Saturday, 23rd November 2024

ಊರಿಗೆ ಬಂದರೆ ದಾಸಯ್ಯ…ಬೈಕೇರಿಯೇ ಬಾ ಕಂಡ್ಯ ದಾಸಯ್ಯ !

ತಿಳಿರು ತೋರಣ

srivathsajoshi@yahoo.com

ಶಂಖ-ಜಾಗಟೆ ಜೋಳಿಗೆ ಅಷ್ಟೇ. ಮುಖದ ಮೇಲೆ ಗಂಧ ಕುಂಕುಮ ನಾಮಗಳಿಂದ ದೈವಿಕ ಕಳೆಯಂತೂ ಇದ್ದೇ ಇರುತ್ತಿತ್ತು. ಶಂಖ ಊದುತ್ತಿರುವಾಗಲೇ ಜಾಗಟೆಯನ್ನೂ ಬಾರಿಸುವ ಆತನ ಕರಾಮತ್ತು ಆಶ್ಚರ್ಯ ತರುತ್ತಿತ್ತು. ಆಮೇಲೆ ನಾನೂ ಮನೆಯಲ್ಲಿ ‘ಈಗೊಮ್ಮೆ ದಾಸಯ್ಯನ ಹಾಗೆ ಶಂಖ ಮತ್ತು ಜಾಗಟೆ ಒಟ್ಟೊಟ್ಟಿಗೇ ಬಾರಿಸುತ್ತೇನೆ’ ಎಂದು ಪ್ರಯತ್ನಿಸುತ್ತಿದ್ದದ್ದು ನೆನಪಿದೆ. ಬಹುಶಃ ನಗರದಲ್ಲಿ ದಾಸಯ್ಯರ ಸಂಖ್ಯೆ ಹೆಚ್ಚು, ಅವರು ಮನೆಗಳಿಗೆ ಬರುವ ಫ್ರೀಕ್ವೆನ್ಸಿಯೂ ಹೆಚ್ಚು.

ಅಣ್ಣಾವ್ರ ಅಭಿನಯದ ‘ದೂರದ ಬೆಟ್ಟ’ ಚಿತ್ರದಲ್ಲಿ ಮೊದಲ ದೃಶ್ಯದಲ್ಲೇ ದಾಸಯ್ಯ ಬರುತ್ತಾನೆ. ಮನೆಮನೆ ಸುತ್ತಾಡುತ್ತ ಆತ ಗೌರಿ(ಭಾರತಿ)ಯ ಮನೆಮುಂದೆ ಹೋದಾಗ ಗೌರಿಯ ಅಮ್ಮ ನಿನಗೇನೂ ಕೊಡೋಲ್ಲ ಹೋಗಾಚೆ ಎಂದು ಜರಿದು ಅವನನ್ನು
ಸಾಗ ಹಾಕುತ್ತಾಳೆ. ಆದರೆ ಗೌರಿ ಮತ್ತು ಅಪ್ಪ ಆತನ ಮೇಲೆ ಕರುಣೆತೋರಿ ಅಕ್ಕಿ ತಂದು ಸುರಿಯುತ್ತಾರೆ.

ಅಲ್ಲಿಂದ ಶಿವ(ಡಾ.ರಾಜ್)ನ ಮನೆಗೆ ಪಾದ ಬೆಳೆಸುತ್ತಾನೆ ದಾಸಯ್ಯ. ಅಲ್ಲಿ ಆತನಿಗೆ ಆತ್ಮೀಯ ಸ್ವಾಗತ. ಅಂದು ಯುಗಾದಿ ಹಬ್ಬ. ಒಬ್ಬಟ್ಟು ಮಾಡಲು ತಂದೆಗೆ ನೆರವಾಗುತ್ತ (ನಡುನಡುವೆ ಸ್ವಲ್ಪ ಹೂರಣ ಗುಳುಂ ಮಾಡುತ್ತ) ಇದ್ದ ಶಿವ ಹೊರಬಂದು ದಾಸಯ್ಯನಿಗೆ ಅಕ್ಕಿ ಕೊಡುತ್ತಾನೆ. ಅವನನ್ನು ಪ್ರೀತಿಯಿಂದ ಮಾತನಾಡಿಸುತ್ತಾನೆ. ಅಷ್ಟೇಅಲ್ಲ ದಾಸಯ್ಯ ನೊಡಗೂಡಿ ತಾನೂ ‘ದೇವ ದೇವೋತ್ತಮಾ… ದೇವತಾ ಸಾರ್ವಭೌಮಾ… ರಂಗಧಾಮಾ… ಪರಂಕೋಟಿಧಾಮಾ… ಅಖಿಲಾಂಡಕೋಟಿ ಬ್ರಹ್ಮಾಂಡನಾಯಕಾ… ಆದಿಮಧ್ಯಾಂತ ರಹಿತಾ… ಅನಂತಾವತಾರಾ… ಲಕ್ಷ್ಮೀರಮಣ ಗೋವಿಂದಾ… ಗೋವಿಂದಾ…’ ಎಂದು ರಾಗವಾಗಿ ಹೇಳುತ್ತಾನೆ. ದಾಸಯ್ಯನಿಂದ ಶಂಖ ಇಸ್ಕೊಂಡು ತಾನೂ ಅದನ್ನೊಮ್ಮೆ ಊದುತ್ತಾನೆ.

ಹಬ್ಬಹರಿದಿನಗಳ ಆಸುಪಾಸಿನಲ್ಲಿ, ಅಥವಾ ಕೆಲವೆಡೆ ವಾರದ ನಿರ್ದಿಷ್ಟ ದಿನಗಳಂದು ಮನೆಗೆ ದಾಸಯ್ಯ ಬರುವುದು ನಮ್ಮಲ್ಲ ನೇಕರಿಗೆ ಸಿಹಿ ನೆನಪು. ಕಚ್ಚೆ-ಪಂಚೆ, ತಲೆಗೊಂದು ಪೇಟ ಅಥವಾ ಮುಂಡಾಸು, ಹಣೆಯಲ್ಲಿ ಮೂರು ನಾಮ, ಹೆಗಲಿಗೆ ಜೋತು ಹಾಕಿಕೊಂಡ ದಾರಕ್ಕೆ ಕಟ್ಟಿದ ಶಂಖ, ಜಾಗಟೆ. ಕಂಕುಳಿಗೆ ನೇತು ಹಾಕಿಕೊಂಡ ಭಿಕ್ಷಾಪಾತ್ರೆ- ಇದಿಷ್ಟು ದಾಸಯ್ಯನ ಮಿನಿಮಮ್ ವೇಷಭೂಷಣ. ಮತ್ತೆ ಕೆಲವು ಪ್ರಾದೇಶಿಕವಾಗಿ ವ್ಯತ್ಯಾಸಗಳು ಅಥವಾ ಹೆಚ್ಚುವರಿ ಪರಿಕರಗಳೂ ಇರಬಹುದು.

ದೂರದ ಬೆಟ್ಟ ಸಿನಿಮಾದಲ್ಲಿದ್ದ ದಾಸಯ್ಯನಿಗಿದ್ದಂತೆ ಕೈಯಲ್ಲಿ ಭಾಂಕಿ ಎಂಬ ಇನ್ನೊಂದು ವಾದ್ಯ, ದೀಪದ ಹಣತೆಯಂತೆ
ಕಾಣುವ ಗರುಡಗಂಬ, ದೇವರ ಮೂರ್ತಿಯಿರುವ ಅಂಗೈ ಅಗಲದ ಹಿತ್ತಾಳೆಯ ಹರಿವಾಣ ಇತ್ಯಾದಿ. ಭಿಕ್ಷಾಪಾತ್ರೆಯು ಸಾಮಾನ್ಯ ವಾಗಿ ತಾಮ್ರದ್ದಾಗಿರುತ್ತದೆ ಮತ್ತು ಅದಕ್ಕೆ ಭವನಾಶಿ (ಆಡುಮಾತಿನಲ್ಲಿ ಬವನಾಸಿ) ಎಂದು ಹೆಸರು. ಹಣೆಗಷ್ಟೇ ಸಾಲದೆಂದು ಬವನಾಸಿ ಭಿಕ್ಷಾಪಾತ್ರೆಗೂ, ಗರುಡಗಂಬಕ್ಕೂ ನಾಮ ಎಳೆದು ಹೂವೇರಿಸಿ ಸಿಂಗರಿಸುವುದೂ ಉಂಟು.

ದಾಸಯ್ಯನು ಮನೆಮುಂದೆ ಬಂದು ನಿಂತು ಶಂಖ-ಜಾಗಟೆ ಬಾರಿಸಿ, ಒಂದಷ್ಟು ಮುಣುಮುಣು ಮಂತ್ರ ಜಪಿಸಿದಂತೆ ಮಾಡಿ, ಶ್ರೀಮದ್ರಮಾರಮಣ ಗೋವಿಂದಾ… ಎಂದು ಏರುದನಿಯಲ್ಲಿ ರಾಗವೆಳೆದು ಹೇಳಿದನೆಂದರೆ ಆಯ್ತು ಮನೆಯೊಡತಿಯು ಗೆರಸೆ ಯಲ್ಲಿ ಅಕ್ಕಿಯನ್ನೋ, ರಾಗಿ ಹಿಟ್ಟನ್ನೋ ತಂದು ಬವನಾಸಿಯಲ್ಲಿ ಸುರಿಯುವಳು. ದಾಸಯ್ಯನು ಗರುಡಗಂಬದ ಮಸಿ ಯನ್ನು ಆ ಹೆಂಗಸಿನ ಹಣೆಗೆ ಹಚ್ಚಿ ಹರಸುವನು.

ದಾಸಯ್ಯನಿಗೆ ಯಾವ ಮನೆಗಳಲ್ಲಿ ಎಂತಹ ಸ್ವಾಗತ ಸಿಗುತ್ತದೆನ್ನುವುದೂ ದೂರದ ಬೆಟ್ಟ ಸಿನಿಮಾದಲ್ಲಿ ತೋರಿಸಿದಂತೆಯೇ: ಕೆಲವು ಮನೆಗಳಲ್ಲಿ ಉಷ್ಣ ವಲಯ, ಕೆಲವೆಡೆ ಶೀತವಲಯ, ಮತ್ತೆ ಕೆಲವೆಡೆ ಸಮಶೀತೋಷ್ಣವಲಯ. ಎಲ್ಲಿ ಹೇಗೆ ಎಂದು ಗೊತ್ತಿ ದ್ದರೂ ಆತ ಮನೆಮನೆಗೆ ಹೋಗದೇ ಇರುವುದಿಲ್ಲ. ಮನೆಯವರೂ ಆತನನ್ನು ನಿರೀಕ್ಷಿಸದೆ ಇರುವುದಿಲ್ಲ.

ದಾಸಯ್ಯ ಮತ್ತು ಗರುಡಗಂಬದ ವಿಚಾರ ಬಂದಾಗ ಗೊರೂರು ರಾಮಸ್ವಾಮಿ ಅಯ್ಯಂಗಾರರ ಸುಪ್ರಸಿದ್ಧ ಲಲಿತ ಪ್ರಬಂಧ ‘ಗರುಡಗಂಬದ ದಾಸಯ್ಯ’ ನೆನಪಾಗಲೇಬೇಕು. ‘ನಮ್ಮ ಊರಿನ ಹೊಲಗೇರಿಯ ಆದಿಕರ್ಣಾಟಕರು ಬಹಳ ದಿವಸಗಳಿಂದ ಭಜನೆಗೆ ಬೇಕಾಗುವ ಗರುಡಗಂಬ ಒಂದನ್ನು ತರಿಸಿಕೊಡಿ ಅಂತ ಹೇಳ್ತಾ ಇದ್ರು. ನಾನೂ ಆಗ್ಲಿ ಅಂತ ಹೇಳ್ತಾ ಒಂದೂವರೆ ವರುಷ ತಳ್ಳಿದೆ…’ ಎಂದು ಆರಂಭವಾಗುವ ಕಥಾನಕದಲ್ಲಿ ಸ್ನೇಹಿತ ಶಂಕರಪ್ಪನ ಶಿಫಾರಸಿನಂತೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಒಬ್ಬ ಸಾಧುವಿನ ಬಳಿಯಿಂದ ಹತ್ತು ಆಣೆಗೆ ಗರುಡಗಂಬ ಖರೀದಿಸಿ ಅಲ್ಲಿಂದ ಅದನ್ನು ಊರಿಗೆ ತರುವಲ್ಲಿವರೆಗಿನ ಪೇಚಿನ, ಮುಜುಗರದ ಪ್ರಸಂಗಗಳನ್ನು ಗೊರೂರರು ಮನೋಜ್ಞವಾಗಿ ಬಣ್ಣಿಸಿದ್ದಾರೆ.

ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಮಲ್ಲೇಶ್ವರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಜನರು ಅವರನ್ನೊಬ್ಬ ದಾಸಯ್ಯನೆಂದೇ ತಿಳಿದು ಕೊಂಡರೇನೋ ಅಂತ ಅವರಿಗೆ ಅನಿಸಿತಂತೆ. ‘ಇವನಿಗೆ ಜೋಳಿಗೆ ಜಾಗಟೆ ಇಲ್ಲ. ಆದರೂ ಇವನು ದಾಸಯ್ಯನೇ ಸಂದೇಹವಿಲ್ಲ’ ಅಂತ ಜನರು ಯೋಚಿಸಿರಬಹುದೆಂದು ಗೊರೂರರ ಊಹೆ. ‘ನನ್ನ ವೇಷವೇನೋ ಸ್ವಲ್ಪ ಮಟ್ಟಿಗೆ ಜಾಗಟೆ-ಜೋಳಿಗೆಯ ಗುರುವಿಗೆ ಸಮಾನವಾಗಿಯೇ ಇದ್ದಿತು. ಮಾಸಿದ ಒಂದು ಬಿಳಿಯ ಖಾದಿ ದಟ್ಟಿ, ಮಿತಿಮೀರಿ ಬೆಳೆದ ದೇಹಕ್ಕೆ, ಬಿಗಿಯಾಗಿ ಮೇಲಕ್ಕಾಗಿದ್ದ ಒಂದು ಅಂಗಿ.

ಅದರ ಮೇಲೆ ಹೊದ್ದುಕೊಂಡಿದ್ದ ಕೊಳೆಯಾದ ಅಂಗವಸ್ತ್ರ, ಹೆಗಲಮೇಲೆ ನೇತಾಡುತ್ತಿದ್ದ ಅದರ ತುದಿಯಲ್ಲಿ ಕಟ್ಟಿದ್ದ ಸೌತೆ ಕಾಯಿಯ ಗಂಟು. ಮುಖಕ್ಷೌರ ಮಾಡಿಸದೆ ಬೆಳೆಸಿದ್ದ ಚೂಪಾದ ಅರದಂತಿದ್ದ ಕರಿಯಗಡ್ಡ. ಆಗಿನ ನನ್ನ ವೇಷವೈಚಿತ್ರ್ಯ ಹಾಗಿತ್ತು’ ಎಂದು ಜನರ ಊಹೆಗೆ ಸಮರ್ಥನೆಯನ್ನೂ ಅವರೇ ಕೊಟ್ಟುಕೊಂಡಿದ್ದಾರೆ. ಜನರೆಲ್ಲ ಗರುಡಗಂಬದತ್ತಲೇ ನೋಡಿ ತನ್ನನ್ನು ಹಾಸ್ಯಮಾಡುತ್ತಿದ್ದಾರೆಂದು ಅವರಿಗೆ ಚಿಂತೆ. ಹಾಳಾದ್ದನ್ನ ಬಟ್ಟೆಯಲ್ಲಾದರೂ ಸುತ್ತಿಕೊಳ್ಳೋಣ ಎಂದರೆ ಅದು ಎಣ್ಣೆಮಯವಾಗಿದ್ದುದರಿಂದ ಅದಕ್ಕೂ ಅವಕಾಶವಿರಲಿಲ್ಲ. ಅಂತೂ ಮಲ್ಲೇಶ್ವರದ ಸಂಪಿಗೆ ರಸ್ತೆಯ ಗಲ್ಲಿಯಲ್ಲಿ ಹಾದು ಅವರ ಒಬ್ಬ ಸ್ನೇಹಿತನ ಕೊಠಡಿಗೆ ಹೋಗಿ ಅದನ್ನಿಟ್ಟು ಉಸ್ಸಪ್ಪಾ ಎನ್ನುತ್ತಾರೆ.

ಆ ಸ್ನೇಹಿತನ ಕೊಠಡಿಗೋ ಪದೇ ಪದೇ ಜನರು ಬಂದುಹೋಗಿ ಮಾಡುತ್ತಿದ್ದರು. ಅವರಿಗೂ ಗರುಡಗಂಬದ ಮೇಲೆ ಕಣ್ಣು. ಅದು
ಹೇಗೆ ಅಲ್ಲಿಗೆ ಬಂತೆಂಬ ಕೆಟ್ಟ ಕುತೂಹಲ. ‘ಹಾಳಾದ ದಾಸಯ್ಯ ಯಾರಯ್ಯಾ ನಿನಗೆ ಗಂಟುಬಿದ್ದೋನು?’ ಎಂದು ಆ ಸ್ನೇಹಿತ ನನ್ನು ಜನರು ಗೊರೂರರೆದುರೇ ಕೇಳತೊಡಗಿದರಂತೆ. ಸ್ನೇಹಿತನೂ ಗೊರೂರರೂ ತುಟಿಪಿಟಿಕ್ಕೆನ್ನದೆ ಕೂತರು. ‘ಗರುಡಗಂಬದ ಮೇಲೆ ಕೆಲವು ಕಾಗದಗಳನ್ನಾದರೂ ಮುಚ್ಚೋಣವೆಂದರೆ ಜನರು ಆ ಕೊಠಡಿ ಬಿಟ್ಟು ಹೊರಡ್ತಾನೇ ಇಲ್ಲ. ಅವರೆದುರಿಗೇ
ಮುಚ್ಚಿದರೆ ನಾನೇ ಎಂದು ಅವರಿಗೆ ಪೂರ್ತಾ ಗೊತ್ತಾಗುತ್ತದಲ್ಲ ಎಂಬ ಭಯದಿಂದ ನಾನು ಮುಚ್ಚಲೇ ಇಲ್ಲ…’ ಎನ್ನುವ
ಗೊರೂರರ ಪೇಚಾಟ ಕಣ್ಣಿಗೆ ಕಟ್ಟಿದಂತಿದೆ.

ರಾತ್ರಿ ಹತ್ತು ಗಂಟೆಗೆ ರೈಲು. ಒಂಬತ್ತೂವರೆ ತನಕವೂ ಆ ಕೊಠಡಿಯಲ್ಲಿ ಜನರು ಠಳಾಯಿಸುತ್ತಲೇ ಇದ್ದರಂತೆ. ಅಂತೂ ವಿಧಿ ಯಿಲ್ಲದೆ ಕೊನೆಗೆ ಅವರೆದುರಿಗೇ ಗರುಡಗಂಬವನ್ನೆತ್ತಿಕೊಂಡು ಗೊರೂರರು ಹೊರಟರು ರೈಲ್ವೇಸ್ಟೇಷನ್‌ಗೆ. ರೈಲಿನಲ್ಲಾದರೂ ಹಾಯಾಗಿರಲಿಕ್ಕಾಯ್ತೇ? ಇಲ್ಲ! ಗೊರೂರರು ಗರುಡಗಂಬವನ್ನು ಸೀಟಿನ ಅಡಿಯಲ್ಲಿಟ್ಟಿದ್ದರು. ಎದುರುಗಡೆಯ ದಢೂತಿ ಆಸಾಮಿ ಯೊಬ್ಬ ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದನಂತೆ. ಅವನೂ ಈತನೊಬ್ಬ ದಾಸಯ್ಯನೆಂದು ತಿಳಿಯದಿರಲೆಂದು ಗೊರೂರರು ಅವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಪ್ರಾರಂಭಿಸಿದರಂತೆ.

ಆದರೂ ಅವನು ಅವರ ವಿಷಯದಲ್ಲಿ ಅಸಮಾಧಾನದಿಂದಲೇ ಮುಖ ಗಂಟುಹಾಕಿಕೊಂಡಿದ್ದನಂತೆ. ಕ್ಲೈಮಾಕ್ಸ್ ಇನ್ನೂ ಮಜಾ
ಇದೆ! ‘ಆ ಹಾಳಾದ ಗರುಡಗಂಬವನ್ನು ತಲೆಕೆಳಗಾಗಿ ಹಿಡಿದುಕೊಂಡು ನಮ್ಮೂರ ಸ್ಟೇಷನ್ನಿನಲ್ಲಿ ಇಳಿದು, ಆದಿಕರ್ಣಾಟಕದ ಭಜನೆಮಂದಿರದ ಕಡೆಗೆ ಓಡುತ್ತಿದ್ದೆ. ಸ್ಟೇಷನ್ ಮಾಸ್ಟರು… ‘ಅದ್ಯಾರೋ ದಾಸಯ್ಯ ಟಿಕೆಟ್ಟಿಲ್ಲದೆ ಆಕಡೆಯಿಂದ ಓಡ್ತಿರೋನು?’ ಎಂದು ಕೂಗಿದನು. ನನ್ನ ಹೊಟ್ಟೆಯಲ್ಲಿ ಅಡಗಿದ್ದ ಸಿಟ್ಟೆಲ್ಲವೂ ಹೊರಗೆ ಬಂದು ‘ನಿಮ್ಮಪ್ಪ ದಾಸಯ್ಯ’ ಎಂದು ಟಿಕೆಟ್ಟನ್ನು ಎಸೆದು ದೆವ್ವ ಹಿಡಿಯಲ್ಪಟ್ಟವನಂತೆ ಮನೆಗೆ ಓಡಿಹೋದೆನು.’ – ಗೊರೂರರ ಈ ಹಾಸ್ಯಪ್ರಬಂಧವು ಬಹುಶಃ ಕೆಲವು ಪಠ್ಯಪುಸ್ತಕಗಳನ್ನೂ ಅಲಂಕರಿಸಿದೆಯೆಂದು ಕಾಣುತ್ತದೆ.

ಅವರ ಪ್ರಬಂಧಸಂಕಲನಕ್ಕಂತೂ ‘ಗರುಡಗಂಬದ ದಾಸಯ್ಯ’ ಎಂದೇ ಹೆಸರು. ಮುಖಪುಟ ಸಹ ಗರುಡಗಂಬ ಹಿಡಿದುಕೊಂಡ
ಒಬ್ಬ ದಾಸಯ್ಯನ ಚಿತ್ರ. ಅಷ್ಟಾಗಿ ಆ ಬರಹವಿರುವುದು ದಾಸಯ್ಯರ ಬಗ್ಗೆ ಅಲ್ಲ. ತನ್ನನ್ನು ಒಬ್ಬ ದಾಸಯ್ಯನೆಂದು ಜನರೆಲ್ಲ ತಿಳಿದುಕೊಂಡರೇನೋ ಎಂಬ ಕಲ್ಪನೆಯನ್ನು ಗೊರೂರರು ಒಂದು ಸ್ವಾರಸ್ಯಕರ ಲಹರಿಯಾಗಿಸಿದ್ದು ಅಷ್ಟೇ. ನಮ್ಮೂರಲ್ಲಿ ಹಿಂದೆಲ್ಲ ವರ್ಷಕ್ಕೊಮ್ಮೆ, ಚೌತಿಯ ವೇಳೆ ಅಥವಾ ನವರಾತ್ರದಿಂದ ದೀಪಾವಳಿವರೆಗಿನ ಅವಧಿಯಲ್ಲಿ ದಾಸಯ್ಯ ಬರುತ್ತಿದ್ದನು. ಆತನ ಬಳಿ ಗರುಡಗಂಬ, ಭಾಂಕಿ, ಭವನಾಶಿಗಳೆಲ್ಲ ಇರುತ್ತಿರಲಿಲ್ಲ.

ಶಂಖ-ಜಾಗಟೆ ಮತ್ತೊಂದು ಜೋಳಿಗೆ ಅಷ್ಟೇ. ಮುಖದ ಮೇಲೆ ಗಂಧ ಕುಂಕುಮ ನಾಮಗಳಿಂದ ದೈವಿಕ ಕಳೆಯಂತೂ ಇದ್ದೇ ಇರುತ್ತಿತ್ತು. ಶಂಖ ಊದುತ್ತಿರುವಾಗಲೇ ಜಾಗಟೆಯನ್ನೂ ಬಾರಿಸುವ ಆತನ ಕರಾಮತ್ತು ನಮಗೆ ಆಶ್ಚರ್ಯ ತರುತ್ತಿತ್ತು. ಆಮೇಲೆ ನಾನೂ ಮನೆಯಲ್ಲಿ ‘ಈಗೊಮ್ಮೆ ದಾಸಯ್ಯನ ಹಾಗೆ ಶಂಖ ಮತ್ತು ಜಾಗಟೆ ಒಟ್ಟೊಟ್ಟಿಗೇ ಬಾರಿಸುತ್ತೇನೆ’ ಎಂದು ಪ್ರಯತ್ನಿಸು ತ್ತಿದ್ದದ್ದು ಚೆನ್ನಾಗಿ ನೆನಪಿದೆ.

ಬಹುಶಃ ನಗರಪ್ರದೇಶಗಳಲ್ಲಿ ದಾಸಯ್ಯರ ಸಂಖ್ಯೆ ಹೆಚ್ಚು, ಅವರು ಮನೆಗಳಿಗೆ ಬರುವ ಫ್ರೀಕ್ವೆನ್ಸಿಯೂ ಹೆಚ್ಚು. ಒಂದೊಂದು
ಬಡಾವಣೆ ಒಬ್ಬೊಬ್ಬ ದಾಸಯ್ಯನಿಗೆ ಎಂದು ಅವರಲ್ಲೇ ಹಂಚಿಕೊಂಡಿರುತ್ತಾರೆ. ಅಥವಾ, ಇಂಥಿಂಥ ಊರಿನ ದಾಸಯ್ಯನಿಗೆ ಈಎಲ್ಲ ಮನೆಗಳು ಅಂತ ಲೆಕ್ಕವಿರಬಹುದು. ‘ಜನಪದ ಸಮಾಜದಲ್ಲಿ ದಾಸಯ್ಯನೇ ಪುರೋಹಿತ. ಮನೆಯ ಸೂತಕ-ಪಾತಕ ಕಳೆಯಲು, ಮನೆಮಠ ಶುದ್ಧಿ ಮಾಡಲು, ನಾಮಕರಣ ಇತ್ಯಾದಿ ವಿಧಿಗಳನ್ನು ನೆರವೇರಿಸಲಿಕ್ಕೂ ಈತ ಬೇಕು. ಜನತೆಗೆ ಮಡಿ ಮೈಲಿಗೆಗಳನ್ನು ಕಲಿಸುವಲ್ಲಿ ತಕ್ಕಮಟ್ಟಿಗೆ ಈತ ಮಾರ್ಗದರ್ಶಕನಾಗುತ್ತಾನೆ.

ದಾಸಯ್ಯರೆಲ್ಲ ಮೂಲದಲ್ಲಿ ತಿರುಪತಿಯವರು. ವೆಂಕಟೇಶ್ವರ ಇವರ ಕುಲದೇವರು. ಶತಮಾನಗಳ ಹಿಂದೆ ವಲಸೆ ಬಂದು,
ಕರ್ನಾಟಕದ ಬೇರೆಬೇರೆ ಪ್ರದೇಶಗಳಲ್ಲಿ ನೆಲೆನಿಂತು ಕಲಾವೃತ್ತಿಯನ್ನು ನಡೆಸುತ್ತ ಬದುಕು ಸಾಗಿಸತೊಡಗಿದರು. ನೀವ್ಯಾವೂರು ದಾಸಯ್ಯ ಅನ್ನೋರಿಲ್ಲ ಎಂಬ ಗಾದೆ ಇವರ ಜನಪ್ರಿಯತೆಗೆ ಸಾಕ್ಷಿ’ ಎನ್ನುತ್ತದೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ. ಅಂದಹಾಗೆ ಯಾವೂರ ದಾಸಯ್ಯ ಎನ್ನುವ ನುಡಿಗಟ್ಟು ಕರ್ನಾಟಕದ ರಾಜಕಾರಣಿಗಳ ಕೊಳಕುಬಾಯಲ್ಲೂ ಆಗಾಗ ಬರುವುದಿದೆ. ‘ದೇವೇಗೌಡರ ಮೇಲೆ ಆಣೆ ಮಾಡೆನ್ನಲು ನೀನು ಯಾವೂರ ದಾಸಯ್ಯ? ಸಿದ್ದು ಮೇಲೆ ಎಚ್ಡಿಕೆ ಆಕ್ರೋಶ’, ‘ನಾನು ಯಾವೂರ ದಾಸಯ್ಯ, ವರಿಷ್ಠರ ನಿರ್ಧಾರಕ್ಕೆ ಬದ್ಧ: ಈಶ್ವರಪ್ಪ’ ಮುಂತಾದ ತಲೆಬರಹಗಳು ಮುಖಪುಟದಲ್ಲಿ ರಾಚಿ ಅಸಹ್ಯ ಹುಟ್ಟಿಸುತ್ತವೆ.

ದಾಸಯ್ಯನೆಂದರೆ ಅಷ್ಟೂ ಸಸಾರವೇ? ಅಲ್ಲವೆನ್ನುತ್ತದೆ ಮೊನ್ನೆ ನಾನು ನೋಡಿದ ಒಂದು ವಿಡಿಯೊ ತುಣುಕು, ವಾಟ್ಸ್ಯಾಪ್‌ನಲ್ಲಿ
ಫಾರ್ವರ್ಡ್ ಆಗಿ ಬಂದದ್ದು. ಅದರಲ್ಲೊಬ್ಬ ಮಾಡರ್ನ್ ದಾಸಯ್ಯ, ಬೈಕ್ ಸವಾರನಾಗಿ ಮನೆಮನೆ ಸುತ್ತಾಡುವವನು. ತಲೆಗೆ ಮುಂಡಾಸು, ಹಣೆ ಮೇಲೆ ನಾಮ, ಕೊರಳಲ್ಲಿ ಹೂಮಾಲೆ, ಮಡಿ ಕಚ್ಚೆ-ಪಂಚೆ. ಠಾಕುಠೀಕಾಗಿ ದಾಸಯ್ಯನದೇ ವೇಷಭೂಷಣ. ಗರುಡಗಂಬವನ್ನೂ, ತಾಮ್ರದ ಭವನಾಶಿ ಪಾತ್ರೆಯನ್ನೂ ಬೈಕಿಗೇ ಮುಂದೆ ಕಟ್ಟಲಾಗಿದೆ. ಅದರ ಕೆಳಗೆಯೇ ಒಂದು ಧ್ವನಿವರ್ಧಕ ಇದೆ. ಶಂಖ-ಜಾಗಟೆ, ಸಂಕೀರ್ತನೆ, ಲಕ್ಷ್ಮೀರಮಣಗೋವಿಂದಾ… ಎಲ್ಲ ಆ ಲೌಡ್‌ಸ್ಪೀಕರ್‌ನಲ್ಲೇ ಮೊಳಗುತ್ತವೆ.

ದಾಸಯ್ಯನು ಮನೆಯಿಂದ ದೂರದಲ್ಲಿ ಬೈಕ್ ನಿಲ್ಲಿಸಿ ಆಮೇಲೆ ಕಾಲ್ನಡಿಗೆಯಲ್ಲಿ ಬರೋದೆಲ್ಲ ಅಲ್ಲ. ಬಾಗಿಲವರೆಗೂ ಬೈಕಲ್ಲೇ ಬರುತ್ತಾನೆ. ಬೈಕಿಂದ ಇಳಿಯುವುದೂ ಇಲ್ಲ! ಮನೆ ಹತ್ತಿರವಾಗುತ್ತಿದ್ದಂತೆ ಧ್ವನಿವರ್ಧಕ ಸ್ವಿಚ್‌ಆನ್ ಮಾಡುತ್ತಾನೋ ಏನೋ. ಅದು ಅರಚುತ್ತದೆ. ಮನೆಯೊಡತಿ ಒಳಗಿಂದ ಬಂದು ಬೈಕಾರೂಢನ ಭವನಾಶಿಯಲ್ಲಿ ಬೊಗಸೆ ಧಾನ್ಯ ಸುರಿಯುತ್ತಾಳೆ. ಪಕ್ಕದಲ್ಲೇ ಇರುವ ಚಿಕ್ಕದೊಂದು ತಟ್ಟೆಯಿಂದ ಪ್ರಸಾದವೆಂದು ಗಂಧವನ್ನೋ ಕುಂಕುಮವನ್ನೋ ತಾನೇ ಹಣೆಗೆ ಹಚ್ಚಿಕೊಳ್ಳುತ್ತಾಳೆ.

ಬೈಕಾರೂಢ ದಾಸಯ್ಯ ಭುರ್ರೆಂದು ಅಲ್ಲಿಂದ ಹೊರಟು ನೆಕ್ಸ್ಟ್ ಮನೆಗೆ ಹೋಗುತ್ತಾನೆ. ಇದು ಛದ್ಮವೇಷ ಅಲ್ಲ; ಟಿಕ್‌ಟಾಕ್ ಅಥವಾ ರೀಲ್ ವಿಡಿಯೊ ಅಲ್ಲ; ದಾಸಯ್ಯ ವೃತ್ತಿಯು ಆಧುನಿಕತೆಯನ್ನು ಅಪ್ಪಿಕೊಂಡ ರೀತಿ! ನನಗೆ ‘ನಾರದ ವಿಜಯ’ದಲ್ಲಿ ನಾರದ(ಅನಂತನಾಗ್) ಬೆಂಗಳೂರಿನ ಬೀದಿಗಳಲ್ಲಿ ಬೈಸಿಕಲ್ ಮೇಲೆ ತಿರುಗಾಡುವ ದೃಶ್ಯ ನೆನಪಿಗೆ ಬಂತು. ಮಾತ್ರವಲ್ಲ, ಇದು ಅದಕ್ಕಿಂತಲೂ ಹೈಟೆಕ್ ಎಂದು ಅನಿಸಿತು.

ಒಮ್ಮೆ ಯೋಚಿಸೋಣ. ಯಾಕೆ ಕೂಡದು? ಏಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪದ್ಮನಾಭನಗರದಲ್ಲಿ ನನ್ನ ಮಾವನ ಮನೆಯ ಹತ್ತಿರ ಒಬ್ಬ ಹೂ ಮಾರುವವನ ಹೈಟೆಕ್ ತಂತ್ರವನ್ನು ಪ್ರತ್ಯಕ್ಷ ಕಂಡಿದ್ದೆ. ಅವನದೊಂದು ಮಿನಿಸಂದರ್ಶನ ನಡೆಸಿ ವಿಡಿಯೊವನ್ನು ಫೇಸ್‌ಬುಕ್ ಗೋಡೆಗೇರಿಸಿದ್ದೆ. ಜೊತೆಗೊಂದು ಟಿಪ್ಪಣಿ: ‘ಈತನ ಹೆಸರು ಸೋಮಣ್ಣ. ಪದ್ಮನಾಭನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಕಲ್ ಮೇಲೆ ಹೂವಿನ ಬುಟ್ಟಿ ಇಟ್ಟುಕೊಂಡು ವ್ಯಾಪಾರ ಮಾಡಿ ಜೀವನ.

ಸೇವಂತಿಗೆ ಮಲ್ಲಿಗೆ ಕನಕಾಂಬರ ಹೂವಾ… ಎಂದು ಕೂಗಿಕೂಗಿ ಗಿರಾಕಿಗಳನ್ನು ಆಕರ್ಷಿಸಬೇಕಾದ ಅನಿವಾರ್ಯ. ವರ್ಷಗಟ್ಟಲೇ
ಹಾಗೆ ಕೂಗಿದ್ದರಿಂದ ಗಂಟಲಿನ ಧ್ವನಿನಾಳಗಳು ಸವೆದವು. ನೋವು ಶುರುವಾಯಿತು. ಡಾಕ್ಟರರಿಗೆ ತೋರಿಸಿದರೆ ಅವರು ಶಸ್ತ್ರಚಿಕಿತ್ಸೆ ಆಗಬೇಕು, ಲಕ್ಷ ರೂಪಾಯಿ ತಗುಲಬಹುದು ಎಂದರು. ಹೂ ಮಾರಿಕೊಂಡು ಹೊಟ್ಟೆಹೊರೆವವನ ಬಳಿ ಲಕ್ಷ ಎಲ್ಲಿಂದ ಬರಬೇಕು? ಕೂಗುವುದನ್ನು ನಿಲ್ಲಿಸಿದರೆ ಹೂವಿನ ವ್ಯಾಪಾರ ಅಸಾಧ್ಯ. ಯಾರೋ ಆಯುರ್ವೇದ ವೈದ್ಯರಲ್ಲಿ ತೋರಿಸಿ ನೋಡಿ ಎಂದರಂತೆ. ಔಷಧವನ್ನೇನೋ ಕೊಡಬಲ್ಲೆ, ಆದರೆ ಕೂಗನ್ನು ಮುಂದುವರಿಸುವುದು ಒಳ್ಳೆಯದಲ್ಲ, ಪರ್ಯಾಯ ವ್ಯವಸ್ಥೆ ಏನಾದರೂ ಕಂಡುಕೊಳ್ಳಿ ಎಂದು ಸಲಹೆ ಕೊಟ್ಟರು ಆಯುರ್ವೇದ ವೈದ್ಯರು. ಸರಿ, ಸೋಮಣ್ಣನಿಗೆ ಒಂದು ಐಡಿಯಾ ಹೊಳೆಯಿತು!

ರೋಜಾ ಹೂವಾ ಸೇವಂತಿಗೆ ಮಲ್ಲಿಗೆ ಕನಕಾಂಬರ ಹೂವೂ… ಎಂಬ ತನ್ನ ಕೂಗನ್ನು ಧ್ವನಿಮುದ್ರಣ ಮಾಡಿ ಅದನ್ನೇ ಪ್ಲೇ
ಮಾಡಿದರೆ ಹೇಗೆ!? ಆಲೋಚನೆ ಬಂದದ್ದೇ ತಡ ಒಂದು ಸ್ಟುಡಿಯೋಗೆ ಹೋಗಿ ಆಡಿಯೊ ರೆಕಾರ್ಡಿಂಗ್ ಮಾಡಿಸಿದ್ದಾಯ್ತು. ಎಂಪಿತ್ರೀ -ಲನ್ನು ಥಂಬ್‌ಡ್ರೈವ್‌ನಲ್ಲಿ ಶೇಖರಿಸಿದ್ದೂ ಆಯ್ತು. ಸೈಕಲ್‌ಗೆ ಒಂದು ಎಫ್‌ಎಂ ರೇಡಿಯೊಸೆಟ್ ಅಳವಡಿಸಿ ಅದಕ್ಕೆ ಈ ಥಂಬ್‌ಡ್ರೈವ್ ಸೇರಿಸಿ ಪ್ಲೇ ಮಾಡಿದ್ದಾಯ್ತು. ಈಗ ಸೋಮಣ್ಣ ಹೂವು ಮಾರಲು ಸೈಕಲ್ ಮೇಲೆ ಹೊರಟನೆಂದರೆ ಗಂಟಲುಬಿಟ್ಟು ಕಿರುಚಬೇಕಿಲ್ಲ. ಸೈಕಲ್‌ಗೆ ಅಳವಡಿಸಿದ ರೇಡಿಯೊಸೆಟ್ ಆನ್ ಮಾಡಿದರಾಯ್ತು.

ರೋಜಾ ಹೂವಾ ಸೇವಂತಿಗೆ ಮಲ್ಲಿಗೆ ಕನಕಾಂಬರ ಹೂವಾ… ಕೂಗು ಪ್ಲೇ ಆಗುತ್ತದೆ. ಟ್ರಾಫಿಕ್ ಜನಜಂಗುಳಿ ಹೆಚ್ಚಿದ್ದರೆ ವಾಲ್ಯೂಮ್ ಕೂಡ ಹೆಚ್ಚಿಸೋದು. ಗಿರಾಕಿಗಳು ಹೂ ಕೊಳ್ಳಲು ಬಂದಾಗ ರೇಡಿಯೊ ಸ್ವಿಚ್‌ಆಫ್. ಹೂವಿನ ಮಾರಾಟ. ಮತ್ತೊಮ್ಮೆ ರೇಡಿಯೊ ಸ್ವಿಚ್ ಆನ್. ಸೈಕಲ್ ಮುನ್ನಡೆಯುತ್ತದೆ. ಸೋಮಣ್ಣನ ಜೀವನವೂ.’

ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ ಹೂವು ಮಾರುವ ಹೈಟೆಕ್ ಸೋಮಣ್ಣ ಈಗಲೂ ಬರ್ತಾನಾ ಎಂದು ಮಾವನ ಮನೆಯಲ್ಲಿ ಕೇಳಿದೆ. ಇತ್ತೀಚೆಗೆ ಆತನನ್ನು ನೋಡಿಲ್ಲ. ಆದರೆ ಈಗ ಇಲ್ಲಿ ಹೂವಿನವರು, ತರಕಾರಿ ಮಾರುವವರು, ಎಳ್ನೀರಿ ನವರು, ಹಳೇಪಾತ್ರೆ ಹಳೇಕಬ್ಬಿಣದವ್ರು ಎಲ್ಲ ಮೈಕಾಸುರರೇ ಆಗಿದ್ದಾರೆ. ಅದೊಂದು ಮಾಮೂಲಿ ಸಂಗತಿಯಾಗಿಬಿಟ್ಟಿದೆ ಎಂದರು. ನನಗಿಲ್ಲಿ ಇನ್ನೊಂದು ಸಂಗತಿಯೂ ನೆನಪಾಗುತ್ತಿದೆ. ಅದು ೧೯೯೦ರ ದಶಕದ ಕೊನೆ ಇರಬೇಕು. ಆರಿಂಚು ಉದ್ದ ಮೂರಿಂಚು ದಪ್ಪದ ಮೊಬೈಲ್ ಫೋನ್ ಡಿವೈಸ್‌ಗಳು ಭಾರತದಲ್ಲಿ ಆಗ ಹೊಸದು. ಆಗರ್ಭ ಶ್ರೀಮಂತರ ಬಳಿ, ದೊಡ್ಡದೊಡ್ಡ ಕಂಪನಿಗಳ ಸಿಇಒ ಮತ್ತು ಡೈರೆಕ್ಟರರುಗಳ ಬಳಿ ಮಾತ್ರ ಅವು ಇರುತ್ತಿದ್ದವು. ಒಂದು ದಿನ ದ ಹಿಂದು ಪತ್ರಿಕೆಯಲ್ಲೊಂದು ಫೋಟೊ ಪ್ರಕಟವಾಗಿತ್ತು.

ಮಡಿಯುಟ್ಟ ಪುರೋಹಿತರೊಬ್ಬರು ಸೊಂಟಕ್ಕೆ ಮೊಬೈಲ್ ಫೋನ್ ಸಿಕ್ಕಿಸಿಕೊಂಡಿದ್ದ ದೃಶ್ಯ. ಎ ಪ್ರೀಸ್ಟ್ ವಿದ್ ಎ ಫೋನ್
ಅಂತೇನೋ ತಲೆಬರಹವೂ ಇತ್ತು. ಆಗ ಅದೊಂದು ಅಚ್ಚರಿಯೇ. ಈಗ? ಸ್ಮಾರ್ಟ್‌ಫೋನ್ ನೋಡಿಕೊಂಡೇ ಮಂತ್ರ ಪಠಿಸುವ ಅದೆಷ್ಟು ಪುರೋಹಿತರಿಲ್ಲ!? ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನೇಕವು ನಮ್ಮ ಗಮನಕ್ಕೇ ಬಾರದೆನ್ನುವಂತೆ ಹೈಟೆಕ್ ಆಗಿವೆ. ದೇವಸ್ಥಾನಗಳಲ್ಲಿ ಜಾಗಟೆ ಡೋಲು-ಢಕ್ಕೆ ಬಾರಿಸುವುದಕ್ಕೆ ಯಂತ್ರ.

ಗಂಧ ತೇಯುವುದಕ್ಕೆ ಯಂತ್ರ. ತೆಂಗಿನಕಾಯಿ ಒಡೆದು ತೀರ್ಥಪ್ರಸಾದ ಕೊಡುವುದಕ್ಕೆ ಯಂತ್ರ. ಅಂದಮೇಲೆ ದಾಸಯ್ಯನೇಕೆ ಮಾಡರ್ನೈಸ್ ಆಗಬಾರದು? ಇನ್ನೂ ಒಂದು ಸ್ವಾರಸ್ಯಕರ ಸತ್ಯಸಂಗತಿ ಇದೆ, ಏನೆಂದರೆ ನಮ್ಮ ಕರಾವಳಿ ಜಿಲ್ಲೆಗಳಲ್ಲೀಗ ಭೂತಕೋಲ ಕಟ್ಟುವ ಪರವ/ನಲಿಕೆ ಸಮುದಾಯದವರೂ ಕೋಲ ನಡೆಯುವ ಸ್ಥಳಕ್ಕೆ ಬೈಕ್ ಮೇಲೆ ಝಮ್ಮಂತ ಬಂದು ಅಲ್ಲೇ ಪಕ್ಕ ನಿಲ್ಲಿಸಿ, ಆಮೇಲೆ ಕೋಲದ ವಿಧಿ ವಿಧಾನಗಳಿಗೆ ಅಣಿಯಾಗುತ್ತಾರೆ. ನಮ್ಮನೆಯಲ್ಲಂತೂ ಕೆಲ ವರ್ಷಗಳ ಹಿಂದೆ ಒಮ್ಮೆ ಕೋಲ ನಡೆದಿದ್ದಾಗ ಅದರ ತಯಾರಿಯ ವೇಳೆಯೇ ಮುಕ್ತ ಮುಕ್ತ ಧಾರಾವಾಹಿಯ ಸಮಯ ಬಂದಿದ್ದರಿಂದ ಕೋಲದ ತಯಾರಿ ಒಮ್ಮೆ ತಾತ್ಕಾಲಿಕವಾಗಿ ನಿಲ್ಲಿಸಿ ನಮ್ಮನೆಯ ಟಿವಿಯಲ್ಲಿ ಅವರೆಲ್ಲರೂ ಧಾರಾವಾಹಿಯ ಅಂದಿನ ಕಂತನ್ನು ನೋಡಿ ಆದಮೇಲೆ ಕೋಲ ಮುಂದುವರೆಯಿತು!

ಹಾಗಾಗಿ, ೨೧ನೆಯ ಶತಮಾನದಲ್ಲಿ ಈಗಾಗಲೇ ೨೨ ವರ್ಷಗಳು ಸಂದಿರುವಾಗ ದಾಸಯ್ಯ ಮಾಡರ್ನೈಸ್ ಆಗಬೇಕಾದ್ದೇ. ಅದಕ್ಕೇ
ಹೇಳಿದ್ದು, ಊರಿಗೆ ಬಂದರೆ ದಾಸಯ್ಯ… ಬೈಕೇರಿಯೇ ಬಾ ಕಂಡ್ಯ ದಾಸಯ್ಯ!

 
Read E-Paper click here