Saturday, 26th October 2024

ಪದ್ಮಶ್ರೀ ಪುರಸ್ಕೃತ ಮುನಿವೆಂಕಟಪ್ಪಗೆ ಪೌರ ಸನ್ಮಾನ

ಚಿಕ್ಕಬಳ್ಳಾಪುರ : ಕೇಂದ್ರ ಸರಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಮುಡಿಗೇರಿಸಿಕೊಂಡಿರುವ ತಮಟೆ ವಾದನ ಪಂಡಿತ ೭೪ರ ಹರೆಯದ ಮುನಿವೆಂಕಟಪ್ಪಗೆ ಜಿಲ್ಲಾಡಳಿತದ ವತಿಯಿಂದ ಆತ್ಮೀಯ ಪೌರಸನ್ಮಾನ ನಡೆಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಶಾಲು ಹಾರತುರಾಯಿ ಹಾಕಿ ಫಲತಾಂಬೂಲ ನೀಡುವ ಮೂಲಕ ಜಿಲ್ಲಾಡಳಿತದ ವತಿಯಿಂದ ಪೌರ ಸನ್ಮಾನ ನೀಡಿದರು.
ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನಿವೆಂಕಟಪ್ಪ ಕೇಂದ್ರ ಸರಕಾರ ನನ್ನಂತಹ ಬಡ ತಮಟೆ ಕಲಾವಿದನನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕೇಳಿ ಸಂತೋಷ ವಾಗಿದೆ.ನನಗೀಗ ೭೪ವರ್ಷ ವಯಸ್ಸು.
ನಮ್ಮ ತಂದೆಯೂ ಕೂಡ ತಮಟೆ ನುಡಿಸುತ್ತಿದ್ದರು. ಹೀಗಾಗಿ ನಾನೂ ಕೂಡ ಚಿಕ್ಕವಯಸ್ಸಿನಿಂದಲೇ ತಂದೆಯಿ0ದ ತಮಟೆ ಬಾರಿಸುವುದನ್ನು ಕಲಿತೆ.ಅವರ ಮರಣಾನಂತರ ಅವರು ಮಾಡುತ್ತಿದ್ದ ಕೆಲಸಗಳು ನನ್ನ ಹೆಗಲೇರಿದವು.ಸಾವಿನ ಮೆರವಣಿಗೆ,ದೇವರ ಉತ್ಸವ, ಕರಗ ಮಹೋತ್ಸವ, ಊರ ಜಾತ್ರೆ ಹೀಗೆ ಸ್ಥಳೀಯವಾಗಿ ತಮಟೆ ಬಾರಿಸು ತ್ತಿದ್ದ ನನ್ನನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ, ಎಲೆಮರೆ ಕಾಯಿಯಂತಿರುವ ಕೆಲ ಸಹೃದಯ ಅಧಿಕಾರಿವರ್ಗ ವೇದಿಕೆ  ಒದಗಿಸಿ ಕಾರ್ಯಕ್ರಮ ನೀಡಲು ಶುರುವಾದ ಮೇಲೆ ರಾಜ್ಯದ ಉದ್ದಗಲಕ್ಕೂ ನನ್ನ ಹೆಸರು ಪರಿಚಯವಾಗಿ ಈಗ ಪದ್ಮಶ್ರೀ ಬಾಗಿಲ ಬಳಿಗೆ ಬಂದು ನಿಂತಿದೆ.ನನಗೆ ನಂಬಿಕೆಯಿತ್ತು ಇಂತಹ ಹೆಚ್ಚಿನ ಪ್ರಶಸ್ತಿಗಳು ಬಂದೇ ಬರಲಿವೆ ಎಂದು. ನನ್ನ ಕಲೆಯನ್ನು ಅರಸಿ ಬೇಕಾದಷ್ಟು ಪ್ರಶಸ್ತಿಗಳೇನೋ ಬಂದಿವೆ.ಆದರೆ ಹೊಟ್ಟೆ ತುಂಬಿಲ್ಲ.ಬದುಕು ಸಾಗಬೇಕಲ್ಲ ಹೇಗೋ ಇದ್ದಷ್ಟರಲ್ಲಿಯೇ ಹೆಣಗುತ್ತಿದ್ದೇನೆ.ಸರಕಾರ ನೀಡುತ್ತಿರುವ ೨ ಸಾವಿರ ಮಾಶಾಸನದಲ್ಲಿ ನಾನು ನನ್ನ ಮಗ ಹೆಂಡತಿ ಸಂಧ್ಯಾಕಾಲ ಕಳೆಯುತ್ತಿದ್ದೇನೆ ಎಂದು ಸಂತೋಷವನ್ನು ಬದಿಗಿಟ್ಟು ತಮ್ಮ ನೋವು ತೋಡಿ ಕೊಂಡರು.
೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ೧೦ಸಾವಿರ ಹಣ ನೀಡಿದ್ದು ಬಿಟ್ಟರೆ, ಜಾನಪದ ಅಕಾಡೆಮಿ,ನಾಡೋಜ ಪ್ರಶಸ್ತಿಗಳು ಬಂದಾಗ ನಯಾಪೈಸೆ ನೀಡಿಲ್ಲ.ಈಗ ಪದ್ಮಶ್ರೀ ಪ್ರಶಸ್ತಿಯಲ್ಲಿ ಏನಾಗುವುದೋ ತಿಳಿದಿಲ್ಲ.೨೦೧೬ರಲ್ಲಿ ಬೆಂಗಳೂರಿನ ಕೆಂಪೇಗೌಡ ಬಡಾವಣೆಯಲ್ಲಿ ಜಿ ಕೆಟಗರಿ ಸೈಟ್ ಮಂಜೂರು ಆಗಿತ್ತು. ೫ ಲಕ್ಷ ಹಣ ಕಟ್ಟಲಾಗದೆ ಸೈಟ್ ವಾಪಸ್ಸು ಹೋಗಿದೆ.ಇಷ್ಟೆಲ್ಲಾ ಕಲಾಸೇವೆ ಮಾಡಿ ಪ್ರಶಸ್ತಿ ಪುರಸ್ಕಾರಗಳು ಬಂದಿದ್ದರೂ ಸರಕಾರದಿಂದ ಈವರೆಗೆ ನನಗೆ ಒಂದು ಕೊಳವೆಬಾವಿ ಕೊರೆಸಿಕೊಟ್ಟಿಲ್ಲ.ನಿವೇಶನ ನೀಡಿಲ್ಲ,ಹಿರಿಯ ಕಲಾವಿದ ಎಂದು ೫ ಸಾವಿರ ಮಾಶಾಸನ ಮಾಡಿಕೊಟ್ಟಿಲ್ಲ.ಇಷ್ಟನ್ನಾದರೂ ಮಾಡಿಕೊಡಲಿ ಎಂದು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಕೈಮುಗಿದರು.
ತಮಟೆ ಕಲೆ ಇಂದು ನಶಿಸಿ ಹೋಗುತ್ತಿದೆ.ಕಾರಣ ಸಮಾಜದ ಅಸಡ್ಡೆ,ಜಾತಿವಾದಿತನ, ಪ್ರದರ್ಶನಕ್ಕೆ ಅವಕಾಶಗಳು ಕಡಿಮೆ,ಜತೆಗೆ ಸಂಭಾವನೆಯೂ ನಿಗದಿಯಿಲ್ಲದಿರುವುದೇ ಆಗಿದೆ.ಈ ಕಲೆ ಉಳಿಯಬೇಕಾದರೆ ಕಲೆ ಮತ್ತು ಕಲಾವಿದರನ್ನು ಕಲೆಯ ಮೂಲಕ ನೋಡಿ, ಸರಕಾರ ಸಂಘಸAಸ್ಥೆಗಳು ನಿರಂತರವಾಗಿ ಪ್ರೋತ್ಸಾಹ ನೀಡಬೇಕು. ನಾನು ನನ್ನ ಸರ್ವಿಸ್‌ನಲ್ಲಿ ೩೦೦ ಕಲಾವಿದರಿಗೆ ವಿದ್ಯೆ ಧಾರೆಯೆರೆದಿದ್ದೇನೆ.ಸರಕಾರ ಮನಸ್ಸು ಮಾಡಿದರೆ ಸಾವಿರಾರು ಮಂದಿಗೆ ಈ ತರಬೇತಿ ನೀಡಬಹುದು. ಮುಂದಿನ ದಿನಗಳಲ್ಲಿ ಇದಾಗಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ. ನಾಗರಾಜ್,ಸರಕಾರಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ನವೀನ್‌ಕಿರಣ್, ನಗರಸಭೆ ಅಧ್ಯಕ್ಷ ಆನಂದಬಾಬುರೆಡ್ಡಿ, ನಗರಾಭಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ.ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್,ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ,ಎಸ್ಪಿ. ನಾಗೇಶ್, ಎಸಿ.ಡಾ.ಸಂತೋಷ್‌ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತಿç ಮತ್ತಿತರರು ಇದ್ದರು.