ಅಶ್ವತ್ಥಕಟ್ಟೆ
ranjith.hoskere@gmail.com
ರಾಷ್ಟ್ರ ರಾಜಕಾರಣದಲ್ಲಿ ಕಳೆದೊಂದು ವಾರದಿಂದ ಭರ್ಜರಿ ಸದ್ದು ಮಾಡುತ್ತಿರುವ ವಿಷಯವೆಂದರೆ ಗುಜರಾತ್‌ನಲ್ಲಿ
ಬಿಜೆಪಿಯ ಐತಿಹಾಸಿಕ ಗೆಲವು. ಈ ಗೆಲುವಿನಿಂದ ‘ಗುಜರಾತ್ ಮಾಡೆಲ್’ ಅನ್ನು ಮುಂದಿನ ದಿನದಲ್ಲಿ ಕರ್ನಾಟಕದಲ್ಲಿಯೂ ಅಳವಡಿಸಲು ಬಿಜೆಪಿಯ ವರಿಷ್ಠರು ಉತ್ಸಾಹ ತೋರಿದ್ದಾರೆ ಎನ್ನಲಾಗು ತ್ತಿದೆ.
ಬಿಜೆಪಿ ಕಳೆದ ಒಂದುವರೆ ವರ್ಷದಿಂದ ‘ಹೊಸ ಮುಖಗಳಿಗೆ’ ಆದ್ಯತೆ ಎನ್ನುವ ತಂತ್ರಗಾರಿಕೆ ಗುಜರಾತ್‌ನಲ್ಲಿ ಯಶಸ್ವಿ ಯಾಗುತ್ತಿದ್ದಂತೆ, ಕರ್ನಾಟಕಕ್ಕೂ ಗುಜರಾತ್ ಮಾಡೆಲ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ನಿಜಕ್ಕೂ ಅಲ್ಲಿನ ಆ ತಂತ್ರಗಾರಿಕೆ ಕರ್ನಾಟಕಕ್ಕೆ ಫಿಟ್ ಆಗುವುದೇ ಎನ್ನುವುದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೌದು, ಹಿಮಾಚಲ ಪ್ರದೇಶದಲ್ಲಿ ಸೋತರೂ ಬಿಜೆಪಿ ನಾಯಕರು ಗುಜರಾತ್‌ನಲ್ಲಿನ ಅಭೂತ ಪೂರ್ವ ಗೆಲುವನ್ನು ಹೆಚ್ಚು ವೈಭವೀಕರಿಸುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ಸತತ ಆರು ಬಾರಿ ಅಧಿಕಾರ ನಡೆಸಿದ್ದರೂ ಏಳನೇ ಬಾರಿಗೆ ನಡೆದ ಚುನಾವಣೆಯಲ್ಲಿ ಈ ಹಿಂದೆ ಎಲ್ಲ ದಾಖಲೆಗಳನ್ನು ಸರಿಗಟ್ಟಿ ಅಧಿಕಾರದ ಗದ್ದುಗೆಗೆ ಏರುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದಕ್ಕೆ.
ಐದು ವರ್ಷ ಅಧಿಕಾರ ನಡೆಸಿ ಮರು ಆಯ್ಕೆಗೆ ತಿಣುಕಾಡುವ ಸಮಯದಲ್ಲಿ ಈ ರೀತಿ ಸತತ ಏಳು ಬಾರಿ ಅಧಿಕಾರಕ್ಕೆ ಬರುವುದು ಸುಲಭ ಹಾಗೂ ತಮಾಷೆಯ ಮಾತಲ್ಲ. ಆದರೆ ಈ ರೀತಿ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ತಂತ್ರಗಾರರಾದ ಅಮಿತ್ ಶಾ ಹಾಗೂ ನರೇಂದ್ರ ಮೋದಿ, ಗುಜರಾತ್‌ನಲ್ಲಿ ಕೆಲ ಕಠಿಣ ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ಅದರಲ್ಲಿ ‘ಹಳಬರಿಗೆ ಟಿಕೆಟ್ ಇಲ್ಲ’ ಎನ್ನುವುದು ಪ್ರಮುಖವಾಗಿತ್ತು. ಈ ತಂತ್ರಗಾರಿಕೆ ಯಶಸ್ವಿಯಾಗಿದೆ.
ಆದ್ದರಿಂದ ಇದನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಆದರೆ
ಗುಜರಾತ್ ಮತದಾರರ ಮನಃಸ್ಥಿತಿಗೂ ಕರ್ನಾಟಕದವರ ಮನಸ್ಥಿತಿಗೂ ಹಲವು ವ್ಯತ್ಯಾಸವಿರುವಾಗ ಹಾಗೂ ಗುಜರಾತ್
ನಲ್ಲಿ ವರ್ಕ್‌ಔಟ್ ಆದ ‘ಮೋದಿ ಫ್ಯಾಕ್ಟರ್’ ಕರ್ನಾಟಕದಲ್ಲಿಯೂ ಅದೇ ಪ್ರಮಾಣದಲ್ಲಿ ವರ್ಕ್ ಆಗುವುದೇ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ಕರ್ನಾಟಕ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿನ ಮತದಾರರು ‘ಪ್ರಜ್ಞಾವಂತರು’. ನಾಲ್ಕೈದು ಚುನಾವಣೆಯಿಂದ ಅಧಿಕಾರ ನಡೆಸಿದ ಪಕ್ಷವನ್ನು ಮರುಆಯ್ಕೆಯೇ ಮಾಡಿಲ್ಲ. ಅದಕ್ಕಿಂತ ಮುಖ್ಯವಾಗಿ 2014ರ ವಿಧಾನ ಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಕಳೆದ 20ರಿಂದ 25 ವರ್ಷಗಳ ಅವಧಿಯಲ್ಲಿ ನಡೆದಿರುವ ಚುನಾವಣೆಯಲ್ಲಿ ‘ಅತಂತ್ರ ಫಲಿತಾಂಶ’ವನ್ನೇ ನೀಡಿದ್ದಾರೆ. ಈ ರೀತಿ ಅತಂತ್ರ ಫಲಿತಾಂಶ ಸಿಗುವುದಕ್ಕೆ ಇರುವ ಬಹುದೊಡ್ಡ ಕಾರಣವೆಂದರೆ, ಕರ್ನಾಟಕದಲ್ಲಿ 224 ಕ್ಷೇತ್ರಗಳಿದ್ದರೂ, ಇವುಗಳಲ್ಲಿ ಶೇ.50ರಷ್ಟು ಕ್ಷೇತ್ರಗಳಿಗೆ ‘ಶಾಸಕರು ಫಿಕ್ಸ್’ ಆಗಿದ್ದಾರೆ.
ನಾಲ್ಕೈದು ಅವಧಿಯಿಂದ ಅವರೇ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಬೆಂಗಳೂರು, ಬೆಳಗಾವಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗದ ಬಹುತೇಕ ಕ್ಷೇತ್ರಗಳಿಗೆ ‘ಮರು ಆಯ್ಕೆಯಾಗುವ ಶಾಸಕರೇ’ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ರೀತಿ ಶಾಸಕ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಕ್ಷೇತ್ರಗಳು 120ಕ್ಕೂ ಹೆಚ್ಚಿವೆ. ಇನ್ನುಳಿದ ನೂರು ಕ್ಷೇತ್ರಗಳಿಗೆ ಮಾತ್ರವೇ ಪೈಪೋಟಿ, ಬಲ ಪ್ರದರ್ಶನ ಇರುವುದು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಿಷ್ಟು ಕ್ಷೇತ್ರಗಳನ್ನು ಫಿಕ್ಸ್ ಮಾಡಿಕೊಂಡಿವೆ. ಇದರೊಂದಿಗೆ ಮತಗಳನ್ನು ಪಕ್ಕಾ
ಮಾಡಿಕೊಂಡಿದ್ದಾರೆ.
ಆದ್ದರಿಂದ ಶೇ.೧೦ರಿಂದ ೧೫ರಷ್ಟು ಮತದಾರರಿಗೆ ಹಾಗೂ ನೂರು ಕ್ಷೇತ್ರಗಳಿಗೆ ಮಾತ್ರ ‘ತಂತ್ರಗಾರಿಕೆ’ಯ ಪರಿಣಾಮ ಬೀರುವುದು ಎನ್ನುವುದು ಶ್ಲೇಷಕರ ಅಭಿಪ್ರಾಯವಾಗಿದೆ. ಆದರೆ ಈ ಬಾರಿ ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕ ದಲ್ಲಿಯೂ ಬಿಜೆಪಿ ೮೦ಕ್ಕೂ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆಯಲ್ಲಿ ಬಿಜೆಪಿ ವರಿಷ್ಠರಿದ್ದಾರೆ ಎನ್ನುವ ಗುಸುಗುಸು ಓಡಾಡುತ್ತಿದೆ. ಆದರೆ ಈಗಾಗಲೇ ಭದ್ರವಾಗಿರುವ ಶಾಸಕರಿಗೆ ಟಿಕೆಟ್ ನೀಡದೇ ಹೊಸಬರಿಗೆ ಅವಕಾಶ ನೀಡಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ಯಾರದ್ದು? ಉದಾಹರಣೆಗೆ ಕೆಲ ಕ್ಷೇತ್ರದಲ್ಲಿರುವ ಕೆಲ ಶಾಸಕರು ಯಾವ ಪಕ್ಷದಿಂದ ನಿಂತರೂ ಗೆಲುವು ನಿಶ್ಚಿತ.
ಒಂದು ವೇಳೆ ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಶಾಸಕರಿದ್ದಾಗ ಅವರಿಗೆ ಟಿಕೆಟ್ ನೀಡದೇ ಬಂಡಾಯದ ಬಿಸಿ ಎದುರಿಸ ಬೇಕಾಗಿ ಬಂದರೆ ಅದನ್ನು ನಿಭಾಯಿಸುವುದು ಹೇಗೆ ಎನ್ನುವುದು ಹಲವರ ಪ್ರಶ್ನೆ ಯಾಗಿದೆ. ಕರ್ನಾಟಕದಲ್ಲಿರುವ ಬಹುತೇಕ ಬಿಜೆಪಿ ನಾಯಕರು ಚುನಾವಣೆಗೆ ‘ಮೋದಿ’ ಎನ್ನುವ ಹೆಸರನ್ನೇ ಬಂಡಾವಳ
ಮಾಡಿಕೊಳ್ಳುವ ಉಮೇದು ಹೊಂದಿದ್ದಾರೆ. ಆದರೆ ಗುಜರಾತ್‌ನಲ್ಲಿ ವರ್ಕ್‌ಔಟ್ ಆದ ಮಟ್ಟದಲ್ಲಿ ಕರ್ನಾಟಕದಲ್ಲಿ ಮೋದಿ ಹೆಸರಲ್ಲಿ ಚುನಾವಣೆ ನಡೆಯುವುದು ಸುಲಭದ ಮಾತಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಹೆಸರಲ್ಲಿ ವೋಟುಗಳು ಬಿಜೆಪಿ ಬರಬಹುದು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಧ್ಯವಿಲ್ಲ.
ಮೋದಿ ಅವರು ಬಂದು ಹೋದರೆ ಪ್ರತಿಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಸಾವಿರ ಮತಗಳು ಆಚೀಚೆಯಾಗಿ ಬಿಜೆಪಿ ಲಾಭ
ಮಾಡಿಕೊಡಬಹುದು. ಆದರೆ ಈ ಮಾರ್ಜಿನ್‌ನಲ್ಲಿಯೇ ಚುನಾವಣೆ ನಡೆಯುತ್ತವೆಯೇ ಎನ್ನುವುದು ಅನುಮಾನ. ಆದ್ದರಿಂದ ಮೋದಿ -ಕ್ಟರ್‌ಗೂ ಮೊದಲೇ ಕರ್ನಾಟಕ ಬಿಜೆಪಿ ನಾಯಕತ್ವ ‘ಹವಾ’ ಎಬ್ಬಿಸಬೇಕು. ಆದರೆ ಆ ರೀತಿ ಹವಾ ಎಬ್ಬಿಸುವ ನಾಯಕರ‍್ಯಾರು ಎನ್ನುವ ಪ್ರಶ್ನೆಗೆ ಬಿಜೆಪಿಯವರ ಬಳಿಯೇ ಉತ್ತರವಿಲ್ಲವಾಗಿದೆ.
ಈ ಎಲ್ಲದರೊಂದಿಗೆ ಗುಜರಾತ್‌ನಲ್ಲಿ ಮೋದಿ-ಶಾ ಜೋಡಿ ಮ್ಯಾಜಿಕ್ ಮಾಡಿದ್ದು ಒಪ್ಪಿಕೊಳ್ಳಲೇಬೇಕು. ಆದರೆ ಕರ್ನಾಟಕ ದಲ್ಲಿಯೂ ಈ ರೀತಿ ಮ್ಯಾಜಿಕ್ ಸಾಧ್ಯವೇ? ಗುಜರಾತ್‌ನಿಂದಲೇ ಸಾರ್ವಜನಿಕ ಜೀವನ ಆರಂಭಿಸಿರುವ ಈ ಇಬ್ಬರಿಗೂ ಅಲ್ಲಿನ ಆಳ-ಅಗಲದ ಬಗ್ಗೆ ಸ್ಪಷ್ಟ ಚಿತ್ರಣವಿದೆ. ಅಲ್ಲಿಗೆ ಯಾರೊಬ್ಬರ ಸಹಾಯವಿಲ್ಲದೇ ರಣತಂತ್ರ ಮಾಡುವುದಕ್ಕೆ ಈ ಇಬ್ಬರಿಗೂ ಸಾಧ್ಯ. ಆದರೆ ಕರ್ನಾಟಕ ರಾಜಕೀಯ ಪರಿಸ್ಥಿತಿಯ ಬಗ್ಗೆ ಏನೇ ಸರ್ವೇ ಮಾಡಿಸಿ ಮಾಹಿತಿ ಪಡೆದುಕೊಂಡರೂ ಅವರಿಬ್ಬ ರಿಗೂ ‘ಫಸ್ಟ್ ಹ್ಯಾಂಡ್ ರಿಪೋರ್ಟ್’ ಸಿಗುವುದಿಲ್ಲ ಎನ್ನುವುದು ಸ್ಪಷ್ಟ. ಹಾಗೇ ನೋಡಿದರೆ, ಈ ಬಾರಿ ಕರ್ನಾಟಕ ಕಾಂಗ್ರೆಸ್‌ಗೆ ‘ಹೈಕಮಾಂಡ್’ನ ಬಲ ಈ ಚುನಾವಣೆಯಲ್ಲಿ ಕೊಂಚ ಹೆಚ್ಚಾಗಿಯೇ ಸಿಗುವ ಸಾಧ್ಯತೆಯಿದೆ. ಏಕೆಂದರೆ ಎಐಸಿಸಿ ಅಧ್ಯಕ್ಷ ರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಐದಾರು ದಶಕಗಳಿಂದ ಕರ್ನಾಟಕ ರಾಜ್ಯ ರಾಜಕೀಯವನ್ನು ‘ಹತ್ತಿರ’ದಿಂದ ನೋಡುವುದಷ್ಟೇ ಅಲ್ಲದೇ, ಕರ್ನಾಟಕದಲ್ಲಿ ಬಲಿಷ್ಠ ಸಂಘಟನೆಯನ್ನು ರೂಪಿಸುವುದಕ್ಕೆ ಅವರ ಶ್ರಮದಾನವೂ ಇದೆ.
ಆದ್ದರಿಂದ ಕರ್ನಾಟಕದ ಆಳ-ಅಗಲದ ಬಗ್ಗೆ ಸ್ಪಷ್ಟ ಚಿತ್ರಣ ಅವರಿಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರ ನಡುವೆಯಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸುವ ಅಥವಾ ಅದನ್ನು ಮೀರಿ ಪಕ್ಷಕ್ಕೆ ‘ಲಾಭ’ ಮಾಡಿಕೊಡುವಷ್ಟು ತಂತ್ರಗಾರಿಕೆಯಿದೆ.
ಗುಜರಾತ್‌ನಲ್ಲಿ ಮೋದಿ-ಶಾ ಜೋಡಿಗೆ ಇರುವ ‘ತವರು ಬಲ’ ಕರ್ನಾಟಕದ ವಿಷಯದಲ್ಲಿ ಒಂದು ಹಂತದವರೆಗೆ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಲಿದೆ. ಇದರೊಂದಿಗೆ ಬಿಜೆಪಿಯಲ್ಲಿರುವ ಹಾಗೇ, ಈ ಚುನಾವಣೆಯ ಮಟ್ಟಿಗೆ ಕಾಂಗ್ರೆಸ್‌ಗೆ ‘ಫೇಸ್ ವ್ಯಾಲ್ಯು’ ಸಮಸ್ಯೆ ಕಾಣಿಸುತ್ತಿಲ್ಲ. (ಆದರೆ ನಾಯಕತ್ವದಲ್ಲಿ ಅಧಿಪತ್ಯ ಸಾಧಿಸಬೇಕು ಎನ್ನುವ ನಾಯಕರ ನಡುವಿನ ಹೋರಾಟದಿಂದ ಆಗಬಹುದಾದ ಅನಾಹುತ ಬೇರೆ ಮಾತು). ಅದನ್ನು ಸರಿಪಡಿಸುವುದು ಸಹ ಖರ್ಗೆ ಅವರ ಕೈಯಲ್ಲಿಯೇ ಇದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಆದರೆ ಈ ಚುನಾವಣೆಯ ಮಟ್ಟಿಗೆ ನೋಡುವುದಾದರೆ ಬಿಜೆಪಿಯ ಬಹುದೊಡ್ಡ ಹಿನ್ನಡೆಯೆಂದರೆ ಯಾವ ನೇತೃತ್ವದಲ್ಲಿ ಚುನಾವಣೆ ಎನ್ನುವುದು. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಎಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆಗಳನ್ನು ಪಕ್ಷ ಎದುರಿಸಿತ್ತು. ೨೦೧೪ರಲ್ಲಿ ಅವರು ಕೆಜೆಪಿ ಪಕ್ಷ ಕಟ್ಟಿಕೊಂಡು ಬಿಜೆಪಿಯಿಂದ ದೂರಾದಾಗ, ಬಿಜೆಪಿ ಯಾವ ನಾಯಕನನ್ನು ‘ಸ್ಟಾರ್ ನಾಯಕ’ನ ರೀತಿಯಲ್ಲಿ ತೋರಿಸಲೇ ಇಲ್ಲ. ಆ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರನ್ನು ಪುನಃ ಪಕ್ಷಕ್ಕೆ ವಾಪಸು ಕರೆದುಕೊಂಡು ಬಂದಿದ್ದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೀಗ ಯಡಿಯೂರಪ್ಪ ಅವರು ಪಕ್ಷದಲ್ಲಿದ್ದರೂ, ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದಕ್ಕೆ ಪಕ್ಷ ಸಿದ್ಧವಿಲ್ಲ. ಅದು ಸಾಧ್ಯವಾಗದಿದ್ದರೆ, ಯಡಿಯೂರಪ್ಪ ಅವರು ಸಹ ಈ ಹಿಂದಿನ ಚುನಾವಣಾ ರ‍್ಯಾಲಿಗಳಂತೆ ಅತ್ಯುತ್ಸಾಹದಲ್ಲಿ ಕೆಲಸ ಮಾಡುವುದು ಕಷ್ಟಸಾಧ್ಯ.
ಆದ್ದರಿಂದ ರಾಜ್ಯದ ಮಟ್ಟದಲ್ಲಿ ಯಾರನ್ನು ನಾಯಕನೆಂದು ಬಿಂಬಿಸಬೇಕು ಎನ್ನುವ ಗೊಂದಲದಲ್ಲಿ ಬಿಜೆಪಿಯಿದೆ. ಗುಜರಾತ್ ನಲ್ಲಿ ಇಲ್ಲದ ಬಹುದೊಡ್ಡ ಕರ್ನಾಟಕದಲ್ಲಿ ಬಿಜೆಪಿ ವರಿಷ್ಠರಿಗೆ ಎದುರಾಗುವುದು ‘ನಾಯಕತ್ವದ ಪ್ರಶ್ನೆ’ ಬಂದಾಗ. ಗುಜರಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿದ್ದರಿಂದ ಅವರ ಹೆಸರಲ್ಲಿ ಏಳನೇ ಬಾರಿ ಸತತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಅದೂ ಸಹ ಐತಿಹಾಸಿಕ ದಾಖಲೆಯಲ್ಲಿ. ಆದರೆ ಗುಜರಾತ್ ನಲ್ಲಿ ಬಳಸಿದ ತಂತ್ರಗಾರಿಕೆಯೇ ಕರ್ನಾಟಕದಲ್ಲಿ ಯಶಸ್ವಿಯಾಗುವುದೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸ ಬೇಕು.