ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಭಿನ್ನವಾಗಿರಲಿದೆ. ಪ್ರತಿ ವರ್ಷ ಪರೆಡ್ ನಡೆಯುವ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ವಿಶೇಷ ಅತಿಥಿಗಳು ಆಸೀನರಾಗಲಿದ್ದಾರೆ!
ಸೆಂಟ್ರಲ್ ವಿಸ್ತಾಗೆ ದುಡಿದ ಕಾರ್ಮಿಕರು, ರಿಕ್ಷಾವಾಲಾಗಳು, ತರಕಾರಿ ಮಾರಾಟಗಾರರು, ಸಣ್ಣ ದಿನಿಸಿ ವ್ಯಾಪಾರಸ್ಥರು ಮತ್ತು ಅವರ ಕುಟುಂಬಸ್ಥರು. ಇವರೆಲ್ಲ ಮುಂದಿನ ಸಾಲಿನಲ್ಲಿ ಆಸೀನರಾಗಿ, ಪರೇಡ್ ವೀಕ್ಷಿಸಲಿದ್ದಾರೆ!
ಸಾಮಾನ್ಯರನ್ನು ಫ್ರಂಟ್‌ಲೈನ್‌ನಲ್ಲಿ ಕೂಡಿಸುವ ಮೂಲಕ ನಿಜವಾಗಿಯೂ ಗಣರಾಜ್ಯ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಗಣರಾಜ್ಯೋತ್ಸವಕ್ಕೆ ಸಂಬಂಧಿ ಸಿದ ಎಲ್ಲ ಕಾರ್ಯಕ್ರಮಗಳಿಗೆ ಇದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
ಪ್ರಸಕ್ತ ಸಾಲಿನ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಸೆಂಟ್ರಲ್ ವಿಸ್ತಾದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಡೆಸಲಾಗುತ್ತಿದೆ. ಈ ಮೊದಲು ಪರೇಡ್ ನಡೆಯುವ ಮಾರ್ಗವನ್ನು ರಾಜಪಥ ಎಂದು ಕರೆಯಲಾಗುತ್ತಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೆಂಟ್ರಲ್ ವಿಸ್ತಾಗೆ ಚಾಲನೆ ನೀಡಿ, ರಾಜಪಥವನ್ನು ಕರ್ತವ್ಯ ಪಥ ಎಂದು ಮರು ನಾಮಕಾರಣ ಮಾಡಲಾಯಿತು.