Friday, 22nd November 2024

ಪ್ರತಿಷ್ಠಿತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೌರವ

ಸ್ಥಳೀಯ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಅನ್ನು ಗುರುತಿಸಲಾಗಿದೆ.

ಹಾವೇರಿ: ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎಬಿ) ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಾಹಕ ಸಂಸ್ಥೆಯಾದ ಬೆಂಗಳೂರು ಇಂಟರ್‌ ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಎಂಡಿ ಮತ್ತು ಸಿಇಒ ಹರಿ ಕೆ ಮರಾರ್ ಅವರು ಪಾಲ್ಗೊಂಡು, ಗೌರವ ಸ್ವೀಕರಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕನ್ನಡ ಭಾಷೆ, ಸ್ಥಳೀಯ ಕಲೆ, ಸಂಸ್ಕೃತಿಯನ್ನು ಸಕ್ರಿಯವಾಗಿ ಪ್ರಚಾರ ಮಾಡುವ ಮತ್ತು ಕರ್ನಾಟಕದ ಸಾರವನ್ನು ಪ್ರದರ್ಶಿಸುವ ಪ್ರಮುಖ ಹಬ್ಬಗಳನ್ನು ಆಚರಿಸುವ ಕಾರ್ಯಕ್ರಮಗಳಿಂದ ಈ ಮನ್ನಣೆಯನ್ನು ಪಡೆದುಕೊಂಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೆಲ್ಲೆಡೆ ಕನ್ನಡ ಫಲಕಗಳನ್ನು ಹಾಕುವಲ್ಲಿ, ಕನ್ನಡದಲ್ಲಿ ಘೋಷಣೆಗಳನ್ನು ಮಾಡುವಲ್ಲಿ ಮತ್ತು ದೇಶೀಯ, ವಿದೇಶಿ ಪ್ರಯಾಣಿಕರಲ್ಲಿ ಕನ್ನಡ ಹಾಗೂ ಸಂಸ್ಕೃತಿಯನ್ನು ಪೋಷಿಸುವ ಮತ್ತು ಉತ್ತೇಜಿಸುವ ಬಗ್ಗೆ ಬಿಎಲ್‌ಆರ್‌ ಸಾಕಷ್ಟು ಕೆಲಸ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ, ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡಹಬ್ಬ ದಸರಾ ಉತ್ಸವವನ್ನು ಅದ್ಧೂರಿಯಿಂದ ಆಚರಿಸುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉದ್ಯೋಗಿ ಗಳು, ದೇಶಿಯ ಹಾಗೂ ವಿದೇಶಿಯ ಪ್ರಯಾಣಿಕರಿಗೆ ಪಸರಿಸ ಲಾಗಿತ್ತು.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಎಂಡಿ ಮತ್ತು ಸಿಇಒ ಹರಿ ಕೆ. ಮರಾರ್ ಅವರು ಮಾತನಾಡಿ, “86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಮನ್ನಣೆ ಮತ್ತು ಗೌರವ ಪಡೆದಿರುವುದು ಮಹತ್ವದ ಸಾಧನೆ. ವಿಮಾನ ನಿಲ್ದಾಣದಲ್ಲಿ ನಮ್ಮ ಭಾಷೆ, ಸಂಸ್ಕೃತಿಯನ್ನು ಉತ್ತೇಜಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಗೌರವ ಪಡೆಯುವ ಮೂಲಕ ನಮ್ಮ ನಾಡು, ನುಡಿ, ಪರಂಪರೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸಕ್ರಿಯ ವಾಗಿ ಕೆಲಸ ಮಾಡಲು ಸ್ಪೂರ್ತಿ ದೊರೆತಿದೆ ಎಂದರು. ಡಾ ಮಹೇಶ್ ಜೋಶಿ ಅವರ ನೇತೃತ್ವದಲ್ಲಿ ನಮ್ಮ ಸಂಸ್ಥೆಗೆ ಈ ಗೌರವ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾವು ಚಿರಋಣಿ” ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸರ್ಕಾರ ಮತ್ತು ಹಾವೇರಿ ಜಿಲ್ಲಾಡಳಿತದ ಸಹಯೋಗದಲ್ಲಿ ಈ ಸಾಹಿತ್ಯೋತ್ಸವವನ್ನು ಆಯೋಜಿಸಿದೆ. ಈ ವಾರ್ಷಿಕ ಸಮಾರಂಭದಲ್ಲಿ ಕರ್ನಾಟಕ ಮತ್ತು ಭಾರತದ ಪ್ರಸಿದ್ಧ ಬರಹಗಾರರು, ಶಿಕ್ಷಣ ತಜ್ಞರು, ಸ್ಥಳೀಯ ಭಾಷಿಕರು ಮತ್ತು ಕವಿಗಳು ಪಾಲ್ಗೊಂಡಿದ್ದರು.