ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಇಂದು ದೇಶದಲ್ಲಿ ಸಿನಿಮಾ ನೋಡುವ ದೃಷ್ಟಿಕೋನವೇ ಬದಲಾಗಿದೆ. ಬರಿಯ ಮನರಂಜನೆಗಾಗಿ ನೋಡುತ್ತಿಲ್ಲ. ಚಿತ್ರದ ಉದ್ದೇಶ, ಸಾಮಾಜಿಕ ಸಂದೇಶ, ಸಾಂಸ್ಕೃತಿಕತೆ, ನಟನಟಿಯರ ಸಾಮಾಜಿಕ ಬದ್ಧತೆ-ಸ್ಪಂದನೆ, ವೈಚಾರಿಕತೆ, ಪ್ರಾಮಾಣಿ ಕತೆ, ಗುಣ ವರ್ತನೆ, ವೈಯಕ್ತಿಕ ವಿಷಯಗಳು ಇವೆಲ್ಲವನ್ನೂ ಪರಿಗಣಿಸುತ್ತಿದ್ದಾನೆ ಪ್ರೇಕ್ಷಕ ಪ್ರಭು!
ಹಾಲಿವುಡ್ ಜೇಮ್ಸ್‌ಬಾಂಡ್ ಚಿತ್ರದಂತೆ ಕನ್ನಡದಲ್ಲಿ ವರನಟ ಡಾ.ರಾಜ್ ಕುಮಾರ್ ಅವರನ್ನು ಬಾಂಡ್ ಪಾತ್ರದಲ್ಲಿ ತೋರಿಸಲು ದೊರೈ (ಭಗವಾನ್) ಜೋಡಿ ಮುಂದಾಗುತ್ತದೆ. ಆ ಚಿತ್ರದಲ್ಲಿ ಈಜುಡುಗೆ ತೊಟ್ಟ ನಾಯಕಿಯೊಂದಿಗೆ ಅಭಿನಯಿಸುವ ಒಂದು ದೃಶ್ಯವಿರುತ್ತದೆ. ಆದರೆ ಹೆಣ್ಣನ್ನು ಅರೆನಗ್ನವಾಗಿ ತೋರಿಸುವಂಥ ಆ ದೃಶ್ಯದಲ್ಲಿ ಅಭಿನಯಿಸಲು ರಾಜಣ್ಣ ನವರು ಹಿಂಜರಿಯುತ್ತಾರೆ.
ಅದಕ್ಕೆ ಪೂರಕವಾಗಿ ರಂಗಭೂಮಿಯ ಹಿರಿಯ ಗುಬ್ಬಿವೀರಣ್ಣನವರೂ ‘ಬೇಡ ಮುತ್ತಣ್ಣಾ, ನಿನ್ನನ್ನು ಜನ ಅಂಥ ದೃಶ್ಯದಲ್ಲಿ ಕಂಡರೆ ನಿನ್ನ ಮೇಲಿನ ಗೌರವಕ್ಕೆ ದಕ್ಕೆ ಆಗಬಹುದು, ಯೋಚಿಸಿ ನೋಡು’ ಎಂದು ಆಪ್ತಸಲಹೆ ನೀಡುತ್ತಾರೆ. ಮುಂದೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಚಿ.ಉದಯಶಂಕರ್ ಅವರ ‘ಯಾರೇ ಕೂಗಾಡಲಿ’ ಸಾಹಿತ್ಯವನ್ನು ಸ್ವತಃ ರಾಜ್ ಅವರೇ ಹಾಡುವ ಸಂದರ್ಭ ಬಂದಾಗ ಆ ಗೀತೆಯ ಸಾಹಿತ್ಯವನ್ನು ಓದಿದ ರಾಜ್ ಅವರು ಗಾಬರಿಗೊಳ್ಳುತ್ತಾರೆ.
ಏಕೆಂದರೆ ಮಾನವನ ಕೆಟ್ಟಗುಣಗಳನ್ನು ವಿಡಂಬನೆ ಮಾಡಿ ಮಾನವನಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂಬ ಚಾಟಿ ಏಟಿನಂಥ ಸಾಹಿತ್ಯ. ಹೀಗೆ ಅಂದು ರಾಜಣ್ಣನವರು ತನಗೆ ಬಡತನವಿದ್ದರೂ ಮೊದಲು ಯೋಚಿಸುತ್ತಿದ್ದದ್ದು ಸಾಮಾಜಿಕ ದೃಷ್ಟಿಕೋನದ ಬಗ್ಗೆ. ತನ್ನಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದೆಂಬುದು ಹಾಗೂ ಅಭಿಮಾನಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕೆನ್ನುವ ಪ್ರಜ್ಞೆ ಅವರಲ್ಲಿ ಕೊನೆಯವರೆಗೂ ಜಾಗೃತವಾಗಿತ್ತು. ಒಬ್ಬ ಜನಪ್ರಿಯ ಕಲಾವಿದ ಹೇಗಿರಬೇಕು ಹೇಗೆ ಬದುಕಬೇಕು ಮತ್ತು ತಾನು ಏರಿದ ಎತ್ತರಕ್ಕೆ ಸಮನಾಗಿ ಎಷ್ಟು ‘ಚಿಕ್ಕವನಾಗಿ’ ಇರಬೇಕೆನ್ನುವುದಕ್ಕೆ
ರಾಜ್ ಅವರು ಒಂದು ದಂತಕಥೆ.
ಹೀಗಾಗಿ ಇಂದೂ ಅವರ ಸಮಾಧಿ ಕನ್ನಡಿಗರ ಹರಕೆಯ ಗುಡಿಯಾಗಿದೆ. ಒಂದು ಕಾಲದಲ್ಲಿ ಚಿತ್ರವೊಂದು ಸಿಕ್ಕಾಪಟ್ಟೆ ಜನಮೆಚ್ಚುಗೆ ಗಳಿಸಿಬಿಟ್ಟರೆ ಶುಕ್ರವಾರದ ದಿನಪತ್ರಿಕೆಗಳ ಪುಟಗಳಲ್ಲಿ ‘ಪ್ರೊಡಕ್ಷನ್ ನಂ.’ ನೊಂದಿಗೆ ನಾಲ್ಕೈದು ಚಿತ್ರಗಳು
ಘೋಷಣೆಯಾಗಿಬಿಡುತ್ತಿದ್ದವು. ಒಂದು ಗೆಲುವು, ಒಂದು ಯಶಸ್ಸು ನಿರ್ಮಾಪಕರಿಗೆ ಹತ್ತು ಚಿತ್ರಗಳ ನಿರ್ಮಾಣಕ್ಕೆ ಧೈರ್ಯ ತಂದುಕೊಡುತ್ತಿದ್ದವು.
ಅನೇಕ ನಾಯಕರ ಚಿತ್ರಗಳಂತೂ ವಾರಕ್ಕೆ ಎರಡೆರಡು ಬಿಡುಗಡೆಗೊಳ್ಳುತ್ತಿದ್ದರೆ, ಏಕಕಾಲಕ್ಕೆ ಮೂರ್ನಾಲ್ಕು ಚಿತ್ರಗಳ ಚಿತ್ರೀಕರಣಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ಕಾಲಘಟ್ಟದಲ್ಲಿ ಬರಿಯ 16 ಕೋಟಿ ಬಂಡವಾಳದ, ಸ್ಟಾರ್ ಗಿರಿ ಇಲ್ಲದ, ಅದೂ ಒಂದು ಪ್ರಾದೇಶಿಕತೆ ಮತ್ತು ಸಂಸ್ಕೃತಿ ಕುರಿತಾದ ಕನ್ನಡಚಿತ್ರ ‘ಕಾಂತಾರ’ 500 ಕೋಟಿ ರುಪಾಯಿಗಳ ಗಳಿಕೆಯತ್ತ ಸಾಗಿ ಇಡೀ ಭಾರತ ಚಿತ್ರರಂಗದ ಇತಿಹಾಸದ ನಂಬರ್ ಒನ್ ಚಿತ್ರವಾಗಿರುವುದು ಒಂದು ಅಮೋಘ ದಾಖಲೆ.
ದೈವಾನುಗ್ರಹದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗದ ‘ಫಾರ್ಮುಲಾ’ಗಳನ್ನೇ ದೂಳೀಪಟ ಮಾಡಿಬಿಟ್ಟಿದೆ. ಇಂಥ ಚಿತ್ರವನ್ನು ನಿರ್ದೇಶಿಸಿ ನಟಿಸಿದ ‘ಹೀರೋ’ ಈಗ ಯಾವ ಶಿಖರವೇರಿದ್ದಾರೆಂದು ನೋಡ ಹೊರಟರೆ ರಿಷಬ್‌ಶೆಟ್ಟಿ ನಿಜಕ್ಕೂ ‘ದೈವಾಂಶ ಸಂಭೂತ’ರಂತೆ ಪರಿಪಕ್ವ ವ್ಯಕ್ತಿಯಾಗಿ ನಡೆದುಕೊಳ್ಳುವ ಹೊಣೆಗಾರಿಕೆ ಹೊತ್ತಿದ್ದಾರೆ. ಇಂಥ ಅಭೂತಪೂರ್ವ ಯಶಸ್ಸನ್ನು ತಲೆಗೆ ಹಾಕಿಕೊಳ್ಳದೆ ಮನಸ್ಸಿಗೆ ಹಾಕಿಕೊಂಡಿರುವ ರಿಷಬ್, ದೇಶಾದ್ಯಂತ ಅವರು ಹತ್ತುವ ವೇದಿಕೆಗಳಲ್ಲಿ, ನೀಡುತ್ತಿರುವ ಸಂದರ್ಶನಗಳಲ್ಲಿ ಹೋದ ಕಡೆಯಲೆಲ್ಲ ಇಂಥ ಗೆಲುವನ್ನು ‘ಲಗೇಜ್ ಬ್ಯಾಗ್’ ನಂತೆ ಪಕ್ಕಕ್ಕಿಟ್ಟು ಸರಳ ಸಜ್ಜನಿಕೆಯಿಂದಲೇ ಎಚ್ಚರಿಕೆಯಿಂದ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ.
ಇಂಥ ಗುಣಗಳು ಅವರಲ್ಲಿ ಒಬ್ಬ ‘ರಾಜ್’ ಅವರನ್ನು ಕಾಣಬಹುದೆಂದರೆ ಅತಿಶಯೋಕ್ತಿಯಲ್ಲ. ತನ್ನ ಚಿತ್ರತಂಡದ ಬಗ್ಗೆ,
ನಿರ್ಮಾಪಕರ ಬಗ್ಗೆ, ಹಿರಿಯ ನಟರ ಬಗ್ಗೆ, ತನ್ನ ಮೂಲ ಸಂಸ್ಕೃತಿಯ ಬಗ್ಗೆ, ಅಲ್ಲಿನ ಜನಗಳ ಬಗ್ಗೆ ಅವರಲ್ಲಿರುವ ಗೌರವ ವಿಧೇಯತೆ ರಿಷಬ್ ಅವರ ಆಕೃತಿ-ಉಪಸ್ಥಿತಿಯ ಗೋಚರವಾಗುತ್ತಿದೆ. ಪಾಪ, ರಿಷಬ್ ಶೆಟ್ಟರಿಗೆ ಬದುಕಿನ ಸೋಲುಗಳಿಗಿಂತ
ಈ ಒಂದು ಗೆಲುವೇ ದೊಡ್ಡ ‘ನೈತಿಕ ಭಾರ’ ಆಗಿದೆ ಎಂದರೆ ಸುಳ್ಳಲ್ಲ. ಸಿನಿಮಾ ಕ್ಷೇತ್ರದ ಒಬ್ಬ ವ್ಯಕ್ತಿಯ ಮೇಲೆ ನಿಜವಾದ ಗೌರವ ಪ್ರೀತಿ ಅಭಿಮಾನ ಹೆಮ್ಮೆ ಹುಟ್ಟಿಕೊಳ್ಳುವುದೇ ಹೀಗೆ.
ಇನ್ನು, ತನ್ನ ತಂದೆಯ ಹೋಟಲ್‌ಗೆ ಶೂಟಿಂಗ್ ಗಾಗೇ ಬರುತ್ತಿದ್ದ ಅನೇಕ ಕಲಾವಿದರು, ತಂತ್ರಜ್ಞರೊಂದಿಗೆ ಬೆರೆತು ಅಪ್ಪಟ ಕಲಾವಿದನಾಗಿ ಬೆಳೆದ ಬಾಲಕ ಈಗ ಕಿಚ್ಚ ಸುದೀಪ್. ‘ಸ್ಟಾರ್‌ಗಿರಿ’ ‘ಬಾಸ್ ಗಿರಿ’ಗಿಂತ ‘ಅಭಿನಯ ಚಕ್ರವರ್ತಿ’ ಎಂಬ ಬಿರು
ದನ್ನು ಪಡೆದಿರುವುದು ಅವರೊಬ್ಬ ನೈಜ ಕಲಾವಿದ ಎಂಬುದನ್ನು ಸಾರುತ್ತದೆ. ತೆಲುಗಿನ ‘ಈಗ’ ಚಿತ್ರದ ಮೂಲಕ ಅವರಲ್ಲಿರುವ ಅಸಾಮಾನ್ಯ ಅಭಿನಯ ಪ್ರತಿಭೆ ಹೊರಬಂದ ಮೇಲೆ ಬಹುಭಾಷಾ ಕಲಾವಿದನಾಗಿ ಇಡೀ ಭಾರತೀಯ ಚಿತ್ರರಂಗಕ್ಕೆ
ಪರಿಚಿತರಾಗಿರುವ ಸುದೀಪ್ ಅವರೂ ಸೋಲು- ಗೆಲುವನ್ನು ನೆತ್ತಿಗೇರಿಸಿಕೊಳ್ಳದೆ ತನ್ನ ಸುತ್ತಲಿನ ಎಲ್ಲರ ಮೆಚ್ಚುಗೆಯ ಮತ್ತು ಕೆಲವರಿಗೆ ‘ಕಿಚ್ಚುಗೆಯ’ ವ್ಯಕ್ತಿಯಾಗಿದ್ದಾರೆ.
ಅವರ ಪ್ರಬುದ್ಧ ನಡೆ ನುಡಿ, ಸಾಂದರ್ಭಿಕ ಪ್ರಜ್ಞೆ ಇವೆಲ್ಲವೂ ಅಭಿಮಾನಿಗಳಲ್ಲದವರೂ ಅವರನ್ನು ವಿಶೇಷವಾಗಿ ಪ್ರೀತಿಸು ವಂತೆ ಬೆಳೆಯುತ್ತಿದ್ದಾರೆ. ಹೀಗಾಗಿ ಅವರು ಮಾಮೂಲಿ ಸಿದ್ಧಸೂತ್ರ ಸಿನಿಮಾಗಳ ಹೊರತಾಗಿ ಗಂಭೀರ ಚಿತ್ರಗಳನ್ನು ನೀಡಿದರೆ ಅವರ ಅಭಿನಯ ಸಾಮರ್ಥ್ಯವೂ ಬಳಕೆಯಾಗುವುದಲ್ಲದೇ, ಇಂಥ ಚಿತ್ರಗಳಿಂದ ಏರುವ ಎತ್ತರವೇ ಬೇರೆ ಎಂಬುದನ್ನು ಸುದೀಪ್ ಅವರಿಗೆ ಹೇಳಬೇಕಿಲ್ಲ.
ಕನ್ನಡದ ಸಿನಿಮಾ ಮಂದಿಗಳ ಬಗ್ಗೆ ಇಲ್ಲಿಯವರೆಗೂ ಒಂದು ಅಭಿಪ್ರಾಯವಿತ್ತು. ‘ಇವರುಗಳು ಕೇವಲ ದುಡ್ಡು ಮಾಡಿ ಕೊಳ್ಳುತ್ತಾರೆ, ಸಮಾಜಕ್ಕೆ ಇವರ ಕೊಡುಗೆಗಳೇನೂ ಇಲ್ಲ, ರಾಜಣ್ಣ ನವರು ಬದುಕಿದ್ದಾಗ ನಾಡಿಗೆ ಒಂದು ಶಕ್ತಿಯಾಗಿದ್ದರು. ಆದರೆ ಈಗಿನ ಸ್ಟಾರ್‌ಗಳು ಕೇವಲ ಆಕಾಶದಲ್ಲಿರುವ ನಕ್ಷತ್ರಗಳು ಸ್ವಾರ್ಥಿಗಳು’ ಎಂದೆಲ್ಲ ವಾದ ಕೆಲ ಬುದ್ಧಿವಂತರಲ್ಲಿತ್ತು. ಆದರೆ ಪುನೀತ್ ಅವರು ಅಕಾಲಿಕವಾಗಿ ತೀರಿಹೋದ ನಂತರ ಸಮಾಜಕ್ಕೆ ಅವರ ಮಾನವೀಯತೆಯ ವಿಶ್ವರೂಪ ದರ್ಶನವಾದ ಮೇಲೆ ಅಭಿಮಾನಿಗಳು ಅವರನ್ನು ದೇವರಾಗಿಸಿಬಿಟ್ಟಿದ್ದಾರೆ.
ಹೀಗಾಗಿ ಯಾವ ನಟರ ಬಗ್ಗೆಯೂ ಮೇಲಿನಂತೆ ತೀರ್ಮಾನಕ್ಕೆ ಬರಬಾರದು, ಬಲಗೈಯಿಂದ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಇನ್ನಿತರ ನಾಯಕರೂ ಸಮಾಜಕ್ಕೆ ಯಾವ ಯಾವ ರೀತಿಯಲ್ಲಿ ಸ್ಪಂದಿಸುತ್ತಿರಬಹುದೋ ಏನೋ ಎಂದು
ಯೋಚಿಸುವಂತ್ತಾಗಿದೆ. ಈ ನಿಟ್ಟಿನಲ್ಲಿ ಮೊನ್ನೆ ಸುದೀಪ್ ಅವರು ತಮ್ಮ ನಿವಾಸದಲ್ಲಿ ೩೧ ಗೋವುಗಳನ್ನು ದತ್ತು ಪಡೆದು ಸರಕಾರದ ಯೋಜನೆಗೆ ರಾಯಭಾರಿ ಆದರಲ್ಲ, ಅದು ನಿಜಕ್ಕೂ ಒಬ್ಬ ಯಶಸ್ವಿ ನಟನ ಬದುಕಿನ ಸಾರ್ಥಕತೆಯ ದಾರಿಯೂ
ಹೌದು. (ಸದ್ಯ ಸರಕಾರ ಕೊಟ್ಟ ಮಾತಿನಂತೆ ಆದಷ್ಟು ಬೇಗ ಗೊಂದರಂತೆ ಗೋಶಾಲೆಗಳನ್ನು ನಿರ್ಮಿಸಿ ಸುದೀಪ್‌ರಂಥ
ಕಲಾವಿದರ ಮರ್ಯಾದೆ ಉಳಿಸಲಿ!) ಇಲ್ಲಿ 31 ಗೋವುಗಳು ಸಾಂಕೇತಿಕವಷ್ಟೇ. ಆದರೆ ಮೂವತ್ತು ಗೋಶಾಲೆಗಳನ್ನು ನಡೆಸುವ ಮನಸ್ಸು ಮತ್ತು ಶಕ್ತಿ ಸುದೀಪ್ ಅವರಿಗಿದೆ. ಆದರೆ, ಅವರ ಈ ಸಾಮಾಜಿಕ ಕಳಕಳಿ ಹೊಣೆಗಾರಿಕೆ ಅಂತಃಕರಣ
ಇದೆಯಲ್ಲ, ಅಂಥದನ್ನು ಎಲ್ಲರಿಂದಲೂ ನಿರೀಕ್ಷಿಸಲಾಗದು.
ಯಾವುದೇ ವ್ಯಕ್ತಿ ಸಾಮಾಜಿಕವಾಗಿ ಜನಾನುರಾಗಿಯಾಗಿ ಬೆಳೆಯುತ್ತಾನೋ ಆತನಿಂದ ಸಾಮಾಜಿಕ ಸ್ಪಂದನೆ-ಕೊಡುಗೆ ಯನ್ನೂ ಜನ ನಿರೀಕ್ಷಿಸುತ್ತಾರೆ. ಮತ್ತೊಬ್ಬ ಸಹೃದಯಿ ನಟ ಯಶ್ ಕೆರೆಗಳನ್ನು ತುಂಬಿಸಿದ ಹಾಗೆ ಸುದೀಪ್ ಅವರು ಗೋಶಾಲೆ ಗಳಲ್ಲಿ ನತದೃಷ್ಟ ಗೋವುಗಳನ್ನು ತುಂಬಿಸುವಂತ್ತಾದರೆ ಅದಕ್ಕಿಂತ ದೊಡ್ಡ ಪುಣ್ಯಕಾರ್ಯ ಮತ್ತೊಂದಿಲ್ಲ. ಕುದುರೆ, ಕತ್ತೆ, ಜಿಂಕೆ, ನಾಯಿಗಳನ್ನು ಅನೇಕರು ಸಾಕಬಹುದು. ಆದರೆ ಕಸವನ್ನು ಜೀರ್ಣಿಸಿಕೊಂಡು ಅಮೃತದಂಥ ಹಾಲನ್ನು ನೀಡುವ ದೈವಸಮಾನ ಗೋವನ್ನು ಉಳಿಸುವಂಥ ಹೃದಯವಂತಿಕೆ ತೋರಿರುವ ಸುದೀಪ್ ಅವರ ಸಾಮಾಜಿಕ ಬದ್ಧತೆಯನ್ನು ಹೊಗಳಲೇ ಬೇಕು.
ಅಣ್ಣಾವ್ರ ಕಾಲದಲ್ಲಿ ಜನ ಬರಿಯ ಸಿನಿಮಾ ನೋಡಿ ‘ಅಭಿಮಾನಿ ದೇವರು’ ಎನಿಸಿದ್ದರು. ನಟರುಗಳು ಸಮಾಜಕ್ಕೆ ಏನೂ ನೀಡದಿದ್ದರೂ ಪರವಾಗಿಲ್ಲ, ಆದರೆ ಸಿನಿಮಾ ಮೂಲಕ ಸಮಾಜಕ್ಕೆ ಮತ್ತು ಬದುಕಿಗೆ ನೀಡುತ್ತಿದ್ದ ಸಕಾರಾತ್ಮಕ
ಸಂದೇಶವೇ ಅಭಿಮಾನಿಗಳಿಗೆ ಸಾಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಅದರಂತೆ ಸಮಾಜದ ಬೇಡಿಕೆಯೂ ಬದಲಾಗಿದೆ. ಈಗ ಅದೆಂಥಾ ಸ್ಟಾರ್ ಇರಲಿ ಅವರಿಂದ ಕೇವಲ ಮನರಂಜನೆ ಮಾತ್ರ ಬಯಸುವ ಕಾಲ ಇದಲ್ಲ. ಮೊದಲೆಲ್ಲ ಪ್ರೇಕ್ಷಕನಿಗೆ ಸಿನಿಮಾ ಮತ್ತು ಚಿತ್ರಮಂದಿರ ಮಾತ್ರ ಮನರಂಜನೆಯ ದಾರಿಗಳಾಗಿದ್ದವು.
ಆದರೆ ಇಂದು ಇಂಟರ್ನೆಟ್ ಮೊಬೈಲ್ ಯುಗದಲ್ಲಿ ಸಾಮಾಜಿಕ ಜಾಲತಾಣವೆಂಬುದು ಮನರಂಜನೆಯನ್ನೇ ನುಂಗಿಬಿಟ್ಟಿದೆ. ಹೀಗಿರುವಾಗ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವುದು ಕೇವಲ ಮನರಂಜನೆಗಾಗಿಯಲ್ಲ. ಆ ನಟನ ವೈಚಾರಿಕತೆ,
ವೈಯಕ್ತಿಕ ವಿಷಯಗಳು, ಆತನ ಗುಣ ವರ್ತನೆ, ಆತನ ಸಾಚಾತನ ಇವೆಲ್ಲವನ್ನೂ ಪರಿಗಣಿಸಿ ಚಿತ್ರ ನೋಡಿ ಬೆಂಬಲಿಸುವ ಮನಸ್ಥಿತಿಯಲ್ಲಿದ್ದಾನೆ ಪ್ರೇಕ್ಷಕ ಪ್ರಭು! ಹೀಗಾಗಿ ಈಗ ಮನರಂಜನೆಯಷ್ಟೇ ಅಲ್ಲ, ಒಂದು ಚಿತ್ರದ ಉದ್ದೇಶ, ಸಾಮಾಜಿಕ ಸಂದೇಶ, ಸಾಂಸ್ಕೃತಿಕತೆ, ನಾಯಕ ನಾಯಕಿಯ ಸಾಮಾಜಿಕ ಬದ್ಧತೆ ಇವೆಲ್ಲವೂ ಗಣನೆಗೆ ಬರುತ್ತವೆ.
ಇದನ್ನು ಮೀರಿದರೆ ‘ಬಾಯ್ಕಾಟ್’ ಅಭಿಯಾನ ನಡೆದು ಅಂಥ ಚಿತ್ರಗಳು ತಿಪ್ಪೆ ಸೇರುತ್ತವೆ. ಇಲ್ಲದಿದ್ದರೆ ಬರಿಯ
ನಿರ್ದೇಶಕನಾಗಿ ಕನ್ನಡಿಗರಿಗೆ ಮಾತ್ರ ಪರಿಚಯವಿದ್ದ ರಿಷಬ್‌ಶೆಟ್ಟಿಯವರನ್ನು ಅವರ ‘ಕಾಂತಾರ’ ವನ್ನು ಇಡೀ ವಿಶ್ವವೇ ನೋಡುವಂತ್ತಾಗಿರುವುದು ಸ್ಟಾರ್‌ಗಿರಿಯಿಂದಲ್ಲ. ದೇಶದ ಪರಂಪರೆ ಸಂಸ್ಕೃತಿಯನ್ನು ಪರಿಚಯಿಸಿದ್ದರಿಂದ. ನೋಡಿ,
ಇಂಥ ಪ್ರಯತ್ನವನ್ನು ದೇಶದಾದ್ಯಂತ ಇರುವ ಕನ್ನಡ ಭಾಷೆ ಬಾರದ ಪ್ರೇಕ್ಷಕನೂ ಲೆಕ್ಕ ಹಾಕುತ್ತಾನೆ ಮತ್ತು ಚಿತ್ರ ನೋಡಿ ಬೆಂಬಲಿಸುತ್ತಾನೆಂದರೆ ದೇಶದಲ್ಲಿ ಚಿತ್ರರಂಗವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂಬುದು ಅರಿವಾಗುತ್ತಿದೆ ಯಲ್ಲವೇ.
ರಾಜಣ್ಣನವರು ಮತ್ತು ಅಪ್ಪು ಅವರು ಸೃಷ್ಟಿಸಿಕೊಂಡಂತೆ ಅಭಿಮಾನಿಗಳು ಸ್ವಯಂಪ್ರೇರಣೆಯಿಂದ ಆರಾಧಿಸುವ ವ್ಯಕ್ತಿಗಳಾಗಿ, ಶಕ್ತಿಗಳಾಗಿ ಬೆಳೆಯಬೇಕೇ ವಿನಃ ಒಂದೆರಡು ಚಿತ್ರ ಹಿಟ್ ಆದ ಕೂಡಲೇ ಯಶಸ್ಸಿನೊಂದಿಗೆ ವಿಸ್ಕಿ-ಸೋಡಾ ಎಲ್ಲವನ್ನೂ ನೆತ್ತಿಗೇರಿಸಿಕೊಂಡು ‘ಕೊಚ್ಚಾಕುತ್ತೇನೆ, ಸಿಗಿದಾಕುತ್ತೇನೆ, ತಾಕತ್ತಿದ್ದರೆ, ಧಮ್ ಇದ್ದರೆ’ ಎಂದೆಲ್ಲ ನಶೆಯಲ್ಲಿ ಮಾತನಾಡಿದರೆ ಅಂಥವರಿಗೆ ಹುಟ್ಟಿಕೊಳ್ಳುವುದು ‘ಅಕ್ಕ ಅಮ್ಮಾ’ ಎನ್ನುವ ಪುಂಡ ಪಡ್ಡೆಗಳಷ್ಟೇ! ಇಂಥವರನ್ನು ಅಭಿಮಾನಿಗಳೆಂದು ಕೊಳ್ಳುವುದು ಮೂರ್ಖತನ.
ಇಂಥ ಉನ್ಮಾದ ಪಡೆಗಳನ್ನೇ ನಂಬಿಕೊಂಡು ಸಿಕ್ಕಸಿಕ್ಕಿದವರಿಗೆಲ್ಲ ಧಮಕಿ ಸವಾಲು ಹಾಕಿ, ಹಿರಿಯ ನಟರಿಗೆ ಅಮರಿಕೊಂಡು ಪರೋಕ್ಷವಾಗಿ ಗೂಂಡಾ ವರ್ತನೆ ತೋರುವುದಲ್ಲದೇ, ಪ್ರಚಾರ ನೀಡುವ ಮಾಧ್ಯಮವನ್ನೇ ಧಿಕ್ಕರಿಸಿಕೊಂಡು, ‘ಅದೃಷ್ಟ
ದೇವತೆ’ ಎಂಬ ದೇವರನ್ನು ‘ಕಲಾಸಿಪಾಳ್ಯದ’ ಭಾಷೆಯಲ್ಲಿ ಅಶ್ಲೀಲವಾಗಿ ಹೀಯಾಳಿಸಿ ತನ್ನ ಯೋಗ್ಯತೆ ಪ್ರದರ್ಶಿಸುವುದು ಚಿತ್ರರಂಗದಲ್ಲಿ ಬೆಳೆಯಬೇಕಾದವರ ಲಕ್ಷಣವಲ್ಲ. ಸದ್ಯಕ್ಕೆ ರಿಷಬ್, ಸುದೀಪ್, ಯಶ್ ಚಿತ್ರರಂಗಕ್ಕೂ ಬೇಕು ಸಮಾಜಕ್ಕೂ ಬೇಕಾಗಿದ್ದಾರೆ. ಇನ್ನೇನು ಬೇಕು?