ಯಶೋ ಬೆಳಗು
yashomathy@gmail.com
ನನ್ನೊಂದಿಗೆ ಇನ್ನು ಉಳಿದಿರುವುದು ಕೇವಲ ನಾಲ್ಕೈದು ದಿನಗಳು ಮಾತ್ರ…. ಅನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲದಂತೆ ಎಡೆ ಸಂಭ್ರಮದ ವಾತಾವರಣವೇ ತುಂಬಿ ಹೋಗಿದೆ. 2023 ಎಂಬ ಮಗುವಿನ ನಿರೀಕ್ಷೆ ಎಲ್ಲರ ಮನಸ್ಸನ್ನಾ ವರಿಸಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳೂ ಪಾಂಗಿತವಾಗಿ ನಡೆದಿವೆ.
ನೆನಪಿದೆಯಾ ನಿಮಗೆಲ್ಲ? 2021ರ ಕ್ಷಣಗಳು ಹೇಗಿತ್ತೆಂಬುದು? ಮನರಂಜನೆಯೆಂಬುದೇ ಇಲ್ಲ, ಶಾಲಾ- ಕಾಲೇಜುಗಳು, ಕಚೇರಿ ಗಳೆಲ್ಲ ಬಾಗಿಲು ಮುಚ್ಚಿ ಮನೆಗಳೊಳಗೆ ಸೇರಿ ಕೊಂಡಿತ್ತು. ಮಕ್ಕಳಿಗೇನೋ ಮನೆಯಲ್ಲಿರುವುದು ಖುಷಿಯ ಸಂಗತಿಯೇ. ಆದರೆ ಪೋಷಕ ರಿಗೆ? ಅದರಲ್ಲೂ ಗೃಹಿಣಿಯರಿಗೆ? ವ್ಯವಹಾರಸ್ಥರಿಗೆ? work from home ಅನ್ನುವುದು punishment ಆಗಿಹೋಗಿತ್ತು.
ಗಂಡ-ಮಕ್ಕಳನ್ನು ಕಳಿಸಿ relaxed ಆಗಿ ಸಿನಿಮಾ, ಧಾರಾವಾಹಿ ನೋಡುತ್ತ, ಗೆಳತಿಯ ರೊಂದಿಗೆ ಹರಟೆ ಹೊಡೆಯುತ್ತ, ಪುಸ್ತಕ ಓದುತ್ತಾ, ಮನೆಯನ್ನು ಅಂದಗೊಳಿಸುತ್ತಾ, ಕಿಟ್ಟಿ ಪಾರ್ಟಿಗಳಲ್ಲಿ ಕೇಕೆ ಹಾಕುತ್ತಾ, ಅವರಿವರ ಬಗ್ಗೆ ಗಾಸಿಪ್ ಮಾಡುತ್ತಾ ತನ್ನ ದೈನಂದಿನ ಕೆಲಸಗಳನ್ನು ಮುಗಿಸಿ ಆರಾಮಾಗಿದ್ದವರಿಗೆ ಮನೆಯ ಉಳಿದುಹೋದ ಮಕ್ಕಳಿಗಾಗಿ ಬಗೆಬಗೆಯ ತಿಂಡಿಗಳನ್ನು ಮಾಡಿ ಕೊಡುತ್ತಾ, ಅವರೊಂದಿಗೆ ಆನ್‌ಲೈನ್ ಕ್ಲಾಸುಗಳನ್ನು ಅಟೆಂಡ್ ಮಾಡುತ್ತಾ ಹೋಮ್ ವರ್ಕುಗಳನ್ನು ಮಾಡಿಕೊಳ್ಳು ವಂತೆ ಗದರಿಸುವುದರ ಜೊತೆಗೆ, ಗಳಿಗೆಗೊಮ್ಮೆ ಗಂಡನಿಗೆ ಕಾಫಿ/ಟೀ ಮಾಡಿಕೊಡುತ್ತಾ, ಅವರ ಆಶ್ ಪಾಟ್ ಗಳನ್ನು ಸ್ವಚ್ಛ ಗೊಳಿಸಿಡು ವುದೂ ನಿತ್ಯಕಾಯಕವಾಗಿಹೋಯ್ತು.
ಭಜನೆ, ದೇವಸ್ಥಾನಗಳ ಭೇಟಿಯಿಲ್ಲದೆ ಅತ್ತೆ-ಸೊಸೆಯರ ನಡುವೆ ವಾಕ್ ಸಮರ ನಿರಂತರವಾಗಿ ಹೋಯ್ತು. ಸಾಲದೆಂಬಂತೆ ಮನೆಗೆಲಸದವರೂ ಬರಲಾರದಂತೆ ಲಾಕ್ ಡೌನ್ ಹೇರಿ ಕೂರಿಸಿದಾಗ ಕರೋನಾಗೆ ಹಿಡಿಹಿಡಿ ಶಾಪ ಹಾಕಿದ ಪರಿಣಾಮವೇ ಅದು ದಿನಕಳೆದಂತೆ ಬಲಹೀನಗೊಂಡ ಮರೆಯಾಗಿ ಹೋಗಿದ್ದು ನೋಡಿದರೆ, ಇಂದಿಗೂ ಹೆಣ್ಣುಮಕ್ಕಳ ಶಾಪಕ್ಕಿರುವ ಪವರ್ ಎಂಥದ್ದೂ ಅನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಅದೆಷ್ಟು ಪ್ರಾರ್ಥನೆಗಳಿದ್ದವು ನಾನು ಬರುವಾಗ? ಆಹಾ! ಶುಭಕೃತ್ ನಾಮ ಸಂವತ್ಸರದಲ್ಲಿ ಎಲ್ಲವೂ ಶುಭವೇ ಆಗುತ್ತದೆ ಎಂದು ಬೀಗುತ್ತಿದ್ದವರನ್ನು ಕಂಡು ನಾನೂ ಬಲೂನಿನಂತೆ ಉಬ್ಬಿ ಹೋಗಿದ್ದೆ. ಹೀಗಾಗಿ ಬಂದ ಹೊಸತರ ಎಲ್ಲವನ್ನೂ ಒಂದೊಂದಾಗಿ ಸರಿಪಡಿಸುತ್ತಾ ಬಂದೆ. ಶಾಲೆಯ ಬಾಗಿಲುಗಳು ತೆರೆದು ಭಣಗುಟ್ಟುತ್ತಿದ್ದ ಶಾಲೆಯ ಆವರಣ ಮಕ್ಕಳ ಕಲರವದಿಂದ ಉಲ್ಲಸಿತ ಗೊಂಡಿತು.
ಹೆಂಡತಿಯ ಸಿಡುಕು ಸಹಿಸುವುದಕ್ಕಿಂತಾ ಕಚೇರಿಯ ಸಹೋದ್ಯೋಗಿಯ ಜೊತೆ ಹರಟೆ ಹೊಡೆಯುವುದರ ಹೆಚ್ಚು ಖುಷಿ ಇದೆ ಎಂಬುದನ್ನು ಮನಗಂಡು ಕಚೇರಿಯೆಡೆಗೆ ಮುಖ ಮಾಡಿ ಹಸನ್ಮುಖಿಗಳಾದ ಪತಿಮಹಾಶಯರು, ಅತ್ತೆ ಭಜನೆಗಳಲ್ಲಿಯೂ, ಸೊಸೆ ಪಾರ್ಟಿಗಳಲ್ಲಿಯೂ ಮೊದಲಿನಂತೆಯೇ ನೆಮ್ಮದಿ ಕಂಡು ಕೊಂಡರು. ಇನ್ನೇನು ಎಲ್ಲ ಸರಿಹೋಯ್ತ? ಎಂದು ನಿಟ್ಟುಸಿರಾಗು ವಷ್ಟರ ಶುರುವಾಯ್ತುಲ್ಲ ಕಾಲೇಜಿನ ಕೋಳಿ ಜಗಳ? ಉಡುಪಿಯ ಪಿಯು ಕಾಲೇಜಿನಲ್ಲಿ ಹಿಜಾಬ್ ಹಾಗೂ – ಕೇಸರಿ ಶಾಲುಗಳ ವಾಗ್ವಾದದ ನಡುವೆ ಆರು ವಿದ್ಯಾರ್ಥಿನಿಯರ ಆರೋಪದೊಂದಿಗೆ ಸಣ್ಣಗೆ ಹುಟ್ಟಿಕೊಂಡ ಜಗಳ ದಿನಕಳೆದಂತೆ ತೀವ್ರವಾಗುತ್ತಾ ಹೋಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿತು.
ಸರಿ-ತಪ್ಪುಗಳ ವಾದ ವಿವಾದಗಳ ನಡುವೆ; ಧರ್ಮ – ಸಿದ್ಧಾಂತಗಳ ಝಟಾಪಟಿಗಳ ನಡುವೆ ಒಂದಷ್ಟು ಜನ ತಮ್ಮ ವಿದ್ಯಾ ಭ್ಯಾಸಕ್ಕೆ ಎಳ್ಳು-ನೀರು ಬಿಡುವಂತಾಯ್ತು. ಇದರ ನಡುವೆ ಅದೆಷ್ಟು ಹೆಣ್ಣುಮಕ್ಕಳು ವಿದ್ಯಾಭ್ಯಾಸ ವಂಚಿತರಾದರೋ? ಭಗವಂತನೇ ಬಲ್ಲ. ಅದಕ್ಕೆ ಕಾನೂನಿನ ಕಡಿವಾಣ ಹಾಕಿ ಸರಿಪಡಿಸುವಷ್ಟರ ಹಿಂದೂ ಹಾಗೂ ಮುಸ್ಲಿಂ ಕೋಮು ಸಂಘರ್ಷಕ್ಕೆ ಸಿಲುಕಿ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಜನರ ಆಕ್ರೋಶ ನಾಡನ್ನೇ ಧ್ವಂಸಗೊಳಿಸುವಷ್ಟಿತ್ತು. ಅದರ ನೆನಪು ಮಾಸುವ ಮುನ್ನವೇ ಕೇವಲ ಹತ್ತು ದಿನಗಳ ಅಂತರದಲ್ಲಿ
ದಕ್ಷಿಣ ಕನ್ನಡದಲ್ಲಿ ಮೂರ್ನಾಲ್ಕು ಹಿಂದೂ-ಮುಸ್ಲಿಂ ಹತ್ಯೆಗಳಾಗಿ ಹೋದದ್ದು ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿ ಗಲಭೆ ತಾರಕ್ಕೇರಿತು. ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರ ರೋಧನೆ ಇನ್ನೂ ನಿಂತಿಲ್ಲ.
ಇದರ ನಡುವೆ ದೇವರು ಕೊಟ್ಟರೂ ಪೂಜಾರಿ ಕೊಡನೆಂಬಂತೆ ಶಾಲೆಗೆ ನಡೆದ ಮಕ್ಕಳಿಗೆ ಪಠ್ಯ ಪುಸ್ತಕದ ಪರಿಷ್ಕರಣೆಯ ವಿವಾದದ ಘರ್ಷಣೆಯಿಂದಾಗಿ ಎಷ್ಟು ದಿನಗಳಾದರೂ ಪಠ್ಯಪುಸ್ತಕಗಳೇ ದೊರೆಯದೆ ಪರದಾಡುವಂತಾಯ್ತು. ಅಷ್ಟರ ಶುರು ವಾಯ್ತುಲ್ಲ? ರಷ್ಯಾ- ಉಕ್ರೇನ್ ಸಮರ! ದೇಶದಲ್ಲಿ ಎದ್ದ ಅರಾಜಕತೆ, ಬಾಂಬುಗಳ ದಾಳಿಯ ನಡುವೆ ಧರೆಗುರುಳಿದ ಜೀವಗಳ ದೆಷ್ಟೋ? ಲೆಕ್ಕವಿಟ್ಟವರ್ಯಾರು? ನೌಕರಿಗೆಂದು, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ದೇಶಬಿಟ್ಟು ಹೋದವರೆ ಮರಳಿ ತಮ್ಮ ತಮ್ಮ ಗೂಡು ತಲುಪಿಕೊಂಡರೂ ನಿಲ್ಲದೇ ನಡೆಯುತ್ತಲೇ ಇರುವ ದಾಳಿಗೆ ಕೊನೆಯೆಂದೋ ಬಲ್ಲವರಾರು? ಇನ್ನು ನಮ್ಮ ಪಕ್ಕದ ದ್ವೀಪವಾದ ಶ್ರೀಲಂಕಾದಲ್ಲುಂಟಾದ ಆರ್ಥಿಕ ದಿವಾಳಿತನದಿಂದಾಗಿ ಅತಿಯಾದ ಹಣದುಬ್ಬರ, ಆಹಾರದ ಕೊರತೆ, ತೈಲದ
ಕೊರತೆ, ವಿದ್ಯುತ್ ಅಲಭ್ಯತೆ, ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಯ್ತು.
ಇದು ಸಾಮಾನ್ಯ ಜನರನ್ನು ರೊಚ್ಚಿಗೇಳುವಂತೆ ಮಾಡಿತ್ತು. ಇಂತಹ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಪಕ ವಾದ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು. ೨೦೧೯ರಲ್ಲಿ ಶ್ರೀಲಂಕಾದ ರಾಷ್ಟ್ರೀಯ ಆದಾಯ ರಾಷ್ಟ್ರೀಯ ಖರ್ಚಿಗಿಂತ ಹೆಚ್ಚಾಗಿಯೇ ಇತ್ತು. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೀಡಿದ ಉಚಿತ ಯೋಜನೆಗಳಿಂದಾಗಿ ಶ್ರೀಲಂಕಾ
ಇಂತಹ ದುಃಸ್ಥಿತಿಯನ್ನು ತಲುಪುವಂತಾಯ್ತು.
ಪ್ರವಾಸೋದ್ಯಮದ ಮೇಲೇ ಹೆಚ್ಚು ಅವಲಂಬಿತವಾಗಿದ್ದ ಶ್ರೀಲಂಕಾದ ಆರ್ಥಿಕತೆಯನ್ನೇ ನಾಶ ಮಾಡಿದ ಕೀರ್ತಿ ಕೋವಿಡ್ -೧೯ ನದ್ದು ಎಂದರೆ ತಪ್ಪಾಗಲಾರದು. ಅತಿಯಾದ ಸರಕಾರಿ ಸಾಲ, ಹೆಚ್ಚುತ್ತಿದ್ದ ತೈಲ ಬೆಲೆಗಳು, ರಾಸಾಯನಿಕ ಗೊಬ್ಬರದ ಆಮದಿನ ನಿಷೇಧ ದ್ವೀಪರಾಷ್ಟ್ರವನ್ನು ಇನ್ನಷ್ಟು ಶಿಥಿಲವಾಗುವಂತೆ ಮಾಡಿತು. ತೈಲದ ಆಮದು ನಿಂತ ಕಾರಣ ಶಾಲೆಗಳು ಮುಚ್ಚಲ್ಪಟ್ಟು,
ಅನಿವಾರ್ಯದ ಉಪಯೋಗಗಳಿಗೆ ಮಾತ್ರ ಪೆಟ್ರೋಲ್, ಡೀಸಲನ್ನು ರೇಷನ್ನಿನಂತೆ ಹಂಚುವ ಪರಿಸ್ಥಿತಿ ಬಂತು.
ಇದೆಲ್ಲದರಿಂದಾಗಿ ಅತಿಯಾಗಿ ಅಪಮೌಲ್ಯಗೊಂಡ ಶ್ರೀಲಂಕಾದ ಕರೆನ್ಸಿ ಹೆಚ್ಚುತ್ತಿದ್ದ ಹಣದುಬ್ಬರ ಸಾರ್ವಜನಿಕರ ಸಂಕಷ್ಟ ಗಳನ್ನು ಇನ್ನಷ್ಟು ಹೆಚ್ಚಿಸಿತು ಇದೆಲ್ಲ ಪರಿಣಾಮಗಳನ್ನು ಗಮನಿಸುತ್ತಾ ಉದ್ದೇಶಪೂರ್ವಕವಾಗಿಯೇ ತನ್ನ ಲಾಭಕ್ಕಾಗಿ
ಶ್ರೀಲಂಕಾದ ಆರ್ಥಿಕತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊಂಚು ಹಾಕಿತು ಚೀನಾ. ಇದಕ್ಕಾಗಿ ವಿಪರೀತ ಬಡ್ಡಿದರ ದಲ್ಲಿ ಇನ್ನಷ್ಟು ಸಾಲ ನೀಡಿತು. ಅದು ಮುಳುಗುತ್ತಿದ್ದ ದೋಣಿಯ ಮೇಲೆ ಇನ್ನಷ್ಟು ಭಾರ ಹೊರಿಸಿದಂತಾಯ್ತು.
ಅದನ್ನು ಬೆನ್ನಿಗೆ ಚೂರಿ ಹಾಕುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಭಾರತದ ವಿರುದ್ಧ ಬಳಸಿಕೊಳ್ಳುವ ತಂತ್ರವನ್ನು ಹೆಣೆದಿದ್ದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಆದರೂಇದೆಲ್ಲದರ ನಡುವೆಯೇ ನಮ್ಮ ಹೆಮ್ಮೆಯ ಭಾರತ ದೇಶಕ್ಕೆ ಸ್ವತಂತ್ರ ಬಂದು 75 ವರುಷಗಳ ಅಮೃತ ಮಹೋತ್ಸವದ ಸಂಭ್ರಮವನ್ನು ‘ಹರ್ ಘರ್ ತಿರಂಗಾ’ ಎನ್ನುವ ಅಭಿಯಾನದೆಡೆ ಪ್ರತಿ ಮನೆಯ ಮೇಲೂ
ಕೇಸರಿ ಬಿಳಿ ಹಸಿರಿನ ನಡುವೆ ನೀಲಿ ಚಕ್ರವೂ ರಾರಾಜಿಸಿದ ದೃಶ್ಯ ಎಷ್ಟು ಕಣ್ತುಂಬಿಕೊಂಡರೂ ಸಾಲದೆಂಬಂತಿತ್ತು.
ಇನ್ನು ಕಾಮ-ಕಾವಿಗಳ ನಡುವೆ ಕೃಷ್ಣಜನ್ಮಸ್ಥಳವನ್ನು ಸೇರಿದವರನ್ನೂ, ಭಗವಂತನ ಪಾದ ಸೇರಿದವರನ್ನೂ ಕಂಡು ಯಾರನ್ನು ನಂಬಬೇಕು? ಯಾರನ್ನು ನಂಬ ಬಾರದು ಎನ್ನುವ ಗೊಂದಲದೊಳಗೆ ಪರ-ವಿರೋಧಗಳ ಟೀಕೆ ಟಿಪ್ಪಣಿಗಳು ನಡೆದರೂ ಅಡಿಕೆಗೆ ಹೋದ ಮಾನ ಆನೆ ಕೊಂಡರೂ ಬರದಂತಾಗಿ ಕಾವಿಯೆಂದರೆ ಮೈಲುದೂರ ನಿಂತೇ ಮಾತಾಡುವ ಸನ್ನಿವೇಶ ಸೃಷ್ಟಿಯಾಗಿ ಹೋಗಿದೆ.
ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಇಷ್ಟು ಮುಂದುವರೆದಿದ್ದರೂ ನಿಧಿಯ ಆಸೆಗಾಗಿ ಬಲಿಕೊಡುವುದು ನಿಂತಿಲ್ಲ. ಶಿವನ ಮೂರನೇ ಕಣ್ಣು ತೆರೆದಿದೆ ಎಂಬ ವದಂತಿಗೆ ಸಾಲುಗಟ್ಟಿ ನಿಲ್ಲುವ ಜನಸಮೂಹಕ್ಕೇನೂ ಕಡಿಮೆಯಿಲ್ಲ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಕುರಿ- ಕೋಳಿಗಳಂತೆ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜಿನಲ್ಲಿಡುವಷ್ಟು ಕ್ರೌರ್ಯ ಅಡಗಿರುವುದು ಕಂಡು ಹತಾಶೆ ಯಿಂದ ಕುಗ್ಗಿ ಹೋಗಿ ದ್ದೇನೆ. ಅದಕ್ಕೆಲ್ಲ ಕಡಿವಾಣ ಹಾಕಬೇಕಾದ ಕೈಗಳೇ ಧರ್ಮ-ರಾಜಕಾರಣದ ಹೆಸರಿನಲ್ಲಿ ಕೈಕಟ್ಟಿ ಕುಳಿತಿವೆ. ಕಲಿಯುವ ಆಸೆ ಯಿಂದ ಶಾಲೆಗೆ ಬರುವ ಮಗುವನ್ನೇ ಮುಕ್ಕಿಬಿಡುವಂಥಾ ಗುರುಗಳನ್ನು ಕಂಡು ಕಂಗೆಟ್ಟಿಹೋಗಿದ್ದಾರೆ ಹೆತ್ತವರು.
ಇರಲಿ ಆ ಕೃಷ್ಣಪರಮಾತ್ಮನಂಥವನಿಂದಲೇ ತಡೆಯಲಾಗಲಿಲ್ಲವಂತೆ ತನ್ನದೇ ಬಂಧುಗಳ ಯಾದವೀ ಕಲಹವನ್ನು. ಇನ್ನು ಕೇವಲ ಮುನ್ನೂರ ಅರವತ್ತೈದು ದಿನಗಳ ಆಯುಷ್ಯವನ್ನು ಹೊಂದಿರುವಂಥಾ ನನ್ನಿಂದೇನಾದೀತು? ಇದ್ದಿದ್ದರಲ್ಲಿ ಚಿತ್ರರಂಗವೇ ಉತ್ತಮ ಕೊಡುಗೆಯನ್ನು ನೀಡಿತು. ಕನ್ನಡ ಭಾಷೆಯನ್ನು ರಾಷ್ಟ್ರಮಟ್ಟದಲ್ಲಿ ಕೊಂಡಾಡುವಂಥಾ ಚಿತ್ರಗಳನ್ನು ಕೊಟ್ಟು ಕನ್ನಡಿಗನಿಗೆ ಹೆಮ್ಮೆಯ ಗರಿಯನ್ನು ಮೂಡಿಸಿದೆ ಅಂದುಕೊಳ್ಳುವಷ್ಟರ ಅಭಿಮಾನದ ಹೆಸರಿನಲ್ಲಿ ನಟನಿಗೆ ಚಪ್ಪಲಿ ಎಸೆದು ಮಾಡಿದ ಅವಮಾನ ಅಕ್ಷಮ್ಯವೇ ಸರಿ. ಇನ್ನು ಬೇಶರಮ್ ರಂಗ್ ನಿಂದ ಉಂಟಾದ ವಿವಾದ ಕಂಡು ಬಣ್ಣಗಳೂ ಧರ್ಮಗಳಾಗಿ ಬಣ್ಣ ಬದಲಿಸಿಕೊಂಡಿದೆ ಎಂಬ ಅರಿವು ಮೂಡಿತು.
ಇನ್ನೂ ಸಾಕಷ್ಟು ವಿಷಯಗಳು ಹೇಳುವುದಿದೆ. ಆದರೆ ನೀವೆಲ್ಲ ಸಂಭ್ರಮದ ನಿರೀಕ್ಷೆಯಲ್ಲಿರುವಾಗ ನಾನು ನೋವಿನ ವಿಚಾರ ಗಳನ್ನು ಹರಡಿಕೊಳ್ಳಬಾರದು. ಉಳಿದಿರುವುದು ಇನ್ನು ಕೇವಲ ನಾಲ್ಕೈದು ದಿನಗಳು ಮಾತ್ರ. ಇರುವಷ್ಟು ದಿನ ನನ್ನನ್ನು ಇನ್ನಷ್ಟು ಬಾಧಿಸದೆ ಸಂತೋಷದಿಂದ ಕಳಿಸಿಕೊಡಿ. ಆ ನೆನಪುಗಳನ್ನು ನಿಮ್ಮ ಕೊನೆಯ ಕ್ಷಣಗಳ ತನಕ ಹಿಡಿದಿಡುವ ಹೊಣೆ ನನ್ನದು. ಆದರೂ ಎಚ್ಚರವಿರಲಿ. ಹಿಂದೆಲ್ಲ ನಡೆದ ಆತಂಕದ ಕ್ಷಣ ಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮೆಲ್ಲರ ಸ್ವೇಚ್ಛೆಗೆ ಬ್ರೇಕ್
ಹಾಕಲು ಮತ್ತೊಂದು ವೈರಾಣುವಿನಿಂದ ಹೈರಾಣಾಗದಂತೆ ನಿಮ್ಮನ್ನು ನೀವು ಸುರಕ್ಷಿತವಾಗಿ ನೋಡಿಕೊಳ್ಳಿ. ಶುಭ ವಿದಾಯ.
Read E-Paper click here