Saturday, 23rd November 2024

ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ: ತುರ್ತು ಸೇವೆ, ತಪಾಸಣೆ, ಚಿಕಿತ್ಸೆ ಸ್ಥಗಿತ

ವತ್ಮಾಲ್​: ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಬ್ಬರು ರೆಸಿಡೆಂಟ್​ ವೈದ್ಯರ ಮೇಲೆ ರೋಗಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಲವಾಗಿ ಖಂಡಿಸಿ, ಪ್ರತಿಭಟನೆಗೆ ಕರೆ ಕೊಟ್ಟಿದೆ.

ಅದರ ಅನ್ವಯ ವಸಂತ್​ರಾವ್ ನಾಯಕ್​ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತುರ್ತು ಸೇವೆ ಸೇರಿ ಎಲ್ಲ ಮಾದರಿಯ ತಪಾಸಣೆ, ಚಿಕಿತ್ಸೆ ಸ್ಥಗಿತಗೊಳ್ಳಲಿದೆ.

‘ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದೆ ಯಾವತ್ತೂ ಇಂಥ ಘಟನೆ ನಡೆಯ ದಂತೆಯೂ ಕ್ರಮ ವಹಿಸಬೇಕು’ ಎಂದು ಭಾರತೀಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ಮಹಾರಾಷ್ಟ್ರ ನೆಟ್ವರ್ಕ್​ ಹೇಳಿಕೆ ಬಿಡುಗಡೆ ಮಾಡಿದೆ. ಹಾಗೇ, ಆಸ್ಪತ್ರೆ ಎದುರು ವೈದ್ಯಕೀಯ ಸಿಬ್ಬಂದಿ ಮೇಣದ ಬತ್ತಿ ಕೈಯಲ್ಲಿ ಹಿಡಿದು, ಶಾಂತವಾಗಿ ಮುಷ್ಕರ ನಡೆಸುತ್ತಿದ್ದಾರೆ.

ಯವತ್ಮಾಲ್​​ನಲ್ಲಿರುವ ಶ್ರೀ ವಸಂತರಾವ್​ ನಾಯಕ್​ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವಾರದ ಹಿಂದೆ ಸೂರಜ್​ ಠಾಕೂರ್​ ದಾಖಲಾಗಿದ್ದ. ಆತ ಚಾಕುವಿನಿಂದ ತನ್ನ ಹೊಟ್ಟೆಗೆ ತಾನೇ ಇರಿದುಕೊಂಡು ಗಂಭೀರವಾಗಿ ಗಾಯ ಗೊಂಡಿದ್ದ. ಅವನಿಗೆ ಸಣ್ಣ ಸರ್ಜರಿ ಕೂಡ ಮಾಡಬೇಕಾಗಿತ್ತು. ಅದಕ್ಕೂ ಪೂರ್ವ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದರು. ರಾತ್ರಿ 9ಗಂಟೆ ಹೊತ್ತಿಗೆ ಅಲ್ಲಿನ ಇಬ್ಬರು ವೈದ್ಯರು ರೋಗಿಗಳ ತಪಾಸಣೆಗಾಗಿ ರೌಂಡ್ಸ್​​ಗಾಗಿ ಹೊರಟಿದ್ದರು.

ಒಬ್ಬೊಬ್ಬರೇ ರೋಗಿಗಳನ್ನು ತಪಾಸಣೆ ಮಾಡುತ್ತ, ಸೂರಜ್​ ಠಾಕೂರ್​ ಬಳಿಯೂ ಬಂದರು. ಆಗ ಆತ ಒಂದು ಕೈಯಲ್ಲಿ ಹಣ್ಣು ಕತ್ತರಿಸುವ ಚಾಕು ಮತ್ತು ಇನ್ನೊಂದು ಕೈಯಲ್ಲಿ ಹಣ್ಣು ಹಿಡಿದು ಕುಳಿತಿದ್ದ. ‘ನೀವು ಹಣ್ಣು ತಿನ್ನುತ್ತೀರಾ?’ ಎಂದು ವೈದ್ಯರ ಬಳಿಯೂ ಕೇಳಿದ. ವೈದ್ಯರು ತಮಗೆ ಹಣ್ಣು ಬೇಡವೆಂದು ಹೇಳಿ, ಗಾಯವನ್ನು ನೋಡುತ್ತೇವೆ ಎಂದರು.

ಕೆಲ ಹೊತ್ತುಗಳ ಬಳಿ ಒಬ್ಬರು ವೈದ್ಯರು ಸೂರಜ್​ ಬಳಿ ಬಂದು ಮತ್ತೆ ಆತನನ್ನು ಪರಿಶೀಲನೆ ಮಾಡಲು ಮುಂದಾದರು. ಇನ್ನೊಬ್ಬ ವೈದ್ಯರು ಅಲ್ಲಿಯೇ ಸಮೀಪ ನಿಂತಿದ್ದರು. ಆಗ ಸೂರಜ್​ ಕೈಯಲ್ಲಿದ್ದ ಚಾಕುವಿನಿಂದ ವೈದ್ಯರಿಗೆ ಇರಿದಿದ್ದಾನೆ.