ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು
ನಾನು ಸಚಿವನಾಗಿ ಇದನ್ನು ಬರೆಯುತ್ತಿಲ್ಲ. ಬದಲಿಗೆ ಒಬ್ಬ ಜನಸಾಮಾನ್ಯನಾಗಿ ಇಂದು ಬೆಳಗ್ಗೆ ಮಹಾಮತೆ ಹೀರಾ ಬೆನ್ ಅವರ ಅಂತ್ಯಸಂಸ್ಕಾರದ ಸಂದರ್ಭದ ಬಗ್ಗೆ ಮತ್ತು ತದನಂತರ ಆ ಮಮತಾಮಯಿಯವರ ಸುಪುತ್ರರಾಗಿರುವ ನಮ್ಮೆಲ್ಲರ
ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರು ನಡೆದುಕೊಂಡಂತಹ ರೀತಿ ಹಲವು ದೃಷ್ಟಿಯಿಂದ ನನ್ನ ಮನ ಮಿಡಿಯುವಂತೆ ಮಾಡಿದ್ದರ ಬಗ್ಗೆ ನನ್ನ ಅಭಿಪ್ರಾಯ ಹಂಚಿ ಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ ಅಷ್ಟೇ.
ಸಾಮಾನ್ಯವಾಗಿ ನಮ್ಮ ಪರಿಚಯಸ್ಥರು, ಬಂಧುಗಳು ನಿಧನ ರಾದರೆ ಸಾಕು, ಮನಸ್ಸು ಘಾಸಿಗೊಂಡು ಆ ಕ್ಷಣಕ್ಕೆ ವೈರಾಗ್ಯ ಮೂಡುವುದು ಮನುಷ್ಯ ಸಹಜ ಗುಣ. ಹಾಗಿದ್ದಾಗ ಹೊತ್ತು, ಹೆತ್ತು ಬೆಳೆಸಿ, ಬದುಕುವುದನ್ನು ಕಲಿಸಿ, ನಲಿಸಿದ ಸ್ವಂತ ತಾಯಿ
ಇನ್ನಿಲ್ಲವೆಂದರೆ ಹೇಗಾಗಬೇಡ? ಆದರೆ, ದೊಡ್ಡವರು ಯಾವತ್ತೂ ದೊಡ್ಡವರಾಗಿಯೇ ನಮ್ಮ ಮುಂದಿದ್ದು ನಾಯಕರಾಗಿರು ತ್ತಾರೆ ಎಂಬ ಮಾತಿಗೆ ದ್ಯೋತಕವಾಗಿ ನರೇಂದ್ರ ಮೋದಿಜಿ ಅವರು ಇಂದು ತಮ್ಮ ನಡೆ ನುಡಿಗಳಲ್ಲಿ, ಕೆಲಸದಲ್ಲಿ ತೋರಿಸಿ ಕೊಟ್ಟಿರುವುದು ಇಡೀ ದೇಶಕ್ಕೇ ಆದರ್ಶಪ್ರಾಯವಾಗಿದೆ.
ಮೊದಲನೆಯದಾಗಿ, ಹೀರಾಬೆನ್ ಅವರು ಮನಸ್ಸು ಮಾಡಿದ್ದರೆ ಪ್ರಧಾನಿಯ ತಾಯಿಯಾಗಿ ಚಿನ್ನದ ತಟ್ಟೆಯ ಪ್ರತಿದಿನವೂ ಊಟ ಮಾಡಬಹುದಿತ್ತು. ಆದರೆ ಮಗ ಪ್ರಧಾನಿಯಾದರೂ ತಮ್ಮ ಯಾವತ್ತಿನ ಸರಳ ಜೀವನ ಶೈಲಿಯಿಂದ ಸ್ವಲ್ಪವೂ ಅವರು ವಿಮುಖರಾಗಲಿಲ್ಲ. ಸುಖದ ಸುಪ್ಪತ್ತಿಗೆಯತ್ತ ಕೊಂಚವೂ ಮುಖ ಮಾಡಲಿಲ್ಲ. ಇಂಥ ಸರಳ, ಸಜ್ಜನಿಕೆಯ, ಸಾತ್ವಿಕ, ವಾತ್ಸಲ್ಯ ಮಯಿಯಾಗಿದ್ದ ತಾಯಿಯವರ ಅಂತ್ಯಕ್ರಿಯೆಯನ್ನು ಕೂಡ ಅಷ್ಟೇ ಸರಳವಾಗಿ, ಯಾವುದೇ ಆಡಂಬರವಿಲ್ಲದೆ, ಬರಿಗಾಲಿನಲ್ಲಿ ನಡೆದುಕೊಂಡು, ತಾಯಿಯ ಪವಿತ್ರ ದೇಹವನ್ನು ಹೆಗಲಿಗೇರಿಸಿಕೊಂಡು, ಉಕ್ಕಿ ಬರುತ್ತಿದ್ದ ದುಃಖವನ್ನು ನುಂಗಿಕೊಂಡು, ಪಂಚಭೂತಗಳಲ್ಲಿ ಭಕ್ತಿಭಾವಗಳಿಂದ ಲೀನಗೊಳಿಸಿದ ಮೋದಿಜಿಯವರ ನಡೆಯಿಂದ ನಾವೆಲ್ಲ ಕಲಿತುಕೊಳ್ಳುವುದು ಸಾಕಷ್ಟಿದೆ.
ಒಬ್ಬ ಸಂತನಲ್ಲಿರಬಹುದಾದ ಸಾಧು ಸ್ವಭಾವ, ಸಹನಶೀಲತೆ ಮತ್ತು ನಿಗರ್ವಿ ಗುಣ ಮೋದಿಜಿಯವರ ಇಂದಿನ ಕಾರ್ಯ ವೈಖರಿಯಲ್ಲಿ ಮೇಳೈಸಿತ್ತು. ತಮ್ಮ ತಾಯಿಯವರ ಅಂತ್ಯಸಂಸ್ಕಾರದಿಂದಾಗಿ ಸಾರ್ವಜನಿಕರಿಗೆ ಯಾರಿಗೂ ತೊಂದರೆ ಯಾಗದಂತೆ ನೋಡಿಕೊಂಡು, ಅತ್ಯಂತ ಪ್ರಾಂಜಲ ಮನಸ್ಸಿನಿಂದ ಕ್ರಿಯಾಕರ್ಮಗಳನ್ನು ಭಾರತೀಯ ಶ್ರದ್ಧಾಭಕ್ತಿ, ಪದ್ಧತಿ ಗಳೊಂದಿಗೆ ಕೆಲವೇ ಗಂಟೆಗಳಲ್ಲಿ ಪೂರ್ತಿಗೊಳಿಸಿದ ಮೋದಿಜಿ ಅವರ ವಿಶಾಲ ಮನಸ್ಸು ಅಪರೂಪದ ಅಪರೂಪದ್ದು. ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದ ತಕ್ಷಣ ತಮ್ಮ ನಿಗದಿತ ಸರ್ಕಾರಿ ಕಾರ್ಯಕ್ರಮಗಳಿಗೆ ತೆರಳಿ ಎಂದಿನಂತೆ ಕರ್ತವ್ಯ ನಿರ್ವಹಿಸಿ ಕಾಯಕವೇ ಕೈಲಾಸ ಎಂಬ ಅಣ್ಣ ಬಸವಣ್ಣನವರ ಮಾತನ್ನು ಅಕ್ಷರಶಃ ಕೃತಿಗೆ ತಂದಿದ್ದು
ಅವರ ಇಂದಿನ ಮತ್ತೊಂದು ವಿಶೇಷವಾಗಿತ್ತು.
ಪ್ರಧಾನಿಯಾಗಿ ೮ ವರ್ಷವಾದರೂ ಒಂದೇ ಒಂದು ದಿನವೂ ರಜೆ ಪಡೆಯದೆ ನಿರಂತರವಾಗಿ ಕೆಲಸ ಮಾಡಿ ಸಾಧನೆಯ ದಾಖಲೆ ಸೃಷ್ಟಿಸಿರುವ ಮೋದಿಜಿ ಅವರ ವ್ಯಕ್ತಿತ್ವಕ್ಕೆ ಅವರ ಇಂದಿನ ನಡೆ ಮತ್ತಷ್ಟು ಕಳಶಪ್ರಾಯವಾಗಿತ್ತು. ಕೆಲವು ಮುಂದುವರಿದ ದೇಶಗಳಲ್ಲಿ ರಾಷ್ಟ್ರ ನಾಯಕರು ನಿಧನರಾದಾಗ ರಜಾ ಪಡೆಯದೇ ದಿನನಿತ್ಯಕ್ಕಿಂತ ಮತ್ತಷ್ಟು ಹೆಚ್ಚಿಗೆ ಕೆಲಸ ಮಾಡುವ ಮೂಲಕ ದಿವಂಗತರಿಗೆ ಶೋಕ ಸಲ್ಲಿಸುವ ಪರಿಪಾಠವಿದೆ ಎಂಬುದನ್ನು ನಾನು ಹಿಂದೆ ಎಲ್ಲಾ ಓದಿದ ನೆನಪು. ಮೋದಿಜಿ ಅವರ ಇಂದಿನ ನಡವಳಿಕೆಯೂ ಈ ಉನ್ನತ ಮನೋಧರ್ಮಕ್ಕೆ ನಿದರ್ಶನದಂತಿತ್ತು.
ಹಾಗಂತ ಮೋದಿಜಿ ಅವರು ತಮ್ಮ ಮಾತೋಶ್ರೀ ಅವರ ಅಂತ್ಯಸಂಸ್ಕಾರದಲ್ಲಿ ಮಾತ್ರ ಈ ರೀತಿಯ ಉನ್ನತ ಗುಣವನ್ನು
ಪ್ರದರ್ಶಿಸಿದ್ದಲ್ಲ. ಮೊದಲಿನಿಂದಲೂ ಅವರು ತಾಯಿಯನ್ನು ಗುರು ಸಮಾನವಾಗಿ ಪ್ರೀತಿಸುತ್ತ, ಗೌರವಿಸುತ್ತ, ತಾಯಿಗೆ ತಕ್ಕ ಮಗನಾಗಿಯೇ ಹೆಸರು ಪಡೆದವರು. ತಾಯಿ ಮಗನ ಪ್ರೀತಿ, ವಾತ್ಸಲ್ಯದ ಬದುಕಿಗೆ ಅವರಿಬ್ಬರ ಬದುಕಿನ ಆತ್ಮೀಯ ಸಂಬಂಧಗಳು, ಗೌರವ, ಆದರಗಳು ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಆದರ್ಶವನ್ನು ತಿಳಿಸಿ ಕೊಡುವಂತಹ ಪಾಠಗಳಂತಿವೆ. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ… ಎಂದರೆ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ.
ಅಂತಹ ಮಮತೆಯ ಚಿಲುಮೆಯಾದ ತಾಯಿಯನ್ನು ಕಳೆದುಕೊಂಡರೂ ಎಂದಿನಂತೆಯೇ ಹೀಗೆ ಜನಸೇವೆಯೇ
ಜನಾರ್ಧನನ ಸೇವೆ ಎಂಬ ಪವಿತ್ರ ಭಾವನೆಯಿಂದ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುವಂತಹ ಧೈರ್ಯ, ಸ್ಥೈರ್ಯ,
ಸಾಮರ್ಥ್ಯ ತೋರಿಸಿ ಮಾದರಿಯಾಗಿರುವ ನಮೋ ಅವರಿಗೆ ನಮೋ ನಮಃ ಎಂದಷ್ಟೇ ಹೇಳಬಹುದು.
ಇಂಥ ಪ್ರೇರಣಾದಾಯಕ ವಿಶ್ವ ವಂದ್ಯ ನಾಯಕನನ್ನು ಈ ಭಾರತ ಮಾತೆಗೆ ಬಳುವಳಿಯಾಗಿ ನೀಡಿದ ಆ ಮಹಾಮಾತೆ
ಹೀರಾಜೀ ಅವರ ಜನ್ಮವೂ ಸಂಪೂರ್ಣ ಸಾರ್ಥಕ್ಯ ಕಂಡಿದೆ. ನಾನು ಮಾಜಿ ಪ್ರಧಾನಿಗಳಾದ ಶ್ರೀಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಜೀವನಗಾಥೆ ಓದುವಾಗ ಅವರ ಮತ್ತು ಅವರ ಕುಟುಂಬದವರ ಸರಳ, ಸಹಜ, ಸಮಾಜಸೇವಾ ಮನೋಭಾವದ ಸಂಪನ್ನ ಗುಣಗಳ ಅನೇಕ ನಿದರ್ಶನಗಳು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದವು. ಈಗ ಮೋದಿಜಿಯವರ ಇಂದಿನ ನಡೆಯೂ ಕೂಡ ಇಂಥದೇ ಉನ್ನತ ಗುಣಗಳನ್ನು ಮತ್ತೆ ಮತ್ತೆ ನೆನಪಿಗೆ ತರುತ್ತಿವೆ. ಪ್ರಧಾನಿ ಪಟ್ಟದ ವೈಭವವಿಲ್ಲದೇ, ಯಾವುದೇ ದೊಡ್ಡಸ್ತಿಕೆಯಿಲ್ಲದೇ ಬರಿಗಾಲಲ್ಲಿ ನಡೆದು, ತಾಯಿಯ ಋಣವನ್ನು ಗೌರವಪೂರ್ವಕವಾಗಿ ಹೆಗಲ ಮೇಲೆ ಹೊತ್ತು ಮೌನವಾಗಿ ಹೆಜ್ಜೆ ಹಾಕಿದ್ದು ಮೋದಿಜಿಯವರು ತಮ್ಮ ಮಾತೆಗೆ ಸಲ್ಲಿಸಿದ ಅರ್ಥಪೂರ್ಣ ಶ್ರದ್ಧಾಂಜಲಿಯಾಗಿದೆ.