ಯಶೋ ಬೆಳಗು
yashomathy@gmail.com
ಮನುಷ್ಯ ನಾಪತ್ತೆಯಾದರೆ ಎಂದಾದರೂ ಒಂದು ದಿನ ಮರಳಿ ಬಂದಾನೆಂಬ ನಿರೀಕ್ಷೆಯಿರುತ್ತದೆ. ಏನಾದನೋ ಎಂಬ ತಳಮಳವಿರುತ್ತದೆ. ಬಂದ ಮೇಲೆ ಯಾಕೆ ಹೀಗೆ ಮಾಡಿದಿರಿ? ಎಂದು ಕೇಳುತ್ತಾನೇನೋ ಎಂಬ ಭಯವಿರುತ್ತದೆ. ಆದರೆ ಸಾವಿನ ಮನೆಯಲ್ಲಿ ಅದ್ಯಾವುದೂ ಇರುವುದಿಲ್ಲ. ಸಾವು ಕೇವಲ ದುಃಖವನ್ನಷ್ಟೇ ತರುವುದಿಲ್ಲ. ಕೆಲವು ಸಾವುಗಳು ದುಡ್ಡು ತರುತ್ತವೆ.
ಬಹುಶಃ ಅದು 1998ರ ದಿನಗಳು. ಹಾಯ್ ಬೆಂಗಳೂರ್! ಪತ್ರಿಕೆಯ ಮೂರನೆಯ ವಾರ್ಷಿಕೋತ್ಸವದ ಸಂಭ್ರಮದ ಆಚರಣೆಯಲ್ಲಿ ಕಥೆಗಾರರೂ, ಕಾದಂಬರಿಕಾರರೂ ಆಗಿದ್ದ ಚದುರಂಗರಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಅದಾದ ಒಂದೇ ತಿಂಗಳಿಗೆ ಅವರು ಈ ಲೋಕದಿಂದ ನಿರ್ಗಮಿಸಿದರು.
ಅದನ್ನು ಕಂಡು ನಮ್ಮ ಕಚೇರಿಯಲ್ಲಿ ಅಂದಿನ ಸಿಬ್ಬಂದಿ ಯಶೋಮತಿ ನೀವು ಮಾಲಾರ್ಪಣೆ ಮಾಡಿದ್ದಕ್ಕೇ ಹೀಗಾಯಿತು ನೋಡಿ ಎಂದು ಹಾಸ್ಯ ಮಾಡು ತ್ತಿದ್ದರು. ವಿಶ್ವವಾಣಿ ಪತ್ರಿಕೆಯ ಅಂಕಣದಲ್ಲಿ ನಕ್ಷತ್ರಗಳ ಕುರಿತು ಬರೆದ ವಾರದ ಪವರ್ ಸ್ಟಾರ್ ಈ ಲೋಕದಿಂದ ನಿರ್ಗಮಿಸಿತು. ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ ಎಂಬ ತಲೆಬರಹದ ಅಂಕಣ
ಬರೆದಾಗ ಆ ಸಾಲನ್ನು ಹಾಡಿದ ಶಿವಮೊಗ್ಗ ಸುಬ್ಬಣ್ಣನವರು ಚಿರನಿದ್ರೆಗೆ ಜಾರಿದರು.
ಕಳೆದ ವಾರ ಮೆಟ್ರೋ ಟ್ರೇನಿನ ಚಾಲಕಿಯಾಗುವ ಕನಸಿನ ಬಗ್ಗೆ ಬರೆದರೆ ಮೆಟ್ರೋ ಸೇತುವೆ ಕುಸಿದು ಬಿದ್ದು ತಾಯಿ-ಮಗುವಿನ ಜೀವವೇ ಹಾರಿ ಹೋಗಿದ್ದು ಕಂಡು ಸಾವಿನ ಕುರಿತೇ ಯೋಚಿಸಲಾರಂಭಿಸಿತು ಮನಸು. ಹುಟ್ಟು – ಬೆಳವಣಿಗೆ ಯಂತೆಯೇ ಸಾವು ಕೂಡ ಅತ್ಯಂತ ಸಹಜವಾದ ಕ್ರಿಯೆ. ಸಾವು ಕೇವಲ ಜೀವಂತ ವಸ್ತುಗಳಿಗಷ್ಟೇ ಅಲ್ಲ.
ದೇಶ, ಭಾಷೆ, ಸಂಬಂಧಗಳ ನಡುವೆಯೂ ರಾರಾಜಿಸುತ್ತದೆ. ಬರೆಯುತ್ತ, ದುಡಿಯುತ್ತ, ಮಾತಾಡುತ್ತಾ, ಕೋಪಗೊಳ್ಳುತ್ತ, ಅಸಹನೆಗೊಳ್ಳುತ್ತ, ದ್ವೇಷ ಮಾಡುತ್ತ ಧುಮುಗುಟ್ಟುವ ನಾವೆಲ್ಲರೂ ಒಂದು ದಿನ ಸುಟ್ಟು ಬೂದಿಯಾಗಿ, ಮಣ್ಣಲ್ಲಿ ಮಣ್ಣಾಗಿ
ಹೋಗುತ್ತೇವೆ ಅನ್ನುವುದನ್ನು ಮರೆತೇ ಬಿಟ್ಟಿರುತ್ತೇವೆ. ಸಾವು ನಿಶ್ಚಿತ. ಬದುಕೇ ಅನಿಶ್ಚಿತ! ಯಾವಾಗ, ಯಾವ ಘಳಿಗೆಯಲ್ಲಿ, ಯಾರ ಉಸಿರು ನಿಂತು ಕತ್ತಲಾವರಿಸಿಕೊಳ್ಳುತ್ತದೋ ಯಾರು ಬಲ್ಲರು? ಒಂದು ಸಾವು ಏನೆಲ್ಲ ಬದಲಾವಣೆಗಳನ್ನುಂಟು ಮಾಡಿ ಬಿಡುತ್ತದೆ.
ಉಸಿರು ನಿಂತ ಮರುಕ್ಷಣವೇ ಅಪ್ಪ, ಅಮ್ಮ, ಮಗ, ಮಗಳು, ತಮ್ಮ, ತಂಗಿ, ಅಕ್ಕ, ಅಣ್ಣ ಎಲ್ಲರೂ ಬಾಡಿಗಳೇ. ನಾವೇ ನಿಂತು ಕಟ್ಟಿಸಿದ ಕನಸಿನ ಮನೆಯಲ್ಲಿಟ್ಟರೆ ಅದು ಅಮಂಗಳ. ಹಾಸಿ, ಹೊದೆಯುತ್ತಿದ್ದ ಮೆತ್ತನೆಯ ಹಾಸಿಗೆ-ಹೊದಿಕೆಗಳ ಸಮೇತ ರುದ್ರಭೂಮಿಗೆ ಕಳಿಸಿ ಕೈ ತೊಳೆದುಕೊಳ್ಳುತ್ತಾರೆ. ನಮ್ಮ ಬಟ್ಟೆಬರೆಗಳು ದಾನಗಳಾಗಿ ಹೋಗುತ್ತವೆ. ಆದರೆ ಕೂಡಿಟ್ಟ ಹಣ? ಆಸ್ತಿ? ಬೇಕು. ಎಷ್ಟು ಜಾಣ ನೋಡಿ ಮನುಷ್ಯ? ಇದೆಲ್ಲ ನೋಡುವಾಗಲೇ ಧರ್ಮ-ಆಚರಣೆಗಳ ಬಗ್ಗೆ ಪ್ರಶ್ನೆಗಳೇಳುವುದು. ಆದರೆ ಯಾವ ಧರ್ಮಕ್ಕೂ, ಆಚರಣೆಗೂ ಸಾವನ್ನು ಮೀರುವ ಶಕ್ತಿಯಿಲ್ಲವಾದ್ದರಿಂದ ಸಾವೇ ಎಲ್ಲರಿಗಿಂತ ಬಲಿಷ್ಠ.
ಬೇಸರವಾದಾಗ, ಕಷ್ಟಗಳ ಸರಮಾಲೆಯಿಂದ ಮುಕ್ತಿಯೇ ದೊರೆಯದಿzಗ, ಸಾಲಗಳ ಬಾಧೆ ಬಿಡದಂತೆ ಕಾಡಿದಾಗ, ಅವಮಾನಗಳ ಒಡಲಲ್ಲಿ ನಿತ್ಯವೂ ಬೇಯುವಾಗ, ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವಾಗ, ರೋಗರುಜಿನಗಳಿಂದ ಅನುದಿನವೂ ನರಳುವಾಗ ಬಿಡುಗಡೆಯ ಮನೋಭಾವದಿಂದ ’ಸಾಕಪ್ಪಾ ಈ ಬದುಕು ಅನ್ನಿಸುವುದು ಸಹಜ. ಆದರೆ ನಾವು ಆರೋಗ್ಯವಾಗಿರುವಾಗಲೇ ನಮ್ಮ ಸಾವನ್ನು ಹೀಗೇ ಇರಬೇಕೆಂದು ಪ್ರತಿನಿತ್ಯ ಕಲ್ಪಿಸಿಕೊಳ್ಳುತ್ತಾ ಹೋದರೆ, ಅದೇ ರೀತಿಯಲ್ಲಿ ಸಾವೆಂಬ ದಯಾಮಯಿ ನಮ್ಮ ಪಾಲಿಗೆ ಒಲಿಯುತ್ತದೆ ಅನ್ನುವ ಮಾತಿನ ನಡುವೆ ನನ್ನ ಸಾವು ಯಾರಿಗೂ ಯಾವುದೇ
ರೀತಿಯ ನೋವನ್ನುಂಟು ಮಾಡುವಂತಿರಬಾರದು.
ಜೊತೆಗೆ ಎಲ್ಲರೊಂದಿಗೆ ಖುಷಿಖುಷಿಯಾಗಿ ಮಾತನಾಡುತ್ತ, ನನ್ನ ಇಚ್ಛೆಯ ಆಹಾರವನ್ನು ಆಹ್ಲಾದದಿಂದ ಸವಿದ ನಂತರ ನಿದ್ರೆಗೆ ಜಾರಿದ ಸಮಯದ ಯಾವುದೇ ನರಳಿಕೆಯಿಲ್ಲದೆ, ನೋವಿಲ್ಲದಂತೆ ಈ ಉಸಿರು ನಿಂತುಹೋಗಬೇಕು. ತಾನಾಗೇ ಮೂಡಿದ ಜೀವ ತಾನಾಗೇ ಮರಳಿ ಹೋಗುವಂತಾಗಬೇಕು ಎಂದು ಬರೆದಿಟ್ಟುಕೊಂಡೆ. ಇದರ ನಡುವೆ ಬದುಕಿಗಾಗಿ ಬದುಕಲೇಬೇಕು. ನಮ್ಮನ್ನು ನಂಬಿದವರಿಗಾಗಿ, ನಮ್ಮ ಮೇಲೆ ಅವಲಂಬಿತರಾಗಿರುವವರಿಗಾಗಿಯಾದರೂ ನಾವು
ಬದುಕಲೇಬೇಕು. ಆದ್ದರಿಂದ ನನ್ನ ಮಗನಿಗೆ ಸಮಯ ಸಿಕ್ಕಾಗಲೆಲ್ಲ ಹೇಳುತ್ತಿರುತ್ತೇನೆ.
ಯಾರ ಮೇಲೂ ಹೆಚ್ಚು ಅವಲಂಬಿತನಾಗಬೇಡ. ನಿನ್ನ ಬದುಕು ನಿನ್ನದು. ಯಾರಿದ್ದರೂ ಇಲ್ಲದಿದ್ದರೂ ಬದುಕು ಮುಂದು ವರೆಸಿಕೊಂಡು ಹೋಗುವಂಥ ಸ್ವಾವಲಂಬಿತನವನ್ನು ಮೈಗೂಡಿಸಿಕೋ. ಅಂಗವೈಕಲ್ಯತೆಯಿಂದ, ಬುದ್ಧಿಮಾಂದ್ಯತೆಯಿಂದ,
ನಿಶ್ಶಕ್ತಿಯಿಂದ, ದಿಕ್ಕಿಲ್ಲದೆ ಅನಾಥರಾದಂಥವರದೆಷ್ಟೋ ಲಕ್ಷ ಜನರು ನಮ್ಮ ನಡುವೆ ಬದುಕುತ್ತಿದ್ದಾರೆ. ಅವರೆಡೆಗೊಂದಿಷ್ಟು ಆರ್ದ್ರ ಮನಸ್ಸನ್ನಿಟ್ಟುಕೋ. ಅಂಥವರಿಗೆ ನಿನ್ನ ಕೈಲಾದ ಸಹಾಯವನ್ನು ಮಾಡು ನಿನ್ನ ಮನಸಿಗೆ ನೆಮ್ಮದಿಯನ್ನು ತರುತ್ತದೆ.
ಆಕಸ್ಮಿಕವಾಗಿಯೋ, ಅಪಘಾತವಾಗಿಯೋ ಇದ್ದಕ್ಕಿದ್ದಂತೆ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳೆಡೆಗೆ
ಸಾಮಾನ್ಯವಾಗಿ ಕುಟುಂಬದ ಇನ್ನಿತರ ಸದಸ್ಯರು ಅವರು ನೊಂದುಕೊಳ್ಳಬಾರದು ಅನ್ನುವ ಕಾಳಜಿಯಿಂದ ಅವರು
ಬಯಸಿದ್ದೆಲ್ಲ ಕೊಡಿಸುತ್ತ ಹೆಚ್ಚೆಚ್ಚು ಮುದ್ದು ಮಾಡಲು ಆರಂಭಿಸುತ್ತಾರೆ. ಆದರೆ ಅದೇ ಅವರನ್ನು ಹೆಚ್ಚು ಹಾಳುಗೆಡವುವಂತೆ ಅವಕಾಶ ಮಾಡಿಕೊಡುತ್ತದೆ. ಮಕ್ಕಳು ಖಾಲಿ ಕಂಪ್ಯೂಟರಿದ್ದಂತೆ. ಅದರೊಳಗೆ ನಾವು ಯಾವ ರೀತಿಯ ಪ್ರೊಗ್ರಾಮ್ ಬರೆಯುತ್ತೇವೆಯೋ ಅದೇ ರೀತಿಯ ವರ್ತನೆಯನ್ನು ರೂಢಿಸಿಕೊಳ್ಳುತ್ತಾರೆ. ಅವರ ಸಣ್ಣಪುಟ್ಟ ತಪ್ಪುಗಳಿಗೆ ತಕ್ಕಂತೆ ಶಿಕ್ಷೆಯೂ ಇರಬೇಕು. ಮಗ ಹುಟ್ಟಿದಾಗ ಎಲ್ಲರೂ ನಿಮಗೇನು ಶಾಲೆಯ ಚಿಂತೆಯಿಲ್ಲ.
ನಿಮ್ಮದೇ ಇದೆಯೆಲ್ಲ? ಎಂದಾಗ, ರವಿ ಅದಕ್ಕೆ ಅವಕಾಶ ಮಾಡಿಕೊಡದೆ ಉದ್ದೇಶಪೂರ್ವಕವಾಗಿಯೇ ಬೇರೆ ಶಾಲೆಗೆ
ಸೇರಿಸಿದರು. ಕಾರಣ, ಸೆಕ್ರೆಟರಿಯ ಮಗ ಅನ್ನುವ ಕಾರಣಕ್ಕೆ ಮಗುವಿಗೆ ಶಿಕ್ಷಿಸಲು ಶಿಕ್ಷಕರು ಹಿಂಜರಿಯುತ್ತಾರೆಂಬ ಮುಂದಾ ಲೋಚನೆ ಯಿಂದ. ಮಕ್ಕಳೆಂದ ಮೇಲೆ ತಪ್ಪು ಮಾಡುವುದು ಸಹಜವೇ. ಆದರೆ ಅದರ ಪರ ವಹಿಸಿಕೊಂಡು ಅವರು ಮಾಡಿzಲ್ಲ ಸರಿ ಎಂದು ರಕ್ಷಿಸುತ್ತಾ ಬಂದರೆ ನಾವಾಗೇ ಅವರ ಬದುಕನ್ನು ಹಾಳುಗೆಡವಿದಂತೆ.
ಹೀಗಾಗಿ ಮಕ್ಕಳು ತಪ್ಪು ಮಾಡಿದಾಗ ಅದು ತಪ್ಪೆಂದು ತಿಳಿಸಿಕೊಡುವುದು ತಂದೆ-ತಾಯಿ ಹಾಗೂ ಜೊತೆಗಿರುವವರ ಕರ್ತವ್ಯ. ಮನುಷ್ಯ ನಾಪತ್ತೆಯಾದರೆ ಎಂದಾದರೂ ಒಂದು ದಿನ ಮರಳಿ ಬಂದಾನೆಂಬ ನಿರೀಕ್ಷೆಯಿರುತ್ತದೆ. ಏನಾದನೋ
ಎಂಬ ತಳಮಳವಿರುತ್ತದೆ. ಬಂದ ಮೇಲೆ ಯಾಕೆ ಹೀಗೆ ಮಾಡಿದಿರಿ? ಎಂದು ಕೇಳುತ್ತಾನೇನೋ ಎಂಬ ಭಯವಿರುತ್ತದೆ. ಆದರೆ ಸಾವಿನ ಮನೆಯಲ್ಲಿ ಅದ್ಯಾವುದೂ ಇರುವುದಿಲ್ಲ. ಸಾವು ಕೇವಲ ದುಃಖವನ್ನಷ್ಟೇ ತರುವುದಿಲ್ಲ. ಕೆಲವು ಸಾವುಗಳು ದುಡ್ಡು ತರುತ್ತವೆ. ಸಾಂತ್ವನ ತರುತ್ತವೆ.
ರಾಜಿ- ಪಂಚಾಯ್ತಿಗಳು ನಡೆಯುತ್ತವೆ. ಹೊಂದಾಣಿಕೆಗಳು ಚಿಗುರುತ್ತವೆ. ಸತ್ತವರು ಸತ್ತರು. ಮುಂದೇನು ಎಂಬ ಪ್ರಶ್ನೆಗೆ
ಸಾಯದೇ ಉಳಿದವರು ನೂರೆಂಟು ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ಹತ್ತಾರು ಅಡ್ಜಮೆಂಟುಗಳನ್ನು ಮಾಡಿಕೊಳ್ಳುತ್ತಾರೆ. ಕಾಲವೆಂಬ ಪ್ರವಾಹ ಪಾತ್ರಧಾರಿಗಳಿಗೇ ಗೊತ್ತಾಗದಂತೆ ಇಡೀ ದೃಶ್ಯವನ್ನೇ ಬದಲಿಸಿಬಿಟ್ಟಿರುತ್ತದೆ. ಆದರೆ ಸತ್ತವರಿಗೆ ಈ ಬದಲಾವಣೆಗಳೆಲ್ಲ ಗೊತ್ತಾಗುವಂತಿದ್ದಿದ್ದರೆ ಅವರೇನೆಂದುಕೊಳ್ಳುತ್ತಿದ್ದರೋ? ಹೆಂಡತಿಗೆ ಅನುಕಂಪದ ಆಧಾರದ ಮೇಲೆ ಗಂಡನ ನೌಕರಿ ದೊರೆತಿರುತ್ತದೆ. ಆದರೆ ಅವನದೇ ಕಚೇರಿಯಲ್ಲಿ ಅವನಿದ್ದಾಗ ಮಾತನಾಡಿಸುತ್ತಿದ್ದ ರೀತಿಯೇ ಬೇರೆ. ಈಗ ಅವಳೊಂದಿಗಿನ ಅವರ ವರ್ತನೆಯೇ ಬೇರೆ.
ಹೆಂಡತಿ ಸತ್ತ ವರುಷದೊಳಗೆಲ್ಲ ಮತ್ತೊಂದು ಮದುವೆಯಾಗಿ ಸಂಸಾರ ನಡೆಸುವ ಗಂಡಸು ಹಳೆಯದನ್ನು ಮರೆತು ಹೊಸಜೀವನ ಕಟ್ಟಿಕೊಳ್ಳುತ್ತಾನೆ. ಮಾಡಿದ್ದ ಇನ್ಷೂರೆನ್ಸಿನ ಹಣದಿಂದ ಹೊಸ ಮನೆಕಟ್ಟಿ, ಹಳೆಮನೆಯನ್ನು ನೆನಪುಗಳ ಸಮೇತ ಅ ಬಿಟ್ಟು ಹೊಸಮನೆಯಲ್ಲಿ ಹೊಸ ಬದುಕಿಗೆ ನಡೆದು ಹೋಗುತ್ತಾರೆ. ಸತ್ತುಹೋದ ವ್ಯಕ್ತಿ ಆ ಮನೆಯಿಂದ ದೈಹಿಕ ವಾಗಿಯಷ್ಟೇ ಅಲ್ಲ; ಭಾವನಾತ್ಮಕವಾಗಿಯೂ ನಿರ್ಗಮಿಸಿಬಿಟ್ಟಿರುತ್ತಾನೆ.
ಆತ/ಆಕೆ ಇಲ್ಲದೇನೇ ಬದುಕು ಮುಂದುವರೆಯುತ್ತಿರುತ್ತದೆ. ಅಂಥಾ ಅಪಸವ್ಯವೇನೂ ಆಗಿಲ್ಲ. ಈಗಿದ್ದ/ಳು, ಈಗಿಲ್ಲ. ನಾವೆಲ್ಲ ಇದ್ದೀವಲ್ಲ? ಸಾಕು… ಎಂಬಂತೆ ಬದುಕು ತನ್ನ ಪಾಡಿಗೆ ತಾನು ಮುಂದುವರೆಯುವುದನ್ನು ನೋಡುವಾಗಲೆಲ್ಲ ಟ್ಠಠಿ ಟ್ಛ oಜಿಜeಠಿ ಜಿo ಟ್ಠಠಿ ಟ್ಛ ಞಜ್ಞಿb ಅನ್ನುವುದು ನಿಜವೇ ಏನೋ? ಅನ್ನಿಸುತ್ತದೆ. ಬದುಕಿರುವಷ್ಟು ದಿನ ನಾನುಂಟು ಮೂರು ಲೋಕವುಂಟು ಎಂದು ಮೆರೆಯುವ ನಮ್ಮನ್ನು ಸಾವೆಂಬ ಎರಡಕ್ಷರ ಹೇಗೆ ನುಂಗಿ ಹಾಕಿಬಿಡುತ್ತದೆ. ಆದರೆ ಅಪವಾದವೆಂಬಂತೆ
ಕೇವಲ ಮಕ್ಕಳಿಗಾಗಿ, ಅವರ ಉಜ್ವಲ ಭವಿಷ್ಯಕ್ಕಾಗಿ ತನ್ನ ಸಕಲ ಸುಖ-ಸಂತೋಷಗಳನ್ನೂ ತ್ಯಾಗ ಮಾಡಿ ಅವರಿಗಾಗಿ
ನಿರಂತರ ದುಡಿದು ಹೈರಾಣಾಗುವವರೂ ಇದ್ದಾರೆ. ಇದೆಲ್ಲದರ ನಡುವೆ, ಪರೀಕ್ಷೆಯಲ್ಲಿ ಫೇಲ್ ಆದೆನೆಂದೋ, ಬಯಸಿದಷ್ಟು ಅಂಕ ಬರಲಿಲ್ಲವೆಂದೋ, ಹೆಂಡತಿ ಮತ್ತಿನ್ಯಾರೊಂದಿಗೋ ಸಂಬಂಧ ಇಟ್ಟುಕೊಂಡಳೆಂದೋ? ಗಂಡ ಮತ್ತೊಂದು ಮದುವೆಯಾದನೆಂದೋ? ಟೀಚರ್ ಬೈದರೆಂದೋ, ಪ್ರೀತಿಸಿದ ಹುಡುಗ/ ಹುಡುಗಿ ಒಲಿಯಲಿಲ್ಲವೆಂದೋ, ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಯನ್ನು ನೋಡಿದಾಗಲೆಲ್ಲ ಬದುಕಿ ಅರಳಬೇಕಿದ್ದ ಜೀವಗಳು ಹೀಗೆ ಮುದುಡಿಹೋದವಲ್ಲ ಎಂದು ಕರುಳು ಹಿಂಡಿದಂತಾಗುತ್ತದೆ.
ಬದುಕಲು ನೂರಾರು ದಾರಿಗಳಿವೆ. ಅದಕ್ಕಾಗಿ ಸುಳ್ಳು ಹೇಳಿ, ಮೋಸ-ಕಳ್ಳತನ ಮಾಡುವ ಅಗತ್ಯವಿಲ್ಲ. ಕಷ್ಟಪಟ್ಟರೆ ಬದುಕನ್ನು ಇಂದಿಗಿಂತ ಇನ್ನಷ್ಟು ಚೆಂದಗೆ ಬದುಕುವ ಸಾಧ್ಯತೆ ಖಂಡಿತಾ ಇದೆ. ನಮ್ಮನ್ನು ಹಾಳುಮಾಡುವುದು ಚಟಗಳೇ ಹೊರತು ಕಷ್ಟಗಳಲ್ಲ. ರೂಢಿಸಿಕೊಳ್ಳುವುದಾದರೆ ಒಳ್ಳೆಯ ಚಟಗಳನ್ನೇ ರೂಢಿಸಿಕೊಳ್ಳೋಣ. ನಮ್ಮನ್ನು ಹಾಳು ಮಾಡುವಂಥ ಚಟಗಳ ಸಹವಾಸ ಯಾಕೆ ಬೇಕು? ಈ ಬದುಕು ನಮ್ಮದೇ ಅಲ್ಲವೇ? ಹಾಗಾದರೆ ಅದನ್ನು ಚೆಂದ ಮಾಡಿಕೊಳ್ಳಬೇಕಾದವರೂ ನಾವೇ ಅಲ್ಲವೇ? ಬರುವ ಸಮಯಕ್ಕೆ ಬರಲಿ ಸಾವು. ಅಲ್ಲಿಯವರೆಗೂ ಯಾವುದೇ ಕಂಪ್ಲೇಂಟುಗಳಿಲ್ಲದೆ ಚೆಂದಗೆ ಬದುಕಿಬಿಡೋಣ.
ರಸವೇ ಜನನ, ವಿರಸ ಮರಣ ಸಮರಸವೇ ಜೀವನ!