Friday, 22nd November 2024

ತೆಲುಗು ಖಳನಟ ಜಯಪ್ರಕಾಶ್ ರೆಡ್ಡಿ ವಿಧಿವಶ

ಹೈದರಾಬಾದ್: ತೆಲುಗು ಚಿತ್ರತಂಡದ ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ(74)ಯವರು ಇಂದು ಹೃದಯಾಘಾತದಿಂದ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

ಹಾಸ್ಯ ಮತ್ತು ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ಜಯಪ್ರಕಾಶ್ ರೆಡ್ಡಿಯವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್, ಕಬಡ್ಡಿ ಕಬಡ್ಡಿ ಮುಂತಾದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದರು.

ಕಳೆದ ವರ್ಷದ ತೆರೆಕಂಡ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವರು ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ನಟನ ಅಗಲಿಕೆಗೆ ಟಾಲಿವುಡ್​ ಸೇರಿದಂತೆ ಇತರೆ ಭಾಷೆಯ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.ಬ್ರಹ್ಮಪುತ್ರುಡು ಚಿತ್ರದ ಮೂಲಕ ಟಾಲಿವುಡ್​ಗೆ ಪರಿಚಯವಾದ ಜಯಪ್ರಕಾಶ್​ ಅವರು ವೆಂಕಟೇಶ್​ ಅಭಿನಯದ ಪ್ರೇಮಿಂಚುಕುಂದಾಂ ರಾ ಸಿನಿಮಾದ ಮೂಲಕ ಖ್ಯಾತಿ ಪಡೆದುಕೊಂಡರು. ಭಗವಾನ್​, ಬಾವಗಾರು ಬಾಗುನ್ನಾರಾ, ಸಮರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಸಮರ ಸಿಂಹ ರೆಡ್ಡಿ ಸಿನಿಮಾದಲ್ಲಿನ ಅಭಿನಯಕ್ಕೆ ನಂದಿ ಪ್ರಶಸ್ತಿ ಸಹ ಸಿಕ್ಕಿತ್ತು. ಖಳನಟನ ಪಾತ್ರಗಳ ಜೊತೆಗೆ ಕಾಮಿಡಿ ರೋಲ್​ಗಳಲ್ಲೂ ರಂಜಿಸುತ್ತಿದ್ದ ಜಯಪ್ರಕಾಶ್​ ರೆಡ್ಡಿ ಕಡೆಯದಾಗಿ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾಗೆ ಬರುವ ಮೊದಲು ಜಯಪ್ರಕಾಶ್​ ರೆಡ್ಡಿ ಪೊಲೀಸ್​ ಇಲಾಖೆಯಲ್ಲಿ ಎಸ್​ಐ ಆಗಿದ್ದರು. ನಂತರ ಖ್ಯಾತ ನಿರ್ದೇಶಕ ದಾಸರಿ ನಾರಾಯಣರಾವ್​ ಅವರು ಇವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು.