Sunday, 24th November 2024

ಕೆಲವರ ಲಂಗೋಟಿಯನ್ನು ಸಾರ್ವಜನಿಕವಾಗಿ ಒಣಗಿ ಹಾಕಬೇಕು, ಏಕೆ ?

ನೂರೆಂಟು ವಿಶ್ವ

vbhat@me.com

ಅನೇಕ ಸಲ ಅಂದುಕೊಂಡಿದ್ದಿದೆ, ಈಗ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಲಂಕೇಶ್, ಡಿ.ಆರ್.ನಾಗರಾಜ, ಜಿ.ಕೆ.ಗೋವಿಂದ ರಾವ್, ಚಂದ್ರಶೇಖರ ಪಾಟೀಲ ಇವರೆಲ್ಲ ನಮ್ಮ ನಡುವೆ ಇರಬೇಕಿತ್ತೆಂದು. ಕೆ.ಮರಳುಸಿದ್ದಪ್ಪ, ಅಗ್ನಿ ಶ್ರೀಧರ ವಗೈರೆಗಳು ಈಗಲೂ ಇನ್ನೂ ಕ್ರಿಯಾಶೀಲರಾಗಿರಬೇಕಿತ್ತು. ಆಗ ಇವರು ಮಾತಾಡಿದ್ದೇ ವೇದ ವಾಕ್ಯವಾಗಿತ್ತು. ಇವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ.

ಇವರೆಲ್ಲ ಆಗ ತಮ್ಮ ಸುತ್ತ-ಮುತ್ತ ಒಂದು ಬಲವಾದ ಕೋಟೆಯನ್ನು ಕಟ್ಟಿಕೊಂಡಿದ್ದರು. ಒಂದು, ಅದನ್ನು ಭೇದಿಸಲು ಆಗುತ್ತಿರಲಿಲ್ಲ ಮತ್ತು ಎರಡು, ಅಂಥ ಪ್ರಯತ್ನ ಮಾಡಿದವರ ಮೇಲೆ ಇವರ ಶಿಷ್ಯಗಣ ಮುರುಕೊಂಡು ಬೀಳುತ್ತಿತ್ತು. ಅದರಲ್ಲೂ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ದೊಡ್ಡ ಕೊತ್ತಲವನ್ನೇ ನಿರ್ಮಿಸಿಕೊಂಡಿದ್ದರು. ಅವರನ್ನು ಟೀಕಿಸುವ ಎದೆಗಾರಿಕೆ ಯಾರಿಗೂ ಇರಲಿಲ್ಲ. ಅಂಥ ಪ್ರಯತ್ನ ಮಾಡುವ ಸುಳಿವು ಸಿಕ್ಕರೆ ಅವರು ತಮ್ಮ ಪತ್ರಿಕೆಯ ಮೂಲಕ ಅಟ್ಯಾಕ್ ಮಾಡು ತ್ತಿದ್ದರು. ಒಂದು ಹಂತದಲ್ಲಿ ಅನಂತಮೂರ್ತಿಯವರಂಥವರನ್ನೂ ಲಂಕೇಶ್ ತಮ್ಮ ಪತ್ರಿಕೆ ಮುಖಾಂತರ ಹೆದರಿಸಿ ಇಟ್ಟುಕೊಂಡಿದ್ದು ಬೇರೆ ಮಾತು.

ಲಂಕೇಶ್ ಅಸಲೀಯತ್ತನ್ನು ಸಾರ್ವಜನಿಕವಾಗಿ ವಿಮರ್ಶೆ ಮಾಡುವ ಅವಕಾಶ ಕನ್ನಡಿಗರಿಗೆ ಬಹಳ ವರ್ಷಗಳವರೆಗೆ ಸಿಕ್ಕಿರ ಲಿಲ್ಲ. ಅವರು ಸಾಕಿಕೊಂಡಿದ್ದ ವಂದಿ- ಮಾಗಧರು ಅವರನ್ನು ಪೊರೆಯುವ, ಉನ್ನತೀಕರಿಸುವ ಕೆಲಸವನ್ನು ವ್ಯವಸ್ಥಿತ ವಾಗಿ ಮಾಡಿಕೊಂಡು ಬಂದರು. ಅನಂತಮೂರ್ತಿಯವರು ಇದನ್ನು ಸಾಹಿತ್ಯಕ ಮತ್ತು ಬುದ್ಧಿಜೀವಿ ವಲಯದಲ್ಲಿ ಪರಿಣಾಮ ಕಾರಿಯಾಗಿ ಮಾಡಿದರು.

ತಮಗೆ ಪರಾಕು ಹೇಳುವ ವಿಮರ್ಶಕರಿಂದ ಅನಂತಮೂರ್ತಿಯವರು, ತಮಗಾಗದವರ ವಿರುದ್ಧ ದಾಳಿ-ಪ್ರತಿದಾಳಿಯನ್ನು
ಸದಾ ಚಾಲ್ತಿಯಲ್ಲಿಡುತ್ತಾ, ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಮುತುವರ್ಜಿವಹಿಸುತ್ತಿದ್ದರು. 1971ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜನಸಂಘದಿಂದ ಗೋಪಾಲಕೃಷ್ಣ ಅಡಿಗರು ಚುನಾವಣೆಗೆ ಸ್ಪರ್ಧಿಸಿದ್ದನ್ನೇ, ಇದೇ ಅನಂತ ಮೂರ್ತಿ ಮತ್ತು ಲಂಕೇಶ್ ಕೊನೆ ತನಕವೂ ಗೇಲಿ ಮಾಡಿದರು. ‘ಚೆಡ್ಡಿ ಕವಿ’ ಎಂದು ಅಪಹಾಸ್ಯ ಮಾಡಿದರು.

ಕವಿಗೆ ರಾಜಕೀಯ ಒಳ ಆಸೆ ಇದ್ದರೆ ಸಾಹಿತ್ಯಕ ಸ್ವಚ್ಛಂದತೆಗೆ ಧಕ್ಕೆಯಾಗು ತ್ತದೆ ಎಂದು ತೀರ್ಪು ನೀಡಿ, ಅಡಿಗರ ಸಾಹಿತ್ಯಕ ನೆಲೆಯನ್ನು ಪ್ರಶ್ನಿಸುತ್ತಾ, ಮೂದಲಿಸುತ್ತಾ ಬಂದರು. ಆದರೆ ಅದೇ ಲಂಕೇಶ್, ಪ್ರಗತಿರಂಗ ಎಂಬ ‘ಅರೆಗಂಡು’ ರಾಜಕೀಯ ಪಕ್ಷವನ್ನು ಕಟ್ಟಿದರು ಮತ್ತು ಅದೇ ಅನಂತ ಮೂರ್ತಿ ರಾಜ್ಯಸಭೆ ಚುನಾವಣೆಗೆ ನಿಂತು ಸೋತರು.

ಇವರೆಲ್ಲ ತಮ್ಮ ವೈಯಕ್ತಿಕ ಹಿತಾಸಕ್ತಿ ಸಾಧನೆಗಾಗಿ ಸಿದ್ಧಾಂತದ ಹೊದಿಕೆ, ಕವಚ ಧರಿಸಿಯೇ ತಮ್ಮ ವರಸೆಗಳನ್ನು ಪ್ರಯೋಗಿಸುತ್ತಾ ಬಂದಿದ್ದನ್ನು ನೋಡಿದ್ದೇವೆ. ವೈದಿಕ ಪರಂಪರೆ, ಸನಾತನ ಧರ್ಮ, ಹಿಂದುತ್ವವನ್ನು ವಿರೋಧಿಸುತ್ತಲೇ, ಅವೆಮನುವಾದದ ಗೊಡ್ಡು ನಂಬಿಕೆಗಳೆಂದು ಹೀಯಾ ಳಿಸುತ್ತಲೇ, ಕೊನೆಗೆ ತಮ್ಮ ಅಂತ್ಯಸಂಸ್ಕಾರವನ್ನು ಶುದ್ಧ ಬ್ರಾಹ್ಮಣ ಸಂಪ್ರ
ದಾಯದಂತೆ ನಡೆಸುವಂತೆ ಮುಚ್ಚಳಿಕೆ ಬರೆದಿಟ್ಟು ಅಸು ನೀಗಿದವರು. ಮತ್ತೊಬ್ಬರು ಶುದ್ಧ ಜಂಗಮರಂತೆ ಶವಕ್ಕೆ ವಿಭೂತಿ ಬಳಿದುಕೊಂಡು ಸಮಾಧಿ ಸೇರಿದರು.

ಅನಂತಮೂರ್ತಿ, ಕಾರ್ನಾಡ್ ಅವರಿಗೆ ವೈಚಾರಿಕ ಸ್ಪಷ್ಟತೆ ಇರಲಿಲ್ಲ. ಸೈದ್ಧಾಂತಿಕ ಬದ್ಧತೆಯಿರಲಿಲ್ಲ. ಆಡಳಿತ ಪಕ್ಷದ
ಕೃಪಾಪೋಷಿತ ಭಜನಾ ಮಂಡಳಿಯ ಏಕತಾರಿ ಕಲಾವಿದರಂತೆ ನಿರಂತರವಾಗಿ ವರ್ತಿಸುತ್ತಾ ಬಂದಿದ್ದನ್ನು ನೋಡಿದ್ದೇವೆ. ಆಗ ಇದ್ದಿದ್ದೇ ಮೂರು ಪತ್ರಿಕೆಗಳು. ಅನಂತಮೂರ್ತಿಯವರು ಆ ಪತ್ರಿಕೆಗಳಲ್ಲಿ ತಮಗೆ ತುತ್ತೂರಿ ಊದುವವರನ್ನು ಆಯಕಟ್ಟಿನ ಜಾಗದಲ್ಲಿ ಇಟ್ಟುಕೊಂಡಿದ್ದರು. ಆ ದಿನಗಳಲ್ಲಿ ಅನಂತಮೂರ್ತಿಯವರು, ತಮ್ಮ ಶಿಷ್ಯರನ್ನು ಕೆಲಸಕ್ಕೆ ಸೇರಿಸಿ ಕೊಳ್ಳುವಂತೆ ಸಂಪಾದಕರಿಗೆ ಶಿಫಾರಸು ಪತ್ರ ಕೊಡುತ್ತಿದ್ದರು.

ಅವರ ಶಿಫಾರಸು ಪತ್ರ ಹಿಡಿದು ಬಂದವರ ದೊಡ್ಡ ಪಡೆ ಕನ್ನಡ ಪತ್ರಿಕೋದ್ಯಮದಲ್ಲಿತ್ತು. ಈಗ ಆ ಸಂತತಿ ನಿವೃತ್ತವಾಗಿದೆ
ಅಥವಾ ಅಳಿವಿನ ಅಂಚಿನಲ್ಲಿದೆ. ಆ ಪಡೆ ಆ ದಿನಗಳಲ್ಲಿ ಡಾ.ಎಸ್.ಎಲ್.ಭೈರಪ್ಪನವರು ಎರಡು ಡಜನ್ ಕಾದಂಬರಿಗಳನ್ನು ಬರೆದರೂ, ಒಂದೂ ಕಾದಂಬರಿಯ ವಿಮರ್ಶೆ, ಸಂವಾದ, ಚರ್ಚೆ ಆಗದಂತೆ ನೋಡಿಕೊಂಡರು. ಅಷ್ಟೂ ಸಾಲದೆಂಬಂತೆ, ಡಾ.ಭೈರಪ್ಪನವರ ಮೇಲೆ ನಿರಂತರ ಆಕ್ರಮಣ ಬೇರೆ. ಇದಕ್ಕೆ ‘ನಂದಿ’ ಮಾರ್ಕಿನ ಠಸ್ಸೆ! ಈ ಟೋಳಿ ಅದೆಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿತ್ತು ಅಂದ್ರೆ ಅವರ ನೆಲೆಯನ್ನು ಪ್ರಶ್ನಿಸುವವರನ್ನು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡುವವರನ್ನು ಮುನ್ನೆಲೆಗೆ ಛೂ ಬಿಟ್ಟು ಅಪಹಾಸ್ಯ ಮಾಡಿಸುತ್ತಿತ್ತು.

ಇನ್ನು ಕಾಲೇಜು-ವಿಶ್ವವಿದ್ಯಾಲಯಗಳಲ್ಲೂ ಇವರ ಸಂತತಿಯೇ ಆಯಕಟ್ಟಿನ ಜಾಗಕ್ಕೆ ತಗುಲಿಕೊಂಡಿತ್ತು. ಅಲ್ಲಿಯೇ ವಿದ್ಯಾರ್ಥಿಗಳ ಮಿದುಳಿಗೆ ಕೈಹಾಕಿ ತೊಳೆಯುವ ಕೆಲಸ ಮಾಡುತ್ತಿದ್ದರು. ಇಂಥವರಿಗೆಲ್ಲ ಅಕಾಡೆಮಿ, ಪ್ರಾಧಿಕಾರ, ವಿಶ್ವ ವಿದ್ಯಾಲಯಗಳ ಬೇರೆ ಬೇರೆ ಹುದ್ದೆಗಳಿಗೆ ಶಿಫಾರಸು ಪತ್ರ. ಒಮ್ಮೆ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಅವರು ಉಭಯಕುಶಲೋಪರಿಯಲ್ಲಿ, ಅನಂತಮೂರ್ತಿ ಕೊಟ್ಟ ಶಿ-ರಸು ಪತ್ರಗಳನ್ನೆ ಸೇರಿಸಿ, ಪಿಎಚ್ .ಡಿ. ಪ್ರಬಂಧ ಬರೆಯಬಹುದು ಎಂದು ತಮಾಷೆ ಮಾಡಿದ್ದರು.

ಲಂಕೇಶ್ ಈ ರೀತಿ ಶಿಫಾರಸು ಪತ್ರ ಕೊಡುತ್ತಿರಲಿಲ್ಲ. ಆದರೆ ತಮ್ಮ ಮೆಸೆಂಜರುಗಳ ಮೂಲಕ ಪ್ರಭಾವ ಬೀರುತ್ತಿದ್ದರು. ಇಲ್ಲವೇ ಪತ್ರಿಕೆಯ ಮೂಲಕ ಫರ್ಮಾನು ಹೊರಡಿಸುತ್ತಿದ್ದರು. ಕನ್ನಡ ಪತ್ರಿಕೆಗಳ ಸಂಪಾದಕರ ಆಯ್ಕೆ ವಿಷಯದಲ್ಲೂ ಅನಂತಮೂರ್ತಿಯವರು ಮಾಲೀಕರ ಮೇಲೆ, ಅವರಿಗೆ ಆಪ್ತರಾದ ರಾಜಕಾರಣಿಗಳ ಮೂಲಕ ಪ್ರಭಾವ ಬೀರುತ್ತಿದ್ದರು. ಅನಂತಮೂರ್ತಿ ಮತ್ತು ಲಂಕೇಶ್ ಅವರಿಬ್ಬರ ನೀಲಿ ಕಂಗಳ ‘ಹುಡುಗ’ನಾಗಿ ಡಿ.ಆರ್ .ನಾಗರಾಜ್ ಇದ್ದರು. ಅವರಲ್ಲಿ ನಿಜಕ್ಕೂ ಒಂದಷ್ಟು ಮೆಚ್ಚುವ ಗುಣಗಳಿದ್ದವು. ಆದರೆ ಆ ಸಾಹಿತ್ಯಕ ಪಾಳೇಗಾರಿಕೆಯನ್ನು ಮೆಟ್ಟಿ ನಿಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಅವರೂ ಆ ಪಾಳೇಗಾರಿಕೆಯ ಒಂದು ಭಾಗವೇ ಆಗಿದ್ದು ದುರ್ದೈವ.

‘ಕನ್ನಡದ ಸಾಹಿತಿಗಳು, ಲೇಖಕರು, ಪತ್ರಕರ್ತರು ಕೇಳಿರದ ಚಿಂತಕರ ಹೆಸರುಗಳನ್ನು ಉದ್ಧರಿಸಿ, ಅವರಲ್ಲಿ ಗಾಬರಿ ಹುಟ್ಟಿ
ಸುತ್ತಿದ್ದರು. ಇವೆ ಪತ್ರಿಕಾ ಬರಹಗಳೇ ಅಲ್ಲ. ನೀವು ಪೋಲಿಷ್ ಪತ್ರಕರ್ತ ರಿಯಾಸರ್ಡ್ ಕಪುಸಿನ್ಸ್ಕಿಮತ್ತು ಸ್ಪ್ಯಾನಿಷ್ ಪತ್ರಕರ್ತ ಅರ್ತುರೋ ಪೆರೆಜ್ ರೇವೆರ್ಟ್, ಎಮಿಲಿಯಾ ಪರ್ದೋ ಬಝನ್ ಓದಿಕೊಳ್ಳಬೇಕು. ಅವರೆಲ್ಲ ವರ್ತಮಾನದ ಭೂಮಿಕೆಯಲ್ಲಿ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಮುಂಗಾಣ್ಕೆಯ ಫಲ ಕಟ್ಟಿಕೊಡುವ ಅನಿರುದ್ಧಾತ್ಮಕವಾಗಿ ಬರೆಯುವ ಸವ್ಯಸಾಚಿ ಪತ್ರಕರ್ತರು’ ಎಂದುಬಿಡುತ್ತಿದ್ದರು.

ಇವರ ಮಾತುಗಳನ್ನು ಕೇಳಿದ ಬೆಂಗಳೂರಿನ ಇಂಗ್ಲಿಷ್ ಪತ್ರಿಕೆಯ ಸಂಪಾದಕೀಯ ಸಲಹೆಗಾರೊಬ್ಬರು, ನನಗೆ ಡಿ.
ಆರ್.ನಾಗರಾಜ್ ಒಂದು ಆಂಗಲ್‌ನಿಂದ ನಿರಧ್ ಚೌಧರಿ ಥರ ಕಾಣುತ್ತಾರೆ, ಅವರ ವಿಚಾರಗಳು ಬ್ಲೇಕ್, ಬೋದಿಲೇರ್‌ನ
ಪಡಿಯಚ್ಚಿನಂತೆ ಕಾಣುತ್ತದೆ. ವಸಾಹತೋತ್ತರ ದಿನಗಳ ಜಾಗತಿಕ ವಿಚಾರಗಳನ್ನು ಪರಿವರ್ತಿಸುತ್ತ, ಸಮಕಾಲೀನ ಕನ್ನಡ
ಸಾಹಿತ್ಯ, ಸಾಂಸ್ಕೃತಿಕ ಬದುಕಿಗೆ ತೋರುದೀಪ ಬೆಳಗುವ ಚಿಂತಕರಾಗಿ ನನಗೆ ಕಾಣಿಸುತ್ತಾರೆ’ ಎಂದು ತಾರೀಫ್ ಮಾಡಿದ್ದರು.

ಕಾರಣ, ಇವರ ಮುಂದೆಯೂ ಡಿ.ಆರ್. ನಾಗರಾಜ, ಪೋಲಿಷ್ ಮತ್ತು ಸ್ಪ್ಯಾನಿಷ್ ಕವಿ, ಸಾಹಿತಿ, ಪತ್ರಕರ್ತರ ಹೆಸರುಗಳನ್ನು ಹೇಳಿ ದಂಗುಬಡಿಸಿದ್ದರು ಮತ್ತು ತಮ್ಮ ಸನಿಹಕ್ಕೆ ಬರದಂತೆ ವಿದ್ಯುತ್ ತಂತಿಬೇಲಿ ಹಾಕಿಬಿಟ್ಟಿದ್ದರು. ಕನ್ನಡವನ್ನೇ ನೆಲೆ ಯಾಗಿಸಿಕೊಟ್ಟುಕೊಂಡು, ಕನ್ನಡಿಗರಿಗೆ ಕಾಣುತ್ತಾ, ಆದರೆ ಕೈಗೆ ಸಿಗದಂತೆ ಅಡ್ಡಾಡಿಕೊಂಡಿದ್ದ ನಾಗರಾಜ್, ಅಂತಾ ರಾಷ್ಟ್ರೀಯ ಗೂಡನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಅವರಿಗೆ ಅನಂತಮೂರ್ತಿ ಅವರ ಮೇಲುಸ್ಥರದ ಕನೆಕ್ಷನ್ ಮತ್ತು ಲಂಕೇಶ್ ಅವರ ಪಾಳೇಗಾರಿಕೆಯ ಪಾಪಾಸುಕಳ್ಳಿತನದ
ಅರಿವಿತ್ತು. ಹೀಗಾಗಿ ಅವರೆಲ್ಲೂ ತರಚಿಕೊಳ್ಳಲಿಲ್ಲ. ತಮ್ಮ ಹಾಯಿದೋಣಿ ಸುಗಮ ಸಂಚಾರಕ್ಕೆ ಹೇಗೆ ಹುಟ್ಟು ಹಾಕಬೇಕೆಂಬ ಪಟ್ಟು ಅವರಿಗೆ ಕರಗತವಾಗಿತ್ತು. ಇನ್ನು ಗಿರೀಶ್ ಕಾರ್ನಾಡ್. ಅವರೂ ಸಹ ಆರಂಭದಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಸೀಮಿತರಾಗಿದ್ದರು. ಅವರಿಗೆ ಧಾರವಾಡದಲ್ಲಿ ಸಿಕ್ಕ ಆರಂಭದ ಮತ್ತು ಕೊನೆಯ ಸಾಹಿತಿಗಳೆಂದರೆ ಕೀರ್ತಿನಾಥ ಮತ್ತು ಕುರ್ತಕೋಟಿ. ಅವರು ಸಹ ಯಾರ ಕೈಗೂ ನಿಲುಕದೇ ಎಲ್ಲರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡರು. ತಮ್ಮ ಪಾಡಿಗೆ ನಾಟಕ, ಸಿನಿಮಾ ಮಾಡಿಕೊಂಡಿದ್ದರು. ಪುಣೆ, ಮುಂಬೈ, ದಿಲ್ಲಿ, ಆಕ್ಸ್ ಫರ್ಡ್, ಲಂಡನ್‌ನಲ್ಲಿದ್ದರು. ಗಿರೀಶ್ ಕನ್ನಡದಲ್ಲಿ ಬರೆದಿದ್ದನ್ನು, ಕುರ್ತಕೋಟಿ ಅವರಿಂದ ಕನ್ನಡಕ್ಕೆ ಅನುವಾದಿಸುವುದು ಒಳ್ಳೆಯದು ಎಂದು ಚಂಪಾ ಗೇಲಿ ಮಾಡುತ್ತಿದ್ದರು. ಅದರಲ್ಲಿ ಸತ್ಯಾಂಶವೂ ಇತ್ತು.

ಬೆಂಗಳೂರಿಗೆ ಬರಬೇಕೆಂದರೆ, ಅನಂತಮೂರ್ತಿ, ಲಂಕೇಶ್ ಮುಂತಾದವರು ಕಟ್ಟಿದ ಬೇಲಿ ಜಿಗಿದು ಬರಬೇಕೆಂಬುದು ಕಾರ್ನಾಡ್‌ಗೆ ಗೊತ್ತಿತ್ತು. ಹೀಗಾಗಿ ತಾವು ಸೇರಬೇಕಾದ ಬಣವನ್ನು ಅವರು ಮೊದಲೇ ಗುರುತಿಸಿಕೊಂಡಿಸಿದ್ದರು. ಅಷ್ಟಕ್ಕೂ ಆ ದಿನಗಳಲ್ಲಿ ಎಡಪಂಥೀಯರು ಅರ್ಥಾತ್ ಬೆಂಗಳೂರಿನ ಬುದ್ಧಿಜೀವಿ (ಚಂಪಾ ಹೇಳುತ್ತಿದ್ದಂತೆ ಬೆಂಬುಜೀಗಳು)ಗಳದೇ ಪಾರಮ್ಯ. ಅವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಬಲಪಂಥೀಯ ವಾದ ಇದ್ದರೂ, ಅವರಿಗೆ ಸೂಕ್ತ ವಕ್ತಾರರಾಗಲಿ, ಮೆಂಟೋರುಗಳಾಗಲಿ, ಪಂಥ ಕಟ್ಟುವ ಪಾಳೇಗಾರರಾಗಲಿ, ಅವರ ವಾದವನ್ನು ಎತ್ತಿ ಹಿಡಿಯುವ ಪತ್ರಿಕೆಯಾಗಲಿ ಇರಲಿಲ್ಲ. ಹೀಗಾಗಿ ಎಡಪಂಥೀಯರು ಅಥವಾ ಪ್ರಗತಿಪರರು ಎಂದೆನಿಸಿಕೊಂಡವರದೇ ಪಾರುಪತ್ಯ ಎಡೆ ಕಾಣುತ್ತಿತ್ತು.

ಬಲಪಂಥೀಯ ವಾದವನ್ನು ಪರಿಣಾಮಕಾರಿಯಾಗಿ ಸಮರ್ಥಿಸುವ, articulate ಮಾಡುವ, ಎಡಪಂಥೀಯ ದಿಗ್ಗಜರನ್ನು ಕೆಣಕುವ, ಅವರನ್ನು ಸೆಳೆದುಕೊಂಡು ಮೀಟುವ, ಅವರದೇ ಅಖಾಡದಲ್ಲಿ ಮಣಿಸುವ ಪ್ರತಿಭೆಗಳು ಇರಲಿಲ್ಲ ಎಂದಲ್ಲ, ಇದ್ದರು. ಆದರೆ ಅವರಿಗೆ ಸೂಕ್ತ ವೇದಿಕೆ ಇರಲಿಲ್ಲ. ಅವರ ವಿಚಾರಗಳನ್ನು ಪುರಸ್ಕರಿಸುವವರಿದ್ದರು. ಆದರೆ ಅವರಲ್ಲಿ ಸಾಂಕ ಶಕ್ತಿ ಯಿರಲಿಲ್ಲ. ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಶುರುವಾದ ‘ವಿಜಯ ಕರ್ನಾಟಕ’ ಪತ್ರಿಕೆ ಬಲಪಂಥೀಯ ವಿಚಾರ ಧಾರೆಗೆ ಕೆಂಪುಗಂಬಳಿ ಹಾಸಿತು.

ಅಲ್ಲಿ ತನಕ ಯಾವ ಪತ್ರಿಕೆಯೂ ಬಲಪಂಥೀಯ ಮತ್ತು ರಾಷ್ಟ್ರೀಯವಾದಿ ವಿಚಾರಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರಲಿಲ್ಲ. ಅಲ್ಲಿಂದ ಎಡಪಂಥೀಯರ ಎಡಬಿಡಂಗಿತನವನ್ನು ಪ್ರಶ್ನಿಸುವ, ಅವರ ಸೈದ್ಧಾಂತಿಕ ಪೊಳ್ಳುತನವನ್ನು ಬಯಲು ಮಾಡುವ ಹೊಸ ಸಂಪ್ರದಾಯ ಆರಂಭವಾಯಿತು. ಅನಂತಮೂರ್ತಿ, ಗೋವಿಂದರಾವ್, ಮರಳುಸಿದ್ದಪ್ಪ, ಕಾರ್ನಾಡ್ ನೇತೃತ್ವದ ಎಡಪಂಥೀಯರಿಗೆ ತಮ್ಮನ್ನು ಪ್ರಶ್ನಿಸುವ ಬಹುದೊಡ್ಡ ಸಮೂಹವಿದೆ ಎಂಬುದು ಸಖೇದಾಶ್ಚರ್ಯವನ್ನು ಉಂಟು ಮಾಡಿತು.

ಇದನ್ನು ಸ್ವತಃ ಅನಂತಮೂರ್ತಿಯವರು ತಮ್ಮ ಆತ್ಮಕಥನ ‘ಸುರಗಿ’ಯಲ್ಲಿ ಪ್ರಸ್ತಾಪಿಸಿದ್ದಾರೆ. ಪತ್ರಿಕೆಯೊಂದರ ಸಂಪಾದಕ ರಿಂದ ತಮ್ಮ ಮೇಲೆ ಎಸ್ಸೆಮ್ಮೆಸ್ ದಾಳಿ ನಡೆಯಿತು ಎಂದು ಅವರು ಅಲವತ್ತುಕೊಂಡಿದ್ದಾರೆ. ಎಡಪಂಥೀಯರ ವಿಚಾರಗಳು ಶುದ್ಧ ಲೊಳಲೊಟ್ಟೆ ಎಂಬುದು ಹತ್ತಾರು ಸಂದರ್ಭಗಳಲ್ಲಿ ಅನಾವರಣಗೊಂಡಿತು. ಬಹು ದೊಡ್ಡ ಸಂಖ್ಯೆಯಲ್ಲಿದ್ದ ರಾಷ್ಟ್ರವಾದಿ ವಿಚಾರಗಳನ್ನು ಬೆಂಬಲಿಸುವವರ ದಿವ್ಯ ಮೌನ ಅಷ್ಟೊತ್ತಿಗೆ ಕಟ್ಟೆಯೊಡೆದಿತ್ತು. ಅನಂತರ ಎಡಪಂಥೀಯರ ಎಡಬಿಡಂಗಿತನ ವನ್ನು ನಿರಂತವಾಗಿ ಬಯಲು ಮಾಡುವ ಲೇಖಕರು, ಚಿಂತಕರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು ಮುಂದೆ ಬಂದರು.

ಇದು ಮುಂದೆ ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೂ ಕಾರಣವಾಗಿದ್ದು ಗಮನಾರ್ಹ. ಅದಾಗಿ ಹತ್ತು ವರ್ಷಗಳ ನಂತರ, ಸಾಮಾಜಿಕ ಜಾಲತಾಣ ಗಳ ಪ್ರವಾಹದಲ್ಲಿ, ಬಲಪಂಥೀಯ ಮತ್ತು ರಾಷ್ಟ್ರವಾದಿ ಚಿಂತನೆಯ ಟೊಳ್ಳುತನವನ್ನು ಪ್ರಶ್ನಿಸುವ, ಸವಾಲೆಸೆಯುವ, ಸಂವಾದಕ್ಕೆಳೆಯುವ ಹೊಸ ಹೊಸ ಲೇಖಕರು ಮುನ್ನೆಲೆಗೆ ಬರಲಾರಂಭಿಸಿದರು. ಇವರು ಸಮಾಜದ ಎಲ್ಲಾ ಸ್ತರಗಳನ್ನು, ಕ್ಷೇತ್ರಗಳನ್ನು ಮತ್ತು ಮಜಲುಗಳನ್ನು ಪ್ರತಿನಿಽಸುವವರಾಗಿದ್ದರು.

ಭಾರತದಲ್ಲಿ ಬಲವಾಗಿ ಎಲ್ಲಾ ರಂಗಗಳಲ್ಲಿ ಬೇರೂರಿದ್ದ ಎಡಪಂಥೀಯ ವಿಚಾರವಾದಿಗಳ ಬುಡಕ್ಕೆ ಇವರು ಪಿಕಾಸಿ ಇಟ್ಟಿದ್ದರು. ಈ ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿ ಪಕ್ಷ ಹೇಳ ಹೆಸರಿಲ್ಲದಂತೆ ಪರಾಭವಗೊಂಡಿತು. ಆ ಮೂಲಕ ಅವರ ಪ್ರಾಬಲ್ಯ ಕೇಂದ್ರ ಸರಕಾರದ ಮಟ್ಟದಲ್ಲಿ ದುರ್ಬಲಗೊಂಡಿತು. ಭಾರತದ ಪ್ರಸಕ್ತ ವರ್ತಮಾನದ ಸಂದರ್ಭದಲ್ಲಿ, ಎಡಪಂಥೀಯ ಚಿಂತನೆ ಅಪ್ರಸ್ತುತ ಎಂಬುದು ಮನವರಿಕೆಯಾಯಿತು. ಇದು ಮುಸ್ಲಿಂ ಓಲೈಕೆ ಅಥವಾ ಸೆಕ್ಯುಲರಿಸಂ ರೂಪದಲ್ಲಿ ಪ್ರಕಟ ಗೊಂಡಿದ್ದು ಇನ್ನೊಂದು ವಿಚಾರ ಮತ್ತು ವಿಕಾರ.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬರುವುದರಲ್ಲಿ ಈ ಪರಿವರ್ತನೆಯ ಮೇಳೈಸುವಿಕೆ ಸಂಪನ್ನಗೊಂಡ ಚಮತ್ಕಾರವನ್ನು ಗುರುತಿಸಬಹುದು. ಮೊನ್ನೆ ಸುವರ್ಣ ನ್ಯೂಸ್‌ನ ಜನಪ್ರಿಯ ನಿರೂಪಕ ಅಜಿತ್ ಹನುಮಕ್ಕನವರ ಕಾರ್ಯಕ್ರಮದಲ್ಲಿ ಮಾಜಿ ನಟ, ಚೇತನ್ ಅಹಿಂಸಾ ಎಂಬ ಅವಿವೇಕಿ, ಮಾತು ಮಾತಿಗೆ  ಬೆತ್ತಲಾಗುತ್ತಿದ್ದುದನ್ನು ನೋಡುವಾಗ, ಈಗ ಅನಂತಮೂರ್ತಿಯವರ ಆ ‘ಟೋಳಿ’ ಇರಬೇಕಿತ್ತು ಎಂದು ಪದೇ ಪದೆ ಅನಿಸಿತು. ಈಗ ಯಾರೂ ‘ಅಡ್ಡಬಡಿಗೆ’ ಬೀಸಿ ಪರಾರಿ ಆಗುವಂತಿಲ್ಲ. ಹಿಟ್ ಅಂಡ್ ರನ್ (ಗುದ್ದೋಡು) ಮಾಡುವಂತಿಲ್ಲ.

ಏನೋ ಹೇಳಿ, ಮಂಕುಬೂದಿ ಎರಚಿ ಓಡಿ ಹೋಗುವಂತಿಲ್ಲ. ಜನ ಪ್ರಶ್ನಿಸುತ್ತಾರೆ. ಚೇತನ್‌ನ ಹಿಂಸೆಯನ್ನು ಯಾರೂ ಸಹಿಸಿ ಕೊಳ್ಳುವುದಿಲ್ಲ. ಆತನನ್ನು ಬಕ್ಕಬೋರಲು ಮಾಡಿ, ಲೆಕ್ಕ ಚುಕ್ತಾ ಮಾಡಿಯೇ ಕಳಿಸಲಾಗುತ್ತದೆ. ಏನೋ ಅಪದ್ಧ, ಅಸಂಬದ್ಧ ಮಾತಾಡಿ,ತೋಳಸಂಬಟ್ಟೆ ವಾದಿಸಿ, ದಕ್ಕಿಸಿಕೊಳ್ಳಬ ಎಂಬ ಹುಂಬತನವನ್ನೂ ಯಾರೂ ಪ್ರದರ್ಶಿಸಲಾರರು. ಅಜಿತ್ ಹನುಮಕ್ಕನವರ ಆ ಚೇತನ್‌ನನ್ನು ಸಂವಾದಕ್ಕೆ ಕರೆಯಬಾರದಿತ್ತು, ಆತನಿಗೆ ಇಷ್ಟೆ ಮಹತ್ವ ನೀಡಬಾರದಿತ್ತು ಎಂದು ಅನೇಕರು ವಾದಿಸುತ್ತಿದ್ದಾರೆ.

ಒಂದು ವೇಳೆ ಆತನನ್ನು ಒದ್ದೆ ಬಟ್ಟೆಯಂತೆ ಹಿಂಡಿ, ಸಾರ್ವಜನಿಕವಾಗಿ ಒಣ ಹಾಕದಿದ್ದರೆ, ಚೇತನ್ ಅನೇಕರ ಕಣ್ಣಲ್ಲಿ ಸಮಾನತೆಯ ನವಹರಿಕಾರನಂತೆ, ಮಹಾನ್ ಬುದ್ಧಿಜೀವಿಯಂತೆ, ವಿಚಾರವಾದಿಯಂತೆ ಕಂಗೊಳಿಸಿ ಬಿಡುತ್ತಿದ್ದ. ಲಂಗೋಟಿ ಯನ್ನು ಎಲ್ಲರಿಗೂ ಕಾಣುವ ಹಾಗೆ ಒಣ ಹಾಕದಿದ್ದರೆ, ಅವರು ಧರಿಸುವುದೇ ಲಂಗೋಟಿ ಎಂಬುದು ಮಹಾಜನತೆಗೆ ಗೊತ್ತೇ ಆಗುವುದಿಲ್ಲ. ಈಗ ಅನಂತಮೂರ್ತಿ, ಲಂಕೇಶ್, ಕಾರ್ನಾಡ್ ಇರಬೇಕಿತ್ತು ಅಂತ ನನಗೇಕೆ ಅನಿಸಿತು ಎಂಬುದು ನಿಮಗೆ ಅರ್ಥವಾಗಿರಲಿಕ್ಕೆ ಸಾಕು.