Friday, 20th September 2024

ಜಾಹೀರಾತು ವೆಚ್ಚ 97 ಕೋಟಿ ರೂ. ವಸೂಲಿಗೆ ಆದೇಶ: ಆಪ್‌ ಗರಂ

ನವದೆಹಲಿ: ಸರ್ಕಾರದ ಹೆಸರಿನಲ್ಲಿ ರಾಜಕೀಯ ಜಾಹೀರಾತುಗಳ ಪ್ರಕಟಿಸಿದ್ದ ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಆದೇಶ ಹೊರಡಿಸಿದ್ದು, ಈ ಆದೇಶ ಹೊರಡಿಸುವ ಅಧಿಕಾರ ಅವರಿಗಿಲ್ಲ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಹೇಳಿದೆ.

ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ಇದೊಂದು ಹೊಸ ಪ್ರೇಮ ಪತ್ರ ಎಂದು ಬಣ್ಣಿಸಿದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ಸಾಹಬ್ ಅವರು ಬಿಜೆಪಿಯ ನಿರ್ದೇಶನಗಳಿಗೆ ಅನುಗುಣವಾಗಿ ಎಲ್ಲವನ್ನೂ ಮಾಡುತ್ತಿ ದ್ದಾರೆ.

ಇದು ದೆಹಲಿ ಜನತೆಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ದೆಹಲಿಯ ಜನರು ಹೆಚ್ಚು ಚಿಂತಿತರಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ಕಾನೂನಿನ ಪರವಾಗಿ ನಿಲ್ಲುವು ದಿಲ್ಲ ಎಂದು ಹೇಳಿದ್ದಾರೆ.

ಇಂತಹ ಆದೇಶ ನೀಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್’ಗೆ ಇಲ್ಲ. ಅಂತಹ ನಿರ್ದೇಶನಗಳನ್ನು ನೀಡಲು ಅವರಿಗೆ ಸಾಧ್ಯ ವಿಲ್ಲ. ಇತರ ರಾಜ್ಯ ಸರ್ಕಾರಗಳು ಕೂಡ ಜಾಹೀರಾತುಗಳನ್ನು ನೀಡುತ್ತವೆ.

ಬಿಜೆಪಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯ ಸರ್ಕಾರಗಳು ನಮ್ಮಂತೆಯೇ ಜಾಹೀರಾತುಗಳನ್ನು ನೀಡಿವೆ. ಜಾಹೀರಾತಿಗಾಗಿ ಅವರು ವ್ಯಯಿಸಿರುವ 22,000 ಕೋಟಿ ರೂ.ಗಳನ್ನು ವಸೂಲಿ ಮಾಡುವುದು ಯಾವಾಗ? ಅವರಿಂದ ಹಣ ವಸೂಲಿ ಮಾಡಿದ ದಿನ ನಾವೂ 97 ಕೋಟಿ ರೂ.ಗಳನ್ನು ಪಾವತಿ ಮಾಡುತ್ತೇವೆಂದು ತಿಳಿಸಿದ್ದಾರೆ.

ಡಿಐಪಿ 2017 ರಲ್ಲಿ ಎಎಪಿಗೆ 42.26 ಕೋಟಿ ರೂಪಾಯಿಗಳನ್ನು ತಕ್ಷಣವೇ ರಾಜ್ಯದ ಬೊಕ್ಕಸಕ್ಕೆ ಪಾವತಿಸಲು ಮತ್ತು 54.87 ಕೋಟಿ ರೂಪಾಯಿಗಳನ್ನು ನೇರವಾಗಿ ಜಾಹೀರಾತು ಏಜೆನ್ಸಿಗಳು ಅಥವಾ ಪ್ರಕಟಣೆಗಳಿಗೆ 30 ದಿನಗಳಲ್ಲಿ ಪಾವತಿಸಲು ನಿರ್ದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಐದು ವರ್ಷ ಎಂಟು ತಿಂಗಳು ಕಳೆದರೂ ಎಎಪಿ ಡಿಐಪಿ ಆದೇಶವನ್ನು ಪಾಲಿಸಿಲ್ಲ.

Read E-Paper click here