Thursday, 21st November 2024

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಫೆ.15ರಿಂದ ಟೋಲ್‌ ಸಂಗ್ರಹ ಆರಂಭ

ಮೈಸೂರು : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ  ಹೆದ್ದಾರಿಯಲ್ಲಿ ಮೊದಲ ಹಂತದ ಟೋಲ್‌ ಸಂಗ್ರಹ ಫೆ.15ರಿಂದ ಆರಂಭ ವಾಗಲಿದೆ.

ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ನಡುವೆ ಟೋಲ್‌ ಅನ್ವಯಿಸಲಿದೆ. ( 56 ಕಿ.ಮೀ.) ಎರಡನೇ ಹಂತ ನಿಡಘಟ್ಟದಿಂದ ಮೈಸೂರು (61 ಕಿ.ಮೀ) ತನಕ ಇದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫೆ.15ರಿಂದ ಮೊದಲ ಹಂತದಲ್ಲಿ ಟೋಲ್‌ ಸಂಗ್ರಹಿಸಲಿದೆ. ಎರಡನೇ ಹಂತದಲ್ಲಿ ಬಳಿಕ ಟೋಲ್‌ ಸಂಗ್ರಹ ಶುರುವಾಗಲಿದೆ.

10 ಪಥಗಳ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್‌ ಸಂಗ್ರಹಕ್ಕೆ ಮುನ್ನ ಪ್ರಯಾಣಿಕರ ಸ್ನೇಹಿ ಸೂಚನಾ ಫಲಕ ಗಳನ್ನು ಅಳವಡಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ. ಶ್ರೀರಂಗಪಟ್ಟಣದ ಸಮೀಪ ಹಾಗೂ ಬಿಡದಿಯ ಕುಂಬಳ ಗೋಡು ಸಮೀಪ ಟೋಲ್‌ ಸಂಗ್ರಹ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ. ಒಟ್ಟು ಮೂರು ಟೋಲ್‌ ಪ್ಲಾಜಾಗಳು ಅಸ್ತಿತ್ವಕ್ಕೆ ಬರಲಿದೆ. ಆದರೆ ಎರಡು ಪ್ಲಾಜಾಗಳಲ್ಲಿ ಟೋಲ್‌ ಸಂಗ್ರಹ ನಡೆಯಲಿದೆ.

ಪ್ರತಿಯೊಂದು ಟೋಲ್‌ ಪ್ಲಾಜಾದಲ್ಲಿ 11 ಗೇಟ್‌ಗಳು ಇರಲಿವೆ. ಹೈಟೆಕ್‌ ಟೋಲ್‌ ಸಿಸ್ಟಮ್‌ಗಳು ಇರಲಿದ್ದು, ಫಾಸ್ಟ್ಯಾಗ್‌ ಸೌಲಭ್ಯ ಗಳು ದೊರೆಯಲಿವೆ.

ಪ್ರತಿ 60 ಕಿ.ಮೀ.ಗೆ ಒಂದು ಟೋಲ್‌ ಇರಬೇಕು. ಪ್ರತಿ ಕಿ.ಮೀಗೆ ಸರಾಸರಿ 1.5ರೂ.ಗಳಿಂದ 2 ರೂ. ತನಕ ದರ ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಇದರ ಜತೆಗೆ ಲೇನ್‌ಗಳ ಸಂಖ್ಯೆ, ಸೇತುವೆಗಳು, ಅಂಡರ್‌ ಪಾಸ್‌ಗಳ ಸಂಖ್ಯೆಯೂ ಪರಿಗಣನೆ ಯಾಗುತ್ತದೆ. ಎಕ್ಸ್‌ಪ್ರೆಸ್‌ವೇ 9 ಪ್ರಮುಖ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್‌ಪಾಸ್‌ಗಳು, 11 ಓವರ್‌ಪಾಸ್‌ಗಳು, 4 ರೋಡ್‌ ಓವರ್‌ ಬ್ರಿಡ್ಜ್‌ಗಳು ಮತ್ತು 5 ಬೈಪಾಸ್‌ಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.