ನೂರೆಂಟು ವಿಶ್ವ
vbhat@me.com
ನನಗೆ ಗೊತ್ತು, ಈ ವಿಷಯ ಹೇಳಿದರೆ ನೀವು ನಗುತ್ತೀರಾ ಎಂದು. ಅಷ್ಟೇ ಅಲ್ಲ, ಈ ಮನುಷ್ಯನಿಗೆ ಬುದ್ಧಿ ಇಲ್ಲ ಅಂತಾನೂ ಹೇಳ್ತೀರಾ ಎಂಬುದೂ ಗೊತ್ತು. ಮೂರ್ಖತನದ ಪರಾಕಾಷ್ಠೆ, ಅದನ್ನು ನೋಡಲು, ಅಷ್ಟು ದೂರ ಇಷ್ಟೊಂದು ಹಣ ಖರ್ಚು ಮಾಡಿ ಹೋಗಬೇಕಿತ್ತಾ ಎಂದು ರಾಗ ಎಳೆಯುತ್ತೀರಿ ಎಂಬುದೂ ಗೊತ್ತು.
ಇವರ ಕರ್ಮ, ಇಂಥ ಜನರೂ ಇರ್ತಾರಾ ಎಂದು ಗೊಣಗಿ ಸುಮ್ಮನಾಗು ತ್ತೀರಾ ಎಂಬುದು ಕೂಡ ಗೊತ್ತು. ಆದರೆ ಕೊನೆಯಲ್ಲಿ ನಿಮ್ಮ ಅಭಿಪ್ರಾಯ ಬದಲಾಗಿರದಿದ್ದರೆ ಕೇಳಿ.. ಅಂದ ಹಾಗೆ, ನಾಲ್ಕು ವರ್ಷದ ಕೆಳಗೆ ಒಮಾನ್‌ಗೆ ಆಮೆ ಮೊಟ್ಟೆ ಇಡುವುದನ್ನು ನೋಡಲು ಹೋಗಿದ್ದೆ! ಖರೆ! ಪ್ಲೀಸ್ ನಗಬೇಡಿ. ನಿಜವಾಗಿಯೂ ಅದನ್ನು ನೋಡಲೆಂದೇ ಇಲ್ಲಿಂದ ಹೋಗಿದ್ದೆ. ಸಾಕ್ಷಾತ್ ಈ ಕತೆ ನಿಮಗೆ ಹೇಳಲೆಂದೇ ಅಲ್ಲಿಗೆ ಹೋಗಿದ್ದೆ. ಈಗಲೂ ಅಲ್ಲೇ, ಅದೇ ಜಾಗದಲ್ಲೇ ಅಲ್ಲದಿದ್ದರೂ, ಅದೇ ಅರಬರ ನಾಡಿನಲ್ಲಿ ದ್ದೇನೆ. ಹೀಗಾಗಿ ನಾಲ್ಕು ವರ್ಷದ ಹಿಂದಿನ ಪಯಣ ನೆನಪಾಗಿ ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸಿತು.
ಆಗಲೂ ಬೆಹರೀನ್‌ನಲ್ಲಿರುವ ನನ್ನ ಆತ್ಮೀಯ ಸ್ನೇಹಿತ ಕಿರಣ್ ಉಪಾಧ್ಯಾಯ, ‘ಆಮೆ ಮೊಟ್ಟೆ ಇಡೋದನ್ನು ನೋಡಲು ಹೋಗೋಣವಾ? ಹೂಂ ಅಂದರೆ ಹೇಳಿ, ನಾನು ಬೆಹರೀನ್ ನಿಂದ ಕಾರಿನಲ್ಲಿ ದುಬೈಗೆ ಬರ‍್ತೀನಿ, ನೀವು ಬೆಂಗಳೂರಿನಿಂದ ದುಬೈಗೆ ಫ್ಲ್ಯಾಟ್‌ನಲ್ಲಿ ಬನ್ನಿ, ಅಲ್ಲಿಂದ ನಾವು ಒಮಾನ್ ರಾಜಧಾನಿ ಮಸ್ಕತ್‌ಗೆ ಕಾರಿನಲ್ಲಿಯೇ ಹೋಗೋಣ. ಮಸ್ಕತ್ ನಿಂದ ಆಮೆ ಮೊಟ್ಟೆ ಇಡುವ ತಾಣ ಸುಮಾರು ನೂರೈವತ್ತು ಕಿಮೀ ದೂರದಲ್ಲಿದೆ. ಏನಂತೀರಾ?’ ಎಂದು ಕೇಳಿದರು.
ಮರು ಮಾತಾಡದೇ ನಾನು ‘ಯೆಸ್’ ಎಂದೆ. ಎರಡು ವರ್ಷಗಳ ಹಿಂದೆ, ಬೆಂಗಳೂರಿನ ಟೋಹೋಲ್ಡ್ ಸಂಸ್ಥೆಯ ಸ್ನೇಹಿತರೊಬ್ಬರು ಆಮೆ ಸಫಾರಿ ಬಗ್ಗೆ ಹೇಳಿದ್ದರು. ಅಲ್ಲದೇ ನಾನು ಆಮೆ ಮೊಟ್ಟೆ ಇಡುವ ಕೌತುಕದ ಬಗ್ಗೆ ‘ನ್ಯಾಶನಲ್ ಜಿಯಾಗ್ರಫಿ’ ಚಾನೆಲ್‌ನಲ್ಲಿ ಒಂದು ಅದ್ಭುತ ಸಾಕ್ಷ್ಯಚಿತ್ರ ನೋಡಿದ್ದೆ. ಅಷ್ಟೇ ಅಲ್ಲ, ಅದಾದ ನಂತರ ಬಾರ್ಲೆಟ್ ದಂಪತಿಗಳು (ಆರ್.ಡಿ. ಬಾರ್ಲೆಟ್ ಹಾಗೂ ಪೆಟ್ರೇಶಿಯಾ ಬಾರ್ಲೆಟ್) ಆಮೆಗಳ ಬಗ್ಗೆ ಬರೆದ ಪುಸ್ತಕ ಓದಿದ್ದೆ.
ಆಮೆಗಳ ಬಗ್ಗೆ ಅತಿ ಕಡಿಮೆ ಅಧ್ಯಯನವಾಗಿದ್ದರ ಬಗ್ಗೆ ‘ನ್ಯಾಚುರಲ್ ಹಿಸ್ಟರಿ’ ಪತ್ರಿಕೆ ಪ್ರಕಟಿಸಿದ ವಿಸ್ತೃತ ಲೇಖನವೊಂದನ್ನು ಓದಿದ್ದೆ. ಲಿಜ್ ಪಲಿಕಾ ಎಂಬಾಕೆ ಆಮೆಗಳ ಕೌತುಕ ಜಗತ್ತಿನ ಬಗ್ಗೆ ಬರೆದಿದ್ದನ್ನೂ ಓದಿದ್ದೆ. ಹಿಂದಿನ ವರ್ಷ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ‘ಕೂರ್ಮ ಧಾಮ’ಕ್ಕೆ ಹೋಗಿದ್ದೆ. ಆಮೆಗಳ ವಿಸ್ಮಯಕಾರಿ ಬದುಕಿನ ವೈಚಿತ್ರ್ಯಗಳು ನನ್ನಲ್ಲಿ ಕುತೂಹಲ ಮೂಡಿಸಿ ದ್ದವು. ನನಗೆ ಅಷ್ಟೇ ಸಾಕಾಯಿತು. ತಕ್ಷಣ ಒಮಾನ್‌ಗೆ ಹೊರಡಲು ಸಿದ್ಧನಾದೆ. ಸ್ನೇಹಿತರೊಬ್ಬರು, ‘ಏನ್ಸಾರ್, ಮೂರು ವರ್ಷಗಳ ಹಿಂದೆ, ಒಂಟೆಗಳ ಮದುವೆಗೆ ದುಬೈಗೆ ಹೋಗಿದ್ದಿರಿ. ಗೊರಿಲ್ಲಾ ನಾಮಕರಣಕ್ಕೆ ರವಾಂಡಕ್ಕೆ ಹೋಗಿದ್ದಿರಿ.
ಇದೇನು ಹೊಸತು? ಆಮೆಗಳ ಹೆರಿಗೆ? ಕೇಳಿಯೇ ಇರಲಿಲ್ಲವಲ್ಲ?’ ಎಂದು ರಾಗ ತೆಗೆದರು. ‘ಪ್ರಾಣಿಗಳೆಂದ ಮೇಲೆ ಅವು ಮರಿ ಹಾಕುವುದು ಅಥವಾ ಮೊಟ್ಟೆ ಹಾಕುವುದು ಸಾಮಾನ್ಯ. ಅದರಲ್ಲೇನು ವಿಶೇಷ? ಇದೇನು ಹೊಸ ಸಂಪ್ರದಾಯ ಅಲ್ಲವಲ್ಲ? ಸಾವಿರಾರು ವರ್ಷಗಳ ಹಿಂದೆ, ಆಮೆಗಳು ಹುಟ್ಟಿದಂದಿನಿಂದ ಮೊಟ್ಟೆ ಹಾಕುತ್ತಲೇ ಇವೆ. ಈ ಕಾರಣದಿಂದಲೇ ಅವುಗಳ ವಂಶ ವಾಹಿನಿ, ಸಂತಾನ ವೃದ್ಧಿಯಾಗುತ್ತಾ ಬಂದಿದೆ.
ಮೊಟ್ಟೆ ಹಾಕದಿದ್ದರೆ, ಅವುಗಳ ಸಂತತಿ ಮುಂದುವರಿ ಇಲ್ಲವಾ? ಅದರಲ್ಲಿ ವಿಶೇಷವೇನಿದೆ? ಅದನ್ನು ನೋಡಲು ಅಷ್ಟು ದೂರ ಹೋಗಬೇಕಾ? ನಿಮ್ಮ ಹುಚ್ಚಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ’ ಎಂದು ವಿಷಾದದಿಂದ ಹೇಳಿದರು. ‘ಅದೆಲ್ಲ ಸರಿ, ನೀವು ಎಂದಾದರೂ ಆಮೆ ಮೊಟ್ಟೆ ಇಡುವುದನ್ನು ನೋಡಿದ್ದೀರಾ? ನಿಮಗೆ ಅಷ್ಟು ವ್ಯವಧಾನ ಇದೆಯಾ? ಅಷ್ಟಕ್ಕೂ ಆಮೆ ಎಷ್ಟು ಮೊಟ್ಟೆ ಇಡುತ್ತದೆ? ಅದಕ್ಕಿಂತ ಮುಖ್ಯವಾಗಿ ಆ ಮೊಟ್ಟೆಗಳನ್ನು ಎಲ್ಲಿ ಇಡುತ್ತದೆ? ನೀರಿನಲ್ಲೋ, ಭೂಮಿಯ ಮೇಲೋ? ಭೂಮಿಯ ಮೇಲೆ ಮೊಟ್ಟೆ ಇಟ್ಟು ಸುರಕ್ಷಿತವಾಗಿ ಹೇಗೆ ಕಾಪಾಡುತ್ತದೆ? ಈ ಸಂಗತಿಗಳೇನಾದರೂ ನಿಮಗೆ ಗೊತ್ತಿದ್ದರೆ ತಿಳಿಸಿ.
ನಾನು ಅಲ್ಲಿಗೆ, ಅಷ್ಟು ದೂರ ಹೋಗುವುದೇ ಇಲ್ಲ’ ಎಂದು ಹೇಳಿದೆ. ಅದಕ್ಕೆ ಅವರು ತೀರಾ ತಿರಸ್ಕಾರ ಹಾಗೂ ಉದಾಸೀನ ದಿಂದ ‘ಯಾರಿಗೆ ಬೇಕಾಗಿದೆ ಸ್ವಾಮಿ ಆ ಎಲ್ಲ ಮಾಹಿತಿ ತಿಳಿದುಕೊಂಡು? Waste of me. ಅಷ್ಟಕ್ಕೂ ಆ ಎಲ್ಲಾ ಸಂಗತಿ ತಿಳಿದು ಕೊಂಡು ಏನಾಗಬೇಕು? ಗೊಡ್ಡು ಮಾಹಿತಿ ಅಲ್ಲವೇ?’ ಎಂದು ಕೇಳಿದರು. ಅವರಿಗೆ ಉತ್ತರಿಸಿದರೆ waste of my me ಎಂಬುದು ಖಾತ್ರಿ ಯಾಯಿತು. ‘ನೀವು ಹೇಳೋದು ನಿಜ, ಬಿಡಿ’ ಎಂದು ಸುಮ್ಮನಾದೆ.
ನನ್ನ ಇನ್ನೊಬ್ಬ ಸ್ನೇಹಿತರು, ಆಮೆ ಮೊಟ್ಟೆ ಇಡುವುದನ್ನು ನೋಡಲು ಹೋಗುವ ವಿಷಯ ತಿಳಿದು ಬಿದ್ದೂ ಬಿದ್ದು ನಕ್ಕರು.
‘ಈ ಜಗತ್ತಿನಲ್ಲಿ ಎಂಥೆಂಥ ಹುಚ್ಚರು ಇರ‍್ತಾರಪ್ಪ? ಆಮೆ ಮೊಟ್ಟೆ ಇಡುವುದರಲ್ಲಿ ಅದೆಂಥ ವಿಶೇಷವಿದೆ? ಭಟ್ರೇ, ನೀವು
ಸರಿಯಾಗೇ ಇದ್ದಿರಿ. ಯಾವಾಗ ಶುರುವಾಯಿತು ಈ ಕಾಯಿಲೆ? ಅಷ್ಟಕ್ಕೂ ನಿಮಗೆ ಆಮೆ ಮೊಟ್ಟೆ ಇಡುವುದನ್ನು ನೋಡಲೇ ಬೇಕು ಎಂದೆನಿಸಿದರೆ, ಮನೆಯಲ್ಲಿ ಬಾತ್‌ಟಬ್‌ನಲ್ಲಿ ಗರ್ಭಿಣಿ ಆಮೆಯನ್ನಿಟ್ಟರೆ, ಅದು ಮೊಟ್ಟೆ ಇಡುವುದನ್ನು ಮನೆಮಂದಿಯೆಲ್ಲ ಚುರುಮುರಿ ಮೆಲ್ಲುತ್ತಾ ಆನಂದದಿಂದ ಇಲ್ಲಿಯೇ ನೋಡಬಹುದಲ್ಲ? ಅದಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾ? ಅಷ್ಟು ದೂರ ಹೋಗುವುದೂ ತಪ್ಪಿದಂತಾಗಲಿಲ್ಲವೇ?’ ಎಂದು ಕೇಳಿದರು.
‘ನೀವು ಹೇಳೋದೂ ಸರಿ. ಆದರೆ ಏನು ಮಾಡೋದು ಟಿಕೆಟ್ ಬುಕ್ ಮಾಡಿಬಿಟ್ಟಿದ್ದೇನೆ. ಮೊದಲೇ ನೀವು ಸಿಕ್ಕಿದ್ದಿದ್ದರೆ ನನ್ನ ಹಣ, ಸಮಯ ಉಳಿತಾಯವಾಗುತ್ತಿತ್ತು. ಯಾವುದಕ್ಕೂ ನಿಮಗೆ ಧನ್ಯವಾದ’ ಎಂದು ಹೇಳಿ ಅವರ ಮಾತಿಗೆ ಪೂರ್ಣ ವಿರಾಮ ಹಾಕಿದೆ. ಇಲ್ಲದಿದ್ದರೆ ನನಗೆ ಇನ್ನೂ ಅರ್ಧಗಂಟೆ ಲೆಕ್ಚರ್ ಕೊಡುತ್ತಿದ್ದರು.
ನನ್ನ ಮತ್ತೊಬ್ಬ ಸಹೋದ್ಯೋಗಿ ಮಿತ್ರ, ವಿಶ್ವವಾಣಿ ಪತ್ರಿಕೆಯ ಸಂಪಾದಕೀಯ ಸಲಹೆಗಾರ ನಂಜನಗೂಡು ಮೋಹನ ಕುಮಾರ ಅವರಿಗೆ ‘ಬರ‍್ತೀರಾ ಆಮೆ ಮೊಟ್ಟೆ ಇಡೋದನ್ನು ನೋಡಲು?’ ಎಂದು ಕೇಳಿದೆ. ಅದಕ್ಕೆ ಅವರು, ‘ಹೌದಾ? ಅದ್ಭುತ ಸಾರ್! ನಾನೂ ಬರ‍್ತೇನೆ. ಎಂಥ ಅದ್ಭುತ ಸಂಗತಿ ಸರ್ ಇದು! ಅಂಥದೊಂದು ಕೌತುಕ ನೋಡಲೇಬೇಕು.
ಹೋಗೋಣ ಸರ್’ ಎಂದರು. ನನಗೆ ಇಂಥವರು ಬೇಕಾಗಿತ್ತು. ಬಾತ್‌ಟಬ್ ಮೆಂಟಾಲಿಟಿಯವರಿಗೆ ಎಷ್ಟು ಹೇಳಿದರೆಷ್ಟು,
ಬಿಟ್ಟರೆಷ್ಟು? ಜೀವನದಲ್ಲಿ ಹೊಸ ಸಂಗತಿ, ವಿಸ್ಮಯಗಳ ಬಗ್ಗೆ ಸ್ವಲ್ಪವಾದರೂ ಕುತೂಹಲ ಇಲ್ಲದಿದ್ದರೆ ಅಂಥವರ ಮುಂದೆ
ಆಮೆ ಅಲ್ಲ, ಆನೆ ಮೊಟ್ಟೆ ಇಡುತ್ತದೆಯಂತೆ ಬರ‍್ತೀರಾ ಎಂದು ಕೇಳಿದರೂ ‘ಅದೇನು ಮಹಾ? ಅದರಲ್ಲೇನಿದೆ ವಿಶೇಷ?’
ಎಂದು ಮೂಗು ಮುರಿಯುತ್ತಾರೆ. ವೀಸಾ, ಹೋಟೆಲ್ ಬುಕಿಂಗ್ ಹಾಗೂ ಇನ್ನಿತರ ಸಿದ್ಧತೆ ಗಳನ್ನು ಮಾಡಿಕೊಂಡು ಮೋಹನ ಅವರೊಂದಿಗೆ ದುಬೈಗೆ ಹಾರಿದೆ.
ಬೆಹರೀನ್‌ನಿಂದ ಸೌದಿ ಅರೇಬಿಯಾ ಮೂಲಕ ರಸ್ತೆ ಮಾರ್ಗವಾಗಿ ಕಾರು ಓಡಿಸಿಕೊಂಡು ಕಿರಣ್ ದುಬೈಗೆ ಬಂದರು. ಅಲ್ಲಿ ಎಲ್ಲರೂ ಜತೆಯಾಗಿ ಅದೇ ಕಾರಿನಲ್ಲಿ ಒಮಾನ್ ರಾಜಧಾನಿ ಮಸ್ಕತ್ ಎಂಬ ಮರಳುಗಾಡಿನ ಕಡೆಗೆ ಪಯಣ ಬೆಳೆಸಿದೆವು. ದುಬೈ ನಿಂದ ಅಲ್ ಐನ್ ರಸ್ತೆಯಲ್ಲಿ ಸಂಚರಿಸಿದರೆ ಸುಮಾರು ೪೭೫ ಕಿಮೀ ದೂರದ ಹಾದಿ. ಈ ಮಧ್ಯೆ ದುಬೈ-ಒಮಾನ್ ಗಡಿಯಲ್ಲಿ ವೀಸಾ ಶಿಷ್ಟಾಚಾರಕ್ಕೆ ಅರ್ಧ, ಮುಕ್ಕಾಲು ಗಂಟೆಯಾದರೂ ಬೇಕು.
ಇವೆಲ್ಲ ಹಿಡಿ ದರೂ, ಸುಮಾರು ಆರು-ಆರೂವರೆ ಗಂಟೆಗಳ ಸುದೀರ್ಘ ಪಯಣ. ರಸ್ತೆಯ ಇಕ್ಕೆಲಗಳಲ್ಲಿ ಮರುಭೂಮಿ, ಸುಡಗಾಡು ಮರಳು, ಮೇಲಿಂದ ಸುಡುಸುಡು ಬಿಸಿಲು, ಬಿಸಿ ಗಾಳಿ, ಮರೀಚಿಕೆ ಎಂಬ ಮರುಭೂಮಿಯ ನಿತ್ಯ ‘ಭ್ರಮೆ’ರಾಂಬ,
ನಿರ್ಜನ ಪ್ರದೇಶ, ಕಟು ನೀರವತೆ…ಇವೆಲ್ಲವುಗಳಿಗೆ ತಂಪೆರೆಲು ನಮ್ಮ ಹರಟೆ, ಮಾತುಕತೆ. ಮಸ್ಕತ್ ತಲುಪುವ ಹೊತ್ತಿಗೆ ರಾತ್ರಿಯಾಗಿತ್ತು. ವಿಮಾನ ಹಾಗೂ ರಸ್ತೆ ಪಯಣದ ದಣಿವು ನನ್ನನ್ನು ನಿರಾಯಾಸವಾಗಿ ಮಲಗಿಸಿತು.
ಮರುದಿನ ಆರಾಮವಾಗಿ ಎದ್ದು, ಮಸ್ಕತ್ ನಗರದಲ್ಲೊಂದು ಚಕ್ಕರ್ ಹೊಡೆದು, ಸಾಯಂಕಾಲವಾಗುತ್ತಿದ್ದಂತೆ ಆಮೆ ಮೊಟ್ಟೆ ಹಾಕುವ ಕಡಲತೀರದ ಕಡೆಗೆ ಪಯಣ ಬೆಳೆಸಿದೆವು. ಮಸ್ಕತ್‌ನಲ್ಲಿ ಐದಾರು ಕಡೆಗಳಲ್ಲಿ ಆಮೆಯ ಹೆರಿಗೆಗೆ ಪ್ರಶಸ್ತವಾದ ಕಡಲತೀರಗಳಿವೆ. ಆ ಪೈಕಿ ಮಸ್ಕತ್‌ನ ಈಶಾನ್ಯಕ್ಕಿರುವ ದೋ-ರ್ ಪ್ರಾಂತದ ಅಲ್ ಶರ್ಖಿಯಾ ಎಂಬ ಊರಿನ ಸನಿಹವಿರುವ ರಸ್ ಅಲ್ ಜಿಂಜ್ ಎಂಬ ಬೀಚ್ ಬಹಳ ಪ್ರಸಿದ್ಧವಾದುದು. ಅಲ್ಲಿ ಒಮಾನ್‌ನ ಪ್ರವಾಸೋದ್ಯಮ ಇಲಾಖೆ ಸುಸಜ್ಜಿತವಾದ ‘ಟರ್ಟಲ್ ನೇಚರ್ ರಿಸರ್ವ್’ ಎಂಬ ಪ್ರದೇಶವನ್ನೇ ಅಭಿವೃದ್ಧಿ ಪಡಿಸಿದೆ.
ಅಷ್ಟೇ ಅಲ್ಲ, ಮೊಟ್ಟೆ ಇಡುವುದನ್ನು ವೀಕ್ಷಿಸಲು ಆಗಮಿಸುವ ‘ಹುಚ್ಚ’ರಿಗಾಗಿ ಉತ್ತಮ ಲಾಡ್ಜ್ ಸೌಕರ್ಯ ಕಲ್ಪಿಸಿದೆ. ನಾವು ರಾತ್ರಿ ಎರಡು ಗಂಟೆಗೆ ರಸ್ ಅಲ್ ಜಿಂಜ್‌ನಲ್ಲಿ ಬಂದು ತಂಗಿದೆವು. ಬೆಳಗಿನ ಜಾವ ನಾಲ್ಕೂವರೆಗೆ ಏಳಬೇಕೆಂದೂ, ಲಾಡ್ಜ್‌ನ
ಸನಿಹದಲ್ಲಿಯೇ ಇರುವ ಕಡಲತೀರದಲ್ಲಿ ಐದು ಗಂಟೆಗೆ ಇರಬೇಕೆಂದೂ ನಮಗೆ ತಿಳಿಸಲಾಗಿತ್ತು. ಸರಿಯಾದ ಸಮಯಕ್ಕೆ
ನಾವು ಲಾಡ್ಜ್‌ನ ರಿಸೆಪ್‌ಶನ್‌ನಲ್ಲಿ ಹಾಜರಿದ್ದೆವು. ನಮ್ಮ ಜತೆ ಬೇರೆ ಬೇರೆ ದೇಶಗಳಿಂದ ಆಗಮಿಸಿದ ಹದಿನೈದು ಮಂದಿ ಇದ್ದರು. ಆ ಕತ್ತಲೆಯಲ್ಲಿ ಗೈಡ್‌ನ ಮಂದ ಟಾರ್ಚ್ ದೀಪ ಹಿಂಬಾಲಿಸಿ, ನಾವೆಲ್ಲ ಆಮೆ ಎಂಬ ‘ಗುಮ್ಮ’ನನ್ನು ನೋಡಲು ಕುತೂಹಲದಿಂದ ಹೆಜ್ಜೆ ಹಾಕಲಾರಂಭಿಸಿದೆವು.
ಲಾಡ್ಜ್‌ನಿಂದ ಹತ್ತು ನಿಮಿಷಗಳ ಹಾದಿ. ಸಮುದ್ರ ಹತ್ತಿರದಲ್ಲೇ ಸಮೀಪಿಸುತ್ತಿದೆ ಎಂಬುದಕ್ಕೆ ಅಲೆಯ ಸದ್ದು ಕೇಳಿಬರುತ್ತಿತ್ತು. ಯಾರೂ ಮಾತಾಡಬಾರದು, ಕೆಮರಾ ಫ್ಲ್ಯಾಷ್ ಉಪಯೋಗಿಸಕೂಡದು, ಸಮುದ್ರದ ದಡದಲ್ಲಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಓಡಾಡಕೂಡದು ಎಂದು ಗೈಡ್ ಮೊದಲೇ ಕಟ್ಟಪ್ಪಣೆ ವಿಽಸಿದ್ದ. ಹೀಗಾಗಿ ಎಲ್ಲರೂ ಉಸಿರು ಬಿಗಿ ಹಿಡಿದು ಅವನ ಹಿಂದೆ ಹೆಜ್ಜೆ ಹಾಕುತ್ತಿದ್ದರು.
ಏಕಾಏಕಿ ಗೈಡ್ ಹೆಜ್ಜೆ ಗತಿ ನಿಧಾನವಾಯಿತು. ಅವನಿಂದ ಎರಡು ಮೀಟರ್ ದೂರದಲ್ಲಿ ಸುಮಾರು ಎರಡು ಅಡಿ ಹಳ್ಳದ
ಉಸುಕಿನ ರಾಶಿ ಮೇಲಿನ ಬಿಳಿ ರವೆಯಂತಿರುವ ಕಣಗಳು ಸರಿದಾಡಿದಂತಾಯಿತು. ಗೈಡ್ ಸ್ತಬ್ಧನಾಗಿ ನಿಂತ. ಎಲ್ಲರೂ ಅವನ
ಅಕ್ಕ-ಪಕ್ಕ ನಿಂತರು. ಆ ಮರಳಿನ ರಾಶಿ ಮೇಲೆ ಆತ ಕೆಂಪು ದೀಪದ ಟಾರ್ಚ್ ಬಿಟ್ಟ. ಉಸುಕಿನ ಕಣಗಳು ಮೆಲ್ಲಗೆ ಸರಿದಾಡಿದವು. ಒಳಗೆ ಆಮೆ ಮೆಲ್ಲಗೆ ಮಲಗಿತ್ತು. ಒಳಗೆ ಅದು ಮಿಸುಕಾಡಿದಂತೆ ಮೇಲಿನ ಮರಳಿನ ಕಣಗಳು ಚಲಿಸುತ್ತಿದ್ದವು. ಹೆರಿಗೆ ಮಾಡು ವಾಗ ಗದ್ದಲವಾದರೆ, ಲೈಟ್ ಬಿಟ್ಟರೆ, ಮನುಷ್ಯರು ನೋಡಿದರೆ ಆಮೆಗೆ ವೇದನೆ, ಕಿರಿಕಿರಿಯಾಗುವುದು ಸಹಜ.
ಆದರೆ ಈ ಎಲ್ಲ ಬಾಧೆಗಳಿಂದ ಮುಕ್ತವಾಗಿರುವ ಪರಿಸರವನ್ನು ಗೈಡ್ ನಿರ್ಮಿಸಿದ್ದ. ಆ ಆಮೆ, ಆ ಕಗ್ಗತ್ತಲ ರಾತ್ರಿಯಲ್ಲಿ ಸಮುದ್ರದ ತೀರದಿಂದ ಪಾಕ್ ಉಗ್ರಗಾಮಿ ಕಸಬ್ ಮುಂಬೈ ನಗರಿಯೊಳಗೆ ಪ್ರವೇಶಿಸಿದಂತೆ, ಕಳ್ಳ ಹೆಜ್ಜೆ ಹಾಕುತ್ತಾ ಆ ಉಸುಕಿನ ರಾಶಿಯೊಳಗೆ ಯಾರಿಗೂ ಕಾಣದಂತೆ ಹಳ್ಳ ತೋಡಿ, ಅಲ್ಲಿ ಮೊಟ್ಟೆಗಳನ್ನು ಇಟ್ಟು, ನಂತರ ಅವನ್ನೆಲ್ಲ ಆ ಮರಳಿನಿಂದಲೇ ಮುಚ್ಚಿ, ತಾನೂ ಅದರೊಳಗೆ ಕೆಲ ಹೊತ್ತು ಅಡಗಿ, ಹೊರಗಿನ ಯಾವ ಪ್ರಾಣಿಗಳಿಗೂ ತಾನು ಮೊಟ್ಟೆಯಿಟ್ಟ ಕುರುಹು-ಸೂಚನೆ ಸಹ ಸಿಗದಂತೆ ಜಾಗ್ರತೆ ವಹಿಸಿತ್ತು.
ನಾವು ಅಲ್ಲಿಗೆ ಹೋಗುವ ಹೊತ್ತಿಗೆ ಈ ಪ್ರಕ್ರಿಯೆಗಳೆಲ್ಲ ಮುಗಿದು, ಅದು ಮರಳಿನ ಮುಚ್ಚಿಗೆಯಿಂದ ಮೆಲ್ಲಮೆಲ್ಲ ಹೊರಬರಲು ಹವಣಿಸುತ್ತಿತ್ತು. ಉಸಿರನ್ನು ಬಿಗಿಯಾಗಿ ಕಟ್ಟಿಕೊಂಡು, ಮೈಮೇಲೆ ಚೆಲ್ಲಿಕೊಂಡ ಆ ಮರಳ ರಾಶಿಯಿಂದ ಮೈಕೊಡವಿಕೊಂಡು ಎದ್ದೇಳಿ ಬರುವುದು ಅಷ್ಟು ಸುಲಭವಲ್ಲ. ದೋಣಿ ಹುಟ್ಟಿನಂಥ ಎರಡು ರೆಕ್ಕೆಗಳನ್ನು ಒಳಗಿನಿಂದಲೇ ಬೀಸಿದಾಗ ಉಸುಕಿನ ಕಣಗಳು ಚೆದುರಿದವು.
ಮತ್ತೆ ಎರಡು ನಿಮಿಷಗಳ ಬಳಿಕ ಮತ್ತೊಂದು ಬೀಸು. ಹೀಗೇ ಬೀಸಿ ಬೀಸಿ ಆ ಮರಳ ಹೊಂಡದಿಂದ ನಿಧಾನವಾಗಿ ಮೇಲೆದ್ದು, ಸುತ್ತಲೂ ಕಣ್ಣಾಡಿಸಿ, ಸಮುದ್ರದ ಕಡೆ ಇಡೀ ಶರೀರವನ್ನು ಎಳೆದುಕೊಂಡು, ‘ಆಮೆ’ಗಿಂತ ನಿಧಾನವಾಗಿ ನಡೆಯುತ್ತಾ, ತೆವಳುತ್ತಾ ಸಮುದ್ರ ತೀರದ ಬಳಿ ನಿಂತು, ಅಲೆಗಳಿಗೆ ಕಾದು, ಅವು ಬರುತ್ತಲೇ ಸಮುದ್ರದೊಳಗೆ ಇಳಿದು ಅದೃಶ್ಯವಾಗಿ ಬಿಟ್ಟಿತು!
ಮೊಟ್ಟೆ ಇಟ್ಟ ಜಾಗದಿಂದ ಸಮುದ್ರಕ್ಕಿಳಿಯುವವರೆಗೆ ಟ್ರ್ಯಾಕ್ಟರ್ ಟೈರ್ ಮಾರ್ಕ್‌ನಂತೆ ಆ ಮರಳ ತೀರದಲ್ಲಿ ಆಮೆಯ ಹೆಜ್ಜೆ ಗುರುತುಗಳಾಗಿದ್ದವು. ಅದೊಂದನ್ನು ಬಿಟ್ಟರೆ ಮೊಟ್ಟೆ ಇಟ್ಟಿದ್ದಕ್ಕೆ ಬೇರೆ ಸುಳಿವುಗಳೇನೂ ಇರಲಿಲ್ಲ. ಆಮೆಗಳು ರಾತ್ರಿ ಹತ್ತರಿಂದ ಬೆಳಗಿನ ಜಾವದ ಐದು ಗಂಟೆಯೊಳಗೇ ಮೊಟ್ಟೆಗಳನ್ನು ಇಡುತ್ತವೆ. ಇದಕ್ಕೆ ಮುಖ್ಯ ಕಾರಣ ಶತ್ರುಗಳಿಂದ ಮೊಟ್ಟೆಗಳನ್ನು ರಕ್ಷಿಸುವುದು. ಕಡಲತೋಳ, ನರಿಗಳಿಗೆ ಆಮೆ ಮೊಟ್ಟೆಗಳೆಂದರೆ ಬಲು ರುಚಿ. ಎಲ್ಲಿ ತತ್ತಿ ಹಾಕಿದರೂ ಹುಡುಕಿಕೊಂಡು ಬಂದು ತಿಂದು ಹೋಗುತ್ತವೆ.
ಮೊಟ್ಟೆ ಹಾಕಿದ ನಂತರ ತಕ್ಷಣ ಅವೆಲ್ಲವುಗಳನ್ನೂ ಯಾರಿಗೂ ಕಾಣದಂತೆ ಮುಚ್ಚಿ, ಬೆಳಕು ಹರಿಯುವ ಮುನ್ನವೇ ಕಡಲು
ಸೇರುತ್ತದೆ. ಅಲ್ಲಿಂದ ಅದು ಎಲ್ಲಿಗೆ ಹೋಗುವುದೋ ಆ ಪರಮಾತ್ಮನೇ ಬಲ್ಲ. ಸುಮಾರು ೪೮-೫೦ ದಿನಗಳ ನಂತರ, ತಾನು
ಮೊಟ್ಟೆ ಇಟ್ಟ ಜಾಗವನ್ನು ಹುಡುಕಿಕೊಂಡು, ಅಲ್ಲಿಗೇ ಆಗಮಿಸುತ್ತದೆ. ಕೆಲವೊಮ್ಮೆ ಮನುಷ್ಯರೇನಾದರೂ ಆ ಮರಳ ರಾಶಿ ಮೇಲೆ ನಡೆದರೆ, ಹಾರಿ ಕುಣಿದು ಆಟವಾಡಿದರೆ ಎಲ್ಲಾ ಮೊಟ್ಟೆಗಳು ನಾಶವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಹೀಗಾಗಿ ಆ ತೀರದಲ್ಲಿ ಮನುಷ್ಯರ ಚಲನೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಲಾಗಿದೆ. ಉಸುಕಿನ ಹೊಂಡದಲ್ಲಿ ಹೆಜ್ಜೆ
ಇಡದಂತೆ ನಿಗಾ ವಹಿಸಲಾಗಿದೆ. ಆದರೂ ಕೆಲವೊಮ್ಮೆ ಸಮುದ್ರದ ಗಾಳಿಗಳಿಂದ ಉಸುಕಿನ ಹೊಂಡ ಮುಚ್ಚಿಹೋಗಿ, ಅಡಿಯಲ್ಲಿ ಮೊಟ್ಟೆಗಳಿರುವುದು ಗೊತ್ತಾಗದೇ ಹೋಗುವ ಸಾಧ್ಯತೆಯೂ ಉಂಟು. ಸಮುದ್ರದಿಂದ ಮರಳಿ ಬಂದ ನಂತರ, ಆಮೆಗೆ ತಾನು ಎಲ್ಲಿ ಮೊಟ್ಟೆ ಇಟ್ಟಿದ್ದೇನೆ ಎಂಬುದನ್ನು ಪತ್ತೆ ಹಚ್ಚಲು ಸ್ವಲ್ಪವೂ ಕಷ್ಟವಾಗುವುದಿಲ್ಲ. ಐದಾರು ದಿನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಹೊರಬರುವ ತನಕ ಕಾಪಾಡುವುದು ಕಷ್ಟದ ಕೆಲಸ.
ಆಗಸದಲ್ಲಿ ರಣಹದ್ದುಗಳು, ಬೆಳ್ಳಕ್ಕಿಗಳು ಆಗತಾನೆ ಹೊರಬಂದ ಆಮೆಮರಿಗಳನ್ನು ತಿನ್ನಲು ಹೊಂಚುಹಾಕುತ್ತಿರುತ್ತವೆ.
ಏಡಿಗಳು ಹಾಗೂ ಇನ್ನಿತರ ಸರೀಸೃಪಗಳು ಸಹ ಕಾದು ಕುಳಿತಿರುತ್ತವೆ. ಇವೆಲ್ಲವುಗಳಿಂದ ರಕ್ಷಿಸಿಕೊಂಡು ಆ ಪುಟ್ಟ ಮರಿ ಗಳನ್ನು ಸಮುದ್ರಕ್ಕೆ ಕರೆದುಕೊಂಡು ಹೋದರೆ, ಅಲ್ಲಿ ಲಕ್ಷಾಂತರ ಮೀನುಗಳು ಇವುಗಳನ್ನು ಕಬಳಿಸಲು ಸಿದ್ಧವಾಗಿರುತ್ತವೆ.
ಕೆಲವೊಮ್ಮೆ ಈ ಕಡಲಾಮೆಗಳು ಸುಮಾರು ಹತ್ತು ಸಾವಿರ ಕಿಮೀ ಪ್ರಯಾಣ ಮಾಡಿ, ರಸ್ ಅಲ್ ಜಿಂಜ್ ಕಡಲತೀರಕ್ಕೆ ಮೊಟ್ಟೆ
ಇಡಲು ಬಂದು, ೩೦-೪೦ ಮೊಟ್ಟೆಗಳನ್ನು ಇಟ್ಟರೂ, ಒಂದೂ ಮರಿಯನ್ನು ಬದುಕಿಸಿಕೊಳ್ಳಲಾಗದೇ ಏಕಾಂಗಿಯಾಗಿ ಹೋಗುವುದೂ ಉಂಟು.
ಮೊಟ್ಟೆಯನ್ನು ಸಂರಕ್ಷಿಸಿದರೂ, ಮರಿಗಳನ್ನು ಕಾಪಾಡಲಾಗದೇ ಪರಿತಪಿಸುವುದುಂಟು. ಸಾವಿರ ಮೊಟ್ಟೆಗಳ ಪೈಕಿ, ಇನ್ನೂರೋ, ಇನ್ನೂರೈವತ್ತೋ ಮೊಟ್ಟೆಗಳಿಂದ ಮರಿ ಹೊರಬಂದರೆ, ಆ ಪೈಕಿ ಐದೋ, ಹತ್ತೋ ಬದುಕುಳಿದು ದೊಡ್ಡ
ದಾಗಬಹುದು. ಈ ಜಗತ್ತು ಅದೆಷ್ಟು ಕ್ರೂರವಾಗಿದೆಯೆಂಬುದು ಆಮೆಗಿಂತ ಬೇರೆ ಯಾರಿಗೂ ಸ್ವಾನುಭವದ ಮೂಲಕ ಅರಿವಿಗೆ
ಬರಲಿಕ್ಕಿಲ್ಲ. ಇನ್ನು ಕೆಲವು ಸಲ ಸಾವಿರ ಮೊಟ್ಟೆಗಳಲ್ಲಿ ಒಂದೂ ಮರಿಯಾಗಿ, ದೊಡ್ಡದಾಗದೇ ಹೋಗಬಹುದು.
ಆಮೆಯ ತಾಯ್ನಾಡಿನ ಮಮತೆ ಅನುಪಮವಾದುದು. ಅದು ತಾನು ಹುಟ್ಟಿದ ಕಡಲ ತೀರದಲ್ಲಿಯೇ ಮೊಟ್ಟೆಗಳನ್ನು ಇಡಲು ಬರುತ್ತದೆ. ಕೆಲವು ಸಲ ಖಂಡಾಂತರ ವಲಸೆ ಹೋಗುವುದುಂಟು. ಎರಡು-ಮೂರು ವರ್ಷಗಳ ಕಾಲ ಸುತ್ತುತ್ತಲೇ ಇರುವು ದುಂಟು. ಆದರೆ ಮೊಟ್ಟೆ ಇಡಲು ಮಾತ್ರ ತಾನು ಯಾವ ಕಡಲ ತೀರದಲ್ಲಿ ಹುಟ್ಟಿದ್ದೆನೋ ಅಲ್ಲಿಗೇ ಬರುತ್ತದೆ. ಅಂಥ ತವರಿನ ಸೆಳೆತ! ಹುಟ್ಟಿದ ಮೂವತ್ತು- ಮೂವತ್ತೈದು ವರ್ಷಗಳ ನಂತರ, ಆಮೆಗಳು ಮೊಟ್ಟೆ ಇಡುವ ಸಾಮರ್ಥ್ಯ ಪಡೆಯುತ್ತವೆ. ಅಂದರೆ, ತಾಯಿಯಾಗುತ್ತವೆ. ಈ ಅವಧಿಯಲ್ಲಿ ಒಂದು ಸಲವೂ ತಾನು ಹುಟ್ಟಿದ ಕಡಲ ತೀರಕ್ಕೆ ಬರದಿರಬಹುದು.
ಆದರೆ ಅದೆಂಥ ಕರುಳ ಬಳ್ಳಿಯ ಸೆಳೆತವೋ, ಮೊಟ್ಟೆ ಯಿಡುವ ಸಮಯ ಬಂತೆಂದರೆ, ತಾನು ಹುಟ್ಟಿದ ಜಾಗಕ್ಕೇ ಬರುತ್ತದೆ. ಈ ೩೦-೩೫ ವರ್ಷಗಳ ಅವಧಿಯಲ್ಲಿ ಆ ಕಡಲ ಕಿನಾರೆ ಸಂಪೂರ್ಣ ಬದಲಾಗಿರಬಹುದು. ಆದರೆ ಅದು ಮೊಟ್ಟೆಯಿಡುವುದು ಮಾತ್ರ ಅಲ್ಲಿಯೇ! ಮೊಟ್ಟೆ ಇಟ್ಟು ೪೮-೫೦ ದಿನ, ಆಮೆ ಆ ಕಡಲ ತೀರದ ಕಡೆ ಸುಳಿಯುವುದಿಲ್ಲ. ಈ ಅವಧಿಯಲ್ಲಿ ತಾಯಿ ಆಮೆಗೆ ಮೊಟ್ಟೆ ಇಟ್ಟ ಜಾಗಕ್ಕೆ ಬರಲಾಗದಿದ್ದರೆ, ಹಂತಕರ ಕೈಗೆ ಸಿಕ್ಕಿ ಬಿದ್ದರೆ, ಮೀನುಗಾರನ ಬಲೆಯೊಳಗೆ ಸಿಕ್ಕಿಬಿದ್ದರೆ, ಮರಳಿನೊಳಗೆ ಇರುವ ಮೊಟ್ಟೆಗಳು ಅಲ್ಲಿಯೇ ಉಳಿದು ಮರಿಗಳಿಗೆ ಹೊರಬರಲಾಗದಿರಬಹುದು.
ಕಾವು ಕೊಡದ ಮೊಟ್ಟೆಗಳು ಮರಳಿನಲ್ಲಿಯೇ ಸಮಾಧಿಯಾಗಬಹುದು. ಒಂದು ಸಲ ಮೊಟ್ಟೆ ಇಟ್ಟು ಕಡಲು ಸೇರಿದ ನಂತರ, ಆಮೆ ಆ ಜಾಗಕ್ಕೆ ಪದೇಪದೆ ಬರುವಂತಿಲ್ಲ. ಆಗಾಗ ಬಂದರೆ ಅದೇ ಮೊಟ್ಟೆ ಇಟ್ಟ ಜಾಗವನ್ನು ಬೇರೆ ಪ್ರಾಣಿ, ಪಕ್ಷಿಗಳಿಗೆ ತಿಳಿಸಿಕೊಟ್ಟಂತಾಗಬಹುದು. ಈ ಕಾರಣಕ್ಕಾಗಿಯೇ ಆಮೆಗಳು ರಾತ್ರೋ ರಾತ್ರಿ ಕಸಬ್‌ನಂತೆ ಬಂದು, ಬೆಳಕು ಹರಿಯುವ ಮುನ್ನ ಪರಾರಿ ಯಾಗುವುದು. ಕೆಲವು ಸಲ ಮೊಟ್ಟೆ ಇಟ್ಟ ಜಾಗಕ್ಕೆ ಒಂದೂವರೆ ತಿಂಗಳ ನಂತರ ಬಂದರೆ, ಅಲ್ಲಿ ಏನೂ ಸಿಗದೇ ಹೋಗಬಹುದು. ಆಗ ತಾಯಿ ಆಮೆ ವಿಚಿತ್ರವಾಗಿ ವರ್ತಿಸುವುದುಂಟು.
ರೆಕ್ಕೆ, ಕೈಕಾಲು, ಮುಖವನ್ನು ಚಿಪ್ಪಿನೊಳಗೆ ಅವಿತಿಟ್ಟುಕೊಂಡು ಪರಿತಪಿಸುವುದುಂಟು. ಕೂರ್ಮನ ಈ ಮರ್ಮ ಯಾರಿಗೂ ಅರ್ಥವಾಗುವುದೇ ಇಲ್ಲ! ಅದರ ಭಾವನೆ, ಅಂತರಂಗ, ಕಣ್ಣೀರು, ತುಮುಲ, ವೇದನೆ ಮಾತ್ರ ಚಿಪ್ಪಿನೊಳಗೇ ಹೂತು ಹೋಗಿರುತ್ತದೆ! ಮೊಟ್ಟೆಗಳಿಗೆ ಕಾವು ಕೊಟ್ಟು, ಮರಿ ಮಾಡಿ, ಆ ಮರಿಗಳ ತಂಡದೊಂದಿಗೆ ಸಮುದ್ರಕ್ಕೆ ಹೋಗುವಾಗ, ಹದ್ದುಗಳು, ಹಾವುಗಳು ಮರಿಗೆ ಬಾಯಿ ಹಾಕುತ್ತವೆ. ಚಿಕ್ಕ ಆಂಬೊಡೆ ಗಾತ್ರದ ಮರಿಗಳ ಮೇಲೆ ಏಡಿಗಳು ದಾಳಿ ಮಾಡುತ್ತವೆ. ಆಗ ಅವುಗಳ ರಕ್ಷಣೆಗೆ ತಾಯಿ ಆಮೆ ಧಾವಿಸುತ್ತದೆ. ಆದರೆ ಅದೇ ವೇಳೆ ಬೇರೆ ಪಕ್ಷಿಗಳು ಮರಿಗಳನ್ನು ಕಚ್ಚಿ ಹೊತ್ತೊಯ್ಯುತ್ತವೆ.
ಮೊಟ್ಟೆ ಹಾಕಿದ ಜಾಗದಿಂದ ಸಮುದ್ರ ಸೇರುವ ತನಕ ಹತ್ತಾರು ಮರಿಗಳು ತಾಯಿ ಮುಂದೆಯೇ ಹಂತಕರ ಪಾಲಾಗುತ್ತವೆ. ಈ ದೃಶ್ಯ ಎಂಥ ಹೆತ್ತ ಕರುಳಿಗಾದರೂ ಹೃದಯವಿದ್ರಾವಕವೇ! ಇಲ್ಲಿಂದ ಹೇಗೋ ಬಚಾವಾಗಿ ಮರಿಗಳೊಂದಿಗೆ ನೀರಿಗಿಳಿದರೆ, ನೂರಾರು ಜಲಚರ ಜೀವಿಗಳ ಕಾಟ, ಉಪಟಳ. ಪಾಪ, ತಾಯಿ ಆಮೆ ಹೈರಾಣಾಗಿ ಹೋಗುತ್ತಾಳೆ. ಒಂದೋ-ಎರಡೋ ಮರಿಗಳನ್ನು ಮಾತ್ರ ದೊಡ್ಡದು ಮಾಡುವ ಹೊತ್ತಿಗೆ ಮೂರು ಜನ್ಮ ಎತ್ತಿ ಬಂದಂತಾಗುತ್ತದೆ.
ಇನ್ನು ಮೊಟ್ಟೆ ಇಡಲು ಬರುವ ಆಮೆಗಳ ಮಂದಗತಿ ಚಲನೆ ಅರಿತು ಅವುಗಳನ್ನು ಹಿಡಿದು, ಕಳ್ಳಸಾಗಣೆ ಮಾಡಿ, ಮಾರುವ ಆಮೆಗಳ್ಳರ ಜಾಲ ಇವೆಲ್ಲಕ್ಕಿಂತ ಭಯಾನಕ. ಅಂದು ರಸ್ ಅಲ್ ಜಿಂಜ್‌ನಲ್ಲಿ ಮೊಟ್ಟೆಯಿಟ್ಟು ಸೂರ್ಯ ಏಳುವ ಮುನ್ನವೇ ಸಮುದ್ರದ ಕಡೆಗೆ ತೆವಳುತ್ತಾ ಸಾಗಿದ ಆ ಆಮೆ ಎಲ್ಲಿ ಹೋಯಿತೋ, ಎಲ್ಲಿ ಅದೃಶ್ಯವಾಯಿತೋ? ಇಲ್ಲಿ ಆ ಮರಳಿನ ಗರ್ಭ ದೊಳಗಿನ ಮೊಟ್ಟೆಗಳನ್ನು ಮಾತ್ರ ಭಗವಂತನೇ ಕಾಪಾಡಬೇಕು! ಎಲ್ಲ ಮೊಟ್ಟೆಗಳೂ ಮರಿಯಾಗುವುದಿಲ್ಲ ಎಂಬ ಸತ್ಯ, ಪಾಪ, ಆ ತಾಯಿ ಆಮೆಗೂ ಗೊತ್ತಿಲ್ಲ. ಇನ್ನು ಆ ಮೊಟ್ಟೆಗಳಿಗೆ ಏನು ಕಾದಿವೆಯೋ?!