Sunday, 24th November 2024

ಎಂಟರ ಹೊಸ್ತಿಲಲ್ಲಿ, ಅಂದು ಸಂಕೇಶ್ವರ‍ರು ಹೇಳಿದ ಮಾತನ್ನು ನೆನೆಯುತ್ತಾ

ಇದೇ ಅಂತರಂಗ ಸುದ್ದಿ

vbhat@me.com

‘ಸಾರ್, ನಂಬರ್ ಒನ್ ಆಗಿದ್ದ ಪತ್ರಿಕೆಯನ್ನು ಮಾರಿಬಿಟ್ಟಿರಲ್ಲ. ಅಂಥ ಸ್ಥಿತಿ ಏಕೆ ಬಂತು?’ ಅಂದು ನಾನು ವಿಜಯ ಸಂಕೇಶ್ವರ ರನ್ನು ಕೇಳಿದೆ. ‘ವಿಜಯ ಕರ್ನಾಟಕ’ವನ್ನು ಟೈಮ್ಸ್ ಆಫ್ ಇಂಡಿಯಾದ ಧಣಿಗಳಿಗೆ ಮಾರಾಟ ಮಾಡಿ ಆಗ ಒಂದು ತಿಂಗಳು
ಆಗಿದ್ದಿರಬಹುದು. ‘ವಿಜಯ ಕರ್ನಾಟಕ’ವನ್ನು ಕಟ್ಟಲು ಸಂಕೇಶ್ವರರು ಅದೆಷ್ಟು ಶ್ರಮ ಹಾಕಿದ್ದರು ಎಂಬುದು ನನಗೆ ಗೊತ್ತಿತ್ತು. ನಾನು ಹೆಜ್ಜೆ ಹೆಜ್ಜೆಗೆ ಅವರ ತುಮುಲ, ತಳಮಳ, ತಾಕಲಾಟವನ್ನು, ಉಸಿರಿನ ಬಿಸಿಯಷ್ಟೇ ಹತ್ತಿರದಿಂದ ನೋಡಿದವನು. ಈ ವಾಸ್ತವ ಚಿತ್ರಣ ಅವರ ಬದುಕಿನ ಕಥೆಯನ್ನಾಧರಿಸಿ ತೆಗೆದ ‘ವಿಜಯಾನಂದ’ (ಬಯೋಪಿಕ್) ಸಿನಿಮಾದಲ್ಲೂ ಪರಿಣಾಮಕಾರಿ ಯಾಗಿ ಮೂಡಿ ಬಂದಿಲ್ಲ ಬಿಡಿ.

ಆ ದಿನಗಳಲ್ಲಿ ಬೆಳಗ್ಗೆ ಐದು ಗಂಟೆಗೇ ಸಂಕೇಶ್ವರರು ಎದ್ದು ಕುಳಿತಿರು ತ್ತಿದ್ದರು. ಎಲ್ಲಾ ಊರುಗಳಿಗೂ ಪತ್ರಿಕೆ ತಲುಪಿದೆಯಾ, ಯಾವ ಊರಿಗೆ ತಲುಪಲು ಸಮಸ್ಯೆಯಾಗಿದೆ, ಪ್ರಮುಖ ಸುದ್ದಿ ಕವರ್ ಆಗಿದೆಯಾ, ಪತ್ರಿಕೆಯಲ್ಲಿ ಏನಾದರೂ ದೋಷಗಳಾಗಿವೆಯಾ, ಮುದ್ರಣ ಗುಣಮಟ್ಟ ದಲ್ಲಿದೆಯಾ ಮುಂತಾದ ಎಲ್ಲಾ ವಿಷಯಗಳನ್ನೂ ಖುದ್ದಾಗಿ ವಿಚಾರಿಸು ತ್ತಿದ್ದರು. ಬೆಳಗ್ಗೆ ಐದು ಗಂಟೆ ಇಪ್ಪತ್ತು ನಿಮಿಷಕ್ಕೆ ನನ್ನ ಮೊಬೈಲ್ ರಿಂಗಾದರೆ, ನಿಸ್ಸಂದೇಹವಾಗಿ ಮತ್ತೊಂದು ತುದಿಯಲ್ಲಿ ಸಂಕೇಶ್ವರರ ಧ್ವನಿ. ನಾನು ಯಾವತ್ತೂ ಎರಡನೇ ರಿಂಗ್‌ಗೆ ಎತ್ತುತ್ತಿದ್ದೆ. ಅವರ ಧ್ವನಿಯಲ್ಲಿ ಏನೋ ಉದ್ವೇಗ. ಆದರೂ ಶಾಂತಚಿತ್ತ.

‘ಬಾಗಲಕೋಟೆಯ ಗದ್ದನಕೇರಿಕ್ರಾಸ್‌ಗೆ ಇಂದು ಪತ್ರಿಕೆ ತಡವಾಗಿ ತಲುಪಿದೆಯಂತೆ. ನಾಳೆಯಿಂದ ಬಾಗಲಕೋಟೆ
ಆವೃತ್ತಿಯನ್ನು ಅರ್ಧ ಗಂಟೆ ಮುಂಚಿತವಾಗಿ ಮುದ್ರಣಕ್ಕೆ ಕಳಿಸಬೇಕು’ ಎಂದು ಹೇಳಿ ಫೋನ್ ಕಟ್ ಮಾಡಿಬಿಡುತ್ತಿದ್ದರು.
ಕಾರ್ಯ ನಿಮಿತ್ತ ಹೊಸಪೇಟೆಯಲ್ಲಿ ಅವರು ಉಳಿದುಕೊಂಡಿದ್ದರೆ, ಬೆಳಗ್ಗೆ ಐದು ಗಂಟೆಗೆ ಎದ್ದು ಮಾರ್ಕೆಟ್‌ಗೆ ಹೋಗಿ ಪೇಪರ್ ಹುಡುಕಿ, ತಮ ಪತ್ರಿಕೆ ಬಗ್ಗೆ ಸಾಮಾನ್ಯ ಜನ ಏನು ಹೇಳುತ್ತಾರೆ ಎಂಬುದನ್ನು ಕೇಳಿ, ಹೇಳುತ್ತಿದ್ದರು.

ಅವರು ಯಾವ ಊರಿನಲ್ಲಿದ್ದರೂ ಈ ಕೆಲಸವನ್ನು ತಪ್ಪದೇ ಮಾಡುತ್ತಿದ್ದರು. ನಾನು ರಾತ್ರಿ ಒಂದು ಗಂಟೆಗೆ ಮಲಗಿದರೂ, ಸಂಕೇಶ್ವರರ ಕರೆ ಬರುವ ಅರ್ಧ ಗಂಟೆ ಮುನ್ನ ಎದ್ದಿರುತ್ತಿದ್ದೆ. ಅವರು ಪತ್ರಿಕೆಗಾಗಿ ಅದೆಂಥ ರಿಸ್ಕ್ ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಿತ್ತು. ಅವರು ಜಿದ್ದಿಗೆ ಬಿದ್ದವರಂತೆ ದೊಡ್ಡ ಪ್ರಮಾಣದ ಬಂಡವಾಳವನ್ನು ಪತ್ರಿಕೆ ಮೇಲೆ ಸುರಿದಿದ್ದರು. ಎಷ್ಟು ಸುರಿದರೂ ಅರೆಕ್ಷಣದಲ್ಲಿ ಖಾಲಿ! ಪತ್ರಿಕೆ ಅಂದ್ರೆ ಬ್ರಹ್ಮರಾಕ್ಷಸನಿದ್ದಂತೆ.

ಸುರಿಯುತ್ತಲೇ ಹೋಗಬೇಕು, ಸುರಿದಿದ್ದು ಕಾಣದಂತೆ ಮಾಯವಾದರೂ, ಮತ್ತೆ ಮತ್ತೆ ಸುರಿಯಬೇಕು. ಹಾಗೆಂದು ಸುರಿದ ಹಣ ವಾಪಸ್ ಬರುವುದೆಂಬ ಗ್ಯಾರಂಟಿ ಇಲ್ಲ. ಆದರೂ ಸಂಕೇಶ್ವರರು ಹಣವನ್ನು ಚೆಲ್ಲುತ್ತಾ ಹೋದರು. ಸಂಕೇಶ್ವರರು ನನ್ನನು ‘ವಿಜಯ ಕರ್ನಾಟಕ’ಕ್ಕೆ ಸೇರಿಸಿಕೊಳ್ಳುವಾಗ, ನನಗೊಂದು ಷರತ್ತು ವಿಽಸಿದ್ದರು. ಆರು ತಿಂಗಳಲ್ಲಿ ‘ವಿಜಯಕರ್ನಾಟಕ’ ಪ್ರಸಾರವನು ಎರಡು ಲಕ್ಷಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದೇ ಆ ಷರತ್ತು. ಒಂದು ವೇಳೆ ಅದಾಗದಿದ್ದರೆ, ಪತ್ರಿಕೆಯನ್ನು ಮುಚ್ಚಿಬಿಡುವುದಾಗಿ ಹೇಳಿದ್ದರು. ಮುಚ್ಚುತ್ತಿದ್ದರೋ, ಇಲ್ಲವೋ ಬೇರೆ ಮಾತು. ಆದರೆ ಅಂಥ ಮಾತು ಅವರ ಬಾಯಿಂದ ಬಂದಿತ್ತು.

‘ಈಗಾಗಲೇ ನಾನು ‘ನೂತನ’ ವಾರಪತ್ರಿಕೆ ಮತ್ತು ‘ಭಾವನಾ’ ಮಾಸ ಪತ್ರಿಕೆಯನ್ನು ಮುಚ್ಚಿದ್ದೇನೆ. ಲಾಭ ಇಲ್ಲ ಅಂದ್ರೆ ಯಾವ
ವ್ಯವಹಾರವನ್ನೂ ನಾನು ಮಾಡುವುದಿಲ್ಲ’ ಎಂದು ಅವರು ಅಂದು ಹೇಳಿದ್ದರು. ಆಗ ನಾನು ಕೇಂದ್ರ ಸಚಿವ ಅನಂತಕುಮಾರ
ಅವರಿಗೆ ವಿಶೇಷ ಕರ್ತವ್ಯ ಅಽಕಾರಿಯಾಗಿz. ‘ಭಟ್ರೇ, ಪತ್ರಿಕೆ ಮುಚ್ಚುವ ಪ್ರಸಂಗ ಬಂದರೆ, ಪರಿಹಾರವಾಗಿ ನಿಮಗೆ ಎರಡು
ವರ್ಷಗಳ ಸಂಬಳವನ್ನು ಕೊಡುತ್ತೇನೆ’ ಎಂಬ ಭರವಸೆ ನೀಡಿದ್ದರು.

ಅವರ ಮನಸ್ಸಿನಲ್ಲಿ ಬೀಸುತ್ತಿರುವ ಗಾಳಿ ಯಾವ ವೇಗದಲ್ಲಿ ಹೋಗುತ್ತಿದೆ ಎಂಬ ಸಣ್ಣ ಅರಿವು ನನಗಾಗಿತ್ತು. ಪತ್ರಿಕೆ ಆರಂಭ ದಲ್ಲಿ ಸಂಕೇಶ್ವರರು ಅನುಭವಿಸಿದ ಕೋಟಲೆ ಒಂದೆರಡಲ್ಲ. ವಾರ ವಾರ ನ್ಯೂಸ್ ಪ್ರಿಂಟ್‌ಗೆ ಹಣ ಹೊಂದಿಸಬೇಕಾಗುತ್ತಿತ್ತು. ವಿಆರ್‌ಎಲ್ ಮಾತೃ ಸಂಸ್ಥೆ ಬೆಂಬಲಕ್ಕಿತ್ತು. ಆದರೂ ಎಷ್ಟು ಅಂತ ಹಣ ಬಾಚಿ, ಬರಗಿ, ಸುರಿಯಲು ಸಾಧ್ಯ? ಸಂಕೇಶ್ವರರು ಸೋಮವಾರ ಹಣ ಕೊಡುತ್ತೇನೆ ಅಂದ್ರೆ ನ್ಯೂಸ್ ಪ್ರಿಂಟ್ ಸರಬರಾಜು  ಡುವವರು ಶನಿವಾರವೇ ಬಂದು ಅವರ ಆಫೀಸಿನಲ್ಲಿ
ಕುಳಿತಿರುತ್ತಿದ್ದರು.

‘ಸಾರ್, ನೀವು ಸೋಮವಾರವೇ ಹಣ ಕೊಡಿ, ಪರವಾಗಿಲ್ಲ. ಆದರೂ ನಾವು ಇಲ್ಲಿ ನಮ್ಮ ಪಾಡಿಗೆ ಕುಳಿತಿರುತ್ತೇವೆ’ ಎಂದು ಹೇಳುತ್ತಿದ್ದರು. ಆದರೆ ಸಂಕೇಶ್ವರರು ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ. ಸೋಮವಾರವೇ ಅವರೆಲ್ಲರಿಗೆ ಹಣ ಪಾವತಿ ಮಾಡುತ್ತಿದ್ದರು. ಮಾತು ಉಳಿಸಿಕೊಳ್ಳಲು ದುಡ್ಡುಹುಟ್ಟುವ ಮೂಲಗಳನ್ನೆ ಅವರು ಕೆದಕುತ್ತಿದ್ದರು. ಪತ್ರಿಕೆ ಪ್ರಸಾರ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಅದರ ಹತ್ತು ಪಟ್ಟು ಹಣಕಾಸು ಒತ್ತಡ ಅವರ ಮೇಲೆ ಬೀಳುತ್ತಿತ್ತು. ಆದರೆ ಅದಕ್ಕೆ ಪೂರಕವಾಗಿ ಹಣದ ಒಳಹರಿವು ಇರುತ್ತಿರಲಿಲ್ಲ. ನೂರು ರುಪಾಯಿ ಹಾಕಿದರೆ, ಎಂಟು ರುಪಾಯಿ ಬರುತ್ತಿತ್ತು. ಹಾಗಂತ ಒಂದು ದಿನವೂ ಹಣಹೂಡಿಕೆಯನ್ನು ನಿಲ್ಲಿಸುವಂತಿರಲಿಲ್ಲ. ಪ್ರತಿ ದಿನವೂ ಖರ್ಚಿನ ಬಾಬು ಎಗ್ಗಿಲ್ಲದೇ ಜಾಸ್ತಿಯಾಗುತ್ತಿತ್ತು. ಪತ್ರಿಕೆ ಬಗ್ಗೆ ಎಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿತ್ತು. ಆದರೆ ಅದನ್ನು ಪೊರೆಯುವುದು ಸಣ್ಣ ಸಂಗತಿಯಾಗಿರಲಿಲ್ಲ.

ಆಕಾಶದಲ್ಲಿ ಮೋಡಗಟ್ಟಿದರೂ ಅದು ನಮ್ಮ ತಲೆಯಮೇಲೆಯೇ ಮಳೆಯಾಗಿ ಸುರಿಯುತ್ತದೆ ಎಂಬ ಖಾತ್ರಿಯಿರುವುದಿಲ್ಲವಲ್ಲ,
ಹಾಗೆ ಈ ವ್ಯವಹಾರವೂ. ಆದರೆ ಸಂಕೇಶ್ವರರು ಹಣ ಚೆಲ್ಲುವ ವಿಷಯದಲ್ಲಿ ಸ್ವಲ್ಪವೂ ಕೈಕಚ್ಚಲಿಲ್ಲ, ಲೋಭಿಯಾಗಲಿಲ್ಲ. ಮಾರುಕಟ್ಟೆ ಬಯಸುವುದಕ್ಕಿಂತ ಹೆಚ್ಚೇ ಬಂಡವಾಳ ತೊಡಗಿಸಿದರು ಮತ್ತು ಮತ್ತಷ್ಟು ಸುರಿಯಲು ಸಿದ್ಧರಾಗಿದ್ದರು. ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ, ಅಂಥ ದಾಢಸಿ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ‘ಸಾಕು, ಈ ಹೋರಾಟ’ ಎಂದು ಸುಮ್ಮನಾಗಿ ಬಿಡುತ್ತಿದ್ದರು.

ಸಿಗದ ನೀರಿಗಾಗಿ ಅವರು ಮರುಭೂಮಿಯಲ್ಲಿ ಏಕಾಂಗಿಯಾಗಿ ನಡೆಯುತ್ತಿದ್ದಾರೇನೋ ಎಂದು ನನಗೆ ಅನಿಸುತ್ತಿತ್ತು. ಇಷ್ಟರಲ್ಲಿ ಮೂರು ವರ್ಷ ಸಾಗಿ ಹೋಯಿತು. ಪ್ರತಿ ದಿನವೂ ಒಂದು ಸಾಹಸ. ಒಂದು ಸವಾಲು ಬಗೆಹರಿಯಿತು ಎಂದುಕೊಳ್ಳುತ್ತಿರು ವಾಗಲೇ, ಅದಕ್ಕಿಂತ ದೊಡ್ಡದಾದ ಮತ್ತೊಂದು ತೊಡಕು ಅಡ್ಡವಾಗಿ ನಿಂತಿರುತ್ತಿತ್ತು. ಸಂಕೇಶ್ವರರು ಆ ಎಲ್ಲಾ ನೋವನ್ನು ಶಾಂತಚಿತ್ತರಾಗಿ ನುಂಗಿ ಮುನ್ನಡೆಯುತ್ತಿದ್ದರು. ಈ ಹೋರಾಟದಲ್ಲಿ ಅವರಿಗೆ ಬಲವಾದ ಸಾಥ್ ನೀಡಿದವರೆಂದರೆ ಅವರ ಮಗ ಆನಂದ್. ನಾವೆ ಬೇರೆ ಬೇರೆ ಹೊಣೆಗಾರಿಕೆಯನ್ನು ನಿಭಾಯಿಸಿರಬಹುದು, ಆದರೆ ಹಣಕಾಸಿನ ನೊಗವನ್ನು ಎಳೆದವರು ಅಪ್ಪ-ಮಗ ಮಾತ್ರ!

ಆದರೆ ಅವರು ತಾವು ಎಳೆದ ಆ ನೊಗದ ಭಾರ ಮತ್ತು ದೂರ ಎಂಥದ್ದು ಎಂಬುದನ್ನು ಬೇರೆಯವರಿಗೆ ಸ್ವಲ್ಪವೂ ಹೇಳಲೇ ಇಲ್ಲ. ಈ ಮಧ್ಯೆ, ‘ವಿಜಯ ಕರ್ನಾಟಕ’ ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ, ಎಲ್ಲಾ ಪ್ರತಿಸ್ಪರ್ಧಿ ಪತ್ರಿಕೆಗಳನ್ನು ಹಿಂದಿಕ್ಕಿ, ಸೋಜಿಗವೆಂಬಂತೆ ‘ನಂಬರ್ ಒನ್’ ಆಯಿತು. ‘ವಿಜಯ ಕರ್ನಾಟಕ’ ಎಂಬ ಬಚ್ಚಾ ಮುಂದೆ ಪ್ರಜಾವಾಣಿ, ಸಂಯುಕ್ತ
ಕರ್ನಾಟಕದಂಥ ದೈತ್ಯ ತಲೆಬಾಗುವಂತಾಯಿತು. ಅದು ಒಂದು ರೀತಿಯಲ್ಲಿ ಆನೆಯನ್ನು ಮಣಿಸಿದ ಮಿಡತೆ ಕಥೆಯಾಗಿತ್ತು.
ಅಷ್ಟಾದರೂ ಪತ್ರಿಕೆ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಮಾತ್ರ ಚೇತರಿಸಿಕೊಂಡಿತು. ಆದರೆ ಅಷ್ಟರೊಳಗೆ ಸಂಕೇಶ್ವರರ ಜೇಬಿಗೆ ದೊಡ್ಡ ತೂತುಬಿದ್ದಿತ್ತು.

‘ನಂಬರ್ ಒನ್’ ಪಟ್ಟ ಪಡೆದ ಬಳಿಕ ಜಾಹೀರಾತುಗಳು ದೊಡ್ಡ ಪ್ರಮಾಣದಲ್ಲಿ ಹರಿದುಬರಲಾರಂಭಿಸಿದವು. ಇಷ್ಟೇ ಆಗಿದ್ದರೆ
ಪರವಾಗಿರಲಿಲ್ಲ. ಅಷ್ಟಕ್ಕೂ ಸಮಾಧಾನವಾಗದ ಸಂಕೇಶ್ವರರು ‘ಉಷಾಕಿರಣ’ ಮತ್ತು ‘ವಿಜಯ ಟೈಮ್ಸ್’ ಎಂಬ ಮತ್ತೆರಡು ಪತ್ರಿಕೆಗಳನ್ನು ಆರಂಭಿಸಿದರು. ‘ವಿಜಯ ಕರ್ನಾಟಕ’ದಲ್ಲಿ ಬರಲಾರಂಭಿಸಿದ ಹಣ, ಆ ಎರಡು ಪತ್ರಿಕೆಳಿಂದ ಮತ್ತೆ ಹರಿದು ಹೋಗಲಾರಂಭಿಸಿತು. ಇದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು.

ಆಗ ಸಂಕೇಶ್ವರರು ‘ನಂಬರ್ ಒನ್’ ಪತ್ರಿಕೆಯಾದ ‘ವಿಜಯ ಕರ್ನಾಟಕ’ವನ್ನು ಮಾರಲು ನಿರ್ಧರಿಸಿದ್ದರು! ‘ಸಾರ್, ನಂಬರ್ ಒನ್ ಆಗಿದ್ದ ಪತ್ರಿಕೆಯನ್ನು ಮಾರಿಬಿಟ್ಟಿರಲ್ಲ. ಅಂಥ ಸ್ಥಿತಿ ಏಕೆ ಬಂತು?’ ಎಂದು ನಾನು ಕೇಳಿದೆ. ‘ನಂಬರ್ ಒನ್ ಪತ್ರಿಕೆಯನ್ನು ಮಾರಾಟ ಮಾಡಲು ನಮಗೆ ತಲೆ ಕೆಟ್ಟಿದೆಯಾ?’ ಎಂದ ಸಂಕೇಶ್ವರರು, ‘ಒಂದು ವೇಳೆ ಪತ್ರಿಕೆ ಮಾರದಿದ್ದರೆ, ನಾವಿಬ್ಬರೂ ಜೀವಂತ ಇರುತ್ತಿರಲಿಲ್ಲ’ ಎಂದರು. ನಾನು ಸುಮ್ಮನಾಗಿಬಿಟ್ಟೆ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ.

ಅನಂತರ ಸಂಕೇಶ್ವರರು ‘ವಿಜಯವಾಣಿ’ ಎಂಬ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು , ತರುವಾಯ ಅದನ್ನೂ ಯಶಸ್ವಿ ಯಾಗಿಸಿದ್ದು ಇನ್ನೊಂದು ದೊಡ್ಡ ಕಥೆ. ‘ವಿಶ್ವವಾಣಿ’ ನೊಗಕ್ಕೆ ನಾನು ಕುತ್ತಿಗೆ ಕೊಟ್ಟಾಗ, ಪಾಲುದಾರರು ಕೈ ಎತ್ತಿದಾಗ ಅಂಥದೇ ಯೋಚನೆ ನನ್ನ ಮುಂದೆಯೂ ಹಾದು ಹೋಗಿತ್ತು. ಈಗ ಅವೆ ಭಲೇ ತಮಾಷೆಯಾಗಿ ಕಾಣುತ್ತಿದೆ. ‘ವಿಶ್ವವಾಣಿ’ಯ ಎಂಟನೇ ವರ್ಷದ ಹೊಸ್ತಿಲಲ್ಲಿ ನಿಂತಾಗ ಸಂಕೇಶ್ವರರು ಅಂದು ಹೇಳಿದಮಾತು ಯಾಕೋ ನೆನಪಾಯಿತು.

ಇಂದು ಇದ್ದ ಕಾಲ, ನಾಳೆಯೂ ಇರೊಲ್ಲ. ಜಗತ್ತಿಗೆ ಬೆಳಕು ಕೊಡುವ ಸೂರ್ಯನಿಗೂ ಕೆಲಕಾಲ ಗ್ರಹಣಹಿಡಿಯುತ್ತದೆ.
ಚಂದ್ರನಿಗೂ ಮೋಡ ಮರೆಯಾಗುತ್ತದೆ. ಸೂರ್ಯನೂ ಸಂಕ್ರಮಣದಲ್ಲಿ ಪಥ ಬದಲಿಸುತ್ತಾನೆ. ಇದೇ ಬದುಕು.

ಸಿಕ್ಕಿಸಿಕೊಂಡವರ ಆರ್ತನಾದ
ಮೊನ್ನೆ ಹಾವೇರಿಯಲ್ಲಿ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಣ್ಣ-ಪುಟ್ಟ ಅಪಸ್ವರಗಳ ನಡುವೆಯೂ
ಯಶಸ್ವಿಯಾಗಿ ಸಂಪನ್ನಗೊಂಡಿತು. ಮುಸ್ಲಿಂ ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕೊಟ್ಟಿಲ್ಲವೆಂಬ ಕಾರಣಕ್ಕೆ ಕೆಲವು ಅವಿವೇಕಿಗಳು, ಸಣ್ಣ ಮನಸ್ಸಿನವರು ಅದಕ್ಕೆ ಪ್ರತಿಯಾಗಿ ಜನಸಾಹಿತ್ಯ ಸಮ್ಮೇಳನ ನಡೆಸಿ ವಿಘ್ನ ಸಂತೋಷಿಗಳಾಗಲು ಪ್ರಯತ್ನಿಸಿ, ಅಪಹಾಸ್ಯಕ್ಕೆ ಗುರಿಯಾದದ್ದು ಬೇರೆ ಮಾತು. ಇಂಥವರ ವ್ಯಾಧಿಗೆ ಯಾವ ಮದ್ದೂ ಇಲ್ಲ.

ಕೆಲವರು ತಮ್ಮ ಇರುವಿಕೆಯನ್ನು ಪ್ರದರ್ಶಿಸಲು ಆಗಾಗ ಇಂಥ ಕಿತಬಿಗಳನ್ನು ಮಾಡುತ್ತಿರುತ್ತಾರೆ. ಅವುಗಳಿಗೆಲ್ಲ ಸೊಪ್ಪು
ಹಾಕಬಾರದು. ಹೆಚ್ಚುಮಹತ್ವವನ್ನೂ ಕೊಡಬಾರದು. ಕರೋನಾಕ್ಕಾದರೂ ಮದ್ದು ಕಂಡು ಹಿಡಿದ್ದಾರೆ. ಆದರೆ ಹತಾಶೆ, ಅಸೂಯೆ ಮತ್ತು ಸಂಕುಚಿತ ಭಾವಕ್ಕೆಮದ್ದಿಲ್ಲ. ಅದು ಯಾವ ಔಷಧದಿಂದಲೂ ವಾಸಿಯಾಗುವಂಥದ್ದಲ್ಲ. ಆ ವ್ಯಾಧಿಯಿಂದ
ನರಳುವುದರ ಹೊರತಾಗಿ ಬೇರೆ ಉಪಾಯವಿಲ್ಲ. ಕೆಲವರಿಗೆ ಶುಭ ಸಂದರ್ಭವನ್ನು ಕೆಡಿಸುವುದರ ಸಮಾಧಾನ, ಸಂತೋಷ. ಅದು ಅವರ ಮನಸ್ಥಿತಿ. ಇಂಥವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕು.

ಯಾವ ಕಾರಣಕ್ಕೂ ಅವರ ‘ಹುಚ್ ಪ್ಯಾಲಿ ಆಟ’ಗಳನ್ನು ವಿರೋಧಿಸಬಾರದು ಮತ್ತು ಅಡ್ಡಿಪಡಿಸಬಾರದು. ಅವರನ್ನು ಅವರಷ್ಟಕ್ಕೆ ಬಿಡಬೇಕು. ಆಗ ಅವರಿಂದ ಇಂಥ ಇನ್ನೂ ಅನೇಕ ಹುಚ್ಚಾಟಗಳು ಮುಂದುವರಿಯುತ್ತವೆ. ಹೇಳಿ ಕೇಳಿ ಅಡ್ಡಕಸುಬುಗಳೇ ಸೇರಿದಾಗ, ಅವರೆಲ್ಲ ಸಮಾವೇಶ ಮಾಡಿದರೆ ಅಲ್ಲಿ ಏನು ನಡೆಯಬಹುದು ಎಂಬುದನ್ನು ಊಹಿಸಬಹುದು.
ಎರಡು ಮರಗಳ ಮಧ್ಯೆ ಸಿಕ್ಕಿಸಿಟ್ಟ ಬೆಣೆಯನ್ನು ಕೀಳಲು ಮುಂದಾಗುವ ಕಪಿಗೆ, ‘ಹಾಗೆ ಮಾಡಬೇಡ, ಬೆಣೆ ಕೀಳಲು
ಹೋದರೆ ನಿನ್ನದು ಸಿಕ್ಕಿಬೀಳಬಹುದು, ಅದು ಅಪಾಯಕಾರಿ’ ಎಂದು ಹೇಳಿದರೆ ಅದು ನಿಮ್ಮ ಮಾತನ್ನು ಕೇಳಿ ಸುಮ್ಮ ನಾದೀತು ಎಂದು ಭಾವಿಸಬೇಡಿ.

ಆದರೆ ಅದುಕೇಳುವುದಿಲ್ಲ. ಹೇಳಿ ಕೇಳಿ ಕಪಿ. ‘ನಾನೇಕೆ ನಿನ್ನ ಮಾತನ್ನು ಕೇಳಬೇಕು? ನಾನು ಬೆಣೆ ಕೀಳುವುದು ನಿನಗೆ ಇಷ್ಟವಿಲ್ಲ. ಅದಕ್ಕಾಗಿ ನನ್ನದುಸಿಕ್ಕಿಬೀಳಬಹುದು ಎಂದು ಹೆದರಿಸುತ್ತಿದ್ದೀಯ. ನಿನಗೆ ಬಹುತ್ವದಲ್ಲಿ ನಂಬಿಕೆ ಇಲ್ಲ. ಇಂಥವರಿಂದಾಗಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ನೀನು ಹೇಳುವುದರಲ್ಲಿ ಏನೋ ದುರುದ್ದೇಶವಿದೆ’ ಎಂದು ಪಕ್ಕಾ
ಪ್ರಗತಿಪರರಂತೆ ವಾದಿಸುತ್ತದೆ.

ಆ ಕಪಿಗೆ ಹೇಳಿ ಪ್ರಯೋಜನ ಇಲ್ಲ ಎಂದು ನೀವು ಸುಮ್ಮನಾಗುತ್ತೀರಿ. ಆದರೆ ಕೆಲ ಹೊತ್ತಿನ ಬಳಿಕ, ತನ್ನದನ್ನು ಸಿಕ್ಕಿಸಿಕೊಂಡು ಕಿರುಚುತ್ತದಲ್ಲ, ಆಗ ಅದರ ಸಂಕಟವನ್ನು ನೋಡಿ, ಸಹಾಯ ಮಾಡಲು ಮುಂದಾದಿರೆನ್ನಿ. ಆಗ ಸಿಕ್ಕಿಸಿ ಹಾಕಿದ್ದು ನೀವೇ ಎಂದು ಬೊಬ್ಬೆ ಹೊಡೆಯುತ್ತದೆ. ನಿಮ್ಮ ಮೇಲೆ ಮತ್ತಿನ್ನೇನೊ ಗೂಬೆ ಕೂರಿಸುತ್ತದೆ. ಹೀಗಾಗಿ ಎಂದೂ ಬೆಣೆ ಕೀಳುವ ಕಪಿ ಸಹವಾಸವನ್ನು ಮಾತ್ರ ಮಾಡಬಾರದು.

ಈ ಕಪಿಗಳನ್ನು ಅವರಷ್ಟಕ್ಕೆ ಬಿಟ್ಟುಬಿಡಬೇಕು. ಅವರೊಂದಿಗೆ ಅಭವೂ ಒಳ್ಳೆಯದಲ್ಲ, ಶುಭವೂ ಒಳ್ಳೆಯದಲ್ಲ. ಕನ್ನಡ ಸಾಹಿತ್ಯ
ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಅವರಿಗೆ ಈ ಕಪಿಗಳ ಚೇಷ್ಟೆ ಗೊತ್ತಿತ್ತೇನೋ? ಅವರು ಬೆಣೆ ಕೀಳುವವರಿಗೆ ಬುದ್ಧಿ
ಹೇಳುವ ಉಸಾಬರಿಗೆ ಹೋಗಲಿಲ್ಲ, ತಲೆಯನ್ನೂ ಕೆಡಿಸಿಕೊಳ್ಳಲಿಲ್ಲ. ಸಿಕ್ಕಿಸಿಕೊಂಡವರ ಆರ್ತನಾದ ಮಾತ್ರ ಜನಸಾಹಿತ್ಯ
ಸಮಾವೇಶದಲ್ಲಿ ಕೇಳಿ ಬಂತು.

ನೆಟ್ ವರ್ಕ್ ನೆಟ್ಟಗಿಲ್ಲದಿದ್ದರೆ.. 

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲವೂ ನೆಟ್ಟಗಿತ್ತು, ನೆಟ್ ವರ್ಕ್ ಒಂದನ್ನು ಹೊರತುಪಡಿಸಿ.
ಒಂದು ಜಾಗದಲ್ಲಿ ಸುಮಾರು ಎರಡು ಲಕ್ಷ ಜನರನ್ನು ಕೂಡಿ ಹಾಕಿ, ಹೊರಗಿನ ಪ್ರಪಂಚದ ಸಂಪರ್ಕವನ್ನು ಕಡಿದು ಹಾಕಿದರೆ
ಏನಾಗುತ್ತದೆ? ಅಲ್ಲಿದ್ದವರೆಲ್ಲ ಅಕ್ಷರಶಃ ಬಂದಿಗಳಂತಾಗುತ್ತಾರೆ. ಆ ಮೂರು ದಿನ ಅಲ್ಲಿ ಬಯಲು ಸೆರೆಮನೆ ನಿರ್ಮಾಣ ವಾಗಿತ್ತು. ಅಲ್ಲಿದ್ದವರಾರೂ ಹೊರಗಿನವರನ್ನು ಸಂಪರ್ಕಿಸುವಂತಿರಲಿಲ್ಲ.

ಹಾಗೆ ಹೊರಗಿನವರು ಸಮಾವೇಶದ ಜಾಗದಲ್ಲಿ ಇದ್ದವರನ್ನೂ. ಇದೊಂದು ಅಂಶ ಸಮಾವೇಶಕ್ಕೆ ಕಪ್ಪು ಚುಕ್ಕೆಯಾಗಿಕಂಡಿತು.
ಅದು ಬಿಟ್ಟರೆ ಮಿಕ್ಕೆಲ್ಲ ಸಂಗತಿಗಳಿಗೂ ಫುಲ್ ಮಾರ್ಕ್ಸ್. ಸಮಾವೇಶದ ಸಿದ್ಧತೆಯಲ್ಲಿ ಕೈಜೋಡಿಸಿದ ಜಿಲ್ಲಾ ಆಡಳಿತವೂ
ಇಂಥಪ್ರಮುಖ ಅಂಶವನ್ನು ಯಾಕೆ ಗಮನಿಸಲಿಲ್ಲವೋ ನಾ ಕಾಣೆ.

ಸಾಮಾನ್ಯವಾಗಿ ಹತ್ತಾರು ಸಾವಿರ ಜನ ಒಂದೆಡೆ ಸೇರಿದಾಗ, ನೆಟ್ ವರ್ಕ್ ಜಾಮ್ ಆಗಿ ಮೊಬೈಲ್ ಸಂಪರ್ಕ  ಅಧ್ವಾನ ವಾಗುವುದುಂಟು. ಅದರಲ್ಲೂ ಮೂರು ದಿನಗಳ ಸಮಾವೇಶದಲ್ಲಿ ಈ ಸಂಗತಿಯನ್ನು ಮುಖ್ಯವಾಗಿ ಪರಿಗಣಿಸ ಬೇಕಿತ್ತು. ಇದರಿಂದ ಸಮಾವೇಶದಲ್ಲಿ ಪುಸ್ತಕವ್ಯಾಪಾರ ಸೇರಿದಂತೆ ಎಲ್ಲಾ ಮಾರಾಟ ಮಳಿಗೆಗಳಿಗೆ ಭಾರಿ ಏಟು ಬಿದ್ದಿತು.

ಫೋನ್ ಪೇ, ಗೂಗಲ್ ಪೇ ಮಾಡಲು ನೆಟ್ ವರ್ಕ್ ಇರಲಿಲ್ಲ. ಇದರಿಂದ ನಗದು ಹಣವಿಲ್ಲದೇ ಬಂದವರು ಪರಿತಪಿಸು ವಂತಾಯಿತು. ಈ ದಿನಗಳಲ್ಲಿ ಮೊಬೈಲ, ಇಂಟರ್ನೆಟ್ ಇಲ್ಲದೇ ಜೀವನವೇ ಇಲ್ಲ ಎನ್ನುವಂತಾಗಿದೆ. ಅರ್ಧ ಗಂಟೆ ವಾಟ್ಸಾಪ್ ಡೌನ್ ಆದರೆ, ನೆಟ್ ವರ್ಕ್ಜಾಮ್ ಆದರೆ, ಆಕಾಶವೇ ಕಳಚಿಬಿದ್ದಂತಾಗುತ್ತದೆ. ಅಷ್ಟರಮಟ್ಟಿಗೆ ನಮ್ಮ ಬದುಕು ಮೊಬೈಲ್ ಆಧರಿತ. ಸಂಸಾರವೆಂಬ ಬಂಧನದಿಂದಾದರೂ ಬಿಡಿಸಿಕೊಳ್ಳಬಹುದು, ಆದರೆ ಮೊಬೈಲ್ ಎಂಬ ಸಂಕೋಲೆಯಿಂದ ಬಿಡಿಸಿಕೊಳ್ಳುವುದು ಸಾಧ್ಯವೇ ಇಲ್ಲ.

ಇಲ್ಲಿ ನಿಮಗೊಂದು ವಿಷಯವನ್ನು ಹೇಳಬೇಕು. ಕಳೆದ ತಿಂಗಳು ನಾನು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ನೋಡಲು ಕತಾರಿಗೆ ಹೋಗಿದ್ದೆ. ಕೆಲವು ಸ್ಟೇಡಿಯಂಗಳಲ್ಲಿ ತೊಂಭತ್ತು ಸಾವಿರ ಜನ ಸೇರಿದ್ದರು. ಸ್ಟೇಡಿಯಂ ಹೊರಗೆ
ಏನಿಲ್ಲವೆಂದರೂ ಇಪ್ಪತ್ತು-ಮೂವತ್ತುಸಾವಿರ ಜನ ಸೇರುತ್ತಿದ್ದರು. ಅಂದರೆ ಸ್ಟೇಡಿಯಂ ಒಳ-ಹೊರಗೆ ಪಂದ್ಯ ನಡೆಯುವಾಗ
ಒಂದೂಕಾಲು ಲಕ್ಷ ಜನ ಸೇರುತ್ತಿದ್ದರು. ಅಷ್ಟೊಂದು ಜನರಿಗೆ ಉಚಿತ ಹೈ ಸ್ಪೀಡ್ ವೈಫೈ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸ್ಟೇಡಿಯಂ ಪ್ರಾಂಗಣಕ್ಕೆ ಅಡಿಯಿಡುತ್ತಿದ್ದಂತೆ ಈ ಸೌಲಭ್ಯಪಡೆಯಬಹುದಿತ್ತು. ಮೊಬೈಲ್ ನೆಟ್ ವರ್ಕ್ ಕೂಡ oಠ್ಟಿಟ್ಞಜ ಆಗಿತ್ತು. ಸುಮಾರು ೨೦೦ ಎಕರೆ ಜಾಗದಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನಸೇರಿದ್ದರೂ, ಮೊಬೈಲ್ ನೆಟ್ ವರ್ಕ್
ಕೈಕೊಡಲಿಲ್ಲ. ವೈಫೈ ಕಣ್ಣುಮುಚ್ಚಾಲೆ ಆಡಲಿಲ್ಲ. ಸಿಗ್ನಲ್ ಸೊರಗಲಿಲ್ಲ.

ಇದರಿಂದ ಸ್ಟೇಡಿಯಂ ಒಳಗೆ ಮತ್ತು ಹೊರಗೆ ಇದ್ದವರಿಗೆ, ಹೊರಪ್ರಪಂಚದೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು
ಸಾಧ್ಯವಾಯಿತು. ಆ ಅವಽಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗರಿಷ್ಠ ಪೋಸ್ಟುಗಳು ಹರಿದು ಬರುವಂತಾಯಿತು. ಒಂದು
ನಿಮಿಷಕ್ಕೆ ಸರಾಸರಿ ನಲವತ್ತೆರಡು ಸಾವಿರ ಟ್ವೀಟುಗಳು ಹರಿದು ಹೋಗಲು ಸಹಾಯಕವಾಯಿತು. ಇದರಿಂದ ಪಂದ್ಯದ
ತುರುಸು, ಬಿರುಸು, ಹೊರಗಿನ ಜಗತ್ತಿಗೆತಿಳಿಯುವಂತಾಯಿತು.ಪ್ರತಿಯೊಬ್ಬರೂ ತಮ್ಮ ನೆಲೆಯಲ್ಲಿ ರಿಯಲ್ ಟೈಮ್ ವೀಕ್ಷಕ
ವಿವರಣಕಾರರಾದರು. ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಟ್ರೆಂಡ್ ಮಾಡಿ
ದರು. ಇದರಿಂದ ವಿಶ್ವದೆಡೆ ಅದೊಂದೇ ಪ್ರಮುಖ ವಿದ್ಯಮಾನವಾಯಿತು.

ಮೊನ್ನೆಯ ಸಮಾವೇಶದಲ್ಲೂ ಅಂಥ ಅವಕಾಶವಿತ್ತು. ಫುಟ್ಬಾಲ್ ಪಂದ್ಯಾವಳಿಗೆ ಸೇರಿದ ಜನರಿಗಿಂತ ಕನ್ನಡ ಸಮ್ಮೇಳನ
ದಲ್ಲಿ ಹೆಚ್ಚು ಜನರಿದ್ದರು. ಅವರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಮ್ಮೇಳನದ ಫೋಟೋಗಳನ್ನು ಹಂಚಿಕೊಂಡಿದ್ದರೆ,
ನಿಸ್ಸಂದೇಹವಾಗಿ ಅದುಜಾಗತಿಕ ಟ್ರೆಂಡ್ ಆಗುತ್ತಿತ್ತು. ಮೂರು ದಿನಗಳ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಸುದ್ದಿ,
ಫೋಟೋಗಳು ವಿಶ್ವದೆಡೆ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲಿ ದೊಡ್ಡ ಹವಾ ಎಬ್ಬಿಸಿಬಿಡುತ್ತಿತ್ತು. ಇನ್ನು ಮುಂದೆ ಸಮಾವೇಶ ಮಾಡುವವರು ಇಂಥ ವಿಷಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.