Friday, 22nd November 2024

ಗೋವಾಗೆ ಹೊರಟಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ಭೂಸ್ಪರ್ಶ

ಪಣಜಿ: ರಷ್ಯಾದ ರಾಜಧಾನಿ ಮಾಸ್ಕೋದಿಂದ 240 ಪ್ರಯಾಣಿಕರ ಹೊತ್ತು ಗೋವಾಗೆ ಹೊರಟಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ 240 ಪ್ರಯಾಣಿಕರ ಹೊತ್ತು ಟೇಕ್ ಆಫ್ ಆಗಿತ್ತು. ಈ ವೇಳೆ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಉಜ್ಬೇಕಿ ಸ್ತಾನಕ್ಕೆ ತಿರುಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 4.15ಕ್ಕೆ ವಿಮಾನ ಲ್ಯಾಂಡ್ ಆಗಬೇಕಿತ್ತು. ‘ಅಜುರ್ ಏರ್’ ನಿರ್ವಹಿಸುತ್ತಿರುವ ವಿಮಾನ ಭಾರತೀಯ ವಾಯುಪ್ರದೇಶ ಪ್ರವೇಶಿ ಸುವ ಮುನ್ನವೇ, ಅದನ್ನು ಬೇರೆ ಕಡೆಗೆ ಕಳುಹಿಸಲಾಯಿತು.

ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ರಾತ್ರಿ 12.30ಕ್ಕೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಮೂಲಕ ಬಂದಿರುವುದಾಗಿ ತಿಳಿಯುತ್ತಲೇ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು.

ಎರಡು ವಾರಗಳ ಹಿಂದೆ, ಮಾಸ್ಕೋ–ಗೋವಾ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ವಿಮಾನವನ್ನು ಗುಜರಾತ್ನ ಜಾಮ್ನಗರದಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಗಿತ್ತು.