Saturday, 26th October 2024

ಇಪ್ಪತ್ತೆರಡು ಸಾವಿರ ಬಡವರಿಗೆ ಸೂರು ನೀಡಿದ ಸಂತೃಪ್ತಿ ಇದೆ

ದೊಡ್ಡಮರಳಿ ಗ್ರಾಪಂ ಗ್ರಾಮ ಸಭೆಯಲ್ಲಿ ಉಚಿತ ನಿವೇಶನ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹರ್ಷ

ಚಿಕ್ಕಬಳ್ಳಾಪುರ: ಸ್ವಾತಂತ್ರೃ ನಂತರ ಇಷ್ಟು ಬೃಹತ್ ಪ್ರಮಾಣದಲ್ಲಿ ಬಡವರಿಗೆ ಸೂರು ಕಲ್ಪಿಸಿದ ನಿದರ್ಶನ ಇಲ್ಲವಾಗಿದ್ದು, ಇಂತಹ ಅವಕಾಶ ಕಲ್ಪಿಸಿದ ಕ್ಷೇತ್ರದ ಜನರಿಗೆ ಸದಾ ಋಣಿಯಾಗಿರು ವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಪಂ ಅಧ್ಯಕ್ಷರು, ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳ ಸಹಕಾರದಿಂದ ಕ್ಷೇತ್ರದ ೨೨ ಸಾವಿರ ಕುಟುಂಬಗಳಿಗೆ ನಿವೇಶನ ಹಂಚಲು ಸಾಧ್ಯವಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಾಮಾನ್ಯರು ಜೀವನ ಪೂರ್ತಿ ದುಡಿದರೂ ಸ್ವಂತ ಸೂರು ಮಾಡಿಕೊಳ್ಳಲಾರದ ಸ್ಥಿತಿ ಎದುರಾಗಿದೆ, ಇಂತಹ ಸಂದರ್ಭದಲ್ಲಿ ೨೨ ಸಾವಿರ ಮಂದಿಗೆ ಉಚಿತ ನಿವೇಶನ ಮತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಗೆ ಮನೆ ನಿರ್ಮಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದನ್ನು ಯಶಸ್ವಿಯಾಗಿ ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿದ್ದಾರೆ. ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಇದು ಸ್ಪೂರ್ತಿದಾಯಕವಾಗಿದೆ ಎಂದರು.

ನಿಮ್ಮ ಪ್ರೀತಿ, ವಿಶ್ವಾಸವೇ ಸ್ಪೂರ್ತಿ

ಕ್ಷೇತ್ರದ ಜನರ ಪ್ರೀತಿ ಮತ್ತು ವಿಶ್ವಾಸವೇ ತಮಗೆ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯೋಚಿಸುವಂತೆ ಮಾಡಿದೆ, ಕುಟುಂಬದಲ್ಲಿ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ರೀತಿಯಲ್ಲಿ ೧೫ ವರ್ಷದಿಂದ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಟ್ಟಿಕೊಂಡಿದ್ದೇನೆ, ಈ ಕ್ಷೇತ್ರದ ಮಕ್ಕಳ ಭವಿಷ್ಯ ಉತ್ತಮವಾಗಿಸಲು ಯೋಜನೆಗಳನ್ನು ಅನುಷ್ಠಾನ ಮಾಡಲು ಶ್ರಮಿಸುತ್ತಿರುವುದಾಗಿ ಸಚಿವರು ತಿಳಿಸಿದರು.

ತಾವು ನಿರಂತರವಾಗಿ ಕ್ಷೇತ್ರದ ಭಿವೃದ್ಧಿಯ ಬಗ್ಗೆ ಚಿಂತಿಸಿದ ಪರಿಣಾಮವೇ ವೈದ್ಯಕೀಯ ಕಾಲೇಜು ಮತ್ತು ಮೂಲ ಸೌಲಭ್ಯಗಳ ಅನುಷ್ಠಾನ ವಾಗಿದೆ.nದೊಡ್ಡಮರಳಿ ಗ್ರಾಪಂ ಒಂದರಲ್ಲಿಯೇ ೨೬೩ ಉಚಿತ ನಿವೇಶನ ನೀಡಲಾಗುತ್ತಿದೆ. ಜೊತೆಗೆ ನಿವೇಶನ ಹೊಂದಿರುವವರಿಗೆ ೧೦೦ ಮನೆ ಮಂಜೂರು ಮಾಡಲಾಗಿದೆ. ಇದರಿಂದಾಗಿ ಒಂದು ಗ್ರಾಪಂನಲ್ಲಿಯೇ ಒಟ್ಟು ೪೦೦ ಕುಟುಂಬಗಳಿಗೆ ಸೂರು ಕಲ್ಪಿಸಿದಂತಾಗಿದೆ ಎಂದು ಹೇಳಿದರು.

ಇದೇ ತಿಂಗಳಿನಲ್ಲಿ ಉಚಿತ ನಿವೇಶನ ಪಡೆದ ಎಲ್ಲರಿಗೂ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗುವುದು, ಅದೇ ರೀತಿಯಲ್ಲಿ ಮನೆಗಳ ನಿರ್ಮಾಣಕ್ಕೆ ಆದೇಶ ಪತ್ರಗಳನ್ನೂ ವಿತರಿಸಲಾಗುವುದು, ಗ್ರಾಪಂ ಮಟ್ಟದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ, ಶೀಘ್ರವೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು, ಜೊತೆಗೆ ಮುಂದಿನ ೧೫ ದಿನಗಳಲ್ಲಿ ಕ್ಷೇತ್ರದ ಎಲ್ಲ ೨೨ ಸಾವಿರ ನಿವೇಶನ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುಮಲತಾ ಬಿಜೆಪಿಗೆ ಬಂದರೆ ಲಾಭ

ಮಂಡ್ಯ ಸಂಸದೆ ಹಾಗೂ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಬಿಜೆಪಿಗೆ ಬರುವುದಾದರೆ ಮಂಡ್ಯದಲ್ಲಿ ಬಿಜೆಪಿಗೆ ಬಲ ಬರಲಿದೆ ಎಂದು ಸಚಿವರು ಹೇಳಿದರು. ಅಲ್ಲದೆ ಅವರಿಗೂ ಇದರಿಂದ ಒಳ್ಳೆಯದಾಗಲಿದೆ. ಹಿರಿಯ ನಾಯಕರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರ್. ಅಶೋಕ್ ಅವರು ಸುಮಲತಾ ಅವರೊಂದಿಗೆ ಸಂಪರ್ಕದಲ್ಲಿರಬಹುದು ಎಂದರು.