Sunday, 24th November 2024

ಸೌದಿಯಲ್ಲಿ ಮಲೆನಾಡ ಆತಿಥ್ಯ, ಮಾತಿಗೆ ಬಡತನವಿಲ್ಲ, ತೈಲಕ್ಕಿಂತ ಧಾರಾಳ

ಇದೇ ಅಂತರಂಗ ಸುದ್ದಿ

vbhat@me.com

ಯಾವ ದೇಶವೂ ಹತ್ತು ದಿನಗಳಲ್ಲಿ ತನ್ನ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ. ಅಷ್ಟು ದಿನಗಳಲ್ಲಿ ಅಲ್ಲಿನ ಮಣ್ಣಿನ ಗುಣವನ್ನು ಗ್ರಹಿಸು ವುದೂ ಕಷ್ಟವೇ. ಆದರೆ ಹತ್ತು ದಿನಗಳಲ್ಲಿ ಸೌದಿಯ ಹತ್ತಾರು ಪ್ರಮುಖ ನಗರ, ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ಸುತ್ತು
ಹಾಕಿದಾಗ, ಆರು ಸಾವಿರ ಕಿಮಿ ದೂರ ಕ್ರಮಿಸಿದಾಗ, ನೂರಾರು ಮಂದಿ ಜತೆ ಒಡನಾಡಿದಾಗ, ಮನಸ್ಸಿನೊಳಗೊಂದು ಇಂಪ್ರೆಷನ್ ಮೂಡುತ್ತದಲ್ಲ. ಅದನ್ನೇ ಆಧಾರವಾಗಿಟ್ಟು ಕೊಂಡು, ಒಂದು ದೇಶವನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.

ಸೌದಿ ಅರೇಬಿಯಾ ಪ್ರಯಾಣ ಮುಗಿಸಿ, ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಗಮನದ ಬಾಗಿಲ ಬಳಿ ನಿಂತಾಗ ಸ್ನೇಹಿತರಾದ ಕಿರಣ್ ಉಪಾಧ್ಯಾಯ, ‘ನೀವು ಸೌದಿಗೆ ಬಂದು ವಾಪಸ್ ಹೋಗುತ್ತಿದ್ದೀರಿ ಅಂದ್ರೆ ನಂಬಲಾಗುತ್ತಿಲ್ಲ. ಸೌದಿಗೆ ಬರಬೇಕೆಂಬ ನಿಮ್ಮ ಬಹು ವರ್ಷಗಳ ಕನಸು ನನಸಾಗಿರಬಹುದು, ಆದರೆ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿರುವ ನನಗೆ, ನೀವು ಬಂದಿದ್ದು, ಇಲ್ಲಿ ಸುತ್ತಿದ್ದು ಇಂದಿಗೂ ವಿಸ್ಮಯವೇ’ ಎಂದರು.

ಕಿರಣ್ ಮಾತಿಗೆ ಹಿನ್ನೆಲೆಯಿತ್ತು. ನಾನು ಸೌದಿ ಅರೇಬಿಯಾಕ್ಕೆ ಹೋಗಬೇಕು ಎಂದೆನಿಸಿದಾಗಲೆಲ್ಲ, ವೀಸಾಕ್ಕಾಗಿ ಕಿರಣ್ ಬಹಳ ಪ್ರಯತ್ನಿಸಿದ್ದರು. ಆದರೆ ಸಿಕ್ಕಿರಲಿಲ್ಲ. ಒಮ್ಮೆ ನಾವು ನಾಲ್ವರು ಸೌದಿ ಮೂಲಕ ಜೋರ್ಡನ್, ಇಸ್ರೇಲ್ ತನಕ ರೋಡ್ ಟ್ರಿಪ್ ಮಾಡಬೇಕೆಂದು ನಿರ್ಧರಿಸಿ, ಸೌದಿ ವೀಸಾ ಪಡೆಯಲು ಶತಪ್ರಯತ್ನ ಮಾಡಿದ್ದೆವು. ಕೊನೆಗೂ ಅದನ್ನು ಗಿಟ್ಟಿಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಈ ಸಲ ನಾನು ತೀರಾ ನಿರಾಯಾಸವಾಗಿ ವೀಸಾ ಗಿಟ್ಟಿಸಿಕೊಂಡು ಬಂದು, ಹತ್ತು ದಿನ ಇಡೀ ದೇಶದಲ್ಲಿ ಒಂದು ಸುತ್ತು ಹೊಡೆದಿದ್ದು ಕಿರಣ್‌ಗೆ ಮಾತ್ರವಲ್ಲ, ನನಗೂ ನಂಬಲು ಅಸಾಧ್ಯವಾಗಿತ್ತು. ಸಾಮಾನ್ಯವಾಗಿ ಸೌದಿ ಅರೇಬಿಯಾ ನೋಡ ಲೆಂದು ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ತೀರಾ ಕಮ್ಮಿ. ಹಾಗೆ ಬರುವವರ ಸಂಖ್ಯೆ ಪ್ರತಿದಿನ ೨೫೦ ಕ್ಕಿಂತ ಕಮ್ಮಿ ಅಂದರೆ ಆಶ್ಚರ್ಯವಾಗುತ್ತದೆ.

ಇದರಲ್ಲಿ ಪ್ರತಿ ವರ್ಷ ಹಜ್ ಯಾತ್ರೆ ಸಂದರ್ಭದಲ್ಲಿ ಮೆಕ್ಕಾ ಮತ್ತು ಮದೀನಕ್ಕೆ ಬರುವವರ ಸಂಖ್ಯೆ ಸೇರಿಲ್ಲ. ಅಂದರೆ ಒಂದು
ವರ್ಷದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ವಿದೇಶಿ ಪ್ರವಾಸಿಗರು ಸೌದಿಗೆ ಬರುತ್ತಾರೆ. ಸಾಮಾನ್ಯವಾಗಿ ಸೌದಿಗೆ ಬರುವವರು ಉದ್ಯೋಗ ಅರಸಿಕೊಂಡು ಬರುವವರು. ಅಂಥವರು ಸೌದಿ ಜನಸಂಖ್ಯೆಯ ಮೂರರಲ್ಲಿ ಒಂದರಷ್ಟು ಇದ್ದಾರೆ. ಅಂದರೆ ಸೌದಿಯ ಜನಸಂಖ್ಯೆ ೩.೫೩ ಕೋಟಿಯಲ್ಲಿ, ೧.೧೩ ಕೋಟಿ ಏಷ್ಯಾ ಮತ್ತು ಯುರೋಪಿನಿಂದ ಬಂದ ವಲಸಿಗರು. ಇವರಲ್ಲಿ ಶೇ.೮೫ ರಷ್ಟು ಮಂದಿ ಕೂಲಿಕಾರ್ಮಿಕರು. ಆ ದೇಶದಲ್ಲಿ ನಿರಾಶ್ರಿತರು ಇಲ್ಲವೇ ಇಲ್ಲ. ಯಾವ ಕಾರಣಕ್ಕೂ ಸೌದಿ, ನಿರಾಶ್ರಿತ ರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ.

ಸೌದಿ ಪ್ರಜೆ ಸೌದಿಯೇತರ ಮಹಿಳೆಯನ್ನು ವಿವಾಹವಾಗಲು ಕಾನೂನಿನ ಹಲವು ಅಡ್ಡಿಗಳು. ಇರಲಿ. ಸೌದಿ ಅರೇಬಿಯಾ ಅಂದ ತಕ್ಷಣ ಬಹುತೇಕರಿಗೆ ನೆನಪಿಗೆ ಬರುವುದು ಮರುಭೂಮಿ ಮತ್ತು ತೈಲ ಬಾವಿಗಳ ಆಗರ. ಇವೆರಡನ್ನೂ ಬಿಟ್ಟು ಅಲ್ಲಿ ನೋಡಲು ಏನಿದೆ ಎಂದು ಅನೇಕರು ಭಾವಿಸಿದ್ದಾರೆ. ನನ್ನ ಭಾವನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಈ ಜಗತ್ತು ವಿಸ್ಮಯ ಪಡುವ ಪ್ರಾಕೃತಿಕ ಸೌಂದರ್ಯವನ್ನು ಸೌದಿ ಹೊಂದಿದೆ. ಯುನೆಸ್ಕೊ ಘೋಷಿತ ವಿಶ್ವ ಪಾರಂಪರಿಕ ತಾಣಗಳಿವೆ. ನಮ್ಮ ಹಂಪಿಯನ್ನು ನೆನಪಿಸುವ ಐತಿಹಾಸಿಕ ತಾಣಗಳಿವೆ.

ನದಿಯಿಲ್ಲದಿದ್ದರೇನು, ಜಲಪಾತಗಳಿಲ್ಲದಿದ್ದರೇನು, ಹಸಿರು ಇಲ್ಲದಿದ್ದರೇನು, ಬೋಳು ಮರುಭೂಮಿಯಾದರೇನು, ನಿಸರ್ಗ ಅಲ್ಲಿಯೂ ಮಾಡಿರುವ ಕರಾಮತ್ತು ನಿಬ್ಬೆರಗಾಗಿಸುವಂಥದ್ದು. ಭೀತಿ ಹುಟ್ಟಿಸುವ ಮರುಭೂಮಿ ದಿನ ಕಳೆದಂತೆ ಆಪ್ತವಾಗು ವುದು, ತನ್ನೊಳಗೆ ಬಿಟ್ಟುಕೊಳ್ಳುವುದು, ಮರಳು ಸಹ ಕೊನೆಕೊನೆಗೆ ಮರುಳು ಮಾಡುವುದು ಸೌದಿಯ ವೈಶಿಷ್ಟ್ಯಗಳಂದು. ತನ್ನೊಡಲಲ್ಲಿ ನೈಸರ್ಗಿಕ ಅಚ್ಚರಿಗಳನ್ನು ಇಟ್ಟುಕೊಂಡು, ಅದನ್ನು ಬೇರೆ ಯಾರಿಗೂ ತೋರಿಸದೇ, ತನ್ನಷ್ಟಕೆ ತಾನೇ ಖುಷಿಪಡುತ್ತಿದ್ದ ಸೌದಿ ಅರೇಬಿಯಾಕ್ಕೆ ಇಷ್ಟು ವರ್ಷಗಳವರೆಗೆ ಪ್ರವಾಸೋದ್ಯಮ ಅಂದ್ರೆ ಅಪಥ್ಯವಾಗಿತ್ತು.

ಪ್ರವಾಸೋದ್ಯಮವನ್ನು ದೇಶದ ಆರ್ಥಿಕತೆ ವಾಹಕವಾಗಿ ಬಳಸಿಕೊಳ್ಳಬಹುದು ಎಂಬುದು ಸಹ ಗೊತ್ತಿರಲಿಲ್ಲ. ಒಂದು
ವೇಳೆ ಗೊತ್ತಿದ್ದರೂ ಆ ಬಾಬಿನ ವರಮಾನ ಜುಜುಬಿ ಎಂದೆನಿಸಿರಬೇಕು. ಹೀಗಾಗಿ ಪ್ರವಾಸಿಗಳ ಪಾಲಿಗೆ ಆ ದೇಶ ಮುಚ್ಚಿದ ಬಾಗಿಲು. ಆದರೆ ಧಾರ್ಮಿಕ ಪ್ರವಾಸೋದ್ಯಮ ಸೌದಿಯ ಪ್ರಮುಖ ಆಕರ್ಷಣೆ. ಮುಸಲ್ಮಾನರ ಪರಮಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನ ಇರುವುದು ಇಲ್ಲೇ.

ಪ್ರತಿ ವರ್ಷ ಏನಿಲ್ಲವೆಂದರೂ ಒಂದೂವರೆ ಕೋಟಿ ಮಂದಿ ಈ ಎರಡು ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಈ ಲೆಕ್ಕಾಚಾರದ ಪ್ರಕಾರ, ಜಗತ್ತಿನಲ್ಲಿ ಸೌದಿ ಅತಿ ಹೆಚ್ಚು ವಿದೇಶಿಯರು ಆಗಮಿಸುವ ಹತ್ತೊಂಬತ್ತನೆಯ ದೇಶವಾಗಿದೆ. ೨೦೧೯ ರಲ್ಲಿ ಸೌದಿ ಆಡಳಿತ, ವೀಸಾ ನಿಯಮಗಳಿಗೆ ಮಹತ್ವದ ಬದಲಾವಣೆ ತಂದಿತು. ಆದರೆ ಕೋವಿಡ್ ಕಾರಣದಿಂದ ಆ ನಿರ್ಧಾರ ಜಾರಿಗೆ ಬಂದಿರಲಿಲ್ಲ. ಕಳೆದ ಒಂದೂವರೆ ವರ್ಷಗಳ ಹಿಂದೆ, ವಿದೇಶಿ ಪ್ರವಾಸಿಗರಿಗೆ ತಮ್ಮ ದೇಶವನ್ನು ಮುಕ್ತಗೊಳಿಸಿರುವುದಾಗಿ ಸೌದಿ ಘೋಷಿಸಿತು.

ಈ ನಿರ್ಧಾರದ ಪ್ರಕಾರ, ಐವತ್ತು ಆಯ್ದ ದೇಶಗಳ ಪ್ರಜೆಗಳು ಪ್ರವಾಸಿಗರಾಗಿ ಬಂದು ಹೋಗಬಹುದು. ಅಮೆರಿಕ, ಯುಕೆ
ಮತ್ತು ಶೆಂಜನ್ ವೀಸಾ ಹೊಂದಿರುವವರಿಗೆ ವೀಸಾ ಬೇಕಿಲ್ಲ. ಸೌದಿಯಲ್ಲಿರುವ ಎಲ್ಲ ನಾಗರಿಕರು ಮತ್ತು ಅಲ್ಲಿ ವಾಸಿಸುವವ ರೆಲ್ಲರೂ ಮುಸ್ಲಿಮರೇ. ಆ ಪೈಕಿ ೮೫ ರಿಂದ ೯೦ ರಷ್ಟು ಸುನ್ನಿ ಮುಸ್ಲಿಮರು. ಉಳಿದವರು ಶಿಯಾ ಮುಸ್ಲಿಮರು. ಸುನ್ನಿ
ಮುಸ್ಲಿಮರಲ್ಲಿ ಪ್ರಬಲ ವರ್ಗ ವಹಾಬಿಗಳು. ಇದಲ್ಲದೆ ಸುಮಾರು ಹತ್ತು ಲಕ್ಷ ಕ್ರಿಶ್ಚಿಯನ್ನರೂ ಇದ್ದಾರೆ.

ಇವರಾರೂ ಸೌದಿ ಪ್ರಜೆಗಳಲ್ಲ. ಸೌದಿಯಲ್ಲಿ ಧಾರ್ಮಿಕ ಮತಾಂತರಕ್ಕೆ ಅವಕಾಶವೇ ಇಲ್ಲ. (ಆ ರೀತಿಯ ದುಸ್ಸಾಹಸ ಮಾಡಿದರೆ ಮರಣ ಶಾಸನ ವಿಧಿಸಲಾಗುತ್ತದೆ). ಆ ದೇಶದಲ್ಲಿ ಸುಮಾರು ನಾಲ್ಕು ಲಕ್ಷ ಹಿಂದುಗಳೂ ಇದ್ದಾರೆ. ಅವರೆಲ್ಲರೂ
ಉದ್ಯೋಗದಲ್ಲಿರುವರು. ಯಾವ ದೇಶವೂ ಹತ್ತು ದಿನಗಳಲ್ಲಿ ತನ್ನ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ. ಅಷ್ಟು ದಿನಗಳಲ್ಲಿ ಅಲ್ಲಿನ ಮಣ್ಣಿನ ಗುಣವನ್ನು ಗ್ರಹಿಸುವುದೂ ಕಷ್ಟವೇ. ಆದರೆ ಹತ್ತು ದಿನಗಳಲ್ಲಿ ಸೌದಿಯ ಹತ್ತಾರು ಪ್ರಮುಖ ನಗರ, ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ಸುತ್ತು ಹಾಕಿದಾಗ, ಆರು ಸಾವಿರ ಕಿಮಿ ದೂರ ಕ್ರಮಿಸಿದಾಗ, ನೂರಾರು ಮಂದಿ ಜತೆ ಒಡನಾಡಿದಾಗ, ಮನಸ್ಸಿನೊಳಗೊಂದು ಇಂಪ್ರೆಷನ್ ಮೂಡುತ್ತದಲ್ಲ.

ಅದನ್ನೇ ಆಧಾರವಾಗಿಟ್ಟುಕೊಂಡು, ಒಂದು ದೇಶವನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹೇಳುವುದಾದರೆ, ನಾನು ಅಂದುಕೊಂಡಿದ್ದಕ್ಕಿಂತ ಸೌದಿ ಭಿನ್ನವಾಗಿದೆ, ಆಪ್ತವಾಗಿದೆ. ಅಲ್ಲಿನ ಜನರ ಆತಿಥ್ಯ ಅನೂಹ್ಯವಾದುದು. ಗೊತ್ತು-ಪರಿಚಯ ಇಲ್ಲದವರನ್ನೂ ಆದರಿಸುವ ಮಲೆನಾಡು, ಉತ್ತರ ಕರ್ನಾಟಕದಂಥ ಆತಿಥ್ಯ. ಮಾತಿಗೆ, ಆಪ್ತತೆಗೆ ಬಡತನವಿಲ್ಲ. ಅಲ್ಲಿನ ತೈಲಕ್ಕಿಂತ ಧಾರಾಳ.

ಭಾಷೆ ಸಮಸ್ಯೆ ಇಲ್ಲ
ಹತ್ತು ದಿನಗಳ ಅವಽಯಲ್ಲಿ ನನಗೆ ಭಾಷೆ ಒಂದು ಸಮಸ್ಯೆ ಆಗಲಿಲ್ಲ. ಅದಕ್ಕಿ ಮುಖ್ಯ ಕಾರಣ ಕಿರಣ್. ಕಳೆದ ೨೮ ವರ್ಷಗಳಿಂದ ಬಹರೈನ್ ಮತ್ತು ಸೌದಿಯಲ್ಲಿ ವಾಸಿಸುತ್ತಿರುವ ಅವರು ಅರೇಬಿಕ್ ಭಾಷೆಯನ್ನು ಅಸ್ಖಲಿತವಾಗಿ ಮಾತಾಡಬಲ್ಲರು. ಹೀಗಾಗಿ ನನಗೆ ಬಾಯಿ ತೆರೆಯುವ ಅವಕಾಶ ಸಿಕ್ಕಿದ್ದು ಊಟ-ಉಪಾಹಾರ ಮಾಡುವಾಗ ಮಾತ್ರ. ಅವರು ನನ್ನ ಪರವಾಗಿ ಮಾತಾಡು ತ್ತಿದ್ದುದರಿಂದ ನನಗೆ ಮಾತಾಡುವ ಅವಕಾಶವೇ ಸಿಗಲಿಲ್ಲ. ಹೋಟೆಲ, ಪೆಟ್ರೋಲ್ ಬಂಕ್, ಕಿರಾಣಿ ಅಂಗಡಿ, ಡಿಪಾರ್ಟ ಮೆಂಟ್ ಸ್ಟೋರ್ಸ್ ಸೇರಿದಂತೆ, ಎಲ್ಲಿಯೇ ಹೋದರೂ, ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾದವರು ಒಬ್ಬರಾದರೂ ಇರುತ್ತಿದ್ದರು. ಅವರ ಜತೆ ಹಿಂದಿಯಲ್ಲಿ ಮಾತಾಡಬಹುದಿತ್ತು.

ಅಪ್ಪಟ ಸೌದಿ ಮಂದಿ ಜತೆ ಅರೇಬಿಕ್ ಅನಿವಾರ್ಯ. ಅವರಲ್ಲಿ ಅನೇಕರು ಇಂಗ್ಲಿಷನ್ನು ಅರ್ಥ ಮಾಡಿಕೊಳ್ಳಬಲ್ಲರು. ಅರೇಬಿಕ್ ಗೊತ್ತಿದ್ದರೆ ವ್ಯವಹಾರ ಸಲೀಸು. ಸೌದಿಗಳು ಮಾತಾಡುವ ಅರೇಬಿಕ್ ಭಾಷೆ ಒಂದೇ ರೀತಿಯಲ್ಲ. ಒಂದೊಂದು ಪ್ರಾಂತದಲ್ಲಿ ಒಂದೊಂದು ಅರೇಬಿಕ್ ಮಾತಾಡುತ್ತಾರೆ. ನಮ್ಮ ಕನ್ನಡದಂತೆ. ನಜ್ಡಿ ಅರೇಬಿಕ್, ಹೆಜಾಝಿ ಅರೇಬಿಕ್, ಗಲ್ ಅರೇಬಿಕ್, ಫೈಫಿ ಅರೇಬಿಕ್ ಎಂದು ಬೇರೆ ಬೇರೆ ಅರೇಬಿಕ್ ಮಾತಾಡುತ್ತಾರೆ.

ದಕ್ಷಿಣ ಭಾಗದ ಅರೇಬಿಕ್‌ಗೂ, ಉತ್ತರ ಭಾಗದ ಅರೇಬಿಕ್‌ಗೂ ಉಚ್ಚಾರದಲ್ಲಿ ಸಾಕಷ್ಟು ವ್ಯತ್ಯಾಸ. ಸೌದಿಯ ಉತ್ತರ ಭಾಗದಲ್ಲಿ ಹೆಚ್ಚಾಗಿ ಮಾತಾಡುವ ಹೆಜಾಝಿ ಅರೇಬಿಕ್‌ನಲ್ಲಿ ಟರ್ಕಿ ಮತ್ತು ಈಜಿಪ್ಟ್ ನ ಅರೇಬಿಕ್ ಭಾಷೆಯ ಪ್ರಭಾವವಿದೆ.

ಫೈಫಿ ಅರೇಬಿಕ್‌ನ್ನು ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಮಾತಾಡುತ್ತಾರೆ. ಸೌದಿಯ ಕೆಲವು ಭಾಗಗಲ್ಲಿ ಮೆಹ್ರಿ
ಭಾಷೆಯೂ ಚಾಲ್ತಿಯಲ್ಲಿದೆ. ಪಾಕಿಸ್ತಾನದಿಂದ ಬಂದ ಅನೇಕರು ಉರ್ದು ಮತ್ತು ಪಂಜಾಬಿ ಭಾಷೆಗಳನ್ನೂ ಮಾತಾಡುತ್ತಾರೆ.
ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಲಯಾಳಂ ಕೂಡ ಕಿವಿಯ
ಮೇಲೆ ಬೀಳುತ್ತಿರುತ್ತದೆ.

ಸೌದಿ ಮತ್ತು ತೈಲ
ಪ್ರತಿದಿನ ನಾವು ಏನಿಲ್ಲವೆಂದರೂ ೬೦೦-೭೦೦ ಕಿಮಿ ಪ್ರವಾಸ ಮಾಡುತ್ತಿzವು. ದಿನಕ್ಕೆ ಎರಡು ಸಲ ಕಾರಿನ ಟ್ಯಾಂಕ್
ತುಂಬಿಸುತ್ತಿzವು. ಸೌದಿ ಅರೇಬಿಯಾ ಜಗತ್ತಿನಲ್ಲಿಯೇ ತೈಲ ಸಂಪದ್ಭರಿತವಾದ ದೇಶ. ಜಗತ್ತಿನ ತೈಲ ಬಾವಿಗಳ ಪೈಕಿ, ಶೇ.
ಇಪ್ಪತ್ತರಷ್ಟು ಸೌದಿಯಂದೇ ಇದೆ. ಇನ್ನು ಇನ್ನೂರು ವರ್ಷಗಳಿಗೆ ಸಾಕಾಗುವಷ್ಟು ತೈಲ ಸೌದಿಯಲ್ಲಿ ಇದೆಯಂತೆ.

ಒಲಂಪಿಕ್ ಕ್ರೀಡಾಕೂಟದಲ್ಲಿನ ಸ್ವಿಮಿಂಗ್ ಪೂಲ್ ಎಷ್ಟು ದೊಡ್ಡದಿರಬಹುದು ಎಂಬುದನ್ನು ಊಹಿಸಿಕೊಳ್ಳಿ, ಅಂಥ ಐವತ್ತು ಲಕ್ಷ ಸ್ವಿಮಿಂಗ್ ಪೂಲ್‌ನಲ್ಲಿ ಹಿಡಿಯುವಷ್ಟು ತೈಲ ಶಿಲ್ಕು ಸೌದಿಯಲ್ಲಿ ಇದೆಯಂತೆ. ಆದರೆ ಸೌದಿಗಳನ್ನು ಕೇಳಿದರೆ, ‘we’ll
never run out of oil’  ಎಂದು ಹೇಳುತ್ತಾರೆ. ಸೌದಿಯಲ್ಲಿರುವ ಮರುಳು ಖಾಲಿಯಾಗಬಹುದು, ಆದರೆ ತೈಲ ಮಾತ್ರ ಯಾವತ್ತೂ ಖಾಲಿಯಾಗುವುದಿಲ್ಲ ಎಂದು ಆ ಜನ ನಂಬಿದ್ದಾರೆ. ಸೌದಿ ಆರ್ಥಿಕ ಶಕ್ತಿಯಿರುವುದು ತೈಲ ನಿಕ್ಷೇಪದಿಂದ. ಇಂದು ಸೌದಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವವನ್ನು ಬೆಳೆಸಿಕೊಂಡಿದ್ದರೆ ಅದಕ್ಕೆ ತೈಲ ಮತ್ತು ಅನಿಲವೇ ಕಾರಣ.

ಹೀಗಾಗಿ ಸೌದಿ ಮಾತಾಡಿದರೆ, ಇಡೀ ಜಗತ್ತು ಕೇಳಿಸಿಕೊಳ್ಳುತ್ತದೆ ಮತ್ತು ಮಾತಿಗೆ ಕಿಮ್ಮತ್ತು ಕೊಡುತ್ತದೆ. ಸೌದಿಯಲ್ಲಿ ಪ್ರಯಾಣಿಸುವಾಗ ಗೊತ್ತಾದ ಒಂದು ಸ್ವಾರಸ್ಯಕರ ಸಂಗತಿ ಅಂದ್ರೆ, ಅಲ್ಲಿ ಒಂದು ಲೀಟರ್ ಪೆಟ್ರೋಲಿಗಿಂತ ಒಂದು ಲೀಟರ್ ನೀರು ಹೆಚ್ಚು ದುಬಾರಿ.! ಸೌದಿ ಅರೇಬಿಯಾ ಜಗತ್ತಿನ ಹದಿಮೂರನೇ ಅತಿ ದೊಡ್ಡ ದೇಶ ಮತ್ತು ಅರಬ್ ರಾಷ್ಟ್ರಗಳ ಪೈಕಿ ಎರಡನೇ (ಮೊದಲನೆಯದು ಆಲ್ಜೀರಿಯಾ) ದೊಡ್ಡ ದೇಶ. ಅಲ್ಲಿನ ರಸ್ತೆಯಲ್ಲಿ ಪಯಣಿಸುವಾಗ ಈ ಸಂಗತಿ ಕ್ಷಣಕ್ಷಣವೂ ಅನುಭವಕ್ಕೆ ಬರುತ್ತದೆ. ಸೌದಿಯಲ್ಲಿನ ಶೇ.ತೊಂಬತ್ತರಷ್ಟು ಭೂಪ್ರದೇಶ ಮರುಭೂಮಿ.

ಕೇವಲ ಶೇ.ಒಂದರಷ್ಟು ಭೂಭಾಗ ಮಾತ್ರ ಕೃಷಿಗೆ ಯೋಗ್ಯ. ಇಷ್ಟೊಂದು ವಿಶಾಲ ದೇಶದಲ್ಲಿ ಒಂದೇ ಒಂದು ನದಿ ಇಲ್ಲ, ತೊರೆಯಿಲ್ಲ, ಝರಿ ಇಲ್ಲ, ಜಲಪಾತ ಇಲ್ಲ. ನದಿಯಿಲ್ಲದ ವಿಶ್ವದ ದೊಡ್ಡ ದೇಶವಾಗಿರುವ ಸೌದಿ, ಕುಡಿಯುವ ನೀರಿಗಾಗಿ ಸಮುದ್ರದ ನೀರನ್ನೇ (desalinated water)ನೆಚ್ಚಿಕೊಂಡಿದೆ.

ಮರುಭೂಮಿ ಪಯಣ
ಮರುಭೂಮಿಯಲ್ಲಿ ಪ್ರವಾಸ ಮಾಡುವಾಗ ಕಿರಣ್ ಹೇಳಿದ ಒಂದು ಮಾತು ನನ್ನನ್ನು ಸೆಳೆಯಿತು. ಮರುಭೂಮಿಯಲ್ಲಿ ಬೇಸಿಗೆ ಯಲ್ಲಿ ಐವತ್ತು ಡಿಗ್ರಿ ತಾಪಮಾನ ತಲುಪುವ ಘನ ಘೋರ ಉಷ್ಣ, ಮೇಲಿನಿಂದ ಸುರಿಯುವ ಬೆಂಕಿ ಕೆಂಡ, ಕೆಳಗಿನಿಂದ ಮರಳಲ್ಲಿ ಬೆಂದು ಹೋಗುವ ಧಗೆ. ಚಳಿಗಾಲದಲ್ಲಿ, ನೇರ ಮೂಳೆ ಮಜ್ಜೆಗೆ ದಬ್ಬಣ ಚುಚ್ಚಿದಂತೆ ಭಾಸವಾಗುವ ಚಳಿ, ಆಗಾಗ ರಭಸವಾಗಿ ಬೀಸುವ, ನೂರಾರು ಕಿಲೋಮೀಟರ್ ದೂರದಿಂದ ಮರಳನ್ನು ಹೊತ್ತು ತರುವ ಬಿರುಗಾಳಿ. ಅದಕ್ಕೇನಾದರೂ ಸಿಕ್ಕಿಕೊಂಡರೆ, ಗಾಳಿಗೆ ತೆರೆದುಕೊಂಡ ದೇಹದ ಭಾಗಕ್ಕೆಲ್ಲ ನೂರಾರು ಸೂಜಿ ಚುಚ್ಚಿದ ಅನುಭವ. ಆ ಬಿರುಗಾಳಿಗೆ ದೊಡ್ಡ ದೊಡ್ಡ ಮರಳ ಗುಡ್ಡವೇ ಒಕ್ಕಲೆದ್ದು ಹೋಗುತ್ತವೆ.

ಮರುಭೂಮಿಯಲ್ಲಿ ನಿನ್ನೆ ಕಂಡ ರೇತಿಯ ದಿಬ್ಬ ಇಂದು ಕಾಣುವುದಿಲ್ಲ, ಇಂದಿದ್ದ ಮರಳು ರಾಶಿ ನಾಳೆ ಇರುವುದಿಲ್ಲ. ನಾಳೆ ಇರಬೇಕಾದ ಉಸುಕಿನ ದಿಣ್ಣೆ ನಾಡಿದ್ದು ಇನ್ನೆ. ಸೌದಿ ಅರೇಬಿಯಾದಂಥ ದೇಶದಲ್ಲಿ ಮರಳು ದೊಡ್ಡ ಸಂಚಾರಿ. ಅದು ಸಂಚರಿಸಿದಷ್ಟು ದೂರ ಯಾರೂ ಸಂಚರಿಸುವುದಿಲ್ಲ. ದೇಶ ಸುತ್ತುವ ಕಾರ್ಯದಲ್ಲಿ ಗಾಳಿಯ ನಂತರದ ಸ್ಥಾನವೇನಾದರೂ
ಇದ್ದರೆ ಅದು ಮರಳಿಗೇ ಮೀಸಲು. ಸೌದಿ ಅರೇಬಿಯಾದ ಬಹುಭಾಗ ಮರಳುಗಾಡು. ಈ ಮರಳುಗಾಡು ನಾಳೆಯ ಹೊತ್ತಿಗೆ ಎಲ್ಲಾ ಅಂಗಳವಾಗಿ ಬಿದ್ದಿರುತ್ತದೆ.

ರಸ್ತೆಯ ಪಕ್ಕದಲ್ಲಿರುವ ಮರಳು ರಾಶಿ ಬೆಳಗಾಗುವ ಹೊತ್ತಿಗೆ ರಸ್ತೆಯನ್ನೇ ನುಂಗಿ ಕುಳಿತಿರುತ್ತದೆ. ಕೆಲ ಸಮಯದ ನಂತರ ಅಲ್ಲಿಂದಲೂ ಕಾಲ್ಕಿತ್ತಿರುತ್ತದೆ. ಸಣ್ಣ ಸಣ್ಣ ಹಳ್ಳಿಗಳನ್ನು ಜೋಡಿಸುವ ಪುಟ್ಟ ಪುಟ್ಟ ರಸ್ತೆಗಳು ಮರಳು ರಾಶಿಯ ಮಧ್ಯದಿಂದಲೇ ಹಾದು ಹೋಗುತ್ತವೆ.

ಬೃಹತ್ ಗಾತ್ರದ ರಾಷ್ಟ್ರೀಯ ಹೆದ್ದಾರಿಗಳೂ ಇದೇ ಮರಳು ದಿಬ್ಬವನ್ನು ಸೀದುಕೊಂಡೇ ಹೋಗುತ್ತವೆ. ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಪ್ರದೇಶಗಳಲ್ಲಿ ದಾರಿಯುದ್ದಕ್ಕೂ ಪ್ರಯಾಣಿಕನ ಜೊತೆಗಾರ ಇದೇ ಮರಳುಗಾಡು. ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಕಾಣಸಿಗುವ ಒಂಟೆಯ ಹಿಂಡು, ಕುರಿಗಳ ದಂಡು ಬಿಟ್ಟರೆ ಮರುಭೂಮಿಯ ಭೀಕರ ಮೌನ. ನೂರು ಕಿಲೋ ಮೀಟರ್ ದೂರ ದಲ್ಲಿ ಒಂದೊಂದು ಪೆಟ್ರೋಲ್ ಪಂಪ್. ಅ ಸಣ್ಣ ಕಿರಾಣಿ ಅಂಗಡಿ. ಮುಂದಿನ ಪ್ರಯಾಣಕ್ಕೆ ಅದೇ ಆಸರೆ. ಅಲ್ಲಿ ಬಯಕೆ ಈಡೇರಿಸಿಕೊಳ್ಳದಿದ್ದರೆ, ಅರ್ಧ ದಾರಿಯಲ್ಲಿ ಪಯಣ ಬರಖಾಸ್ತು. ಮರುಭೂಮಿ ಪಯಾಣ ರೋಚಕ, ಭಯಾನಕ. ಅಷ್ಟೇ ಆಪ್ತ.