Sunday, 24th November 2024

ಅವರು ಏಣಿಯೂ ಆಗಲಿಲ್ಲ, ಚಪ್ಪರವೂ ಆಗಲಿಲ್ಲ, ಎಲ್ಲರ ಕಾಯುವ ಬೇಲಿಯಾದರು !

ನೂರೆಂಟು ವಿಶ್ವ

vbhat@me.com

ಒಮ್ಮೆ ‘ಇಂಡಿಯನ್ ಎಕ್ಸ್ ಪ್ರೆಸ್’ ಕಾರ್ಯಾಲಯಕ್ಕೆ ಹೋಗಿದ್ದಾಗ, ಸಿಗರೇಟು ಸೇದುತ್ತಾ, ಟೈಪ್ ರೈಟರ್ ಮುಂದೆ ಕುಳಿತು ಕೀಲಿಮಣೆಯನ್ನು ಕುಟ್ಟುವ ವ್ಯಕ್ತಿಯನ್ನು ನೋಡಿ ಬೆರಗಾಗಿದ್ದೆ. ಅವರು ‘ಎಕ್ಸ್ ಪ್ರೆಸ್’ಗೆ ಬರೆಯುತ್ತಿದ್ದರು. ಅವರೇ ಸತ್ಯ ಎಂದು ನಂತರ ಗೊತ್ತಾಯಿತು. ನಂತರ ಅದೇ ವ್ಯಕ್ತಿ ಎದೆಗೆ ಟೇಬಲ್‌ನ್ನು ಎಳೆದುಕೊಂಡು ಬರೆಯುತ್ತಿದ್ದರು.

ಮೊನ್ನೆ ನಾನು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದಾಗ, ’ಕನ್ನಡ ಪ್ರಭ ಸಂಪಾದಕರಾಗಿದ್ದ ಕೆ.ಸತ್ಯನಾರಾಯಣ ತೀರಿಕೊಂಡರಂತೆ’ ಎಂದು ಸ್ನೇಹಿತರೊಬ್ಬರು ತಿಳಿಸಿದರು. ಆ ಸುದ್ದಿಯ ಬೆನ್ನಿಗೇ ’ಕನ್ನಡಪ್ರಭ’ ಹಾಲಿ ಸಂಪಾದಕ ರವಿ ಹೆಗಡೆ ಮತ್ತು ಜೋಗಿ ಫೋನ್ ಮಾಡಿ, ವಿಷಯ ದೃಢಪಡಿಸಿದರು. ನಾವು ಅಲ್ಲಿಂದ ಸಮ್ಮೇಳನ ಬಿಟ್ಟು ಹೋಗುವುದಾ ಹೇಗೆ ಎಂದು ಚರ್ಚಿಸಿದೆವು.

ಆದರೆ ಹೋಗುವ ಮುನ್ನ ಅಂತ್ಯಸಂಸ್ಕಾರ ಮುಗಿದು ಹೋಗಿರುತ್ತದೆಂದು ಅಂದುಕೊಂಡೆವು. ಹೀಗಾಗಿ ಕೆ ಅಂದ್ರೆ ಕೈವಾರ ಸತ್ಯನಾರಾಯಣಕ್ಕಿಂತ ’ಕನ್ನಡಪ್ರಭ’ ಸತ್ಯನಾರಾಯಣ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡ, ಸತ್ಯ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲೇ ಇಲ್ಲ. ಈ ನೋವು ನನ್ನನ್ನು ಯಾವತ್ತೂ ಕಾಡುತ್ತದೆ, ಕೊರೆಯುತ್ತದೆ. ಒಂದು ಸಂದರ್ಭ ದಲ್ಲಿ ’ಕನ್ನಡಪ್ರಭ’ದಲ್ಲಿ ಮೂವರು ಕೆ.ಸತ್ಯನಾರಾಯಣಗಳಿದ್ದರು. ಹೀಗಾಗಿ ಅವರವರ ಬಣ್ಣ, ಆಕಾರ ಮತ್ತು ಕೆಲಸಗಳಿಂದ ಅವರನ್ನು ಗುರುತಿಸುವುದು ಅನಿವಾರ್ಯವಾಗಿತ್ತು.

ಒಬ್ಬ ಕೆ.ಸತ್ಯನಾರಾಯಣ ಆಫೀಸಿನಲ್ಲಿ ಎಲ್ಲರಿಗೂ ಅವರವರ ಡೆಸ್ಕಿಗೆ ಹೋಗಿ ಕಾಫಿ ಸರಬರಾಜು ಮಾಡುತ್ತಿದ್ದುದರಿಂದ ಅವರು ‘ಕಾಫಿ ಸತ್ಯನಾರಾಯಣ’ ಎಂದು ಕರೆಯಿಸಿಕೊಂಡಿದ್ದರು. ಮತ್ತೊಬ್ಬರು ಕೆಂಪುಕೆಂಪಾಗಿ ಇದ್ದುದರಿಂದ ಅವರು ‘ಕೆಂಪು ಸತ್ಯನಾರಾಯಣ’ ಮತ್ತು ಇನ್ನೊಬ್ಬರು ಎತ್ತರದಲ್ಲಿ ನಾಲ್ಕೂವರೆ ಅಡಿಯಿದ್ದುದರಿಂದ ಅವರು ‘ಕುಳ್ಳ ಸತ್ಯನಾರಾಯಣ’ ಅಥವಾ ’ಕುಳ್ಳ ಸತ್ಯ’ ಎಂದು ಕರೆಯಿಸಿಕೊಂಡಿದ್ದರು. (ವೈಎನ್ಕೆಯವರು ಈ ಕುಳ್ಳ ಸತ್ಯನಾರಾಯಣ ಅವರನ್ನು ಯಾರಿಗೂ ಗೊತ್ತಾಗ
ಬಾರದೆಂದು ಮುಗುಮ್ಮಾಗಿ ’ಫಾರ್ ಅಂಡ್ ಹಾಫ್’ ಎಂದು ಕರೆಯುತ್ತಿದ್ದುದು ಬೇರೆ ಮಾತು. ಆದರೆ ಸಣ್ಣವರಿಗೆ, ದೊಡ್ಡವರಿಗೆ, ವೃತ್ತಿಯಲ್ಲಿರುವವರಿಗೆ ಮತ್ತು ಹೊರಗಿನವರಿಗೆ ಅವರು ಕನ್ನಡಪ್ರಭ ಸತ್ಯ ಎಂದೇ ಪರಿಚಿತರಾಗಿದ್ದರು.)

ಎತ್ತರದಲ್ಲಿ ಕುಳ್ಳರಾಗಿದ್ದರೂ ವೃತ್ತಿಯಲ್ಲಿ ಅವರು ಬಹಳ ಎತ್ತರ ಬೆಳೆದರು. ಪತ್ರಿಕೋದ್ಯಮವನ್ನು ಬಿಟ್ಟು ಅವರು ಮತ್ತೇನನ್ನೂ ಮಾಡಲಿಲ್ಲ. ಪತ್ರಿಕೆಗಳನ್ನು ಓದುವುದು ಮತ್ತು ಪತ್ರಿಕೆಗೆ ಬರೆಯುವುದರ ಹೊರತಾಗಿ ಅವರಿಗೆ ಮತ್ತಿನ್ನೇನೂ ಗೊತ್ತಿರಲಿಲ್ಲ. ಎಂಬತ್ತೆರಡು ವರ್ಷಗಳ ಕಾಲ ಬದುಕಿದ್ದ ಸತ್ಯ, ಜೀವಿತದ ಹಿಂದಿನ ದಿನದ ತನಕವೂ ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಕಾಯಕಜೀವಿ, ಸುದ್ದಿಜೀವಿ.

ನಾನು ಆಗ ಪತ್ರಿಕೋದ್ಯಮ ವಿದ್ಯಾರ್ಥಿ. ಒಮ್ಮೆ ‘ಇಂಡಿಯನ್ ಎಕ್ಸ್ ಪ್ರೆಸ್’ ಕಾರ್ಯಾಲಯಕ್ಕೆ ಹೋಗಿದ್ದಾಗ, ಸಿಗರೇಟು
ಸೇದುತ್ತಾ, ಟೈಪ್ ರೈಟರ್ ಮುಂದೆ ಕುಳಿತು ಕೀಲಿಮಣೆಯನ್ನು ಕುಟ್ಟುವ ವ್ಯಕ್ತಿಯನ್ನು ನೋಡಿ ಬೆರಗಾಗಿದ್ದೆ. ಅವರು ‘ಎಕ್ಸ್ ಪ್ರೆಸ್’ಗೆ ಬರೆಯುತ್ತಿದ್ದರು. ಅವರೇ ಸತ್ಯ ಎಂದು ನಂತರ ಗೊತ್ತಾಯಿತು. ನಂತರ ಅದೇ ವ್ಯಕ್ತಿ ಎದೆಗೆ ಟೇಬಲ್‌ನ್ನು ಎಳೆದು ಕೊಂಡು ಬರೆಯುತ್ತಿದ್ದರು. ಆಗ ಅವರು ‘ಕನ್ನಡಪ್ರಭ’ಕ್ಕೆ ಬರೆಯುತ್ತಿದ್ದರು. ಅವರು ಏಕಕಾಲಕ್ಕೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುತ್ತಿದ್ದರು. ಎರಡೂ ಭಾಷೆಗಳಲ್ಲಿ ಅವರು ಪಾಂಗಿತರಾಗಿದ್ದರು.

ಸಿಗರೇಟಿನ ಹೊಗೆ ಮತ್ತು ಕಾಫಿಯನ್ನು ಅವರು ‘ಕಾಪಿ’ಯನ್ನಾಗಿ ಪರಿವರ್ತಿಸುತ್ತಿದ್ದರು. ನಂತರ ನಾನು ‘ಕನ್ನಡಪ್ರಭ’ ಪತ್ರಿಕೆಯನ್ನು ಸೇರಿದಾಗ, ಸತ್ಯ ಅವರನ್ನು ಹತ್ತಿರದಿಂದ ನೋಡುವ, ಬೆರೆಯುವ, ಒಡನಾಡುವ, ಅವರನ್ನು ನೋಡುತ್ತಲೇ ನನ್ನ ಭವಿಷ್ಯವನ್ನೂ ರೂಪಿಸಿಕೊಳ್ಳುವ ಅವಕಾಶ ಸಿಕ್ಕಿತು. ನಾವೆ ಆಫೀಸಿಗೆ ಬರುವ ಮುನ್ನವೇ ಸತ್ಯ ಬಂದಿರುತ್ತಿದ್ದರು. ಅಂದಿನ ಎಲ್ಲಾ ಪತ್ರಿಕೆಗಳನ್ನೂ ತಮ್ಮ ಟೇಬಲ್ ಮೇಲೆ ಹರವಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಓದುತ್ತಿದ್ದರು. ಈ ಮಧ್ಯೆ ಎರಡು ಸಲ ಕಾಫಿಗೆ, ಮೂರು ಸಲ ಸಿಗರೇಟಿಗೆ ಹೊರಗೆ ಹೋಗಿ ಬರುತ್ತಿದ್ದರು.

ಅನಂತರ ಅವೆಲ್ಲವನ್ನೂ ಮಡಚಿಟ್ಟು, ಬರೆಯಲು ಕುಳಿತುಕೊಳ್ಳುತ್ತಿದ್ದರು. ಅವರು ಎರಡು ಪ್ಯಾರ ಬರೆದರೆ ಪುಟವೆಲ್ಲ
ತುಂಬಿ ಹೋಗುತ್ತಿತ್ತು. ಕಾರ್ಖಾನೆಯಿಂದ ಹೊರಬರುವ ಕಾಗದಗಳಂತೆ, ಸತ್ಯ ಅವರ ಬರೆಯುವ ಫ್ಯಾಕ್ಟರಿಯಿಂದ
ಮೂವತ್ತು-ನಲವತ್ತು ಪುಟಗಳು ಹೊರಬರುತ್ತಿದ್ದವು. ಕೊನೆ ತನಕವೂ ಅವರಿಗೆ ಕಂಪ್ಯೂಟರ್ ಒಲಿಯಲಿಲ್ಲ. ಹೀಗಾಗಿ ಅವರೇ ಖುzಗಿ ಬರೆಯುತ್ತಿದ್ದರು. ತಾವು ಬರೆದಿದ್ದನ್ನು ಪ್ರೂಫ್ ನೋಡದೇ ಅವರು ಕಳಿಸುತ್ತಿರಲಿಲ್ಲ.ಅವರು ಆಫೀಸಿನಲ್ಲಿ ಹರಟೆ ಹೊಡೆಯುತ್ತಿದ್ದುದು ಕಡಿಮೆ.

ತಮಗೆ ಆಪ್ತರಾದ ಎರಡು-ಮೂರು ವರದಿಗಾರರೊಂದಿಗೆ ಮಾತ್ರ ಅವರ ಮಾತುಕತೆ, ಹರಟೆ ಸೀಮಿತವಾಗಿತ್ತು. ವರದಿ ಗಾರರಾಗಿಯೂ ಅವರು ಅಂತರ್ಮುಖಿಯಾಗಿದ್ದರು. ಅವರು ಬೇರೆಯವರ ಜತೆ ಮಾತಾಡಿದ್ದಕ್ಕಿಂತ, ತಮ್ಮೊಂದಿಗೆ ಮಾತಾಡಿ ಕೊಂಡಿದ್ದೇ ಜಾಸ್ತಿ. ಆಫೀಸಿನ ಇತರ ಸಹೋದ್ಯೋಗಿಗಳನ್ನು ಕಂಡೂ ಕಾಣದಂತೆ, ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು. ಅವರು ಎಂದೂ ಡೆಸ್ಕಿನಲ್ಲಿ ಕೆಲಸ ಮಾಡಿದವರಲ್ಲ. ಹೀಗಾಗಿ ಪತ್ರಿಕೆ ಅವತರಿಸಿ ಬರುವ ಹತ್ತಾರು ಆಯಾಮ, ಮಜಕೂರುಗಳು ಅವರಿಗೆ ಗೊತ್ತಿರಲಿಲ್ಲ.

ಅವರೊಂದಿಗೆ ಯಾವುದೇ ವಿಷಯಗಳನ್ನು ಚರ್ಚಿಸಲು ಸಾಧ್ಯವಾಗುತ್ತಿರಲಿಲ್ಲ. ಆರಂಭದಲ್ಲಿ ಇದು ನನ್ನ ಕೊರತೆ ಇರಬಹುದು ಎಂದು ನಾನು ಭಾವಿಸಿದ್ದೆ. ನಂತರ ಗೊತ್ತಾಗಿದ್ದೇನೆಂದರೆ, ಬೇರೆಯವರಿಗೂ ಅದು ಸಾಧ್ಯವಾಗುತ್ತಿರಲಿಲ್ಲ. ಅವರು ಬೇರೆಯವರು ಹೇಳಿದ ಅಭಿಪ್ರಾಯಗಳನ್ನು ಒಪ್ಪುತ್ತಿರಲಿಲ್ಲ. ತಮ್ಮ ವಾದವನ್ನು ಬಿಡುತ್ತಿರಲಿಲ್ಲ. ಹೀಗಾಗಿ ಅವರ ಜತೆ ಯಾವ ವಿಷಯದ ಬಗ್ಗೆಯೂ ಸುದೀರ್ಘ, ಹಿತವೆನಿಸುವ ಚರ್ಚೆ ಸಾಧ್ಯವಾಗುತ್ತಿರಲಿಲ್ಲ.

ನೀವು ಅವರ ಬಳಿ ಹೋಗಿ ಏನನ್ನಾದರೂ ಕೇಳಿದರೆ, ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ನಮ್ಮ ಮುಖ ನೋಡುವುದಕ್ಕಿಂತ ಗೋಡೆಯನ್ನೋ, ಚಾವಣಿಯನ್ನೋ ನೋಡುವುದರ ಅವರಿಗೆ ಆಸಕ್ತಿಯಿತ್ತು. ಹೀಗಾಗಿ ಅವರಿಂದ ಬಿಡಿಸಿಕೊಳ್ಳುವುದನ್ನೇ ಅನೇಕರು ಬಯಸುತ್ತಿ ದ್ದರು. ‘ಕನ್ನಡಪ್ರಭ’ ಆರಂಭವಾಗುವುದಕ್ಕಿಂತ ಮುನ್ನವೇ ಆ ಪತ್ರಿಕಾ ಬಳಗವನ್ನು ಸೇರಿಕೊಂಡಿದ್ದ ಸತ್ಯ, ಇಡೀ ಸುದ್ದಿಮನೆಗೆ ಹಿರಿಯಣ್ಣನಂತಿದ್ದರು. ಅವರ ಬಳಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿತ್ತು. ಆದರೆ ಅವರ ಸಿಂಡರಿಸಿ ಕೊಳ್ಳುವ ಗುಣದಿಂದ ಹತ್ತಿರ ಹೋಗಲು ಸಾಧ್ಯವಾಗುತ್ತಿರಲಿಲ್ಲ.

ಹಾಗೆ ನೋಡಿದರೆ, ಅವರು ಯಾರನ್ನೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಅವರು ಯಾರಲ್ಲೂ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ. ಹೀಗಾಗಿ ಅವರ ಮುಂದೆ ಮನೆಯ ಅಥವಾ ಸುದ್ದಿಮನೆಯ ವಿಷಯಗಳ ಚರ್ಚೆ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು ಎಲ್ಲ ವಿಷಯಗಳನ್ನೂ ಚೆನ್ನಾಗಿ ತಿಳಿದುಕೊಂಡಿದ್ದರು. ರಾಜಕೀಯ, ಸಿದ್ಧಾಂತ, ಅರ್ಥ ವ್ಯವಸ್ಥೆ ಬಗ್ಗೆ ಏನೇ ಕೇಳಿದರೂ ಅವರು ಸಣ್ಣ-ಪುಟ್ಟ ವಿವರಗಳೊಂದಿಗೆ ಹೇಳುತ್ತಿದ್ದರು. ಯಾವುದೇ ವಿಷಯದ ಬಗ್ಗೆ ಹೇಳಿ ದರೂ, ಅವರು ಅಂಥದೇ ಇನ್ನೊಂದು ಘಟನೆಯನ್ನು ಹೇಳುತ್ತಿದ್ದರು.

ಯಾರಾದರೂ ಒಂದು ಹೊಸ ವಿಷಯ ಹೇಳಿದರೆ, ಅವರು ಮತ್ತಷ್ಟು ವಿವರಗಳೊಂದಿಗೆ ಅದನ್ನು ವಿಸ್ತರಿಸುತ್ತಿದ್ದರು. ಸತ್ಯ
ಅವರಲ್ಲಿ ಸಣ್ಣ-ಪುಟ್ಟ ಮಾಹಿತಿಯನ್ನು ಹೊಸ ಆಲೋಚನೆಯಾಗಿ ಪರಿವರ್ತಿಸುವ ವೈಚಾರಿಕ ಜಾಣ್ಮೆಯಿತ್ತು. ಅದರಲ್ಲೂ
ರಾಜ್ಯ ರಾಜಕಾರಣದ ಒಳಸುಳಿಗಳನ್ನು ಅವರು ರಾಜಕಾರಣಿಗಳಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಒಮ್ಮೆ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ತಮ್ಮ ಮನೆಯ ಜಗುಲಿಯಲ್ಲಿ ಕುಳಿತು, ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ ಓದುತ್ತಿದ್ದರು. ಆ ಪತ್ರಿಕೆಯಲ್ಲಿ ಸತ್ಯ ಅವರು ಕರ್ನಾಟಕದ ಮುಖ್ಯಮಂತ್ರಿಗಳ ಬಗ್ಗೆ ಒಂದು ಸರಣಿ ಲೇಖನಮಾಲೆ ಬರೆಯುತ್ತಿದರು. ಆ ದಿನ ಗಳಲ್ಲಿ ಸತ್ಯ ಅವರು ಪ್ರತಿ ವಾರ ಒಬ್ಬ ಮಾಜಿ ಮುಖ್ಯಮಂತ್ರಿ ಬಗ್ಗೆ ಒಂದು ಪುಟ ಮಿಗುವ ಲೇಖನ ಬರೆಯುತ್ತಿದ್ದರು.

ಗುಂಡೂರಾಯರು ತದೇಕಚಿತ್ತದಿಂದ ಆ ಲೇಖನ ಓದಿ, ತಮ್ಮ ಜತೆಯಲ್ಲಿದ್ದ, ಕೆ.ಕೆ. ಮೂರ್ತಿಯವರಿಗೆ, ‘ಈ ಸತ್ಯ ನನ್ನ ಬದುಕಿನ ಹಾದಿಯನ್ನೇ ಇಲ್ಲಿ ಹಾಸಿಬಿಟ್ಟಿದ್ದಾನೆ’ ಎಂದು ಹೇಳಿದರಂತೆ. ಇಂಥದೇ ಇನ್ನೊಂದು ಸಂದರ್ಭ. ನಾನು ಆಗ ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದೆ.

ಒಂದು ‘ಅಂತಾರಾಷ್ಟ್ರೀಯ ಜರ್ನಲ್ ’ಗಾಗಿ ಒಂದು ದೀರ್ಘ ಪ್ರಬಂಧ ಸಿದ್ಧಪಡಿಸುತ್ತಿದ್ದೆ. ಅದರ ವಿಷಯ – ‘ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕರ್ನಾಟಕದ ರಾಜಕಾರಣಿಗಳು.’ ಆ ಸಂಬಂಧವಾಗಿ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಿ ಸಂದರ್ಶನ ಮಾಡಬೇಕಿತ್ತು. ಹೆಗಡೆಯವರನ್ನು ಭೇಟಿ ಮಾಡಿ, ವಿಷಯ ತಿಳಿಸಿದಾಗ, ‘ನೀವು ನಿಮ್ಮ ಸಂಸ್ಥೆಯ ಇರುವ ಕೆ. ಸತ್ಯನಾರಾಯಣ ಅವರನ್ನು ಭೇಟಿ ಮಾಡಿ. ಅವರು ನನ್ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬಲ್ಲರು. ನನ್ನ ಬಗ್ಗೆ ಅವರಿಗೆ ನನಗಿಂತ ಹೆಚ್ಚು ಗೊತ್ತು’ ಎಂದು ಅಭಿಮಾನದಿಂದ ಹೇಳಿದ್ದರು. ತಮ್ಮ ಜೀವನದಲ್ಲಿ ನಡೆದ ಎಷ್ಟೋ ಪ್ರಸಂಗಗಳು ತಮಗೇ ಮರೆತು ಹೋಗಿರಬಹುದು, ಆದರೆ ಸತ್ಯ ಅವೆಲ್ಲವನ್ನೂ ನೆನಪಿಟ್ಟುಕೊಂಡಿರುತ್ತಾರೆ ಎಂಬ ಇಂಗಿತ ಹೆಗಡೆ ಅವರ ಮಾತಿನ ಲ್ಲಿತ್ತು. ಸತ್ಯ ಯಾರು ಎಂಬುದನ್ನು ಅರಿಯಲು ಹೆಗಡೆಯವರ ಇದೊಂದು ಮಾತು ಸಾಕು!

ಅದು ನಿಜವೂ ಆಗಿತ್ತು. ಸತ್ಯ ಅವರಲ್ಲಿ ಅಂಥ ಭಾರಿ ಸರಕುಗಳು ತುಂಬಿದ್ದವು. ಅವು ಗೂಗಲ್ ಇಲ್ಲದ ದಿನಗಳು. ಸತ್ಯ ಎಲ್ಲವನ್ನೂ ತಮ್ಮ ನೆನಪಿನ  ಬು(ತ್ತಿ)ಟ್ಟಿಯಿಂದ, ಮೊಗೆದು ತೆಗೆಯುತ್ತಿದ್ದರು. ಮೂವತ್ತು ವರ್ಷಗಳ ಹಿಂದಿನ ಚುನಾವಣೆಯಲ್ಲಿ
ಭದ್ರಾವತಿ ಅಭ್ಯರ್ಥಿ ಪಡೆದ ಮತ, ಯಾಹ್ಯಾ ಅವರ ಕ್ಷೇತ್ರ ಯಾವುದು, ಮೊಳಕಾಲ್ಮೂರಿನಿಂದ ಸ್ಪರ್ಧಿಸಿದ ಅಭ್ಯರ್ಥಿ ಹೆಸರು ಗಳೆ ನಿಖರವಾಗಿ ಅವರಿಗೆ ಗೊತ್ತಿರುತ್ತಿದ್ದವು. ಅವರು ಪತ್ರಿಕಾ ಕಚೇರಿಗೆ ಹೇಳಿ ಮಾಡಿಸಿದಂತಿದ್ದರು. ಅವರ ಬರವಣಿಗೆ ಪತ್ರಿಕೆ ಹದಕ್ಕೆ ಒಗ್ಗಿಕೊಳ್ಳುವಂತಿತ್ತು. ರಾಜಕೀಯದ ಜತೆಗೆ ಬಜೆಟ್, ಹಣದುಬ್ಬರ, ಯೋಜನೆಗಾತ್ರ, ಬಡ್ಡಿದರ, ಆರ್ಥಿಕ ಕುಸಿತ ದಂಥ ಗಡಚು ವಿಷಯಗಳನ್ನು ಅವರು ಕನ್ನಡದಲ್ಲಿ ವಿವರಿಸುತ್ತಿದ್ದ ರೀತಿ ಅನನ್ಯವಾಗಿತ್ತು.

ನನಗೆ ಎಷ್ಟೋ ಸಲ ಅನಿಸಿದ್ದಿದೆ, ಸತ್ಯ ಅವರಿಗೆ ರಾಷ್ಟಮಟ್ಟದ ಇಂಗ್ಲಿಷ್ ಪತ್ರಿಕೆಗೂ ಸಂಪಾದಕರಾಗುವ ಅರ್ಹತೆ ಇತ್ತು, ಅದಕ್ಕಿಂತ ಹೆಚ್ಚಾಗಿ ಅವರು ‘ಕನ್ನಡಪ್ರಭ’ಕ್ಕೆ ಇನ್ನೂ ಹೆಚ್ಚು ವರ್ಷಗಳ ಕಾಲ ಅಥವಾ ಎಂದೋ ಸಂಪಾದಕರಾಗಬೇಕಿತ್ತು ಮತ್ತು ಸಂಪಾದಕರಾಗಬಹುದಿತ್ತು ಎಂದು. ಆದರೆ ಆಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅದಕ್ಕೆ ಕಾರಣ ಅವರಲ್ಲಿ ನಾಯಕತ್ವ ಗುಣ ಇರಲಿಲ್ಲ. ಅವರು ಎಂದೂ ಸಮರ್ಥ ಟೀಮ್ ಲೀಡರ್ ಎಂದು ಅನಿಸಿಕೊಳ್ಳಲೇ ಇಲ್ಲ. ತಾವೇ ಎಚ್ಚರಿಕೆಯಿಂದ ಕಟ್ಟಿ ಕೊಂಡಿದ್ದ ಬೆರಳೆಣಿಕೆಯ ಕೂಟದ ಹೊರತಾಗಿ ಅವರ ವ್ಯಾಪ್ತಿ ವಿಸ್ತರಿಸಲೇ ಇಲ್ಲ.

ಬರವಣಿಗೆಯ ದೈತ್ಯ ಶಕ್ತಿ, ಕಸುಬುದಾರಿಕೆ, ಸಾಮಾಜಿಕ ಮನ್ನಣೆ ಇದ್ದರೂ ಅದೊಂದೇ ಗುಣದಿಂದ ಅವರು ಏರಬಹುದಾದ, ಏರಿ ಅಲ್ಲಿಯೇ ಇರಬಹುದಾದ ತಾಣದಲ್ಲಿ ಹೆಚ್ಚು ಕಾಲ ಇರಲಾಗಲಿಲ್ಲ. ಅವರಿಗೆ ತಮ್ಮ ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಯಿತ್ತು, ಆದರೆ ಅವರು ಬೇರೆ ಯಾರನ್ನೂ ನಂಬುತ್ತಿರಲಿಲ್ಲ. ತಮ್ಮ ಸಹೋದ್ಯೋಗಿಗಳನ್ನು ಬೆಳೆಸುವ, ಪ್ರೋತ್ಸಾಹಿಸುವ, ಮುನ್ನಡೆಸುವ, ಎಲ್ಲರನ್ನೂ ತಮ್ಮೊಂದಿಗೆ ಕರೆದೊಯ್ಯುವ ನಾಯಕನ ಗುಣ ಅವರ ಜುಬ್ಬಾದ ಜೇಬಿನಿಂದ ಇಣುಕಲೇ ಇಲ್ಲ.

ಅದರಲ್ಲೂ ಮುಖ್ಯವಾಗಿ ಯುವ ಪತ್ರಕರ್ತರನ್ನು ಬೆಳೆಯದಂತೆ ಚಿವುಟುವುದು ಹೇಗೆ ಎಂಬುದರ ಬಗ್ಗೆಯೇ ಅವರ ಪಟ್ಟುಗಳು ಬಳಕೆಯಾದವು. ಕೊನೆಗೂ ಅವರ ಆಪ್ತವಲಯ ಬೆಳೆಯಲೇ ಇಲ್ಲ. ಎಂದಿನಂತೆ ಅದು ಕೇವಲ ಮೂರ್ನಾಲ್ಕು ಮಂದಿಗೆ ಸೀಮಿತವಾಗಿತ್ತು. ಹೀಗಾಗಿ ಸತ್ಯ ಏಣಿಯೂ ಆಗಲಿಲ್ಲ, ಚಪ್ಪರವೂ ಆಗಲಿಲ್ಲ. ಆಫೀಸಿನಲ್ಲಿ ಎಲ್ಲರ ಕಾಯುವ ಬೇಲಿಯಾದರು! ಸತ್ಯ ನಿಜವಾದ ನಾಯಕನಾಗಿದ್ದರೆ ’ಪ್ರಜಾವಾಣಿ’ಯಿಂದ ರಿಟೈರ್ ಆಗಿ, ದಣಿವಾಗಿ ಬಂದ ವೈಎನ್ಕೆ ಅವರನ್ನು ಸಂಪಾದಕ ರನ್ನಾಗಿ ನೇಮಿಸುವ ಅನಿವಾರ್ಯ ಬರುತ್ತಿರಲಿಲ್ಲ. ಖಾದ್ರಿ ಶಾಮಣ್ಣ ನಂತರ, ಅವರೇ ಸಂಪಾದಕರಾಗಬಹುದಿತ್ತು.

ವೈಎನ್ಕೆ ನಿಧನದ ಬಳಿಕ ಸಂಪಾದಕರಾದ ಸತ್ಯ, ಅದೇ ಸ್ಥಾನದಲ್ಲಿ ನಿವೃತ್ತಿಯ ನಂತರವೂ, ಇನ್ನೂ ಹತ್ತು ವರ್ಷ ಸಂಪಾದಕ ರಾಗಿ ಇರಬಹುದಿತ್ತು. ಅವರ ಮುಂದೆಯೇ ಟ್ರೇನಿಗಳಾಗಿ ಸೇರಿಕೊಂಡವರೆ ಸಂಪಾದಕರಾಗುವುದನ್ನು ನೋಡಬೇಕಿರಲಿಲ್ಲ. ಸತ್ಯ ಅವರಲ್ಲಿ ಸಂಪಾದಕನಿಗಿರಬೇಕಾದ ವಿಷಯ ವೈಶಿಷ್ಟ್ಯಗಳಿದ್ದವು, ಆದರೆ ಗುಣವೈಶಾಲ್ಯ ಇರಲಿಲ್ಲ. ಹೀಗಾಗಿ ಅವರು ಪತ್ರಕರ್ತನಾಗಿ ಹೆಸರು ಮಾಡಿದರೂ ಒಬ್ಬ ಒಳ್ಳೆಯ ಸಂಪಾದಕನಾಗಲೇ ಇಲ್ಲ.

ನಾನು ‘ಕನ್ನಡಪ್ರಭ’ ಸಂಪಾದಕ ಆಗುವ ಹೊತ್ತಿಗೆ ಸತ್ಯ ನಿವೃತ್ತರಾಗಿದರೂ, ಪತ್ರಿಕೆಗೆ ನಿತ್ಯ ಸಂಪಾದಕೀಯ ಮತ್ತು ವಾರದ ಅಂಕಣ ಬರೆಯುತ್ತಿದ್ದರು. ನಾನು ಅವರ ಸೇವೆ ಯನ್ನು ಪತ್ರಿಕೆಯಲ್ಲಿ ಮುಂದುವರಿಸಲಿಕ್ಕಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬಂದವರಂತೆ, ‘ಭಟ್ರೇ, ನಾನು ನಾಳೆಯಿಂದ ಸಂಪಾದಕೀಯ ಬರೆಯುವುದಿಲ್ಲ. ವಾರದ ಅಂಕಣವನ್ನೂ. ಇದೋ ನನ್ನ ರಾಜೀನಾಮೆ’ ಎಂದರು.

ನಾನು ಅವರನ್ನು ಕುಳ್ಳಿರಿಸಿಕೊಂಡು, ‘ಸಾರ್, ನಾನು ನಿಮ್ಮನ್ನು ಮೊದಲ ಬಾರಿಗೆ ನೋಡಿದಾಗ ಪತ್ರಕರ್ತ ಕೂಡ ಆಗಿರಲಿಲ್ಲ. ನೀವು ನಮಗೆ ತಂದೆ ಸ್ಥಾನದಲ್ಲಿ ಇದ್ದೀರಿ. ನೀವು ಇರಲೇಬೇಕು. ಪತ್ರಿಕೆಗೆ ನಿಮ್ಮ ಸೇವೆಯ ಅಗತ್ಯವಿದೆ’ ಎಂದು ಹೇಳಿ ಅವರ ರಾಜಿನಾಮೆಯನ್ನು ಅವರ ಕಣ್ಣೆದುರಿ ನ ಹರಿದು ಹಾಕಿ, ಅವರನ್ನು ಉಳಿಸಿಕೊಳ್ಳಲು ಯಶಸ್ವಿಯಾದೆ.

ಸುಮಾರು ನಾಲ್ಕೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ‘ಕನ್ನಡಪ್ರಭ’ದ ಸಂಪಾದಕರಾಗಿದ್ದ ಸತ್ಯ ಅವರಿಗೆ ಆಗ ಇಪ್ಪತ್ತು ಸಾವಿರ ರುಪಾಯಿ ಸಂಬಳ ಬರುತಿತ್ತು. ನಾನು ಅದರ ಮುಂದಿನ ತಿಂಗಳು, ಪತ್ರಿಕೆಯ ಮಾಲೀಕರಾದ ಮನೋಜಕುಮಾರ ಸೊಂಥಾಲಿಯ ಅವರಿಗೆ ಹೇಳಿ ಮೂವತ್ತೈದು ಸಾವಿರ ರುಪಾಯಿ ಮಾಡಿಸಿದೆ. ಏಕಾಏಕಿ ಸಂಬಳವನ್ನು ಅಷ್ಟು ಏರಿಸಲು ಆಡಳಿತ ಮಂಡಳಿ ಒಪ್ಪಲಿಲ್ಲ. ‘ಬೇಕಾದರೆ ನನ್ನ ವೇತನದಲ್ಲಿ ಕಡಿತಗೊಳಿಸಿ, ಆದರೆ ಸತ್ಯ ಅವರಿಗೆ ಅಷ್ಟು ವೇತನ ನೀಡಲೇ ಬೇಕು’ ಎಂದು ಹೇಳಿದಾಗ, ಮ್ಯಾನೇಜ್ಮೆಂಟ್ ಒಪ್ಪಿತು.

‘ಭಟ್ರೇ, ನೀವು ನನ್ನ ಸೇವೆಯನ್ನು ಮುಂದುವರಿಸುತ್ತೀರಿ ಮತ್ತು ನಾನು ಕೇಳದಿದ್ದರೂ ಸಂಬಳ ಹೆಚ್ಚು ಮಾಡಿಸುತ್ತೀರಿ ಎಂದು ನಿರಿಕ್ಷಿಸಿರಲಿಲ್ಲ’ ಎಂದು ಹೇಳಿ ಗದ್ಗದಿತರಾಗಿ ಹೊರಟು ಹೋದರು. ಅಂದಿನಿಂದ ನನ್ನ ಮತ್ತು ಅವರ ನಡುವಿನ ಹೊಸ ಸಂಬಂಧದ ಅಧ್ಯಾಯ ಆರಂಭವಾಯಿತು. ನಾನು ಐದು ವರ್ಷಗಳ ಕಾಲ ‘ಕನ್ನಡ ಪ್ರಭ’ದ ಸಂಪಾದಕನಾಗಿ ಇದ್ದಷ್ಟೂ ಕಾಲ, ಇಬ್ಬರೂ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಮಾತಿಗೆ ಕುಳಿತುಕೊಳ್ಳುತ್ತಿದ್ದೆವು.

ಅವರಿಗೆ ‘ಕನ್ನಡಪ್ರಭ’ ಕಚೇರಿ ಮನೆಯೇ ಆಗಿತ್ತು. ನಿತ್ಯ ಅಲ್ಲಿಗೆ ಬರದಿದ್ದರೆ ಅವರ ದಿನ ಪೂರ್ಣವಾಗುತ್ತಿರಲಿಲ್ಲ. ಕೆಲವೊಮ್ಮೆ
ನಾನು ಬಿಜಿಯಾಗಿzಗ, ನನ್ನ ಕ್ಯಾಬಿನ್ ಮುಂದೆ ಸುಳಿದು ಹೊರಟು ಹೋಗುತ್ತಿದ್ದರು. ಒಂದು ದಿನ ನನ್ನ ಬಳಿ ಬಂದು, ‘ನೀವು ಸಿಗರೇಟು ಸೇದುವವರಾಗಿದ್ದರೆ, ನಾವಿಬ್ಬರೂ ಒಳ್ಳೆಯ ಜತೆಗಾರರಾಗಿರುತ್ತಿzವು’ ಎಂದು ಹೇಳಿ ತಮಾಷೆ ಮಾಡಿದ್ದರು. ಅದಕ್ಕೆ ನಾನು, ‘ಇದನ್ನು ನೀವು ಮೊದಲೇ ಹೇಳಿದ್ದಿದ್ದರೆ, ನಾನು ನಿಮಗಾಗಿ ಸಿಗರೇಟು ಸೇದುವುದನ್ನು ರೂಢಿ ಮಾಡಿಕೊಳ್ಳುತ್ತಿz’ ಎಂದು ಹೇಳಿದ್ದೆ. ಇಬ್ಬರೂ ನಕ್ಕಿದ್ದೆವು.

ಬರೆಯುವ ಪತ್ರಕರ್ತ ಮತ್ತು ಬರೆಯುವ ಸಂಪಾದಕ ತಮ್ಮ ಟೇಬಲ್ಲಿಗೆ ಹಾಸಿದ ಗಾಜಿನ ಒಳಗೆ ಸಿಗಿಸಿಟ್ಟುಕೊಳ್ಳಬಹುದಾದ ಒಂದು ಫೋಟೋ ಅಂದ್ರೆ ಅದು ಸತ್ಯ! ಅದು ನಿಜಕ್ಕೂ ಸತ್ಯ.