Saturday, 23rd November 2024

ತನ್ನ ಹೆಸರನ್ನೇ ದ್ವೇಷಿಸಿದ್ದ ಪೀಲೆ

ವಿದೇಶವಾಸಿ

dhyapaa@gmail.com

ಆತನಿಗೆ ಅಪ್ಪ ಇಟ್ಟ ಹೆಸರು ಎಡಿಸನ್. ಅಮೆರಿಕದ ಪ್ರಸಿದ್ಧ ಸಂಶೋಧಕ ಥೊಮಸ್ ಅಲ್ವಾ ಎಡಿಸನ್‌ರಿಂದ ಪ್ರೇರಿತರಾಗಿ ಇಟ್ಟ ಹೆಸರು ಅದು. ನಂತರ ಅವರೇ ಅದನ್ನು ಎಡ್ಸನ್ ಎಂದು ಬದಲಾಯಿಸಿದ್ದರು. ಎಲ್ಲರೂ ಆತನನ್ನು ಪ್ರೀತಿಯಿಂದ ‘ಡಿಕೊ’ ಎಂದು ಕರೆಯುತ್ತಿದ್ದರು.

ಎಲ್ಲರೂ ಹೊಸ ವರ್ಷವನ್ನು ಎದುರುಗೊಳ್ಳಲು ಕಾತರದಿಂದ ಕಾಯುತ್ತಿದ್ದ ಎರಡು ದಿನ ಮೊದಲು, ಅದ್ಯಾವ ಮೃತ ಘಳಿಗೆ ಯೋ ಏನೊ, ಭಾರತೀಯರಿ ಗಷ್ಟೇ ಅಲ್ಲ, ಇಡೀ ವಿಶ್ವವೇ ದುಃಖತಪ್ತವಾಗಿತ್ತು. ಅಂದು ಬೆಳ್ಳಂಬೆಳಿಗ್ಗೆ ಮೂರು ತಾಸಿನ ಅವಧಿಯ ಒಳ್ಗೆ ಮೂರು ಅಶುಭ ವಾರ್ತೆಗೆ ಕಿವಿ ತೆರೆದುಕೊಳ್ಳ ಬೇಕಾದ ಅನಿವಾರ್ಯತೆ. ಮೊದಲನೆಯದು ಭಾರತ ತಂಡದ ಉತ್ತಮ ಕ್ರಿಕೆಟ್ ಆಟಗಾರ ರಿಷಭ್ ಪಂತ್ ಕಾರು ಅಪಘಾತದಲ್ಲಿ ಘಾಸಿಗೊಂಡ ಸುದ್ದಿ.

ಎರಡನೆಯದು ಪ್ರಧಾನಿ ಮೋದಿಯವರಿಗೆ ಮಾತೃವಿಯೋಗದ ವಿಷಯ. ಮೂರನೆಯದು ಫುಟ್ಬಾಲ್ ದಂತಕಥೆ, ಬ್ರೆಜಿಲ್‌ನ ಪೀಲೆಯ ಸಾವಿನ ಸಮಾಚಾರ. ಇದ್ದುದರಲ್ಲಿ, ರಿಷಭ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗುಣಮುಖರಾಗುತ್ತಿದ್ದಾರೆ ಎಂಬುದೇ ಸಮಾಧಾನದ ಸಂಗತಿ. ಉಳಿದ ಎರಡರಲ್ಲಿ, ಒಂದು ಸಾವು ಬಹುತೇಕ ಭಾರತೀಯರನ್ನು, ಇನ್ನೊಂದು ಸಾವು ವಿಶ್ವದಾದ್ಯಂತ ಬಹುತೇಕರನ್ನು ಶೋಕ ಭಾವದಲ್ಲಿ ನೂಕಿತ್ತು. ಪ್ರಧಾನಿ ಮೋದಿಯವರ ನೂರು ಸಂವತ್ಸರಗಳನ್ನು ಕಂಡ ತಾಯಿಯ ವಯೋಸಹಜ ಸಾವಿನ ನಂತರ ಅಂತ್ಯಕ್ರಿಯೆ ಮೂರು ತಾಸಿನ ಒಳಗೆ ಮುಗಿದುಹೋಯಿತು.

ಶವವನ್ನು ಸಾಗಿಸುತ್ತಿದ್ದ ವಾಹನದಲ್ಲಿ ದೇಶದ ಪ್ರಧಾನಿಯೊಬ್ಬ ತಬ್ಬಲಿಯಂತೆ ಕುಳಿತ ಚಿತ್ರ ಎಲ್ಲರನ್ನೂ ಭಾವುಕರನ್ನಾಗಿಸಿತು. ಇನ್ನೊಂದು ಕಡೆ, ನಾಳೆ ಮಂಗಳವಾರ ಎಂಬತ್ತೆರಡು ವರ್ಷದ, ಫುಟ್ಬಾಲ್ ಪ್ರೇಮಿಗಳ ಹೃದಯದ ರಾಜನಾಗಿ ಮೆರೆದು ಕ್ಯಾನ್ಸರ್ ರೋಗಕ್ಕೆ ತುತ್ತಾದ ಪೀಲೆಯ ಶವವನ್ನು ಹೊತ್ತ ವಾಹನ ನೂರು ವರ್ಷ ಪ್ರಾಯದ ಅವನ ತಾಯಿ ವಾಸಿಸುತ್ತಿರುವ ಮನೆಯ ಮುಂದೆ ಹಾದುಹೋಗಲಿದಿಯಂತೆ.

ಇದು ವಿಧಿಯ ವಿಡಂಬನೆಯಲ್ಲದೇ ಮತ್ತಿನ್ನೇನು? ಆ ತಬ್ಬಲಿ ತಾಯಿಯ ಪರಿಸ್ಥಿತಿ ಹೇಗಿರಬಹುದು? ತಾಯಿ ತಬ್ಬಲಿಯಾಗುವು ದುಂಟೇ ಎನ್ನಬೇಡಿ, ಬ್ರೆಜಿಲ್ ದೇಶದ ಜನರಿಗೆ ಪೀಲೆ ರಾಜನಿಗೆ ಸಮಾನನಾಗಿದ್ದ. ಪೀಲೆಯನ್ನು ಜನ O Rei ಎಂದೇ ಸಂಬೋಧಿಸುತ್ತಿದ್ದರು. ಬ್ರೆಜಿಲ್‌ನ ರಾಷ್ಟ್ರೀಯ ಭಾಷೆ ಪೊರ್ಚುಗೀಸ್ನಲ್ಲಿ ‘ಓ ರೀ’ ಎಂದರೆ, ಇಂಗ್ಲೀಷಿನಲ್ಲಿ ‘ದಿ ಕಿಂಗ್’ ಅಥವಾ ‘ರಾಜ’ ಎಂದು ಅರ್ಥ. ರಾಜ ಸತ್ತರೆ ಪ್ರಜೆಗಳು ತಬ್ಬಲಿಯಾಗುತ್ತಾರೆ ಎಂಬ ಮಾತಿದೆ.

ಅದಕ್ಕೆ ತಾಯಿಯೂ ಹೊರತಲ್ಲ. ಅಂದಹಾಗೆ ಅಭಿಮಾನಿಗಳು ಪೀಲೆಯನ್ನು ‘ಪೆರೋಲಾ ನೆಗ್ರಾ’ (ಕಪ್ಪು ಮುತ್ತು) ಎಂದೂ
ಕರೆಯುತ್ತಿದ್ದರು. ಪೀಲೆಯನ್ನು ಜನ ರಾಜ ಎಂದರೆ ತಪ್ಪೇನಿಲ್ಲ ಬಿಡಿ. ಕೇವಲ ಯುದ್ಧ ಗೆದ್ದು, ರಾಜ್ಯ ಕಟ್ಟಿ, ಆಡಳಿತ ನಡೆಸಿದವ ಮಾತ್ರ ರಾಜನಾಗಬೇಕಿಲ್ಲ. ಆಧುನಿಕ ಯುಗದಲ್ಲಿ, ಕೇವಲ ಭೂಪಟಕ್ಕೆ ಮಾತ್ರ ಸೀಮಿತವಾಗಿದ್ದ ಒಂದು ದೇಶವನ್ನು ವಿಶ್ವವೇ
ಗುರುತಿಸಿ, ಅದರೆಡೆಗೆ ತಿರುಗಿ ನೋಡುವಂತೆ ಮಾಡಿದವ ಯಾವ ರಾಜನಿಗೂ ಕಮ್ಮಿಯಲ್ಲ.

ಇಂದಿಗೂ ಬ್ರೆಜಿಲ್ ಎಂದಾಕ್ಷಣ ನೆನಪಾಗುವುದು ಫುಟ್ಬಾಲ್ ದೇಶ ಎಂದು. ವಿಶ್ವದ ದೊಡ್ಡಣ್ಣ ಅಮೆರಿಕದ ದಕ್ಷಿಣಕ್ಕಿರುವ ಬ್ರೆಜಿಲ್ ಮತ್ತು ಅರ್ಜೆಂಟಿನಾ ಇಂದಿಗೂ ಹೆಸರುವಾಸಿಯಾಗಿರುವುದು ಫುಟ್ಬಾಲ್ ಆಟಕ್ಕೆ ವಿನಃ ಶಿಕ್ಷಣ, ತಂತ್ರಜ್ಞಾನ, ಆರ್ಥಿಕತೆ ಯಾವುದಕ್ಕೂ ಅಲ್ಲ. ಅಲ್ಲಿಯ ಜನರಿಗೆ ಊಟ, ಉಸಿರು, ಎಲ್ಲವೂ ಫುಟ್ಬಾಲ್. ಇತ್ತೀಚೆಗೆ ವಿಶ್ವಕಪ್ ಗೆದ್ದ ಅರ್ಜೆಂಟಿನಾ ತಂಡ ದೇಶಕ್ಕೆ ಹಿಂತಿರುಗಿದಾಗ ಅವರನ್ನು ಸ್ವಾಗತಿಸಲು ರಾಜಧಾನಿಯಲ್ಲಿ ಐವತ್ತು ಲಕ್ಷ ಜನ ಸೇರಿದ್ದರು ಎಂದರೆ ಅದರ ತೀವ್ರತೆಯನ್ನು ಊಹಿಸಿಬಹುದು.

ಐದು ಬಾರಿ ವಿಶ್ವಕಪ್ ಜಯಿಸಿದ ಬ್ರೆಜಿಲ್ ಕೂಡ ಅದಕ್ಕೆ ಹೊರತಲ್ಲ. ಅರ್ಜೆಂಟೀನಾಕ್ಕೆ ಡಿಯಾಗೋ ಮಾರಿಡೋನಾ
ಹೇಗೂ ಹಾಗೆಯೇ, ಅಥವಾ ಅದಕ್ಕಿಂತ ಮಿಗಿಲಾಗಿ ಬ್ರೆಜಿಲ್‌ಗೆ ಪೀಲೆ. ಪೀಲೆ ತನ್ನ ದೇಶಕ್ಕೆ ಹೆಸರು ತಂದುಕೊಡಲು ಶಸ್ತ್ರಾಸ್ತ್ರ ಹಿಡಿದು ಯುದ್ಧ ಮಾಡಿಲ್ಲ, ಶಾಸ್ತ್ರದಿಂದ ಎದುರಾಳಿ ತಂಡದೊಂದಿಗೆ ಸೆಣಸಿದ. ದೇಶ ದೇಶದ ನಡುವಿನ ರಾಜಕೀಯದ ಮೇಲಾಟ ಮಾಡಲಿಲ್ಲ, ಬದಲಾಗಿ ಆಟಗಾರರೊಂದಿಗೆ ಚೆಂಡಿಗಾಗಿ ಸ್ಪರ್ಧಿಸಿದ. ಒಂದು ದೇಶದ ಮೇಲೆ ಬಾಂಬ್ ಹಾಕಿಲ್ಲ, ಆದರೆ ಎದುರಾಳಿ ದೇಶದ ಗೋಲು ಕಂಬದೊಳಗೆ ಬಾಲ್ ಹಾಕಿದ.

ದೇಶಕ್ಕಾಗಿ ಆತನೂ ಬೆವರು ಸುರಿಸಿದ; ರಣರಂಗದಲ್ಲಿ ಅಲ್ಲ, ಕ್ರೀಡಾಂಗಣದಲ್ಲಿ. ಕೆಲವರು ಹೆಸರು ಗಳಿಸಬೇಕೆಂದು ಗೋಲ್ (ಗುರಿ) ಇಟ್ಟುಕೊಂಡು ಕೆಲಸ ಮಾಡಿದರೆ, ಪೀಲೆಗೆ ಗೋಲೇ ಹೆಸರುತಂದಿಕೊಟ್ಟಿತ್ತು. ಪೀಲೆಗಷ್ಟೇ ಅಲ್ಲ, ಬ್ರೆಜಿಲ್ ದೇಶಕ್ಕೂ ಹೆಸರು ತಂದುಕೊಟ್ಟಿತ್ತು. ಅತ್ಯಂತ ಗಮನಾರ್ಹ ಮತ್ತು ಕುತೂಹಲಕಾರಿ ಸಂಗತಿಯೆಂದರೆ, ಆ ಕಾಲದಲ್ಲಿ ಆಂತರಿಕ ಯುದ್ಧ ದಿಂದ ಇಬ್ಬಾಗವಾಗಿದ್ದ ಬ್ರೆಜಿಲ, ವಿಶ್ವಕಪ್ ಗೆಲುವಿನಿಂದ ಒಂದಾಯಿತು. ಜನರ ನಡುವಿನ ಮನಸ್ತಾಪ ಮರೆಸಿ, ಒಗ್ಗೂಡಿಸಿದವ ಯಾವ ರಾಜನಿಗೂ ಕಮ್ಮಿಯಲ್ಲ.

೧೯೫೮ ರಲ್ಲಿ ಬ್ರೆಜಿಲ್ ಮೊದಲ ಬಾರಿ ಫುಟ್ಬಾಲ್ ವಿಶ್ವಕಪ್ ಗೆದ್ದಿತ್ತು. ವಿಶ್ವವೇ ಅದರೆಡೆಗೆ ನೋಡುವಂತಾಯಿತು. ಅಲ್ಲಿಯ ವರೆಗೆ ಬ್ರೆಜಿಲ್ ಪರಿಸ್ಥಿತಿ ಹೇಗಿತ್ತು ಎಂದರೆ, ವಿಶ್ವ ಚಾಪಿಯನ್ಶಿಪ್ ಬಾವುಟದ ಮೇಲೆ ಹೆಸರು ತಪ್ಪಾಗಿ ಮುದ್ರಿತ ವಾಗಿದ್ದರೂ ಯಾರೂ ಮಾತಾಡುತ್ತಿರಲಿಲ್ಲ. ವಿಶ್ವಕಪ್‌ನಂತಹ ದೊಡ್ಡ ಪಂದ್ಯದಲ್ಲಿ ಭಾಗವಹಿಸಲು ಬಂದ ಬ್ರೆಜಿಲ್ ತಂಡವನ್ನು ಯಾರೂ ಗುರುತಿಸುತ್ತಿರಲಿಲ್ಲ. ಯಾವ ಊರಿಗೆ ಹೋಗಲಿ, ಯಾವ ಹೊಟೆಲಿನಲ್ಲಿ ಉಳಿದುಕೊಳ್ಳಲಿ, ಎಲ್ಲರಿಗೂ ಬ್ರೆಜಿಲ್ ತಂಡದ ಆಟಗಾರರು ಅಪರಿಚಿತರು, ಯಾವುದೋ ಅಜ್ಞಾತ ಲೋಕದಿಂದ ಬಂದವರು. ಅದನ್ನು ಮೊದಲು ತೊಡೆದು ಹಾಕಿದ್ದು ಪೀಲೆ. ಆ ವರ್ಷದ ವಿಶ್ವಕಪ್ ನಲ್ಲಿ ಪೀಲೆ ಆತಿಥೇಯ ಸ್ಪೇನ್ ವಿರುದ್ಧ ಆಡಿದ ಅಂತಿಮ ಪಂದ್ಯದಲ್ಲಿನ ಎರಡು ಗೋಲ್ ಸೇರಿಸಿ ಒಟ್ಟೂ ಆರು ಗೋಲ್ ಹೊಡೆದಿದ್ದ.

ಆಗಿನ್ನೂ ಪೀಲೆ ಹದಿನೇಳು ವರ್ಷದ ಯುವಕನಾಗಿದ್ದ, ವಿಶ್ವಕಪ್ ಗೆದ್ದ ತಂಡದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೂ ಪಾತ್ರನಾಗಿದ್ದ. ನಂತರ ಬ್ರೆಜಿಲ್ ೧೯೬೨ ಮತ್ತು ೧೯೭೦ ರ ವಿಶ್ವಕಪ್ ಜಯಿಸಿದಾಗಲೂ ಪೀಲೆ ಅದರ ಭಾಗವಾಗಿದ್ದ, ಮೂರು ವಿಶ್ವಕಪ್ ಗೆದ್ದ ತಂಡದ ಭಾಗವಾದ ಮೊದಲ ಮತ್ತು ಏಕೈಕ ಆಟಗಾರನಾದ. ೧೯೬೬ ರಲ್ಲಿ ಪೀಲೆ ತಂಡದಿಂದ
ಹೊರಗೆ ಉಳಿಯಬೇಕಾಯಿತು, ಇಲ್ಲವಾದರೆ ಆ ವರ್ಷವೂ ಬ್ರೆಜಿಲ್ ಗೆಲ್ಲುತ್ತಿತ್ತೋ ಏನೋ!

ಪೀಲೆ ಹುಟ್ಟಿದ್ದು ಸಾಮಾನ್ಯ ಬಡವರ ಕುಟುಂಬದಲ್ಲಿ. ತಂದೆಗೆ ಸಣ್ಣ ನೌಕರಿ ಇತ್ತಾದರೂ, ಬರುವ ಸಂಬಳ ಸಂಸಾರ ನಡೆಸಲು ಪೂರ್ತಿ ಸಾಕಾಗುತ್ತಿರಲಿಲ್ಲ. ತನ್ನ ಕರ್ಚಿಗಾಗಿ ಪೀಲೆ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬಡತನ ಅವನನ್ನು ಫುಟ್ಬಾಲ್ ಗೀಳಿನಿಂದ ವಿಮುಖನನ್ನಾಗಿಸಲಿಲ್ಲ. ಬಟ್ಟೆ ಅಥವಾ ಕಾಗದವನ್ನು ಗೋಲಾಕಾರವಾಗಿ ಸುತ್ತಿ, ಬಳ್ಳಿ ಕಟ್ಟಿ ಚೆಂಡು ಮಾಡಿ ಕೊಂಡು ಆಡುತ್ತಿದ್ದ. ಅಪ್ಪನೇ ಅವನ ಫುಟ್ಬಾಲ್ ಗುರು.

ಅವನ ಆಟವನ್ನು ನೋಡಿದ ತಂದೆ ‘ನಿನ್ನಲ್ಲಿ ದೈವದತ್ತವಾದ ಶಕ್ತಿಯಿದೆ, ನಿನ್ನ ಆರೋಗ್ಯ ಕಾಪಾಡಿಕೊಂಡು ಒಳ್ಳೆಯ ಆಟ ಆಡಿದರೆ ನಿನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದ್ದರಂತೆ. ಆಗ, ‘ನಿನಗಾಗಿ ನಾನು ವಿಶ್ವಕಪ್ ಗೆದ್ದು ತರುತ್ತೇನೆ’ ಎಂದಿದ್ದನಂತೆ ಎಂಟು ವರ್ಷದ ಬಾಲಕ. ಅದಕ್ಕೆ ಸರಿಯಾಗಿ ಏಳು ವರ್ಷದ ನಂತರ ಸ್ಯಾಂಟೋಸ್ ಫುಟ್ಬಾಲ್ ಕ್ಲಬ್ ಪರವಾಗಿ ಆಡಲು ಮೊದಲ ಬಾರಿ ಸಹಿ ಹಾಕಿದ್ದ ಪೀಲೆ. ಅಷ್ಟೇ ಅಲ್ಲ, ಆಡಿದ ಮೊದಲ ಲೀಗ್ ಪಂದ್ಯದ ನಾಲ್ಕು
ಗೋಲ್ ಬಾರಿಸಿ ಗಮನ ಸೆಳೆದಿದ್ದ.

ಪೀಲೆ ಹೆಸರಿನಲ್ಲಿ ಸಾಕಷ್ಟು ದಾಖಲೆಗಳಿವೆ. ಆತನ ಆತದ ಶೈಲಿ, ಇಪ್ಪತ್ತದು ಮೀಟರ್ ದೂರದಿಂದ, ಆಟಗಾರರ ನಡುವಿಂದ ಹೊಡೆದ ಪೆನಾಲ್ಟಿ ಕಿಕ್ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ೧೯೬೯ ರ ನವೆಂಬರ್ ೧೯ ರಂದು ಆತ ಹೊಡೆದ ೧೦೦೦ ನೇ ಗೋಲು ಕೂಡ ಪೆನಾಲ್ಟಿ ಕಿಕ್ ಆಗಿತ್ತು. ಅದಕ್ಕೆ ಅವನ ಜತೆ ಆಡುತ್ತಿದ್ದ ಆಟಗಾರ ‘ನೀನು ಸಾವಿರದ ಗೋಲ್ ಹೊಡೆಯಲಿ ಎಂದು ಆಟ ನಿಲ್ಲಿಸಿದ್ದೇವೆ’ ಎಂದು ತಮಾಷೆ ಮಾಡಿದ್ದನಂತೆ.

ಆದರೆ, ನಂತರ ಪೀಲೆಯನ್ನು ಅಭಿನಂದಿಸಲು ಮೈದಾನಕ್ಕಿಳಿದ ಜನರನ್ನು ಹಿಂತಿರುಗಿಸಿ ಕಳಿಸಲು ಅರ್ಧ ಗಂಟೆ ಬೇಕಾಯಿತು ಎನ್ನುವುದೂ ಈಗ ಇತಿಹಾಸ. ಅದರ ವಾರ್ಷಿಕೋತ್ಸವದ ಆಚರಣೆಗಾಗಿ ಇಂದಿಗೂ ಬ್ರೆಜಿಲ್‌ನ ಸ್ಯಾಂಟೋಸ್ನಲ್ಲಿ ಜನ ಸೇರುತ್ತಾರೆ. ಆ ದಿನವನ್ನು ‘ಪೀಲೆ ಡೇ’ (ಪೀಲೆಯ ದಿವಸ) ಎಂದು ಕರೆಯುತ್ತಾರೆ. ವಿಷಯ ಏನೆಂದರೆ, ಅಸಲಿಗೆ ‘ಪೀಲೆ’
ಎನ್ನುವುದು ಆತನ ನಿಜ ನಾಮವಲ್ಲ. ಅದಕ್ಕೆ ಯಾವುದೇ ಅರ್ಥವೂ ಇಲ್ಲ. ಆತನಿಗೆ ಅಪ್ಪ ಇಟ್ಟ ಹೆಸರು ಎಡಿಸನ್. ಅಮೆರಿಕದ ಪ್ರಸಿದ್ಧ ಸಂಶೋಧಕ ಥೊಮಸ್ ಅಲ್ವಾ ಎಡಿಸನ್‌ರಿಂದ ಪ್ರೇರಿತರಾಗಿ ಇಟ್ಟ ಹೆಸರು ಅದು.

ನಂತರ ಅವರೇ ಅದನ್ನು ಎಡ್ಸನ್ ಎಂದು ಬದಲಾಯಿಸಿದ್ದರು. ಎಲ್ಲರೂ ಆತನನ್ನು ಪ್ರೀತಿಯಿಂದ ‘ಡಿಕೊ’ ಎಂದು ಕರೆಯು ತ್ತಿದ್ದರು. ತನ್ನ ಊರಿನ ‘ವಾಸ್ಕೊ ಡ ಗಾಮಾ’ ತಂಡದಲ್ಲಿ ‘ಬೇಲೆ’ ಎಂಬ ಹೆಸರಿನ ಗೋಲ್ಕೀಪರ್ ಇದ್ದ. ಪೀಲೆಗೆ ಆತ ಬಹಳ ಇಷ್ಟವಾಗಿದ್ದ. ತನ್ನ ಸ್ನೇಹಿತರ ಮುಂದೆ ಆತನ ಹೆಸರನ್ನು ‘ಪೀಲೆ’ ಎಂದು ತಪ್ಪಾಗಿ ಉಚ್ಛರಿಸಿದ್ದರಿಂದ ಸ್ನೇಹಿತರು ಎಡ್ಸನ್ನನ್ನು ‘ಪೀಲೆ’ ಎಂದು ಛೇಡಿಸುತ್ತಿದ್ದರು. ಈತ ಎಷ್ಟು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಇದೇ ವಿಷಯದಲ್ಲಿ ಸ್ನೇಹಿತರೊಂದಿಗೆ ಜಗಳ ಮಾಡಿದ್ದಕ್ಕಾಗಿ ಆತನನ್ನು ಕಾಲೇಜಿನಿಂದ ಎರಡು ದಿನ ಅಮಾನತು ಮಾಡಲಾಗಿತ್ತು.

ಕರೆಯಲು ಸುಲಭವಾಗಿದೆ ಎನ್ನುವ ಕಾರಣಕ್ಕೆ ‘ಪೀಲೆ’ ಎಂಬ ಹೆಸರನ್ನೇ ಆತ ಒಪ್ಪಿಕೊಂಡ. ಬ್ರೆಜಿಲ್ ಪರ ಎಪ್ಪತ್ತೇಳು ಗೋಲ್ ಹೊಡೆದ ಪೀಲೆ ಜಾಗತಿಕ ಮಟ್ಟದಲ್ಲಿ ಮೊದಲ ಕ್ರೀಡಾ ತಾರೆ. ಪ್ರಥಮ ದರ್ಜೆಯ ಪಂದ್ಯದಲ್ಲಿ ಒಟ್ಟೂ ಒಂದು ಸಾವಿರದ ಇನ್ನೂರ ಎಂಬತ್ಮೂರು ಗೋಲುಗಳು. ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ೧೯೯೯ ರಲ್ಲಿ ಪೀಲೆಯನ್ನು ‘ಶತಮಾನದ ಕ್ರೀಡಾಪಟು’ ಎಂದು ಸಾರಿತು. ಇಪ್ಪತ್ತನೆಯ ಶತಮಾನದ ನೂರು ಪ್ರಭಾವಿ ವ್ಯಕ್ತಿಯಲ್ಲಿ ಪೀಲೆ ಹೆಸರು ದಾಖಲಾಗಿದೆ.
ಪೀಲೆ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಸಂಗೀತ ಸಂಯೋಜನೆ ಮಾಡಿದ್ದಾನೆ, ಹಾಡಿದ್ದಾನೆ, ಮೂರು ವರ್ಷ ಬ್ರೆಜಿಲ್‌ನ ಕ್ರೀಡಾ ಮಂತ್ರಿಯಾಗಿಯೂ ಕೆಲಸ ಮಾಡಿದ್ದಾನೆ ಎಂದರೆ ಆತನ ವ್ಯಕ್ತಿತ್ವದ ಪರಿಚಯವಾಗುತ್ತದೆ.

ಇದೆಲ್ಲಕ್ಕಿಂತ ಮಹತ್ವಹ ಸಂಗತಿಯೆಂದರೆ, ಬ್ರೆಜಿಲ್ ಸರಕಾರ ದೇಶ ಬಿಟ್ಟು ಹೋಗುವುದನ್ನು ತಡೆಯಲು ೧೯೬೧ ರಲ್ಲಿ ಪೀಲೆ
ಯನ್ನು ‘ಸರಕಾರದ ಆಸ್ತಿ’ ಎಂದು ಘೋಷಿಸಿತ್ತು. ಫುಟ್ಬಾಲ್ ಪ್ರಿಯರನ್ನು ಶೋಕಸಾಗರದಲ್ಲಿ ಬಿಟ್ಟು ಹೋದ ಪೀಲೆಯ ಶವವನ್ನು ಆತ ಹದಿನೆಂಟು ವರ್ಷ ಆಡಿದ ಕ್ಲಬ್‌ನ ಮೈದಾನದ ಮಧ್ಯದಲ್ಲಿ ನಾಳೆ ಹೂಳುತ್ತಾರೆ. ಆದರೆ ಆತ ಸದಾ ಹೇಳುತ್ತಿದ್ದ
ಮೂರು ಮುಖ್ಯ ಪಾಠ ಕರ್ಣಪಟಲದಲ್ಲಿ ಮೊಳಗುತ್ತಿರುತ್ತದೆ. ‘ಜನರನ್ನು ಗೌರವಿಸಲು ಕಲಿಯಿರಿ’ ಎಂಬುದು ಅವನ ಮೊದಲ ಪಾಠ.

ಎರಡನೆಯದು, ‘ಯಾವುದೇ ಸಂದರ್ಭ ಒದಗಿಬಂದರೂ ಅದನ್ನು ಎದುರಿಸಲು ಸದಾ ಸಿದ್ಧರಾಗಿರಿ’, ಮತ್ತು ಮೂರನೆಯದು, ‘ಯಾವತ್ತೂ ನಾನೇ ಶ್ರೇಷ್ಠ ಎಂದು ತಿಳಿದುಕೊಳ್ಳಬೇಡಿ’. ಪೀಲೆಗೆ ಪೀಲೆಯೇ ಸಾಟಿ!