ನವದೆಹಲಿ: ರಾಹುಲ್ ಗಾಂಧಿ ಸಾರಥ್ಯದ ‘ಭಾರತ್ ಜೋಡೋ ಯಾತ್ರೆ ಗುರುವಾರ 100ನೇ ದಿನಕ್ಕೆ ಕಾಲಿಟ್ಟಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಯಾತ್ರೆ ಕಳೆದ ಮೂರು ತಿಂಗಳಲ್ಲಿ ಹಲವು ವಿವಾದಗಳನ್ನು ಹುಟ್ಟು ಹಾಕಿದೆ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. 2, 800 ಕಿ.ಮೀ ವ್ಯಾಪ್ತಿಯಲ್ಲಿ ಬೆಂಬಲಿಗರು ಮತ್ತು ವಿರೋಧಿಗಳ ಗಮನ ಸೆಳೆಯುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ.
ಸೆಲೆಬ್ರಿಟಿಗಳು, ಅಕಾಡೆಮಿಕ್ ತಜ್ಞರು ಸೇರಿದಂತೆ ಕೆಲ ಪ್ರಸಿದ್ಧ ವ್ಯಕ್ತಿಗಳು ಕೂಡಾ ರಾಹುಲ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಗುಜರಾತ್ ಮತ್ತು ಹಿಮಾಚಲ ಪ್ರದೇಶ ದಲ್ಲಿ ಯಾತ್ರೆ ಸಾಗದಿರುವುದನ್ನು ಪ್ರಶ್ನಿಸಿದ್ದಾರೆ.
ಯಾತ್ರೆಯಿಂದ ಚುನಾವಣೆಯಲ್ಲಿ ಏನಾದರೂ ಲಾಭವಾಗುತ್ತಿದೆಯೇ ಎಂಬ ಪ್ರಶ್ನೆಗಳ ನಡುವೆ ಇತ್ತೀಚಿಗೆ ಮುಕ್ತಾಯಗೊಂಡ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಗೆದ್ದರೆ, ಗುಜರಾತ್ ನಲ್ಲಿ ತೀವ್ರ ಕಳಪೆ ಫಲಿತಾಂಶ ಪಡೆದಿದೆ. ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಯಾತ್ರೆ ಬೀರಿರುವ ಸ್ಪಷ್ಟ ಪರಿಣಾಮ ತಿಳಿದು ಬರಲಿದೆ.
ಭಾರತ್ ಜೋಡೋ ಯಾತ್ರೆ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ‘ಗೇಮ್ ಚೇಂಜರ್’ ಆಗಬಹುದು ಎಂದು ಮಾಜಿ ಕಾಂಗ್ರೆಸ್ ಮುಖಂಡ ಸಂಜಯ್ ಜಾ ಹೇಳುತ್ತಾರೆ. ಈ ಯಾತ್ರೆ ರಾಹುಲ್ ಗಾಂಧಿಯ ರಾಜಕೀಯ ಬ್ರ್ಯಾಂಡ್ ನ್ನು ಪುನರುಜ್ಜೀವನಗೊಳಿಸಿದೆ. ಇದರಿಂದಾಗಿ ಬಿಜೆಪಿ ‘ನಕಲಿ ಸುದ್ದಿ, ದುರುದ್ದೇಶಪೂರಿತ ಪ್ರಚಾರದಿಂದ ಮುಂದೆ ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡುವಂತಿಲ್ಲ ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದ ಫಲಿತಾಂಶ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲಬಹುದು ಎಂಬುದನ್ನು ತೋರಿಸಿದೆ. ಖಂಡಿತವಾಗಿಯೂ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಭಾರತ್ ಜೋಡೋ ಯಾತ್ರೆ ಪರಿಣಾಮ ಬೀರಲಿದೆ ಎಂದು ಜಾ ಹೇಳಿದರು.