ವಿದೇಶವಾಸಿ
dhyapaa@gmail.com
ಶಿಕ್ಷಣ ಮತ್ತು ಅನುಭವ, ಎರಡರಲ್ಲಿ ಯಾವುದು ಮೊದಲು? ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಇದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಇದ್ದಂತೆಯೇ. ಇತ್ತೀಚಿನ ವರ್ಷಗಳಲ್ಲಿ ಕೆಲವು ಉದ್ಯೋಗ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಿಗೇ ಬಂದು
ಉದ್ಯೋಗ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಉದ್ಯೋಗಾರ್ಥಿಗಳಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾದರೂ ಈ ಅವಕಾಶ ಎಲ್ಲರಿಗೂ ಇಲ್ಲ ಎನ್ನುವುದನ್ನು ಒಪ್ಪಲೇ ಬೇಕು.
ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳಲು ಶಿಕ್ಷಣ, ಪದವಿ ಅಗತ್ಯ. ಉದ್ಯೋಗ ದೊರೆತ ಮೇಲೆ ವೃತ್ತಿಯಲ್ಲಿ ಔನ್ನತ್ಯದೆಡೆಗೆ ನಡೆಯಲು ಅನುಭವ ಮತ್ತು ಕಾರ್ಯಕ್ಷಮತೆ ಮಹತ್ತರ ಪಾತ್ರವಹಿಸುತ್ತದೆ ಎನ್ನುವುದೂ ಸತ್ಯ. ಶಿಕ್ಷಣ ಮತ್ತು ಅನುಭವ ಎರಡೂ ಒಟ್ಟಿಗೆ ಕೈ ಕೈ ಹಿಡಿದು ನಡೆದರೆ ವೃತ್ತಿ ಪಯಣ ಸುಗಮ ವಾಗುತ್ತದೆ, ಕೈಗೊಂಡ ಕಾರ್ಯ ಸುಲಭವಾಗುತ್ತದೆ, ಉದ್ಯೋಗದ ಭವನ ಅಭ್ಯುದಯವಾಗುತ್ತದೆ.
ಆದರೂ ಅಂದು ಇಂದು ಉದ್ಯೋಗ ಇದಕ್ಕೆ ಅಪವಾದ. ಅಲ್ಲಿ ಅನುಭವವೇ ಮುಖ್ಯ. ಅದಕ್ಕೆ ಉತ್ತಮ ಉದಾಹರಣೆ ಸೌದಿ ಅರೇಬಿಯಾ ದಂಥ ದೇಶಗಳಲ್ಲಿ ಮರಳು ಎತ್ತುವ ಕೆಲಸ. ಸೌದಿ ಅರೇಬಿಯಾ, ಖತಾರ್, ಒಮನ್, ಕುವೈತ್ ನಂಥ ದೇಶದಲ್ಲಿ ಮರಳು ತೆರವುಗೊಳಿಸುವುದು ಒಂದು ದೊಡ್ದ ಉದ್ಯಮ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಮರಳಿಗೆ ಕೈ ಹಾಕಿದರೆ ಚಿನ್ನದ ಗಣಿಗೆ ಕೈ ಹಾಕಿದಂತೆಯೇ. ಅರೇಬಿಯಾದ ಮರುಭೂಮಿ ಭೀಕರ. ಕೆಲವು ಕಡೆ ಒಬ್ಬೊಬ್ಬರೇ ಹೋಗಲಾರದಷ್ಟು ಭಯಾನ ಕವೂ ಹೌದು.
ಬೇಸಿಗೆಯಲ್ಲಿ ಐವತ್ತು ಡಿಗ್ರಿ ತಾಪಮಾನ ತಲುಪುವ ಘನ ಘೋರ ಉಷ್ಣತೆ. ಮೇಲಿನಿಂದ ಉರಿಯುವ ಸೂರ್ಯನ ಬಿಸಿಲ ಬೇಗೆ, ಕೆಳಗಿನಿಂದ ಮರಳಲ್ಲಿ ಬೆಂದು ಹೋಗುವ ಧಗೆ. ಚಳಿಗಾಲದಲ್ಲಿ, ನೇರ ಮೂಳೆ ಮಜ್ಜೆಗೆ ದಬ್ಬಣ ತೂರಿಸಿದಂತೆ ಭಾಸ ವಾಗುವ ಚಳಿ. ಆಗಾಗ ರಭಸವಾಗಿ ಬೀಸುವ, ನೂರಾರು ಕಿಲೋಮೀಟರ್ ದೂರದಿಂದ ಮರಳನ್ನು ಹೊತ್ತು ತರುವ ಬಿರುಗಾಳಿ. ಅದರ ನಾದರೂ ಸಿಕ್ಕಿಕೊಂಡಿರೆಂದು ಅಂದುಕೊಳ್ಳಿ, ಗಾಳಿಗೆ ತೆರೆದುಕೊಂಡ ದೇಹದ ಭಾಗಕ್ಕೆಲ್ಲ ನೂರಾರು ಸೂಜಿ ಚುಚ್ಚಿದ ಅನುಭವವಾಗುತ್ತದೆ. ಆ ಬಿರುಗಾಳಿಗೆ ದೊಡ್ಡ ದೊಡ್ಡ ಮರಳ ಗುಡ್ಡವೇ ಒಕ್ಕಲೆದ್ದು ಹೋಗುತ್ತವೆ.
ಮರುಭೂಮಿಯಲ್ಲಿ ನಿನ್ನೆ ಕಂಡ ರೇತಿಯ ದಿಬ್ಬ ಇಂದು ಕಾಣುವುದಿಲ್ಲ, ಇಂದಿದ್ದ ಹೊಯಿಗೆಯ ರಾಶಿ ನಾಳೆ ಇರುವುದಿಲ್ಲ, ನಾಳೆ ಇರಬೇಕಾದ ಉಸುಕಿನ ದಿಣ್ಣೆ ನಾಡಿದ್ದು ಇಲ್ಲ. ಸೌದಿ ಅರೇಬಿಯಾದಂಥ ದೇಶದಲ್ಲಿ ಮರಳು ದೊಡ್ದ ಸಂಚಾರಿ. ಅದು
ಸಂಚರಿಸಿದಷ್ಟು ದೂರ ಯಾರೂ ಸಂಚರಿಸುವುದಿಲ್ಲ. ದೇಶ ಸುತ್ತುವ ಕಾರ್ಯದಲ್ಲಿ ಗಾಳಿಯ ಸಂತರದ ಸ್ಥಾನವೇನಾದರೂ ಇದ್ದರೆ ಅದು ಮರಳಿಗೇ ಮೀಸಲು. ಸೌದಿ ಅರೇಬಿಯಾದ ಬಹುಭಾಗ ಮರಳುಗಾಡು. ಸಣ್ಣ ಸಣ್ಣ ಹಳ್ಳಿಗಳನ್ನು ಜೋಡಿಸುವ
ಪುಟ್ಟ ಪುಟ್ಟ ರಸ್ತೆಗಳು ರೇತಿಯ ಗುಡ್ಡಗಳ ಮಧ್ಯದಿಂದಲೇ ಹಾದು ಹೋಗುತ್ತವೆ.
ಬೃಹತ್ ಗಾತ್ರದ ರಾಷ್ಟ್ರೀಯ ಹೆzರಿಗಳೂ ಇದೇ ಮರಳು ದಿಬ್ಬವನ್ನು ಸೀದುಕೊಂಡೇ ಹೋಗುತ್ತವೆ. ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಪ್ರದೇಶಗಳಲ್ಲಿ ದಾರಿಯುದ್ದಕ್ಕೂ ಪ್ರಯಾಣಿಕನ ಜೊತೆಗಾರ ಇದೇ ಮರಳುಗಾಡು. ಆಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ಕಾಣ ಸಿಗುವ ಒಂಟೆಯ ಹಿಂಡು, ಕುರಿಗಳ ದಂಡು ಬಿಟ್ಟರೆ ಮರುಭೂಮಿಯ ಭೀಕರ ಮೌನ. ಇಪ್ಪತ್ತೈದು ಮೂವತ್ತು
ಕಿಲೋ ಮೀಟರ್ ದೂರದಲ್ಲಿ ಒಂದೊಂದು ಪೆಟ್ರೋಲ್ ಪಂಪ್.
ಅಲ್ಲಿಯೇ ಸಣ್ಣ ಗ್ಯಾರೇಜ್, ಚಹಾದ ಅಂಗಡಿ, ಸಣ್ಣ ಕಿರಾಣಿ ಅಂಗಡಿ. ಮಧ್ಯದಲ್ಲಿ ಪ್ರಾಣ ಹೋಗುತ್ತದೆ ಎಂದರೂ ಏನೂ ಸಿಗುವುದಿಲ್ಲ. ಇದು ಹೆದ್ದಾರಿಯ ಕಥೆಯಾದರೆ, ಸಣ್ಣ ಊರುಗಳಿಗೆ ಹೋಗುವ ರಸ್ತೆಗಳ ಕಥೆ ಇನ್ನೂ ಗಂಭೀರ. ಹೆದ್ದಾರಿಗಳಲ್ಲಿ ಮರಳು ಜಮೆ ಯಾದರೆ ಸಂಚಾರ ಸ್ಥಗಿತಗೊಳ್ಳುವ ಅಥವಾ ಭೀಕರ ಅಪಘಾತಗಳು ಸಂಭವಿಸುವ ಅಪಾಯ ಇದ್ದೇ ಇದೆ.
ಕೊಲ್ಲಿ ರಾಷ್ಟ್ರಗಳಲ್ಲಿ ಬಹುತೇಕ ಇಂತಹ ಮರುಭೂಮಿಯ ಹೆಚ್ಚಿನ ತೈಲ ನಿಕ್ಷೇಪ ಇರುವುದು ಎಂದರೆ ಆಶ್ಚರ್ಯ ಪಡಬೇಡಿ. ಈ ತೈಲ ನಿಕ್ಷೇಪ ಹುಡುಕುವ ಕಾರ್ಯ ಮಾಡುವವರಿಂದ ಹಿಡಿದು ತೈಲ ಸಿಕ್ಕಿದ ನಂತರ ಅದನ್ನು ಕೊಳವೆಯ ಮೂಲಕ ಸಂಸ್ಕರಣಾ ಕೇಂದ್ರಕ್ಕೆ ಜೋಡಿಸುವವರೆಗಿನ ಎಲ್ಲಾ ಕೆಲಸದಲ್ಲೂ ಭಾಗಿಯಾಗುವ ಪ್ರತಿಯೊಬ್ಬನೂ ಸಾಹಸಿಗನೇ. ಏನೂ ಇಲ್ಲದ ಮರಳುಗಾಡಿನಲ್ಲಿ ಅಲೆಯುವುದೆಂದರೆ ಸಾಮಾನ್ಯದ ಮಾತಲ್ಲ.
ತೈಲ ನಿಕ್ಷೇಪ ಹುಡುಕಲು ಹೋಗುವಾಗ ಮಾರ್ಗಗಳೇ ಇರುವುದಿಲ್ಲ. ವಿಶೇಷ ವಾಹನದಲ್ಲಿ ಮರಳಿನ ಮಧ್ಯ ಸಂಚರಿಸಬೇಕು, ನಿಕ್ಷೇಪದ ಸ್ಥಳ ಗುರುತಿಸಬೇಕು. ನಂತರ ಮಾರ್ಗ ನಿರ್ಮಾಣವಾಗಬೇಕು. ಕೆಲವೊಮ್ಮೆ ಮುಂಚಿತವಾಗಿ ನಿರ್ಮಾಣವಾದ ಮಾರ್ಗಗಳಿದ್ದರೂ ಬಿರುಗಾಳಿಯ ಜೊತೆ ಬಂದ ಮರಳು ಮಾರ್ಗ ಮಧ್ಯದಲ್ಲಿ ವಕ್ಕರಿಸಿಕೊಂಡಿರುತ್ತದೆ. ಅಂತಹ ಸಂದ
ರ್ಭದಲ್ಲಿ ಮಾರ್ಗವನ್ನು ಅತಿಕ್ರಮಿಸಿಕೊಂಡ ಮರಳಿನ ರಾಶಿಯನ್ನು ಹೊರದಬ್ಬಬೇಕು. ನಂತರವೇ ತೈಲದ ಬಾವಿ ಕೊರೆಯುವ ‘ರಿಗ್’ನಂಥ ಉಪಕರಣಗಳ ಸಾಗಾಟವಾಗಬೇಕು.
ರಿಗ್‌ನ ಸಮೀಪದಲ್ಲಿಯೇ ಕೆಲಸಗಾರರಿಗೆ ವಸತಿ ಸೌಕರ್ಯದ ಏರ್ಪಾಟಾಗಬೇಕು. ಅವರಿಗೆ ಊಟೋಪಚಾರದ ವ್ಯವಸ್ಥೆ ಆಗ
ಬೇಕು. ಇಷ್ಟೆಲ್ಲ ಆದರೂ ಮುಗಿಯಿತು ಎನ್ನುವಂತಿಲ್ಲ. ಆಹಾರ, ನೀರು, ಇನ್ನಿತರ ಯಾವುದೇ ವಸ್ತುವಿನ ಸಂಗ್ರಹ ತೀರಿ ಹೋದರೆ ಐವತ್ತು, ಅರವತ್ತು, ಕೆಲವೊಮ್ಮೆ ನೂರಾರು ಕಿಲೋಮೀಟರ್ ದೂರ ಹೋಗಿ ಬೇಕಾದ ದಿನಸಿಯನ್ನೂ, ವಸ್ತುಗಳನೂ
ತರಬೇಕು. ರಿಗ್ ತೈಲದ ಬಾವಿ ಕೊರೆಯುವ ಕಾರ್ಯ ಮುಗಿಸಿದ ನಂತರ ಪ್ರಕೃತಿಗೆ ತೆರೆದುಕೊಂಡ ಎಲ್ಲಾ ಸೊವಡನ್ನೂ, ಕಲ್ಮಶವನ್ನೂ ಭೂಮಿಯೊಳಗೆ ಹೂತು ಹಾಕಬೇಕು.
ಅದನ್ನು ಹಾಗೆಯೇ ಬಿಟ್ಟರೆ ಮರಳುಗಾಡಿನಲ್ಲಿರುವ ಸಾಕು ಪ್ರಾಣಿಗಳಾದ ಒಂಟೆಗಳು, ಕುರಿಗಳು ಅದನ್ನು ಸೇವಿಸಿದರೆ ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ. ಮಜವೆಂದರೆ ಆ ಕಲ್ಮಶಗಳನ್ನು ಹೂತು ಹಾಕುವುದಕ್ಕೆ ಬಳಸುವುದು ಇದೇ ಮರಳನ್ನು.
ಮರುಭೂಮಿಯಲ್ಲಿ, ಅದರಲ್ಲೂ ಹೊಯಿಗೆಯ ರಾಶಿಯ ಮೇಲೆ ವಾಹನ ನಡೆಸುವುದು ಸುಲಭದ ಕೆಲಸವಲ್ಲ. ಚಾಲಕ ಸಂಪೂರ್ಣ ಜಾಗರೂಕನಾಗಿರ ಬೇಕು. ಸ್ವಲ್ಪ ಅಚಾತುರ್ಯವಾದರೂ ವಾಹನ ಉಸುಕಿನಲ್ಲಿ ಸಿಲುಕಿಕೊಳ್ಳುತ್ತದೆ. ಒಮ್ಮೆ ವಾಹನ ಸಿಲುಕಿಕೊಂದರೆ ಅದನ್ನು ಹೊರಗೆ ತರಲು ಹರಸಾಹಸ ಮಾಡಬೇಕಾಗುತ್ತದೆ.
ಅಸಲಿಗೆ ಮರುಭೂಮಿಯಲ್ಲಿ ವಾಹನ ನಡೆಸುವ ರೀತಿಯೇ ಬೇರೆ. ಅದು ರಸ್ತೆಯ ಮೇಲೋ ಅಥವಾ ಸಾಮಾನ್ಯ ಸ್ಥಳದಲ್ಲಿಯೋ ವಾಹನ ನಡೆಸಿದಂತಲ್ಲ. ಅದಕ್ಕೆ ವಿಶಿಷ್ಟವಾದ ಕೌಶಲ್ಯ ಬೇಕು. ಚಾಲಕನಿಗೆ ಮರಳಿನ ಮೇಲ್ಮೆ , ಅದರ ಗುಣ
ಲಕ್ಷಣಗಳು ತಿಳಿದಿರಬೇಕು. ಸ್ವಲ್ಪ ಆಯ ತಪ್ಪಿದರೂ ಕಂಟಕ ತಪ್ಪಿದ್ದಲ್ಲ. ಬೇಕಾದರೆ ಫಾರ್ಮುಲಾ ಒನ್ ಕಾರ್ ರೇಸ್‌ನ ವಿಶ್ವ ವಿಜೇತನೇ ಆಗಿರಲಿ, ಮರಳಿನಲ್ಲಿ ಕಾರು ನಡೆಸಬೇಕೆಂದರೆ ಕೈಕಾಲು ಬಿಡುತ್ತಾನೆ.
ಡೆಸರ್ಟ್ ಸಫಾರಿ ಮಾಡಿ ಎಂದರೆ ಲಾಗ ಹೊಡೆಯುತ್ತಾನೆ. ಗಾಳಿಯೊಂದಿಗೆ ಮರಳು ಬಾರದಿರುವ, ಮರಳನ್ನು ತಡೆಗಟ್ಟುವ ತಂತ್ರಜ್ಞಾನ ಇದುವರೆಗೆ ಬಂದಿಲ್ಲ. ಹೋಗಲಿ, ಕೋಟಿಗಟ್ಟಲೆ ವ್ಯವಹಾರವಿರುವ ಮರಳೆತ್ತುವ ಕೆಲಸ ಹೇಳಿಕೊಡುವ ಒಂದೇ
ಒಂದು ಶಾಲೆಯಾಗಲೀ ಕಾಲೇಜ್ ಆಗಲೀ ವಿಶ್ವ ದಲ್ಲಿಯೇ ಇಲ್ಲ. ಮರಳಿನ ಮೇಲೆ ವಾಹನ ನಡೆಸುವ ಒಂದೇ ಒಂದು ಪಾಠವನ್ನು ವಾಹನ ಚಾಲನೆ ತರಬೇತಿ ಕೇಂದ್ರವೂ ಸೇರಿದಂತೆ ಯಾವ ಶಿಕ್ಷಣ ಸಂಸ್ಥೆಯೂ ಹೇಳಿಕೊಡುವುದಿಲ್ಲ.
ಅದೇನಿದ್ದರೂ ಸ್ವಲ್ಪ ಮಟ್ಟಿಗೆ ಅನುಭವಸ್ಥರಿಂದ ಕೇಳಿ, ಬಹುಪಾಲು ಸ್ವಂತ ಅನುಭವದಿಂದಲೇ ಕಲಿಯುವಂಥದ್ದು. ಈ ಮಾತು
ಮರಳನ್ನು ತೆರವುಗೊಳಿಸುವ ಕಾರ್ಯಕ್ಕೂ ಅನ್ವಯ. ಕೊಲ್ಲಿ ರಾಷ್ಟ್ರಗಳಲ್ಲಿ ಮರಳಿನ ವರ್ತನೆಯೂ ಅಷ್ಟೇ ಸೋಜಿಗ. ದುಂಬಿಗಳು ಮಕರಂದಕ್ಕೆ, ಇರುವೆಗಳು ಬೆಲ್ಲಕ್ಕೆ ಮುತ್ತುವಂತೆ ಮರಳು ಬಂದು ಮುತ್ತುವುದು ರಸ್ತೆಯನ್ನು, ತೈಲ ಸಾಗಿಸುವ
ಕೊಳವೆಯ ಸಾಲುಗಳನ್ನು, ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು. ಹೆಚ್ಚಾಗಿ ಇವೆಲ್ಲವೂ ಮರುಭೂಮಿಯಲ್ಲಿರುವುದೇ ಪ್ರಮುಖ ಕಾರಣವೆನ್ನಿ. ಮರುಭೂಮಿಯ ಮರಳಿನಲ್ಲಿ ಉಪ್ಪಿನ ಅಂಶ ಇರುವುದರಿಂದ ಮರಳು ಮತ್ತು ತುಕ್ಕು, ಗಳಸ್ಯ ಕಂಠಸ್ಯ.
ಕಾರ್ಖಾನೆಯ ಟರ್ಬೈನ್‌ಗಳಲ್ಲಿ, ಫೋನ್‌ಗಳಲ್ಲಿ, ಟ್ರಾನ್ಸ್ ಫಾರ್ಮರ್‌ಗಳಲ್ಲಿ ಹೊಕ್ಕಿದ ಮರಳು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಒಟ್ಟಿನಲ್ಲಿ ಕಾರ್ಖಾನೆಗಳಿಗೂ, ರಸ್ತೆಗೂ ಮತ್ತು ಮರಳಿಗೂ ಆಗಿ ಬರುವುದಿಲ್ಲ. ಕಬ್ಬಿಣದ ಕೊಳವೆಯಂತಹ ವಸ್ತುಗಳನ್ನು ಒಮ್ಮೆ ಮರಳು ಮುತ್ತಿಕೊಂಡರೆ ಕೆಲವೇ ದಿನಗಳಲ್ಲಿ ತುಕ್ಕು ಹಿಡಿಯಲಾರಂಭಿಸುತ್ತದೆ. ಮಾರ್ಗ ಮಧ್ಯದಲ್ಲಿ ಜಮೆಯಾದ ಮರಳು ವಾಹನಗಳು ಜಾರುವಂತೆ ಮಾಡುತ್ತದೆ. ಆದ್ದರಿಂದ ತೈಲ ಸಂಸ್ಕರಣಾ ಕಾರ್ಖಾನೆಗಾಗಲೀ, ರಸ್ತೆ ಸಾರಿಗೆ ಸಂಸ್ಥೆಗಾಗಲೀ ಮರಳನ್ನು ತೆರವುಗೊಳಿಸುವ ಕಾರ್ಯ ಅತ್ಯಂತ ಪ್ರಾಮುಖ್ಯವಾಗಿರುತ್ತದೆ.
ಅದಕ್ಕೆಂದೇ ಸಂಸ್ಥೆಗಳು ವಾರ್ಷಿಕವಾಗಿ ಸಾಕಷ್ಟು ಹಣವನ್ನೂ ನಿಗದಿಪಡಿಸುತ್ತವೆ, ವ್ಯಯಿಸುತ್ತವೆ. ತೈಲದ ಬಾವಿ ಕೊರೆಯುವ
ಒಂದು ರಿಗ್, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲಾಗದೇ ನಿಂತರೆ ಒಂದು ಗಂಟೆ ಸುಮಾರು ಐವತ್ತು ಸಾವಿರ ಡಾಲರ್ ನಷ್ಟವಾಗುತ್ತದೆ. ಅದಕ್ಕಾಗಿಯೇ ಕೊಲ್ಲಿ ರಾಷ್ಟ್ರಗಳಲ್ಲಿರುವ ದೊಡ್ದ ದೊಡ್ಡ ತೈಲ ಸಂಸ್ಥೆಗಳು ತಮ್ಮ ಉತ್ಪಾದನೆ ಮತ್ತು ನಿರ್ವಹಣೆಯ ವೆಚ್ಚದಲ್ಲಿ ಶೇಕಡಾ ಇಪ್ಪತ್ತರಷ್ಟು ಪಾಲನ್ನು ಈ ಕಾರ್ಯಕ್ಕೆ ಮೀಸಲಿಡುತ್ತವೆ. ಈ ಪ್ರದೇಶದಲ್ಲಿ ಮರಳೆತ್ತುವ ಕೆಲಸವನ್ನೇ ಪ್ರಧಾನ ಉದ್ಯೋಗವನ್ನಾಗಿಸಿಕೊಂಡ ಸಾಕಷ್ಟು ಜನರಿದ್ದಾರೆ, ಗುತ್ತಿಗೆದಾರರಿದ್ದಾರೆ, ಕಂಪನಿ ಗಳಿವೆ.
ಕೆಲವು ಕಂಪನಿಗಳು ಇದೇ ಕಾರ್ಯದಲ್ಲಿ ಬಿಲಿಯನ್‌ಗಟ್ಟಲೆ ಸಂಪಾದಿಸುತ್ತಿವೆ ಎಂದರೆ ನಂಬಲೇಬೇಕು. ಅಕ್ಬರ್ ಮತ್ತು ಬೀರ್‌ಬಲ್ ಕಥೆ ಯಾರಿಗೆ ತಿಳಿದಿಲ್ಲ ಹೇಳಿ? ಒಂದು ಮುಂಜಾನೆ ಮೊಘಲ್ ಚಕ್ರವರ್ತಿ ಅಕ್ಬರ್ ತನ್ನ ಆಪ್ತನಾದ ಬೀರ್‌ಬಲ್ ನೊಂದಿಗೆ ವಾಯು ವಿಹಾರಕ್ಕೆಂದು ಅರಮನೆಯ ಉದ್ಯಾನವನಕ್ಕೆ ಹೋಗಿದ್ದನಂತೆ. ಉದ್ಯಾನವನದ ಕೊಳದಲ್ಲಿ ಕೆಲವು ಕಾಗೆಗಳು ಆಡುತ್ತಿದ್ದವಂತೆ. ಅದನ್ನು ಕಂಡ ಅಕ್ಬರ್‌ನ ಮನದಲ್ಲಿ ‘ನಮ್ಮ ರಾಜಧಾನಿಯಲ್ಲಿ ಒಟ್ಟೂ ಎಷ್ಟು ಕಾಗೆಗಳಿರಬಹುದು?’ ಎಂಬ ಪ್ರಶ್ನೆ ಮೂಡಿತಂತೆ. ಆ ಪ್ರಶ್ನೆಯನ್ನು ಜೊತೆಯಲ್ಲಿರುವ ಬೀರ್ ಬಲ್‌ನಲ್ಲಿ ಕೇಳಿದಾಗ ಬೀರ್‌ಬಲ್ ಥಟ್ಟನೆ ಒಂದು
ಸಂಖ್ಯೆ ಹೇಳಿದನಂತೆ.
ಅಷ್ಟು ಶೀಘ್ರವಾಗಿ ಬೀರ್‌ಬಲ್ ಉತ್ತರಿಸಿದ ರೀತಿ ಕಂಡು ಚಕಿತನಾದ ಅಕರ್ ನೀನು ಹೇಳಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಗೆಗಳಿದ್ದರೆ? ಎಂದು ಪ್ರಶ್ನಿಸಿದನಂತೆ. ಅದಕ್ಕೆ ಬೀರ್‌ಬಲ್ ಬೇರೆ ರಾಜ್ಯದಲ್ಲಿರುವ ಕೆಲವು ಕಾಗೆಗಳು ನಮ್ಮ ರಾಜಧಾನಿ ಯಲ್ಲಿರುವ ಸಂಬಂಧಿಗಳನ್ನು ಕಾಣಲು ಬಂದಿವೆ ಎಂದನಂತೆ. ಕಾಗೆಗಳ ಸಂಖ್ಯೆ ಅದಕ್ಕಿಂತ ಕಡಿಮೆ ಇದ್ದರೆ? ಎಂದು ಕೇಳಿದಾಗ ಬೀರ್‌ಬಲ್ ನಮ್ಮ ರಾಜಧಾನಿಯ ಕೆಲವು ಕಾಗೆಗಳು ತಮ್ಮ ಸಂಬಂಧಿಗಳನ್ನು ಕಾಣಲು ಹೊರಗೆ ಹೋಗಿವೆ ಎಂದನಂತೆ. ಈ ಮರಳು ಎತ್ತುವ ಲೆಕ್ಕಾಚಾರವೂ ಕಾಗೆ ಎಣಿಸಿದ ಲೆಕ್ಕದ ಹಾಗೆಯೇ.
ಮೊದಲಿಗೆ ಅಂದಾಜಿಗೆಂದು ಒಂದು ಲೆಕ್ಕ ಮಾಡಿರುತ್ತಾರೆ. ಎಷ್ಟೇ ಶೀಘ್ರವೆಂದರೂ ಕಾಗದ ಪತ್ರಗಳು ತಯಾರಾಗುವವರೆಗೆ ಒಂದೆರಡು ದಿನ ಕಳೆಯುತ್ತದೆ. ಗುತ್ತಿಗೆದಾರರು ಬಂದು ಆ ಮರಳನ್ನು ಎತ್ತುವಾಗ ಇನ್ನೊಂದಿಷ್ಟು ಮರಳು ಸಂಗ್ರಹ ವಾಗಿರುತ್ತದೆ. ಹಾಗೆಯೇ ಗಾಳಿ ಜೋರಾದಾಗ ಮರಳು ತೂರಿ ಹೋಗುವ ಸಂಭವವೂ ಇರುತ್ತದೆ. ಆದರೆ ಗುತ್ತಿಗೆದಾರನ ಲೆಕ್ಕದಲ್ಲಿ ಮರಳಿನ ದಿಣ್ಣೆ ವೃದ್ಧಿಸುತ್ತದೆಯೇ ವಿನಃ ಕ್ಷೀಣಿಸುವುದಿಲ್ಲ. ಇದೇ ಕಾರಣದಿಂದ ಸೌದಿ ಅರೇಬಿಯಾದಲ್ಲಿಯೇ ಆಗಲೀ, ಇತರ ಕೊಲ್ಲಿ ರಾಷ್ಟ್ರಗಳಲ್ಲಿಯೇ ಆಗಲಿ, ಮರಳು ಎತ್ತುವ ಗುತ್ತಿಗೆ ದಾರ ನಷ್ಟ ಅನುಭವಿಸುವುದಿಲ್ಲ.
ಆದರೆ ಮರಳು ಎತ್ತಿ ರಸ್ತೆ ಅಥವಾ ಪೈಪ್‌ಲೈನ್ ತೆರವುಗೊಳಿಸುವುದಕ್ಕೂ ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಬೇಕಾಗುತ್ತದೆ.
ಇಲ್ಲವಾದರೆ ಅದೇ ಮರಳಿನ ರಾಶಿಯಲ್ಲಿ ವಾಹನ ಗಳು, ಉಪಕರಣಗಳು ಹೂತುಹೋಗುವ ಭಯ ಇರುತ್ತದೆ. ಹಾಗೆಯೇ ಒಂದೆರಡು ದಿನ ಬಿಟ್ಟರೆ ಅದು ಮರಳಿನಲ್ಲಿಯೇ ಸಂಪೂರ್ಣ ಮುಳುಗಿ ಹೋಗುವ ಭೀತಿಯೂ ಇರುತ್ತದೆ.
ನಾನು ಸೌದಿ ಅರೇಬಿಯಾದ ಮರಳುಗಾಡಿನಲ್ಲಿಯೇ ಹದಿನಾಲ್ಕು ವರ್ಷ ಕೆಲಸ ಮಾಡಿಕೊಂಡಿದ್ದೆ. ನನ್ನೊಂದಿಗೆ ಸುಮಾರು ನೂರು ಜನ ಕೆಲಸಗಾರರು, ಬುಲ್ಡೋಜರ್, ಎಕ್ಸ್ಕವೇಟರ್, ಲೋಡರ್ ಆಪರೇಟರ್‌ಗಳು, ಟ್ರಕ್ ಚಾಲಕರು ಮರುಭೂಮಿಯಲ್ಲಿ ಮರಳು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದರು. ಇವರಿಗೆಲ್ಲ ಮೇಲ್ವಿಚಾರಕರಾಗಿದ್ದ ನಾಲ್ಕು ಜನರಲ್ಲಿ ಕೇರಳದ ಶಾಜಿ ಮತ್ತು ಗೋವಾ ಮೂಲದ, ಕುವೈತ್‌ನಲ್ಲಿ ಹುಟ್ಟಿ ಬೆಳೆದ ರಫಿಕ್ ಇದ್ದರು.
ಶಾಜಿ ಥಿಯಾಲಜಿಯಲ್ಲೂ, ರಫಿಕ್ ಕಲಾ ವಿಭಾಗದಲ್ಲೂ ಪದವಿಪಡೆದು ಬಂದಿದ್ದರು. ಪದವೀಧರರಿಗೆ ಮರಳೆತ್ತುವ ಕಾರ್ಯ ದಲ್ಲಿ ಉತ್ಸಾಹವೂ ಇರಲಿಲ್ಲ, ಮರುಭೂಮಿಯಲ್ಲಿ ವಾಹನ ನಡೆಸಿದ ಅನುಭವವೂ ಇರಲಿಲ್ಲ. ‘ಮರುಭೂಮಿಯಲ್ಲಿ ಮರಳು ಎತ್ತುವ ಕೆಲಸ ಮಾಡಿದರೆ ಮುಂದೆ ಯಾವ ಪ್ರಯೋಜನವೂ ಇಲ್ಲ’ ಎಂದು ಇಬ್ಬರೂ ಅಲವತ್ತು ಕೊಳ್ಳುತ್ತಿದ್ದರು. ಕೆಲಸಗಾರ ರನ್ನು ಎಣಿಸುವುದು, ಕರೆದುಕೊಂಡು ಹೋಗುವುದು, ಬರುವುದು, ಅವರು ಖಾಲಿ ಕುಳಿತುಕೊಳ್ಳದಂತೆ ನೋಡಿಕೊಳ್ಳುವುದು ಇವರ ಕೆಲಸ. ಇಬ್ಬರಿಗೂ ಇದ್ದ ದೊಡ್ದ ಸವಾಲೆಂದರೆ ಮರಳಿನಲ್ಲಿ ವಾಹನ ನಡೆಸುವುದು!
ಇಬ್ಬರಿಗೂ ಅದನ್ನು ಕಲಿಸುವಾಗ ಸೂರ್ಯ ಚಂದ್ರ ಒಂದಾಗುವುದು ಬಾಕಿ ಇತ್ತು. ಕೆಲವು ವರ್ಷಗಳ ಅಸಮಾಧಾನದ ನಂತರ ಇಬ್ಬರೂ ತಮ್ಮ ಅದೇ ವೃತ್ತಿಯನ್ನು ಪ್ರೀತಿಸಲಾರಂಭಿಸಿದ್ದರು. ಕೊನೆಗೊಂದು ದಿನ ವೃತ್ತಿಯ ಗುತ್ತಿಗೆ ಮುಗಿದದ್ದರಿಂದ ಇಬ್ಬರೂ ಸೌದಿ ಅರೇಬಿಯಾ ಬಿಟ್ಟು ಹೋಗ ಬೇಕಾಯಿತು. ಕೆಲವು ತಿಂಗಳು ಬೇರೆ ಕೆಲಸದ ಅನ್ವೇಷಣೆಯಲ್ಲಿ ವಿಫಲರಾದ ರಫಿಕ್‌ಗೆ ದುಬೈನ ಡೆಸರ್ಟ್ ಸಫಾರಿ ಕಂಪನಿಯೊಂದರಲ್ಲೂ ಶಾಜಿಗೆ ಕುವೈತ್‌ನ ಪೈಪ್ಲೆ ನ್ ಮೆಂಟೆನನ್ಸ್ ಕಂಪನಿಯಲ್ಲೂ ಉದ್ಯೋಗ ಒದಗಿ ಬಂತು. ಅವರ ಪದವಿಗಿಂತ, ಒಂದು ಕಾಲದಲ್ಲಿ ಅವರಿಗೆ ಇಷ್ಟವಿಲ್ಲದ ‘ಮರಳೆತ್ತುವ ಕೆಲಸ’ದ ಅನುಭವ ಅವರ ಕೈ ಹಿಡಿದಿತ್ತು.
ಈ ನಡುವೆ ತಮ್ಮ ಸಂಬಳದಿಂದ ಸ್ವಂತ ಮನೆ, ಆಸ್ತಿ, ಹಣ ಸಂಪಾದಿಸಿಕೊಂಡಿದ್ದರು ಎನ್ನುವುದು ಬೇರೆ ವಿಷಯ. ಈ ಮಾತು ಹತ್ತು ವರ್ಷ ಮರಳು ಎತ್ತಿದ ಎಲ್ಲರಿಗೂ ಅನ್ವಯ. ಯಾವ ಮರಳನ್ನು ಆಡಿಕೊಳ್ಳುತ್ತಿದ್ದರೋ, ಟೀಕಿಸುತ್ತಿದ್ದರೋ ಅದೇ
ಮರಳು ಎಲ್ಲರನ್ನೂ ಉದ್ಧರಿಸಿತ್ತು.ಕೊಲ್ಲಿ ರಾಷ್ಟ್ರದ ರಸ್ತೆ ಸಾರಿಗೆ ಸಂಸ್ಥೆಗಳಿಗೆ, ತೈಲ ಉತ್ಪಾದನಾ ಘಟಕಗಳಿಗೆ, ಸಂಸ್ಕರಣಾ ಕೇಂದ್ರಗಳಿಗೆ ಮರಳು ವಿಷವಾದರೆ ಅದೇ ಮರಳು ಕೆಲವರಿಗೆ ಅಕ್ಷಯ ಪಾತ್ರೆ.