ಇದೇ ಅಂತರಂಗ ಸುದ್ದಿ
vbhat@me.com
ಪತ್ರಿಕಾ ಕಚೇರಿ ನಡೆಯುವುದೇ ಡೆಡ್‌ಲೈನ್ ಮೇಲೆ. ದಿನಪತ್ರಿಕೆಯ ಕಚೇರಿಯಲ್ಲಿ ಸಂಜೆಯ ನಂತರ ಒಮ್ಮೆ ಹೊಕ್ಕರೆ ಯಾವುದೋ ಯುದ್ಧಭೂಮಿಗೆ ಹೋದಂತೆ ಭಾಸವಾಗುತ್ತದೆ. ಅದರಲ್ಲಿಯೂ ಯಾರಾದರೂ ಗಣ್ಯರು, ಹಿರಿಯರು ಸಂಜೆಯ ನಂತರ ಮೃತಪಟ್ಟರೆ ಅಥವಾ ಸಂಜೆಯ ಬಳಿಕ ಏನಾದರೂ ಘಟನಾವಳಿಗಳು ನಡೆದರೆ ಅಕ್ಷರಶಃ ರಣರಂಗವಾಗಿರುತ್ತದೆ. ಗಣ್ಯರು ಮೃತಪಟ್ಟಾಗ, ಅವರ ಆಪ್ತರಿಂದ ಬರೆಸಿ ಪ್ರಕಟಿಸುವುದೆಂದರೆ ಅದೊಂದು ಯುದ್ಧ ಗೆದ್ದ ಸಂಭ್ರಮವೇ!
ಮೊನ್ನೆ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಕೊನೆಯುಸಿರು ಎಳೆದ ಸಮಯದಲ್ಲಿ ನಾಡಿನ ಗಣ್ಯರು, ಸಾಹಿತಿಗಳು, ಸ್ವಾಮೀಜಿ ಗಳಿಂದ ಅವರ ಒಡನಾಟದ ಬಗ್ಗೆ ವಿಶೇಷ ಲೇಖನ ಬರೆಸಲು ಮುಂದಾದ ಸಮಯದಲ್ಲಿ, ಅನೇಕರು ‘ಅವರೊಂದಿಗೆ ಕಳೆದ ಪ್ರತಿಕ್ಷಣವೂ ಅತ್ಯಮೂಲ್ಯ… ಏನೆಂದು ಬರೆಯಲಿ’, ‘ಅವರನ್ನು ಕಳೆದುಕೊಂಡಿರುವ ಸಮಯದಲ್ಲಿ ಬರೆಯಲು ಆಗಲ್ಲ’ ಎನ್ನುವ
ಮಾತನ್ನು ಹೇಳಿ ಅನೇಕರು ಜಾರಿಕೊಂಡರು.
ಇದು ಕೇವಲ ಗಣ್ಯರ ನಿಧ ಸಂದರ್ಭದ ಸಮಸ್ಯೆಯಲ್ಲ. ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ ಇತ್ಯಾದಿಗಳ ನಿಮಿತ್ತ ಏನಾದರೂ ವಿಶೇಷ ನೀಡಬೇ ಕೆಂದು ಕನ್ನಡ ಪತ್ರಿಕೆಗಳ ಎಲ್ಲ ಸಂಪಾದಕರು ಹದಿನೈದು ದಿನಗಳ ಮುಂಚೆ ಯೇ ಯೋಚಿಸು ತ್ತಾರೆ. ಅದೇ ರೀತಿ ನಮ್ಮಲ್ಲೂ ನಾವು ಯೋಚಿಸಿ, ಒಬ್ಬೊಬ್ಬ ರೇ ಸಾಹಿತಿ, ಕವಿ, ಚಿಂತಕರನ್ನು ಸಂಪರ್ಕಿಸಲು ಆರಂಭಿಸಿದೆವು. ನಮ್ಮ ವರದಿಗಾರರೂ ಕೆಲವರನ್ನು ಸಂಪರ್ಕಿಸಿದರು.
ಬಹುತೇಕ ಎಲ್ಲರೂ ಹೇಳುತ್ತಿದ್ದ ಉತ್ತರ – ‘ಒಂದು ವಾರದೊಳಗೆ ಬರೆದು ಕೊಡೋದು ಕಷ್ಟ, ಯೋಚನೆ ಮಾಡ್ತೀನಿ, ನಾನು ಊರಲ್ಲಿ ಇಲ್ಲ, ನನಗೆ ಬರೆಯೋದು ಕಷ್ಟ, ಆದರೆ ನಾನು ಹೇಳೋದನ್ನ ನೀವು ಬರೆದುಕೊಂಡರೆ ಹೇಳುತ್ತೇನೆ.. ಇತ್ಯಾದಿ ಇತ್ಯಾದಿ. ಯಾರೂ ಸಹ ‘ಆಗಬಹುದು, ನೀವು ತಿಳಿಸಿದ ಡೆಡ್‌ಲೈನ್ ಒಳಗೆ ಬರೆದುಕೊಡ್ತೇನೆ’ ಎಂದು ಹೇಳಲಿಲ್ಲ. ಇದು ನನ್ನ ಒಬ್ಬನ ಸಮಸ್ಯೆ ಅಥವಾ ಸಂಕಟವಲ್ಲ. ಎಲ್ಲ ಸಂಪಾದಕರದ್ದೂ ಇದೇ.
ಕನ್ನಡದ ಲೇಖಕರು, ಬರಹಗಾರರು, ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರಿಂದ ಬರೆಯಿಸುವುದು ಬಹಳ ಕಷ್ಟ. ತಕ್ಕ ಮಟ್ಟಿಗಿನ ಸಂಭಾವನೆ ಕೊಡುತ್ತೇವೆ ಅಂದರೂ ಬರೆಯುವುದಿಲ್ಲ. ಅದರಲ್ಲೂ ತನ್ನಿಮಿತ್ತ ಲೇಖನಗಳನ್ನು ಬರೆಯಿಸುವುದಂತೂ ಬಹಳ ಕಷ್ಟ. ಒಂದು ತಿಂಗಳು ಸಮಯಾವಕಾಶ ಕೊಟ್ಟರೂ, ಹೇಳಿದ ದಿನದೊಳಗೆ ಬರೆದು ಕಳಿಸಿ ಕೊಡುತ್ತಾರೆಂಬ ಗ್ಯಾರೆಂಟಿ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಲೇಖಕರಿಂದ ಬರೆಯಿಸುವುದೇ ಕಷ್ಟವಾಗಿಬಿಟ್ಟಿದೆ.
ಇನ್ನು ಯಾರಾದರೂ ಗಣ್ಯವ್ಯಕ್ತಿಗಳು ನಿಧನರಾದಾಗ, ಅದೇ ದಿನ ಒಂದೆರಡು ಗಂಟೆಯೊಳಗೆ ಲೇಖನ ಬರೆದುಕೊಡಿ ಅಂದರೆ,
ನಾವು ಯಾವುದೋ ಶಿಕ್ಷೆ ವಿಽಸುತ್ತಿದ್ದೇವೆ ಎಂದು ಭಾವಿಸಿ ನುಣುಚಿಕೊಳ್ಳುತ್ತಾರೆ. ಊರಲ್ಲಿ ಇಲ್ಲ, ಮೂಡ್ ಇಲ್ಲ, ಅವರು ನನಗೆ ಬಹಳ ಆಪ್ತರು, ಆದರೆ ಈ ದುಃಖದಲ್ಲಿ ಬರೆಯಲು ಆಗುತ್ತಿಲ್ಲ ಎಂದು ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ‘ನೀವು -ನಿನಲ್ಲಿ ಹೇಳುತ್ತ ಹೋಗಿ, ನಾನು ಬರೆದುಕೊಳ್ತೇನೆ, ಅದನ್ನೆಲ್ಲ ನೀವೇ ಬರೆದಂತೆ ಪ್ರಿಂಟ್ ಮಾಡುತ್ತೇವೆ’ ಎಂದರೆ ಫೋನಿನಲ್ಲಿ ಡಿಕ್ಟೇಷನ್ ಕೊಡುತ್ತಾರೆ. ಈ ದಿನಗಳಲ್ಲಿ ಇಂಥ ‘ಡಿಕ್ಟೇಟರ್’ಗಳ ಸಂಖ್ಯೆಯೇ ಜಾಸ್ತಿಯಾಗಿದೆ.
ಅನ್ಯ ಮಾರ್ಗವಿಲ್ಲದೆ ಅವರು ಹೇಳಿದ್ದನ್ನು ಬರೆದುಕೊಂಡು ಅವರೇ ಸ್ವತಃ ಬರೆದಂತೆ ಪ್ರಿಂಟ್ ಮಾಡುವ (ಅಷ್ಟೇನೂ ಒಳ್ಳೆಯ ದಲ್ಲದ) ಸಂಪ್ರದಾಯ ಆರಂಭವಾಗಿದೆ. ನಮ್ಮ ಅನಿವಾರ್ಯತೆಯನ್ನು ಲೇಖಕರು ಈ ರೀತಿ ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ. ಗಣ್ಯ ವ್ಯಕ್ತಿಗಳು ನಿಧನರಾದಾಗ, ಅವರಿಗೆ ಆಪ್ತರಾದವರಿಂದ ಬರೆಯಿಸುವುದು ಬಹಳ ಕಷ್ಟಕರ ಕೆಲಸ. ಇನ್ನು ಮಂತ್ರಿಗಳ, ಮುಖ್ಯಮಂತ್ರಿಗಳ ಶೋಕ ಸಂದೇಶವನ್ನಂತೂ ಅವರ ಕಾರ್ಯದರ್ಶಿಗಳು ಬಹಳ ಯಾಂತ್ರಿಕವಾಗಿ ಬರೆದು ಕಳಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಗಣ್ಯರೆಲ್ಲ ತಮ್ಮ ಶೋಕವನ್ನು ಟ್ವೀಟ್ ಮೂಲಕ ತಿಳಿಸುವುದರಿಂದ, ಸುದೀರ್ಘ ಸಂದೇಶವನ್ನು
ಕಳಿಸುವ ಪರಿಪಾಠವೂ ನಿಂತು ಹೋಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ವಿಚಿತ್ರ ಸಂಪ್ರದಾಯ ಆರಂಭವಾಗಿತ್ತು. ಅವರ ಆಫೀಸಿನಿಂದ ಮುಖ್ಯಮಂತ್ರಿಗಳ ಹೆಸರಿನಲ್ಲಿ ವಾರ, ಹದಿನೈದು ದಿನಗಳಿಗೊಮ್ಮೆ ಯಾವ ಪತ್ರಿಕೆಯ ಸಂಪಾದಕರು ಅಪೇಕ್ಷಿಸದಿದ್ದರೂ, ತನ್ನಷ್ಟಕ್ಕೆ ಲೇಖನಗಳು ಬರಲಾರಂಭಿಸಿದ್ದವು.
ಸ್ವತಃ ಮುಖ್ಯಮಂತ್ರಿಗಳೇ ಬರೆದಂತೆ ಪತ್ರಿಕೆಗಳು ಅವನ್ನು ಮುಖಪುಟದಲ್ಲಿ ಪ್ರಕಟಿಸಸಿದವು. ಈ ರೀತಿ ಐದಾರು ಲೇಖನ ಗಳನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿದ ನಂತರ, ಮುಖ್ಯಮಂತ್ರಿಗಳ ಲೇಖನ ಬಂದರೂ ಯಾರೂ ಪ್ರಕಟಿಸುವ ಉತ್ಸುಕತೆ ತೋರಲೇ ಇಲ್ಲ. ಮುಖ್ಯಮಂತ್ರಿಗಳ ಹೆಸರಿನಲ್ಲಿ ಯಾರೋ ಘೋ ರೈಟ್ ಮಾಡುತ್ತಾರೆ ಎಂಬುದು ಸಂಪಾದಕರಿಗೆ ಮತ್ತು ಓದುಗರಿಗೆ ಗೊತ್ತಾಗಿತ್ತು.
ಮುಖ್ಯಮಂತ್ರಿಗಳ, ಸಚಿವರಂತ ಗಣ್ಯರ ಹೆಸರಿನಲ್ಲಿ ಲೇಖನ ಬಂದಾಗ, ಕನಿಷ್ಠ ಅವರಿಗಾದರೂ ಅದರ ಹೂರಣ ಏನೆಂಬುದು
ಗೊತ್ತಿರಬೇಕು. ಅವರ ಜತೆ ಚರ್ಚೆ ಮಾಡಿ ಆ ಲೇಖನ ಸಿದ್ಧಪಡಿಸಿರಬೇಕು. ಆದರೆ ಅವರ ಹೆಸರಿನಲ್ಲಿ ಬರುವ ಲೇಖನವನ್ನು ಅವರು ಓದುವ ಬಗ್ಗೆ ಅನುಮಾನಗಳಿವೆ. ಓದುಗರಂತೆ ಅವರೂ ಸಹ ಪ್ರಿಂಟ್ ಆದ ನಂತರ ಮರುದಿನ ಓದುವಂತಾದರೆ ಅವರ ಲೇಖನದ ಪಾವಿತ್ರ್ಯ ಹಾಳಾಗುತ್ತದೆ.
ಮತ್ತೆ ಯಡಿಯೂರಪ್ಪನವರನ್ನೇ ಉದಾಹರಣೆ ತೆಗೆದುಕೊಂಡರೆ, ಅವರಿಗೆ ಇಂಥ ವಿಷಯಗಳ ಬಗ್ಗೆ ಚರ್ಚಿಸಲು ಎಷ್ಟು ಸಮಯ ಇದೆ, ಅವರಿಗೆ ಅಂಥ ಮನಸ್ಥಿತಿ ಇದೆಯಾ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಯಾರೋ ಘೋ ರೈಟ್ (ಕೋಡಂಗಿ ಬರೆವಣಿಗೆ) ಮಾಡಿದರೆ ಅದೆಂಥ ನಗೆಪಾಟಲಿಗೆ ಈಡಾಗುತ್ತದೆ. ಮೂಲತಃ ಯಡಿಯೂರಪ್ಪ ಅವರಿಗೆ ಬರೆಯುವ
ಮನಸ್ಥಿತಿಯೇ ಇಲ್ಲ. ಅವರೆಂದೂ ಬರೆದವರಲ್ಲ. ತಮ್ಮ ಭಾವನೆಗಳನ್ನು ಅಕ್ಷರಗಳಲ್ಲಿ ಹಂಚಿಕೊಂಡವರೂ ಅಲ್ಲ.
ಹಾಗೆ ಅವರು ಗಂಭೀರ ಓದುಗರೂ ಅಲ್ಲ. ಸಾಹಿತಿಗಳಿಗೆ ನೀಡುವ ಅತ್ಯುನ್ನತ ಪುರಸ್ಕಾರಗಳಂದಾದ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪಡೆದರೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಖುದ್ದಾಗಿ ಬರೆಯುತ್ತಾರೆ ಅಂದರೇ ಇಂದಿಗೂ ಜನ ನಂಬುವು ದಿಲ್ಲ. ಇಂದಿಗೂ ಅವರ ಮಹಾಕಾವ್ಯ ಹೇಗೆ manufacture ಆಗುತ್ತದೆ ಎಂಬುದರ ರಹಸ್ಯ ನನಗೆ ಸೇರಿದಂತೆ ಕೆಲವರಿಗೆ ಮಾತ್ರ ಗೊತ್ತಿದೆ. ಅವರು ಆ ಪ್ರಶಸ್ತಿಯನ್ನು ಹೇಗೆ ಹೊಡೆದುಕೊಂಡರು ಎಂಬುದೂ ಗೊತ್ತಿರುವ ಸಂಗತಿಯೇ.
ಇನ್ನು ಸಾಹಿತಿಗಳ ವಿಚಾರಕ್ಕೆ ಬರೋಣ. ವಿಶೇಷ ಸಂದರ್ಭದಲ್ಲಿ ಲೇಖನ ಬರೆಯಿಸಲು ತಿಣುಕಾಡಿದಂತೆ, ವಿಮರ್ಶಕರಿಂದ ಪುಸ್ತಕ ವಿಮರ್ಶೆ ಮಾಡಿಸುವುದೂ ಕಷ್ಟವೇ. ಸಾಮಾನ್ಯವಾಗಿ ಒಂದು ಪುಸ್ತಕ ಓದಿ ವಿಮರ್ಶೆ ಮಾಡಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಕೆಲವು ವಿಮರ್ಶಕರು ಈ ಕೆಲಸವನ್ನು ಹತ್ತು-ಹದಿನೈದು ದಿನಗಳೊಳಗೆ ಮಾಡುತ್ತಾರೆ. ಮೊನ್ನೆ ನಮ್ಮ ಕಾರ್ಯಾಲಯಕ್ಕೆ ಸಾಕಷ್ಟು ಹೆಸರು ಮಾಡಿದ ಕನ್ನಡ ವಿಮರ್ಶಕರೊಬ್ಬರು ಬಂದಿದ್ದರು.
ಅವರಿಗೆ ನಾವು ಸುಮಾರು ಹನ್ನೊಂದು ತಿಂಗಳ ಹಿಂದೆ ವಿಮರ್ಶೆ ಮಾಡುವಂತೆ ಒಂದು ಪುಸ್ತಕ ಕಳಿಸಿzವು. ಅದನ್ನು ಅವರು ತೆಗೆದುಕೊಂಡು ಬಂದಿದ್ದರು. ‘ಪುಸ್ತಕ ಓದಿ, ಮನನ ಮಾಡಿಕೊಂಡು, ವಿಮರ್ಶೆ ಬರೆಯೋದು ಹುಡುಗಾಟಿಕೆ ಅಲ್ಲ. ಬಹಳ ಜವಾಬ್ದಾರಿ ಕೆಲಸ ನೋಡಿ, ಹೀಗಾಗಿ ನೀವು ನನಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ಹೊಣೆಗಾರಿಕೆಯಿಂದ ಮಾಡಿದ್ದರಿಂದ ಇಷ್ಟು ಸಮಯ ಹಿಡಿಯಿತು’ ಎಂದು ಹೇಳಿ ಹಸ್ತಪ್ರತಿ ಕೊಟ್ಟರು.
ಮಹಾಶಯರು ಎರಡೂವರೆ ಪುಟ ಬರೆದಿದ್ದರು! ಅದಕ್ಕೆ ಅವರು ಅಷ್ಟು ಸುದೀರ್ಘ ಸಮಯ ತೆಗೆದುಕೊಂಡಿದ್ದರು. ಇಂಥ ವಿಮರ್ಶಕರನ್ನು ಇಟ್ಟುಕೊಂಡರೆ ಪತ್ರಿಕೆಗಳಲ್ಲಿ ‘ಪುಸ್ತಕ ವಿಮರ್ಶೆ’ ಎಂಬ ವಿಭಾಗವನ್ನೇ ಕೈಬಿಡುವುದು ಅನಿವಾರ್ಯ ಆಗಬಹುದು. ಕೆಲವು ವರ್ಷಗಳ ಹಿಂದೆ ನನಗೆ ಯುಗಾದಿಗೆ ಪತ್ರಿಕೆಯ ಮುಖಪುಟದಲ್ಲಿ ಕವನ ಪ್ರಕಟಿಸಿದರೆ ಹೇಗೆ ಎಂದು ಅನಿಸಿತು.
ಆ ಪ್ರಯುಕ್ತ ಕನ್ನಡದ ಪ್ರಮುಖ ಕವಿವರ್ಯರೊಬ್ಬರ ಕವನವನ್ನು ಪ್ರಕಟಿಸುವುದೆಂದು ತೀರ್ಮಾನಿಸಿದೆ. ಯುಗಾದಿಗೆ ಇನ್ನೂ ಇಪ್ಪತ್ತು ದಿನಗಳಿರುವಾಗ, ಆ ಪ್ರಸಿದ್ಧ ಮತ್ತು ಹಿರಿಯ ಕವಿವರ್ಯರನ್ನು ಸಂಪರ್ಕಿಸಿ, ನನ್ನ ಮನಸ್ಸಿನ ಇಂಗಿತವನ್ನು
ವ್ಯಕ್ತಪಡಿಸಿದೆ. ಅವರಿಗೆ ಸಂತೋಷವಾಯಿತು. ಇದು ಒಳ್ಳೆಯ ಪ್ರಯತ್ನ ಎಂದು ಶ್ಲಾಘಿಸಿದರು. ಆದರೆ ತಮ್ಮಿಂದ ಕವನ
ಕಳುಹಿಸಲು ಆಗುವುದಿಲ್ಲ ಎಂದು ಹೇಳಿದರು. ಕಾರಣ ಕೇಳಿದಾಗ ಅವರು ಹೇಳಿದ್ದು – ‘ನೋಡಿ ನನಗೆ ಕವನ ಬರೆಯಲು ಮೂಡು ಬರಬೇಕು. ಅದು ಯಾವಾಗ ಬರುವುದೆಂಬುದು ಗೊತ್ತಿಲ್ಲ.
ನನಗೆ ಕಾಲಮಿತಿಯನ್ನು ನಿಗದಿಪಡಿಸಿದರೆ ಬರೆಯಲು ಆಗುವುದಿಲ್ಲ’. ಆ ಕವಿ ಮಹಾಶಯರ ಸಂಕಟ ಅರ್ಥ ಮಾಡಿಕೊಳ್ಳಲು ನನಗೆ ಕಷ್ಟವಾಗಲಿಲ್ಲ. ಅನಂತರ ಅವರಿಗೆ ಹೇಳಿದೆ -‘ಒಂದು ಕೆಲಸ ಮಾಡಿ. ನಿಮಗೆ ಮೂಡು ಬಂದಾಗಲೇ ಬರೆಯಿರಿ. ಈ ಸಲದ ಯುಗಾದಿಗೆ ಮುನ್ನ ಕಳುಹಿಸಿದರೆ, ಈ ವರ್ಷವೇ ಬಳಸಿಕೊಳ್ಳುವೆ. ಇಲ್ಲವಾದರೆ ಮುಂದಿನ ವರ್ಷದ ಯುಗಾದಿಗೆ
ಬಳಸುವೆ. ಯಾವುದಕ್ಕೂ ಕಳುಹಿಸಿ.’ ಕೊನೆಗೂ ಅವರಿಂದ ಒಂದು ಕವನ ಬರೆಯಿಸಲು ನನ್ನಿಂದ ಸಾಧ್ಯವಾಗಲಿಲ್ಲ.
ಹಾವೇರಿಯಲ್ಲಿ ನಡೆಯುತ್ತಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಾಲು ಸಾಲು ಖ್ಯಾತನಾಮ ಸಾಹಿತಿ ಗಳನ್ನು ನೋಡಿದಾಗ ಈ ಎಲ್ಲ ಸಂಗತಿಗಳು ಮನಸಿಗೆ ಬಂದು ಹೋದವು!
ಪುಸ್ತಕ ಶೀರ್ಷಿಕೆ
ಕನ್ನಡದ ಖ್ಯಾತ ಕತೆಗಾರ ಎಂ.ವ್ಯಾಸ ಯಾವುದೇ ಕತೆ ಬರೆಯಲಿ, ಅದರ ಶೀರ್ಷಿಕೆ ಎರಡಕ್ಷರಗಳಿಗಿಂತ ಹೆಚ್ಚು ಇರುತ್ತಿರಲಿಲ್ಲ. ಅದು ಅವರ ಕತೆಗಳ ವೈಶಿಷ್ಟ್ಯ. ಅವರು ಶೀರ್ಷಿಕೆಯನ್ನು ಮೊದಲು ನಿರ್ಧರಿಸಿ ನಂತರ ಕತೆ ಬರೆಯುತ್ತಿದ್ದರೋ ಅನುಮಾನ ಹುಟ್ಟಿಸುವ ರೀತಿಯಲ್ಲಿ ಅವರ ಕತೆಗಳ ಶೀರ್ಷಿಕೆಗಳು ಆಸಕ್ತಿ ಹುಟ್ಟಿಸುತ್ತಿದ್ದವು. ಕತೆ ಓದಿದ ನಂತರ, ಶೀರ್ಷಿಕೆ ಎಷ್ಟು ಸೂಕ್ತವಾಗಿದೆ ಎಂದು ಅನಿಸುತ್ತಿತ್ತು.
ಅವರು ಏನಿಲ್ಲವೆಂದರೂ ಮೂನ್ನೂರಕ್ಕೂ ಹೆಚ್ಚು ಕತೆಗಳನ್ನು ಬರೆದಿರಬಹುದು. ಆ ಎಲ್ಲ ಕತೆಗಳ ಶೀರ್ಷಿಕೆಗಳು ಎರಡಕ್ಷರ ಗಳೇ! ಎರಡಕ್ಷರಗಳ ಕತೆ ಶೀರ್ಷಿಕೆ ಕಂಡರೆ ಅದು ವ್ಯಾಸ ಅವರ ಕತೆ ಎಂದು ತಟ್ಟನೆ ಹೇಳಬಹುದಿತ್ತು. ಎರಡಕ್ಷರಗಳ ಪದ
ಹೊಳೆಂiದಿರುವುದರಿಂದ ಅಥವಾ ಖಾಲಿಯಾಗಿದ್ದರಿಂದ ಅವರು ಕತೆ ಬರೆಯುವುದನ್ನು ನಿಲ್ಲಿಸಿರಬಹುದು ಎಂದು ನಾವು
ತಮಾಷೆ ಮಾಡುತ್ತಿದ್ದೆವು. ಅದು ಅವರ ವೈಶಿಷ್ಟ್ಯ. ಪುಸ್ತಕ ಪ್ರಿಯರಾದ ವೈಎನ್ಕೆ ಪುಸ್ತಕದ ಶೀರ್ಷಿಕೆ ಇಷ್ಟವಾದರೆ ಮಾತ್ರ ನೀವು ಅದನ್ನು ಖರೀದಿಸುತ್ತೀರಿ.
ಹೀಗಾಗಿ ಪುಸ್ತಕದ ಶೀರ್ಷಿಕೆ ಬ್ರಿಲಿಯಂಟ್ ಆಗಿರಬೇಕು ಎಂದು ಹೇಳುತ್ತಿದ್ದರು. ಲಿಯೋ ಟಾಲ್‌ಸ್ಟಾಯ್ ಅವರ War And Peace ಅವರ ದೃಷ್ಟಿಯಲ್ಲಿ ಅದ್ಭುತವಾದ ಶೀರ್ಷಿಕೆ. ಅಷ್ಟು ಕಡಿಮೆ ಪದಗಳಲ್ಲಿ ಯುದ್ಧ ಮತ್ತು ಶಾಂತಿಯಂಥ ಎರಡು ಮಹಾನ್ ಘಟನೆಗಳನ್ನು ವಿವರಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಿದ್ದರು. ವ್ಯಕ್ತಿಯಂತೆ ಪುಸ್ತಕ. ಹೀಗಾಗಿ ಒಂದೇ ಪದವಿರುವ ಶೀರ್ಷಿಕೆಯಿದ್ದರೆ ಹೆಚ್ಚು ಪರಿಣಾಮಕಾರಿ. ಎಲ್ಲಾ ಸಂದರ್ಭಗಳಲ್ಲಿ ಅದು ಸಾಧ್ಯವಾಗಲಿಕ್ಕಿಲ್ಲ. ಆಗ ಪುಸ್ತಕದ ಶೀರ್ಷಿಕೆಯಲ್ಲಿ ಮೂರರಿಂದ ಐದು ಪದಗಳಿರಬೇಕು ಎಂದು ಹೇಳುತ್ತಾರೆ. ಆಗ ಆ ಕೃತಿ ಓದಲು ಮತ್ತು ನೆನಪಿಟ್ಟುಕೊಳ್ಳಲು ಸಹಕಾರಿ. ಐದು ಪದಗಳಿಗಿಂತ ಹೆಚ್ಚಿದ್ದರೂ, ಡೇಲ್ ಕಾರ್ನೆಗಿ ಬರೆದ How To Win Friends And Influence People ಶೀರ್ಷಿಕೆ ಅತ್ಯಂತ ಪ್ರಭಾವಶಾಲಿ ಶೀರ್ಷಿಕೆ.
ಚುಯಿಂಗ್ ಗಮ್ ಕುರಿತು
ಸ್ವಲ್ಪವೂ ಎಳೆಯದೇ, ಲಂಬಿಸದೇ, ಚುಯಿಂಗ್ ಗಮ್ ಇತಿಹಾಸವನ್ನು ಕೇವಲ ಹದಿನೆಂಟು ಪುಟಗಳಲ್ಲಿ ವ್ರಿಗ್ಲೇಯ್ ಕಂಪನಿ ಹೊರತಂದಿದೆ. ಚುಯಿಂಗ್ ಗಮ್ ತಯಾರಿಕೆಯಲ್ಲಿ ಆ ಕಂಪನಿ ಲೀಡರ್. ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಚುಯಿಂಗ್ ಗಮ್‌ನ್ನು ಜಗತ್ತಿಗೆ ಪರಿಚಯಿಸಿದ ಅಗ್ಗಳಿಕೆ ವ್ರಿಗ್ಲೇಯ್ ಕಂಪನಿಗೇ ಸಲ್ಲಬೇಕು.
ಸುಮಾರು ಎರಡು ನೂರ ಇಪ್ಪತ್ತು (1800ರಲ್ಲಿ) ವರ್ಷಗಳ ಹಿಂದೆ, ಮೊದಲ ಬಾರಿಗೆ ಚುಯಿಂಗ್ ಗಮ್ ನ್ನು ಮಾರುಕಟ್ಟೆಗೆ
ಬಿಡುಗಡೆ ಮಾಡಲಾಯಿತು. ಆಗ ಅದು ಬರೆದ ರಬ್ಬರ್. ಅದಕ್ಕೆ ಸ್ವಾದವಿರಲಿಲ್ಲ. ಎರಡು ನಿಮಿಷಗಳ ನಂತರ ಅದನ್ನು ಅಗೆಯಲು ಅಥವಾ ಜಗಿಯಲು ಆಗುತ್ತಿರಲಿಲ್ಲ. ನಿಧಾನವಾಗಿ ಅದರ ತಯಾರಿಕೆ ನಿಂತು ಹೋಯಿತು. ಈ ಮಧ್ಯೆ ಕೆಲವು ಕಂಪನಿಗಳು ಚುಯಿಂಗ್ ಗಮ್ ತಯಾರಿಸಿದರೂ ಅದು ಯಶಸ್ವಿ ಆಗಲಿಲ್ಲ.
1891ನರಲ್ಲಿ ಮೊದಲ ಬಾರಿಗೆ ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಅಗೆಯುವುದನ್ನು ಜಗತ್ತಿನ ಹೊಸ ಅಭ್ಯಾಸವಾಗಿ ಪರಿವರ್ತಿಸುವಲ್ಲಿ ಯಶಸ್ವಿ ಆಯಿತು. ಅದೇನೂ ಪವಾಡ ಮಾಡಿರಲಿಲ್ಲ. ಮೊದಲಿನ ಚುಯಿಂಗ್ ಗಮ್‌ಗೆ ಸ್ವಾದವನ್ನು ಸೇರಿಸಿತು. ಬೇರೆ ಬೇರೆ ಹಣ್ಣುಗಳ ಮತ್ತು ಸೂಪರ್ ಮಿಂಟ್ ಸ್ವಾದವನ್ನು ಸೇರಿಸಿತು. ಇದು ಚುಯಿಂಗ್ ಗಮ್ ಗ್ರಹಚಾರ ವನ್ನೇ ಬದಲಿಸಿತು.
ಅದಾಗಿ ಸುಮಾರು ಐವತ್ತು ವರ್ಷಗಳ ನಂತರ, ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಸೇವಿಸಿದರೆ ಬಾಯಿ ಫ್ರೆಶ್ ಆಗುತ್ತದೆ
ಎಂಬ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿತು. ಅದು ಚುಯಿಂಗ್ ಗಮ್ ಅಗೆಯುವ ಉದ್ದೇಶಕ್ಕೆ ಹೊಸ ಅರ್ಥವನ್ನು
ನೀಡಿತು. Refresh your taste ಎಂಬ ಜಾಹೀರಾತು ಚುಯಿಂಗ್ ಗಮ್ ಅಗೆಯುವುದರ ಮೂಲಕ ಬಾಯಿಯನ್ನು ಫ್ರೆಶ್ ಮತ್ತು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶವನ್ನು ನೀಡಿತು. ಕಳೆದ ಇನ್ನೂರ ಇಪ್ಪತ್ತು ವರ್ಷಗಳಲ್ಲಿ ಚುಯಿಂಗ್ ಗಮ್ ಉತ್ಪಾದನೆಯಲ್ಲಿ ಆದ ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಕಡಿಮೆ.
ಆದರೆ, ಪ್ರತಿ ಸಲ ಹೊಸ ಬದಲಾವಣೆ ಮಾಡಿದಾಗ, ಅದರ ಮಾರಾಟದಲ್ಲಿ ಏರಿಕೆ ಕಂಡಿದೆ. ಚುಯಿಂಗ್ ಗಮ್ ತಿಂದರೆ ಹಸಿವು ನೀಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲ. ಆದರೆ, ಅದನ್ನು ತಿನ್ನದಿದ್ದರೆ ಕೆಲವರಿಗೆ ಹೊಟ್ಟೆ ತುಂಬಿದರೂ ಸಮಾಧಾನ ವಾಗುವುದಿಲ್ಲ. ಹಾಗಂತ ಇದು ಕೆಟ್ಟ ಅಭ್ಯಾಸ ಅಲ್ಲ, ಒಳ್ಳೆಯ ಅಭ್ಯಾಸವೂ ಅಲ್ಲ.
ಅರ್ಥವಿಲ್ಲದ ಮಾತುಗಳು
ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಮೂರ್ಖ ಪ್ರಶ್ನೆಯನ್ನು ಕೇಳುತ್ತೇವೆ. ಯಾರಾದರೂ ಸಿಕ್ಕಾಗ ಏನಾದರೂ ಮಾತಾಡ
ಬೇಕಲ್ಲ ಎಂದು ಬಾಯಿಗೆ ಬಂದಿದ್ದನ್ನು ಮಾತಾಡುತ್ತೇವೆ. ನಮಗೂ ಗೊತ್ತಿರುತ್ತದೆ, ಅಂಥ ಮಾತುಗಳಿಗೆ ಹೆಚ್ಚು ಅರ್ಥವಿಲ್ಲ ವೆಂದು. ಆದರೂ ನಾವು ಮಾತಾಡುತ್ತೇವೆ. ಮೂರ್ಖ ಪ್ರಶ್ನೆ ಯನ್ನು ಕೇಳುತ್ತೇವೆ. ಉದಾಹರಣೆಗೆ, ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಪರಿಚಿತರು ಕಾಯುತ್ತಿದ್ದಾರೆನ್ನಿ, ‘ಏನು ಇಲ್ಲಿ? ಆರೋಗ್ಯ ಸರಿ ಇಲ್ವಾ?’ ಅಂತ ಕೇಳುತ್ತೇವೆ.
ಆರೋಗ್ಯ ಸರಿ ಇದ್ದಿದ್ದರೆ, ಯಾರಾದರೂ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ಪಾಳಿ ಹಚ್ಚಿ ಕುಳಿತಿರುತ್ತಿದ್ದರಾ? ಕೆಲವರು ನಮ್ಮ ಮನೆಯ ಲ್ಯಾಂಡ್‌ಲೈನ್‌ಗೆ ಫೋನ್ ಮಾಡುತ್ತಾರೆ. ‘ಸಾರ್, ಎಲ್ಲಿದ್ದೀರಿ?’ ಅಂತ ಕೇಳ್ತಾರೆ. ಏನೆಂದು ಹೇಳುವುದು? ಆಗ ತಾನೆ ಮಳೆ ಸುರಿಯಲಾರಂಭಿಸಿದೆ ಅಂತ ಅಂದುಕೊಳ್ಳಿ, ತಕ್ಷಣ ಯಾರೋ ಎದುರಿಗೆ ಬಂದರು ಅಂತಿಟ್ಟುಕೊಳ್ಳಿ, ‘ಓಹೋ ಮಳೆಯಲ್ಲಿ ಹೊರಗೆ ಹೊರಟಿರಾ?’ ಅಂತ ಕೇಳ್ತಾರೆ.
ಆಗ ಏನು ಹೇಳೋದು? ಮನೆಯಲ್ಲಿ ಸ್ನಾನ ಮಾಡಿ ಬಾತ್‌ರೂಮ್‌ನಿಂದ ಹೊರಬರುವಾಗ, ‘ಓಹೋ! ಸ್ನಾನ ಆಯ್ತಾ?’ ಅಂತ ಕೇಳಿದರೆ, ಇಲ್ಲ, ಇಲ್ಲ, ಸಂಧ್ಯಾವಂದನೆಗೆ ಹೋಗಿದ್ದೆ ಅಂತ ಹೇಳಲಾಗುತ್ತದೆಯಾ? ಮೊನ್ನೆ ಹಾಗೇ ಆಯ್ತು, ಗ್ರೌಂಡ್ ಫ್ಲೋರ್ ನಲ್ಲಿ ನಿಂತು ಲಿಫ್ಟ್ ಗಾಗಿ ಕಾಯುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು, ‘ಏನ್ಸಾರ್, ಮೇಲಕ್ಕೆ ಹೋಗಬೇಕಾ?’ ಅಂತ ಕೇಳಿದರು. ‘ಇಲ್ಲ, ಕೆಳಕ್ಕೆ ಹೋಗೋಣ ಅಂತಿದ್ದೆ. ಆದರೆ ಮಹಡಿಗಳಿಲ್ಲವಲ್ಲ, ಏನು ಮಾಡೋದು? ಅದಕ್ಕಾಗಿ ಸುಮ್ಮನೆ ನಿಂತಿದ್ದೇನೆ’ ಅಂತ ಹೇಳಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತೋ ಏನೋ? ಇಂಥ ಮಾತುಗಳಿಗೆ ಹೆಚ್ಚಿನ ಉದ್ದೇಶವಾಗಲಿ, ಮಹತ್ವವಾಗಲಿ ಇಲ್ಲದಿರುವುದರಿಂದ ಅವುಗಳನ್ನು ಅಷ್ಟೇ ಲಘುವಾಗಿ ಪರಿಗಣಿಸುವುದು ವಾಡಿಕೆ.