Saturday, 23rd November 2024

ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂನಿಂದ 3,900 ನೌಕರರ ವಜಾ

ವಾಷಿಂಗ್ಟನ್: ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಹೇಳಿದೆ.

ಕಂಪನಿಗೆ ಹೊಸ ರೂಪ ಕೊಡುವ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ತಿಳಿಸಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವುದನ್ನು ಮುಂದುವರಿಸಲಾಗುವುದು ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಗ್ ಹೇಳಿದ್ದಾರೆ.

ಕಳೆದ ಎರಡೂವರೆ ವರ್ಷದಿಂದ ಸಾವಿರಾರು ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಇತರರಿಗಿಂತ ಭಿನ್ನವಾಗಿದ್ದೇವೆ. ನಾವು ದಕ್ಷತೆ ಹೆಚ್ಚಿಸುವ ಡಿಜಿಟಲೀಕರಣ, ಆಟೊಮೇಷನ್ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜತೆಗೆ, ಕ್ಲೈಂಟ್-ಫೇಸಿಂಗ್ ಸಂಶೋಧನೆಗಾಗಿ ನೌಕರರನ್ನು ನೇಮಕ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಕವನಾಗ್ ತಿಳಿಸಿದ್ದಾರೆ.

ಎಚ್‌ಪಿ, ಮೆಟಾ, ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ತಗ್ಗಿಸುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತದ ಮೊರೆ ಹೋಗಿವೆ. ಮೆಟಾ ಮಾಲೀ ಕತ್ವದ ಫೇಸ್‌ಬುಕ್‌ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿತ್ತು. ಗೂಗಲ್ ಕಂಪನಿಯು ಒಟ್ಟು 12 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿದೆ.