ತುಮಕೂರು : 18 ವರ್ಷ ತುಂಬಿದ ಅರ್ಹ ಮತದಾರರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣವನ್ನು ತೀರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಕರೆ ನೀಡಿದರು.
ಜಿಲ್ಲಾಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಸಹಯೋಗದಲ್ಲಿ ಬುಧವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿದ್ದು, ಆಯೋಗ ಅಸ್ತಿತ್ವಕ್ಕೆ ಬಂದ ದಿನವಾದ ಜನವರಿ 25ರಂದು ರಾಷ್ಟçದಾದ್ಯಂತ “ರಾಷ್ಟೀಯ ಮತದಾರರ ದಿನಾಚರಣೆ”ಯನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಅನ್ನದಾನ, ಅಕ್ಷರದಾನ, ರಕ್ತದಾನ, ನೇತ್ರದಾನ ದಂತೆಯೇ ಮತದಾನವೂ ಶ್ರೇಷ್ಠವಾದದ್ದು. ಹಕ್ಕುಗಳಿಗಾಗಿ ಹೋರಾಟ ಮಾಡುವ ನಾವು ಮತದಾನದ ಕರ್ತವ್ಯವನ್ನು ಮರೆಯುತ್ತಿದ್ದೇವೆ. ಯಾವುದೇ ಆಸೆ-ಆಮಿಷಗಳಿಗೆ ಮತವನ್ನು ಮಾರಾಟ ಮಾಡಿದರೆ, ನಮ್ಮ ತನವನ್ನು ಮಾರಾಟ ಮಾಡಿ ದಂತಾಗುತ್ತದೆ. ಹಬ್ಬದಂತೆ ಮತದಾನ ದಿನವನ್ನು ಆಚರಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಯುವಕರು ಮತದಾನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ ವಾಗಿದೆ. “ಮತದಾನಕ್ಕಿಂತ ಇನ್ನೊಂದು ಇಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಚುನಾವಣಾ ಆಯೋಗದ ಧ್ಯೇಯ ವಾಕ್ಯದಂತೆ ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಜಿಲ್ಲೆಯ ತುಮಕೂರು ನಗರ ಮತ್ತು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವನ್ನು ನಿರ್ವಹಣೆ ಮಾಡಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸುಶ್ಮಿತ ಅವರು ಸೈನ್ ಲಾಂಗ್ವೇಜ್(ಸಂಕೇತ ಭಾಷೆ) ಮೂಲಕ ಶ್ರವಣದೋಷವುಳ್ಳ ಮಕ್ಕಳಿಗೆ ಗಣ್ಯರ ಭಾಷಣದ ವಿವರಣೆ ನೀಡಿದ್ದು ವಿಶೇಷ ವಾಗಿತ್ತು. ಕಾರ್ಯಕ್ರಮದ ಅಂಗವಾಗಿ ಕನ್ನಡದ ಪ್ರಸಿದ್ಧ ಗಾಯಕ ವಿಜಯಪ್ರಕಾಶ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಗಾಯಕರು ಮತದಾನ ಮಾಡುವ ಕುರಿತು ಹಾಡಿದ ಜಾಗೃತಿ ಗೀತೆಯ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.
ತಹಶೀಲ್ದಾರ್ ಸಿದ್ದೇಶ್ ಸ್ವಾಗತಿಸಿದರು. ಜಗದೀಶ್ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಜಿ.ಆರ್.ನಟರಾಜ, ಪಾಲಿಕೆ ಆಯುಕ್ತ ಯೋಗಾನಂದ ಸಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ, ಮತ್ತಿತರರು ಹಾಜರಿದ್ದರು.