Thursday, 12th December 2024

ಮರೆತು ಹೋಗುತ್ತಿರುವ ಒಂದು ಹತ್ಯಾಕಾಂಡ

ಶಶಾಂಕಣ

shashidhara.halady@gmail.com

ಯಾವುದೇ ಪ್ರದೇಶದ ಇತಿಹಾಸ ಬಹಳ ಕುತೂಹಲಕಾರಿ ವಿಷಯ. ಇತಿಹಾಸದ ಪದರುಗಳಲ್ಲಿ ಮರೆತು ಹೋಗಿರುವ ವಿವರಗಳನ್ನು ಅಗೆಯುತ್ತಾ ಹೋದರೆ, ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತವೆ; ಅಥವಾ, ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಕೆಲವು ದಶಕಗಳ ಹಿಂದೆ ಯಾವುದು ಸಾಮಾನ್ಯ ವಿವರ ಎನಿಸಿತ್ತೋ, ಅದು ಇಂದು ವಿಶಿಷ್ಟ ರೂಪ ಪಡೆದುಕೊಂಡು, ‘ಓ, ಹೌದಲ್ಲಾ, ಇಂತಹದೊಂದು ಪ್ರಮುಖ ವಿಚಾರ ಏಕೆ ಹಿನ್ನೆಲೆಗೆ ಸರಿಯಿತು’ ಎಂದು ಅಚ್ಚರಿ ಪಡುವಂತಾಗುವುದೂ ನಿಜ.

ಇದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ, ವಿದುರಾಶ್ವತ್ಥದ ಹತ್ಯಾಕಾಂಡ. ಈ ಭೀಕರ ಘಟನೆಯ ವಿವರಗಳು ಸಂಕ್ಷಿಪ್ತವಾಗಿ ನಮ್ಮ ಪಠ್ಯಪುಸ್ತಕ ಗಳಲ್ಲಿ ಬಂದ ವಿಚಾರವಾಗಿದ್ದರಿಂದ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇಲ್ಲಿ ಪೊಲೀಸ್ ಗೊಲೀಬಾರ್ ನಡೆದಿತ್ತು ಮತ್ತು ಧ್ವಜ ಹಾರಿಸಲು ಬಂದ ಹಳ್ಳಿಯ ಜನರು ಪೊಲೀಸರ ಗುಂಡಿಗೆ ಬಲಿಯಾದರು ಎಂಬ ವಿಚಾರವು ಹೆಚ್ಚಿನವರಿಗೆ ಅರಿವಿದೆ. ಅಧಿಕೃತ ದಾಖಲೆಗಳ ಪ್ರಕಾರ, ವಿದುರಾಶ್ವತ್ಥದಲ್ಲಿ ಅಂದು ಮೃತಪಟ್ಟ ಅಮಾಯಕರ ಸಂಖ್ಯೆ ಕೇವಲ 10. ಆದರೆ, ನಂತರದ ವರ್ಷಗಳಲ್ಲಿ, ಅದರಲ್ಲೂ ಈಚಿನ ಒಂದೆರಡು ದಶಕಗಳಲ್ಲಿ ನಡೆದ ವಿವರ
ಸಂಗ್ರಹದಿಂದಾಗಿ, ಆ ದಿನ ಪೊಲೀಸರು ಕೊಂದಿದ್ದು 32 ಜನ ಎಂಬುದು ಸ್ಪಷ್ಟವಾಗಿದೆ.

ಒಂದೇ ಏಟಿಗೆ, ಒಂದೇ ದಿನ ಬಾವುಟ ಹಾರಿಸಲು ಬಂದ 32 ಮಂದಿ ಸತ್ತರು ಎಂಬುದು ಎಂತಹ ದೊಡ್ಡ ಹತ್ಯಾಕಾಂಡ ಅಲ್ಲವೆ! ಈ ಹತ್ಯಾಕಾಂಡದ ತೀವ್ರತೆ, ಮೌಲ್ಯ, ಪ್ರಾಮುಖ್ಯತೆ ನಮ್ಮ ಜನರನ್ನು ಸರಿಯಾಗಿ ತಟ್ಟಲೇ ಇಲ್ಲ ಎಂಬುದು ನನ್ನ ಅನಿಸಿಕೆ. ವಿದುರಾಶ್ವತ್ಥದಲ್ಲಿ ಗೊಲೀಬಾರ್ ಆದ ಭಯಾನಕ ಘಟನೆಗೆ, ಸಾಕಷ್ಟು ಪ್ರಮುಖ ಎನಿಸುವ ಹಿನ್ನೆಲೆಯೂ ಇದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆದು, ಅದರಲ್ಲಿ ಭಾಗವಹಿಸಿದ ಸಾಕಷ್ಟು ಜನರನ್ನು ಮೈಸೂರು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದೇ, ವಿದುರಾಶ್ವತ್ಥದ ಧ್ವಜ ಸತ್ಯಾಗ್ರಹಕ್ಕೆ ಸ್ಫೂರ್ತಿ.

1938ರಲ್ಲಿ ಗುಜರಾತಿನ ಹರಿಪುರದಲ್ಲಿ, ಸುಭಾಷ್‌ಚಂದ್ರ ಬೋಸ್ ಅವರ ನೇತೃತ್ವದಲ್ಲಿ ನಡೆದ ಧ್ವಜ ಹಾರಿಸುವ ಕಾರ್ಯಕ್ರಮವು, ಶಿವಪುರದ ಧ್ವ ಸತ್ಯಾಗ್ರಹಕ್ಕೆ ಸ್ಫೂರ್ತಿ. ಆಗ ಸುಭಾಷರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಅವರ ನೇತೃತ್ವದಲ್ಲಿ ಹೋರಾಟವು ಬಿರುಸಾಗಿತ್ತು. ಮೈಸೂರು ರಾಜ್ಯದ ಕಾಂಗ್ರೆಸ್ ನಾಯಕ ಟಿ.ಸಿದ್ದಲಿಂಗಯ್ಯನವರು, ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ, ಮೈಸೂರು ರಾಜ್ಯದಲ್ಲೂ ರಾಷ್ಟ್ರ ಧ್ವಜ ಹಾರಿಸಲು ಅನುಮತಿ ಪಡೆದರು. ಆದರೆ, ಮೈಸೂರು ರಾಜ್ಯದ ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲರು ಕಾಂಗ್ರೆಸ್ ನಾಯಕರ ಎಲ್ಲಾ ಮನವಿಗಳನ್ನು ತಿರಸ್ಕರಿಸುತ್ತಾರೆ.

ಕಾಂಗ್ರೆಸ್ ನಾಯಕರ ಬೇಡಿಕೆಗಳಲ್ಲಿ ಜವಾಬ್ದಾರಿ ಯುತ ಸರಕಾರದ ಸ್ಥಾಪನೆ, ರಾಜ್ಯದಾದ್ಯಂತ ತ್ರಿವರ್ಣ ಧ್ವಜ ಹಾರಿಸುವದೂ ಸೇರಿತ್ತು. ಮೈಸೂರು
ಸರಕಾರವು ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡದೇ ಇರುವುದನ್ನು ಪ್ರತಿಭಟಿಸಲು, ನಂಜನಗೂಡು ಅಥವಾ ಶ್ರೀರಂಗಪಟ್ಟಣದಲ್ಲಿ, ಸಾವಿರಾರು
ಜನರ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಏರ್ಪಡಿಸುವುದು ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದರು. ಆದರೆ, ಮೈಸೂರು ಸರಕಾರ ಬಿಡಲಿಲ್ಲ. ಮೈಸೂರು ರಾಜ್ಯದಲ್ಲಿ ರಾಷ್ಟ್ರಧ್ವಜ ಹಾರಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿತು!

ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು, ಶಿವಪುರ ದಲ್ಲಿ ಧ್ವಜ ಹಾರಿಸಲು ನಿರ್ಧರಿಸಿದರು. ಎಪ್ರಿಲ್ 10, 1938. ಬೆಳಗಿನ 10 ಗಂಟೆಯ ಸಮಯ. ಸಿದ್ಧಲಿಂಗಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಶಿವಪುರ ತಲುಪಿದರು. ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 40000 ಜನ ಬಂದು ಸೇರಿ ದರು. ಆದರೆ ಬ್ರಿಟಿಷ್ ಮತ್ತು ಮೈಸೂರು ಸರಕಾರವು ಸುಮಾರು ೬೦೦ ಪೊಲೀಸರನ್ನು ಆಯೋಜಿಸಿ, ರಾಷ್ಟ್ರ ಧ್ವಜ ಹಾರಿಸುವು ದನ್ನು ತಡೆಯಲು ಪ್ರಯತ್ನಿಸಿತು.

ಧ್ವಜ ಹಾರಿಸಲು ಮುಂದಾದ ಸಿದ್ದಲಿಂಗಯ್ಯನವರನ್ನು ಪೊಲೀಸರು ಬಂಧಿಸಿದರು. ಒಮ್ಮೆಗೇ ಗದ್ದಲ ಉಂಟಾಯಿತು. ಎಲ್ಲರನ್ನೂ ಬಂಧಿಸಿದರೆ ಧ್ವಜ ಹಾರಿಸುವವರು ಯಾರು? ಎಂಬ ಗೊಂದಲ. ಧ್ವಜ ಸ್ತಂಭದ ಹತ್ತಿರ ಇದ್ದ ಕಾಂಗ್ರೆಸ್ ನಾಯಕರಾದ ಎಂ.ಎನ್.ಜೋಯಿಸ್ ಮತ್ತು ಯಶೊಧರಮ್ಮ ನವರು ತಕ್ಷಣ ರಾಷ್ಟ್ರಧ್ವಜ ಹಾರಿಸಿದರು. ಸಹಜವಾಗಿ, ಮೈಸೂರು ಸರಕಾರಕ್ಕೆ ಕೋಪ ಬಂದಿತ್ತು; ತಾನು ಜಾರಿಗೊಳಿಸಿದ ಆದೇಶವನ್ನು ಜನರು ಧಿಕ್ಕರಿಸಿದರು ಎಂಬುದಕ್ಕೆ ಕೋಪ.

ಅಂದು ಶಿವಪುರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಮೈಸೂರು ಸರಕಾರದಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದವರು ಗುಂಡು
ಚಲಾಯಿಸುವಂತೆ ಆದೇಶ ನೀಡಲು ನಿರಾಕರಿಸಿದರು ಎಂಬ ಮಾತಿದೆ. ಆ ನಂತರ ಆ ಡೆಪ್ಯುಟಿ ಕಮಿಷನರ್‌ರನ್ನು ವರ್ಗಾವಣೆ ಮಾಡಲಾಯಿತು!
ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಶಿವಪುರದಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಸುದ್ದಿಯು ಎಲ್ಲೆಡೆ ಸಂಚಲನ ಉಂಟುಮಾಡಿತು. ಕಾಂಗ್ರೆಸ್‌ನವರು ಮೈಸೂರು ರಾಜ್ಯದಾದ್ಯಂತ ರಾಷ್ಟ್ರ ಧ್ವಜ ಹಾರಿಸಲು ಅಭಿಯಾನ ಕೈಗೊಂಡರು. ಇದರ ಭಾಗವಾಗಿ, ಗೌರಿಬಿದನೂರಿನ ಕಾಂಗ್ರೆಸ್ ನಾಯಕರು ತಮ್ಮ ಪ್ರಾಂತ್ಯದಲ್ಲೂ ತ್ರಿವರ್ಣ ಧ್ವಜ ಹಾರಿಸಲು ಸಿದ್ಧರಾದರು.

1938ರ ಎಪ್ರಿಲ್ 15ರಿಂದ 29ರ ತನಕ ನಡೆಯಲಿದ್ದ ವಿದುರಾಶ್ವತ್ಥ ಜಾತ್ರೆಯ ಸಮಯವೇ ಇದಕ್ಕೆ ಸೂಕ್ತ ಎಂದು ನಿರ್ಧರಿಸಲಾಯಿತು. ಆದರೆ, ಗೌರಿಬಿದನೂರಿನ ಅಮಲ್ದಾರನು ನಿಷೇಧಾಜ್ಞೆ ಜಾರಿಗೊಳಿಸಿದ ಮತ್ತು ಧ್ವಜ ಹಾರಿಸಲು ಸಿದ್ಧತೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಬಂಧನಕ್ಕೆ ಒಳಪಡಿಸಿದ. ವಿದುರಾಶ್ವತ್ಥದ ಕಡೆಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿದ ರಾಮಯ್ಯ ಶೆಟ್ಟಿ ಮತ್ತು ಜ್ವಾಲನಯ್ಯನವರನ್ನು ಎಪ್ರಿಲ್ 23ರಂದು
ಪೊಲೀಸರು ಬಂಧಿಸಿದರು. ಆದರೆ ಧ್ವಜ ಹಾರಿಸುವ ಹುಮ್ಮಸ್ಸು ಜನರಿಂದ ದೂರವಾಗಲಿಲ್ಲ.

ಎಪ್ರಿಲ್ ೨೫ರಂದು ಸ್ಥಳೀಯ ನಾಯಕರಾದ ಸೂರಣ್ಣ, ನಾರಾಯಣ ಸ್ವಾಮಿ, ಶ್ರೀನಿವಾಸ ರಾವ್ ಮತ್ತು ಕೆ.ಸುಬ್ಬರಾವ್ ಎಂಬುವವರು ವಿದುರಾ ಶ್ವತ್ಥದಲ್ಲಿ ಧ್ವಜ ಹಾರಿಸಿಯೇ ಬಿಟ್ಟರು. ತಕ್ಷಣ ಪೊಲೀಸರು ಅವರನ್ನು ಬಂಧಿಸಿದರು. ಅಂದು ವಿದುರಾಶ್ವತ್ಥದಲ್ಲಿ ಸಾವಿರಾರು ಜನರು ಸೇರಿದ್ದರು. ಗೌರಿಬಿದನೂರು ಮತ್ತು ಹಿಂದುಪುರ ವ್ಯಾಪ್ತಿಯ ಹಲವು ಹಳ್ಳಿಗಳಿಂದ ಧ್ವಜ ಹಾರಿಸುವುದನ್ನು ನೋಡಲು ಜನರು ಬಂದಿದ್ದರು. ಪೊಲೀಸರ ದಬ್ಬಾಳಿ ಕೆಯು ಜನರನ್ನು ರೊಚ್ಚಿಗೇಳಿಸಿತು. ಪೊಲೀಸರು ಜನರ ಮೇಲೆ ಲಾಠಿಪ್ರಯೋಗ ಮಾಡಿದರು. ಕೆಲವು ಜನರು ಕಲ್ಲೆಸೆದರು. ಇದೇ ನೆಪ; ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಎ.ಎಸ್.ಖಲೀಲ್ ಎಂಬುವವರು ತಮ್ಮ ಸರ್ವಿಸ್ ರಿವಾಲ್ವಾರ್ ನಿಂದ ತಾವೇ ಸ್ವತಃ ಜನರ ಮೇಲೆ ಗುಂಡು ಹಾರಿಸಿದರು.

ತಕ್ಷಣ, ಪೊಲೀಸರು ಮನಬಂದಂತೆ ಗುಂಡು ಚಲಾಯಿಸಿದರು. ಗಮನಿಸಿ, ಅಲ್ಲಿ ನೆರೆದಿದ್ದವರು ಯಾವುದೇ ಶಸಗಳನ್ನು ಕೈಯಲ್ಲಿ ಹಿಡಿಯದೇ ಇದ್ದ,
ಅಮಾಯಕ, ಹಳ್ಳಿಯ ಜನರು. ಆದರೆ, ಶಿವಪುರ ದಲ್ಲಿನ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲೋ ಎಂಬಂತೆ, ಪೊಲೀಸರು ಅಧಿಕೃತ ದಾಖಲೆಗಳ ಪ್ರಕಾರ 96 ಸುತ್ತು ಗುಂಡು ಹಾರಿಸಿದರು. 32 ಜನ ಮೃತಪಟ್ಟರು, ಅದೆಷ್ಟೋ ಜನ ಗಾಯಗೊಂಡರು. ಆದರೆ, ಮೈಸೂರು ಸರಕಾರವು ಈ ಅಂಕಿ ಅಂಶವನ್ನು ಅಲ್ಲಗಳೆಯಲು ಪ್ರಯತ್ನಿಸಿ, ಕೇವಲ ಹತ್ತು ಜನರು ಮಾತ್ರ ಮೃತಪಟ್ಟರು ಎಂದು ಹೇಳಿ, ಅಧಿಕೃತವಾಗಿ ಅದೇ ಅಂಕಿಸಂಕಿಯನ್ನು ದಾಖಲಿಸಿತು.

ಮೈಸೂರು ರಾಜ್ಯದ ಹಳ್ಳಿಯೊಂದರಲ್ಲಿ 32 ಜನ ಅಮಾಯಕ ಜನರು ಸತ್ತ ಘಟನೆಯು ದೇಶದಾದ್ಯಂತ ವರದಿಯಾಯಿತು. ಕಾಂಗ್ರೆಸ್ ನಾಯಕ
ವಲ್ಲಭಬಾಯಿ ಪಟೇಲರು ಧಾವಿಸಿ ಬಂದರು. ಅಂದಿನ ದಿವಾನ ಮಿರ್ಜಾ ಇಸ್ಮಾಯಿಲರ ಜತೆ ಮಾತುಕತೆ ನಡೆಸಿದರು. ಇದು ಪಟೇಲ್-ಮಿರ್ಜಾ
ಒಪ್ಪಂದ ಎಂದೇ ದಾಖಲಾಗಿದೆ. ಕೊನೆಗೂ ಮೈಸೂರು ಸರಕಾರವು ಕೆಲವು ಷರತ್ತುಗಳೊಂದಿಗೆ ಜನರ ಬೇಡಿಕೆಯನ್ನು ಮನ್ನಿಸಿತು. ಮೈಸೂರು
ಸರಕಾರದ ಧ್ವಜದ ಜತೆ ತ್ರಿವರ್ಣ ಧ್ವಜ ಹಾರಿಸಲು ಒಪ್ಪಿಗೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ರಾಜಕೀಯ ಪಕ್ಷ ಎಂಬ ಮಾನ್ಯತೆ ಮೊದಲಾದ ಬೇಡಿಕೆ ಗಳಿಗೆ ಸಮ್ಮತಿ ದೊರಕಿತು. 1939ರಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲು ಸಹ ಅವಕಾಶ ದೊರಕಿತು.

1938ರಲ್ಲಿ ಮೈಸೂರು ರಾಜ್ಯದಲ್ಲಿ ರಾಷ್ಟ್ರಧ್ವಜ ಹಾರಿಸಲು ಮತ್ತು ಅದಕ್ಕೆ ಪೂರಕ ಎನಿಸಿದ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರ ಪ್ರತಿರೋಧ ಒಡ್ಡಿ ದವರು ಅಂದಿನ ಮಹಾರಾಜರು ಮತ್ತು ದಿವಾನರು. ಸಹಜವಾಗಿಯೇ, ಬ್ರಿಟಿಷರ ಮೇಲ್ವಿಚಾರಣೆಯಲ್ಲಿ ರಾಜ್ಯಭಾರ ನಡೆಸುತ್ತಿದ್ದ ಮೈಸೂರು ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ ಎಂದು ಭಾವಿಸಬಹುದು. ಆದರೆ, ಅಮಾಯಕ ಜನರ ಮೇಲೆ ಗುಂಡು ಹಾರಿಸುವ ನಿರ್ಣಯವನ್ನು ಅಂದಿನ ಪೊಲೀಸರು ಕೈಗೊಂಡದ್ದು ಮಾತ್ರ ದುರದೃಷ್ಟಕರ. 1942ರಲ್ಲಿ ಈಸೂರಿನಲ್ಲೂ ಸಾಕಷ್ಟು ಪೊಲೀಸ್ ದೌರ್ಜನ್ಯ ನಡೆದದ್ದು ಇಲ್ಲಿ ನೆನಪಿಗೆ ಬರುತ್ತದೆ.
ವಿದುರಾಶ್ವತ್ಥದ ಹತ್ಯಾಕಾಂಡವು, ನಂತರದ ವರ್ಷಗಳಲ್ಲಿ ತುಸು ಹಿನ್ನೆಲೆಗೆ ಸರಿದದ್ದಂತೂ ನಿಜ.

‘ಕರ್ನಾಟಕದ ಜಲಿಯನ್‌ವಾಲಾ ಬಾಗ್’ (ದಕ್ಷಿಣದ ಜಲಿಯನ್‌ವಾಲಾ ಬಾಗ್) ಎಂಬ ಹೆಸರಿನಿಂದ ಇದನ್ನು ಕರೆದಿದ್ದರೂ, ನಮ್ಮ ಈಚಿನ ತಲೆಮಾರು
ಇದೊಂದು ತ್ಯಾಗವನ್ನು ಸಣ್ಣದಾಗಿ ಮರೆಯುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇಂದಿಗೂ ಆ ಹತ್ಯಾಕಾಂಡದಲ್ಲಿ ಸತ್ತವರು ‘ಕೆಲವರು’ ಎಂದು
ಹೇಳುವ ಪರಿಪಾಠ ಇದೆ. ಅಂದರೆ ಆ ರೀತಿ ಹೇಳುವವರಿಗೆ ಸ್ಪಷ್ಟ ಮತ್ತು ಪೂರ್ಣ ಮಾಹಿತಿ ಇಲ್ಲ ಎಂದೇ ಅರ್ಥ. ಆದಿನ ಮೈಸೂರು ರಾಜ್ಯದ ಪೊಲೀಸರು (ನೆನಪಿಡಿ, ಅಂದು ಬ್ರಿಟಿಷ್ ಮೂಲದ ಅಥವಾ ಯುರೋಪಿಯನ್ ಪೊಲೀಸರು ಅಲ್ಲಿಗೆ ಬರಲಿಲ್ಲ, ನಮ್ಮ ರಾಜ್ಯದಲ್ಲೇ ಹುಟ್ಟಿ ಬೆಳೆದ ಪೊಲೀಸರು  ಕಾರ್ಯಾಚರಣೆ ನಡೆಸಿದ್ದು!) ಮಧ್ಯಾಹ್ನ ಸುಮಾರು 1.30 ರಿಂದ ಸಂಜೆ 5.30ರ ತನಕ 96 ಸುತ್ತು ಗುಂಡು ಹಾರಿಸಿದರು.

ಅಂದು ಮೃತಪಟ್ಟವರಲ್ಲಿ ಗೌರಮ್ಮ ಎಂಬ ಗರ್ಭಿಣಿಯೂ ಸೇರಿದ್ದರು. ಹಲವಾರು ಮಂದಿ ಗಾಯಗೊಂಡಿದ್ದರು. ಅಂದು ಗುಂಡೇಟಿನಿಂದ ಗಾಯ ಗೊಂಡವರಿಗೆ ಸೂಕ್ತ ಚಿಕಿತ್ಸೆಯೂ ಸಕಾಲದಲ್ಲಿ ದೊರಕಿಲ್ಲ. ಸ್ಥಳೀಯರ ಮಾಹಿತಿಯ ಪ್ರಕಾರ, ಸಂಜೆ 5.30ರ ತನಕವೂ ಗುಂಡು ಹಾರಿಸಲಾಗು  ತ್ತಿದ್ದು, ನಂತರ ಪೊಲೀಸರು ತೆರಳಿದರು. ಆ ನಂತರ, ರಾತ್ರಿಯ ಹೊತ್ತಿನಲ್ಲಿ, ಗುಂಡೇಟಿಗೆ ಬಲಿಯಾದವರ ಕುಟುಂಬದವರು ಕತ್ತಲಿನಲ್ಲೇ ಅರಸುತ್ತಾ ಬಂದು, ಸತ್ತುಹೋದವರ ಶವಗಳನ್ನು ತಮ್ಮ ಮನೆಗೆ ಸಾಗಿಸಿದರು.

ಆದ್ದರಿಂದಲೇ, ಮರುದಿನ ಬೆಳಗ್ಗೆ ಪೊಲೀಸರು ಅಧಿಕೃತವಾಗಿ ಶವಗಳ ಲೆಕ್ಕ ಹಾಕಿದಾಗ, ಕೇವಲ 10 ಶವಗಳ ವಿವರಗಳು ಮಾತ್ರ ದಾಖಲಾದವು. ಇಲ್ಲಿನ ಹುತಾತ್ಮ ಸ್ತಂಭ ದಲ್ಲಿ ಕೇವಲ ಒಂಬತ್ತು ಹೆಸರುಗಳು ಮಾತ್ರ ಇವೆ : ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನಗಾರಿ ನರಸಪ್ಪ, ಹನುಮಂತಪ್ಪ, ಕಾಡಗೊಂಡ ನಹಳ್ಳಿ ಮಲ್ಲಯ್ಯ, ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟಗಿರಿಯಪ್ಪ, ಮರಳೂರು ಗೌರಮ್ಮ (ಗರ್ಭಿಣಿ). ಇಂತಹ ಭೀಕರ ಹತ್ಯಾಕಾಂಡದ ವಿವರಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರಲಿಲ್ಲ ಎಂಬ ಅನುಮಾನ ಮೂಡಿದರೂ, ಅದಕ್ಕೆ ಕಾರಣ ಗಳೇನಿರಬಹುದು ಎಂದು ಹುಡುಕುವುದು ಕುತೂಹಲಕಾರಿ ಎನಿಸುತ್ತದೆ.

ಬಹುಷಃ, ಮೈಸೂರು ರಾಜ್ಯದ ಮೇಲಿನ ಅಭಿಮಾನದಿಂದಾಗಿ, ತಮ್ಮದೇ ಸರಕಾರದ ಪೊಲೀಸರು ನಡೆಸಿದ ಈ ಭಯಾನಕ ಹತ್ಯಾಕಾಂಡದ ವಿವರಗಳನ್ನು ಹೆಚ್ಚು ಪ್ರಚಾರಕ್ಕೆ ಒಳಪಡಿಸಿಲ್ಲವೇನೋ ಎಂಬ ಸಂಶಯ ಇಂದು ಮೂಡುತ್ತದೆ. ಏಕೆಂದರೆ, ವಿದುರಾಶ್ವತ್ಥದಲ್ಲಿ ಸೂಕ್ತ ಮತ್ತು ಗೌರವಯುತ ಸ್ಮಾರಕ ನಿರ್ಮಾಣ ಗೊಂಡದ್ದು 2004ರಲ್ಲಿ! ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು ಐದೂವರೆ ದಶಕದ ನಂತರ! ಇಂದು ವಿದುರಾಶ್ವತ್ಥದಲ್ಲಿ ‘ವೀರ ಸೌಧ’ ಇದೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಗೌರವಾರ್ಥ ಚಿತ್ರಗಳ ಪ್ರದರ್ಶನ ನೀಡುವ ಗ್ಯಾಲರಿಯೂ ಇದೆ. ಆದರೆ, ಇವೆಲ್ಲವೂ ಸುಮಾರು 1950-60ರ ದಶಕದಲ್ಲಿ ಆಗಿಬೇಕಿತ್ತಲ್ಲವೆ!

ಆಗಿನಿಂದಲೇ, ನಮ್ಮ ರಾಜ್ಯದ ಬಲಿದಾನವನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯಬೇಕಿತ್ತ ಲ್ಲವೆ? ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ,
ಮೈಸೂರು ರಾಜ್ಯದ 32 ಜನ ಒಂದೇ ದಿನ ಪೊಲೀಸರ ದಬ್ಬಾಳಿಕೆಗೆ, ಗುಂಡೇಟಿಗೆ ಬಲಿಯಾದರು ಎಂಬ ಸತ್ಯವನ್ನು ಹೈಲೈಟ್ ಮಾಡಬೇಕಿತ್ತಲ್ಲವೆ?
ದೂರದ ಜಲಿಯನ್‌ವಾಲಾ ಬಾಗ್ ಇಂದು ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. 1919ರಲ್ಲಿ ಬ್ರಿಟಿಷರು ಅಲ್ಲಿ ಸುಮಾರು 400ಕ್ಕೂ ಹೆಚ್ಚಿನ ಅಮಾಯಕ ಜನರನ್ನು ಗುಂಡಿಟ್ಟು ಕೊಂದರು, ಆ ತ್ಯಾಗವನ್ನು ನೆನಪಿಸಿಕೊಳ್ಳುವ ಉದ್ದೇಶದಿಂದಲೇ, ಜಲಿಯನ್‌ವಾಲಾ ಬಾಗ್ ಇಂದು ನಮ್ಮ ದೇಶದ ಎಲ್ಲರೂ ನೋಡಬೇಕಾದ ಸ್ಥಳಗಳಲ್ಲಿ ಒಂದು ಎಂದು ಖ್ಯಾತವಾಗಿದೆ.

ಅದೇ ರೀತಿ, ವಿದುರಾಶ್ವತ್ಥವೂ ಸಹ ಕರ್ನಾಟಕದ ಪ್ರವಾಸಿ ನಕ್ಷೆಯಲ್ಲಿ ಸೇರಿಕೊಳ್ಳುವ ಅವಶ್ಯಕತೆ ಇದೆ. ಇಂದು ವಿದುರಾಶ್ವತ್ಥವು ತನ್ನ ದೇವಸ್ಥಾನ ಮತ್ತು ನಾಗಶಿಲೆಗಳ ಕಾರಣದಿಂದ ತಕ್ಕಮಟ್ಟಿಗೆ ಪ್ರಖ್ಯಾತವಾಗಿದೆ. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಽಸಿದಂತೆ, ಅಲ್ಲೊಂದು ವಿಶಿಷ್ಟ ಸ್ಮಾರಕ ಇದೆ ಎಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿರುವ ನಮ್ಮ ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಆ ಸ್ಮಾರಕವನ್ನು ನೋಡಲೆಂದೇ ಯಾರೂ ವಿದುರಾಶ್ವತ್ಥಕ್ಕೆ ಇಂದು ಬರುತ್ತಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ನಮ್ಮ ರಾಜ್ಯದ ಜನರು ನಡೆಸಿದ ತ್ಯಾಗ
ಮತ್ತು ಅವರ ಮೇಲೆ ಮೈಸೂರು ರಾಜ್ಯದ ಪೊಲೀಸರು ನಡೆಸಿದ ದೌರ್ಜನ್ಯವನ್ನು ನೆನಪಿಸಿಕೊಳ್ಳಲಾದರೂ, ವಿದುರಾಶ್ವತ್ಥವನ್ನು ಇನ್ನಷ್ಟು ಮುನ್ನೆಲೆಗೆ
ತರುವ ಅವಶ್ಯಕತೆ ಇದೆ.

ಇತಿಹಾಸವನ್ನು ಮರೆತರೆ ದೇಶ ಕಟ್ಟಲು ಸಾಧ್ಯವೆ?