Saturday, 9th November 2024

ಭೂಪಟ ತಪ್ಪಾಗಿ ತೋರಿಸಿದ ವಾಟ್ಸ್‌ ಆಯಪ್‌: ಸಚಿವರಿಂದ ಎಚ್ಚರಿಕೆ ಬೆನ್ನಲ್ಲೇ ಕ್ಷಮೆಯಾಚನೆ

ನವದೆಹಲಿ: ಭಾರತದ ಭೂಪಟವನ್ನು ತಪ್ಪಾಗಿ ತೋರಿಸುವ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಾಟ್ಸ್‌ ಆಯಪ್‌, ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಎಚ್ಚರಿಕೆಯ ನಂತರ ಅದನ್ನು ಡಿಲಿಟ್‌ ಮಾಡಿದೆ. ತಪ್ಪಿಗೆ ಕ್ಷಮೆ ಯನ್ನೂ ಕೋರಿದೆ.

ಮೆಟಾ (ಫೇಸ್‌ಬುಕ್‌ನ ಮಾಲೀಕ ಸಂಸ್ಥೆ) ಮಾಲೀಕತ್ವದ ಮೆಸೇಜಿಂಗ್ ಆಯಪ್‌ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಡಿಯೊ ವೊಂದನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸ ಲಾಗಿತ್ತು. ಇದನ್ನು ಗಮನಿಸಿದ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಎಚ್ಚರಿಕೆ ನೀಡಿದ್ದರು.

‘ಆತ್ಮೀಯ ವಾಟ್ಸ್‌ಆಯಪ್‌, ದಯವಿಟ್ಟು ಭಾರತದ ನಕ್ಷೆಯಲ್ಲಿನ ದೋಷವನ್ನು ಬೇಗ ಸರಿಪಡಿಸಿ’ ಎಂದು ತಿಳಿಸಿದ್ದರು.

ಅಲ್ಲದೇ, ‘ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲರೂ ದೇಶಕ್ಕೆ ಸಂಬಂಧಿಸಿದ ಸರಿಯಾದ ನಕ್ಷೆಗಳನ್ನು ಬಳಸಬೇಕು’ ಎಂದು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರು.

ವಾಟ್ಸ್‌ಆಯಪ್‌ ಪ್ರತಿಕ್ರಿಯಿಸಿ, ‘ಉದ್ದೇಶಪೂರ್ವಕವಲ್ಲದ ದೋಷ ನಮ್ಮಿಂದಾಗಿದೆ. ಅದರ ಬಗ್ಗೆ ತಿಳಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು. ನಾವು ತಕ್ಷಣವೇ ವಿಡಿಯೊ ಡಿಲಿಟ್‌ ಮಾಡಿದ್ದೇವೆ. ಭವಿಷ್ಯದಲ್ಲಿ ಎಚ್ಚರವಾಗಿರು ತ್ತೇವೆ’ ಎಂದು ಟ್ವೀಟ್‌ ಮಾಡಿದೆ.

ತಪ್ಪು ನಕ್ಷೆಗೆ ಸಂಬಂಧಿಸಿದಂತೆ ಸಚಿವ ರಾಜೀವ್‌ ಚಂದ್ರಶೇಖರ್, ವಿಡಿಯೊ ಕಾಲಿಂಗ್‌ ಆಯಪ್‌ ‘ಜೂಮ್‌’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್ ಅವರಿಗೂ ಎಚ್ಚರಿಕೆ ನೀಡಿದ್ದರು.

ಟ್ವಿಟರ್‌ ಬಳಕೆದಾರರೊಬ್ಬರು, ಭಾರತ-ಭೂತಾನ್ ಬಾಂಧವ್ಯಕ್ಕೆ ಸಂಬಂಧಿಸಿದ ವಿಕಿಪೀಡಿಯಾ ಪುಟದಲ್ಲಿ ಜಮ್ಮು-ಕಾಶ್ಮೀರದ ನಕಾಶೆಯನ್ನು ತಪ್ಪಾಗಿ ತೋರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಸದ ಶಶಿ ತರೂರ್, ತಮ್ಮ ಪ್ರಣಾಳಿಕೆಯಲ್ಲಿ ಭಾರತದ ತಪ್ಪಾದ ಭೂಪಟವನ್ನು ಹಂಚಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದರು.

Read E-Paper click here