Friday, 13th December 2024

ವಿವಾದ ಬಿಟ್ಟು, ಅಭಿವೃದ್ದಿಯಾಗಲಿ

ಪ್ರಸ್ತುತ

ಶಿವಪ್ರಸಾದ್

ಕರ್ನಾಟಕವು ವಿಧಾನ ಮಂಡಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿಗೆ ಬಂದು ತಮ್ಮ ಶಕ್ತಿ ಪ್ರದರ್ಶಿಸುವ ನಾಟಕಗಳನ್ನಾಡುತ್ತ, ಮಹಾರಾಷ್ಟ್ರಕ್ಕೆ ಬೆಳಗಾವಿಯನ್ನು ಸೇರಿಸಲೇ ಬೇಕೆಂದು ಬೊಬ್ಬೆಯಿಟ್ಟು, ಭಾಷಾ ಭಾವನೆ ಗಳ ಕಾಡ್ಗಿಚ್ಚನ್ನು ಹಚ್ಚಿ, ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿ ಕೊಳ್ಳುವ ಹಳೆಯ ಚಾಳಿಗೆ ಮರಳಿದ್ದಾರೆ.

1948ರಲ್ಲಿ ಈ ಜಿಲ್ಲೆಯನ್ನು ಮಹಾರಾಷ್ಟ್ರ ರಾಜ್ಯಕ್ಕೇ ಸೇರಿಸಬೇಕೆಂದು ಬೆಳಗಾವಿಯ ಪುರಸಭೆ ಕೇಂದ್ರಕ್ಕೆ ಮನವಿ  ಮಾಡಿತ್ತಾ ದರೂ, ೧೯೫೬ರಲ್ಲಿ ರಾಜ್ಯಗಳನ್ನು ಭಾಷಾವಾರು ಪುನರ್ವಿಂಗಡಣೆ ಮಾಡಿದ ಸಂದರ್ಭದಲ್ಲಿ ಬೆಳಗಾವಿಯನ್ನು ಕರ್ನಾಟಕದ ಭಾಗವಾಗಿ ಕೇಂದ್ರ ನಿರ್ಧರಿಸಿತ್ತು. ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಜೂನ್ ೨೩, ೧೯೫೭ರಂದು ಸಲ್ಲಿಸಿದ ಮನವಿಯ ಮೇರೆಗೆ ಬೆಳಗಾವಿಯನ್ನು ಆ ರಾಜ್ಯಕ್ಕೆ ವರ್ಗಾಯಿಸುವ ಬಗ್ಗೆ ವರದಿ ನೀಡಲು ಅಕ್ಟೋಬರ್ ೨೩, ೧೯೬೬ರಂದು ಕೇಂದ್ರವು ಮಹಾಜನ್ ಆಯೋಗವನ್ನು ನೇಮಿಸಿತು. ಅನಂತರ, ಆಯೋಗದ ವರದಿಯು ಯಾರ ಪರವಾಗಿದ್ದರೂ ಮಹಾರಾಷ್ಟ ಸರಕಾರ ಅದನ್ನು ಒಪ್ಪುತ್ತದೆಯೆಂದು ನವಂಬರ್ ೯, ೧೯೬೭ರಂದು ಆ ರಾಜ್ಯದ ಅಂದಿನ ಮುಖ್ಯಮಂತ್ರಿ ವಿ.ಪಿ.ನಾಯಕ್ ಘೋಷಿಸಿದ್ದರು.

ಆಯೋಗದಲ್ಲಿ ಮಹಾರಾಷ್ಟ್ರದ ಇಬ್ಬರು ಸದಸ್ಯರು ಮತ್ತು ಅಂದಿನ ಮೈಸೂರು ರಾಜ್ಯವಾದ ಕರ್ನಾಟಕದ ಇಬ್ಬರು ಸದಸ್ಯರಿ ದ್ದರು. ಮಹಾರಾಷ್ಟ್ರದ ಮನವಿಯಲ್ಲಿದ್ದ ಯಾವುದೇ ಅಂಶಕ್ಕೂ ಒಪ್ಪದ ಆಯೋಗ, ಮಹಾರಾಷ್ಟ್ರಕ್ಕೆ ಭೌಗೋಳಿಕವಾಗಿ ಮಾತ್ರ ಬೆಳಗಾವಿ ಹತ್ತಿರದಲ್ಲಿದೆ ಎಂದಿತ್ತು. ಈ ವರದಿಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಖಾನಾಪುರ ಮತ್ತು ನಂದಗಢ್ ಒಳಗೊಂಡಂತೆ ೨೬೨ ಹಳ್ಳಿಗಳನ್ನು ಮಹಾರಾಷ್ಟಕ್ಕೆ ನೀಡಬೇಕೆಂದೂ ಮತ್ತು ಸೊಲ್ಲಾಪುರವನ್ನೊಳಗೊಂಡಂತೆ ಮಹಾ ರಾಷ್ಟ್ರದ ೨೪೭ ಹಳ್ಳಿಗಳನ್ನು ಕರ್ನಾಟಕಕ್ಕೆ ನೀಡಬೇಕೆಂದೂ ಸೂಚಿಸಲಾಯಿತು.

ಆದರೆ ಎರಡೂ ರಾಜ್ಯಗಳಿಗೆ ಇದರ ಬಗ್ಗೆ ಒಪ್ಪಿಗೆ ಇರಲಿಲ್ಲವಾದ್ದರಿಂದ ಇದು ಅನುಷ್ಠಾನ ಆಗಲಿಲ್ಲ. ಅಂದಿನಿಂದ ಈ ವಿವಾದವು ಮಹಾರಾಷ್ಟದ ರಾಜಕಾರಣಿಗಳಿಗೆ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳಲು ಒಳ್ಳೆಯ ಅವಕಾಶಗಳನ್ನು ಹಲವಾರು ಬಾರಿ ಕಲ್ಪಿಸುತ್ತಿದೆ. ೮೦ರ ಮತ್ತು ೯೦ರ ದಶಕದಲ್ಲಿ ಎಂಇಎಸ್ ಪಕ್ಷವು ಬೆಳಗಾವಿ ನಗರಸಭೆಯಲ್ಲಿ ಒಂದು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿ, ಅನಂತರ ರಾಜ್ಯ ವಿಧಾನಸಭೆಗೂ ಶಾಸಕರನ್ನು ಕಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಸಮಯ ಕಳೆದಂತೆ, ೨೦೧೪ ದಿಂದೀಚೆಗಿನ ವಿಧಾನ ಸಭೆಗಳಲ್ಲಿ ಯಾರೊಬ್ಬರೂ ಇಲ್ಲದಂತಾಗಿದೆ.

ಎಂಇಎಸ್‌ನ ಹತೋಟಿಯಲ್ಲಿದ್ದ ಬೆಳಗಾವಿ ನಗರಸಭೆ ಅಕ್ಟೋಬರ್ ೨೭, ೨೦೦೫ರಂದು ಬೆಳಗಾವಿ ನಗರದ ಗಡಿಭಾಗಗಳನ್ನೊಳ ಗೊಂಡಂತೆ ಬೆಳಗಾವಿ ನಗರ, ಖಾನಾಪುರ, ನಿಪ್ಪಾಣಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಬೀದರ್‌ನ ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ಗಳನ್ನು ಮಹಾರಾಷ್ಟ್ರದೊಂದಿಗೆ ಒಗ್ಗೂಡಿಸಬೇಕೆಂಬ ನಿರ್ಣಯ ತೆಗೆದುಕೊಂಡಿತ್ತು. ಹೀಗೆ ರಾಜಕೀಯ ಹಗ್ಗಜಗ್ಗಾಟಗಳ ನಡುವೆ, ಮರಾಠಿಗರ ಆತ್ಮಗೌರವಕ್ಕಾಗಿ ಹೋರಾಡುವ ಪಕ್ಷವೆಂದೇ ಹೇಳಿಕೊಂಡು ರಾಜಕೀಯ ಲಾಭಗಳಿಸುತ್ತಿರುವ ಶಿವಸೇನೆಯು, ಮಹಾರಾಷ್ಟ್ರದೊಡನೆ ಬೆಳಗಾವಿಯನ್ನು ಏಕೀಕರಣಮಾಡಬೇಕೆಂದು ಹೇಳುತ್ತ ಎಂಇಎಸ್‌ನವರು ನಿರ್ಮಿಸಿಕೊಂಡಿದ್ದ ಹೋಮಕುಂಡಕ್ಕೆ ತನ್ನ ಪುಂಡಾಟಿಕೆಯ ತುಪ್ಪವನ್ನು ಆಗೊಮ್ಮೆ ಈಗೊಮ್ಮೆ ಸುರಿ
ಯುತ್ತಲಿತ್ತು.

ಇದರ ಪ್ರಯೋಜನಗಳನ್ನು ಮನಗಂಡ ಆ ರಾಜ್ಯದ ಇತರ ಪಕ್ಷಗಳ ಹಲವು ನಾಯಕರು ಒಬ್ಬರಿಗಿಂತ ಒಬ್ಬರು ಇನ್ನಷ್ಟು
ತೀವ್ರತೆಯೊಂದಿಗೆ ಇದೇ ಕ್ಯಾತೆಯನ್ನು ತೆಗೆಯತೊಡಗಿದರು. ತಮ್ಮತಮ್ಮ ಕ್ಷೇತ್ರಗಳಲ್ಲಿ ರಾಜಕೀಯ ಲಾಭಗಳಿಸುವ ಸುಲಭೋ
ಪಾಯವಾಗಿ ಇದನ್ನು ಬಳಸಿಕೊಳ್ಳತೊಡಗಿದರು. ಇದೊಂದು ವಾರ್ಷಿಕ ನಾಟಕವಾಗಿ, ಮಹಾರಾಷ್ಟ್ರದ ರಾಜಕಾರಣಿಗಳಿಗೆ ವೈಯಕ್ತಿಕ ಲಾಭಗಳಿಸಲು ಸುಲಭದ ಚಿನ್ನದಗಣಿಯಾಗಿ ಒದಗಿಬಂತು.

ಈ ವರ್ಷ ಒಂದು ವಿಶಿಷ್ಟ ಪರಿಸ್ಥಿತಿ ಏರ್ಪಟ್ಟಿದೆ. ಕರ್ನಾಟಕದಲ್ಲಿ ಆಡಳಿತ ಪಕ್ಷವಾಗಿ ಸರ್ಕಾರ ನಡೆಸುತ್ತಿರುವುದರೊಂದಿಗೆ, ಮಹಾರಾಷ್ಟ್ರದಲ್ಲೂ ಏಕ್‌ನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣದೊಂದಿಗೆ ಮೈತ್ರಿ ಸರಕಾರ ನಡೆಸುತ್ತ ಬಿಜೆಪಿಯು ಅಲ್ಲಿಯೂ ಆಡಳಿತ ಪಕ್ಷವಾಗಿದೆ. ಹೀಗಾಗಿ, ಎರಡೂ ರಾಜ್ಯಗಳ ಬಿಜೆಪಿ ರಾಜಕಾರಣಿಗಳಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಸ್ಥಳೀಯ ರಾಜಕೀಯ ಧ್ಯೇಯೋದ್ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ನಡೆಗಳನ್ನು ರೂಪಿಸಿಕೊಳ್ಳ ಬೇಕಾಗಿರುವ ಅನಿವಾರ್ಯ ಪರಿಸ್ಥಿತಿ ಯಿದೆಯಾದರೂ, ಕೇಂದ್ರ ದಲ್ಲೂ ಆಡಳಿತದಲ್ಲಿರುವ ಬಿಜೆಪಿಗೆ ಮತ್ತು ಕೇಂದ್ರ ನಾಯಕರಿಗೆ ಇದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಅಮಿತ್ ಷಾರವರು ಎರಡೂ ರಾಜ್ಯಗಳ ನಾಯಕರನ್ನು ದೆಹಲಿಗೆ ಕರೆಯಿಸಿಕೊಂಡು ಹೆಚ್ಚಿನ ಕಿತ್ತಾಟ ನಡೆಯದಂತೆ ತಡೆದಿದ್ದಾರೆ. ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ನಾಗ್ಪುರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಏರ್ಪಟ್ಟ ಕೂಗನ್ನು ಆಲಿಸದೆ, ಮಹಾರಾಷ್ಟ್ರದ ರಾಜಕಾರಣಿಗಳು ಅಲ್ಲಿನ ಜನರ ಕಣ್ಣೊರೆಸುವ ಉದ್ದೇಶದಿಂದ ನಾಗ್ಪುರವನ್ನು ಆ ರಾಜ್ಯದ ಚಳಿಗಾಲದ ರಾಜಧಾನಿಯನ್ನಾಗಿ ಮಾಡಿ ಅಲ್ಲಿ ವಿಧಾನ ಮಂಡಲದ ಅಧಿವೇಶನ ಮಾಡುತ್ತ ಬಂದಿದ್ದಾರೆ.

ಆದರೆ, ಕರ್ನಾಟಕ ಸರಕಾರದವರು ಬೆಳಗಾವಿಯಲ್ಲಿ ವಿಧಾನಮಂಡಲದ ಅಽವೇಶನವನ್ನು ಮಾಡಿದರೆ ಇವರಿಗೆ ಎಲ್ಲಿಲ್ಲದ ಕೋಪ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರದವರು. ತಮ್ಮ ನಗರದ ಮತ್ತು ಪ್ರಾಂತ್ಯದ ಜನರಿಗೆ ನ್ಯಾಯವಾಗಿ ಸಲ್ಲಬೇಕಾಗಿರುವ ಅಭಿವೃದ್ಧಿಯೆಡೆಗೆ ಗಮನಕೊಟ್ಟು, ಪ್ರತ್ಯೇಕ ವಿದರ್ಭ ರಾಜ್ಯದ ಕೂಗನ್ನಡಗಿಸುವಂಥ ಅಭಿವೃದ್ಧಿಯನ್ನು ಆ ಭಾಗಕ್ಕೆ ಅವರು ಒದಗಿಸಬೇಕು.

ತಮ್ಮ ರಾಜ್ಯದ ಮತ್ತು ಭಾಗದ ಜನರಿಗೆ ಸಲ್ಲಬೇಕಾದ್ದುದ್ದನ್ನು ಸಲ್ಲಿಸುವ ಸಲುವಾಗಿ ತಮ್ಮ ಬುದ್ಧಿವಂತಿಕೆ ಮತ್ತು ರಾಜಕೀಯ ಮುತ್ಸದ್ದಿತನವನ್ನು ದೇವೇಂದ್ರ -ಡ್‌ನವಿಸ್‌ರವರು ಬಳಸಿಕೊಳ್ಳಬೇಕು ಮತ್ತು ನೆರೆಯ ರಾಜ್ಯಗಳಲ್ಲಿರುವ ಶಾಂತಿ ಸುವ್ಯವಸ್ಥೆ ಯನ್ನು ಕದಡುವಂಥ ಕೆಲಸಗಳಿಗೆ ಕೈಹಾಕಬಾರದೆಂಬ ಜಾಣ್ಮೆ ಮೆರೆಯಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಭಿವೃದ್ಧಿ ಕಾಣದೆ ಬಿದ್ದಿರುವ ಪ್ರದೇಶಗಳಿವೆ ಎಂಬುದನ್ನು ಈ ಎರಡೂ ರಾಜ್ಯಗಳ ರಾಜಕಾರಣಿಗಳು ಅರ್ಥಮಾಡಿಕೊಂಡು, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಅಭಿವೃದ್ಧಿಯೆಡೆಗೆ ಗಮನ ಹರಿಸಬೇಕು.

ಹೀಗೆ ನಡೆದಾಗ, ಒಂದು ಪ್ರದೇಶವು ಯಾವ ರಾಜ್ಯದ ಭಾಗವಾಗಿರಾಬೇಕೆಂಬುದು ಗಣ್ಯ ವಾಗಿರದೆ, ಆ ಪ್ರದೇಶದ ಜನರ ಮಾತೃಭಾಷೆ ಯಾವುದೇ ಆಗಿದ್ದರೂ ಇತರ ಭಾಷಿಗರೊಂದಿಗೆ ಅವರು ಶಾಂತಿ ಮತ್ತು ನೆಮ್ಮದಿಯಿಂದ ಸಹಬಾಳ್ವೆ ಮಾಡುತ್ತಾರೆ. ಭಾರತವು ಒಂದು ಒಕ್ಕೂಟ ರಾಷ್ಟ್ರ. ಆದರೆ, ಸಾವಿರಾರು ವರ್ಷಗಳಿಂದ ಒಂದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತಮ್ಮ ಆಚಾರ ವಿಚಾರ ಮತ್ತು ಹಬ್ಬಹರಿದಿನಗಳ ಆಚರಣೆಯ ವಿಧಾನಗಳಲ್ಲಿ ಬಹುಪಾಲು ಸಾಮ್ಯವಿರುವ ಜನರ ಸೈದ್ಧಾಂತಿಕ ಏಕತೆಯ ಬುನಾದಿಯ ಮೇಲೆ ಸದೃಢ ರಾಷ್ಟ್ರವನ್ನು ಕಟ್ಟುವ ಒಗ್ಗಟ್ಟಿನ ಗುರಿಯನ್ನವಲಂಬಿಸಿ, ರಾಜಕೀಯ ನಾಯಕರು ಆದರ್ಶಪ್ರಾಯ ರಾಗಿ ರೂಪುಗೊಳ್ಳಬೇಕು.

ಇಂಥ ಹತ್ತು ಹಲವು ನಾಯಕರ ಒಗ್ಗಟ್ಟಾದ ಕೂಟ ಏರ್ಪಟ್ಟಾಗ ಮಾತ್ರ ಹೊರ ದೇಶಗಳಿಂದ ರ-ಗುತ್ತಿರುವ ಭಯೋತ್ಪಾದನೆಯ
ಭೂತವನ್ನು ಸೆಣಸಿ, ಸೋಲಿಸಿ ಅದರ ಸೊಲ್ಲಡಗಿಸಿ ಒಂದು ಸದೃಢ ಹಾಗೂ ಸಮರ್ಥ ರಾಷ್ಟವನ್ನು ಕಟ್ಟಲು ಸಾಧ್ಯವಾಗುತ್ತದೆ.

Read E-Paper click here