Saturday, 14th December 2024

ಅಣು, ರೇಣು, ತೃಣ, ಕಾಷ್ಠಗಳಲ್ಲೂ ಇದರದೇ ಅವತಾರ

ಸುಪ್ತ ಸಾಗರ

rkbhadti@gmail.com

ವೈರಾಣುಗಳ ಅಸ್ತಿತ್ವದ ಬಗ್ಗೆ ಗಂಭೀರ ಅಧ್ಯಯನದ ಮಜಲುಗಳ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನ ದಿಂದ. ಇವುಗಳು ಸಂಖ್ಯೆ ವೃದ್ಧಿ, ನಮ್ಮ ಜೀವಕೋಶಗಳ ಒಳ ಹೊಕ್ಕಾಗ ಮಾತ್ರ ಸಾಧ್ಯ ಎಂಬುದನ್ನು ಸಂಶೋಧಿ ಸಿದ್ದು ೧೮೯೨ರಲ್ಲಿ ಡಿಮಿಟ್ರಿ ಇವಾನೋವ್ಸ್ಕಿ ಎಂಬಾತ. ನಂತರ ೧೯೩೩ರಲ್ಲಿ ಜೀವಶಾಸಜ್ಞ ವೆಂಡಲ್ ಮೆರೆಡಿತ್ ಸ್ಟಾನ್ಲಿ ಅವರ ಅಧ್ಯಯನ.

ಜಗತ್ತೆಲ್ಲವೂ ವೈರಾಣುಮಯವಾಗಿ ಹೋಗಿದೆ. ಅಣು, ರೇಣು, ತೃಣ, ಕಾಷ್ಠಗಳಲ್ಲೂ ಅವತರಿಸಿರುವ ಈ ವೈರಾಣುವೆಂಬೋ ವೈರಾಣುವಿನ ಮೂಲವನ್ನು ಬೆದಕುತ್ತ ಹೋದರೆ ಹತ್ತೊಂಬತ್ತನೆಯ ಶತಮಾನಕ್ಕೆ ಎಂಟ್ರಿ ಕೊಡುತ್ತೇವೆ. ಹಾಗೆ ನೋಡಿದರೆ ಇದರ ಅಧ್ಯ ಯನದ ಗಾಂಭೀರ್ಯ ಪಡಕೊಂಡದ್ದು ಕಳೆದ ಶತಮಾನದಲ್ಲಿ. ಆದರೂ ಪ್ರಾಚೀನ ಲ್ಯಾಟಿನ್ ಭಾಷೆಯ ಕಾಲದ ಇದನ್ನು ವ್ಯಾಖ್ಯಾನಿಸ ಲಾಗಿತ್ತು. ಒಮ್ಮೆ ವೈರಾಣು ಜಗತ್ತಿನಲ್ಲಿ ಒಮ್ಮೆ ಓಡಾಡಿ ಬರೋಣ.

ಲ್ಯಾಟಿನ್‌ನಲ್ಲಿ ವೈರಸ್ ಎಂದರೆ ವಿಷ ಎಂಬ ಅರ್ಥ ಬರುತ್ತದೆ. ಟಾಕ್ಸಿನ್- ಅಂದರೆ ಜೀವಾಣುವಿನಲ್ಲಿ ಹುಟ್ಟುವ ವಿಷ. ಹಾಗೆಂದು ಎಲ್ಲ ವೈರಸ್ ಅಥವಾ ಬ್ಯಾಕ್ಟೀರಿಯಾಗಳೂ ಕೆಟ್ಟ ಪರಿಣಾಮ ತರುವಂಥವೇ ಅಲ್ಲ. ಉದಾಹರಣೆಗೆ ಮಣ್ಣಿನಲ್ಲಿನ ಪೋಷ ಕಾಂಶಗಳ ಮಟ್ಟ ನಿರ್ಧರಿಸುವುದು, ಕಸ ಕೊಳೆತು ಗೊಬ್ಬರ ಆಗುವುದು, ಮೊಸರು-ದೋಸೆ ಹಿಟ್ಟು ತಯಾರಾಗುವುದು ಇತ್ಯಾದಿ. ಬೇಕರಿ ತಿಂಡಿಗಳ ಹಿಟ್ಟು ಹುಳಿಬರುವುದೂ ಇಂಥ ಸೂಕ್ಷ್ಮ ಜೀವಿಗಳಿಂದಲೇ.

ಇವುಗಳ ನಡುವೆಯೇ ಇರುವ ವಿಲನ್‌ಗಳು ನಮಗೆ ರೋಗಗಳನ್ನೂ ಅಂಟಿಸಿಬಿಡುತ್ತವೆ. ಇಂಥವನ್ನೇ ಪ್ಯಾಥೋಜೆನ್ಸ್ (ರೋಗ ಕಾರಕಗಳು) ಎಂದು ಕರೆಯುತ್ತಾರೆ. ಬೇರೇ ಬೇರೆ ಪ್ಯಾಥೋಜೆನ್‌ಗಳು ಬೇರೆ ಬೇರೆ ಕಾಯಿಲೆಗಳನ್ನು ತರುತ್ತವೆ. ವಿಶೇಷ ಅಂದರೆ ಅವು ದೇಹದ ಹೊರಗಿದ್ದರೆ ದುರ್ಬಲ. ಒಳ ಹೊಕ್ಕರೆ ರಾಕ್ಷಸ. ಇದು ಹೇಗೆ ತಿಳಿಯಬೇಕೆಂದರೆ ನಮ್ಮ ದೇಹದ ಒಳಗಿನ ರಚನೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ನಮ್ಮಿಡೀ ದೇಹ ಲಕ್ಷಾಂತರ ಜೀವಕೋಶ(ಸೆಲ್ಸ್)  ಗಳಿಂದಾಗಿದೆ ಎಂಬುದು ಗೊತ್ತೇ ಇದೆ. ಒಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿ ೧೨೦ ಬಿಲಿಯನ್‌ಗಳಿಗಿಂತ ಹೆಚ್ಚು ಸೆಲ್‌ಗಳು ಇರುತ್ತವೆ. ಹಾಗೆಯೇ ಒಂದೊಂದು ಸೆಲ್‌ನ ಒಳಗೂ ತಲಾ ಮೂರು ಬ್ಯಾಕ್ಟೀರಿಯಾಗಳಿರುತ್ತವೆ.

ಹೀಗೆ ದೇಹದಲ್ಲಿ ಚಟುವಟಿಕೆಗಳನ್ನು ನಡೆಸುವ ನಮ್ಮನ್ನು ಆರೋಗ್ಯವಂತವಾಗಿ ಇಡುವ ೬೦ ಟ್ರಿಲಿಯನ್ ಗೂ ಹೆಚ್ಚು ಒಳ್ಳೆಯ ಬ್ಯಾಕ್ಟೀರಿಯಾಗಳೂ ಇರುತ್ತವೆ. ಈ ಸೆಲ್ ಹಾಗೂ ಬ್ಯಾಕ್ಟೀರಿಯಾ ಸಂಬಂಧವನ್ನು ವೋಲೋ ಬಯಾಮ್ ಎನ್ನುತ್ತಾರೆ. ಅಂದರೆ ಒಂದೇ ಜೀವ ಎರಡು ದೇಹಗಳಿದ್ದಂತೆ. ಒಳ್ಳೆ ಬ್ಯಾಕ್ಟೀರಿಯಾಗಳಿಂದಲೇ ನಿರ್ಮಾಣವಾಗುವ ಮೈಕ್ರೋ ಆರ್ಗಾನಿಸಮ್ ನಿಂದಲೇ ನಾವು ಆರೋಗ್ಯವಾಗಿದ್ದೇವೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ.

ಇದನ್ನು ದೇಹದೊಳಗಿನ ‘ಗಟ್’ ಎಂದು ಗುರುತಿಸುತ್ತಾರೆ. ಈ ಗಟ್ ಹೆಲ್ತ ಅನ್ನು ಸರಿಯಾಗಿಟ್ಟುಕೊಂಡರೆ ನಾವು ರೋಗ ಮುಕ್ತ ರಾಗಿದ್ದಂತೆ. ಇರಲಿ ವೈರಾಣುಗಳ ವಿಚಾರಕ್ಕೆ ಮತ್ತೆ ಬರೋಣ. ಈ ವೈರಾಣು ಎಂಬುದು ಸಹ ಒಂದು ರೀತಿಯಲ್ಲಿ ಬ್ಯಾಕ್ಟೀರಿ ಯಾವೇ. ಆದರೆ ಕೆಟ್ಟ ಬ್ಯಾಕ್ಟೀರಿಯಾ. ಮನುಷ್ಯರಲ್ಲಿ ಒಳ್ಳೆಯವರು ಕೆಟ್ಟವರು ಅಂತ ಇರೋದಿಲ್ವೇ; ಇಂಥ ಬ್ಯಾಕ್ಟೀರಿ ಯಾಗಳು ಭೂಮಿಯ ಮೇಲೆ ವಾತವರಣ ಎಂಬುದು ನಿರ್ಮಾಣವಾದಾಗಲೇ ಹುಟ್ಟಿದ್ದು. ಇಂಥ ೨೬೦ ಟ್ರಿಲಿಯನ್ ಬ್ಯಾಕ್ಟೀರಿಯಾಗಳು ವಾತಾವರಣದಲ್ಲಿ ಇರುತ್ತವೆ.

ಇವು ಸಂತಾನೋತ್ಪತ್ತಿ ವಿಚಾರದಲ್ಲಿ ಪರಾವಲಂಬಿಗಳು. ಬೇರೆಯೊಂದು ಜೀವಿಯ ಜೀವಕೋಶಗಳೊಳಗೆ ಪ್ರವೇಶ ಸಿಗದಿದ್ದರೆ ಇವುಗಳ ಸಂಖ್ಯೆ ವೃದ್ಧಿಸುವುದೇ ಇಲ್ಲ. ಮಾತ್ರವಲ್ಲ ಇವು ದೇಹದೊಳಕ್ಕೆ ಹೊಕ್ಕೊಡನೇ ಒಂದು ಚಿಕ್ಕದಾದ ಸೋಂಕುಂಟು ಮಾಡುವ ಸೂಕ್ಷ್ಮಜೀವಿ. ಎಷ್ಟು ಸೂಕ್ಷ್ಮವೆಂದರೆ ಈ ವೈರಾಣುಗಳು ದ್ಯುತಿಸೂಕ್ಷ್ಮದರ್ಶಕದಿಂದಲೂ ಕಾಣದಷ್ಟು ಚಿಕ್ಕದಾಗಿರುತ್ತವೆ.
ದೇಹದೊಳಗಿನ ಹೊಕ್ಕ ವೈರಾಣುಗಳು ಹೇಗೆ ಸೋಂಕು ತರುತ್ತವೆ ಎಂಬುದನ್ನು ಹೇಳಲಾಗದು.

ಹೊರಗಿನಿಂದ ದಾಳಿ ಇಡುವ ಇವನ್ನು ಒದ್ದು ಓಡಿಸುವಷ್ಟು ಸಾಮರ್ಥ್ಯ ದೇಹಕ್ಕೆ ಬೇಕು. ಇಂಥ ಹೋರಾಟದ ಶಕ್ತಿಯನ್ನೇ ಇಮ್ಯೂನ್ ವ್ಯವಸ್ಥೆ( ರೋಗ ನಿರೋಧಕ) ಎಂದು ಕರೆಯುವುದು. ಇಂದು ಪುಟ್ಟ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ದೇಹದೊಳಗಿನ ಬಿಳಿ ರಕ್ತ ಕಣಗಳು ಹಾಗೂ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ಗಡಿಯಲ್ಲಿನ ಸೈನಿಕರಂತೆ ಸದಾ ಹೋರಾಟಕ್ಕೆ ಸಜ್ಜಾಗಿಯೇ ಇರುತ್ತವೆ. ಇವೆರಡರ ಹೋರಾಟದಲ್ಲಿ ಒಂದೊಮ್ಮೆ ನಮ್ಮೊಳಗಿನ ಸೈನ್ಯ ಸೋತು ಬ್ಯಾಕ್ಟೀರಿಯಾಗಳ ಸಂಖ್ಯೆ ಕುಸಿದರೆ ಆಗ ರೋಗ ಸಾಧ್ಯತೆ ಹೆಚ್ಚು. ಇದರ ಪುನರುತ್ಪತ್ತಿಗೆ ೯ ಪ್ರಮುಖ ಅಮಿನೋ ಆಸಿಡ್‌ಗಳ ಅಗತ್ಯವಿದೆ. ಅದರಲ್ಲಿ ಮುಖ್ಯ ವಾಗಿ ಆಲ್ಪಾ ಲಿಪೋಯಿಕ್ ಆಸಿಡ್ ಎನ್ನುವ ಆಮ್ಲೀಯ ಅಂಶ ದೇಹಕ್ಕೆ ಬೇಕೇ ಬೇಕು. ಇದನ್ನು ಆಂಟಿ ಆಕ್ಸಿಡೆಂಟ್‌ಗಳ ತಾಯಿ ಎಂದು ಕರೆಯುತ್ತಾರೆ.

ವೈರಾಣುಗಳು ಪ್ರಾಣಿಗಳಲ್ಲಿ ಮಾತ್ರವಲ್ಲ ಸಸ್ಯಗಳು, ಬ್ಯಾಕ್ಟೀರಿಯಾ ಮತ್ತು ಆರ್ಕೀಯಾದವರೆಗಿನ ಎಲ್ಲ ಬಗೆಯ ಜೀವಿಗಳಲ್ಲೂ ಸೋಂಕು ಉಂಟು ಮಾಡುತ್ತವೆ. ಇವುಗಳು ಜೀವಕೋಶಗಳು ಅಲ್ಲ ಎಂಬುದನ್ನು ಮೊದಲಿಗೆ ಗುರುತಿಸಿದ್ದು ರುಡಾಲ ವರ್ಛೊ ಎಂಬಾತ. ಅವರ ಪ್ರಕಾರ ಇವು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುತ್ತವೆ. ಹೊರಗೆ ನಿರ್ವಿಣ್ಣವಾಗಿರುತ್ತವೆ. ಜತೆಗೆ ವೈರಾಣುಗಳು ಆಕಾರ-ಗಾತ್ರದಲ್ಲಿಯೂ ವ್ಯತ್ಯಾಸ ಹೊಂದಿರುತ್ತದೆ, ಸರಾಸರಿ ಇವುಗಳ ವ್ಯಾಸ ೧೭-೧೦೦೦ ನಾನೋ ಮೀಟರುಗಳಷ್ಟು.

ಮೊದಲೇ ಹೇಳಿದಂತೆ ವೈರಾಣುಗಳ ಅಸ್ತಿತ್ವದ ಬಗ್ಗೆ ಗಂಭೀರ ಅಧ್ಯಯನದ ಮಜಲುಗಳ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಿಂದ. ಇವುಗಳು ಸಂಖ್ಯೆ ವೃದ್ಧಿ, ನಮ್ಮ ಜೀವಕೋಶಗಳ ಒಳ ಹೊಕ್ಕಾಗ ಮಾತ್ರ ಸಾಧ್ಯ ಎಂಬುದನ್ನು ಸಂಶೋಧಿಸಿದ್ದು ೧೮೯೨ರಲ್ಲಿ ಡಿಮಿಟ್ರಿ ಇವಾನೋವ್ಸ್ಕಿ ಎಂಬಾತ. ನಂತರ ವೈರಾಣುಗಳ ವರ್ತನೆಗಳ ಬಗ್ಗೆ ತಿಳಿಸಿದ್ದು ೧೯೩೩ರಲ್ಲಿ ಜೀವಶಾಸ್ತ್ರಜ್ಞ ವೆಂಡಲ್ ಮೆರೆಡಿತ್ ಸ್ಟಾನ್ಲಿ ಅವರ ಅಧ್ಯಯನ. ಆಗಲೇ ವೈರಾಣುಗಳ ವಂಶವಾಹಿ ಬೆಳವಣಿಗೆ ಹಾಗೂ ಪ್ರೋಟೀನುಗಳ ಸಂಯೋ ಜನೆ ಅರಿವಿಗೆ ಬಂದದ್ದು.

ಎಲ್ಲ ವೈರಾಣುಗಳ ಮೂಲಭೂತ ರಚನೆ ಹೀಗೆಯೇ ಇರುತ್ತದೆ. ಮಧ್ಯದಲ್ಲಿ ನ್ಯೂಕ್ಲಿಯಿಕ್ ಆಸಿಡ್ ಇರುತ್ತದೆ. ಎರಡೂ ರೀತಿಯ ನ್ಯೂಕ್ಲಿಯಿಕ್ ಆಸಿಡ್‌ನಲ್ಲಿ (ಡಿಎನ್‌ಎ ಹಾಗೂ ಆರ್‌ಎನ್‌ಎ) ಯಾವುದಾದರು ಒಂದು ಪ್ರತೀ ವೈರಾಣುವಿನಲ್ಲಿ ಇದ್ದೇ ಇರುತ್ತದೆ. ಇದನ್ನು ‘ಕ್ಯಾಪ್ಸಿಡ್’ ಎನ್ನುತ್ತಾರೆ. ಅದರ ಸುತ್ತ ಬೇರೆಬೇರೆ ರೀತಿಯ ಪ್ರೋಟೀನಿನ ಹೊದಿಕೆ ಇರುತ್ತದೆ. ಇವನ್ನು ‘ಕ್ಯಾಪ್ಸೋ ಮಿಯರ್ಸ’ ಎಂದು ಕರೆಯುಲಾಗುತ್ತದೆ. ಎಲ್ಲ ವೈರಾಣುಗಳೂ ಎಲ್ಲ ರೀತಿಯ ರೋಗ ತರುವುದಿಲ್ಲ ಎಂಬುದು ತಿಳಿಯುತು. ಹಾಗಾದರೆ ಯಾವ್ಯಾವುದು, ಯಾವ್ಯಾವ ರೋಗ ತರುತ್ತದೆ ಎಂದು ಗೊತ್ತಾಗೋದು ಹೇಗೆ? ನಮ್ಮಲ್ಲಿ ನೂರಾರು ಜನರಿದ್ದರೂ, ಎಲ್ಲರೂ ಮನುಷ್ಯರೇ ಆಗಿದ್ದರೂ ಪ್ರತಿಯೊಬ್ಬರಿಗೂ ಬೇರೇ ಬೇರೇ ಹೆಸರಿರುವುದಿಲ್ಲವೇ? ಹಾಗೆಯೇ ಪ್ರತಿ ರೋಗಕ್ಕೂ, ಅದಕ್ಕೆ ಕಾರಣವಾಗುವ ವೈರಾಣುವಿಗೂ ಒಂದೊಂದು ಹೆಸರಿಡಲಾಗುತ್ತದೆ.

ರೋಗ ಹರಡುವ ರೀತಿ, ಅದು ಎಷ್ಟು ತೀವ್ರವಾದದ್ದು, ಚಿಕಿತ್ಸೆ ಇತ್ಯಾದಿಗಳನ್ನು ತಿಳಿಯಬೇಕೆಂದರೆ ಪ್ರತಿ ವೈರಾಣುವಿಗೂ
ಒಂದೊಂದು ಹೆಸರು ಬೇಕಾಗುತ್ತದೆ. ಕೆಲವಕ್ಕೆ ಅದು ಹುಟ್ಟಿದ ಜಾಗದ ಸ್ಥಳೀಯ ಹೆಸರನ್ನು ಇಡಲಾಗುತ್ತದೆ. ಇನ್ನು ಕೆಲವಕ್ಕೆ ಅವು ತೋರುವ ಗುಣ-ಲಕ್ಷಣಗಳಿಂದ ಹೆಸರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡಿದ ಚಿಕೂನ್‌ಗುನ್ಯ, ಸಾರ್ಸ್, ಎಬೋಲಾ, ಡೆಂಘೀ, ಕೊರೋನಾ ಇವೆಲ್ಲವೂ ಹೀಗೆ ನಾಮಕರಣಗೊಂಡವೇ.

ಇಂಥ ನಾಮಕರಣ ಪ್ರಕ್ರಿಯೆಗೆ ಜಾಗತಿಕ ಮಟ್ಟದಲ್ಲಿ ಒಂದು ವ್ಯವಸ್ಥೆ ಇದೆ. ಈ ಹೊಣೆ ವಿಶ್ವ ಆರೋಗ್ಯ ಸಂಸ್ಥೆ (WHO)ಯದ್ದು. ಹಾಗೆಂದು ಅದು ಏಕಾಏಕಿ ತಾನೊಂದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಇದಕ್ಕೊಂದು ಮಾರ್ಗಸೂಚಿಯಿದೆ. ಬೇರೇ ರಾಷ್ಟ್ರದ ಸ್ವಾಸ್ಥ್ಯ ಮಂಡಳಿಗಳ ಜತೆ ಚರ್ಚಿಸಿ, ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (OIE) ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳ (FAO) ಸಹಯೋಗದಲ್ಲಿ ರೋಗಗಳನ್ನು- ವೈರಾಣುಗಳನ್ನು ವರ್ಗೀಕರಿಸಲಾಗುತ್ತದೆ.

ಇದನ್ನೇ ಅಂತಾರಾಷ್ಟ್ರೀಯ ರೋಗಗಳ ವರ್ಗೀಕರಣ (ಇಂಟರ್‌ನ್ಯಾಶನಲ್ ಕ್ಲಾಸಿಫಿಕೇಶನ್ ಆಫ್ ಡಿಸೀಸಸ್- ICD) ಎಂದು ಹೇಳುವುದು. ಆನಂತರ ಇಂಟರ್‌ನ್ಯಾಶನಲ್ ಕಮಿಟಿ ಆನ್ ಟ್ಯಾಕ್ಸಾನಮಿ ಆಫ್ ವೈರಸಸ್- ICTV , ಅಂದರೆ ‘ವೈರಸ್’ಗಳ ಜೀವಿ ವರ್ಗೀಕರಣಕ್ಕಾಗಿಯೇ ಇರುವ ಅಂತಾ ರಾಷ್ಟ್ರೀಯ ಸಮಿತಿ ಹೊಸ ವೈರಸ್‌ಗೊಂದು ನಾಮಕರಣ ಮಾಡುತ್ತದೆ. ನಮ್ಮನ್ನು ಈಗ ಬಾಧಿಸುತ್ತಿರುವ ಕೊರೋನಾ ವೈರಾಣುವಿನ ಪೂರ್ಣ ಹೆಸರು SARS-CoV-2 (severe acute respiratory syndrome
coronavirus 2).

ಇನ್ನು ಅದು ಎಬ್ಬಿಸುವ ಅವಾಂತರದ ಮೇಲೆ ಆ ವೈರಾಣುವಿನ ಗುಣಲಕ್ಷಣಗಳನ್ನೂ ವರ್ಗೀಕರಿಸಲಾಗುತ್ತದೆ. ಅಂದರೆ ಯಾವ ಪ್ರಮಾಣದಲ್ಲಿ ಅದು ಹರಡಬಲ್ಲುದು ಎಂಬುದರ ಮೇಲೆ ಅದು ಅವಲಂಬಿತ. ಕೊರೋನಾ ಬಗ್ಗೆ ಔಟ್ ಬ್ರೇಕ್, ಎಪಿಡೆಮಿಕ್ ಎಂಬ ರೀತಿಯ ವರ್ಣ ನೆಯನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಇವೆಲ್ಲವೂ ವೈರಾಣುವಿಗೆ ನೀಡಿರುವ ಗುಣ ವಿಶೇಷಣಗಳೇ. ರೋಗ ಎಲ್ಲಾ ಒಂದು ಕಡೆ ಕಾಣಿಸಿಕೊಂಡು ಏಕಾಏಕಿ ಸೋಟಿಸಿಬಿಟ್ಟರೆ ಅದು ‘ಔಟ್ ಬ್ರೇಕ್’. ಒಂದು ಕಡೆ ಕಾಣಿಸಿಕೊಂಡು ದಿನದಿಂದ ದಿನಕ್ಕೆ ಅತಿ ವೇಗದಲ್ಲಿ ಎಡೆ ಹರಡುತ್ತಿದ್ದರೆ ಅದು ‘ಎಪಿಡೆಮಿಕ್’ ಎನ್ನುತ್ತಾರೆ. ಇನ್ನು ಏನು ಮಾಡಿದರೂ ಹದ್ದುಬಸ್ತಿನಲ್ಲಿಡಲಾಗದೇ ಇಡೀ ಜಗತ್ತಿನಾದ್ಯಂತ ಹರಡುತ್ತಿದ್ದರೆ ಆಗ ಅದು ‘ಪ್ಯಾನ್‌ಡೆಮಿಕ್’.

ಇದೀಗ ಜಗತ್ತಿನಾದ್ಯಂತ ಮಿತಿಮೀರಿ ವ್ಯಾಪಿಸುತ್ತಿರುವ ಕೊರೋನಾ ವೈರಸ್ ಅನ್ನು (COVID-19) ಅನ್ನು ವಿಶ್ವ ಆರೋಗ್ಯ
ಸಂಸ್ಥೆ ಪ್ಯಾನ್‌ಡೆಮಿಕ್ ಎಂದು (೨೦೧೯, ಮಾರ್ಚ್ ೧೧ಕ್ಕೆ) ಘೋಷಿಸಿದೆ. ಒಟ್ಟಾರೆ ವೈರಾಣುಗಳು ಯಾವುದೇ ಆಗಿದ್ದರೂ ಅವು
ಒಮ್ಮೆ ಭೂಮಿಯಲ್ಲಿ ಹರಡಿದವು ಎಂದರೆ ಮತ್ತೆಂದೂ ಈ ಜಗತ್ತು ಅವುಗಳಿಂದ ಮುಕ್ತಿ ಪಡೆಯುವುದೇ ಇಲ್ಲ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಿಡುಬು, ಪೋಲಿಯೋ, ಮಲೇರಿಯಾ ವೈರಾಣುಗಳೆಲ್ಲವೂ ಹೀಗೆಯೇ. ಅವನ್ನು ನಿರ್ಮೂಲನ ಮಾಡಿಬಿಟ್ಟಿದ್ದೇವೆ ಎಂದು ನಾವು ಬೆನ್ನುತಟ್ಟಿಕೊಂಡಿದ್ದರೂ ಅದು ಅರ್ಧ ಸತ್ಯ ಮಾತ್ರ.

ಅಂಥ ವೈರಸ್ ಗಳನ್ನು ನಿಯಂತ್ರಣದಲ್ಲಿಡುವ ಮಾರ್ಗ(ಲಸಿಕೆ ಮೂಲಕ) ನಮಗೆ ಸಿದ್ಧಿಸಿದೆ. ಯಾವುದೇ ಮನುಷ್ಯ ದೇಹಕ್ಕೆ ಅವು ಹೊಕ್ಕರೂ ಅವನ್ನು ಹೊಡೆದೋಡಿಸುವ ಪ್ರತಿಬಂಧಕವನ್ನು ಕಂಡುಕೊಂಡಿದ್ದೇವೆ. ಮಾತ್ರವಲ್ಲ ಹಿಮ್ಮೆಟ್ಟಿಸುವ ನಿರೋಧಕ ಶಕ್ತಿ ಮಾನವ ದೇಹದಲ್ಲಿ ಬೆಳೆದಿದೆ ಎಂದರ್ಥ. ಕೊರೋನಾ ವಿಚಾರದಲ್ಲೂ ಇದೇ ಆಗಬೇಕು, ಹೊರತೂ ಅದರಿಂದ ನಮಗಿನ್ನು ಮುಕ್ತಿಯೇ ಇಲ್ಲ!

 
Read E-Paper click here