Friday, 22nd November 2024

ಐಸಿಐಸಿಐ ಬ್ಯಾಂಕ್‌ನ ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್ ಬಂಧನ

ವದೆಹಲಿ: ಸಾಲ ಮಂಜೂರಾತಿಯಲ್ಲಿ ಅಕ್ರಮ, ವಂಚನೆ ಪ್ರಕರಣದಲ್ಲಿ ಸಿಬಿಐ, ಶುಕ್ರವಾರ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್ ರನ್ನು ಬಂಧಿಸಿದೆ.

ವಿಡಿಯೊಕಾನ್ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಮತ್ತು ವಂಚನೆ ಆರೋಪದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ದಂಪತಿಗಳ ಬಂಧನವಾಗಿದೆ. ಈ ಪ್ರಕರಣ ಕುರಿತು 2019ರಲ್ಲಿ ಸಿಬಿಐ ಎಫ್‌ಐಆರ್ ದಾಖಲು ಮಾಡಿತ್ತು.

ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿ ಗಳಿಗೆ ಸಾಲ ಮಂಜೂರಾತಿ ಮಾಡಿದ್ದಾರೆ ಎಂಬುದು ಆರೋಪ.

 

ವಿಡಿಯೊಕಾನ್ ಗ್ರೂಪ್ ಐಸಿಐಸಿಐ ಬ್ಯಾಂಕ್‌ನಿಂದ 3000 ಕೋಟಿ ಸಾಲ ಪಡೆದ ನಂತರ ಪ್ರವರ್ತಕ ವೇಣುಗೋಪಾಲ್ ನ್ಯೂಪವರ್‌ನಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದರು.

ಭಾರೀ ನಷ್ಟದಲ್ಲಿದ್ದ ಕಂಪನಿಗೆ ಬ್ಯಾಂಕ್ ಇಷ್ಟು ದೊಡ್ಡ ಮೊತ್ತದ ಸಾಲ ನೀಡಿದ್ದು ಹೇಗೆ? ಎಂಬುದು ಸಹ ಅನುಮಾನಕ್ಕೆ ಕಾರಣವಾಗಿದೆ.

ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಪಡೆದ ಬಳಿಕ ವೇಣುಗೋಪಾಲ್ ಸುಪ್ರೀಂ ಎನರ್ಜಿ ಎಂಬ ಕಂಪನಿಗೆ ಹಣ ವರ್ಗಾಯಿ ಸಿದ್ದರು. ಅದರಲ್ಲಿ ಅವರು ಶೇ 90ರಷ್ಟು ಷೇರು ಹೊಂದಿದ್ದರು. ನಂತರ ಆ ಕಂಪನಿಯನ್ನು ದೀಪಕ್ ಕೊಚ್ಚಾರ್ ಅವರಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.

ವಿಡಿಯೊಕಾನ್‌ಗೆ ಐಸಿಐಸಿಐ ಬ್ಯಾಂಕ್ 3000 ಕೋಟಿ ರೂ.ಗೂ ಅಧಿಕ ಸಾಲ ನೀಡಿತ್ತು. ಆದರೆ ಸಾಲದ ಶೇ 80ರಷ್ಟು ಮೊತ್ತವೂ ಮರುವಾಪತಿಯಾಗಿಲ್ಲ. 2017ರಲ್ಲಿ ಈ ಸಾಲ ಸುಸ್ತಿಸಾಲ ಎಂದು ಘೋಷಣೆಯಾಗಿತ್ತು.

Read E-Paper click here