ಹಿಂದಿರುಗಿ ನೋಡಿದಾಗ
ಮನುಷ್ಯನು ಆರೋಗ್ಯವಾಗಿರಲು ವೈಯುಕ್ತಿಕ ಸ್ವಚ್ಛತೆ ಮತ್ತು ಸಾರ್ವಜನಿಕ ನೈರ್ಮಲ್ಯ ಅಗತ್ಯ. ಪೌರ್ವಾತ್ಯ ದೇಶಗಳಲ್ಲಿ ಸಾರ್ವ ಜನಿಕ ನೈರ್ಮಲ್ಯದ ಮೊದಲ ದಾಖಲೆಗಳು ಸಿಂಧು-ಸರಸ್ವತಿ ಸಂಸ್ಕೃತಿಯಲ್ಲಿ ದೊರೆಯು ತ್ತವೆ. ಪಾಶ್ಚಾತ್ಯ ಜಗತ್ತಿನಲ್ಲಿ ಸಾರ್ವಜನಿಕ ನೈರ್ಮಲ್ಯದ ಮೊದಲ ದಾಖಲೆಯು ರೋಮ್ ಸಾಮ್ರಾಜ್ಯದಲ್ಲಿ ಕಂಡುಬರುತ್ತದೆ.
ರೋಮ್ ಸಾಮ್ರಾಜ್ಯದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸಾರ್ವಜನಿಕ ಸ್ನಾನಗೃಹಗಳು, ಖಾಸಗೀ ಸ್ನಾನಗೃಹಗಳು, ಸಾರ್ವಜನಿಕ ಶೌಚಾಲಯಗಳು ಹಾಗೂ ಖಾಸಗಿ ಶೌಚಾಲಯಗಳು ಅಸ್ತಿತ್ವದಲ್ಲಿದ್ದವು. ಈ ರೀತಿಯ ಕ್ರಮಬದ್ಧ ವ್ಯವಸ್ಥೆಯು ಉಳಿದ ಸಾಮ್ರಾಜ್ಯಗಳಲ್ಲಿ ಇದ್ದ ಬಗ್ಗೆ ನಮಗೆ ಯಾವುದೇ ದಾಖಲೆಗಳು ದೊರೆತಿಲ್ಲ. ರೋಮ್ ನಗರದಲ್ಲಿ ಮೊದಲ ಒಳ ಚರಂಡಿಯ ವ್ಯವಸ್ಥೆಯನ್ನು ಕ್ರಿ.ಪೂ.೫೦೦ ರಲ್ಲಿ ಆರಂಭಿಸಿದರು.
ಕುತೂಹಲಕರವಾದ ವಿಷಯವೆಂದರೆ ಈ ಸಾರ್ವಜನಿಕ ನೈರ್ಮಲ್ಯದ ಪರಿಕಲ್ಪನೆ ರೋಮನ್ನರದಲ್ಲ. ಅದು ಯೂಟ್ರೂಸ್ಕನ್ ಸಂಸ್ಕೃತಿಯವರದ್ದು (ಕ್ರಿ.ಪೂ.೯೦೦-ಕ್ರಿ.ಪೂ. ೨೭). ರೋಮ್ ನಗರವು ಆರಂಭವಾಗುವುದಕ್ಕೆ ಮೊದಲು ಇಟಲಿಯಲ್ಲಿ ಯುಟ್ರೂರಿಯ ಎಂಬ ಪ್ರದೇಶವಿತ್ತು. ಇಲ್ಲಿ ವಾಸವಾಗಿದ್ದ ಯುಟ್ರೂರಿಯನ್ನರು ತಮ್ಮದೇ ಆದ ಭಾಷೆ, ಲಿಪಿ, ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಅವರು ತಮ್ಮ ನಗರಗಳ ಸುತ್ತಲೂ ಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ತಮ್ಮದೇ ಆದ ಸಾರ್ವಜನಿಕ ನೈಮರ್ಲ್ಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡಿದ್ದರು.
ರೋಮನ್ನರು ಕ್ರಮೇಣ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋದಾಗ, ಈ ಯುಟ್ರೂರಿಯ ಪ್ರದೇಶವೂ ರೋಮನ್ನರ ಅಧೀನಕ್ಕೆ ಬಂದಿತು. ಯುಟ್ರೂರಿಯನ್ನರು ರೋಮನ್ನರು ಅಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಹಾಗಾಗಿ ಕ್ರಿ.ಪೂ.೬೦೦ರ ಹೊತ್ತಿಗೆ ಸಾರ್ವಜನಿಕ ನೈರ್ಮಲ್ಯದ ಮಹತ್ವವನ್ನು ಮೊದಲ ಬಾರಿಗೆ ಅರಿತವನು ರೋಮ್ ನಗರದ ಪೌರಾಣಿಕ ಏಳು ಅರಸರಲ್ಲಿ ಐದನೆಯವಾಗಿ ರಾಜ್ಯಭಾರವನ್ನು ಮಾಡಿದ ಲ್ಯೂಷಿಯಸ್ ಟಾರ್ಕ್ವಿನಸ್ ಪ್ರಿಸ್ಕಸ್ (ಆಡಳಿತ: ಕ್ರಿ.ಪೂ.೬೧೬-ಕ್ರಿ.ಪೂ.೫೭೮). ಇವನು ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆಯನ್ನು ರೂಪಿಸುವ ಹೊಣೆಯನ್ನು ಯುಟ್ರೂರಿಯನ್ನರಿಗೆ ವಹಿಸಿದ.
ರೋಮ್ ನಗರವು ಏಳು ಬೆಟ್ಟಗಳಲ್ಲಿ ವ್ಯಾಪಿಸಿದೆ. ಟೈಬರ್ ನದಿಯ ಪೂರ್ವಕ್ಕೆ ಅವೆಂಟೈನ್ ಹಿಲ್, ಸೀಲಿಯನ್ ಹಿಲ್, ಕ್ಯಾಪಿ ಟೋಲಿಯನ್ ಹಿಲ್, ಎಸ್ಕ್ವಿಲೈನ್ ಹಿಲ್, ಪ್ಯಾಲಟೈನ್ ಹಿಲ್, ಕ್ಯೂರಿನಲ್ ಹಿಲ್ ಮತ್ತು ವಿಮಿನಲ್ ಹಿಲ್ ಬೆಟ್ಟಗಳಿವೆ.
ರೋಮುಲಸ್ ಸೋದರರು ರೋಮ್ ನಗರವನ್ನು ಪ್ಯಾಲಟೈನ್ ಹಿಲ್ನಲ್ಲಿ ಸ್ಥಾಪಿಸಿದರು. ಈ ಏಳು ಬೆಟ್ಟಗಳನ್ನು ಸುತ್ತುವರಿದು ಮತ್ತಷ್ಟು ಬೆಟ್ಟಗಳ ಸಾಲುಗಳಿವೆ. ಇವೆಲ್ಲವೂ ಆಲ್ಪ್ಸ್ ಪರ್ವತ ಶ್ರೇಣಿಗೆ ಸೇರಿದಂತಹವು.
ರೋಮ್ ನಗರವು ಸ್ಥಾಪನೆಯಾಗಿದ್ದ ಪ್ಯಾಲಟೈನ್ ಬೆಟ್ಟದಲ್ಲಿ ಹಳ್ಳಕೊಳ್ಳಗಳಿದ್ದವು. ಅವುಗಳಲ್ಲಿ ಒಂದು ಕೊಳ್ಳವು ನಗರಕ್ಕೆ ಅಂಟಿಕೊಂಡು ಜೌಗಿನಿಂದ ತುಂಬಿತ್ತು. ಹಾಗಾಗಿ ಲ್ಯೂಷಿಯಸ್ ಟಾರ್ಕ್ವಿನಸ್ ಪ್ರಿಸ್ಕಸ್ ಮತ್ತು ಅವನ ಮಗ ಲ್ಯೂಷಿಯಸ್ ಟಾರ್ಕ್ವಿನಸ್ ಸುಪರ್ಬಸ್ (ಆಡಳಿತ: ಕ್ರಿ.ಪೂ. ೫೩೪-ಕ್ರಿ.ಶ.೫೦೯) ಇಬ್ಬರೂ ಸೇರಿ ಈ ಜೌಗುಕೊಳ್ಳದಲ್ಲಿ ಸುಮಾರು ೨೦,೦೦೦ ಕ್ಯುಬಿಕ್ ಮೀಟರಿನಷ್ಟು ಕಲ್ಲು, ಮಣ್ಣನ್ನು ತುಂಬಿ ಮುಚ್ಚಿದರು. ಈ ಪ್ರದೇಶವನ್ನು ವೆಲಾಬ್ರಮ್ ಎಂದು ಕರೆದರು ಹಾಗೂ ನಗರದ ಮುಖ್ಯ ಸ್ಥಳವಾದ ರೋಮನ್ -ರಮ್ ಜತೆಯಲ್ಲಿ ನೇರ ಸಂಪರ್ಕವನ್ನು ಪಡೆಯಿತು.
ಆದರೂ ಮಳೆಗಾಲದಲ್ಲಿ ಟೈಬರ್ ನದಿಯ ಪ್ರವಾಹವು ಉಕ್ಕಿ ಹರಿದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ವರ್ಧನಾ ಕೇಂದ್ರಗಳು ರೂಪುಗೊಳ್ಳುತ್ತಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮಳೆಯ ನೀರು ನಗರದಲ್ಲಿ ಎಲ್ಲೂ ಉಳಿಯ ಬಾರದೆಂದು, ನೆಲದೊಳಗೆ ಕಾಲುವೆಗಳನ್ನು ತೋಡಿದರು. ಆ ನೀರೆಲ್ಲವೂ ಅಂತಿಮವಾಗಿ ಟೈಬರ್ ನದಿಯನ್ನು ಸೇರುತ್ತಿತ್ತು. ರೋಮಿನ ಅರಸರು, ಶ್ರೀಸಾಮಾನ್ಯರ ಮನೆಮನೆಗಳಿಂದ ಹರಿದು ಬರುತ್ತಿದ್ದ ಕೊಳಚೆ ನೀರನ್ನು ಸಹ ಈ ಒಳಕಾಲುವೆಗಳಿಗೆ ಜೋಡಿಸಿದರು.
ರೋಮಿನ ಅರಸರು ಸಾರ್ವಜನಿಕ ನೈರ್ಮಲ್ಯವನ್ನು ಕಾಪಾಡಲು ಮಾಡಿದ ವ್ಯವಸ್ಥೆಗಳು ಸಾಕಾಗುತ್ತಿರಲಿಲ್ಲ. ಜತೆಗೆ ರೋಮನ್ನ ರಿಗೆ ಈ ನೈರ್ಮಲ್ಯ ಎನ್ನುವ ಪರಿಕಲ್ಪನೆಯು ಹೊಸದು. ಅದಕ್ಕೆ ಅವರು ಹೊಂದಿಕೊಂಡಿರಲಿಲ್ಲ. ರೋಮ್ ನಗರದ ರಸ್ತೆಗಳು ಸ್ವಚ್ಛತೆಯಿಂದ ಬಹಳ ಬಹಳ ದೂರವಿತ್ತು. ಜನಸಾಮಾನ್ಯರು ತಮ್ಮ ತಮ್ಮ ಮನೆಗಳಲ್ಲಿ ವಿಸರ್ಜಿಸಿದ ಮಲವನ್ನು ಸುತ್ತಿ ಕಿಟಕಿಯ ಮೂಲಕ ಹೊರಕ್ಕೆ ಎಸೆಯುತ್ತಿದ್ದರು. ಹೀಗೆ ಎಸೆದ ಮಲವು ಯಾರಿಗಾದರೂ ತಾಗುವ ಸಾಧ್ಯತೆಯಿತ್ತು. ಹಾಗೆ ತಾಗಿಸಿ ಕೊಂಡವರು ನಗರಾಡಳಿತವರ್ಗಕ್ಕೆ ದೂರನ್ನು ನೀಡಿದರು.
ಮಲವನ್ನು ಎಸೆದವರಿಗೆ ದಂಡವನ್ನು ವಿಧಿಸುವ ಹೊಸ ಕಾನೂನು ಜಾರಿಗೆ ಬಂದಿತು. ತ್ಯಾಜ್ಯ ವಿಸರ್ಜನೆಯ ಸಮಸ್ಯೆಯು ಬೃಹತ್ ಪ್ರಮಾಣವನ್ನು ಮುಟ್ಟಿತು. ಕೊನೆಗೆ ನಗರದಲ್ಲಿ ಒಂದು ಮಹಾಚರಂಡಿಯನ್ನು ರೂಪಿಸುವ ಬಗ್ಗೆ ಮಾತುಕತೆ ಯಾಯಿತು. ಅದಕ್ಕೆ ಕ್ಲೋಕ ಮ್ಯಾಕ್ಸಿಮ ಎಂದು ಹೆಸರನ್ನಿಟ್ಟರು. ಹೆಸರೇ ಸೂಚಿಸುವ ಹಾಗೆ ಇದು ಗಾತ್ರದಲ್ಲಿ ಮಹಾಚರಂಡಿಯೆ ಆಗಿತ್ತು. ಇದನ್ನು ನಗರದ ಮಧ್ಯಭಾಗದಲ್ಲಿ ನಿರ್ಮಿಸಿದರು.
ಆರಂಭದ ದಿನಗಳಲ್ಲಿ ಇದು ತೆರೆದ ಮಹಾಚರಂಡಿಯಾಗಿತ್ತು. ಆದರೆ ನಗರವು ಬೆಳೆಯುತ್ತಿದ್ದ ಹಾಗೆ ಸ್ಥಳ ಸಂಕೋಚವುಂಟಾದ
ಕಾರಣ, ಈ ತೆರೆದ ಮಹಾಚರಂಡಿಯ ಮೇಲೆ ಕಮಾನು ಕಟ್ಟಿ, ಚರಂಡಿಯನ್ನು ಪೂರ್ಣ ಮುಚ್ಚಿದರು. ಚರಂಡಿಯ ಮೇಲಿನ
ಭಾಗವು ಸಾರ್ವಜನಿಕರ ಬಳಕೆಗೆ ಬಂದಿತು. ಈ ಮಹಾಚರಂಡಿಯು ೧೦ ೮” ಎತ್ತರ, ೨೦ ಅಗಲ ಹಾಗೂ ೧೬೦೦ ಮೀಟರಿನಷ್ಟು ಉದ್ದವಿತ್ತು (ಇಂದು ೧೦೨೦ ಮೀಟರ್ ಉದ್ದದ ಚರಂಡಿಯು ಬಳಕೆಯಲ್ಲಿದೆ). ಈ ಮಹಾಚರಂಡಿಯಲ್ಲಿ ಒಂದು ಹುಲ್ಲು ತುಂಬಿದ ಕುದುರೆಗಾಡಿಯು ಸರಾಗವಾಗಿ ಚಲಿಸಬಹುದಾಗಿತ್ತು.
ನಗರದಲ್ಲಿದ್ದ ಎಲ್ಲಾ ಉಪಚರಂಡಿಗಳು, ಅಂತಿಮವಾಗಿ ಈ ಮಹಾಚರಂಡಿಯೊಳಗೆ ಹರಿಯುತ್ತಿದ್ದವು. ಹೀಗೆ ನಗರದಲ್ಲಿ ಸುರಿಯುತ್ತಿದ್ದ ಹೆಚ್ಚುವರಿ ಮಳೆನೀರು ಹಾಗೂ ಇಡೀ ನಗರದ ತ್ಯಾಜ್ಯವು ಟೈಬರ್ ನದಿಯೊಳಕ್ಕೆ ಹರಿಸಲಾರಂಭಿಸಿತು. ರೋಮ್ ನಗರದ ಏಳು ಬೆಟ್ಟಗಳ ಸುತ್ತಲೂ ಮತ್ತಷ್ಟು ಬೆಟ್ಟಗಳಿದ್ದವು. ಆಲ್ಬನ್ ಬೆಟ್ಟಗಳಲ್ಲಿ ಝರಿಗಳು, ಹೊಳೆಗಳು, ಸರೋವರಗಳು ಇದ್ದವು. ರೋಮನ್ನರು ಇಲ್ಲಿದ್ದ ಶುದ್ಧ ನೀರನ್ನು ರೋಮ್ ನಗರಕ್ಕೆ ಸರಬರಾಜು ಮಾಡಲು 11 ಮಹಾನಾಲೆಗಳ ಜಾಲವನ್ನು ರೂಪಿಸಿದರು.
ಅವುಗಳಲ್ಲಿ ಅಕ್ವ ಅಲೆಗ್ಸಾಂಡ್ರಿನ, ಅಕ್ವ ಆನಿಯೋ ನೋವಸ್, ಅಕ್ವಾ ಮಾರ್ಸಿಯ, ಅಕ್ವಾ ಕ್ಲಾಡಿಯ ಮತ್ತು ಅಕ್ವಾ ಆನಿಯೋ ವೇಟಸ್ ಎಂಬ ನಾಲೆಗಳ ವ್ಯವಸ್ಥೆಯು ಮುಖ್ಯವಾಗಿದ್ದವು. ಅಂದರೆ ಎಲ್ಲ 11 ನಾಲೆಗಳ ಮೂಲಕ ಪ್ರತಿದಿನವೂ ಸರಿಸುಮಾರು ೧,೧೨೭,೦೦೦ ಕ್ಯುಬಿಕ್ ಮೀಟರ್ ನೀರು ರೋಮ್ ನಗರಕ್ಕೆ ಸರಬರಾಜಾಗುತ್ತಿತ್ತು. ಈ ನೀರನ್ನು 91 ಕಿ.ಮೀ.ನಷ್ಟು ದೂರದಿಂದ ಸರಬರಾಜು ಮಾಡುವುದು ಹೇಳುವಷ್ಟು ಸುಲುಭದ ಕೆಲಸವಾಗಿರಲಿಲ್ಲ. ಏಕೆಂದರೆ ರೋಮ್ ನಗರವು ಬೆಟ್ಟಗುಡ್ಡ ಹಳ್ಳಕೊಳ್ಳ ಗಳ ಪ್ರದೇಶ. ಜಲಮೂಲದಿಂದ ನೀರು ಸರಾಗವಾಗಿ ಹರಿಯಬೇಕಾದರೆ, ಮಾರ್ಗವನ್ನು ಎತ್ತರದಿಂದ ತಗ್ಗಿಗೆ ಇರುವಂತೆ
ನಿರ್ಮಿಸಬೇಕಾಗುತ್ತದೆ.
ರೋಮನ್ ಎಂಜಿನಿಯರುಗಳು ಎಲ್ಲ 11 ಕಡೆ ಇಳಿಜಾರನ್ನು ರೂಪಿಸಿದರು. ನೀರು ಸುಲಭವಾಗಿ ಹರಿಯುವಂತೆ ವಿಸ್ತೃತ ನಾಲೆಯ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿದರು. ಇದು ಪ್ರಾಚೀನ ಜಗತ್ತಿನ ಒಂದು ಅದ್ಭುತ ಇಂಜಿನಿಯರಿಂಗ್ ವ್ಯವಸ್ಥೆ ಎಂದರೆ ಅತಿ ಅತಿಶಯೋಕ್ತಿಯಾಗಲಾರದು. ತಗ್ಗುಪ್ರದೇಶಗ ಳಲ್ಲಿ ಅನೇಕ ಎತ್ತರದ ಸೇತುವೆಗಳನ್ನು ಕಟ್ಟಿ, ಅವುಗಳ ಮೇಲೆ ನೀರು ಹರಿಯುವ ನಾಲೆಗಳನ್ನು ರೂಪಿಸಿದ ಪರಿಯು ರೋಚಕವಾಗಿದೆ.
ರೋಮ್ ನಗರದಲ್ಲಿ ಸಾರ್ವಜನಿಕ ಸ್ನಾನದ ಮನೆಗಳು ಹಾಗೂ ಸಾರ್ವಜನಿಕ ಶೌಚಾಲಯಗಳಿದ್ದವು. ಇವುಗಳಿಗೆ ನಾಲೆಗಳ ವ್ಯವಸ್ಥೆಯಿಂದ ನೀರು ನೇರವಾಗಿ ಸರಬರಾಜಾಗುತ್ತಿತ್ತು. ಈ ಸಾರ್ವಜನಿಕ ಶೌಚಾಲಯಗಳನ್ನು ಇಂದಿಗೂ ಪಾಂಪೆ ಮತ್ತು ಹರ್ಕ್ಯುಲೇನಿಯಂನಲ್ಲಿ ನೋಡಬಹುದಾಗಿದೆ. ಒಂದು ದೊಡ್ಡ ಕೋಣೆ. ಗೋಡೆಗಳಿಗೆ ಆತುಕೊಂಡಂತೆ ಮರದ ಹಲಗೆಗಳು. ಆ ಹಲಗೆಯಲ್ಲಿ ನಿಯಮಿತ ಅಂತರದಲ್ಲಿ ಮಾಡಿದ ರಂಧ್ರಗಳು. ಸೈನಿಕರು, ಜನಸಾಮಾನ್ಯರು ಆ ರಂಧ್ರಗಳ ಮೇಲೆ ಕುಳಿತು ಮಲವನ್ನು ವಿಸರ್ಜಿಸುತ್ತಿದ್ದರು. ಕಾಲುಗಳು ನೆಲಕ್ಕೆ ತಾಗುವೆಡೆಯಲ್ಲಿ ನೀರಿನ ತೋಡು ಹರಿಯುತ್ತಿತ್ತು. ಇಂದು ಕ್ಲಬ್ಗಳಲ್ಲಿ ಹರಟೆ ಹೊಡೆಯಲು ಹೇಗೆ ಜನರು ಸೇರುತ್ತಾರೋ, ಹಾಗೆ ಅಂದಿನ ದಿನಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಜನರ ಹರಟೆಯ
ಕೇಂದ್ರಗಳಾಗಿದ್ದವು.
ಮಲವಿಸರ್ಜನೆಯನ್ನು ಮಾಡುತ್ತಲೇ ಜಗತ್ತಿನ ಎಲ್ಲ ವಿಚಾರಗಳ ಘನ ಗಂಭೀರ ಚರ್ಚೆಗಳನ್ನು ಮಾಡುತ್ತಿದ್ದರು. ಶ್ರೀಮಂತರು ತಮ್ಮ ತಮ್ಮ ಮನೆಗಳಲ್ಲಿಯೇ ಶೌಚಾಲಯಗಳನ್ನು ಕಟ್ಟಿಕೊಳ್ಳುತ್ತಿದ್ದರು. ಆ ಶೌಚಾಲಯಗಳು ಕೊಳವೆಗಳ ಮೂಲಕ ತಮ್ಮ ತ್ಯಾಜ್ಯವನ್ನು ರಸ್ತೆಯ ನಡುವೆ ಇದ್ದ ದೊಡ್ಡ ಕೊಳವೆಗೆ ಸಾಗಿಸುತ್ತಿದ್ದವು. ಆ ಕೊಳವೆಯ ತ್ಯಾಜ್ಯವು ಅಂತಿಮವಾಗಿ ಮಹಾ ಚರಂಡಿಯನ್ನು ಸೇರುತ್ತಿತ್ತು. ಹೀಗೆ ರೋಮ್ ನಗರದ ಅತ್ಯಂತ ಸಂಕೀರ್ಣವಾದ ಒಳಚರಂಡಿಗಳ ಜಾಲವು ರೂಪುಗೊಂಡಿತ್ತು.
ಪ್ರಾಚೀನ ರೋಮ್ ನಗರದಲ್ಲಿ ಇಷ್ಟು ಸೊಗಸಾದ ನೀರು ಪೂರೈಕೆ ಹಾಗೂ ಒಳಚರಂಡಿಯ ವ್ಯವಸ್ಥೆಯಿದ್ದರೂ, ಸೋಂಕು ರೋಗಗಳು ಮಾತ್ರ ತಾಂಡವವಾಡುತ್ತಿದ್ದವು. ಇದಕ್ಕೆ ಹಲವು ಕಾರಣಗಳಿವೆ. ಎಲ್ಲ ಪ್ರಜೆಗಳ ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಎಲ್ಲ ಜನರಿಗೆ ಸುಲಭವಾಗಿ ಲಭ್ಯವಾಗುವಂತಹ ಸಾರ್ವಜನಿಕ ಶೌಚಾಲಯಗಳು ಹಾಗೂ ಕೊಳಗಳು ಕಡಿಮೆಯಿದ್ದವು. ಹಲವು ಅಂತಸ್ತುಗಳ ಮಹಡಿಗಳಲ್ಲಿ ವಾಸಿಸುತ್ತಿದ್ದವರದ್ದು ಮತ್ತೊಂದು ಕಥೆ.
ಕೆಳಗಿನ ಅಂತಸ್ತಿನಲ್ಲಿನಲ್ಲಿದ್ದವರಿಗೆ ನೀರು ಮತ್ತು ಶೌಚಾಲಯಗಳು ನಿಲುಕುತ್ತಿದ್ದ ಹಾಗೆ ಮೇಲಿನ ಅಂತಸ್ತುಗಳಲ್ಲಿ ವಾಸಿಸು ತ್ತಿದ್ದವರಿಗೆ ದೊರೆಯುತ್ತಿರಲಿಲ್ಲ. ಹಾಗಾಗಿ ಅವರು ಮಲವನ್ನು ಎಂದಿನಂತೆ ಕಿಟಕಿಗಳ ಮೂಲಕ ಹೊರಗೆ ಎಸೆಯುತ್ತಿದ್ದರು.
ರೋಮ್ ನಗರದ ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆಯು ಉತ್ತಮವಾಗಿದ್ದರೂ ಸಹ, ಝಾಡಮಾಲಿಗಳು ಇರಲೇ ಇಲ್ಲ. ನಗರದ ರಸ್ತೆಗಳನ್ನು ಪ್ರತಿ ದಿನವು ಸ್ವಚ್ಛಗೊಳಿಸುವವರು ಇರದಿದ್ದ ಕಾರಣ, ರೋಮ್ ನಗರದ ಕೆಲವು ಬೀದಿಗಳು ನಾರುತ್ತಿದ್ದವು.
ರೋಗವರ್ಧನಾ ಕೇಂದ್ರಗಳಾಗಿ ಅಭಿವೃದ್ಧಿಹೊಂದುತ್ತಿದ್ದವು. ಅಂದಿನ ದಿನಗಳಲ್ಲಿ ವೈದ್ಯರು ತಮ್ಮ ರೋಗಿಗಳಿಗೆ ವಿಧಿಸುತ್ತಿದ್ದ ಅನುಪಾನದಲ್ಲಿ (ಚಿಕಿತ್ಸೆಯಲ್ಲಿ) ಪ್ರತಿದಿನ ಸ್ನಾನ ಮಾಡುವುದೂ ಒಂದಾಗಿತ್ತು. ಆದರೆ ರೋಗ ಪೀಡಿತರಿಗೆ ಸ್ನಾನವನ್ನು ಮಾಡಲು ಪ್ರತ್ಯೇಕ ಸ್ನಾನಗೃಹಗಳಿರುತ್ತಿರಲಿಲ್ಲ. ಹಾಗಾಗಿ ಅವರು ಅನಿವಾರ್ಯವಾಗಿ ಆರೋಗ್ಯ ವಂತರು ಬಳಸುವಂತಹ ಸ್ನಾನಗೃಹಗಳಿಗೆ ಹೋಗಬೇಕಾಗುತ್ತಿತ್ತು. ಆಗ ಸಹಜವಾಗಿ ಆ ಸ್ನಾನದ ಕೊಳಗಳು ರೋಗವರ್ಧನಾ ಕೇಂದ್ರಗಳಾಗುತ್ತಿದ್ದವು.
ಆರೋಗ್ಯವಂತರು ಬೆಳಗಿನ ಹೊತ್ತಿನಲ್ಲಿ ಹಾಗೂ ರೋಗಿಗಳು ಸಂಜೆಯ ಹೊತ್ತಿನಲ್ಲಿ ಸ್ನಾನ ಮಾಡುವಂತೆ ಸೂಚನೆಯನ್ನು ನೀಡಿದ್ದರು. ಆದರೆ ರೋಗಿಗಳು ಸಂಜೆ ಸ್ನಾನವನ್ನು ಮಾಡಿ ಆದಮೇಲೆ, ಸ್ನಾನಗೃಹವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು ಎನ್ನುವ ಪರಿಕಲ್ಪನೆಯು ಹಾಗೂ ಸಿಬ್ಬಂದಿಯ ಕೊರತೆಯಿತ್ತು. ಹಾಗಾಗಿ ಸಾರ್ವಜನಿಕ ಸ್ನಾನಗೃಹಗಳ ಮೂಲಕವೇ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯವಾಗಿತ್ತು.
ರೋಮನ್ನರು ಮಲವಿಸರ್ಜನೆಯ ನಂತರ ಸ್ವಚ್ಛಗೊಳಿಸಲು ನೀರನ್ನು ಬಳಸುತ್ತಿರಲಿಲ್ಲ. ಬದಲಿಗೆ ಟೆರ್ಸೋರಿಯಂ
ಬಳಸುತ್ತಿದ್ದರು. ಈ ಟೆರ್ಸೋರಿಯಂ ಎನ್ನುವುದು ಒಂದು ಕಟ್ಟಿಗೆ. ಅದರ ಒಂದು ತುದಿಗೆ ಸಮುದ್ರ ಸ್ಪಂಜನ್ನು ಕಟ್ಟಿರುತ್ತಿ
ದ್ದರು. ಇದರಿಂದ ಆಸನ ಪ್ರದೇಶವನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗಿತ್ತು. ಶೌಚಾಲಯವನ್ನು ಬಳಸುವವರು ತಮ್ಮದೇ ಆದ ಟೆರ್ಸೋರಿಯಂನನ್ನು ತರಬೇಕಾಗಿತ್ತು. ಆದರೆ ಹಾಗೆ ತರುತ್ತಿದ್ದವರು ಕಡಿಮೆ. ಹಾಗಾಗಿ ಹಲವು ಜನರು ಒಂದೇ ಟೆರ್ಸೋರಿಯಂ ನನ್ನು ಬಳಸುತ್ತಿದ್ದರು.
ಒಬ್ಬರು ಬಳಸಿದ ಟೆರ್ಸೋರಿಯಂನನ್ನು ಒಂದು ಬಕೆಟ್ ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದರು. ಆ ನೀರಿಗೆ ಉಪ್ಪು ಅಥವ ವಿನಿಗರ್ ಬೆರೆಸುತ್ತಿದ್ದರು. ಆದರೂ ಆ ಬಕೆಟ್ ಎಲ್ಲ ರೋಗಜನಕಗಳ ಮಹಾಸಾಗರವಾಗುವುದನ್ನು ತಪ್ಪಿಸಲು
ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನೇಕ ಸೋಂಕು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದವು. ರೋಮನ್ನರು ನಾನಾ ಕರುಳುಹುಳುಗಳ ಬಾಧೆಯಿಂದ ನರಳುತ್ತಿದ್ದರು ಎನ್ನುವುದು ತಿಳಿದುಬಂದಿದೆ.
ರೋಮ್ ನಗರದ ಸಾರ್ವಜನಿಕ ನೈರ್ಮಲ್ಯದ ವ್ಯವಸ್ಥೆಯು ಅದ್ಭುತವಾಗಿತ್ತು ಎಂದನಿಸಿದರೂ ಸಹ, ಅದನ್ನು ಸರಿಯಾದ ವಿಧಾನದಲ್ಲಿ ಬಳಸುವ ತಿಳಿವಳಿಕೆ, ಮಾರ್ಗದರ್ಶನವು ತೀರಾ ದುರ್ಬಲವಾಗಿತ್ತು ಎಂದನಿಸುತ್ತದೆ.
Read E-Paper click here