Saturday, 14th December 2024

ವಿದೇಶಿ ವಿವಿ ಕ್ಯಾಂಪಸ್: ಲಾರ್ಡ್‌ ಮೆಕಾಲೆಗೆ ಪುನರ್ಜನ್ಮ ?

ಶೈಕ್ಷಣಿಕ ವಿಶ್ಲೇಷಣೆ

ರಮಾನಂದ ಶರ್ಮಾ

ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಎದುರಿಗೆ ನಮ್ಮ ವಿಶ್ವವಿದ್ಯಾಲಯಗಳು ಕಾನ್ವೆಂಟ್ ಸ್ಕೂಲ್, ಕೇಂದ್ರೀಯ ಸ್ಕೂಲ್ ಮತ್ತು ಇಂಟರ್‌ನ್ಯಾಷನಲ್ ಸ್ಕೂಲ್‌ಗಳ ಎದುರಿಗೆ ಲೋಕಲ್ ಮಾಧ್ಯಮ ಮತ್ತು ಸರಕಾರಿ ಸ್ಕೂಲ್ ಗಳು ಮುಚ್ಚಿದಂತೆ ನಮ್ಮ ವಿಶ್ವವಿದ್ಯಾಲಗಳು ಕೂಡ ಬಾಗಿಲು ಹಾಕುವ ಪರಿಸ್ಥಿತಿ ಬರಬಹುದೇನೋ?

ದೇಶದಲ್ಲಿ ನಾಲ್ಕು ರೀತಿಯ ವಿಶ್ವವಿದ್ಯಾಲಯಗಳು ಇದ್ದು, ನವೆಂಬರ್ 2022 ರಲ್ಲಿ ಇವುಗಳ ಸಂಖ್ಯೆ 1070 ಅನ್ನು ತಲುಪಿದೆ. ಇವುಗಳಲ್ಲಿ 127 ಡೀಮ್ಡ್ ವಿಶ್ವವಿದ್ಯಾಲಯಗಳು, 54 ಕೇಂದ್ರೀಯ, 300 ಖಾಸಗಿ ವಿಶ್ವ ವಿದ್ಯಾಲಯ ಗಳು, ೪೫೯ ಸ್ಟೇಟ್ ವಿಶ್ವವಿದ್ಯಾಲಯಗಳು, ೩೧೩೯೦ ಕಾಲೇಜುಗಳು ಮತ್ತು AIIMS, IITs, IISc, NITs ಯಂಥ 159 Institute of National Importance ಗಳು ಇವೆ.

ದೇಶದ 28 ರಾಜ್ಯಗಳ ಪೈಕಿ ೨೬ ಮತ್ತು ೮ ಕೆಂದ್ರಾಡಳಿತ ರಾಜ್ಯಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ೩೫ ಸರಕಾರಿ, ೧ ಕೇಂದ್ರೀಯ, ೧೧ ಡೀಮ್ಡ್, ೨೫ ಖಾಸಗಿ ವಿಶ್ವವಿದ್ಯಾಯಗಳು ಇವೆ. ದೇಶಾದ್ಯಂತ ೫೬೩ ವೈದ್ಯಕೀಯ ಕಾಲೇಜುಗಳು, ೪೨೧ ದಂತವೈದ್ಯ ಕಾಲೇಜುಗಳು, ೫೮೬೦ ಎಂಜಿನಿಯರಿಂಗ್ ಕಾಲೇಜುಗಳು ಇದ್ದರೆ, ಕರ್ನಾಟಕದಲ್ಲಿ ೪೮ ದಂತವೈದ್ಯ ಕಾಲೇಜುಗಳು, ೬೨ ವೈದ್ಯಕೀಯ ಕಾಲೇಜು ಗಳು, ೧೯೨ ಎಂಜಿನಿಯರಿಂಗ್, ೪೦೪೭ ಪದವಿ ಕಾಲೇಜುಗಳು, ೧೦೩ ಆರ್‌ಎನ್‌ಡಿ ಸೆಂಟರ್ ಮತ್ತು ೨೪೮ ಪಾಲಿಟೆಕ್ನಿಕ್ ಕಾಲೇಜುಗಳು ಇವೆ.

ದೇಶದಲ್ಲಿ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದ ಜನಸಂಖ್ಯೆ ಮತ್ತು ಹೆಚ್ಚಿನ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಬೇಡಿಕೆಯನ್ನು ಗಮಿನಿಸಿದಾಗ, ಈ ಸಂಖ್ಯೆಯನ್ನು ಹೆಚ್ಚೆಂದು ಹೇಳಲಾಗದು.

ವಿಪರ್ಯಾಸವೆಂದರೆ ದೇಶದಲ್ಲಿರುವ ಈ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪ್ರವಾಹಕ್ಕೆ ವಿದೇಶಿ ವಿಶ್ವವಿದಾಲಯಗಳ
ಕ್ಯಾಂಪಸ್ಸುಗಳೂ ಸದ್ಯದಲ್ಲಿಯೇ ಸೇರುವ ದಿನಗಳು ಹತ್ತಿರವಾಗುತ್ತಿದೆ. ವಿಶ್ವ ವಿದ್ಯಾಲಯದ ಧನಸಹಾಯ ಆಯೋಗವು (University Grant Commission -UGC) ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್ ತೆರೆಯಲು
ಅನುಮತಿ ನೀಡಿದ್ದು, ಭಾರತದಲ್ಲಿ ಇರುವ ೫೫ ರಾಷ್ಟ್ರಗಳ ರಾಯಭಾರಿ ಕಚೇರಿಗೆ ಪತ್ರ ಬರೆದಿದೆ ಮತ್ತು ಆ ದೇಶಗಳಲ್ಲಿರುವ ನಮ್ಮ ರಾಯಭಾರಿ ಕಚೇರಿಯ ಗಮನಕ್ಕೂ ತಂದಿದೆ.

ಈ ನಿಟ್ಟಿನಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾದಂಥ ಮುಂದುವರಿದ ರಾಷ್ಟ್ರಗಳತ್ತ ವಿಶೇಷ ಆಸಕ್ತಿ ವಹಿಸಿದೆಯಂತೆ. ಇದನ್ನು ಜಾಗತೀರಣ ಮತ್ತು ಉದಾರೀಕರಣದ ಮುಂದಿನ ಹೆಜ್ಜೆ ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದು,
ಭಾರತದಲ್ಲಿ ಶಿಕ್ಷಣಕ್ಕೆ ಜಾಗತೀಕರಣದ ಸ್ಪರ್ಶ ನೀಡುವ ಮೊದಲ ಹೆಜ್ಜೆ ಎನ್ನಲಾಗುತ್ತಿದೆ. ಅಂತೆಯೇ ಇದನ್ನು ಒಂದು ಶ್ಲಾಘನೀಯ ಕ್ರಮ ಎಂದೂ ಬಣ್ಣಿಸುತ್ತಿದ್ದಾರೆ. ಅದು ಬೇರೆ ಮಾತು.

ಈ ಅನುಮತಿಯಲ್ಲಿ ಕೆಲವು ಕಟ್ಟು ಪಾಡುಗಳನ್ನು ವಿಧಿಸಿದ್ದರೂ, ಮೇಲುನೋಟಕ್ಕೆ ಇಂಥ ವಿಶ್ವವಿದ್ಯಾಲಯಗಳ ಭಾರತದ ಜರ್ನಿ ಸುಗಮವಾಗಿರುವಂತೆ ಕಾಣುತ್ತದೆ. ಸಾಮಾನ್ಯವಾಗಿ ಇಂಥ ಯತ್ನಗಳಲ್ಲಿ ದಾಟಲಾರದ ಅಡಚಣೆಗಳು, ಹೊಂಡಗಳು ಮತ್ತು ತಿರುವುಗಳು ಇರುತ್ತವೆ. ಆದರೆ, ಸದ್ಯದ ಮಟ್ಟಿಗೆ ಭೌತಿಕ ತರಗತಿಗಳನ್ನು ನಡೆಸಬೇಕು. ತಮ್ಮ ಶುಲ್ಕವನ್ನು ತಾವೇ ನಿಗದಿಪಡಿಸ ಬಹುದು, ತಮ್ಮದೇ ಅದ ಪ್ರವೇಶ ನಿಯಮಾವಳಿಯನ್ನು ಮಾಡಿಕೊಳ್ಳಬಹುದು ಮತ್ತು ಫಂಡ್‌ಗಳನ್ನು ತಮ್ಮ ದೇಶಗಳಿಗೆ ಕಳಿಸಬಹುದು ಎನ್ನುವ ಸರಳ ಕಟ್ಟುಪಾಡುಗಳು ಇವೆ.

ಈ ಅನುಮತಿ ಆರಂಭದಲ್ಲಿ ೧೦ ವರ್ಷಗಳಿಗೆ ಸೀಮಿತವಾಗಿದ್ದು, ಒಂಬತ್ತು ವರ್ಷ ಅದ ಮೇಲೆ ಹತ್ತು ವರ್ಷ ಮುಗಿಯುವ ಮೊದಲು ಈ ಅನುಮತಿಯನ್ನು ನವೀಕರಿಸಿಕೊಳ್ಳಬೇಕು. ಈ ಅನುಮತಿಯನ್ನು Foreign Exchange Management Act 1999 ಅನ್ವಯ ನೀಡಲಾಗುತ್ತದೆ. ಇಂಥ ಕ್ಯಾಂಪಸ್‌ಗಳು ಉಚ್ಚ ಶೈಕ್ಷಣಿಕ ಮಟ್ಟವನ್ನು ಕಾಯ್ದು ಕೊಳ್ಳಬೇಕು ಮತ್ತು ದೇಶದ ಹಿತಾಸಕ್ತಿಯ ವಿರುದ್ಧ ಇರುವ ಯಾವುದನ್ನು ಕಲಿಸಬಾರದು. ಇದರಲ್ಲಿ ಅಳವಡಿಸಿಕೊಳ್ಳಲಾರದ ಮತ್ತು ಫೆಲೋ ಮಾಡಲಾಗದ ಯಾವುದೇ ಷರತ್ತುಗಳು ಕಾಣದಿದ್ದು, ವಿದೇಶಿ ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ಈ ದೇಶಕ್ಕೆ
ದಾಂಗುಡಿ ಇಡುವ ಸಾದ್ಯತೆಯನ್ನು ಶಿಕ್ಷಣ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಅಂತೆಯೇ ಸರಕಾರವು ಇಂಥ ವಿಶ್ವವಿದ್ಯಾಲಯಗಳ ವಿಶ್ವಾಸಾರ್ಹತೆಯನ್ನು ಮಾನಿಟರ್ ಮಾಡಲು ಮತ್ತು ಅವುಗಳು ನೀಡುವ ಶೈಕ್ಷಣಿಕ ಸೌಕರ್ಯ-ಸೌಲಭ್ಯಗಳ ಮೇಲೆ ನಿಗಾ ಇಡಲು ಸಮಿತಿಯೊಂದನ್ನು ನಿಯೋಜಿಸಿದೆ. ವಿದೇಶಿ ವಿಶ್ವ ವಿದ್ಯಾಲಯಗಳ ಕ್ಯಾಂಪಸ್ಸನ್ನು ದೇಶದಲ್ಲಿ ತೆರೆಯಲು ಈ ವರೆಗೆ ಮೀನ -ಮೇಷ ಎಣಿಸುತ್ತಿದ್ದ ಸರಕಾರದ ನಿಲುವಿನಲ್ಲಿ ದಿಢೀರ್ ಬದಲಾವಣೆಯ ಹಿಂದಿನ ಕಾರಣವೇನು ಎನ್ನುವುದರರ ಬಗೆಗೆ ಶೈಕ್ಷಣಿಕ ರಂಗದಲ್ಲಿ ಜಿಜ್ಞಾಸೆ ಮತ್ತು ಚರ್ಚೆ ಕಾಣುತ್ತಿದೆ. ಶೈಕ್ಷಣಿಕ ರಂಗದಲ್ಲಿ ಭಾರೀ ಆಧುನಿಕವಾಗಿರುವ, ಮುಂದೆ ಇರುವ ಹಲವು ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್ ಗಳನ್ನು ಭಾರತೀಯ ವಿಧ್ಯಾರ್ಥಿಗಳು ಇಷ್ಟ ಪಡುತ್ತಾರೆ. ಈ ಚಿಂತನೆಯಲ್ಲಿ ಅರ್ಥವಿಲ್ಲದಿಲ್ಲ.

ಮೂಲಭೂತವಾಗಿ ಭಾರತೀಯರು ವಿದೇಶಿ ವ್ಯಾಮೋಹದವರು ಎನ್ನುವುದನ್ನು ಅಲ್ಲಗೆಳೆಯಲಾಗದು. ವಸ್ತುಗಳು, ಉಡುಪು, ಪ್ರವಾಸೋದ್ಯಮ, ಚಿಕಿತ್ಸೆ, ತಂತ್ರಜ್ಞಾನ, ಫ್ಯಾಷನ್, ಭಾಷೆ, ಸೆಲಿಬ್ರೇಷನ್ ಹೀಗೆ ಯಾವುದೇ ಇರಲಿ ಅವರಿಗೆ ಫಾರಿನ್, ಅದರಲ್ಲೂ ‘west is best’ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.

ಹಾಗೆಯೇ ಭಾರತೀಯರು ಶಿಕ್ಷಣ ವಿಷಯದಲ್ಲೂ ಇದೇ ಮನಃಸ್ಥಿತಿಯನ್ನು ಹೊಂದಿದ್ದು, ಸಾಲ ಮಾಡಿಯಾದರೂ, ವಿದೇಶಿ ಶಿಕ್ಷಣದ ಮೊರೆ ಹೋಗುತ್ತಾರೆ. ತಮ್ಮ ಹೆಸರಿನ ಮುಂದೆ ಫಾರಿನ್ ಡಿಗ್ರಿ ಬರೆದುಕೊಳ್ಳುವಲ್ಲಿ ಹೆಮ್ಮೆ ಪಡುತ್ತಾರೆ. ಇನ್ನೊಂದು ವಿಶೇಷವೆಂದರೆ ಉದ್ಯೋಗ ಮಾರುಕಟ್ಟೆಯಲ್ಲಿ ಫಾರಿನ್ ಡಿಗ್ರಿಗಳಿಗೆ ತೂಕ ಹೆಚ್ಚು. ಈ ದೇಶದಲ್ಲಿ ದೊರಕದ ಕೋರ್ಸುಗಳಿಗೆ,
ವೈವಿದ್ಯಮಯ ಶಿಕ್ಷಣಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವುದರಲ್ಲಿ ಅರ್ಥವಿದೆ.

ಅದರೆ, ವಿದೇಶಿ ಹುಚ್ಚು ಇಷ್ಟು ಇದೆಯೆಂದರೆ ಮನೆ ಬಾಗಿಲಿನಲ್ಲಿ ದೊರಕುವ ಕಲಾ, ವಿಜ್ಞಾನ, ಕಾಮರ್ಸ್ ಪದವಿಗಳಿಗೂ ವಿದೇಶಕ್ಕೆ ಹೋಗುವವರಿದ್ದಾರೆ. ಕೆಲವರಿಗೆ ತಮ್ಮ ಮಕ್ಕಳನ್ನು ಫಾರಿನ್ ಕಾಲೇಜುಗಳಲ್ಲಿ ಓದಿಸಿದ್ದೇನೆ ಎನ್ನುವುದೇ ಗತ್ತು ಗಾರಿಕೆ. ೨೦೧೭ರಲ್ಲಿ ೪.೫೦ ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋದರೆ, ೨೦೧೯ರಲ್ಲಿ ೫.೮೬ಲಕ್ಷಕ್ಕೆ ತಲುಪಿತ್ತು.
೨೦೨೨ ರಲ್ಲಿ ೬.೫೦ ಲಕ್ಷ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದು , ಇವರಲ್ಲಿ ಅಮೆರಿಕ-೧.೯೩ ಲಕ್ಷ, ಕೆನಡಾ-೧.೯೮ ಲಕ್ಷ, ಇಂಗ್ಲೆಂಡ್- ೦.೨೭ ಲಕ್ಷ, ಆಸ್ಟ್ರೇಲಿಯಾಕ್ಕೆ ೦.೯೦ ಲಕ್ಷ ವಿದ್ಯಾರ್ಥಿಗಳು ಹೋಗಿದ್ದಾರೆ.

೨೦೧೭ರಲ್ಲಿ ೭ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಇದ್ದರೆ, ೨೦೨೧ರಲ್ಲಿ ಒಟ್ಟೂ ೧೧.೧೩ ಲಕ್ಷ ಭಾರತೀಯ ವಿದಾರ್ಥಿಗಳು ೮೫ ದೇಶಗಳಲ್ಲಿ ಇದ. ೨೦೨೬ರ ಹೊತ್ತಿಗೆ ಇದು ೧೮ ಲಕ್ಷ ತಲುಪುವ ಅಂದಾಜಿದೆ ಎಂದು Red Seer ವರದಿ ಮಾಡಿದೆ. ಅಮೆರಿಕ ಒಂದರ ೨ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರಂತೆ. ವಿಶೇಷವೆಂದರೆ, ಈ ರೀತಿ ವ್ಯಾಸಂಗಕ್ಕೆ ವಿದೇಶಕ್ಕೆ ಹೋದವರಲ್ಲಿ ಬಹುತೇಕರು ಶತಾಯಗತಾಯ ತಮ್ಮ ವ್ಯಾಸಂಗದ ನಂತರ ಅಲ್ಲಿಯೇ ಉದ್ಯೋಗ ಹಿಡಿಯುತ್ತಾರೆ.

ಉತ್ತಮ ಸಂಬಳ- ಸೌಲಭ್ಯ, ಸಾಮಾಜಿಕ ಮತ್ತು ವೃತ್ತಿ ಜೀವನ ಮತ್ತು ಅಡಚಣೆ ರಹಿತ ಬದುಕಿನ ಪದ್ಧತಿಗೆ ಹೊಂದಿ ಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ದೇಶಕ್ಕೆ brain capital drain ಎಂದು ಸರಕಾರ ಮನಗಂಡಿದ್ದು, ಅದನ್ನು ತಡೆಯಲು ವಿದೇಶಿ ವಿಶ್ವವಿದ್ಯಾಲಯಗಳಿಗೆ ಈ ದೇಶದಲ್ಲಿ ಕ್ಯಾಂಪಸ್ ತೆರೆಯಲು ಅನುಮತಿ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾನ್ವೆಂಟ್ ಶಾಲೆಗಳ ಎದುರಿನಲ್ಲಿ ಸ್ಥಳೀಯ ಮಾಧ್ಯಮ ಮತ್ತು ಸರಕಾರಿ ಸ್ಕೂಲ್‌ಗಳ ಪಾಡನ್ನು ನೋಡಿದಾಗ, ಫಾರಿನ್ ಕ್ರೇಜ್ ಇರುವ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಎದುರಿಗೆ ನಮ್ಮ ವಿಶ್ವವಿದ್ಯಾಲಯಗಳು ಕಾನ್ವೆಂಟ್ ಸ್ಕೂಲ್, ಕೇಂದ್ರೀಯ ಸ್ಕೂಲ್ ಮತ್ತು ಇಂಟರ್‌ನ್ಯಾಷನಲ್ ಸ್ಕೂಲ್‌ಗಳ ಎದುರಿಗೆ ನಮ್ಮ
ಲೋಕಲ್ ಮಾಧ್ಯಮ ಮತ್ತು ಸರಕಾರಿ ಸ್ಕೂಲ್ ಗಳು ಮುಚ್ಚಿದಂತೆ ನಮ್ಮ ವಿಶ್ವವಿದ್ಯಾಲಗಳು ಕೂಡ ಬಾಗಿಲು ಹಾಕುವ ಪರಿಸ್ಥಿತಿ ಬರಬಹುದೇನೋ? ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಆರಂಭವಾದೊಡನೆ ಸರಕಾರಿ ವಿಶ್ವವಿದ್ಯಾಲಯ ಗಳ ಮೆರುಗು ಕಡಿಮೆಯಾಗಿದೆ.

ಫಾರಿನ್ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಬಂದರೆ? ಇದು ಒಂದು ರೀತಿಯಲ್ಲಿ ಕೆಎಫ್ಸಿ, ಫಿಜಾ ಹಟ್, ಮೆಕ್ ಡೋನಾಲ್ಡ್ ಎದುರಿಗೆ ಉಡುಪಿ ಹೋಟೆಲ್‌ಗಳ ಗತಿಯಾಗುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಮಾಲ್‌ಗಳು, ಡಿಪಾರ್ಟ್‌ಮೆಂಟ್ ಸ್ಟೋರ್ಸಗಳು ಮತ್ತು ಮಾಲ್‌ಗಳ ಎದುರಿಗೆ ಶೆಟ್ಟರ ಅಂಗಡಿ ಷಟರ್ ಹಾಕಿದಂತೆ ಅಗುವ ಭಯ ಕಾಣುತ್ತಿದೆ. ಇದಕ್ಕೂ ಮೇಲಾಗಿ ಮುಂದಿನ ದಿನಗಳಲ್ಲಿ ಕಾಲೇಜು ಶಿಕ್ಷಣ ಸಂಪೂರ್ಣವಾಗಿ ಖಾಸಗೀಕರಣವಾಗುವ ಭಯವೂ ಕಾಣುತ್ತಿದ್ದು, ವಿದೇಶಿ ವಿಶ್ವವಿದ್ಯಾಲಯಗಳ ಶುಲ್ಕವನ್ನು ಭರಿಸಲಾಗದೇ ಬಡ ಮತ್ತು ಮಧ್ಯಮ ವರ್ಗಗಳು ಉನ್ನತ ಶಿಕ್ಷಣದಿಂದ ವಂಚಿತರಾಗ ಬಹುದು.

ಇದಕ್ಕೂ ಮೇಲಾಗಿ ಈ ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಶುಲ್ಕವನ್ನು ನಿರ್ಧರಿಸುವುದರೊಂದಿಗೆ ತಮ್ಮದೇ ಪಠ್ಯಕ್ರಮ ವನ್ನು ನಿಗದಿ ಪಡಿಸಬಹುದಂತೆ. ಇದು ಆತ್ಮ ನಿರ್ಭರತೆ ಮತ್ತು ನಮ್ಮತನ ಪರಿಕಲ್ಪನೆಗೆ ಮಾರಕವಾಗುವುದರಲ್ಲಿ ಸಂದೇಹ ವಿಲ್ಲ. ಈ ವಿದೇಶಿ ವಿಶ್ವ ವಿದ್ಯಾಲಯಗಳ ಕ್ಯಾಂಪಸ್ಸುಗಳ ಪಠ್ಯಕ್ರಮದ ಬಗೆಗೆ ಏನೂ ತಿಳಿಯದು. ಶಿವಾಜಿ, ಕಿತ್ತೂರು ಚೆನ್ನಮ್ಮ ರನ್ನು ಉಳಿಸಿಕೊಳ್ಳುತ್ತಾರೋ ಅಥವಾ ಫ್ರೆಂಚ್ ಕ್ರಾಂತಿ, ಬೋಸ್ಟನ್ ಟಿ ಪಾರ್ಟಿಯನ್ನು ಅನಾವರಣಗೊಳಿಸುತ್ತಾರೋ ತಿಳಿಯದು. ಭಾರತೀಯ ಪರಂಪರೆ, ಇತಿಹಾಸ, ಸಂಸ್ಕೃತಿ, ಶಿಕ್ಷಣ ಪದ್ಧತಿ ಮುಂದುವರಿಯುತ್ತದೆಯೋ ಅಥವಾ ಆ ದೇಶಗಳ ಸಿಸ್ಟಮ್ ಅನ್ನು ಪರಿಚಯಿಸುತ್ತಾರೋ ತಿಳಿಯದು.

ಆದರೆ, ಇವು ನಮ್ಮ ಬೇರುಗಳನ್ನೇ ಕಿತ್ತೊಗೆದು, ನಮ್ಮ ಅಸ್ಮಿತೆ, ಸ್ವಾಭಿಮಾನ ಮತ್ತು ನಮ್ಮತನವನ್ನು ಹತ್ತಿಕ್ಕಿ ಹೊಸದನ್ನು ನೆಡುವ ಪ್ರಯತ್ನ ನಡೆಸಿದರೆ ವಿರೋಧ ಮತ್ತು ವಿವಾದವಾಗುವುದನ್ನು ಅಲ್ಲಗೆಳೆಯಲಾಗದು. ಬಹುರಾಷ್ಟ್ರೀಯ ಕಂಪನಿಗಳನ್ನು ಈಸ್ಟ ಇಂಡಿಯಾ ಕಂಪನಿ ಗಳ ಇನ್ನೊಂದು ರೂಪವೆಂದು ವಿರೋಧಿಸುವಾಗ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸಿನ ಭಾರತದ ಪಯಣ ಸುಗಮವಾಗಬಹುದೇ? ಅದೇ ರೀತಿ ಲೋಕಲ್ ವೋಕಲ್ ಘೋಷ ವಾಕ್ಯದಡಿಯಲ್ಲಿ ಗುಲಾಮಿ ಇಂಗ್ಲಿಷ್ ಭಾಷೆಯನ್ನು ಬದಿಗೊತ್ತಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತೀಯ ಭಾಷೆಯಲ್ಲಿ ನೀಡಬೇಕು ಎನ್ನುವ ಒತ್ತಾಸೆ ಜೋರಾಗುತ್ತಿರುವಾಗ ಮತ್ತು ದೇಶದ ಕೆಲವು ಭಾಗಗಳಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎನ್ನುವುದು ಭಾರೀ ಕುತೂಹಲದ ವಿಷಯ. ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸು ಭಾರತೀಯ ವಿಶ್ವ ವಿದ್ಯಾಲಯಗಳಿಗೆ ಮರಣ ಶಾಸನವಾಬಹುದು ಎಂದರೆ ಸ್ವಲ್ಪ ಅತಿ ಎನಿಸುತ್ತದೆ.

ಅದರೆ, ಈ ಕ್ರಮ ಲಾರ್ಡ ಮೆಕಾಲೆಗೆ ರೆಡ್ ಕಾರ್ಪೆಟ್ ಹಾಸಿ ಪುನರ್ಜನ್ಮ ನೀಡಿದಂತೆ ಎನ್ನುವ ಟೀಕೆಯಲ್ಲಿ ತೂಕ ಕಾಣುತ್ತದೆ.

Read E-Paper click here