ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲ್ಗಳಿಂದ ಮಣಿಸಿದ ಅರ್ಜೆಂಟೀನಾ ಪ್ರಶಸ್ತಿ ಸುತ್ತಿಗೇರಿದ್ದು, ಈ ಮೂಲಕ ಅರ್ಜೆಂಟೀನಾ ತಂಡ ಆರನೇ ಬಾರಿ ವಿಶ್ವ ಕಪ್ನ ಫೈನಲ್ಗೇರಿದಂತಾಗಿದೆ. ಅಂತೆಯೇ ವೃತ್ತಿ ಜೀವನ ಕೊನೆಯ ವಿಶ್ವಕಪ್ ಟೂರ್ನಿಯನ್ನಾಡುತ್ತಿರುವ ಮೆಸ್ಸಿಗೆ ಪ್ರಶಸ್ತಿ ಗೆಲ್ಲುವ ಭರವಸೆ ಕೂಡ ಮೂಡಿದಂತಾಗಿದೆ.
ಅರ್ಜೆಂಟೀನಾ ತಂಡದ ಪರ ಜೂಲಿಯಾನ್ ಅಲ್ವಾರೆಜ್ (39 ಮತ್ತು 69ನೇ ನಿಮಿಷ) ಅವಳಿ ಗೋಲ್ ಬಾರಿಸಿದರೆ, ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ (39ನೇ ನಿಮಿಷ) ಏಕೈಕ ಗೋಲ್ ಬಾರಿಸಿದರು. 16ನೇ ಸುತ್ತಿನ ಪಂದ್ಯದಲ್ಲಿ ಜಪಾನ್ ಹಾಗೂ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್ ತಂಡಕ್ಕೆ ಆಘಾತ ಕೊಟ್ಟು ಸೆಮಿ ಹಂತಕ್ಕೆ ಪ್ರವೇಶ ಪಡೆದಿದ್ದ ಕ್ರೊಯೇಷಿಯಾ ಬಳಗಕ್ಕೆ ಈ ಬಾರಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ರಕ್ಷಣಾ ವಿಭಾಗ ಹೆಚ್ಚು ಕಾರ್ಯಪ್ರವೃತ್ತವಾಗಿದ್ದ ಹೊರತಾಗಿಯೂ ಗೋಲ್ ಬಾರಿಸಲು ವಿಫಲಗೊಂಡು ನಿರಾಸೆ ಎದುರಿಸಿತು.
ಪ್ರಥಮಾರ್ಧ ಮುಕ್ತಾಯದ ವೇಳೆಗೆ 2-0 ಗೋಲ್ಗಳ ಮುನ್ನಡೆ ಪಡೆದುಕೊಂಡ ಅರ್ಜೆಂಟೀನಾ ಬಳಗ, ದ್ವಿತೀಯಾರ್ಧದಲ್ಲೂ ಅದೇ ಮಾದರಿಯ ಆಟವನ್ನು ಮುಂದುವರಿಸಿ 69ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಹೊಡೆದು ವಿಜಯದ ಅಂತರವನ್ನು ಹೆಚ್ಚಿಸಿಕೊಂಡಿತು.
ಬುಧವಾರ ರಾತ್ರಿ ನಡೆಯಲಿರುವ ಫ್ರಾನ್ಸ್ ಮತ್ತು ಮೊರಾಕ್ಕೊ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.