ತನ್ನಿಮಿತ್ತ
ಶಿವಪ್ರಸಾದ್ ಎ.
aadarsha1283@gmail.com
ಗಾಂಧಿಯವರ ಹೆಸರಿನಲ್ಲೇ ಆರಂಭಿಸಲಾದ ‘ಮನ್ರೆಗಾ ಯೋಜನೆ’ಯಿಂದ ಪರಿಸ್ಥಿತಿಯ ಸುಧಾರಣೆಯ ನಿಟ್ಟಿನಲ್ಲಿ ತಕ್ಕ ಮಟ್ಟಿನ ಯಶಸ್ಸು ದೊರೆಯಿ ತಾದರೂ, ಮೂಲಭೂತ ಸೌಲಭ್ಯಗಳನ್ನು ಒದಗಿಸುವೆಡೆಗೆ ಸರಕಾರಗಳ ಅಸಡ್ಡೆಯ ಧೋರಣೆಯಿಂದಾಗಿ ಹಳ್ಳಿಯ ಜನ ಬೇರೆ ದಾರಿಯಿಲ್ಲದೇ ಈಗಲೂ ನಗರಗಳೆಡೆಗೆ ವಲಸೆ ಬರುವುದಂತೂ ನಿಂತಿಲ್ಲ.
ಮಹಾತ್ಮ ಗಾಂಧಿಯವರ ಹತ್ಯೆಯಾಗಿ ನಾಳೆಗೆ (ಜ.30)ಎಪ್ಪತ್ತೈದು ವರ್ಷಗಳು ಕಳೆಯುತ್ತವೆ. ಅವರ ಜೀವನದ ಆದರ್ಶಗಳನ್ನು ನಾವು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೇವೆಂಬುದನ್ನು ಅವಲೋಕಿಸಿಕೊಳ್ಳಲು ಇದು ಬಹಳ ಪ್ರಶಸ್ತ ಸಮಯ. ಅವರು ಸೂಚಿಸಿದ ಹಾದಿಯಲ್ಲಿ ನಮ್ಮ ದೇಶ ನಡೆದಿದ್ದರೆ, ಕೊರೋನಾದ ಹಾವಳಿಯಿಂದಾದ ಜಾಗತಿಕ ಅರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಭಾರತದ ಪರಿಸ್ಥಿತಿ ಈಗಿನದಕ್ಕಿಂತ ಮಿಗಿಲಾಗಿ ರುತ್ತಿತ್ತೇನೋ ಎನ್ನಿಸದಿರ ಲಾರದು.
ಹಳ್ಳಿಗಳು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕೆಂಬುದು ಅವರು ಬಯಕೆಯಾಗಿತ್ತು. ನಾವು ಇದನ್ನು ಸಾಧ್ಯವಾಗಿಸಿದ್ದಿದ್ದರೆ, ನಗರಗಳ ಅರ್ಥ ವ್ಯವಸ್ಥೆ ಒಂದು ಮಟ್ಟಿಗೆ ಕುಸಿದಿರುವ ಇಂದಿನ ಪರಿಸ್ಥಿತಿಯಲ್ಲಿ, ಹಳ್ಳಿಗಳ ಬೆಂಬಲದಿಂದ ನಮ್ಮ ದೇಶದ ಪ್ರಗತಿಯ ರಥವು ನಿಧಾನವಾದರೂ ನಿಶ್ಚಿತವಾಗಿ ಮುನ್ನುಗ್ಗುವಂತೆ ನೋಡಿಕೊಳ್ಳಬಹುದಿತ್ತು. ಆದರೆ ಈಗ ಹಳ್ಳಿಗಳಲ್ಲಿ ಜೀವನ ಸವೆಸುವ ಮಾರ್ಗಗಳನ್ನು ಕಾಣದ ಜನ ನಗರಗಳೆಡೆಗೆ ವಲಸೆಬರುತ್ತಿರುವುದನ್ನು ನಾವು ನೋಡು ತ್ತಿದ್ದೇವೆ. ಈ ಜನರು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಾವದಿಂದ ದಿನನಿತ್ಯದ ಜೀವನ ಕಷ್ಟಸಾಧ್ಯವೆಂದು ನಿರ್ಧರಿಸಿದ್ದಾರೆ.
ಹಳ್ಳಿಗಳ ತುಲನೆಯಲ್ಲಿ ನಗರಗಳಲ್ಲಿ ಲಭ್ಯವಿರುವ ಸೌಕರ್ಯಗಳು ಹೆಚ್ಚಾಗಿವೆಯೆಂದು ನಿರ್ಣಯಿಸಿ, ಈ ಸುಲಭದ ದಾರಿಯನ್ನು ಹಿಡಿದು ನಗರ ಗಳಿಗೆ ವಲಸೆ ಬರುತ್ತಿದ್ದಾರೆ. ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿಯೆಡೆಗೆ ಈ ಹಿಂದೆ ತೋರಿಸಿರುವ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಗಾಂಧಿಯವರ ಹೆಸರಿನಲ್ಲೇ ಆರಂಭಿಸಲಾದ ‘ಮನ್ರೆಗಾ ಯೋಜನೆ’ಯಿಂದ ಪರಿಸ್ಥಿತಿಯ ಸುಧಾರಣೆಯ ನಿಟ್ಟಿನಲ್ಲಿ ತಕ್ಕ ಮಟ್ಟಿನ ಯಶಸ್ಸು ದೊರೆಯಿತಾದರೂ, ಮೂಲಭೂತ ಸೌಲಭ್ಯಗಳನ್ನು ಒದಗಿಸುವೆಡೆಗೆ ಸರಕಾರಗಳ ಅಸಡ್ಡೆಯ ಧೋರಣೆಯಿಂದಾಗಿ ಹಳ್ಳಿಯ ಜನ ಬೇರೆ ದಾರಿಯಿಲ್ಲದೇ ಈಗಲೂ ನಗರಗಳೆಡೆಗೆ ವಲಸೆ ಬರುವುದಂತೂ ನಿಂತಿಲ್ಲ.
ಆರಂಭದ ಕೆಲವು ವರ್ಷಗಳಲ್ಲಿ ಹಳ್ಳಿಗಳಲ್ಲಿ ಸೌಕರ್ಯಗಳನ್ನು ಒದಗಿಸುತ್ತ, ಅಲ್ಲಿನ ಜನರಿಗೆ ಜೀವನೋಪಾಯವನ್ನು ಕಲ್ಪಿಸುವ ಒಂದು ಸಮರ್ಥ ಸಾಧನವಾಗಿ ಮನ್ರೇಗಾ ಹೊರಹೊಮ್ಮಿತ್ತು. ಅನಂತರ ಹಳ್ಳಿಗಳ ಪುಡಿ ರಾಜಕಾರಣಿಗಳ ಮತ್ತು ಭ್ರಷ್ಟ ಅಧೀಕಾರಿಗಳ ಕಪಿಮುಷ್ಟಿಗೆ ಸಿಲುಕಿ ತನ್ನ ಧ್ಯೇಯಗಳೆಷ್ಟನ್ನೋ ಕಳೆದುಕೊಂಡ ಈ ಯೋಜನೆ, ಇತ್ತೀಚಿನ ವರ್ಷಗಳಲ್ಲಿ ಕುಂಟುತ್ತ ನಡೆದಿದೆ. ಸರಕಾರವು ಈ ಯೋಜನೆಯಡಿ ವ್ಯಯಿಸುತ್ತಿರುವ ಹಣದ ಲೆಕ್ಕವನ್ನಷ್ಟೇ ಪರಿಗಣಿಸಿ, ಇದರ ಯಶಸ್ಸನ್ನು ಒಂದು ಸಾಧನೆಯೆಂಬಂತೆ ಬಿಂಬಿಸುತ್ತದೆ. ಆದರೆ ವಾಸ್ತವದ ವಸ್ತುಸ್ಥಿತಿ ಬೇರೆಯದೇ ಆಗಿದೆ.
ಉದಾಹರಣೆಗೆ, ಕೃಷಿ ಚಟುವಟಿಕೆ ಹೆಚ್ಚಾಗಿ ಇರದ ಸಮಯಗಳಲ್ಲಿ ಗ್ರಾಮ ಪಂಚಾಯ್ತಿಗಳು ರಸ್ತೆ ದುರಸ್ತಿ, ರಸ್ತೆ ನಿರ್ಮಾಣ ಮುಂತಾದ ಕೆಲಸಗಳನ್ನು
ಕೈಗೆತ್ತಿಕೊಳ್ಳುವುದು ಆ ಸಮಯದಲ್ಲಿ ಗ್ರಾಮ ವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ.
ಆದರೆ, ಯಂತ್ರೋಪಕರಣಗಳನ್ನು ಉಪಯೋಗಿಸಿಕೊಂಡು ಗುತ್ತಿಗೆದಾರರು ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿ, ತಮ್ಮ ಗುತ್ತಿಗೆಯ ಹಣ ಸಂದಾಯ ಮಾಡಿಸಿಕೊಳ್ಳುತ್ತಿದ್ದಾರೆ. ಗುತ್ತಿಗೆಯ ಹಣದ ಪಾವತಿಗಾಗಿ ಅವರು ಕೊಡುವ ಲೆಕ್ಕಪತ್ರಗಳಲ್ಲಿ ಮಾತ್ರ ನಿರ್ದಿಷ್ಟ ಸಂಖ್ಯೆಯಲ್ಲಿ ಕೂಲಿಕಾರ್ಮಿಕರನ್ನು ಇಂತಿಷ್ಟು ದಿನಗಳವರೆಗೆ ನೇಮಿಸಿ ಕೊಂಡು ಕೆಲಸಗಳನ್ನು ಮಾಡಲಾಗಿದೆಯೆಂದು ತಪ್ಪಾಗಿ ತೋರಿಸಿರುತ್ತಾರೆ. ಈ ಮೋಸದಲ್ಲಿ ಸ್ಥಳೀಯ ರಾಜಕಾರಣಿ ಗಳು, ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳು ಷಾಮೀಲಾಗಿರುವುದರಿಂದ, ಮನ್ರೇಗಾ ಯೋಜನೆಯ ಉದ್ದೇಶಗಳನ್ನು ವಿಫಲ ಗೊಳಿಸಿ, ಇದರ ಪ್ರಯೋಜನವು ಹಳ್ಳಿವಾಸಿಗಳಿಗೆ ದೊರೆಯದಂತೆ ಮಾಡುತ್ತಿದ್ದಾರೆ.
ನಗರಗಳ ಜನಸಂಖ್ಯೆ ದಿನೇದಿನೆ ಬೆಳೆಯುತ್ತ ಅಲ್ಲಿರುವ ಸೌಲಭ್ಯಗಳೂ ನಾಗರಿಕರಿಗೆ ಸಾಲದಂತಾಗಿ, ನಗರಗಳೂ ನರಕಸದೃಶವಾಗತೊಡಗಿವೆ. ಈಗ, ಇಂಥ ವಲಸಿಗರಿಗೆ ಹಳ್ಳಿಗಳಲ್ಲಿ ಜೀವನೋಪಾಯವಿಲ್ಲದ, ನಗರಗಳಲ್ಲಿ ಜೀವನ ಕಷ್ಟಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಗಾಂಧಿಯವರನ್ನು ಸರ್ವಾಧಿಕಾರಿಯೆಂದು ಕೆಲವೊಮ್ಮೆ ಬಿಂಬಿಸಲಾಗುತ್ತಿತ್ತು. ತಮಗೆ ಸರಿಯೆನಿಸಿದ್ದನ್ನುಕಾಂಗ್ರೆಸ್ ನ ಇತರ ಸಹೋದ್ಯೋಗಿಗಳ ಮೇಲೆ ಮತ್ತು ತಮ್ಮ
ಸಹಚರರ ಮೇಲೆ ಹೇರುತ್ತಿದ್ದರೆಂಬ ಆರೋಪ ಅಂದಿನ ಕಾಲದಲ್ಲಿ ಕೆಲವು ಬಾರಿ ಕೇಳಿಸುತ್ತಿತ್ತು. ಆದರೆ ಇತಿಹಾಸ ವನ್ನು ಅವಲೋಕಿಸಿ ನೋಡಿದಾಗ, ಗಾಂಧಿಯವರು ಹೇರಿದ್ದರೆನ್ನಲಾದ ಎಷ್ಟೋ ವಿಷಯಗಳ ಪ್ರಸ್ತುತತೆ ನಮಗೀಗ ಸ್ಪಷ್ಟವಾಗುತ್ತದೆ.
ಆಧುನಿಕ ಕೈಗಾರಿಕೀಕರಣದ ವಿರುದ್ಧವಾದ ಅವರ ವಾದ ಆಗಿನ ದಿನಗಳಲ್ಲಿ ಅಸಮಂಜಸವಾಗಿ ಕಂಡಿತ್ತು. ಹಳ್ಳಿಗಳಲ್ಲಿ ಗ್ರಾಮಕೈಗಾರಿಕೆಯನ್ನು
ಪ್ರೋತ್ಸಾಹಿಸಬೇಕೆಂದು ಅವರು ಹೇಳುತ್ತಿದ್ದರು. ನಮ್ಮ ರಾಜಕಾರಣಿಗಳು ಮತ್ತು ಸರಕಾರಗಳು ಈ ಮಾತಿಗೆ ಮೂರುಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಗಾಂಧಿಯವರು ತಮ್ಮ ಈ ನಿಲುವುಗಳನ್ನು ಕಾಂಗ್ರೆಸ್‌ನ ಸಂವಿಧಾನದ ಮೇಲೆ ಹೇರಲು ಪ್ರಯತ್ನಿಸಲಿಲ್ಲ. ನಿರಂಕುಶವಾಗಿ
ಕೈಗಾರಿಕೋದ್ಯಮದ ಬೆಳವಣಿಗೆಗೆ ಅನುವುಮಾಡಿರುವುದರ ದುಷ್ಪರಿಣಾಮಗಳು ಇಂದು ನಮಗೆಲ್ಲ ಅರ್ಥವಾಗುತ್ತಿವೆ. ನೆಹರು ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರಾದರೂ, ಅದಕ್ಕೆ ಸಮಾನಾಂತರವಾಗಿ ಹಳ್ಳಿಗಳ ಸ್ಥಿತಿಗತಿಯನ್ನು ಸುಧಾರಿಸುವ ಕಾರ್ಯವು ಕುಂಟುತ್ತ ನಡೆದಿತ್ತು. ಅನಂತರ ಬಂದ ಸರಕಾರಗಳೂ ಇದೇ ನೀತಿಯನ್ನು ಮುಂದುವರಿಸಿದವು.
ಪರಿಣಾಮ ಈಗ ಸರ್ವರಿಗೂ ಸುಸ್ಪಷ್ಟವಾಗಿ ಕಾಣಿಸುತ್ತಿದೆ. ಧರ್ಮವು ಪ್ರತಿಯೊಬ್ಬನ ತೀರಾ ವೈಯಕ್ತಿಕ ವಿಷಯವೆಂದೂ ಅದನ್ನು ರಾಜಕೀಯ ದೊಂದಿಗೆ ಯಾವುದೇ ಪರಿಸ್ಥಿತಿಯಲ್ಲೂ ಬೆರೆಸಬಾರದೆಂದೂ ಗಾಂಧಿಯವರ ವಾದವಾಗಿತ್ತು. ಈ ವಾದವನ್ನು ತಿರುಚಿ, ಗಾಂಧಿಯವರು ಒಂದು ನಿರ್ದಿಷ್ಟ ಧರ್ಮದವರ ಪರವಾಗಿ ಮತ್ತೊಂದರ ವಿರುದ್ಧವಾಗಿ ನಿಲುವನ್ನು ತಳೆದಿದ್ದರೆಂದು ಆರೋಪಮಾಡಲಾಯಿತು. ಇಂಥ ಆರೋಪವನ್ನು ಮಾಡುತ್ತಿದ್ದ ಜನರ ಗುಂಪಿನ ಒಬ್ಬ ತೀವ್ರವಾದಿ ಗೋಡ್ಸೆ, ಮಹಾತ್ಮರ ಹತ್ಯೆಗೈದನು.
ವಿಪರ್ಯಾಸವೆಂದರೆ, ಈಗ ನಾವು ಧರ್ಮದ ಹೆಸರಿನ ಮೇಲೆ ಮತಗಳನ್ನು ಪಡೆದು, ನಿರ್ದಿಷ್ಟ ಧರ್ಮದವರನ್ನು ಮತಬ್ಯಾಂಕ್‌ಗಳಾಗಿ ಪರಿವರ್ತಿಸಿ ಕೊಂಡು ತೀರಾ ಕೆಳ ಮಟ್ಟದ ರಾಜಕೀಯಕ್ಕಿಳಿದಿರುವ ಪಕ್ಷಗಳ ಯುಗದಲ್ಲಿ ದ್ದೇವೆ. ಇದರದ್ದೇ ರೂಪಾಂತರವಾದ, ಹಾಗೂ ಇದಕ್ಕಿಂತ ಕೆಳ ಮಟ್ಟದ, ಜಾತಿ ರಾಜಕಾರಣದ ಪಿಡುಗನ್ನೂ ನಾವು ಈಗ ಅನುಭವಿಸುತ್ತಿದ್ದೇವೆ. ಗಾಂಧಿಯವರು ಎಂದಿಗೂ ಒಂದು ನಿರ್ದಿಷ್ಟ ಜಾತಿಯ/ಮತದವರ ಪರವಾಗಿ ಅಥವಾ ವಿರುದ್ಧವಾಗಿ ಕೆಲಸಮಾಡಿದವರಲ್ಲ.
ಹಾಗೆಯೇ, ತಮ್ಮ ಆಪ್ತ ಬಳಗದಲ್ಲಿ ಒಂದು ನಿರ್ದಿಷ್ಟ ಧರ್ಮದ ಅಥವಾ ಜಾತಿಯ ಜನರನ್ನು ಮಾತ್ರ ಹೊಂದಿರಲಿಲ್ಲ. ‘ಸರ್ವ ಧರ್ಮ ಸಮಭಾವ್’ ಎಂಬುದು ಅವರ ಮಂತ್ರವಾಗಿತ್ತು. ಆದರೆ, ಅವರ ಚಿತಾಭಸ್ಮವನ್ನು ಗಂಗೆಗೆ ಮತ್ತು ದೇಶದ ಇತರ ಪವಿತ್ರ ನದಿಗಳಿಗೆ ಅರ್ಪಿಸಿದಾಗಿನಿಂದಲೇ ಅವರ ಆದರ್ಶಗಳನ್ನೂ ಗಾಳಿಗೆ ತೂರಲಾಗಿದೆ. ಅವರು ಸೂಚಿಸಿದ ಮಾರ್ಗವನ್ನನುಸರಿಸುತ್ತಿದ್ದೇವೆಂಬ ನಾಟಕವನ್ನಾಡುತ್ತ ನಮ್ಮ ದೇಶದ ಪ್ರಗತಿಗೆ ಮಾರಕ ರಾಗುತ್ತಿರುವ ರಾಜಕೀಯ ನಾಯಕರು ಈಗಲಾದರೂ ಎಚ್ಚೆತ್ತುಕೊಂಡರೆ, ಮಹಾತ್ಮ ಗಾಂಧಿಯವರಿಗೆ ನಿಜವಾದ ಶ್ರದ್ಧಾಂಜಲಿ ನೀಡಿ ದಂತಾಗುತ್ತದೆ.
ಹೀಗೆ ಮಾಡದೆ, ಜನವರಿ ಮೂವತ್ತರಂದು ರಾಜ್‌ಘಾಟ್‌ಗೆ ತೆರಳಿ ‘ರಘುಪತಿ ರಾಘವ ರಾಜಾರಾಮ್’ ಹಾಡುತ್ತ ಮೊಸಳೆ ಕಣ್ಣೀರನ್ನು ಸುರಿಸುವ ನಮ್ಮ ರಾಜಕಾರಣಿಗಳ ಡಂಭಾಚಾರ ಖಂಡನಾರ್ಹ. ಮಹಾತ್ಮರ ಆದರ್ಶಗಳನ್ನು ತಕ್ಕಮಟ್ಟಿಗಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಅರ್ಪಿಸುವು ನಿಜವಾದ ಅಶ್ರುತರ್ಪಣ.
Read E-Paper click here