Thursday, 12th December 2024

ಅಮೆರಿಕದ ಸಂಸತ್ತಿನ ಸದನ ಸಮಿತಿ ಸದಸ್ಯರಾಗಿ ರಾಜಾ ಕೃಷ್ಣಮೂರ್ತಿ ನೇಮಕ

ವಾಷಿಂಗ್ಟನ್: ಅಮೆರಿಕ ಮತ್ತು ಜಗತ್ತಿಗೇ ಬೆದರಿಕೆ ಒಡ್ಡುತ್ತಿರುವ ಚೀನಾದ ವಿವಿಧ ನಡವಳಿಕೆಗಳ ಕುರಿತಾದ ಅಂಶಗಳನ್ನು ಪರಿಶೀಲಿಸಲು ಹೊಸದಾಗಿ ರಚಿಸಲಾಗಿರುವ ಅಮೆರಿಕದ ಸಂಸತ್ತಿನ ಸದನ ಸಮಿತಿಯ ಸದಸ್ಯರಾಗಿ ಭಾರತ ಮೂಲದ ಅಮೆರಿಕದ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ಅಮೆರಿಕದ ಪ್ರಜಾಪ್ರತಿನಿಧಿ ಸಭೆಯ ನಾಯಕ ಹಕೀಮ್ ಜೆಫ್ರೀಸ್ ಅವರು ಅಮೆರಿಕ ಮತ್ತು ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ನಡುವಿನ ಕಾರ್ಯತಂತ್ರದ ಸ್ಪರ್ಧೆಯ ಕುರಿತು ಪರಿಶೀಲನೆಗೆ ರಚಿಸಲಾದ ಸಮಿತಿಯ ಸದಸ್ಯರಾಗಿ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಿರುವುದಾಗಿ ಬುಧವಾರ ಪ್ರಕಟಿಸಿದರು.

ಈ ಹೊಸ ಸಮಿತಿಗೆ ಭಾರತ ಮೂಲದ ಇನ್ನೊಬ್ಬ ಕಾಂಗ್ರೆಸ್‌ ಸದಸ್ಯರಾದ ರೋ ಖನ್ನಾ ಅವರನ್ನೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

‘ಅಮೆರಿಕ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ನಡುವಿನ ಕಾರ್ಯತಂತ್ರದ ಕುರಿತಾದ ಸದನ ಸಮಿತಿಗೆ ನನ್ನನ್ನು ನೇಮಿಸಿದ್ದಕ್ಕಾಗಿ ಸದನದ ನಾಯಕ ಹಕೀಮ್ ಜೆಫ್ರೀಸ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಕೃಷ್ಣಮೂರ್ತಿ ಹೇಳಿದರು.

‘ತೈವಾನ್‌ನ ಪ್ರಜಾಪ್ರಭುತ್ವದ ವಿರುದ್ಧದ ಬೆದರಿಕೆ, ಟಿಕ್‌ಟಾಕ್‌ನ ಆಯುಧೀಕರಣ ಮತ್ತು ನೂರಾರು ಶತಕೋಟಿ ಡಾಲರ್ ಮೌಲ್ಯದ ಅಮೆರಿಕದ ಬೌದ್ಧಿಕ ಆಸ್ತಿ ಕಳ್ಳತನ ಮಾಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷವು ಅಮೆರಿಕ ಮತ್ತು ಜಗತ್ತಿನಾದ್ಯಂತ ಪ್ರಜಾ ಪ್ರಭುತ್ವ ಹಾಗೂ ಸಮೃದ್ಧಿಗೆ ಗಂಭೀರವಾದ ಆರ್ಥಿಕ ಮತ್ತು ಭದ್ರತಾ ಬೆದರಿಕೆಗಳನ್ನು ಒಡ್ಡುತ್ತಿದೆ’ ಎಂದು ಅವರು ಹೇಳಿದರು