Sunday, 15th December 2024

ಕುಲದೀಪ್ ಸಿಂಗ್ ಸೆಂಗಾರ್’ಗೆ ಜಾಮೀನು ಮಂಜೂರು

ವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣ(2017) ದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮಗಳ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಸೆಂಗರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಪೂನಂ ಎ ಬಂಬಾ ಅವರ ಪೀಠವು ಜನವರಿ 27 ರಿಂದ ಫೆಬ್ರವರಿ 10 ರವರೆಗೆ ಕುಲದೀಪ್ ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದೆ.

ಬಿಡುಗಡೆಯ ಅವಧಿಯಲ್ಲಿ ಪ್ರತಿದಿನವೂ ಸಂಬಂಧಿತ ಎಸ್‌ಎಚ್‌ಒಗೆ ವರದಿ ಮಾಡಲು ಮತ್ತು ತಲಾ 1 ಲಕ್ಷ ರೂಪಾಯಿಗಳ ಎರಡು ಶ್ಯೂರಿಟಿಗಳನ್ನು ಒದಗಿಸುವಂತೆ ತಿಳಿಸಿದೆ.

ಕುಲದೀಪ್ ಸೆಂಗಾರ್ ಅವರು ತಮ್ಮ ವಕೀಲರ ಮೂಲಕ ಗೋರಖ್‌ಪುರ ಮತ್ತು ಲಕ್ನೋದಲ್ಲಿ ವಿವಾಹ ವಿಧಿವಿಧಾನಗಳು ಮತ್ತು ಸಮಾರಂಭಗಳು ನಡೆಯಲಿದ್ದು, ಕುಟುಂಬದ ಏಕೈಕ ಪುರುಷ ಸದಸ್ಯರಾಗಿರುವ ಕಾರಣ ಅವರು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಫೆಬ್ರವರಿ 8 ರಂದು ಮದುವೆ ನಡೆಯಲಿದೆ ಎಂದು ಬಿಜೆಪಿಯ ಮಾಜಿ ಶಾಸಕ ನ್ಯಾಯಾಲಯಕ್ಕೆ ಈ ಹಿಂದೆ ತಿಳಿಸಿದ್ದರು.

2017ರಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಉಚ್ಛಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.