Friday, 22nd November 2024

ಶತಕದ ಬರ ನೀಗಿಸಿಕೊಂಡ ಚೇತೇಶ್ವರ ಪೂಜಾರ

ತ್ತೊಗ್ರಾಮ್‌: ಟೀಂ ಇಂಡಿಯಾ ಬ್ಯಾಟರ್ ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ವೇಗದ ಶತಕ ಸಿಡಿಸಿದ್ದಾರೆ.

ಚತ್ತೊಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 34 ವರ್ಷದ ಪೂಜಾರ 130 ಎಸೆತಗಳಲ್ಲಿ ಮೂರು ಅಂಕಿಗಳ ಸಾಧನೆ ಮಾಡಿದರು.

2013ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ನಲ್ಲಿ 146 ಎಸೆತಗಳಲ್ಲಿ ಮೂಡಿಬಂದಿದ್ದ 100ರನ್‌ಗಳು ಪೂಜಾರ ಅವರ ಹಿಂದಿನ ವೇಗದ ಶತಕವಾಗಿತ್ತು.

ಅಂದಹಾಗೆ, ಪೂಜಾರ ಅವರು 2019ರ ನಂತರ ಶತಕಗಳ ಬರ ಅನುಭವಿಸಿದ್ದರು. ಕಳೆದ 52 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಸಿಡಿಸಿದ ಮೊದಲ ಶತಕವಿದು.

2019ರ ಜನವರಿ 3ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಕೊನೇ ಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ಅವರು 193 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಬಾಂಗ್ಲಾ ದೇಶದ ವಿರುದ್ಧ ಮೂಡಿಬಂದಿರುವ ಈ ಶತಕವೂ ಸೇರಿದಂತೆ ಪೂಜಾರ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ವರೆಗೆ 19 ಶತಕಗಳನ್ನು ದಾಖಲಿಸಿದ್ದಾರೆ.