ಸುಮಾ-ರಶ್ಮಿ ಆರ್. ಶಾನ್‌ಬೋಗ್ ಅವರ ಜುಗಲ್ಬಂದಿ ಸಂಗೀತ ಸುಧೆಯಲ್ಲಿ ಮಿಂದೆದು ತೇಲಿದ ಕೇಳುಗರು
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಸದಾ ಗಂಭೀರ ಚರ್ಚೆಯ ವೇದಿಕೆಯಾಗುತ್ತಿದ್ದ ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ಮಂಗಳ ವಾರ ಗಾನಯಾನದ ಸಮಾಗಮ. ಇಬ್ಬರು ಗಾಯಕಿಯರ ಗಾನಮಾಧುರ್ಯಕ್ಕೆ ಕ್ಲಬ್ ಹೌಸ್ ಕೇಳುಗರು ತಲೆದೂಗಿದರು.
ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಹಾಡಿರುವ ಕೆಲವು ಗೀತೆಗಳು, ತ್ಯಾಗರಾಜರ ಕೀರ್ತನೆ ಗಳನ್ನು ಹಾಡಿ ಗಾಯಕರು ಗಮನ ಸೆಳೆದರು. ಸುಬ್ಬುಲಕ್ಷ್ಮಿ ಅವರ ಹಾಡನ್ನು ತಾವು ಕಲಿತ ಬಗೆಯನ್ನು ಸುಮಾ ಅವರು ಕೇಳುಗರೊಂದಿಗೆ ಹಂಚಿಕೊಂಡರು.
ತಾರಮ್ಮಯ್ಯ ಯದುಕುಲ ಗೋಕುಲ ಕಂದನ… ಎಂಬ ಸುಂದರ ಗೀತೆಯ ಮೂಲಕ ಕೃಷ್ಣನ ಜನ್ಮವೃತ್ತಾಂತವನ್ನು ವಿವರಿಸಿದರು. ಗೋಕಲದ ಗೋಪಿಕೆಯರು ವಿರಹದಿಂದ ಪರಿತಪಿಸಿ ಕೃಷ್ಣನ ಕುರಿತು ಹಾಡಿದ ಗೀತೆಯನ್ನು ಪುರಂದರ ದಾಸರು ಉಲ್ಲೇಖಿಸಿರುವ ಬಗೆಯನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು.
ಕೃಷ್ಣನ ತುಂಟಾಟಗಳನ್ನು ವಿವರಿಸುವ ಹಾಡುಗಳು, ಕೃಷ್ಣನ ವಿರುದ್ಧ ಗೋಪಿಕೆಯರು ಮತ್ತು ಗೋಕುಲದ ಜನರು ಯಶೋಧೆಯ ಮುಂದೆ ದೂರುತ್ತಿದ್ದ ದೂರುಗಳಿಂದ ಬೇಸತ್ತು ಯಶೋಧೆ ಹಾಡಿದ ಏನು ಮಾಡಲೋ ರಂಗ, ಏಕೆ ಬೆಳಗಾಯಿತು ಎಂದು ಹಾಡಿದ ಪರಿಯನ್ನು ಪುರಂದರ ದಾಸರು ಪ್ರಸ್ತುತ ಪಡಿಸಿದ್ದು, ಆ ಗೀತೆಯನ್ನು ಕ್ಲಬ್‌ಹೌಸ್ ನಲ್ಲಿ ಪ್ರಸ್ತುತ ಪಡಿಸಿದ ಗಾಯಕಿಯರು ಗಮನಸೆಳೆದರು.
ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರವೂ ನನ್ನ ನಾಲಗೆಗೆ ಬರಲಿ ಎನ್ನುವ ಮೂಲಕ ಶ್ರೀಮನ್ನಾರಾಯಣದ ನಾಮ ಸ್ಮರಣೆಯನ್ನು ಪಾಡಿದರು. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನದ ಯಾವ ಜನ್ಮದ ಮೈತ್ರಿ ಸಿನಿಮಾ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಗಮನ ಸೆಳೆದರು.
ಸಿನಿಮಾ ಗೀತೆಗಳ ಪಯಣದಲ್ಲಿ ಒಲವೇ ಜೀವನ ಸಾಕ್ಷಾತ್ಕಾರ ಗೀತೆಯನ್ನು ಹಾಡುವ ಮೂಲಕ ಹಳೆಯ ಕಾಲಕ್ಕೆ ಕೊಂಡೊ ಯ್ದರು. ಬೆಟಗೇರಿ ಕೃಷ್ಣಶರ್ಮಾ ಅವರ ಮೊನ್ನೆ ಮೊನ್ನೆ ನಮ್ಮ ಮನೆಗೆ ಚಿನ್ನತ್ತೆಯ ಮಗ ಬಂದಿದ್ದ. ಚಿನ್ನತ್ತೆಯ ಮಗಬಂದಿದ್ದ, ಬಂದು ಒಂದು ವಾರವಿದ್ದ. ಏನೇನೋ ಕನಸು ಕಂಡೆ ಎಂದು ಮಾವ ತನ್ನ ಜತೆ ಮಾಡಿದ ಚೇಷ್ಠೆಗಳನ್ನು ನೆನೆಯುವ ಗೀತೆ ಯನ್ನು ಹಾಡಿ ಮುದಗೊಳಿಸಿದರು.
ಹಾಡಿನ ಮೂಲಕವೇ ರಾಮಾಯಣ
೧೯೫೮ರಲ್ಲಿ ಬಂದ ಭೂಕೈಲಾಸ ಚಿತ್ರದಲ್ಲಿ ರಾಜ್‌ಕುಮಾರ್, ಕಲ್ಯಾಣ ಕುಮಾರ್, ಉದಯಕುಮಾರ್ ನಟಿಸಿದ್ದರು. ಈ ಹಾಡಿನಲ್ಲಿ
ದ್ವಾರಪಾಲಕರ ಮರಳಿ ಬಳಿಗೊಯ್ದ ಕೃಪೆಯೋ ಎಂಬ ಹಾಡಿನ ಮೂಲಕ ರಾಮಾಯಣದ ಮರುಸೃಷ್ಠಿಯನ್ನು ಮಾಡಿದ ಬಗೆಯನ್ನು ವರ್ಣಿಸಿದರು.
ರಾಮನ ಅವತಾರ, ರಘುಕುಲ ಸೋಮನ ಅವತಾರ, ನಿರುಪಮ ಅನುಪಮ ಜೀವನಸಾರ, ಅರಿವುದು ಅರಿವಿನ ಸಾರ ಎಂಬ ಹಾಡಿನ ಮೂಲಕ ಸುಶ್ರಾವ್ಯವಾಗಿ ಹಾಡಿದರು. ರಾಮಾಯಣವನ್ನು ಕಣ್ಣಿಗೆ ಕಟ್ಟುವಂತೆ ಹಾಡಿನಲ್ಲಿಯೇ ಅದ್ಭುತವಾಗಿ
ಪೋಣಿಸಿದ ಸಾಹಿತಿಗಳನ್ನು ಹೊಗಳಿಸಿದರು. ಅದೇ ಹಾಡಿನಲ್ಲಿ ಹನುಮನನ್ನು ಕನ್ನಡ ಕುಲತಿಲಕ ಎನ್ನುತ್ತಾ ಸೀತೆಯು, ಆತನಿಂದ ರಾಮನ ಮುದ್ರಿಕೆಯ ಪಡೆದಿದ್ದು, ಹನುಮನಿಂದ ಲಂಕೆಯ ವೈಭೋಗ ನಿರ್ನಾಮವಾಗಿದ್ದರ ಬಗ್ಗೆ ಇರುವ ವಿವರಣೆಯ ಮೂಲಕ ಗಮನ ಸೆಳೆದರು.