ಮೈಸೂರು: ವಾಹನ ಸಂಚಾರವನ್ನು ಸುಗಮ ಮಾಡುವ ಸಲುವಾಗಿ 80 ಅಡಿಯಿರುವ ನ್ಯೂ ಕಾಂತರಾಜ ಅರಸು ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ರಸ್ತೆ ವಿಸ್ತರಣೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ವಾಹನ ಸಂಚಾರಿಗಳಿಗೆ ಬಹಳ ಅನುಕೂಲವಾಗಲಿದೆ.
ಹೊಸ ರಸ್ತೆಯಿಂದ 200ಕ್ಕೂ ಹೆಚ್ಚು ಬಡಾವಣೆಯ ನಿವಾಸಿಗಳು ಮೈಸೂರಿನ ವಿವಿಧ ಸ್ಥಳಗಳನ್ನು ತಲುಪಲು ಸಹಾಯವಾಗು ತ್ತದೆ. ಹಿಂದಿಗಿಂತ ಸುಲಭವಾಗಿ, ಅಡೆತಡೆಗಳಿಲ್ಲದೆ ಸ್ಥಳೀಯರು ಪ್ರತಿದಿನ ಈ ರಸ್ತೆಯನ್ನು ಬಳಸ ಬಹುದು.
ರಸ್ತೆ ವಿಸ್ತರಣೆಯಿಂದಾಗಿ ವರ್ತುಲ ರಸ್ತೆಯಿಂದ ನಗರದ ಒಳಭಾಗಕ್ಕೆ ಇರುವ ದೂರ ಅರ್ಧದಷ್ಟು ಕಡಿಮೆಯಾಗಲಿದೆ. ವರ್ತುಲ ರಸ್ತೆಯ ಮೂಲಕ ವಿಜಯನಗರ ನಾಲ್ಕನೆಯ ಹಂತಕ್ಕೆ ತೆರಳುವವರಿಗೆ ಈ ರಸ್ತೆ ಬಹಳ ಉಪಯುಕ್ತ. ಒಟ್ಟಾರೆ ರಸ್ತೆ ವಿಸ್ತರಣೆ ಯಿಂದಾಗಿ ನಗರದ ವಾಣಿಜ್ಯ ಹಾಗೂ ವಸತಿ, ಈ ಎರಡೂ ಅಂಶಗಳಿಗೆ ಉತ್ತಮ ಭವಿಷ್ಯ ಇದೆ. ಹೊಸ ರಸ್ತೆಯಲ್ಲಿ ಸಣ್ಣಪುಟ್ಟ ಅಂಗಡಿಗಳು, ದೊಡ್ಡ ಮಳಿಗೆಗಳು ಎಲ್ಲವೂ ತಲೆ ಎತ್ತುವ ಕಾರಣ ಉದ್ಯೋಗಾವಕಾಶಗಳು ಸಹ ಸಿಗಲಿವೆ.
ನಿವಾಸಿ ಎನ್.ವಿ.ರಾವ್ ಮಾತನಾಡಿ, ಕಾಂತರಾಜ ಅರಸು ರಸ್ತೆಯನ್ನು ನಾನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಇಲ್ಲಿನ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಈಗ ಈ ರಸ್ತೆ ವಿಸ್ತರಣೆಯಾಗುತ್ತೆ ಎಂದು ಕೇಳಿ ಬಹಳ ಸಂತೋಷವಾಯಿತು. ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ಬಡಾಬವಣೆಗಳಿಗೆ ಬಹಳ ಉಪಯೋಗ ವಾಗಲಿದೆ ಎಂದರು.