ಬೆಂಗಳೂರು: ವಿಪರೀತ ಚಳಿ, ತಣ್ಣನೆಯ ಸುಳಿಗಾಳಿ, ಮೋಡ ಕವಿದ ವಾತಾವರಣ, ಸುಡುವ ಬಿಸಿಲು ಬೆಂಗಳೂರು ನಗರದ ಹವಾಮಾನ ದಿನ ದಿನ ಬದಲಾಗುತ್ತಿದೆ.
ಎರಡು ದಿನಗಳಿಂದ ಚಳಿ ಸಂಪೂರ್ಣವಾಗಿ ಕಡಿಮೆ ಆಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ ತನಕ ತಮಿಳುನಾಡಿನ ಕರಾವಳಿ ಜಿಲ್ಲೆಗಳು, ಪದುಚೇರಿ ಮತ್ತು ಕಾರೈಕಲ್ ಸೇರಿದಂತೆ 11 ಜಿಲ್ಲೆಗಳಲ್ಲಿ ವಾಯುಭಾರ ಕುಸಿದ ಪ್ರಭಾವ ದಿಂದ ಮಳೆಯಾಗಲಿದೆ.
ನಗರದಲ್ಲಿಯೂ ಮೋಡ ಕವಿದ ವಾತಾವರಣ, ಗಾಳಿ ಇರಲಿದ್ದು, ತುಂತುರು ಮಳೆಯನ್ನು ಸಹ ನಿರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರದಿಂದ ನಗರದಲ್ಲ ಶುಷ್ಕ ವಾತಾವರಣ ಕಂಡುಬರುತ್ತಿದೆ. ಸಂಜೆಯ ವೇಳೆಗೆ ಆಗಸದಲ್ಲಿ ಮೋಡಗಳ ಸಂಚಾರ ಕಾಣುತ್ತಿದೆ. ಆದರೆ ಮಳೆಯಾಗಿಲ್ಲ. ಚಳಿ ಗಣನೀಯವಾಗಿ ಕಡಿಮೆಯಾಗಿದ್ದು, ಬಿಸಿಲು ಇದ್ದರೂ ಮೈ ಸುಡುವಷ್ಟು ಬೆಚ್ಚಗಿಲ್ಲ.
ಗುರುವಾರ ಮತ್ತು ಶುಕ್ರವಾರ ತಮಿಳು ನಾಡಿನ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ವಾಯು ಭಾರ ಕುಸಿತದ ಪರಿಣಾಮ ಗಾಳಿಯ ವೇಗವೂ ಹೆಚ್ಚಿರಲಿದ್ದು, ಮೀನುಗಾರರಿಗೆ ಸಹ ಎಚ್ಚರಿಕೆ ರವಾನೆ ಮಾಡಲಾಗಿದೆ.
ಕನ್ಯಾಕುಮಾರಿ, ತೂತುಕುಡಿ, ರಾಮನಾಥಪುರಂ, ಶಿವಗಂಗೆ, ಪುದುಕೊಟ್ಟೈ, ನಾಗಪಟ್ಟಣಂ, ಕಡಲೂರು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 30 ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.