Thursday, 21st November 2024

ಬಿಎಸ್‌ವೈ ಬಿಟ್ಟು ನಡೆದರೆ ಮೆಚ್ಚನಾ ಮತದಾರನು ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕರ್ನಾಟಕದ ಬಿಜೆಪಿಯ ‘ತೆಂಡೂಲ್ಕರ್’ ಎಂಬ ಯಡಿಯೂರಪ್ಪನವರನ್ನು ಆರಂಭಿಕ ಆಟಗಾರನನ್ನಾಗಿಸಿ, ಕಪ್ ಎತ್ತಿ ಹಿಡಿಯುವವರೆಗೂ ನಾಯಕ ನಂತೆಯೇ ನೋಡಬೇಕಿದೆ. ಅದುಬಿಟ್ಟು ಅವರನ್ನು ಅಂಪೈರು-ಥರ್ಡ್ ಅಂಪೈರು-ರೆಫ್ರಿಯಾಗಿ ಕೂರಿಸಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕೆಟ್ಟ ಕನಸು ಕಾಣಬೇಕಾಗುತ್ತದೆ.

ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ಹಿಡಿದು ಪಕ್ಷದ ಹಿರಿಯ ಎಚ್.ಡಿ.ದೇವೇಗೌಡರಿಗೆ ವಿಜಯದ ಕೊಡುಗೆ ನೀಡಬೇಕೆಂದಿದ್ದಾರೆ. ಸಿದ್ದರಾಮಯ್ಯ-ಡಿಕೆಶಿ-
ಖರ್ಗೆಯವರು ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿ ಸೋನಿಯಾ-ರಾಹುಲ್-ಪ್ರಿಯಾಂಕಾ ಮತ್ತು ಆಕೆಯ ಮಕ್ಕಳಿಗೂ ಅರ್ಪಿಸುವಂಥ ತ್ಯಾಗಮಯಿ ಸ್ವಾಮಿ ನಿಷ್ಠೆ ಕಾಂಗ್ರೆಸ್‌ನಲ್ಲಿ ಇದೆ. ಇರಲಿ ಅದು ಅವರುಗಳ ಹೆಮ್ಮೆ, ಸಂತೋಷ ! ಯಾರಯಾರ ಯೋಗ್ಯತೆಗಳೇನು, ದೇಶಕ್ಕೆ ಎಂಥ ನಾಯಕರು ಅಗತ್ಯ ಎಂಬುದು ಭಾರತೀಯರಿಗೆ ಅರಿವಾಗಿದೆ.

ದೇಶವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಮೋದಿಯವರಿಗೆ ಹೊರಗಿನ ಶತ್ರುಗಳಿಗಿಂತ ಒಳಗಿರುವ ದೇಶದ್ರೋಹಿಗಳಿಂದಲೇ ಹೆಚ್ಚು ಕಂಟಕವಿರುವುದು ಸುಳ್ಳಲ್ಲ. ಒಂದು ಕಾಲದಲ್ಲಿ ಬುದ್ಧಿಜೀವಿಗಳೆಂಬ ಮುಖವಾಡ ಧರಿಸಿದ್ದವರೆಲ್ಲ ಇಂದು ಲದ್ದಿಜೀವಿಗಳಾಗಿ ವೇದಿಕೆ ಮತ್ತು ಮೈಕು
ಸಿಕ್ಕಾಗಲೆಲ್ಲ ‘ದೇಶ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಆತಂಕದಲ್ಲಿದೆ, ಸಂವಿಧಾನದ  ದುರ್ಬಳಕೆ ಯಾಗುತ್ತಿದೆ’ ಎಂದು ರಾತ್ರಿ ಗೂಬೆಗಳಂತೆ ರೋದಿಸಲು ಶುರುವಿಟ್ಟುಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇಂಥ ಗೂಬೆಗಳು ಸ್ಮಶಾನ ಸೇರಬೇಕೆಂದರೆ ನಾಗರಿಕರಲ್ಲಿ ದೇಶಾಭಿ ಮಾನವನ್ನು ಹೆಚ್ಚು ಜಾಗೃತಗೊಳಿಸಬೇಕಿದೆ. ಅಂಥ ಕೆಲಸವನ್ನು ಮಾಡುತ್ತಿರುವುದು ಸದ್ಯಕ್ಕೆ ಮೋದಿ-ಯೋಗಿ ಆಧಾರಿತ ಬಿಜೆಪಿ ಮಾತ್ರ.

ಭಾರತೀಯರ ಹುಟ್ಟುಗುಣ ಸ್ವಾಭಿಮಾನ. ಸನಾತನ ಪರಂಪರೆ ಸಾಗಿಬಂದಿರುವುದೇ ಸ್ವಾಭಿಮಾನ-ಸಹಿಷ್ಣುತೆ-ಔದಾರ್ಯ-ಸಹಬಾಳ್ವೆ ಎಂಬ
ಗಾಲಿಗಳ ಮೇಲೆ. ಉಪವಾಸವಿದ್ದರೂ ಸ್ವಾಭಿಮಾನದಿಂದ ಬದುಕುವುದು ಭಾರತೀಯನ ಮೂಲ ಲಕ್ಷಣ. ಬೆಲೆ ಏರಿಕೆ, ನಿರುದ್ಯೋಗವೆಂಬ ಎರಡು ಸಾಮಾಜಿಕ ಸಮಸ್ಯೆಗಳು ಸಹಿಸಲಸಾಧ್ಯ ನಿಜ. ಆದರೆ ಅದು ಕೇವಲ ಮೋದಿಯವರ ಸರಕಾರದಲ್ಲಿ ದಿಢೀರನೇ ಹುಟ್ಟಿಕೊಂಡಿದ್ದಲ್ಲ. ಕಳೆದ
ಎಪ್ಪತ್ತು ವರ್ಷಗಳಿಂದ ಆಗದ ಬದಲಾವಣೆ ಕೇವಲ ಒಂಬತ್ತು ವರ್ಷಗಳ ಮೋದಿ ಆಡಳಿತದಲ್ಲಿ ಆಗಿ ಬಿಡಬೇಕೆನ್ನುವುದು ಅವೈಜ್ಞಾನಿಕ.

ಹಾಗಂತ ದೇಶವನ್ನು ಅಯೋಗ್ಯರಿಗೆ ಹಸ್ತಾಂತರಿಸಿದರೆ ಅವರುಗಳೇನು ನಾಳೆಯೇ ಇಡೀ ದೇಶವನ್ನು ‘ಇಂದಿರಾ ಕ್ಯಾಂಟಿನ್’ ಮಾಡುವುದಿಲ್ಲ.
ಕೂಡಲೇ ಕೆಲಸಕ್ಕೆ ಹಾಜರಾಗಿ ಎಂದು ಊರೂರಿನಲ್ಲಿ ಸೈರನ್ ಊದುವುದಿಲ್ಲ. ಈ ಎರಡೂ ಸಮಸ್ಯೆಗಳನ್ನು ನೀಗಿಸಲು ಸರಕಾರವನ್ನು
ಒತ್ತಾಯಿಸಬೇಕೇ ಹೊರತು, ತಿಗಣೆ ಇದೆಯೆಂದು ಕಂಬಳಿಯನ್ನೇ ಬಿಸಾಡುವಂತೆ ದೇಶಕ್ಕೆ ಭದ್ರತೆ ಘನತೆ ಗೌರವ ತರುತ್ತಿರುವ ಮೋದಿ ಸರಕಾರ ವನ್ನೇ ಕಿತ್ತೊಗೆಯಬೇಕೆಂದು ಆರ್ಭಟಿಸುವುದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದಂಥ ಅವಿವೇಕತನವಾಗುತ್ತದೆ.

ಪ್ರಸ್ತುತ ಬಿಜೆಪಿಯ ನಿಲುವುಗಳು ಎಲ್ಲ ಕಾಲಕ್ಕೂ ಎಲ್ಲ ರಾಜ್ಯಗಳಿಗೂ ಹೊಂದಿಕೆಯಾಗುವುದಿಲ್ಲ. ವಯಸ್ಸಿನ ಮಿತಿ, ವಂಶರಾಜಕಾರಣ, ಭ್ರಷ್ಟಾಚಾರ
ಇವೆಲ್ಲವನ್ನೂ ಮಾನದಂಡವಾಗಿ ಉಪಯೋಗಿಸುವುದು ದೇಶದ ಭವಿಷ್ಯದ ಸ್ವಚ್ಛ ರಾಜಕಾರಣಕ್ಕಾಗಿ ಸರಿ ಎನಿಸಿದರೂ ಕೆಲ ಸಂದರ್ಭಗಳಲ್ಲಿ ಶ್ರೀರಾಮನ ತತ್ವದ ಜತೆ ಶ್ರೀಕೃಷ್ಣನ ಸೈದ್ಧಾಂತಿಕತೆಯನ್ನೂ ಅನುಸರಿಸಬೇಕು. ಉತ್ತರಪ್ರದೇಶದಲ್ಲಿ ಹಿರಿಯ ರಾಜಕಾರಣಿಗಳಿದ್ದರೂ ಸಂನ್ಯಾಸಿ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ಐತಿಹಾಸಿಕ ನಿರ್ಧಾರ. ಹಾಗೆಯೇ ವಯಸ್ಸಿನ ಮಿತಿಯ ಕಾರಣದಿಂದ ಹಿರಿಯ ನೇತಾರ ಲಾಲಕೃಷ್ಣ ಆಡ್ವಾಣಿಯವರೂ ಸೇರಿ ಅನೇಕ ಹಿರಿತಲೆಗಳನ್ನು ಹಿಂದೆ ಸರಿಸಿದ ಇತಿಹಾಸವಿದ್ದರೂ ಹಿಂದಿನ ಕೇರಳ ರಾಜ್ಯದ ಚುನಾವಣೆ ಯಲ್ಲಿ ‘ಮೆಟ್ರೋ ಮ್ಯಾನ್’ ಇ.ಶ್ರೀಧರನ್ ಅವರನ್ನು ತೊಂಬತ್ತರ ವಯಸ್ಸಿನಲ್ಲೂ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಬಿಜೆ
ಪಿಯ ಒಂದು ‘ಶ್ರೀಕೃಷ್ಣ ತಂತ್ರ’.

ಹಾಗೆಯೇ ಇಂದು ದಕ್ಷಿಣಭಾರತದ ಏಕೈಕ ಬಿಜೆಪಿ ರಾಜ್ಯವಾದ ಕರ್ನಾಟಕವನ್ನು ಮುಂದಿನ ಚುನಾವಣೆಯಲ್ಲೂ ಉಳಿಸಿಕೊಳ್ಳಬೇಕಾದರೆ ಅದೇ ತಂತ್ರವನ್ನು ಇಲ್ಲಿಯೂ ಅನುಸರಿಸಲೇ ಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಆಡುವ ಹನ್ನೊಂದರಲ್ಲಿ ಯಡಿಯೂರಪ್ಪ ನಿಜಕ್ಕೂ ತೆಂಡೂಲ್ಕರ್. ಕರ್ನಾಟದ ಬಿಜೆಪಿಗೆ ಡಿಎನ್‌ಎ ಎಂಬುದಿದ್ದರೆ ಅದು ಉತ್ತರಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯ. ಅಂಥ ಸಮುದಾಯದ ಸಾರಥಿ
ಯಾಗಿ ಕಮಲವನ್ನು ಅರಳಿಸಿದ್ದು ಯಡಿಯೂರಪ್ಪ -ಈಶ್ವರಪ್ಪ-ಅನಂತಕುಮಾರ್ ಎಂಬ ‘ಸೆಟ್ ದೋಸೆ’. ಕಾಂಗ್ರೆಸ್-ಜನತಾದಳದ ಪಾರುಪಥ್ಯ ವಿದ್ದಾಗ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಬಿಜೆಪಿಯನ್ನು ಅಽಕಾರಕ್ಕೆ ತಂದು ರಾಜ್ಯ ಆಳುವಂತೆ ಮಾಡಿರುವುದನ್ನು ಕೇಂದ್ರ ಬಿಜೆಪಿ ಮರೆಯ ಬಾರದು. ಆ ದಿನಗಳಲ್ಲಿ ನಾಡಿನ ಎಲ್ಲ ಮಠಾಧೀಶರಿಗೆ ಯಡಿಯೂರಪ್ಪ, ಅನಂತಕುಮಾರ್, ದೇವೇಗೌಡ, ರಾಮಕೃಷ್ಣಹೆಗಡೆ ಯಾರಿದ್ದರೂ
ಅವರಿಗೆ ಎಲ್ಲರೂ ಭಕ್ತರಾಗಿದ್ದರು. ಅಸಲಿಗೆ ಆಗೆಲ್ಲ ಮಠಾಧೀಶರಿಗೆ ಮಾಡಲು ಅವರದೇ ಆದ ಕೆಲಸಗಳಿದ್ದವು.

ಮೊದಲ ಬಾರಿಗೆ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆದ ಕಾಲದಲ್ಲಿ ಮಠಗಳ  ಮಾಜಿಕ ಸೇವೆಯನ್ನು ಪ್ರೋತ್ಸಾಹಿಸಲು ಬಜೆಟ್ ನಲ್ಲಿ ಒಂದಿಷ್ಟು ಹಣವನ್ನು ಅನೇಕ ಜಾತಿಗಳ ಮಠಗಳಿಗೆ ಮೀಸಲಿಟ್ಟರು. ಆಗಿಂದ ಶುರುವಾದ ಯಡಿಯೂರಪ್ಪನವರ ಮೇಲಿನ ಸ್ವಜಾತಿ ಮಠಗಳ ಪ್ರೀತಿ ಮಮಕಾರ ಅವರನ್ನು ನಾಡಿನಾದ್ಯಂತ ಬೆಂಬಲಿಸಲು ಕರೆ ನೀಡಿದಂತಿತ್ತು. ಇದರ ಪರಿಣಾಮ ಹಿಂದುತ್ವ-ಆರೆಸ್ಸೆಸ್-ಬಿಜೆಪಿ ನಾಯಕರಾಗಿದ್ದ ಯಡಿಯೂರಪ್ಪ ನವರು ಏಕಾಏಕಿ ಅಖಂಡ ವೀರಶೈವ-ಲಿಂಗಾಯತ ಸಮುದಾಯಗಳ ಪ್ರತಿನಿಧಿಯಾಗಿ ಬದಲಾಗಿಹೋದರು.

ಇದರ ದೃಷ್ಟಾಂತವಾಗಿ ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಸುವ ಮಾತು ಬಂದಕೂಡಲೇ ಸ್ವಾಮೀಜಿಗಳೆಲ್ಲರೂ ಬೀದಿಗೆ ಬಂದು ನಿಂತು ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿದರು. ಆ ಮೂಲಕ ಯಡಿಯೂರಪ್ಪನವರು ಧರಿಸಿದ್ದ ಹಿಂದುತ್ವ-ಆರೆಸ್ಸೆಸ್ -ಬಿಜೆಪಿ ಸಮವಸವನ್ನು ಕಳಚಿ ಬಿಸಾಡಿದ ಸ್ವಾಮೀಜಿಗಳು ಅವರಿಗೆ ಜಾತಿಯೆಂಬ ‘ಲಿಂಗವನ್ನು’ ಕಟ್ಟಿಬಿಟ್ಟರು.

ಮೋದಿ-ಅಮಿತ್ಶಾ ಜೋಡಿ ಇಂಥ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಡ್ವಾಣಿಯವರಂಥ ಹತ್ತು ಹಿರಿಯರನ್ನು ಕಡೆಗಣಿಸಬಹುದು.
ಆದರೆ ಕರ್ನಾಟಕದಲ್ಲಿ ಒಬ್ಬ ಯಡಿಯೂರಪ್ಪರನ್ನು ಕಡೆಗಣಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಗಂಡಾಂತರಕಾರಿಯೇ. ಹೀಗಾಗಿ ಇಂದು
ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಒಬ್ಬ ನಿವೃತ್ತ ರಾಜಕಾರಣಿಯಾಗಿ ಪರಿಗಣಿಸಿದರೆ ಪಕ್ಷಕ್ಕೇ ಅಪಾಯಕಾರಿ. ಈಗಲೂ ಯಡಿಯೂರಪ್ಪ
ನವರು ಗಣವೇಶಧಾರಿಯಾಗಿ ಸೈಕಲ್ ತುಳಿಯುತ್ತಿರುವ ಹಳೆಯ ಪೋಟೋವನ್ನು ನೋಡಿದರೆ ಪಕ್ಷಕ್ಕಾಗಿ ಅವರು ಮಣ್ಣುಹೊತ್ತ ಚಿತ್ರಣ ಅರಿ ವಾಗುತ್ತದೆ.

ಅಷ್ಟರ ಮಟ್ಟಿಗೆ ಯಡಿಯೂರಪ್ಪನವರು ಕರ್ನಾಟಕದ ಬಿಜೆಪಿಗೆ ‘ಹೆತ್ತಪ್ಪನೇ’ ಹೌದು. ಬೇರೆಲ್ಲ ರಾಜ್ಯಗಳಲ್ಲಿ ಮೋದಿ-ಅಮಿತ್ ಶಾ ಕೃಷ್ಣಾರ್ಜುನ ರಾಗಿರಬಹುದು. ಆದರೆ ಪ್ರಸ್ತುತ ಕರ್ನಾಟಕದಲ್ಲಿ ಯಡಿಯೂರಪ್ಪನವರು ಮಾತ್ರ ಭೀಷ್ಮ. ಹೀಗಾಗಿ ಕೇಂದ್ರ ಬಿಜೆಪಿ ಅವರನ್ನು ಕೌರವರ ಸಾಲಿನಲ್ಲಿ ನೋಡದೆ ಪಾಂಡವರಂತೆ ನೋಡಬೇಕಾದ ಅಗತ್ಯವಿದೆ.

ಬಿಜೆಪಿಯ ಅನೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಬಹುದು. ಆದರೆ ಅಧಿಕಾರವೆಂಬ ಪಂದ್ಯಾವಳಿ ಗೆಲ್ಲಿಸಿಕೊಡಬಲ್ಲ ತೆಂಡೂಲ್ಕರ್, ರಾಹುಲ್
ಡ್ರಾವಿಡ್, ಗಂಗೂಲಿ, ಧೋನಿಯಂಥ ಮಾಸ್ ದಾಂಡಿಗರು ಯಾರೆಂದು ನೋಡಿದರೆ ಕಂಗೊಳಿಸುವುದು ಯಡಿಯೂರಪ್ಪ ಒಬ್ಬರೇ. ಅಶೋಕ್,
ಅಶ್ವತ್ಥ್, ಶೆಟ್ಟರ್‌ರಂಥವರು ತಮ್ಮ ಕ್ಷೇತ್ರಗಳಲ್ಲಿ ಔಟ್ ಆಗದೇ ಆಡು ಎಂದರೆ ಜೀವನ ಪೂರ್ತಿ ಅವರದೇ ಕ್ಷೇತ್ರವೊಂದರ ಟೆಸ್ಟ್ ಮ್ಯಾಚ್ ಆಡುತ್ತ, ಅತ್ತ ಔಟ್ ಆಗದೆ ಇತ್ತ ಬಿಜೆಪಿ ಎಂಬ ಪಂದ್ಯಾವಳಿ ಯನ್ನೂ ಗೆಲ್ಲಿಸದೆ ಮ್ಯಾಚನ್ನು ಡ್ರಾ ಮಾಡಿಕೊಂಡು ಹೋಗುತ್ತಾರಷ್ಟೆ.

ಆದರೆ ಮೋದಿ-ಶಾ ಜೋಡಿಯ ಟಾರ್ಗೆಟ್ ಯಾವಾಗಲೂ ಇನ್ನಿಂಗ್ಸ್ ಗೆಲುವಿನಂಥ ರಣತಂತ್ರದಿಂದ ಕೂಡಿರುತ್ತದೆ. ಆದರೆ ಯಡಿಯೂರಪ್ಪನವರನ್ನು ‘ರಿಟೈರ್ಡ್ ಹರ್ಟ್’ಗೊಳಿಸಿದ ಪರಿಣಾಮ ರಾಜ್ಯದಲ್ಲಿ ಮತ್ತೊಂದು ಸ್ಥಿತ್ಯಂತರದ ಬೆಳವಣೆಗೆಯಾಗಿದೆ. ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಪಂಚಮಸಾಲಿ ಲಿಂಗಾಯಿತರ ಅಂಕಣದಲ್ಲಿ ಅಗ್ರಗಣ್ಯ ಬ್ಯಾಟ್ಸ್ಮನ್ ಆಗಿದ್ದಾರೆ. ಆ ಸ್ವಾಮೀಜಿಗಳ ವೈಫೈಗಳಿಗೆ ಕನೆಕ್ಟ್ ಆಗಿರುವ ಯತ್ನಾಳ್ ‘ಹಾಟ್‌ಸ್ಪಾಟ್’ ಆಗಿ ಹೊರಹೊಮ್ಮಿದ್ದಾರೆ.

ಹಾಗೆಯೇ ಮಠಗಳೊಂದಿಗೆ ಆ ಸಮುದಾಯದ ಮತಗಳೂ ವೈಫೈನಂತೆ ಕನೆಕ್ಟ್ ಆಗಿವೆ. ಇಂಥ ಪರಿಸ್ಥಿತಿಯನದರೂ ಯತ್ನಾಳರ ಹಾಟ್‌ಸ್ಪಾಟ್ ಆಫ್ ಆದರೆ ಬಹುತೇಕ ಪಂಚಮಸಾಲಿ ಲಿಂಗಾಯಿತರ ವೋಟ್‌ಬ್ಯಾಂಕ್ ಬಿಜೆಪಿಯಿಂದ ಡಿಸ್ಕನೆಕ್ಟ್ ಆಗಿಬಿಡುವ ಸಂಭವವೇ ಹೆಚ್ಚು. ಜತೆಗೆ ಯಡಿಯೂರಪ್ಪನವರನ್ನು ಆಡುವ ಹನ್ನೊಂದು ಮಂದಿಯ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನದ ಇರಿಸಬೇಕೇ ವಿನಃ ಅವರನ್ನು ಅಂಪೈರು-ಥರ್ಡ್ ಅಂಪೈರು-ರೆಫ್ರಿಯಾಗಿ ಕೂರಿಸಿದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಕೆಟ್ಟಕನಸನ್ನು ಕಾಣಬೇಕಾಗುತ್ತದೆ.

ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಗೆಲ್ಲಬೇಕಾದರೆ ಯಡಿಯೂರಪ್ಪನವರಿಗೆ ಗ್ಲೌಸು ಪ್ಯಾಡ್ ಕಟ್ಟಿ ಬ್ಯಾಟುಕೊಟ್ಟು ಟಾಸ್‌ನಿಂದ ಕಪ್ ಎತ್ತಿ
ಹಿಡಿಯುವವರೆಗೂ ನಾಯಕನಂತೆಯೇ ನೋಡಬೇಕಿದೆ. ಚುನಾವಣೆಯಲ್ಲಿ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್, ಕೀಪಿಂಗ್ ಈ ಎಲ್ಲವನ್ನೂ ಉತ್ಸಾಹ
ದಿಂದ ನಿಭಾಯಿಸುವ ವಿಜಯೇಂದ್ರರಿಗೆ ಸಂಪುಟದಲ್ಲಿ ಒಂದು ಸ್ಥಾನಕೊಡುವುದರಲ್ಲಿ ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು. ಜತೆಗೇ
ಯತ್ನಾಳ್ ಎಂಬ ಹಾಟ್‌ಸ್ಪಾಟ್ ಅನ್ನೂ ‘ಬ್ಲಾಕ್’ ಮಾಡದೇ ಅವರಿಗೆ ಸರಿಯಾದ ‘ಪಾಸ್‌ವರ್ಡ್’ ಕೊಟ್ಟು ಚುನಾವಣೆಯೆಂಬ ಪಂದ್ಯದಲ್ಲಿ ಸರಿಯಾಗಿ
ಕನೆಕ್ಟ್ ಮಾಡಿಕೊಂಡರೆ ಬಿಜೆಪಿಗೇ ಕ್ಷೇಮ. ಏಕೆಂದರೆ ಬಿಜೆಪಿ ಹೊರತು ಪಡಿಸಿದರೆ ರಾಜ್ಯದಲ್ಲಿ ಪಾಕಿಸ್ತಾನಕ್ಕೆ ಹೋಲುವಂಥ ಟೀಮುಗಳೂ ಅಸ್ತಿತ್ವದಲ್ಲಿದೆ.

ಈ ಟೀಮು ದೇಶವನ್ನು ಗೆಲ್ಲಿಸುವುದಕ್ಕಿಂತ ತಮ್ಮ ವೈಯಕ್ತಿಕ ಸ್ಕೋರುಗಳಿಗಾಗಿ, ತಮ್ಮ ‘ಫ್ರಾಂಚೈಸಿಗಳ’ ಗುಲಾಮಗಿರಿಗಳಿಗಾಗಿಯೇ ಆಡುತ್ತ ಜೀವನ ಪೂರ್ತಿ ಟೆಸ್ಟ್‌ಮ್ಯಾಚ್ ಆಡಿಕೊಂಡಿರುವ ಮುದಿ ಆಟಗಾರರಿದ್ದಾರೆ. ಮ್ಯಾಚ್ ಗೆಲ್ಲುವುದಕ್ಕಾಗಿ ಎಂಥ ದರಿದ್ರ ಅಸಹ್ಯವಾದ ಅನೈತಿಕ ‘ಮ್ಯಾಚ್‌ಫಿಕ್ಸಿಂಗ್’ ಮಾಡಿಕೊಂಡು ಚೆಂಡನ್ನು ತಿರುಗಿಸುವ ಬದಲು ಸಿಡಿಯನ್ನು ತಿರುಗಿಸುವ ಕೆಡಿಗಳಿದ್ದಾರೆ. ಜತೆಗೆ ಇನ್ನೊಂದು ಟೀಮು ಇದೆ. ಈ ಟೀಮು ಮನೆಯವರನ್ನೆಲ್ಲ ರಸ್ತೆಗಿಳಿಸಿ ಅ ‘ವರ್ಲ್ಡ್‌ಕಪ್’ ಆಡುತ್ತ ‘ಮ್ಯಾನ್ ಆಫ್ ದ ಮ್ಯಾಚು, ಸೀರಿಸ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟರ್’ ಎಂದು ಘೋಷಿಸಿಕೊಳ್ಳುವುದಲ್ಲದೇ ‘ಭಾರತದ ಮೇಲೇ ಆಡಿ ಪಂದ್ಯ ಗೆಲ್ಲುತ್ತೇವೆ’ ಎನ್ನುವ ಶಾಟ್‌ಪಿಚ್ ಆಟಗಾರರು, ಶಾರ್ಟ್‌ಕಟ್ ಗಿರಾಕಿಗಳಿದ್ದಾರೆ. ಪಶ್ಚಿಮಬಂಗಾಳ ಆಂಧ್ರ ತೆಲಂಗಾಣ ತಮಿಳುನಾಡು ಕೇರಳ ರಾಜ್ಯಗಳ ಟೀಮುಗಳು ಗೆಲ್ಲುತ್ತಿದ್ದರೆ ಅಲ್ಲಿನ ಪಕ್ಷಗಳ ‘ವಾರಸ್‌ದಾರರು’ ಸಂತುಷ್ಟರಾಗಿ ಅಲ್ಲಿನ ಪ್ರೇಕ್ಷಕರು ಚಪ್ಪಾಳೆ ಹೊಡೆಯಬಹುದಷ್ಟೇ!

ಆದರೆ ಭಾರತವನ್ನು ಕಂಡು ಇಡೀ ವಿಶ್ವವೇ ಚಪ್ಪಾಳೆ ಹೊಡೆಯುವಂತೆ ಮಾಡುವ ನಾಯಕರನ್ನು ಭಾರತೀಯರು ಆರಿಸಿ ಕಳಿಸಿದರೆ ಸಂವಿಧಾನ-ಪ್ರಜಾಪ್ರಭುತ್ವ- ದೇಶದ ಸುರಕ್ಷತೆಗೆ ಒಳ್ಳೆಯದು. ಇಂದು ಅನ್ಯ ಪಕ್ಷಗಳಲ್ಲೂ ಜೈಲಿಗೆ ಹೋಗಿಬಂದವರು, ಹೋಗಲೇಬೇಕಾದವರು, ಜಾಮೀನಿನ
ಮೇಲೆ ಹೊರಬಂದಿರುವವರು, ದೇಶದ್ರೋಹಿ ಗಳೊಂದಿಗೆ ಸಂಬಂಧ ಇರಿಸಿಕೊಂಡಿರುವವರು, ಪರಮ ಭ್ರಷ್ಟಾಚಾರಿಗಳು, ರೌಡಿಗಳು, ಪೊಲೀಸ್
ಅಧಿಕಾರಿಗಳನ್ನೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವರು, ಊರಿಗೆ-ಪೊಲೀಸ್ ಠಾಣೆಗಳಿಗೇ ಬೆಂಕಿ ಹಚ್ಚುವವರು, ಸಂವಿಧಾನ ವಿರೋಧಿಗಳನ್ನು ಬ್ರದರ್ಸ್‌ಗಳೆಂದು ಮುದ್ದಾಡುವವರಿರುವಾಗ ದೇಶಭಕ್ತರಾದ ಪ್ರಮೋದ್ ಮುತಾಲಿಕ್ ಅಂಥವರನ್ನು, ತಾನೂ ಗೆದ್ದು ಸುತ್ತಲಿನ ಹದಿನೈದು ಜನರನ್ನೂ ಗೆಲ್ಲಿಸಿಕೊಂಡು ಬರುವಂಥ ‘ಪ್ರತಿಭೆ’ ಇರುವ ಜನಾರ್ದನರೆಡ್ಡಿ, ಶ್ರೀರಾಮುಲು ಅಂಥವರನ್ನು ನಿರ್ಲಕ್ಷಿಸುವುದು, ಬಸನಗೌಡ ಯತ್ನಾಳ್ ಪಾಟೀಲ, ಅನಂತಕುಮಾರ್ ಹೆಗಡೆಯಂಥ ಖಡಕ್ ನಾಯಕರ ಬಾಯಿಮುಚ್ಚಿಸುವುದು ಬಿಜೆಪಿ ಹೈಕಮಾಂಡ್ನ ಅವಿವೇಕತನವೆಂದರೆ ತಪ್ಪಲ್ಲ.

 
Read E-Paper click here