನ್ನು ಎರಡನೆಯ ಪ್ರಶ್ನೆ ‘ಕಶ್ಚ ಕರ್ಣಸ್ಯ ಹಂತಾ?’ ಅಂದರೆ ಕರ್ಣನನ್ನು ಕೊಂದವನು ಯಾರು? ಅರ್ಜುನ ಎಂದು ನಮಗೆ ಗೊತ್ತೇ ಇದೆ.
ಅರ್ಜುನ-ಕೃಷ್ಣರನ್ನು ನರ-ನಾರಾಯಣ ಎನ್ನುವುದುಂಟು, ಆ ರೀತಿಯಲ್ಲಿ ಅರ್ಜುನನೆಂದರೆ ನರ. ‘ಮಾನಪೂಜಾಪಹಾರ’
ಪದದಲ್ಲಿ ಎರಡನೆಯ ಅಕ್ಷರ ಮತ್ತು ಕೊನೆಯ ಅಕ್ಷರಗಳಿಂದ ಬರುವುದು ‘ನರ’ಎಂದೇ! ಮೂರನೆಯ ಪ್ರಶ್ನೆ: ‘ನದ್ಯಾಃ ಕೂಲಂ
ವಿಘಟಯತಿ ಕಃ?’ ನದಿಯ ತೀರವನ್ನು ವಿರೂಪಗೊಳಿಸುವುದು ಯಾರು? ಇದಕ್ಕೆ ಉತ್ತರ ಜಲಪ್ರವಾಹ ಅಥವಾ ಪೂರ.
ಮೂರನೆಯ ಮತ್ತು ಕೊನೆಯ ಅಕ್ಷರ ಜೋಡಣೆಯಾದಾಗ ‘ಪೂರ’ ಆಗುತ್ತದೆ. ನಾಲ್ಕನೆಯ ಪ್ರಶ್ನೆ ‘ಕಃ ಪರಸ್ತ್ರೀರತಃ?’ ಅಂದರೆ ಪರಸ್ತ್ರೀಯರನ್ನು ಭೋಗಿಸುವವನು ಯಾರು? ಉತ್ತರ: ಜಾರ. ಅಕ್ಷರಗಳು ಟ್ಯಾಲಿ ಆಗುತ್ತವೆಯೇ ನೋಡಿ.
ಐದನೆಯ ಪ್ರಶ್ನೆ: ‘ಕಃ ಸನ್ನದ್ಧೋ ಭವತಿ ಸಮರೇ?’ ಯಾವಾಗಲೂ ಯುದ್ಧಕ್ಕೆ ತಯಾರಾಗಿ ನಿಂತವನು ಯಾರು? ಮತ್ತ್ಯಾರು,
ಅವನು ಶತ್ರುವೇ ಆಗಿರಬೇಕು. ಸಂಸ್ಕೃತದಲ್ಲಿ ಪರ ಎಂಬ ಪದಕ್ಕೆ ಶತ್ರು ಎಂಬ ಅರ್ಥವಿದೆ. ಅಕ್ಷರಗಳ ಟ್ಯಾಲಿ ಇಲ್ಲಿಯೂ
ಆಗಿರುವುದನ್ನು ಗಮನಿಸಿ. ಆರನೆಯ ಪ್ರಶ್ನೆ ‘ಭೂಷಣಂ ಕಿಂ ಕುಚಾನಾಂ?’ ಅಂದರೆ ಎದೆಗೆ ಭೂಷಣ ಯಾವುದು? ಉತ್ತರ:
ಹಾರ. ಕೊನೆಯದಾಗಿ ಏಳನೆಯ ಪ್ರಶ್ನೆ: ‘ಕಿಂ ದುಃಸಂಗಾದ್ಭವತಿ ಮಹತಾಂ?’ ಮಹಾತ್ಮರಿಗೆ ಕೆಟ್ಟವರೊಡನೆ ಸ್ನೇಹ ಬೆಳೆಸಿದರೆ ಏನು ಸಿಗುತ್ತದೆ? ಉತ್ತರ: ಮಾನಪೂಜಾಪಹಾರ.
ಅಂದರೆ ಗೌರವಕ್ಕೆ ಸನ್ಮಾನಕ್ಕೆ ಭಂಗ. ಇದು ಸಂಸ್ಕೃತದ ಚಮತ್ಕಾರ! ಈ ಶ್ಲೋಕ ನಿಮಗೆಲ್ಲಿ ಸಿಕ್ಕಿತು ಎಂದು ವೀಣಾರನ್ನು ಕೇಳಿದಾಗ ‘ಸಂಸ್ಕೃತಿ ಸೂಕ್ತಿ ರತ್ನಕೋಶಃ’ ಎಂಬ ಹೆಸರಿನ ತೆಲುಗು ಪುಸ್ತಕದ ಹೆಸರು ಹೇಳಿದರು. ‘ಎರಡು ಸಂಪುಟಗಳ ಗ್ರಂಥ ವೆಂದು ಕಾಣುತ್ತದೆ, ನನ್ನ ಬಳಿ ಎರಡನೆಯದರ ಪಿಡಿಎಫ್ ಇದೆ. ಒಂದನೆಯದು ಸಿಕ್ಕಿಲ್ಲ, ಹುಡುಕುತ್ತಿದ್ದೇನೆ’ ಎಂದರು. ಅವರಿಂದ ಆ ಪಿಡಿಎಫ್‌ಅನ್ನು ಪಡೆದುಕೊಂಡೆ.
ತೆರೆದುನೋಡಿದಾಗ ಒಟ್ಟು ೬೦೩ ಶ್ಲೋಕಗಳಲ್ಲಿ ೧೧೬ನೆಯದೇ ಈ ಮಾನಪೂಜಾಪಹಾರ ಅಕ್ಷರ ಚಮತ್ಕಾರ. ಕುತೂಹಲ ದಿಂದ ನನ್ನಲ್ಲಿರುವ ಸುಭಾಷಿತ ರತ್ನಭಾಂಡಾಗಾರಮ್ ನಲ್ಲಿ ಈ ಶ್ಲೋಕವಿದೆಯೇ ಎಂದು ನೋಡಿದೆ. ಇದೆ! ಆದರೆ ಹೇಳಿದ್ನಲ್ಲ, ಅಲ್ಲಿ ಅರ್ಥವಿವರಣೆ ತಾತ್ಪರ್ಯ ಇತ್ಯಾದಿ ಏನೂ ಇಲ್ಲ. ಆದ್ದರಿಂದ ಹರಕುಮುರುಕು ತೆಲುಗಿನಲ್ಲಿಯೇ ಈ ಶ್ಲೋಕದ ಅರ್ಥ ಸವಿದದ್ದಾಯ್ತು. ಹಾಗಂತ ಈ ಪುಸ್ತಕದಲ್ಲಿ ಎಲ್ಲವೂ ಅಕ್ಷರ ಚಮತ್ಕಾರದ ಶ್ಲೋಕಗಳೇನಲ್ಲ. ನೀತಿಬೋಧೆಯ ಸುಭಾಷಿತ ಗಳಿವೆ, ಭಗವದ್ಗೀತೆಯ ಕೆಲ ಶ್ಲೋಕಗಳಿವೆ, ಶಂಕರಾಚಾರ್ಯರ ಭಜಗೋವಿಂದಂ ನಿಂದ ಆಯ್ದ ಒಂದೆರಡು ಶ್ಲೋಕಗಳೂ ಇವೆ. ಒಟ್ಟಿನಲ್ಲಿ ಸಂಸ್ಕೃತ ಸಾಗರದಿಂದ ಹುಡುಕಿದ ಕೆಲವು ಮುತ್ತುರತ್ನಗಳು.
ನನ್ನ ಹುಚ್ಚಿಗೆ ಪೂರಕ ಸರಕೇ. ಡಿಜಿಟಲ್ ಪ್ರತಿ ಆದ್ದರಿಂದ ದೂಳು ತಿನ್ನುವ ಗೋಜಿಲ್ಲ. ದಶಕಗಳ ಹಿಂದೆ ಹೈದರಾಬಾದ್ ನಲ್ಲಿರುತ್ತ ಕಲಿತಿದ್ದ ತೆಲುಗನ್ನು ಹರಿತಗೊಳಿಸಲಿಕ್ಕೆ ನನಗೆ ಒಳ್ಳೆಯದಾಯ್ತು. ಇದೇ ಪುಸ್ತಕದಲ್ಲಿ ಒಂದುಕಡೆ ಅನುಕ್ರಮ ದಲ್ಲಿರುವ ಐದು ಶ್ಲೋಕಗಳು ‘ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ ಎಂಬ ಸಾಲಿನಿಂದ ಕೊನೆಯಾಗು ವಂಥವು ಸಿಕ್ಕಿದವು.
ಇವುಗಳ ಪೈಕಿ ಒಂದೆರಡನ್ನು ಮಾತ್ರ ಈಹಿಂದೆ ಎಲ್ಲಿಯೋ ಓದಿದ್ದು/ ಕೇಳಿದ್ದು ನೆನಪಿತ್ತು. ‘ವಿಜೇತವ್ಯಾ ಲಂಕಾ
ಚರಣತರಣೀಯೋ ಜಲನಿಧಿಃ| ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ| ತಥಾಪ್ಯೇಕೋ ರಾಮಃ ಸಕಲಮವಽದ್ರಾಕ್ಷಸಕುಲಂ| ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||’ ಎಂದು ಮೊದಲ ಶ್ಲೋಕ. ಇದರರ್ಥ: ಜಯಿಸಬೇಕಾದ್ದು ಲಂಕೆ. ಅದನ್ನು ತಲುಪಲಿಕ್ಕೆ ಸಮುದ್ರವನ್ನು ಕಾಲ್ನಡಿಗೆಯಿಂದಲೇ ದಾಟಬೇಕು.
ಶತ್ರುವಾದರೋ ಅಂಥಿಂಥವನಲ್ಲ ರಾವಣಾಸುರ. ಯುದ್ಧದಲ್ಲಿ ಸಹಾಯಕ್ಕಿರುವವರು ಕೇವಲ ಕಪಿಗಳು. ಆದರೂ ಶ್ರೀರಾಮ ಚಂದ್ರನು ರಾಕ್ಷಸ ಸಮುದಾಯವನ್ನೆಲ್ಲ ನಾಶಮಾಡಿದನು. ಏಕೆಂದರೆ ಮಹಾಪುರುಷರಿಗೆ ತಮ್ಮ ಕೆಲಸವನ್ನು ಸಾಧಿಸಲಿಕ್ಕೆ ಅಂತರಂಗದ ಶಕ್ತಿಯೇ ಮುಖ್ಯ. ಸಲಕರಣೆಗಳೆಲ್ಲವೂ ಗೌಣ, ನಿಮಿತ್ತಮಾತ್ರ. ಉಳಿದ ನಾಲ್ಕು ಶ್ಲೋಕಗಳಲ್ಲೂ ಇದೇ ಸಂದೇಶ ವನ್ನು ಬೇರೆಬೇರೆ ದೃಷ್ಟಾಂತಗಳಿಂದ ಸಾರಿರುವುದು.
‘ರಥಸ್ಯೈಕಂ ಚಕ್ರಂ ಭುಜಗಯಮಿತಾಃ ಸಪ್ತತುರಗಾಃ|
ನಿರಾಲಂಬೋ ಮಾರ್ಗಃ ಚರಣವಿಕಲಃ ಸಾರಥಿರಪಿ|
ರವಿರ್ಯಾತ್ಯೇವಾಂತಂ ಪ್ರತಿದಿನಮಪಾರಸ್ಯ ನಭಸ:|
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||’ ಎಂದು ಒಂದು ಶ್ಲೋಕ.
ಇದರರ್ಥ: ರಥಕ್ಕೆ ಒಂದೇ ಚಕ್ರ. ಚಾಂಚಲ್ಯಕ್ಕೆ ಹೆಸರಾದ ಏಳು ಕುದುರೆಗಳು. ಅವುಗಳಿಗೆ ಕಟ್ಟಿದ ಹಗ್ಗಗಳಾದರೋ ವಕ್ರಗಾಮಿ ಹಾವುಗಳು. ಚಲಿಸುವ ಮಾರ್ಗ ನಿರಾಧಾರವಾದುದು. ಹೆಳವನಾದ ಅರುಣನೇ ಸಾರಥಿ.
ಹೀಗಿದ್ದರೂ ಅಪಾರವಾದ ಆಕಾಶಮಾರ್ಗವನ್ನು ಸೂರ್ಯನು ಪ್ರತಿದಿನ ಕ್ರಮಿಸುತ್ತಾನೆ. ಮೂರನೆಯ ಶ್ಲೋಕ: ‘ಘಟೋ
ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನೋ| ವನೇ ವಾಸಃ ಕಂದಾದಿಕಮಶನಮೇವಂವಿಧಗುಣಃ| ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ| ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||’ ಇದರರ್ಥ: ಒಂದು ಕೊಡಪಾನ ಅಥವಾ ಕುಂಭವೇ ಈತನ ಜನ್ಮಸ್ಥಾನ. ಸದಾ ಪ್ರಾಣಿಗಳೊಂದಿಗೆ ಒಡನಾಟ. ಧರಿಸಿಕೊಳ್ಳಲಿಕ್ಕೆ ಎಲೆಯ ವಸ್ತ್ರ. ಸದಾ ಕಾಡಿ ನಲ್ಲಿಯೇ ವಾಸ. ಕಂದಮೂಲಗಳೇ ಆಹಾರ. ಇಂತಹ ಅಗಸ್ತ್ಯ ಮುನಿಯು ಸಮುದ್ರವನ್ನೇ ಆಪೋಶನ ತೆಗೆದುಕೊಂಡನು.
ನಾಲ್ಕನೆಯ ಶ್ಲೋಕ: ‘ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಚಂಚಲ- ದೃಶಾಂ ಕೊಣೋ ಬಾಣಃ ಸುಹೃದಪಿ ಜಡಾತ್ಮಾ ಹಿಮಕರಃ| ತಥಾಪ್ಯೇಕೋಧಿನಂಗಃ ಭುವನಮಪಿ ವ್ಯಾಕುಲಯತೇ| ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||’ ಇದರರ್ಥ: ಹೂವುಗಳಿಂದಾದ ಧನುಸ್ಸು.
ಅದಕ್ಕೆ ಬಿಗಿದಿರುವ ಹಗ್ಗ ಯಾವುದೆಂದರೆ ದುಂಬಿಗಳ ಸಾಲು. ಚಂಚಲ ಕಡೆಗಣ್ಣ ನೋಟವೇ ಬಾಣ. ಗೆಳೆಯನಾದರೋ
ಜಡಾತ್ಮನಾದ ಚಂದ್ರ. ತಾನು ಸ್ವತ: ದೇಹವನ್ನು ಕಳೆದುಕೊಂಡ ಅನಂಗ. ಇಷ್ಟಿದ್ದರೂ ಇಡೀ ಲೋಕವನ್ನೇ ಪ್ರೇಮವ್ಯಾಕುಲತೆಗೆ
ತಳ್ಳುತ್ತಾನೆ!
ಮನ್ಮಥನ ಸಾಮರ್ಥ್ಯದ್ದೇ ಬಣ್ಣನೆ ಐದನೆಯ ಶ್ಲೋಕದಲ್ಲೂ: ‘ವಿವಕ್ಷಃ ಶ್ರೀಕಂಠೋ ಜಡತನುರಮಾತ್ಯಃ ಶಶಧರೋ| ವಸಂತಃ ಸಾಮಂತಃ ಕುಸುಮಮಿಷವಃ ಸೈನ್ಯಮಬಲಾಃ| ತಥಾಪಿ ತ್ರೈಲೋಕ್ಯಂ ಜಯತಿ ಮದನೋ ದೇಹರಹಿತಃ| ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||’
ಇದರರ್ಥ: ಶಿವನಂಥವನು ಶತ್ರು. ಜಡಶರೀರಿಯಾದ ಚಂದ್ರನು ಮಂತ್ರಿ. ವಸಂತನೇ ಸಾಮಂತ. ಹೂವುಗಳೇ ಬಾಣಗಳು. ಅಬಲೆಯರಾದ ಸ್ತ್ರೀಯರದೇ ಸೇನೆ. ಇಂತಿದ್ದರೂ, ಅನಂಗನಾದ ಮನ್ಮಥನು ಮೂರು ಲೋಕಗಳನ್ನೂ ಜಯಿಸುತ್ತಾನೆ. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ, ಉಪಕರಣಗಳನ್ನಲ್ಲ.
ಮೇಲಿನ ಐದು ಶ್ಲೋಕಗಳನ್ನು ಬಣ್ಣಿಸುವಾಗ ಕೆಲವರು ಒಂದು ಕಥೆಯನ್ನೂ ಕಟ್ಟುವುದಿದೆ. ಭೋಜರಾಜನೆದುರು ಶ್ಲೋಕ ಗಳನ್ನು ಹೇಳಿ ಬಹುಮಾನ ರೂಪದಲ್ಲಿ ಒಂದಿಷ್ಟು ಚಿನ್ನದ ನಾಣ್ಯಗಳು ಸಿಗಬಹುದೆಂಬ ಆಸೆಯಿಂದ ಒಬ್ಬ ಬ್ರಾಹ್ಮಣ
ಹೋಗುತ್ತಾನೆ. ಭೋಜರಾಜನು ಅವನಿಗೆ ‘ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ ಎಂಬ ಸಾಲನ್ನು ಕೊಟ್ಟು,
ಅದು ನಾಲ್ಕನೆಯ ಸಾಲಾಗಿ ಇರುವಂತೆ ಶ್ಲೋಕ ಕಟ್ಟಬೇಕೆಂದು ಹೇಳುತ್ತಾನೆ (ಇಂಥ ಸವಾಲುಗಳಿಗೆ ಸಮಸ್ಯಾಪೂರಣ ಎಂದು
ಹೆಸರು). ಕಂಗಾಲಾದ ಬ್ರಾಹ್ಮಣ ಕಾಳಿದಾಸನಲ್ಲಿಗೆ ಹೋಗುತ್ತಾನೆ (ಕಾಳಿದಾಸ ಮತ್ತು ಭೋಜರಾಜ ಸಮಕಾಲೀನರಲ್ಲ ಎಂದು
ಇತಿಹಾಸಜ್ಞರ ಅಭಿಪ್ರಾಯವಾದರೂ ಸಂಸ್ಕೃತ ಶ್ಲೋಕ ವ್ಯಾಖ್ಯಾನಗಳಲ್ಲಿ, ಇಂತಹ ಕಟ್ಟುಕಥೆಗಳಲ್ಲಿ ಕಲ್ಪನೆಗೆ ಭೋಜರಾಜ-ಕಾಳಿದಾಸರದೇ ಬೆಸ್ಟ್ ಜೋಡಿ).
ಕಾಳಿದಾಸ ಬ್ರಾಹ್ಮಣನನ್ನು ಸಂತೈಸುತ್ತ ಒಂದಲ್ಲ ಐದು ಶ್ಲೋಕ ಹೇಳಿಕೊಡುತ್ತೇನೆ. ನೀನೊಂದು, ನಿನ್ನ ಹೆಂಡತಿಯೊಂದು, ಮೂವರು ಮಕ್ಕಳೂ ಒಂದೊಂದು ಶ್ಲೋಕವನ್ನು ಭೋಜರಾಜನೆದುರು ಹೇಳಿಬನ್ನಿ ನೋಡೋಣ ಎಂದು ಕಳುಹಿಸುತ್ತಾನೆ. ಅದರಂತೆಯೇ ಬ್ರಾಹ್ಮಣ ಸಪರಿವಾರನಾಗಿ ಭೋಜರಾಜನಲ್ಲಿಗೆ ಹೋಗುತ್ತಾನೆ.
ಐವರೂ ಸರದಿಯಂತೆ ಶ್ಲೋಕ ಹೇಳುತ್ತಾರೆ. ಭೋಜರಾಜನಿಂದ ಬಹುಮಾನ ಗಿಟ್ಟಿಸುತ್ತಾರೆ. ಕಥೆ ಏನೇ ಇರಲಿ, ಶ್ಲೋಕಗಳಲ್ಲಿ
ಹೇಳಿರುವ ನೀತಿ ಚಿಂತನಯೋಗ್ಯವಾದುದು. ಯಾವ ಕೆಲಸದಲ್ಲೇ ಆದರೂ ಯಶಸ್ಸು ಸಿಗದಿದ್ದಾಗ ನಾವು ಸೋಲಿನ ಹೊಣೆ
ಯನ್ನು ಬೇರಾರಿಗೋ ಕಟ್ಟುತ್ತೇವೆ. ಹೊರಗಿನ ವ್ಯಕ್ತಿಗಳನ್ನೋ ವಸ್ತುಗಳನ್ನೋ ನಮ್ಮ ಸೋಲಿಗೆ ಕಾರಣರೆನ್ನುತ್ತೇವೆ. ಹಾಗೆ
ಮಾಡುವುದು ಸರಿಯಲ್ಲ. ನಮ್ಮದೇ ಅಂತರಂಗದ ಶಕ್ತಿಯ ಕಡೆಗೆ ಗಮನ ಕೊಟ್ಟರೆ ಎಂತಹ ಕಷ್ಟಕೆಲಸವೂ ಸುಲಭಸಾಧ್ಯ ವಾಗುತ್ತದೆ.
ಇನ್ನೊಂದು ಒಳ್ಳೆಯ ಸುಭಾಷಿತ ಈ ಪುಸ್ತಕದಲ್ಲಿ ಸಿಕ್ಕಿದ್ದು ಇದು: ‘ಕೃತೇ ಚ ರೇಣುಕಾ ಶಕ್ತಿಃ ತ್ರೇತಾಯಾಂ ಜಾನಕೀ ತಥಾ| ದ್ವಾಪರೇ ದ್ರೌಪದೀ ಶಕ್ತಿಃ ಕಲೌ ಶಕ್ತಿರ್ಗೃಹೇ ಗೃಹೇ|’ ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿತ್ತು, ಅವರಿಗೆ
ಯಾವ ಸ್ಥಾನಮಾನಗಳೂ ಇರಲಿಲ್ಲ, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ ಅಂತೆಲ್ಲ ಗೊಣಗುವ ಮೂರ್ಖರು ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕು.
ಕೃತಯುಗದಲ್ಲಿ ರೇಣುಕೆ ಶಕ್ತಿಯೆನಿಸಿದ್ದಳು. ತ್ರೇತಾಯುಗದಲ್ಲಿ ಸೀತೆ ಶಕ್ತಿಯಾದಳು. ದ್ವಾಪರ ಯುಗದಲ್ಲಿ ದ್ರೌಪದಿ ಶಕ್ತಿಯಾದಳು. ಆದರೆ ಕಲಿಯುಗದಲ್ಲಿ ಪ್ರತಿ ಮನೆಯಲ್ಲೂ ಒಂದು ಶಕ್ತಿ. ಅದಕ್ಕೆಂದೇ ಗೃಹಿಣೀ ಗೃಹಮುಚ್ಯತೇ ಎಂದಿದ್ದು. ಗೃಹಿಣಿ ಇಲ್ಲವೆಂದಾ ದರೆ ಗೃಹವೇ ಮುಚ್ಚುತ್ತದೆ. ಕೊನೆಯಲ್ಲಿ, ಆರೋಗ್ಯ ಪಾಲನೆಯ ಸರಳಸೂತ್ರವೊಂದನ್ನು ತಿಳಿಸುವ ಸುಭಾಷಿತ.
ಅದು ಹೀಗಿದೆ: ‘ನ ಸಂಪತ್ತಿಃ ಕ್ರಿಯಾಸಕ್ತಿರ್ಭೇಷಜಂ ಚ ನ ವಿದ್ಯತೇ| ಸರ್ವರೋಗ ವಿನಾಶಾಯ ನಿಶಾಂತೇ ಚ ಪಯಃ ಪಿಬೇತ್||’ ಅಂದರೆ- ದುಡ್ಡು ಖರ್ಚು ಮಾಡಬೇಕಿಲ್ಲ. ಏನೇನೋ ದೊಡ್ಡ ಪ್ರಯತ್ನಗಳನ್ನು ಮಾಡುವುದೂ ಬೇಡ. ವೈದ್ಯರಿಂದ ಚಿಕಿತ್ಸೆ
ಔಷಧಗಳಂತೂ ಬೇಡವೇ ಬೇಡ. ದಿನಾ ಬೆಳಗ್ಗೆ ಎದ್ದು ಒಂದು ಚೊಂಬು ತುಂಬ ನೀರು ಕುಡಿಯಿರಿ (ತಾಮ್ರದ ಪಾತ್ರೆಯಿಂದಲೇ ಕುಡಿಯುವುದೊಳ್ಳೆ ಯದು). ಎಲ್ಲ ರೋಗಗಳೂ ನಿವಾರಣೆಯಾಗುತ್ತವೆ.
ಅಂತೂ ನೀರು ಕುಡಿಸಿದ್ರಿ ಎಂದು ನೀವೀಗ ನನಗೆ ಬೈಯಬೇಡಿ! ಆದರೆ ಸುಭಾಷಿತಗಳ ಹುಚ್ಚು ಹತ್ತಿದರೆ ಅದು ರೋಗವಲ್ಲ. ‘ಸೊರಗಿ ಸುಕ್ಕಿತು ಮೊಗವು ದ್ರಾಕ್ಷಿಗೆ, ಸಕ್ಕರೆಯು ಕಲ್ಲಾಯಿತು; ಸುಭಾಷಿತಗಳ ಸವಿಗೆ ಹೆದರುತ ಸುಧೆಯು ಸಗ್ಗವ ಸೇರಿತು!’ ಎಂದು ಸುಭಾಷಿತಗಳನ್ನು ಕೊಂಡಾಡಲಾಗಿದೆಯೆಂದರೆ ಅವುಗಳಲ್ಲೊಂದಿಷ್ಟನ್ನು ಅಲ್ಲಿ-ಇಲ್ಲಿ ಹೆಕ್ಕಿಕೊಳ್ಳಲಿಕ್ಕೆ ಸಿಕ್ಕಿದರೆ, ಹೆಕ್ಕಿದ್ದು ಮನಸ್ಸಿನೊಳಗೆ ಹೊಕ್ಕರೆ, ಅದೇ ಸುಯೋಗ!